ಈ ಕಡೆ ನೋಡಿ ಸ್ವಲ್ಪ….. “ಸ್ಮೈಲ್ ಪ್ಲೀಸ್…” ಎಂಬ ಮಾತನ್ನು ಹೇಳುವವರು ಒಬ್ಬರೇ. ಅವರೇ ನಮ್ಮ ಫೋಟೋಗ್ರಾಫರ್. ಅರ್ಥಾತ್ ಛಾಯಾಗ್ರಹಣ ಕಾರರು. ವೃತ್ತಿಗಾಗಿ ಈ ಕಲೆಯನ್ನೇ ಅವಲಂಬಿಸಿರುವವರೂ ಇದ್ದಾರೆ. ಅಲ್ಲದೆ ಪ್ರವೃತ್ತಿಯಾಗಿ ಈ ಕಲೆಯನ್ನು ತಮ್ಮಲ್ಲಿ ಅಳವಡಿಸಿಕೊಂಡು ಹೆಸರು ಪಡೆದಿರುವವರು ಅನೇಕರಿದ್ದಾರೆ. ಈ ಫೋಟೋಗ್ರಾಫಿ ಕಲೆ ನಮಗೆ ಈಗ ತೀರ ಅವಶ್ಯಕತೆಯಾಗಿದೆ. ದಿನಂಪ್ರತಿ ನಾವು ಕನ್ನಡಿಯ ಮುಂದೆ ನಿಂತು ನಮ್ಮ ಪ್ರತಿಬಿಂಬವನ್ನು ಅದರಲ್ಲಿ ಕಂಡು, ನಾವು ಹೇಗೆ ಕಾಣುತ್ತಿದ್ದೇವೆ ಎಂದು ಪರಿಶೀಲನೆ ಮಾಡದ ಕ್ಷಣವಿಲ್ಲ.. ಮುಂದುವರೆದು ನಾವು ಫೋಟೋಗಳನ್ನು ತೆಗೆದ ಮೇಲೆ ಯಾವ ರೀತಿ ನಮ್ಮ ಚಿತ್ರಣ ಪ್ರತಿಬಿಂಬಿತವಾಗಿದೆ ಎಂಬುದನ್ನು ಕೂಡ ನಾವು ಗಮನಿಸುವುದು ಇದ್ದೇ ಇರುತ್ತದೆ. ಈ ಫೋಟೋಗ್ರಾಫಿ ಎನ್ನುವುದು ಈಗ ಒಂದು ಬೃಹತ್ ಉದ್ಯಮವಾಗಿದೆ.
ಸಣ್ಣ ಬಂಡವಾಳದಿಂದ ಪ್ರಾರಂಭವಾದ ಈ ಕಲೆ ಇವತ್ತು ಬೃಹತ್ ಉದ್ಯಮವಾಗಿ ನಮ್ಮ ಕಣ್ಮುಂದೆ ಕಾಣುತ್ತಿದೆ. ಅವತ್ತಿನ ಛಾಯಾಗ್ರಹಣ ಕಲೆಗೂ ಇವತ್ತಿನ ಅತ್ಯಾಧುನಿಕ ತಂತ್ರಜ್ಞಾನದ ಛಾಯಾಗ್ರಹಣಕ್ಕೂ ಅಜ-ಗಜಾಂತರ ವ್ಯತ್ಯಾಸವಿದೆ. ಫೋಟೋ ತೆಗೆಯುವುದು ಒಂದು ಸಾಹಸವಾದರೆ, ತೆಗೆದ ಫೋಟೋವನ್ನು ಪ್ರಿಂಟ್ ಮಾಡಿಸಿ ಗ್ರಾಹಕರಿಗೆ ತಲುಪಿಸುವುದು ಒಂದು ದೊಡ್ಡ ಸಾಹಸವಾಗುತ್ತಿತ್ತು.. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಏನಾದರೂ ಕಾರ್ಯಕ್ರಮಗಳನ್ನು ಮಾಡಬೇಕಾದರೆ ಒಂದು ವಾರ ಅಥವಾ 15 ದಿನಗಳ ಮುಂಚಿತವಾಗಿಯೇ ಬುಕ್ ಮಾಡಿಕೊಳ್ಳಬೇಕಾಗಿತ್ತು. ಏಕೆಂದರೆ ಅವರು ನಗರ ಪ್ರದೇಶಗಳಿಂದ ಬರಬೇಕಾಗಿತ್ತು. ಅಲ್ಲದೆ ಕೆಲವು ಹೋಬಳಿ ಕೇಂದ್ರಗಳಲ್ಲೂ ಹಣವುಳ್ಳವರು ಚಿಕ್ಕದಾಗಿ ಫೋಟೋ ಸ್ಟುಡಿಯೋವನ್ನು ಇಟ್ಟುಕೊಂಡಿರುತ್ತಿದ್ದರು. ಅಲ್ಲಿ ಫೋಟೋ ತೆಗೆಯುವುದು ಮಾತ್ರ. ಆದರೆ ಅವರು ನಗರ ಪ್ರದೇಶಕ್ಕೆ ಹೋಗಿ ತೆಗೆದ ಫೋಟೋವನ್ನು ಪ್ರಿಂಟ್ ಹಾಕಿಸಿಕೊಂಡು, ನಂತರ ನಮಗೆ ತಲುಪಿಸುತ್ತಿದ್ದರು. ತುರ್ತಿಗೆ ಯಾವ ಫೋಟೋಗಳು ಕೂಡ ಸಿಗುತ್ತಿರಲಿಲ್ಲ. ಯಾವಾಗಲೋ ತೆಗೆದ ಮಸುಕು ಫೋಟೋಗಳನ್ನೇ ನಾವು ಹೆಚ್ಚಾಗಿ ಬಳಸುತ್ತಿದ್ದೆವು. ಆಗ ಹೆಚ್ಚಾಗಿ ಕಪ್ಪು- ಬಿಳುಪು ಫೋಟೋ. ಇಂತಹ ಫೋಟೋಗಳನ್ನು ನೋಡುವುದೇ ಒಂದು ರೀತಿಯಲ್ಲಿ ವರ್ಣಿಸಲಸದಳ ಅನುಭವ ನೀಡುತ್ತಿತ್ತು.
“ಒಂದು ಚಿತ್ರ ಸಾವಿರ ಪದಗಳಿಗೆ ಸಮ”- ಎನ್ನುವ ಮಾತಿದೆ. ನೋಡಿ ಈ ಛಾಯಾಗ್ರಹಣ ಕಲೆಗೆ ಎಷ್ಟೊಂದು ಮಹತ್ವವಿದೆ. ಪದಗಳಲ್ಲಿ ವರ್ಣಿಸಲು ಸಾಧ್ಯವಾಗದ ಅದೆಷ್ಟೋ ಮಾತುಗಳನ್ನು ಕೇವಲ ಒಂದು ಚಿತ್ರ ನಮಗೆ ನೀಡುತ್ತದೆ.. ಅದನ್ನೇ “ಚಿತ್ರ ಮಾತು” ಎಂದು ಕೂಡ ಕರೆಯಬಹುದು. ಈ ಛಾಯಾಗ್ರಹಣ ಎನ್ನುವುದೂ ಕಲೆ, ವಿಜ್ಞಾನ, ಇತಿಹಾಸ, ಸಂಸ್ಕೃತಿ, ಕೋಟೆ ಕೊತ್ತಲ, ಪ್ರಾಣಿ-ಪಕ್ಷಿ, ಪ್ರಕೃತಿಯನ್ನು ಒಟ್ಟಾರೆಯಾಗಿ ಎಲ್ಲವುಗಳನ್ನು “ಅವರವರ ಭಾವಕ್ಕೆ ಅವರವರ ಭಕುತಿಗೆ”- ಎನ್ನುವಂತೆ ಛಾಯಾಗ್ರಹಕರು ತಮ್ಮ ವಿಭಿನ್ನ ಶೈಲಿಯ ಕ್ಯಾಮರಾಗಳ ಮೂಲಕ ಬಹಳ ಸುಜನಾತ್ಮಕವಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ, ತಾಳ್ಮೆಯಿಂದ ಕಾದು ಎಲ್ಲವನ್ನು ಸೆರೆಹಿಡಿದು ದಾಖಲು ಮಾಡುತ್ತಾರೆ.
ಫೋಟೋ ತೆಗೆಯಲು ಒಂದು ಕ್ಷಣ ಸಾಕು. ಆದರೆ ಆ ಫೋಟೋವನ್ನ ಕುದ್ದು ಆ ಸ್ಥಳದಲ್ಲಿ ತೆಗೆಯಲು ಫೋಟೋಗ್ರಾಫರ್ ಹರಸಾಹಸ ಮಾಡಬೇಕು.. ಎಲ್ಲರನ್ನೂ ಸರಿಯಾಗಿ ನಿಲ್ಲಿಸಿ, ವ್ಯಕ್ತಿಗಳ ಉದ್ದ, ತುಂಡ ಗಮನಿಸಿ ಸರಿಯಾದ ಕ್ರಮಾಂಕದಲ್ಲಿ ನಿಲ್ಲಿಸಿ, ಎಲ್ಲರೂ ಕೂಡ ತನ್ನ ಕ್ಯಾಮರಾದಲ್ಲಿ ಕಾಣ ಸಿಗುತ್ತಿದ್ದಾರೆಯೇ? ಎಂದು ಮತ್ತೊಮ್ಮೆ ಪರಿಶೀಲಿಸಿ, ಜೊತೆಗೆ ಯಾರಾದರೂ ಫೋಟೋ ತೆಗೆಯುವಾಗ ಯಾವ ಕಡೆ ನೋಡಿರುತ್ತಾರೆ, ಇನ್ನೂ ಕೆಲವರು ಕಣ್ಣು ಮುಚ್ಚುವುದು ಉಂಟು. ಹೀಗೆ ಎಲ್ಲವನ್ನೂ ಪರಿಶೀಲಿಸಿ ಫೋಟೋ ತೆಗೆಯುವುದು ಇದೆಯಲ್ಲ ನಿಜಕ್ಕೂ ಅವರಿಗೆ ಶಹಬ್ಬಾಸ್ ಎನ್ನಬೇಕು! ಅದರಲ್ಲೂ ಮಕ್ಕಳ ಫೋಟೋ ತೆಗೆಯುವಾಗ ಮಾತ್ರ ಮತ್ತಷ್ಟು ಸಾಹಸ ಮಾಡಲೇಬೇಕು. ಅದರಿಂದಾಗಿ ಫೋಟೋ ತೆಗೆಯುವಾಗಲೇ ಅವರು ಏಳೆಂಟು ಫೋಟೋಗಳನ್ನು ತೆಗೆದಿರುತ್ತಾರೆ. ನಂತರ ಸರಿಯಾದುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
1826 ರಲ್ಲಿ ನಿಪ್ಕೆ ಎಂಬುವರು ಹೆಲಿಯೋಗ್ರಫಿ ಪ್ರಕ್ರಿಯೆ ಮೂಲಕ ಎಗ್ರಾಸ್ ನಲ್ಲಿ ಕಿಟಕಿ ಮೂಲಕ ವೀಕ್ಷಣೆ ಹೆಸರಿನಲ್ಲಿ ಶಾಶ್ವತ ಚಿತ್ರವನ್ನು ಸೆರೆಹಿಡಿದರು. ನಂತರ ಹಂತ ಹಂತವಾಗಿ ಮೂಲ ಕ್ಯಾಮರಾಗಳಿಂದ ಅತ್ಯಾಧುನಿಕ ಕ್ಯಾಮರಾಗಳ ಮೂಲಕ ಹಲವು ಫೋಟೋ ತಂತ್ರಜ್ಞಾನ ಹೊರ ಬಂದಿತು. ಇದರಿಂದಾಗಿ ಈಗಿನ ಸ್ಮಾರ್ಟ್ ಯುಗದಲ್ಲಿ ಹಲವು ಬಗೆಯ ರೆಸುಲ್ಯೂಷನ್ ಕ್ಯಾಮೆರಾ ಗಳು ಕೂಡ ಅತ್ಯಾಧುನಿಕ ಬೆಲೆ ಬಾಳುತ್ತವೆ. ಅಪರೂಪದ ಕ್ಯಾಮೆರಾಗಳನ್ನು ಸಂಗ್ರಹಿಸಿ, ಅವನ್ನೂ ಪ್ರದರ್ಶನ ಮಾಡುವವರು ಕೂಡ ಇದ್ದಾರೆ. 1839 ಆಗಸ್ಟ್ 19 ರಂದು ಫ್ರಾನ್ಸ್ ದೇಶದಲ್ಲಿ ಮೊದಲ ಬಾರಿಗೆ “ವಿಶ್ವ ಛಾಯಾಗ್ರಹಣ ದಿನವನ್ನು” ಘೋಷಿಸಲಾಯಿತು. ಆದರೆ ಜಾಗತಿಕ ಮಟ್ಟದಲ್ಲಿ ಛಾಯಾಚಿತ್ರ ಮನ್ನಣೆಯನ್ನು ಗಮನಿಸಿ, 2010 ಆಗಸ್ಟ್ 19ರಂದು ವಿಶ್ವಮಟ್ಟದಲ್ಲಿ ಭಾರತವು ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ದೇಶಗಳಲ್ಲಿ ಆನ್ಲೈನ್ ಗ್ಯಾಲರಿಗಳ ಮೂಲಕ ಮೊದಲ ಛಾಯಾಗ್ರಹಣ ದಿನವನ್ನು ಆಚರಿಸಲಾಯಿತು ಎಂಬ ಮಾಹಿತಿ ಸಿಗುತ್ತದೆ.
ಈ ಛಾಯಾಗ್ರಹಣ ಕಲೆಯನ್ನು ವೃತ್ತಿ ಮತ್ತು ಹವ್ಯಾಸವಾಗಿ ಸ್ವೀಕರಿಸಿರುವ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಛಾಯಾಗ್ರಾಹಕರು ಇಲ್ಲಿ ಮುಖ್ಯವಾಗಿ ಅತ್ಯಧುನಿಕ ತಂತ್ರಜ್ಞಾನ ಬಳಸಿ ತಮ್ಮ ಸೃಜನಶೀಲತೆಯಿಂದ ಅತ್ಯುತ್ತಮ ಚಿತ್ರಗಳನ್ನು “ಕ್ಲಿಕ್” ಮಾಡಿ ಒಂದೆಡೆ ಪ್ರದರ್ಶಿಸಿ ರಾಜ್ಯ, ದೇಶ, ವಿಶ್ವಮಟ್ಟದಲ್ಲಿ ಅವನ್ನೆಲ್ಲ ಒಂದು ಚೌಕಟ್ಟಿನಲ್ಲಿ ಪ್ರದರ್ಶನ ಮಾಡಿ, ಜಾಗೃತಿ ಮೂಡಿಸುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಇದು ಮುಂದಿನ ಪೀಳಿಗೆಯ ದಾಖಲೆಗಾಗಿ ಅತ್ಯುತ್ತಮ ಕಾರ್ಯಕ್ರಮವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಯುವ ಛಾಯಾಗ್ರಾಹಕರು ಕೂಡ ಈ ಕಲೆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಕೂಡ ಸ್ವಾಗತಾರ್ಹ ವಿಷಯವಾಗಿದೆ.
“ಫೋಟೋಗ್ರಫಿ” ಎಂಬುದು ಗ್ರೀಕ್ ಭಾಷೆಯ ಪದ. “ಪೋಸ್” ಎಂದರೆ ಬೆಳಕು. “ಗ್ರಾಫಿಯಿನ್” ಎಂದರೆ ಬೆಳಕಿನಿಂದ ಬರೆದದ್ದು ಛಾಯಾಗ್ರಹಣ. ಮೊದಲ ಬಾರಿಗೆ ಆವಿಷ್ಕರಿಸಿದವರು ಸರ್ ಜಾನ್ ಹರ್ಷಲ್. ಅಲ್ಲದೆ ಜಾರ್ಜ್ ಈಸ್ಟ್ ಮನ್, ಇಂಪೋ ಲೈಟ್ ಶ್ರಮವನ್ನು ನಾವು ನೆನೆಯಲೇಬೇಕು. ಅದರಿಂದಾಗಿ ಈ ಫೋಟೋಗ್ರಾಫಿ ಎನ್ನುವುದು ಕಲೆ, ಹವ್ಯಾಸ, ಪ್ರತಿಭೆ, ಸೂಕ್ಷ್ಮ ಸಂವೇದನೆ, ಎಲ್ಲವೂ ಕೂಡ ಆಗಿದೆ. ಯಾವುದೋ ಸಂದರ್ಭದಲ್ಲಿ ತೆಗೆದ ಫೋಟೋಗಳು. ಅಂತಹ ಫೋಟೋಗಳನ್ನು ನಾವು ನೋಡಿದಾಗ ಮತ್ತಷ್ಟು ನೆನಪು ಮೂಡಿಸುತ್ತದೆ. ಒಂದು ಸ್ಥಳದ…. ಒಂದು ಭಾವನೆಯ…. ಒಂದು ದಟ್ಟ ಅನುಭವ….. ಒಂದು ಕ್ಷಣದಲ್ಲಿ….. ಎಲ್ಲಾ ಚಿತ್ರಗಳು ಒಂದೊಂದು ಕಥೆಯನ್ನು ಹೇಳುತ್ತವೆ. ಅದರಿಂದಾಗಿ ಈ “ಫೋಟೋಗ್ರಾಫಿ” ಎನ್ನುವುದು ನೆನಪುಗಳ ಖಜಾನೆಯಾಗಿದೆ.
ಈ ಹಿಂದೆ ಕ್ಯಾಮರಾ ಇದ್ದವರು ಮಾತ್ರ ಫೋಟೋ ತೆಗೆಯುತ್ತಿದ್ದರು. ಈಗ ಕಾಲ ಬದಲಾದಂತೆ ಸ್ಮಾರ್ಟ್ ಕ್ಯಾಮೆರಾಗಳು…. ಫೋನ್ ಗಳು….. ಬಂದು ಛಾಯಾಗ್ರಹಣ ಕಲೆಯು ಮತ್ತಷ್ಟು ಉತ್ತುಂಗಕ್ಕೆ ಏರಲು ಸಹಕಾರಿಯಾಗಿದೆ. ಒಂದು ಲಕ್ಷದಿಂದ 10 ಲಕ್ಷದವರೆಗೂ ಕೂಡ ಬೆಲೆಬಾಳುವ ಡಿಜಿಟಲ್ ಕ್ಯಾಮರಗಳು ಕೂಡಾ ಬಂದಿವೆ. ಈ ಕಲೆ ಆಬಾಲರುದ್ದರಾದಿಯಾಗಿ ಎಲ್ಲರನ್ನು ಕೂಡ ಸೆಳೆಯುತ್ತದೆ. ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಫೋಟೋ ತೆಗೆಯಲು ಸಾಹಸ ಮಾಡೇ ಮಾಡುತ್ತಾರೆ. ಇದು ನಾನು ತೆಗೆದ ಚಿತ್ರ……. ನಾನು ತೆಗೆದಾಗ ಇವರೆಲ್ಲರೂ ಇದ್ದರೂ…. ಎಂದು ನೆನಪು ಕೂಡ ಮಾಡಿಕೊಳ್ಳುತ್ತಾರೆ. ಮೊದಲು ಬ್ಲಾಕ್ ಅಂಡ್ ವೈಟ್ , ನಂತರ ಕಲರ್, ತದನಂತರ ಈಗ ಅತ್ಯಾಧುನಿಕ ತಂತ್ರಜ್ಞಾನ….. ಇವೆಲ್ಲಾ ನಮ್ಮ ಕಣ್ಮುಂದೆ ಇದೆ.
ಇವತ್ತಿಗೂ ಕೂಡ ಸಂಗ್ರಹಾಲಯಗಳಲ್ಲಿ ಪ್ರಸಿದ್ಧರು ತೆಗೆದ ಪ್ರಸಿದ್ಧತಾಣಗಳ, ವ್ಯಕ್ತಿಯ. ಚಿತ್ರಗಳು ಮನೆಮಾತಾಗಿವೆ. ಇಲ್ಲಿ ಮುಖ್ಯವಾಗಿ ಗಮನಿಸುವ ವಿಷಯವೆಂದರೆ ಪ್ರತಿ ವರ್ಷವೂ ಕೂಡ ಒಂದೊಂದು ಘೋಷವಾಕ್ಯವನ್ನು ಸಾರುವ ಮೂಲಕ “ವಿಶ್ವ ಫೋಟೋಗ್ರಫಿ ದಿನ”ವನ್ನು ಆಚರಿಸಲಾಗುತ್ತದೆ. ಈಗ ಮೊಬೈಲ್ಗಳಲ್ಲಿ ಹೆಚ್ಚು ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ನಾವು ಹಾಕುತ್ತೇವೆ. ಪ್ರತಿಯೊಂದು ವಿಷಯಗಳ ಬಗ್ಗೆಯೂ ಕೂಡ ಫೋಟೋ ತೆಗೆಯುತ್ತೇವೆ. ಈಗ ಫೋಟೋ ತೆಗೆಯುವುದಕ್ಕೆ ಒಂದು ಕಾರ್ಯಕ್ರಮ ಅಥವಾ ಒಂದು ಸಂದರ್ಭ ಬೇಕಾಗಿಲ್ಲ. ಇಷ್ಟ ಬಂದಂತೆ ಎಲ್ಲವನ್ನೂ ದಾಖಲಿಸುವ ಕಾಲಘಟ್ಟಕ್ಕೆ ನಾವು ಬಂದಿದ್ದೇವೆ.
ಚಲನಚಿತ್ರಗಳಲ್ಲಿ “ಛಾಯಾಗ್ರಾಹಕ” ಬಹುಮುಖ್ಯ ಪಾತ್ರ ವಹಿಸುತ್ತಾನೆ. ಛಾಯಾಗ್ರಹಣ ಕಲೆಯಿಂದಲೇ ಎಷ್ಟೋ ಚಿತ್ರಗಳು ಗೆದ್ದಿವೆ. ಈಗ ಚಲನಚಿತ್ರಗಳಲ್ಲೂ ಕೂಡ ತಾರಾ ಫೋಟೋ ಶೂಟ್ ಇದ್ದೇ ಇರುತ್ತದೆ. ಒಂದು ಚಲನಚಿತ್ರ ಶೂಟಿಂಗ್ ನಿಂದಾಗಿ ಅದು ತೆರೆ ಕಾಣುವವರೆಗೆ ಹಲವು ಚಿತ್ರಗಳ ಸರಮಾಲೆ ದಾಖಲಾಗಿರುತ್ತದೆ. ಗ್ಲ್ಯಾಮರ್ ಪ್ರಪಂಚ… ಶೂಟಿಂಗ್ ಚಿತ್ರಣ ರೋಮಾಂಚಕ ಕ್ಷಣಗಳು ಹೆಜ್ಜೆ ಹೆಜ್ಜೆಗೂ ಕೂಡ ದಾಖಲಾಗಿ ಅವನ್ನೆಲ್ಲ ಪತ್ರಿಕೆ ಯಂತಹ ಪ್ರಿಂಟ್ ಮಾಧ್ಯಮದಲ್ಲೂ ಕೂಡ ಪ್ರಕಟಿಸುವುದರ ಮೂಲಕ ಆ ಚಿತ್ರದ ಬಗೆಗಿನ ಆಸಕ್ತಿ ಮೂಡಿಸಿ, ಮಾಹಿತಿ ನೀಡುವಲ್ಲಿಈ ಫೋಟೋಗ್ರಾಫಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಪ್ರಕೃತಿಯ ರಮ್ಯ ಚಿತ್ರಣಗಳು, ಪ್ರಾಣಿ-ಪಕ್ಷಿ ಪ್ರಪಂಚ, ವ್ಯಕ್ತಿ ಚಿತ್ರ ಹೀಗೆ ಒಟ್ಟಾರೆ ಫೋಟೋಗಳನ್ನು ನೋಡುತ್ತಿದ್ದರೆ ಪ್ರಪಂಚ ಪರ್ಯಟನೆ ಮಾಡಿದ ಅನುಭವ ನೀಡುತ್ತದೆ.
ರೋಲ್ ಕ್ಯಾಮೆರಾ ಗಳಲ್ಲಿ ಎಸ್ಟೋ ಸಂದರ್ಭದಲ್ಲಿ ಬಹಳ ಲೆಕ್ಕ ಹಾಕಿ ಫೋಟೋ ತೆಗೆಯುತ್ತಿದ್ದರು. ಏಕೆಂದರೆ ಅದನ್ನು ಪ್ರಿಂಟ್ ಹಾಕಿಸುವಾಗಲು ಕೂಡ ಅವರು ಸಾಹಸ ಪಡಬೇಕಾಗಿತ್ತು. ಜೊತೆಗೆ ಅದನ್ನು ಪ್ರಿಂಟ್ ಹಾಕಿಸುವಾಗ ಸರಿಯಾಗಿ ಕ್ಯಾಮರಾದಿಂದ ಹೊರ ತೆಗೆಯದಿದ್ದರೆ ತೆಗೆದ ಫೋಟೋಗಳು ಕೂಡ ಹಾಳಾಗಿ ಬಿಡುತ್ತಿದ್ದವು. ಜೊತೆಗೆ ಬಿಸಿಲಿನಲ್ಲಿ ಅದನ್ನು ತೆಗೆಯಬಾರದಿತ್ತು. ಅದನ್ನು ರೂಮಿನೊಳಗೆ ಕತ್ತಲೆ ಪ್ರದೇಶದಲ್ಲಿ ಮಾತ್ರ ಹೊರ ತೆಗೆದು ಪ್ರಿಂಟ್ ಹಾಕಬೇಕಾಗಿತ್ತು. ಎಷ್ಟೋ ಸಾರಿ ಅದು ಪ್ರಿಂಟ್ ಹಾಕಿಸುವಾಗ ಫೋಟೋಗಳು ಬರದೇ ಗಿರಾಕಿಗಳಿಗೆ ಫೋಟೋ ಕೊಡಲು ಹಿಂದೆ ಮುಂದೆ ನೋಡಬೇಕಾಗಿತ್ತು, ಮೊದಲೇ ಅಡ್ವಾನ್ಸ್ ಕೂಡ ತೆಗೆದುಕೊಂಡಿದ್ದರಿಂದ ಜೊತೆಗೆ ಅಂತಹ ಫೋಟೋಗಳು ತೀರಾ ಅವಶ್ಯಕತೆ ಯಾಗಿ ಬೇಕಾಗಿದ್ದರಿಂದ ಪರಸ್ಪರ ಜಗಳಕ್ಕೂ ಕೂಡ ಕಾರಣವಾಗಿತ್ತು. ಈ ರೀತಿ ಅನೇಕ ಬಾರಿ ಪೇಚಿಗೆ ಸಿಲುಕುತ್ತಿದ್ದರು. ಜೊತೆಗೆ ಬ್ಯಾಟರಿ ಬಳಕೆಯೂ ಹೆಚ್ಚಾಗಿದ್ದರಿಂದ ತೆಗೆದುಕೊಳ್ಳಬೇಕಾಗಿತ್ತು. ನಂತರದಲ್ಲಿ ಚಾರ್ಜರ್ ಸೆಲ್ ಗಳು ಬಳಕೆಗೆ ಬಂದವು. ಈಗ ಪ್ರಿಂಟ್ ಹಾಕಿಸದಿದ್ದರೂ ಕೂಡ ಅತಿ ಹೆಚ್ಚು ಫೋಟೋ ತೆಗೆಯುತ್ತಾರೆ. ಬಳಕೆಗೆ ಬೇಕಾದಷ್ಟು ಮಾತ್ರ ಪ್ರಿಂಟ್ ಹಾಕಿಸುತ್ತಾರೆ. ಉಳಿದವನ್ನೆಲ್ಲ ಪೆನ್ ಡ್ರೈವ್ ನಲ್ಲೋ…. ಸಿಸ್ಟಂನಲ್ಲೂ…. ಸೇವ್ ಮಾಡಿಕೊಂಡಿರುತ್ತಾರೆ.
“ನಿಕಾನ್” ಕ್ಯಾಮೆರಾ ಒಂದು ಕಾಲದಲ್ಲಿ ತುಂಬಾ ಪ್ರಸಿದ್ಧಿಯಾಗಿತ್ತು. ಆ ಕ್ಯಾಮೆರಾ ಮೂಲಕ ಫೋಟೋ ತೆಗೆಯುವವರನ್ನು ನಿಕ್ಕಿಗಳು ಎಂದೇ ಕರೆಯುತ್ತಿದ್ದರು. ಈಗ ಕಾಲ ಬದಲಾದಂತೆ ಅತ್ಯಧುನಿಕ ತಂತ್ರಜ್ಞಾನದ ಮೂಲಕ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಗೋಪ್ರೊ ಕ್ಯಾಮೆರಾಗಳು ಹೆಚ್ಚು ಪ್ರಸಿದ್ಧಿಯಾಗಿವೆ. ಇನ್ನೂ ಮುಂದುವರೆದು ಬೇರೆ ಬೇರೆ ರೀತಿಯ ಕಂಪನಿಗಳ ಕ್ಯಾಮೆರಾ ಕೂಡಾ ಬಂದಿವೆ. ಇದರಿಂದಾಗಿ ಹೆಚ್ಚು ಜನರ ಮನ ಸೆಳೆಯುತ್ತಿವೆ.
ಅನೇಕ ಕ್ಯಾಮೆರಾ ಬಳಸಿ ಅಪರಾಧಗಳಲ್ಲಿ ತೊಡಗಿರುವ ಕಳ್ಳರನ್ನು ಕೂಡ ಸೆರೆ ಹಿಡಿಯುವ ತಂತ್ರವೂ ಕೂಡ ಹೆಚ್ಚಾಗಿದೆ. ಜೊತೆಗೆ ಹಿಡನ್ ಕ್ಯಾಮೆರಾ ಉಪಯೋಗಿಸಿ ಕಾನೂನು ವಿರುದ್ಧವಾಗಿ ಕೃತ್ಯಗಳನ್ನು ಮಾಡುವಂತಹ ಮೂಲಕ ಮನುಷ್ಯ ಅನೈತಿಕ ಚಟುವಟಿಕೆಗಳಲ್ಲಿ ಇದನ್ನು ಬಳಸುತ್ತಿದ್ದಾನೆ. ಉಪಯೋಗಕ್ಕೆ ಬಳಕೆಯೂ ಕೂಡ ಇದೆ. ಈಗ ಎಲ್ಲಾ ಶಾಲಾ ಕಾಲೇಜು, ಮಾರುಕಟ್ಟೆ, ಕಾರ್ಖಾನೆ, ಮನೆ, ಕೆಲವು ಪ್ರಮುಖ ರಸ್ತೆಗಳಲ್ಲಿ, ಅಂಗಡಿಗಳ ಮುಂದೆ, ದೊಡ್ದ ಮಾಲ್, ಬ್ಯಾಂಕ್, ಆಫೀಸುಗಳಲ್ಲೂ ಸಿ ಸಿ ಕ್ಯಾಮೆರಾ ಬಳಕೆಗೆ ಬಂದಿದೆ. ಇದರಿಂದಾಗಿ ಹಾಕಿದ ಸಿ ಸಿ ಕ್ಯಾಮೆರಾವನ್ನು ನಾವು ಮೊಬೈಲ್ನಲ್ಲಿ ಅದರ ಚಲನ-ವಲನ ವೀಕ್ಷಿಸಬಹುದಾಗಿದೆ. ಈಗ ಎಲ್ಲಾ ಕಡೆ “ನೀವು ಸಿಸಿ ಕ್ಯಾಮೆರಾದ ಕಣ್ಗಾವಲಿನಲ್ಲಿದ್ದೀರಿ…” ಎಂಬ ಎಚ್ಚರಿಕೆಯ ನಾಮಫಲಕ ಇದ್ದೇ ಇರುತ್ತದೆ. ಈಗ ಮುಂದುವರೆದು ಪೆನ್ನು ಮೂಲಕ…. ಶರ್ಟ್ ಗುಂಡಿಯ ಮೂಲಕ ಕ್ಯಾಮೆರಗಳನ್ನು ಅಳವಡಿಸುವ ತಂತ್ರಜ್ಞಾನವೂ ಕೂಡ ಬಂದಿದೆ. ಒಂದು ಕಡೆ ಉಪಯೋಗ, ಇನ್ನೊಂದು ಕಡೆ ಅಕ್ರಮ ಚಟುವಟಿಕೆಗಳನ್ನು ಕೂಡ ಬಳಸುತ್ತಾರೆ.
ಮುಖ್ಯವಾಗಿ ಅಂತರಿಕ್ಷ ಲೋಕದಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡುವಾಗ ಸ್ವಚಾಲಿತ ಕ್ಯಾಮೆರಾಗಳನ್ನು ಅದರಲ್ಲಿ ಅಳವಡಿಸಿರುವುದರಿಂದ ಹೊಸ ಆವಿಸ್ಕಾರಗಳಿಗೆ ಉಪಯೋಗವಾಗಲು ಬೇಕು. ಅನ್ಯಗ್ರಹಗಳಿಂದ ಅನೇಕ ಉಪಯುಕ್ತ ಪದಾರ್ಥಗಳು ಅಲ್ಲಿನ ಚಿತ್ರಣಗಳನ್ನು ಸೆರೆ ಹಿಡಿದು ಮೂಲಕ ನಮಗೆ ಕಳುಹಿಸುವುದರಿಂದ ವಿಜ್ಞಾನಿಗಳಿಗೆ ಇದು ತುಂಬಾ ಉಪಯೋಗವಾಗುತ್ತದೆ.ಕಾಡು ಪ್ರಾಣಿಗಳ ಚಲನವಲನ ವೀಕ್ಷಣೆ ಮಾಡಲು ಕೂಡ ಈಗ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿರುತ್ತಾರೆ. ಜೊತೆಗೆ ಪ್ರಾಣಿಗಳ ಗಣತಿಯಲ್ಲೂ ಕೂಡ ಈ ಕ್ಯಾಮರಗಳು ಉಪಯೋಗಕ್ಕೆ ಬರುತ್ತವೆ. ವೈದ್ಯಕೀಯ ಕ್ಷೇತ್ರದಲ್ಲೂ ಕೂಡ ಕ್ಯಾಮರಾ ಬಳಕೆ ಪ್ರಾಮುಖ್ಯತೆಯನ್ನು ಪಡೆಯುತ್ತದೆ.
ಬಿಡುವು ಸಿಕ್ಕಾಗ ಫೋಟೋ ಆಲ್ಬಮ್ ಬಿಡಿಸಿ, ಮನೆಯಲ್ಲಿ ಒಟ್ಟಾಗಿ ಕುಳಿತು ನೋಡಿದಾಗ ನಮ್ಮ ಮದುವೆಗೆ ಸಂಬಂಧಿಕರು….. ಸ್ನೇಹಿತರು…. ಯಾರ್ಯಾರು ಬಂದಿದ್ದರು ಎಂಬುದನ್ನು ಕೂಡ ತಿಳಿಯುತ್ತ ಹೋಗುತ್ತೇವೆ. ಅವರಲ್ಲಿ ಅನೇಕರು ನಮ್ಮನ್ನಗಲಿರುತ್ತಾರೆ. ಈ ರೀತಿಯಾಗಿ ಈ ಕ್ಯಾಮೆರಾ ಒಂದು ಒಟ್ಟು ಕುಟುಂಬದ ರೀತಿಯಲ್ಲಿ ಕೆಲಸ ಮಾಡುತ್ತದೆ. ಎಲ್ಲಾ ಸಂಬಂಧಿಕರನ್ನು…. ಸ್ನೇಹಿತರನ್ನು…. ಒಂದುಗೂಡಿಸುತ್ತದೆ. ಮುಂದುವರೆದು….. ಈಗಲಂತು ಫ್ರೀ ವೆಡ್ಡಿಂಗ್ ಫೋಟೋಶೂಟ್ ಕೂಡ ನಡೆಯುತ್ತದೆ. ಮದುವೆಗೆ ಇಂತಿಷ್ಟೇ ಫೋಟೋ ಇರಲೇಬೇಕು ಎನ್ನುವ ಷರತ್ತು ಕೂಡ ಇದೆ. ಮದುವೆಯ ಸಂದರ್ಭದಲ್ಲಿ ಸಂಬಂಧಿಕರನ್ನೆಲ್ಲ ಒಟ್ಟುಗೂಡಿಸಿ ಫೋಟೋ ತೆಗೆಯುವುದು ಒಂದು ಸಾಹಸ. ಜೊತೆಗೆ ಮದುವೆಯ ಆಲ್ಬಮ್ಗಳು ಕೂಡ ಬದಲಾಗಿವೆ. ಪೋಸ್ಟ್ ಕಾರ್ಡ್ ಸೈಜಿನ ಫೋಟೋಗಳು ಮಾತ್ರ ಇದ್ದ ಕಾಲ ಈಗ ಬದಲಾಗಿ ಕರಿಷ್ಮಾ ಮುಂತಾದ ಫೋಟೋ ಆಲ್ಬಮ್ಗಳು ತನ್ನದೇ ಆದ ಹೆಸರುಗಳಿಂದ ಲಕ್ಷಗಟ್ಟಲೆ ಫೋಟೋಗೆ ಖರ್ಚು ಮಾಡುತ್ತಾರೆ. “ಕಾಸಿಗೆ ತಕ್ಕ ಕಜ್ಜಾಯ”- ಎನ್ನುವಂತೆ ನಮಗೆ ಸಿಗುತ್ತದೆ.
ಎಷ್ಟೋ ಸಂಬಂಧಿಕರ- ಹಳಬರ ಬಳಿ ಒಂದೂ ಫೋಟೋ ಇಲ್ಲದ ಕಾಲವೊಂದಿತ್ತು. ಅವರು ನಿಧನರಾದಾಗ ಸಂಬಂಧಿಕರ ಮದುವೆ ಆಲ್ಬಮ್ ಗಳನ್ನು ಹುಡುಕಿ ಯಾವುದೋ ಕಪ್ಪು- ಬೆಳಕು ಫೋಟೋ ತೆಗೆದು ಹಾಕುತ್ತಿದ್ದರು. ಈಗಲೂ ನಿಮಗೆ ನೆನಪಿರಬಹುದು ನಿಮ್ಮ ಮನೆಯಲ್ಲಿ ಹಳೆಯ ಕಾಲದ ಫೋಟೋಗಳು ಎಲ್ಲಾ ವೈಟ್ ಅಂಡ್ ಬ್ಲಾಕ್. ಜೊತೆಗೆ ಅಸ್ಪಷ್ಟವಾಗಿ ಕಾಣುತ್ತವೆ. ಎಲ್ಲಾ ದಿನ, ವಾರ, ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳಿಗೆ ಫೋಟೋಗಳೇ ಆಧಾರ. ಫೋಟೋ ಇಲ್ಲದ ಸುದ್ದಿ ಓದುವುದು ಎಂದರೆ ಒಂದು ರೀತಿಯಲ್ಲಿ ಮಜಾ ಸಿಗುವುದಿಲ್ಲ.- ಎನ್ನುವ ಓದುಗರು ಕೂಡ ಇದ್ದಾರೆ.
ಇನ್ನು ಪತ್ರಕರ್ತರಿಗೂ ಕೂಡಾ ಫೋಟೋಗಳು ಆಧಾರ. ಅವರು ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಯಾವುದೇ ಕಾರ್ಯಕ್ರಮಗಳ ಸಮಗ್ರ ಫೋಟೋವನ್ನು ಕ್ಲಿಕ್ಕಿಸಿ ಪತ್ರಿಕೆಗೆ ನೀಡುತ್ತಾರೆ. ಇದರಿಂದ ಆಯಾ ಸಂಘಟಕರಿಗೆ ಪ್ರಚಾರ ಸಿಗುತ್ತದೆ. ಹಲವು ಪತ್ರಕರ್ತರೂ ಕೂಡ ಹವ್ಯಾಸವಾಗಿ ಛಾಯಾಚಿತ್ರಗಳನ್ನು ತಮ್ಮ ಮೂರನೇ ಕಣ್ಣಿನಿಂದ ಕ್ಲಿಕ್ಕಿಸಿ ಪ್ರಾಣಿ- ಪಕ್ಷಿ, ಪ್ರಕೃತಿ ಇನ್ನಿತರ ಚಿತ್ರಗಳನ್ನು ತೆಗೆದು ರಾಜ್ಯ, ರಾಷ್ಟ್ರಮಟ್ಟದಲ್ಲೂ ಕೂಡ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಾರೆ. ಅಂತವರುಗಳಲ್ಲಿ “ನೇತ್ರರಾಜು” ಎನ್ನುವ ಹೆಸರು ಚಿರಪರಿಚಿತ. ಇವರು ವೀರಪ್ಪನ್ ಕಾಲದಲ್ಲಿ ಅನೇಕ ಫೋಟೋಗಳನ್ನು ಸೆರೆಹಿಡಿದಿದ್ದಾರೆ. ಅಲ್ಲದೆ “ಕೃಪಾಕರ- ಸೇನಾನಿ” ಅಂತಹ ಜೋಡಿ ಸ್ನೇಹಿತರು ತಮ್ಮದೇ ಆದ ಶೈಲಿಯಲ್ಲಿ ವಿಭಿನ್ನ ಫೋಟೋಗಳನ್ನು ಸೆರೆಹಿಡಿದಿದ್ದಾರೆ. (ಇನ್ನೂ ಮುಂತಾದವರು ಇದ್ದಾರೆ.) ಜೊತೆಗೆ ಹಲವು ಪತ್ರಿಕೆಗಳಲ್ಲಿ ಮುಖ್ಯ ಛಾಯಾಗ್ರಹಕರು ಪ್ರಶಸ್ತಿಗಳನ್ನು ತೆಗೆದುಕೊಂಡಿದ್ದಾರೆ. ವಿಶೇಷ ದಿನಗಳಲ್ಲಿ ಪತ್ರಿಕೆಗಳಲ್ಲಿ “ಚಿತ್ರ ಸಂಚಯಗಳು” ಕೂಡ ಪ್ರಕಟವಾಗುತ್ತವೆ. ಅದರಲ್ಲೂ ಮುದ್ದು ಮಕ್ಕಳ ಚಿತ್ರಗಳನ್ನು ನೋಡುವುದೇ ಒಂದು ರೀತಿಯಲ್ಲಿ ಮುದ ನೀಡುತ್ತದೆ. ಹಲವರು ತಮ್ಮ ಮಗು ಹುಟ್ಟಿದಾಗಿನಿಂದ ಅದು ಬೆಳೆದು ದೊಡ್ಡವರಾಗುವ ತನಕ ಫೋಟೋ ತೆಗೆದು ಸಂಗ್ರಹಿಸುತ್ತಾರೆ .
ಈ ಫೋಟೋ ಎನ್ನುವುದು ಹಳೆಯ ನೆನಪುಗಳನ್ನು ಕೂಡ ಒಂದಲ್ಲ ಒಂದು ರೀತಿಯಲ್ಲಿ ಮನದಲ್ಲಿ ಮೂಡಿಸುತ್ತದೆ. ನಾವು ಮನೆಯಲ್ಲಿ ಏನನ್ನೋ ಹುಡುಕುತ್ತಿರುತ್ತೇವೆ ಯಾವುದೋ ಒಂದು ಫೋಟೋ ಸಿಕ್ಕಾಗ ಅದು ನೂರು ನೆನಪುಗಳನ್ನು ಒಮ್ಮೆಲೇ ತರುತ್ತದೆ. ಜೊತೆಗೆ ನಾವು ಯಾರ ಮನೆಗೆ ಹೋದರೂ ಸತ್ತವರ, ಹಿರಿಯರ ಫೋಟೋಗಳು ಕೂಡ ನಮಗೆ ಕಾಣಸಿಗುತ್ತವೆ. ಒಬ್ಬ ವ್ಯಕ್ತಿಯ ರೂಪ ವನ್ನು ವರ್ಣಿಸಲು ಅವರು ಗಂಡಾಗಲಿ, ಹೆಣ್ಣಾಗಲಿ ಕಲಾ ಕುಂಚದ ಮೂಲಕ ತೆರೆದಿಡಬಹುದು. ಉದಾಹರಣೆಗೆ ರವಿವರ್ಮನನ್ನೇ ನಾವು ಈ ಕ್ಷಣದಲ್ಲಿ ನೆನೆಯಬಹುದು.
ಮದುವೆಗಿಂತ ಮುಂಚೆ ಗಂಡು, ಹೆಣ್ಣು ನೋಡಲು ಹೋದಾಗ ಮೊದಲು ಕೇಳುವುದೇ ಹುಡುಗಿಯ ಒಂದು ಫೋಟೋ ಕೊಡಿ ಅಥವಾ ಹುಡುಗನ ಒಂದು ಫೋಟೋ ಕೊಡಿ ಎಂದು.. ಚೆನ್ನಾಗಿ ಮೂಡಿರದ ಫೋಟೋದಿಂದ ಎಷ್ಟೋ ಸಂಬಂಧಗಳು ಕೂಡ ಕಡಿದುಕೊಂಡಿವೆ. ಇತಿಹಾಸ ಸಾರುವ ಚಿತ್ರಗಳು, ಯುದ್ಧಕಾಲದ ಚಿತ್ರಗಳೆಲ್ಲ ಪ್ರದರ್ಶನ ವಾಗುತ್ತವೆ. ಪ್ರವಾಸದ ಸಂದರ್ಭದಲ್ಲಿ- ದೇವಾಲಯ, ಪ್ರಕೃತಿ, ನದಿ, ಸರೋವರ ಇಲ್ಲಿ ತೆಗೆದ ಚಿತ್ರಗಳು…… ಶಾಲಾ-ಕಾಲೇಜಿನ ದಿನಗಳಲ್ಲಿ ತೆಗೆಸಿದ ಗ್ರೂಪ್ ಫೋಟೋಗಳು…….ಗಣ್ಯ ವ್ಯಕ್ತಿಗಳ ಜೀವನ ಚರಿತ್ರೆ ಒಂದೇ ಎರಡೇ?.. ಬಹುಮುಖ್ಯ ಉದಾಹರಣೆ ಎಂದರೆ ಗಣ್ಯರ ಹುಟ್ಟುಹಬ್ಬ….. ಬದುಕು- ಬರಹದ ಪುಸ್ತಕಗಳಲ್ಲಿ ಸಾವಿರಾರು ಫೋಟೋಗಳು ಅವರ ಹುಟ್ಟು, ಬಾಲ್ಯ, ಬದುಕು, ಬರಹ, ಪ್ರಶಸ್ತಿ ಎಲ್ಲವನ್ನು ಕೂಡ ಸಾರುತ್ತವೆ. ಅಲ್ಲಿಗೆ ನೂರಾರು ಫೋಟೋಗಳು ಆಧಾರ. ರಾಮಾಯಣ, ಮಹಾಭಾರತದಲ್ಲಿ ನಡೆದ ಎಲ್ಲಾ ಘಟನೆಗಳ ಚಿತ್ರಗಳು ನಮಗೆ ಸಿಕ್ಕಿರುವುದೇ ಫೋಟೋಗಳ ಮೂಲಕ.
ಡಾ ರಾಜ್ ಕುಮಾರ್ ರವರ ಜೀವನದ ಬಗ್ಗೆ ಸಮಗ್ರ ಸಂಗ್ರಹ ಮಾಹಿತಿ ಪುಸ್ತಕದ ಕರ್ತೃ ದೊಡ್ಡೋಲ್ಲೂರು ರುಕ್ಕೋಜಿ ರವರು ಬರೆದ ಪುಸ್ತಕಕ್ಕೆ ಸಾವಿರಾರು ರಾಜ್ ಕುಮಾರ್ ಅವರ ಫೋಟೋ ಇವೆ. ಇದೆಲ್ಲಾ ನಮಗೆ ಕಲ್ಪನೆ ಮೂಡಿಸುತ್ತದೆ.
ಬಹುಶಃ ಸೂಡಾನ್ ನಲ್ಲಿ ಹಸಿವಿನಿಂದ ಬಳಲಿದ ಒಂದು ಚಿತ್ರ ಕಣ್ಮನ ಸೆಳೆಯುತ್ತದೆ. ಆಹಾರದ ಕೊರತೆಯಿಂದಾಗಿ ಬಡವಾದ ಶರೀರ ಒಂದೆಡೆಯಾದರೆ….. ಆ ಸಾವನ್ನೇ ದೂರದಿಂದ ಗಮನಿಸುತ್ತಿರುವ ಹದ್ದಿನ ಚಿತ್ರ ನೂರು ಕಥೆ ಹೇಳುತ್ತವೆ.
ಹೀಗೆ “ದೇಶ ಸುತ್ತಿ ನೋಡು, ಕೋಶ ಓದಿ ನೋಡು”- ಎನ್ನುವುದನ್ನು ನಾವು ಸ್ವಲ್ಪ ಬದಲಾಯಿಸಿಕೊಂಡು “ದೇಶ ಸುತ್ತಿ ನೋಡದಿದ್ದರೂ ಕೂಡ, ಫೋಟೋಗಳನ್ನು ನೋಡುವುದರ ಮೂಲಕ ನಾವು ನಮ್ಮ ಮನೆಯಲ್ಲಿಯೇ ಕುಳಿತು ವಿಶ್ವ ಸಂಚಾರ ಮಾಡಬಹುದು.
ನಮ್ಮ ಯುವಜನತೆ ಬಗೆ ಬಗೆಯ ಸೆಲ್ಫಿ ಫೋಟೋಗಳನ್ನು ತೆಗೆಯುವುದರ ಮೂಲಕ ಅವರೂ ಕೂಡ ಎಲ್ಲರೂ ಫೋಟೋಗ್ರಾಫರ್ ಆಗಿದ್ದಾರೆ.ಒಟ್ಟಿನಲ್ಲಿ “ಸರ್ವಂ ಫೋಟೋ ಮಯಂ…” ಎನ್ನುವಂಥಾಗಿದೆ… ಮೊಬೈಲ್ ಎಷ್ಟು ಅನಿವಾರ್ಯವೋ ಅದೇ ರೀತಿ ದಿನಂಪ್ರತಿ ಏನಾದರೂ ಒಂದು ಫೋಟೋ ತೆಗೆಯುವುದು ಅನಿವಾರ್ಯವಾಗಿದೆ.
ಮೂರನೇ ಕಣ್ಣಿನ ಚಮತ್ಕಾರವನ್ನು ಓದಿದ ಮೇಲಾದರೂ ನಿಮ್ಮ ಒಂದು ಸ್ಮೈಲ್ ಪ್ಲೀಸ್…..
-ಕಾಳಿಹುಂಡಿ ಶಿವಕುಮಾರ್, ಮೈಸೂರು.
ಉತ್ತಮವಾಗಿ ಛಾಯಾಗ್ರಹಣದ ಮೌಲ್ಯಗಳು ,ಛಾಯಾಗ್ರಹಣದ ಅಂದಿನ – ಇಂದಿನ ಸ್ಥಿತಿ ಗತಿಗಳ ವಿಚಾರವನ್ನು ವಿಮರ್ಶಾತ್ಮಕವಾಗಿ ತೆರೆದಿಟ್ಟ ಈ ಲೇಖನ ತುಂಬ ಚೆನ್ನಾಗಿದೆ. ಅಭಿನಂದನೆಗಳು ಶಿವಕುಮಾರ್
ನಿಮ್ಮ ಹೃದಯಸ್ಪರ್ಶಿ ವಿಮರ್ಶೆಗೆ ತುಂಬ ತುಂಬ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಇದೇ ರೀತಿ ಇರಲಿ.
ವಾವ್..ಛಾಯಾಗ್ರಹಣ ದ ಬಗ್ಗೆ ವಿಸ್ತೃತ ವಾದ ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ ಸಾರ್..
ಎಂದಿನಂತೆ ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ನಾನೆಂದಿಗೂ ಚಿರಋಣಿ ಮೇಡಂ. ನಮ್ಮ ತಪ್ಪುಗಳನ್ನು ತಿದ್ದುತ್ತಾ ಬರುತ್ತಿದ್ದೀರಿ. ಧನ್ಯವಾದಗಳು ಮೇಡಂ
ಚಂದದ ಬರಹ. ಹಳೆಯ ನೆನಪು, ಸಂಭ್ರಮದ ದಿನಗಳನ್ನು ಮೆಲುಕು ಹಾಕಲು ಛಾಯ ಚಿತ್ರಗಳು ಸಹಕಾರಿ.
ತುಂಬಾ ಒಳ್ಳೆ ಯ ಬರಹ. ನಿಮ್ಮ ಲೇಖನ ನೂರು ನೆನಪನ್ನು ಹೊತ್ತು ತಂದಿತು. ಛಾಯಾಗ್ರಹಣದ ಬಗ್ಗೆ ಅನೇಕ ವಿಚಾರಗಳು ತಿಳಿದೆವು. ಧನ್ಯವಾದಗಳು.
ಛಾಯಾಗ್ರಹಣದ ಹುಟ್ಟು, ಹಂತ ಹಂತವಾಗಿ ಬೆಳೆದು ಬಂದ ದಾರಿ, ಹೆಸರಿನ ಮೂಲ, ಇತ್ಯಾದಿಗಳ ಸವಿವರ ಲೇಖನವು ನಮ್ಮನ್ನೂ ಬಾಲ್ಯಕ್ಕೆ ಕೊಂಡೊಯ್ದಿತು!
ಬಹಳ ಮಾಹಿತಿಯುಕ್ತವಾದ ಸೊಗಸಾದ ಬರಹ…
ಸಮಯೋಚಿತ ಬರೆಹ ಗೆಳೆಯರೇ………..
ಮಹತ್ವ ಕುರಿತು ಬರೆಯಬೇಕೆಂದಿದ್ದೆ. ನಿಮ್ಮ ಬರೆಹ ನೋಡಿ ಖುಷಿಯಾಯಿತು.
ಯಾರು ಬರೆದರೇನಂತೆ? ನನಗೂ ಅರಿವು ಮೂಡಿತು. ಅಭಿನಂದನೆ ಮತ್ತು ಧನ್ಯವಾದ
ನಿಮ್ಮ ಬರೆಹಗಳನ್ನು ಪತ್ರಿಕೆಯಲಿ ಓದುತ್ತಿರುತ್ತೇನೆ. ನಿಡುಗಾಲದಿಂದ ಬರೆಯುತ್ತಿರುವಿರಿ.
ಶುಭವಾಗಲಿ, ನಿಮ್ಮ ಲೇಖನಿಯಿಂದ ಲೇಖನಗಳು ಜೋಗದಂತೆ ಭೋರ್ಗರೆಯುತ್ತಿರಲಿ. ಪ್ರಣಾಮಗಳು