ವಿಶೇಷ ದಿನ

ಗುರು-ಶಿಷ್ಯರ ಸಂಬಂಧ

Share Button

ಭಾರತೀಯ ಪರಂಪರೆಯಲ್ಲಿ ಗುರು-ಶಿಷ್ಯರ ಸಂಬಂಧಕ್ಕೆ ವಿಶೇಷ ಸ್ಥಾನವಿದೆ. ಶಿಷ್ಯನ ಬಗ್ಗೆ ವಾತ್ಸಲ್ಯವಿರುವ ಗುರುವೂ, ಗುರುಗಳಲ್ಲಿ ಅಪಾರ ಗೌರವವುಳ್ಳ ಶಿಷ್ಯನೂ ಒಳ್ಳೆಯ ಸಂಬಂಧಕ್ಕೆ ಸಾಕ್ಷಿಯೇ ಹೌದು. ಇಂದಿಗೂ ಈ ಸಂಬಂಧವು ಮುಂದುವರಿದಿರುವುದನ್ನು ಕಾಣಬಹುದು. ತುಂಬಿದ ತರಗತಿಯಲ್ಲಿ ಶ್ರದ್ಧಾವಂತನಾದ ವಿದ್ಯಾರ್ಥಿಯನ್ನು ಗುರುತಿಸುವುದು ಉಪಾಧ್ಯಾಯರಿಗೆ ಕಷ್ಟವೇನಲ್ಲ; ಹಾಗೆಯೇ, ವಿಷಯ ಪರಿಣತಿಯುಳ್ಳ ಉಪಾಧ್ಯಾಯರನ್ನು ಕಂಡರೆ ಅಪಾರ ಗೌರವವನ್ನು ಹೊಂದಿರುವ ವಿದ್ಯಾರ್ಥಿಯೂ ಕಾಣಸಿಗುತ್ತಾರೆ.

‘ಸಹ ನೌ ಯಶಃ’ ಎನ್ನುವುದು ಒಂದು ಉಪನಿಷತ್ ವಾಕ್ಯ. ಶಿಷ್ಯನು ಗುರುವಿನ ಬಳಿ ವಿದ್ಯಾಭ್ಯಾಸವನ್ನು ಆರಂಭಿಸುವಾಗ ಹೇಳುವ ಪ್ರಾರ್ಥನೆ ಇದು. ಗುರುವಿಗೆ ಮತ್ತು ತನಗೆ, ಇಬ್ಬರಿಗೂ ಯಶಸ್ಸು ದೊರಕಲಿ ಎಂದರ್ಥ. ಈಗಾಗಲೇ ವಿದ್ಯೆಯನ್ನು ಸಂಪಾದನೆ ಮಾಡಿರುವ ಗುರುವಿಗೆ ಇನ್ನೂ ಹೆಚ್ಚಿನ ಯಶಸ್ಸು ದೊರೆತು, ಅದರಿಂದ ತನಗೂ ಪ್ರಯೋಜನವಾಗಲಿ ಎನ್ನುವುದೇ ಈ ಪ್ರಾರ್ಥನೆಯ ಉದ್ದೇಶ.

ಪ್ರಸ್ತುತಕ್ಕೆ ಬಂದರೆ, ಉಪಾಧ್ಯಾಯರು ಹೆಚ್ಚಾದ ವಿದ್ಯೆಯನ್ನು ಹೊಂದಿದ್ದರೂ, ಕುತೂಹಲ ಮತ್ತು ಶ್ರದ್ಧಾವಂತ ವಿದ್ಯಾರ್ಥಿಗಳು ತರಗತಿಯಲ್ಲಿ ಇರದಿದ್ದರೆ, ಅವರಿಗೆ ನಿರಾಶೆಯಾಗುವುದು ಸಹಜ. ಕರ್ತವ್ಯ ಎನ್ನುವಂತೆ ನಿಗದಿತ ಪಾಠಗಳನ್ನು ಮಾಡಿ ಮುಗಿಸಬೇಕಾಗುತ್ತದೆ. ಬದಲಿಗೆ ಒಳ್ಳೆಯ ಪ್ರಶ್ನೆಗಳನ್ನು ಕೇಳುವ, ತಿಳಿದುಕೊಂಡದ್ದನ್ನು ಬರವಣಿಗೆಯಲ್ಲಿ ಪ್ರಸ್ತುತಪಡಿಸಬಲ್ಲ ವಿದ್ಯಾರ್ಥಿಗಳು ಸಹಜವಾಗಿಯೇ ಉಪಾಧ್ಯಾಯರಲ್ಲಿ ಸಾರ್ಥಕ್ಯದ ಭಾವವನ್ನು ತುಂಬುತ್ತಾರೆ. ಇದಕ್ಕೆ ಬೇಕಾದ ಮುಖ್ಯ ಭೂಮಿಕೆ ಎಂದರೆ, ವಿದ್ಯಾರ್ಥಿಗಳು, ತಾವು ಆರಿಸಿಕೊಂಡ ವಿಷಯಗಳಲ್ಲಿ ಆಸಕ್ತಿ ಹೊಂದಿರಬೇಕು. ಪೋಷಕರ ಒತ್ತಾಯಕ್ಕೆ ಅಥವಾ ಇನ್ನಾವುದೋ ಕಾರಣಕ್ಕೆ ತರಗತಿಗೆ ಬರುತ್ತಿದ್ದರೆ ಇದು ಸಾಧ್ಯವಾಗುವುದಿಲ್ಲ.

ಡಾ: ರಾಧಾಕೃಷ್ಣನ್ ಅವರು ಮೈಸೂರಿನಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಮೈಸೂರನ್ನು ಬಿಟ್ಟು ಕಲ್ಕತ್ತಾಕ್ಕೆ ಹೊರಡಬೇಕಾಗಿ ಬಂದಾಗ, (ಸರಸ್ವತೀಪುರಂನ ಅವರ ಮನೆಯಿಂದ ರೈಲ್ವೆ ಸ್ಟೇಷನ್‌ವರೆಗೆ) ಅವರನ್ನು ಸಾರೋಟಿನಲ್ಲಿ ಕೂರಿಸಿ, ವಿದ್ಯಾರ್ಥಿಗಳು ಆ ಸಾರೋಟನ್ನು ತಾವೇ ಎಳೆದುಕೊಂಡು ಹೋದರಂತೆ.

ವಿದ್ಯಾಭ್ಯಾಸ ಮುಗಿದ ನಂತರ, ಎಷ್ಟೋ ವರ್ಷಗಳಾದ ಮೇಲೂ ಉಪಾಧ್ಯಾಯರನ್ನು ಗೌರವದಿಂದ ನೆನೆಸಿಕೊಳ್ಳುವ ವಿದ್ಯಾರ್ಥಿಗಳೂ, ತಮ್ಮ ವಿದ್ಯಾರ್ಥಿಗಳು ಮುಂದೆ ಏನನ್ನಾದರೂ ಸಾಧಿಸಿರುವುದನ್ನು ನೋಡಿದಾಗ ಸಂತೋಷಪಡುವ ಮತ್ತು ‘ನನ್ನ ವಿದ್ಯಾರ್ಥಿ’ ಎಂದು ಹೆಮ್ಮೆ ಪಡುವ ಅಧ್ಯಾಪಕರೂ ಎಲ್ಲ ಕಾಲಕ್ಕೂ ಇರುತ್ತಾರೆ ಎನ್ನುವುದು ವಾಸ್ತವ.

ನಾಗೇಂದ್ರ, ಎಂ.ಎಸ್, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *