ನಾ ನಿಂತಿದ್ದೆ ಬೆರಗಾಗಿ ನೋಡುತಲೇ
ಗಾಳಿಗೆ ತೂರಾಡುತ್ತಾ ಮಣ್ಣಲಿ ಹೊರಳುತ್ತಾ
ಹರಿವ ಮಳೆನೀರಿನಲಿ ತೇಲುತ್ತಾ
ಬಂತೊಂದು ಹಳದಿ ಕಂದುಬಣ್ಣದ ಎಲೆ!
ಎಲೈ ಎಲೆಯೇ ಏನು ನಿನ್ನ ಪರಿ?
ಎಂದಿತು ಮನ, ಎಲೆಗೆ ಕೇಳಿಸಿತೇ !
ಅಡ್ಡಬಂದ ಕಡ್ಡಿ ತಡೆಯಲು ನಿಂತಿತು
ನಿಡಿದಾದ ಉಸಿರು ಬಿಡುತ್ತಾ ಉಸುರಿತು
ನಾ ಪೋಷಿಸಿದ ನನ್ನದೇ ಕೊಂಬೆ,
ಹಣ್ಣಾದೆ ನೀನು ಹೊರೆಯಾದೆ ನನಗೆ
ಎನುತ ಉದುರಿಸಿಯೇ ಬಿಟ್ಟಿತು
ಕಳಚಿಕೊಂಡ ಸಂಬಂಧ ಯಾವ ಬಂಧ!
ಗಾಳಿ ನೀರಿನೊಡನೆಯೇ ಸಾಗಿ ಬಂದೆ
ತೇಲುತಲೇ ಇರುವೆ ನಾನಾಗಿ ಮುಳುಗಲಾರೆ
ನಾ ಹಣ್ಣೆಲೆಯೇ ! ಬಿಲ್ವಪತ್ರೆಯಾಗಿ
ಶಿವನ ಮುಡಿಯೇರಲು ಕಾಯುತಿರುವೆ
ಕರೆ ಬರುವವರೆಗೆ ಗಾಳಿಗೆ ತೂರಾಡುತ್ತಾ
ಮಣ್ಣಲಿ ಹೊರಳುತಾ ನೀರಲಿ ತೇಲುತಾ
ಸಾಗುತಲೇ ಇರುವೆ – ಎನ್ನುತಲೇ ಅಡ್ಡ ನಿಂತ
ಕಡ್ಡಿಯ ದಾಟಿ ಸಾಗುತಲೇ ಇತ್ತು ಹಣ್ಣೆಲೆ
ನಾ ನಿಂತು ದಡದಲಿ ನೋಡುತಲೇ ಇದ್ದೆ

–ಕೆ.ಎಂ.ಲೋಲಾಕ್ಷಿ , ಮೈಸೂರು
ವಾವ್ ಅರ್ಥಪೂರ್ಣ ವಾದ ಬದುಕಿನ ಸಂದೇಶ ಹೊತ್ತ ಕವಿತೆ ಚೆನ್ನಾಗಿ ಮೂಡಿಬಂದಿದೆ ಮೇಡಂ