ಲಹರಿ

ನಮ್ಮನ್ನು ನಾವು ಪ್ರೀತಿಸುವ..

Share Button

ಪ್ರೀತಿ ಎಂಬ ಪದದಲ್ಲಿ ಇಡೀ ಜಗತ್ತಿನ ಶಕ್ತಿಯಿದೆ. ಮನುಕುಲದ ಶ್ರೇಯಸ್ಸಿದೆ ನಮ್ಮ ನಮ್ಮ ಉಳಿವು ಅಳಿವಿನ ಲೆಕ್ಕವಿದೆ. ಪ್ರೀತಿಇದ್ದರೆ ಮಾತ್ರ ಜಗತ್ತು ಸುಂದರ. ಬದುಕು ನಂದನವನ. ಮೊದಲು ನಮ್ಮನ್ನು ನಾವು ಪ್ರೀತಿಸಬೇಕು ಆಪ್ರೀತಿ ನಮ್ಮಲ್ಲಿ ಹೊಸತನವನ್ನು, ಚೈತನ್ಯವನ್ನು, ಶಕ್ತಿಯನ್ನು ತುಂಬುತ್ತದೆ. ಕಾಳಜಿಯನ್ನು ಉಂಟುಮಾಡುತ್ತದೆ. ನಾವು ಮಾಡುವ ಸಾಧನೆಗಳಿಗೆ ಅಡಿಪಾಯವನ್ನು ಹಾಕುತ್ತದೆ. ನಮ್ಮ ಮೇಲಿನ ನಮ್ಮ ಪ್ರೀತಿ ಅತಿಯಾದಾಗ ಅದು ದುರಭಿಮಾನವನ್ನು ಹುಟ್ಟು ಹಾಕುತ್ತದೆ ಆದರೆ ಈ ಸ್ವಯಂ ಪ್ರೀತಿ ಅತಿರೇಕಕ್ಕೆ ಹೋಗಿ ನಾನೇಶ್ರೇಷ್ಠ ಎಂಬ ಭಾವವನ್ನು ಸೃಷ್ಟಿಸಲು ಬಿಡಬಾರದು. ಯಾವುದೂ ಅತಿಯಾಗಬಾರದು ಅತಿಯಾದರೆ ಅಮೃತವೂ ವಿಷವಾಗುತ್ತದೆ. ನಮ್ಮನ್ನು ನಾವು ಪ್ರೀತಿಸುವ ನಿಟ್ಟಿನಲ್ಲಿ ಪರರ ಆಶೋತ್ತರಗಳಿಗೆ ಅಡ್ಡಿಯಾಗಬಾರದು.

ನಮ್ಮಲ್ಲಿಯ ಒಳ್ಳೆಯ ಗುಣಗಳನ್ನು ಪ್ರೀತಿಸುವ ಗುಣ ನಮ್ಮದಾಗಬೇಕು ಹಾಗಂತ ನಮ್ಮ ದೋಷಗಳನ್ನು ಅಂತರಂಗದ ತೆರೆದ ಕಣ್ಣಿನಿಂದ ಅವಲೋಕಿಸಬೇಕು. ಆಗ ನಮ್ಮನ್ನು ನಾವು ಇನ್ನೂ ಪ್ರೀತಿಸುತ್ತಿದ್ದೇವೆ ಎಂದರ್ಥ. ನಮ್ಮನ್ನು ನಾವು ಪ್ರೀತಿಸದಿದ್ದರೆ ನಮ್ಮ ದೋಷಗಳತ್ತ ನೋಡದೇ ಅವುಗಳನ್ನು ಸರಿಪಡಿಸಿಕೊಳ್ಳದೇ ಬದುಕಿನಲ್ಲಿ ಅನಾಹುತಗಳನ್ನು ಎದುರಿಸಬೇಕಾಗುತ್ತದೆ. ನಮ್ಮನ್ನು ನಾವು ಪ್ರೀತಿಸಿದಾಗ ಇದ್ದ ದೋಷಗಳನ್ನು ಮೆಟ್ಟಿ ಒಳ್ಳೆಯದರ ಕಡೆಗೆ ವಾಲುತ್ತೇವೆ.

ನಮ್ಮ ಆರೋಗ್ಯ, ನಮ್ಮ ವಸ್ತು, ನಮ್ಮ ಜೀವನ, ನಮ್ಮ ಚಟುವಟಿಕೆ, ನಮ್ಮ ವೃತ್ತಿ ಹೀಗೆ ನಮ್ಮದನ್ನು ನಾವು ಪ್ರೀತಿಸದಿದ್ದರೆ ಪರರು ಬಂದು ಪ್ರೀತಿಸಲು ಸಾಧ್ಯವಿಲ್ಲ. ಹಾಗಾಗಿ ಸ್ವಾರ್ಥವಲ್ಲದ ಸಹಜ ತನದಿಂದ ನಮ್ಮನ್ನು ನಾವು ಪ್ರೀತಿಸಿದಾಗ ಸದಾ ಧನಾತ್ಮಕವಾಗಿದ್ದು ನೆಮ್ಮದಿಯ ಸಂತಸದ ಬದುಕನ್ನು ಬಾಳಬಹುದು. ಅದೇ ನಮ್ಮ ಬಗ್ಗೆಯೇ ನಮಗೆ ಕೀಳರಿಮೆ, ದೋಷಗಳನ್ನು, ಆಪಾದನೆಗಳನ್ನು, ತಪ್ಪು ಕಲ್ಪನೆಗಳನ್ನು ಮಾಡಿಕೊಳ್ಳುತ್ತ ಮುಂದೊಂದು ದಿನ ಖಿನ್ನತೆ ಆವರಿಸಿ ಬದುಕನ್ನೇ ಅಂತ್ಯಗೊಳಿಸಿಕೊಳ್ಳುವ ಆತ್ಮ ಹತ್ಯೆಯಂತಹ ಕುಕೃತ್ಯಕ್ಕೆ ಕೈ ಹಾಕಬಹುದು. ಹಾಗಾಗಿ ಮೊದಲು ನಮ್ಮ ಮೇಲೆ ನಮಗೆ ಪ್ರೀತಿ ಇದ್ದಾಗ ನೆಮ್ಮದಿ ಸಂತೋಷ ಧನಾತ್ಮಕತೆ ಪ್ರಗತಿ ಎಲ್ಲವೂ ಸರಾಗವಾಗ ನಡೆಯುವುದರಲ್ಲಿ ಸಂದೇಹವಿಲ್ಲ.

ಕಾಯ, ಕಾಯಕ ಎರಡನ್ನೂ ಪ್ರೀತಿಸಬೇಕು. ಕಾಯವ ಮರೆತು ರೋಗಗಳಿಗೆ ಆಹ್ವಾನ ನೀಡಿದರೆ ಮನಸ್ಸು ಗೊಂದಲದ ಗೂಡಾಗುತ್ತದೆ. ನೆಮ್ಮದಿ ನಾಶವಾಗುತ್ತದೆ ಆದರೆ ಅದೇ ಕಾಯವನ್ನು ಎಷ್ಟುಬೇಕೋ ಅಷ್ಟನ್ನು ಪ್ರೀತಿಸಿದಾಗ ಕಾಯ ಕಾಯಕ ಎರಡಕ್ಕೂ ಅನುಕೂಲ. ಹುಚ್ಚಾಗಿ ಹರಿಯುವ ಮನಸ್ಸನ್ನು ನಮ್ಮ ಮೇಲಿನ ಪ್ರೀತಿ ಹಾಗೂ ಸ್ಥಿತಪ್ರಜ್ಞೆಯಿಂದ ನಮ್ಮನ್ನು ನಾವು ಹಿಡಿತದಲ್ಲಿಟ್ಟುಕೊಂಡಾಗ ಬಾಳು ಸುಂದರವಾಗುತ್ತದೆ.

ನಮ್ಮನ್ನು ನಾವು ಪ್ರೀತಿಸುವುದೆಂದರೆ ನಮ್ಮ ಶರೀರ ಅಥವಾ ಅಂಗಾಂಗಗಳೇ ಅಲ್ಲದೆ ನಮ್ಮ ಯೋಚನೆಗಳನ್ನು, ಭಾವನೆಗಳನ್ನು, ವ್ಯಕ್ತಿತ್ವವನ್ನು, ಜೀವನವನ್ನು, ಸೋಲು ಗೆಲುವುಗಳನ್ನು ಸಮತೂಕದಲ್ಲಿ ಪ್ರೀತಿಸಿದಾಗ ಮಾತ್ರ ನಮ್ಮಲ್ಲಿಯ ದೌರ್ಬಲ್ಯಗಳನ್ನು ಮೀರಿ ನಿಲ್ಲಬಹುದು.
ಸದಾ ನಮ್ಮೊಳಿನ ದೌರ್ಬಲ್ಯಗಳ ಕುರಿತು ಯೋಚಿಸುವುದಕ್ಕಿಂತ ನಮ್ಮ ಪ್ರಾಬಲ್ಯಗಳನ್ನು ಅಳವಡಿಸಿಕೊಂಡು ಮುನ್ನುಗ್ಗುವ ಧೈರ್ಯವನ್ನು ತಂದುಕೊಳ್ಳಬೇಕು.

ರೆಕ್ಕೆ ಬಡಿದು ಹಾರಬೇಕಾದ ಹಕ್ಕಿ ಹಾರಲಾರೆನೆಂದು ಕುಳಿತರೆ , ಈಜ ಬೇಕಾದ ಮೀನು ಈಜದೇ ಇದ್ದರೆ ಬದುಕು ಸಾಗಲು ಸಾಧ್ಯವಿಲ್ಲ. ಹಾಗೆಯೇ ನಮ್ಮ ದೌರ್ಬಲ್ಯಗಳನ್ನು ನೆನೆದಾಗ ಶಕ್ತಿ ಕುಂದುತ್ತದೆ, ಹೆಜ್ಜೆ ಮುಂದೆ ಹೋಗಲೊಲ್ಲದು. ಬದುಕು ಇಷ್ಟೇ ಎಂದೆನಿಸಿಬಿಡುತ್ತದೆ ಅದಕ್ಕಾಗಿ ಈ ದುರ್ಬಲ ಮನೋಭಾವವನ್ನು ಮೆಟ್ಟಿ ನಿಲ್ಲಲು ನಮ್ಮನ್ನು ನಾವು ಪ್ರೀತಿಸಿದರೆ ಮಾತ್ರ ಸಾಧ್ಯ. ಪ್ರವಾಹದ ಸೆಳೆತಕ್ಕೆ ಸಿಕ್ಕಿದಾಗಲೂ ಹುಲ್ಲುಕಡ್ಡಿಯ ಆಸರೆಸಿಕ್ಕರೆ ಬದುಕುತ್ತೇನೆಂಬ ಛಲಬರುವುದು ಬದುಕಿನ ಮೇಲೆ ಪ್ರೀತಿ ಇದ್ದಾಗಲೇ. ಇಂದಿನ ಸಮಾಜದಲ್ಲಿ ಖಿನ್ನತೆ,ಮಾನಸಿಕ ಅಸ್ವಸ್ಥತೆ, ಆತ್ಮಹತ್ಯೆಗಳು ನಡೆಯುವ , ನಡೆಸುವ ವ್ಯಕ್ತಿಗಳಲ್ಲಿ ದೌರ್ಬಲ್ಯವನ್ನು ಮಾತ್ರ ಕಾಣುವುದಲ್ಲದೇ ಬದುಕುವ ಪ್ರೀತಿಯು ಇಂಗಿ ಹೋಗಿರುತ್ತದೆ. ಹೀಗೆ ನಮ್ಮನ್ನು ನಾವು ಪ್ರೀತಿಸುವುದು ಒಣಗಿದ ಭೂಮಿಯಲ್ಲಿ ಚಿಮ್ಮುವ ಸೆಲೆಯಂತೆ, ಕತ್ತಲ ಕರಾಳ ರಾತ್ರಿಯಲಿ ಮಿನುಗುವ ಚಿಕ್ಕ ಹಣತೆಯಂತೆ, ಎಲ್ಲ ಮುಗಿದು ಹೋಯಿತು ಎನ್ನುವಾಗ ಹುಟ್ಟುವ ಭರವಸೆ.

ನಮ್ಮ ದೇಶ, ನಮ್ಮ ಜನ, ನಮ್ಮ ಭಾಷೆ, ನಮ್ಮತನ ಎನ್ನುವುದರ ಮೇಲೆ ನಮಗೆ ಪ್ರೀತಿ ಇರುವುದೇ ನಮಗಿರಬೇಕಾದ ಅಭಿಮಾನ.ಆದರೆ ಈ ಪ್ರೀತಿಗೂ ಒಂದು ಮಿತಿ ಇದೆ. ಅತಿಯಾದರೆ ಅದು ಅಹಂಕಾರ, ಒಣಪ್ರತಿಷ್ಠೆ, ರಾಷ್ಟ್ರೀಯತೆ, ಆಕ್ರಮಣ, ದೌರ್ಜನ್ಯ ಯುದ್ಧ, ವಿನಾಶಗಳನ್ನು ಉಂಟುಮಾಡುತ್ತದೆ. ಹಾಗಾಗಿ ಈ ಪ್ರೀತಿ ಪರರಿಗೆ, ಜಗತ್ತಿಗೆ ಮಾರಕವಾಗದೇ ಹಿತವಾಗಿ , ನಿಗದಿತಪ್ರಮಾಣದಲ್ಲಿ ಯಾರಿಗೂ ತೊಂದರೆಯಾಗದಂತಿರಬೇಕು. ನಮ್ಮನ್ನು ನಾವು ಹಿತವಾಗಿ ಪ್ರೀತಿಸಿದಾಗ ಮಾತ್ರ ನಮ್ಮ ಹಾಗೂ ಪರರ ಉದ್ಧಾರ ಸಾಧ್ಯ. ನಾನು ಎಲ್ಲರಿಗಾಗಿ, ಎಲ್ಲರೂ ನನಗಾಗಿ ಎಂಬ ತತ್ವದಲ್ಲಿ ಈ ಸ್ವಯಂ ಪ್ರೀತಿಯಿರಲಿ.

ಶುಭಲಕ್ಷ್ಮಿ ಆರ್ ನಾಯಕ

6 Comments on “ನಮ್ಮನ್ನು ನಾವು ಪ್ರೀತಿಸುವ..

  1. ಪ್ರೀತಿ ಯ ಬಗ್ಗೆ ಬರೆದಿರುವ ಲೇಖನ ಚೆನ್ನಾಗಿ ಮೂಡಿಬಂದಿದೆ ಮೇಡಂ.. ಹೌದು ಮೊದಲು ನಮ್ಮ ನ್ನು ನಾವು ಪ್ರೀತಿ ಸಿಕೊಳ್ಳುವುದನ್ನು ಕಲಿಯಬೇಕು…

  2. ಹಿತವಾಗಿದೆ, ಮಿತವಾಗಿದೆ, ಹದವಾಗಿದೆ

    ಪ್ರೀತಿಯಂತೆಯೇ ನಿಮ್ಮ ವ್ಯಾಖ್ಯಾನವೂ !

    ಅನುಭವಿಸಿ ಬರೆದಾಗ ಅಧಿಕೃತತೆ ಪ್ರಾಪ್ತ; ಓದಿದವರು ಸಂತೃಪ್ತ !!

  3. ಬಹಳ ಒಳ್ಳೆಯ ಲೇಖನ. ಪ್ರೀತಿಯ ಸರಿಯಾದ ರೀತಿಯನ್ನು ಹೇಳಿದ್ದೀರಿ.

  4. ನಮ್ಮನ್ನು ನಾವು ಪ್ರೀತಿಸಬೇಕಾದ ಅಗತ್ಯತೆಯನ್ನು ಒತ್ತಿ ಹೇಳುವ ಲೇಖನವು ಚಿಂತನೆಗೆ ಹಚ್ಚುವಂತಿದೆ.

  5. ಆತ್ಮವಿಶ್ವಾಸ ಮತ್ತು ಸ್ವಾರ್ಥದ ಮಧ್ಯೆ ಇರುವ ತೆಳುಗೆರೆಯ ಮಹತ್ವ ಸಾರುವ ಲೇಖನ ಅರ್ಥಪೂರ್ಣವಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *