ಸಾವನ್ನು ಜಯಿಸಿದ ಸತ್ಯವಾನ
‘ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯಾ’ ಎಂದು ಚಿಂತನಾ ಸೂಕ್ತಿಯನ್ನು ಹಿರಿಯರು ಆಗಾಗ ಹೇಳುವು ದನ್ನು ಕೇಳಿದ್ದೇವೆ. ಹೌದು, ಪತಿ-ಪತ್ನಿಯರ ಸಾಮರಸ್ಯ, ಕುಟುಂಬ ಸಂಬಂಧವಾಗಲೀ, ಗೋ ಸಂಪತ್ತಾಗಲೀ, ಮನೆಯಾಗಲೀ ಯೋಗ್ಯರೀತಿಯಲ್ಲಿ ದಕ್ಕಬೇಕಾದರೆ ಋಣಾನುಬಂಧ ಬೇಕಂತೆ. ಒಳ್ಳೆಯ ವ್ಯವಸ್ಥೆಗಳು ವ್ಯವಸ್ಥಿತ ರೀತಿಯಲ್ಲಿ ಲಭಿಸಬೇಕಾದರೂ ಪೂರ್ವಸುಕೃತ, ಕರ್ಮಫಲಗಳು ಒಳ್ಳೆಯ ರೀತಿಯಲ್ಲಾಗಬೇಕು. ಎಲ್ಲವೂ ಒಂದಕ್ಕೊಂದು ಬೆಸೆಯುವ ಕೊಂಡಿಗಳು!
ಬೆಚ್ಚನೆಯ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು ಇಚ್ಚೆಯರಿತು ನಡೆಯುವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ವಾಸಕ್ಕೆ ತಕ್ಕುದಾದ ಮನೆ, ಖರ್ಚಿಗೆ ಧಾರಾಳವಾಗಿ ಹಣ, ತನ್ನ ಮನವನ್ನರಿತು ಬೇಕಾದಂತೆ ನಡೆಯುವ ಪತ್ನಿ, ಇವಿಷ್ಟಿದ್ದಲ್ಲಿ ಆತನ ಜೀವನವು ಸ್ವರ್ಗಕ್ಕಿಂತ ಮಿಗಿಲಾದುದು ಎಂಬ ಮಾತು ಎಲ್ಲಾ ಕಾಲಕ್ಕೂ ಸರಿಯಾದುದು. ಪತಿಯನ್ನು ಕಾಯಾ, ವಾಚ, ಮನಸಾ ಪ್ರೀತಿಸುವ ಪತ್ನಿಯರಿಗೇನೂ ಕಮ್ಮಿಯಿಲ್ಲ. ಆದರೆ ಪತಿಸೇವೆ ನಿರಂತರ ಮಾಡುವ, ಜೀವಕ್ಕೆ ಜೀವ ಕೊಡುವ, ಪತ್ನಿಯರನ್ನೆಲ್ಲಿ ಹುಡುಕಲಿ? ಜೀವಕ್ಕೆ ಜೀವ ಕೊಡುವ ಅಷ್ಟೇ ಏಕೆ? ಅಸುನೀಗಿದ ಪತಿಯನ್ನು ಯಮಪಾಶದಿಂದ ಎಳೆದೊಯ್ದು ಬದುಕಿಸಿದ ಪತ್ನಿಯನ್ನು ಪಡೆದ ಪುರುಷರತ್ನನೊಬ್ಬನಿದ್ದಾನೆ. ಅವನಾರು?ಅದು ಹೇಗೆ ಸಾಧ್ಯವಾಯಿತು?
ಸಾಲ್ವ ದೇಶದ ರಾಜನಾದ ದ್ಯುಮತ್ಸೇನನು ಸತ್ಯ, ನ್ಯಾಯ, ಧರ್ಮದಲ್ಲಿ ಹೆಸರುವಾಸಿಯಾದ ರಾಜ, ಈತನ ಮಗನೇ `ಸತ್ಯವಂತ’ ಅಥವಾ ‘ಸತ್ಯವಾನ’, ಸತ್ಯವಂತ ಚಿಕ್ಕಂದಿನಿಂದಲೂ ಬಹಳ ಚುರುಕಾದ ಹುಡುಗ, ಕುದುರೆಗಳಲ್ಲಿ ವಿಶೇಷ ಪ್ರೀತಿ. ಕುದುರೆಗಳಲ್ಲಿ ಎಷ್ಟು ಆಸಕ್ತಿಯಿತ್ತೆಂದರೆ ಕುದುರೆಯನ್ನೇ ನೋಡುತ್ತಾ ಮಣ್ಣಿನಿಂದ ಕುದುರೆಯ ಪ್ರತಿಮೆಯನ್ನು ಮಾಡುತ್ತಿದ್ದನು. ಇದರಿಂದಾಗಿ ‘ಚಿತ್ರಾಶ್ವ’ನೆಂಬ ಹೆಸರೂ ಬಂತು. ತಂದೆ-ತಾಯಿಗಳು ‘ಸತ್ಯವಾನ’ ಎಂದು ಹೆಸರಿಟ್ಟರೆ, ಅವನ ಸತ್ಯಸಂಧತೆಯನ್ನು ನೋಡಿದ ನಾಡಿನ ಜನರು ‘ಸತ್ಯವಂತ’ನೆಂದೂ, ಕುದುರೆಯ ಕಲಾಗಾರಿಕೆಗೆ “ಚಿತ್ರಾಶ್ವ”ನೆಂದೂ ಹೆಸರಿಟ್ಟರು.
ಮದ್ರದೇಶದಲ್ಲಿ ಧರ್ಮಾತೃನಾದ ಅಶ್ವಪತಿ ರಾಜನಿದ್ದನು. ಆತನಿಗೆ ‘ಸಾವಿತ್ರಿ’ ಎಂಬ ಕನ್ನಿಕೆಯಿದ್ದಳು. ಮಗಳಿಗೆ ಪ್ರಾಪ್ತ ವಯಸ್ಸಾದರೂ ಬೇಗನೆ ಕಂಕಣ ಬಲ ಕೂಡಿಬರಲಿಲ್ಲ.ಇದರಿಂದ ಚಿಂತಿತನಾದ ಅಶ್ವಪತಿಯು ಒಂದು ದಿನ ಮಗಳಲ್ಲಿ ‘ಮಗಳೇ, ನೀನು ಬುದ್ಧಿವಂತೆ, ಚತುರೆ. ನಿನ್ನ ಕೈ ಹಿಡಿಯುವಾತ ಹೇಗಿರಬೇಕೆಂದು ನೀನು ಬಲ್ಲವಳಾಗಿದ್ದಿಯಾ, ನಿನ್ನ ಅವಗಾಹನೆಯಲ್ಲಿ ಯಾರಾದರೂ ಯೋಗ್ಯ ವರನಿದ್ದರೆ ಹೇಳು, ವಿವಾಹ ಮಾಡಿಕೊಡುತ್ತೇನೆ’ ಎಂದ.
ತಂದೆಯ ಮಾತಿನಂತೆ ಸಾವಿತ್ರಿಯು ದ್ಯುಮತ್ಸೇನನ ಮಗನಾದ ‘ಸತ್ಯವಾನ’ನನ್ನು ವರಿಸುವ ಸನ್ನಾಹ ಮಾಡಿ ತಂದೆಗೆ ತಿಳಿಸಿದಳು, ಸಾವಿತ್ರಿ ತನ್ನ ಮದುವೆಯ ಪೂರ್ವ ಯೋಚನೆ ಮಾಡಿದರೂ ಆಕೆಯ ದುರ್ದೈವ ಬೆನ್ನು ಬಿಡಲಿಲ್ಲ ಎಂಬಂತೆ ಆ ಸಮಯಕ್ಕೆ ಸರಿಯಾಗಿ ನಾರದರು ಅರಮನೆಗೆ ಆಗಮಿಸುತ್ತಾರೆ. ದೇವರ್ಷಿಗಳು ಎಂದ ಮೇಲೆ ಅವರಿಗೆ ವಿಶೇಷ ಸಮಾಚಾರ ತಿಳಿಸಬೇಕಲ್ಲವೇ! ಅಶ್ವಪತಿ ರಾಜನು ತನ್ನ ಮಗಳು ಸಾವಿತ್ರಿಯು ದ್ಯುಮತ್ಸೇನನ ಮಗನಾದ ಸತ್ಯವಂತನನ್ನು ವರಿಸಲು ನಿಶ್ಚಯಿಸಿದ ಶುಭ ವಾರ್ತೆಯನ್ನು ತಿಳಿಸುತ್ತಾರೆ.
ಆಗ ನಾರದರು ‘ದ್ಯುಮತ್ಸೇನನು ಈ ಹಿಂದೆ ಧರ್ಮಾತೃನಾದ ರಾಜನಾಗಿದ್ದ. ಈಗ ಯಾವುದೋ ಕಾರಣಕ್ಕೆ ಕುರುಡನಾಗಿದ್ದಲ್ಲದೇ ರಾಜಭ್ರಷ್ಟನಾಗಿ ಆಶ್ರಮವಾಸಿಯಾಗಿದ್ದಾನೆ ಮಾತ್ರವಲ್ಲ; ಆತನ ಮಗ ರಾಜಕುಮಾರನಾದ ಸತ್ಯವಾನನಿಗೆ ಇನ್ನು ಒಂದೇ ವರ್ಷ ಆಯಸ್ಸು. ಇಂತಹ ಅಲ್ಪಾಯುಷಿಗೆ ಮಗಳನ್ನು ವಿವಾಹ ಮಾಡುವುದು ಸರಿಯೇ?’ ಎಂದು ಕೇಳುತ್ತಾರೆ. ವಿಷಾದದ ವಿಷಯವರಿತ ಅಶ್ವಪತಿಯು ಕಡು ದುಃಖಿತನಾಗುತ್ತಾನೆ. ಆದರೆ ಒಮ್ಮೆ ಮನದಲ್ಲಿ ವರಿಸಲು ನಿಶ್ಚಯಿಸಿದ ಗಂಡನ್ನೇ ವಿವಾಹವಾಗುತ್ತೇನೆಯೇ ವಿನಃ ಬೇರೆ ಗಂಡನ್ನು ಹುಡುಕುವ ಅಗತ್ಯವಿಲ್ಲ ಎನ್ನುತ್ತಾಳೆ ಸಾವಿತ್ರಿ, ಗತ್ಯಂತರವಿಲ್ಲದೆ ಅಶ್ವಪತಿಯು ಸತ್ಯವಂತನಿಗೆ ತನ್ನ ಮಗಳು ಸಾವಿತ್ರಿಯನ್ನು ಧಾರೆಯೆರೆಯುತ್ತಾನೆ.
ಅತ್ತೆ ಮನೆ ಸೇರಿದ ಸಾವಿತ್ರಿಯು ಅಂಧನಾದ ಮಾವನನ್ನೂ, ಕೈಲಾಗದ ಅತ್ತೆಯನ್ನೂ ಹೆತ್ತ ತಂದೆ-ತಾಯಿಯಂತೆ ಆದರಿಸುತ್ತಾಳೆ. ಹೀಗೆ ದಿನಗಳು ಉರುಳಿತು. ಸಾವಿತ್ರಿಗೆ ಸದಾಕಾಲ ನಾರದರು ಹಿಂದೆ ಹೇಳಿದ ಮಾತು ಮನದ ಮೂಲೆಯಲ್ಲಿತ್ತು. ಆಶ್ರಮವಾಸಿಗಳಾದ ದ್ಯುಮತ್ಸೇನ, ಸತ್ಯವಂತರು ತಮ್ಮ ಕುಟುಂಬವನ್ನು ತಾವೇ ಪೊರೆದುಕೊಂಡು ನೆಮ್ಮದಿ ತಂದುಕೊಂಡಿದ್ದರು. ಒಂದು ದಿನ ಸತ್ಯವಂತನು ಕಟ್ಟಿಗೆ ಹಾಗೂ ಹಣ್ಣುಹಂಪಲು ತರಲು ಕಾಡಿಗೆ ಹೊರಟನು. ಇತ್ತೀಚೆಗೆ ಸತ್ಯವಂತ ಎಲ್ಲೇ ದೂರ ಹೊರಟರೂ ಸಾವಿತ್ರಿ ಪತಿ ಜೊತೆಯಲ್ಲಿ ತಾನೂ ಹೊರಟುಬಿಡುತ್ತಿದ್ದಳು. ಇಂದೂ ಹಾಗೆಯೇ ಮಾಡಿದಳು. ಕಾಡಿನಲ್ಲಿ ತನ್ನ ಕೆಲಸದಲ್ಲಿ ನಿರತನಾಗಿದ್ದ ಸತ್ಯವಾನನಿಗೆ ಇದ್ದಕ್ಕಿದ್ದಂತೆ ಎದೆನೋವು ಬಂದು ಮೂರ್ಛ ತಪ್ಪಿ ಹೋಯಿತು. ಅಷ್ಟರಲ್ಲೇ ಪತಿಯನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಳು ಸಾವಿತ್ರಿ ಗಂಡನ ಶುಕ್ರೂಷೆ ಮಾಡುತ್ತಿದ್ದಂತೆಯೇ ಒಬ್ಬ ವ್ಯಕ್ತಿ ತನ್ನೆದುರು ಬಂದು ನಿಂತಂತೆ ಭಾಸವಾಯಿತು. ‘ಸ್ವಾಮೀ, ನೀವು ಯಾರು? ಯಾಕೆ ಬಂದಿರಿ?’ ಎಂದಾಗ ‘ನಾನು ಯಮ, ನಿನ್ನ ಗಂಡನ ಆಯಸ್ಸು ಇಂದಿಗೆ ಮುಗಿಯಿತು. ಧರ್ಮಾತ್ಮನೂ, ಸತ್ಯನಿಷ್ಠನೂ ಆದ ಅವನ ಪ್ರಾಣವನ್ನು ಎಳೆದೊಯ್ಯಲು ನನ್ನ ಕಿಂಕರರನ್ನು ಕಳುಹಿಸದೆ ನಾನೇ ಸ್ವತಃ ಬಂದಿದ್ದೇನೆ’ ಎಂದವನೇ ಸತ್ಯವಂತನನ್ನು ಪಾಶದಿಂದ ಕಟ್ಟಿಕೊಂಡು ದಕ್ಷಿಣದ ಕಡೆಗೆ ಹೊರಟನು.
ಆಗ ಸಾವಿತ್ರಿಯೂ ಯಮನನ್ನು ಹಿಂಬಾಲಿಸಿದಳು. ಪತಿವ್ರತೆಯಾದ ಆಕೆ ವ್ರತ ನಿಯಮಗಳಲ್ಲಿದ್ದುದರಿಂದ ಆಕೆಗದು ಸಾಧ್ಯವಾಯಿತು. ಆಕೆ ಹಿಂಬಾಲಿಸಿದಂತೆ ನೀನು ಬರಬೇಡವೆಂದು ಹೇಳಿದರೂ ಸಾವಿತ್ರಿ ಕೇಳಲಿಲ್ಲ. ‘ಪತಿ ಎಲ್ಲಿರುವನೋ ಸತಿಯೂ ಅಲ್ಲೇ ಇರಬೇಕಾದುದು ನ್ಯಾಯವಲ್ಲವೇ’ ಎನ್ನುತ್ತಾಳೆ. ನಿನ್ನ ಪತಿಯ ಪ್ರಾಣವನ್ನುಳಿದುಬೇರೇನನ್ನದರೂ ಖೆಳಿಕೋ, ಆದರೆ ಹೀಗೆ ಹಿಂಬಾಲಿಸಬೇಡ ಎನ್ನುತ್ತಾನೆ ಯಮರಾಯ.. ನಾನು ಕೇಳಿದುದನ್ನು ನೀವು ದಯಪಾಲಿಸುವಿರಾದರೆ ರಾಜ್ಯವನ್ನು ಕಳೆದುಕೊಂಡು ಕುರುಡನಾಗಿ ಕಾಡು ಸೇರಿರುವ ನನ್ನ ಮಾವನಿಗೆ ಕಣ್ಣು ಮೊದಲಿನಂತೆಯೇ ಬಂದು ಬಲ ಪರಾಕ್ರಮಗಳಿಂದ ರಾಜ್ಯ ಸೇರಲಿ ಎಂದು ಬೇಡುತ್ತಾಳೆ. “ತಥಾಸ್ತು” ಎನ್ನುತ್ತಾನೆ ಯಮ, ಮತ್ತೂ ಹಿಂದೆಯೇ ಬರುವ ಗರತಿಯನ್ನು ಯಮ ‘ನಿನ್ನ ಗಂಡನ ಪ್ರಾಣ ಹೊರತಾಗಿ ಇನ್ನೇನಾದರೂ ಕೇಳು. ಹಿಂದೆಯೇ ಬರಬೇಡ’’. ಎನ್ನುತ್ತಾನೆ. ಆಗ ಸಾವಿತ್ರಿಯು ‘ದೇವಾ, ನನ್ನ ತಂದೆಗೆ ಗಂಡು ಸಂತಾನವಿಲ್ಲ. ಅವನಿಗೆ ನೂರು ಗಂಡು ಮಕ್ಕಳಾಗಿ ವಂಶವೃದ್ಧಿಯಾಗಬೇಕು’ ಎಂದು ವಿನಂತಿಸುತ್ತಾಳೆ, ‘ಸರಿ ಅದೂ ಕೈಗೂಡಲಿ, ಹಿಂದೆ ಹೋಗು’ ಎನ್ನುತ್ತಾನೆ ಯಮ. ಈಗಲೂ ಸಾವಿತ್ರಿ ಹಿಂದಿರುಗುವುದನ್ನು ಕಾಣದೆ ನಿನ್ನ ಪತಿಯ ಪ್ರಾಣ ಕೇಳದೇ ಬೇರೆ ಏನನ್ನಾದರೂ ಕೇಳಿಕೋ ಮತ್ತೆ ಹಿಂದಿರುಗು ಎನ್ನುತ್ತಾನೆ ಯಮ. ಆಗ ಸಾವಿತ್ರಿ ‘ಯಮಧರ್ಮರಾಯ, ನನ್ನ ಹೊಟ್ಟೆಯಲ್ಲಿ ನೂರು ಜನ ಗಂಡು ಮಕ್ಕಳು ಹುಟ್ಟಬೇಕು. ಅದನ್ನು ದಯಪಾಲಿಸಿ’ ಎಂದು ಬೇಡಿಕೊಳ್ಳುತ್ತಾಳೆ. ಆಗ ಯಮ ಹಿಂದುಮುಂದು ಯೋಚಿಸದೆ ‘ತಥಾಸ್ತು’ ಎನ್ನುತ್ತಾನೆ. ಮುಂದುವರಿದ ಯಮನೊಂದಿಗೆ ಸಾವಿತ್ರಿ ಮತ್ತೂ ಮುಂದುವರಿದಾಗ ಯಮ `ಯಾಕಮ್ಮಾ ಹೀಗೆ ಸತಾಯಿಸುತ್ತೀ? ನೀನು ಕೇಳಿದ ವರ ನೀಡಿದೆ ಹೋಗು’ ಎಂದಾಗ ‘ಅಯ್ಯಾ, ಯಮರಾಯಾ ನೀನು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಡವೇ? ನೀನು ನೀಡಿದ ವರವೆಂದರೆ ಸನ್ಮಾರ್ಗದಿಂದ ಕೂಡಿರಬೇಡವೇ. ಪತಿವ್ರತೆ ಹೆಣ್ಣಿಗೆ ಗಂಡನಿಲ್ಲದೆ ಹೇಗೆ ಮಕ್ಕಳಾಗಲು ಸಾಧ್ಯ ಯೋಚಿಸು. ಈಗ ಯಮನಿಗೂ ನಿಜಕ್ಕೂ ಬಾಯಿಕಟ್ಟಿ ಹೋಯಿತು. ಅಮ್ಮಾ, ಧರ್ಮವಾಗಿಯೂ, ಘನ ಅರ್ಥವತ್ತಾಗಿಯೂ ನಿನ್ನ ಮಾತಿಗೆ ಒಪ್ಪಿ ನಿನ್ನ ಗಂಡನ ಪ್ರಾಣವನ್ನು ಹಿಂದೆ ಕೊಡುತ್ತೇನೆ ಎನ್ನುತ್ತಾ ಸತ್ಯವಾನನನ್ನು ಸಾವಿತ್ರಿಗೆ ಒಪ್ಪಿಸುತ್ತಾನೆ.
ಕಾಲನ ಕೈಗೆ ಸಿಕ್ಕಿ ಪಾರಾದವರಾರೂ ಇಲ್ಲ. ಆದರೆ ಇಲ್ಲಿ ಸತ್ಯವಾನನಿಗೆ ತನ್ನ ಪತ್ನಿಯ ಮುಖೇನ ಇದು ಸಾಧ್ಯವಾಯಿತು. ‘ನಿನ್ನ ಧರ್ಮ ನಿನ್ನನ್ನು ಕಾಪಾಡುತ್ತದೆ’ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಸಾವಿತ್ರಿಯ ಧರ್ಮ ಸಾವಿತ್ರಿಯನ್ನು ಅರ್ಥಾತ್ ಸತ್ಯವಂತನನ್ನೂ ಬದುಕಿಸಿತು. ಇಲ್ಲಿ ಅವರಿಬ್ಬರೂ ಎಣ್ಣೆ-ಬತ್ತಿಗಳಂತೆ ಇದ್ದು ಧರ್ಮಜ್ಯೋತಿ ಬೆಳಗಿತು. ಕೌಟುಂಬಿಕ ಜೀವನ ಧೈಯಗಳ ಸ್ಫೂರ್ತಿಯನ್ನು ಇಲ್ಲಿ ಪಡೆಯಬಹುದು. ಸತ್ಯವಾನನ ಪೂರ್ವಸುಕೃತದಿಂದಾಗಿಯೇ ಸಾವಿತ್ರಿ ದೊರಕಿದಳು. ಹಾಗೆಯೇ ದ್ಯುಮತ್ಸೇನನ ಸತ್ಯಸಂಧತೆಗಾಗಿ ಅದೇ ರೀತಿಯ ಮಗ-ಸೊಸೆ, ತನ್ಮೂಲಕ ಕೈಬಿಟ್ಟು ಹೋದ ರಾಜ್ಯ ಮರಳಿ ಬರುವಂತಾಯಿತು. “ಋಣಾನುಬಂಧ ರೂಪೇಣ ಪಶುವತ್ನಿಸುತಾಲಯಾ” ಎನ್ನುವುದು ಇದಕ್ಕಾಗಿಯೇ.
–ವಿಜಯಾಸುಬ್ರಹ್ಮಣ್ಯ, ಕುಂಬಳೆ
ಗೊತ್ತಿರುವ ಪುರಾಣ ಕಥೆಗಳಾದರೂ..ನೀವು ಅದಕ್ಕೆ ಪೀಠಿಕೆ ಕೊಟ್ಟು ಹೇಳುವ ರೀತಿ ತುಂಬಾ ಚೆನ್ನಾಗಿ ರುತ್ತದೆ ವಿಜಯಾ ಮೇಡಂ ಇದು ನಾನು ಮಕ್ಕಳಿಗೆ ಕಥೆ ಹೇಳುವಾಗ ಅಳವಡಿಸಿಕೊಳ್ಳಲು..ಸ್ಪೂರ್ತಿ ಯಾಗಿದೆ.. ವಂದನೆಗಳು ಮೇಡಂ
ಚೆನ್ನಾಗಿದೆ
ಸರಳವಾಗಿ ಮನಮುಟ್ಟುವಂತೆ ಮೂಡಿಬಂದಿದೆ ಪುರಾಣ ಪ್ರಸಿದ್ಧ ಕಥೆ.
ಸೂಕ್ತ ಪೀಠಿಕೆಯೊಂದಿಗೆ ಮೂಡಿಬಂದ ಸುಂದರ ಪೌರಾಣಿಕ ಕಥೆ