ಕಂಪ್ಯೂ ಬರೆಹ : ತಾಂತ್ರಿಕ ತೊಡಕು ಮತ್ತು ತೊಡಗು :- ಭಾಗ 1
ಓದು ಮತ್ತು ಬರೆಹ ಎರಡೂ ಒಂದೇ ನಾಣ್ಯದ ಎರಡು ಮುಖ. ಓದುತ್ತಾ ಇದ್ದರೆ ಬರೆಯುವಂತಾಗುತ್ತದೆ. ಅದೇ ರೀತಿ ಬರೆಯುತ್ತಾ ಇದ್ದರೆ ಓದುವಂತಾಗುತ್ತದೆ. ಓದದೇ ಬರೆಯುವುದೂ ಬರೆಯದೇ ಓದುವುದೂ ಎರಡೂ ಆ ಮಟ್ಟಿಗೆ ಊನ. ಕೊನೆ ಪಕ್ಷ ಬರೆದದ್ದನ್ನು ತಿದ್ದುವಾಗಲಾದರೂ ಓದಲೇಬೇಕಲ್ಲ! ಕೆಲವರು ಇರುತ್ತಾರೆ. ಬರೆಯುವುದಷ್ಟೇ ಕೆಲಸ; ಇನ್ನೊಬ್ಬರು ಬರೆದದ್ದನ್ನು ಓದಲಾರರು. ಅವರದು ಆ ಮಟ್ಟಿಗೆ ಸಂಕುಚಿತ ಹೃದಯ. ‘ನಾನೇಕೆ ಇನ್ನೊಬ್ಬರು ಬರೆದದ್ದನ್ನು ಓದಬೇಕೆಂಬ’ ಧಿಮಾಕು ಕೂಡ. ಬಹಳ ದೊಡ್ಡ ಲೇಖಕ ಲೇಖಕಿಯರೇ ಓದನ್ನೂ ಬರೆಹವನ್ನೂ ಒಟ್ಟೊಟ್ಟಿಗೆ ತಪಸ್ಸಿನಂತೆ ನಡೆಸಿಕೊಂಡು ಬಂದವರು. ನಮ್ಮ ಕನ್ನಡದ ಮಹತ್ವದ ಕಾದಂಬರಿಕಾರರಾದ ಡಾ. ಎಸ್ ಎಲ್ ಭೈರಪ್ಪನವರು ಒಂದು ಕಾದಂಬರಿ ಬರೆಯಲು ಮಾಡಿಕೊಳ್ಳುವ ಸಕಲ ಸಿದ್ಧತೆಗಳಲ್ಲಿ ಪರಾಮರ್ಶನವೂ ಒಂದು. ಹಲವು ವರುಷಗಳ ಕಾಲ ಒಂದು ಕಾದಂಬರಿಗಾಗಿ ಇಂಥದೊಂದು ಸಿದ್ಧತೆ ಮಾಡಿಕೊಳ್ಳುತ್ತಾರೆಂದರೆ ಅದೇನೂ ಸ್ವಲ್ಪದ ವಿಚಾರವಲ್ಲ. ನಾನು ತುಂಬ ಹತ್ತಿರದಿಂದ ಬಲ್ಲ ಮೈಸೂರಿನ ಸಾಹಿತಿ ಶ್ರೀಮತಿ ಉಷಾನರಸಿಂಹನ್ ಅವರು ನಮ್ಮ ಕುಟುಂಬಮಿತ್ರರೂ ಹೌದು. ಬಹುತೇಕ ಅವರ ಎಲ್ಲ ರಚನೆಗಳ ಮೊದಲ ಓದುಗನೂ ಹೌದು. ಚಾರಿತ್ರಿಕ ಕಾದಂಬರಿಗಳು ಮತ್ತು ಪೌರಾಣಿಕ ನಾಟಕಗಳನ್ನು ಬರೆಯುವಲ್ಲಿ ಅವರ ವ್ಯಾಪಕ ಓದು ಮತ್ತು ಪರಾಮರ್ಶನವಂತೂ ಬೆರಗುಗೊಳಿಸುವಂಥದು. ಅಂಥದೊಂದು ಗಂಭೀರತೆ ಮತ್ತು ಶ್ರದ್ಧೆ ಇಲ್ಲದೇ ಹೋದರೆ ಸೃಜನಾತ್ಮಕತೆ ನರಳುತ್ತದೆ; ಹೊಸದು ಹುಟ್ಟುವುದಿಲ್ಲ! ಅನುಭವವು ತಿಳಿವಿನ ಜೊತೆಗೂ ತಿಳಿವು ಅನುಭವದ ಜೊತೆಗೂ ಹದವಾಗಿ ಬೆರೆತರೇನೇ ಪ್ರತಿಭಾಸೆಲೆ ಚಿಮ್ಮುವುದು. ಹೊಸತನ್ನು ಕಾಣುವುದು ಮತ್ತು ಕಟ್ಟುವುದು ಪ್ರತಿಭೆ ಎಂದ ಮೇಲೆ ಇದರ ಸ್ಫೂರ್ತಿ ಮತ್ತು ಪ್ರೇರಣೆಗಳ ನೆಲೆಗಳು ಹಲವು. ಇನ್ನು ಹಲವರು ಒಳ್ಳೆಯ ಸಹೃದಯ ಓದುಗರು. ಬಹಳ ಚೆನ್ನಾಗಿ ವಿಮರ್ಶಿಸುವಂಥವರು ಕೂಡ. ಆದರೆ ಒಂದಕ್ಷರ ಬರೆಯರು. ಬರೆಹವು ಅವರಿಗೆ ಹಿಡಿಸದ ಮತ್ತು ಹೊಂದದ ಕೆಲಸ. ಹಾಗೆ ಬರೆಯಬೇಕಿತ್ತು; ಹೀಗೆ ಚಿತ್ರಿಸಬೇಕಿತ್ತು ಎಂದು ಕ್ಯಾತೆ ತೆಗೆಯುವ ಕೆಲವರಿಗೆ ಬರೆಯುವ ಕಷ್ಟ ಗೊತ್ತಿಲ್ಲ ಅಷ್ಟೇ. ಏಕೆಂದರೆ ಕುಟುಕುವುದು ಸುಲಭ; ಕಟ್ಟುವುದು ಕಷ್ಟ.
ಮೀಮಾಂಸಕರು ಸಾಹಿತ್ಯದ ಮೂಲ ಆಕರವನ್ನು ‘ಪ್ರತಿಭೆ’ ಎಂದು ಕರೆದರೆ ಔಚಿತ್ಯ ಮತ್ತು ವ್ಯುತ್ಪತ್ತಿಗಳನ್ನು ‘ಸಾಹಿತ್ಯದ ಪರಿಕರ’ ಎಂದು ಹೆಸರಿಸಿದ್ದಾರೆ. ಇಲ್ಲಿ ಔಚಿತ್ಯ ಎಂಬುದು ಉಚಿತವನ್ನು ಅನುಸರಿಸಿ ಬರುವಂಥದು. ನಾನು ಏನನ್ನು ಬರೆಯುತ್ತಿದ್ದೇನೆ? ಯಾರಿಗಾಗಿ ಬರೆಯುತ್ತಿದ್ದೇನೆ? ಯಾವ ಪ್ರಕಾರವನ್ನು ಆಯ್ದುಕೊಂಡರೆ ನನ್ನ ಈ ಬರೆಹಕ್ಕೆ ನ್ಯಾಯ ಒದಗಿಸಬಹುದು? ಎಂಬಿತ್ಯಾದೀ ರಚನಾಕಾರರ ಚಿಂತನ ಮಂಥನ. ವ್ಯುತ್ಪತ್ತಿ ಎಂಬುದಕೆ ಕೆಲವರು ವಿಶಾಲವಾದ ಅಧ್ಯಯನ ಎಂದೂ ‘ಉಚಿತಾನುಚಿತ ವಿವೇಕೋ ವ್ಯುತ್ಪತ್ತಿ’ ಎಂದೂ ವ್ಯಾಖ್ಯಾನಿಸಿದ್ದಾರೆ. ಇಂಥ ಒಂದೇ ರೀತಿಯ ಮೂರು ಪದಗಳು ಮೂರು ಅರ್ಥಗಳನ್ನು ಕೊಡುತ್ತವೆ. ಉತ್ಪತ್ತಿ ಎಂದರೆ ಭೌತಿಕ ವಸ್ತು, ಕಣ್ಣಿಗೆ ಕಾಣುವಂಥ ಪದಾರ್ಥಗಳ ಉತ್ಪಾದನೆ. ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರಗಳಂಥ ಅಧ್ಯಯನ ಶಿಸ್ತುಗಳಲ್ಲಿ ಬಳಸುವ ಪರಿಕಲ್ಪನೆ. ಇನ್ನೊಂದು ನಿಷ್ಪತ್ತಿ. ಅಂದರೆ ಕಣ್ಣಿಗೆ ಕಾಣದಂಥ ವಿಚಾರ, ಭಾವನೆಗಳ ಹುಟ್ಟು ಮತ್ತು ವಿಕಸನ ಚರ್ಚೆ ಹಾಗೂ ಶೋಧನೆ. ಉದಾಹರಣೆಗೆ ಪದಗಳ ನಿಷ್ಪತ್ತಿ. ಒಬ್ಬ ವ್ಯಕ್ತಿಯ ಹೆಸರು, ಊರಿನ ಹೆಸರು ಹೇಗೆ ಬಂತು? ಎಂಬುದರ ಭಾಷಾಶಾಸ್ತ್ರೀಯ ಕ್ಷೇತ್ರಕಾರ್ಯ. ಇವೆರಡೂ ಅಲ್ಲದ ವ್ಯುತ್ಪತ್ತಿ ಎಂಬುದು ಶುದ್ಧವಾಗಿ ಇಂಥ ಕಾವ್ಯಮೀಮಾಂಸೆಯ ಪರಿಭಾಷೆ. ಕಾವ್ಯ, ಕತೆ, ಕಾದಂಬರಿ ಮೊದಲಾದ ಸೃಜನ ಪ್ರಧಾನ ರಚನೆಗಳ ಸಿದ್ಧತೆಯೇ ಬೇರೆ. ಪ್ರಬಂಧ, ಅಂಕಣ, ಲೇಖನ ಮೊದಲಾದ ಚಿಂತನ ಪ್ರಧಾನ ರಚನೆಗಳ ಬದ್ಧತೆಯೇ ಬೇರೆ. ಇವೆರಡಕ್ಕೂಓದು ಬೇಕು. ಆದರೆ ಅವುಗಳ ಸ್ವರೂಪ ನಿರೂಪಗಳು ಬೇರೆಯಷ್ಟೆ. ಓದುವುದು ಮತ್ತು ಬರೆಯುವುದು ಬಹಳ ಒಳ್ಳೆಯ ಹವ್ಯಾಸ, ವಿದ್ಯಾವಂತರ ಸಂಸ್ಕೃತಿ ಸಂಸ್ಕಾರದ ಪ್ರತೀಕ. ಮಾನಸಿಕ ವ್ಯಾಯಾಮಕ್ಕೆ ಮತ್ತು ಆರೋಗ್ಯಕ್ಕೆ ಓದಬೇಕು ಮತ್ತು ಬರೆಯಬೇಕು. ಈಗ ಓದುವುದು ಮತ್ತು ಬರೆಯುವುದು ಎಂಬುದು ತನ್ನ ಮೂಲ ಸ್ವರೂಪದಲ್ಲಿ ಇಲ್ಲದಂತಾಗಿದೆ. ಅಂದರೆ ನೋಡುವುದು ಮತ್ತು ಟೈಪಿಸುವುದು ಎಂದು ಬದಲಿಸಿಕೊಳ್ಳಬೇಕಿದೆ. ಬಹುತೇಕ ಇದು ನಿಜವೂ ಹೌದು. ಆಧುನಿಕ ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ಓದಬಹುದಾಗಿದೆ. ಟ್ಯಾಬ್ಲೆಟ್ಟು, ಫ್ಯಾಬ್ಲೆಟ್ಟು, ಕಂಪ್ಯೂಟರುಗಳಲ್ಲಿ, ಮೊಬೈಲ್ ಫೋನುಗಳಲ್ಲಿ, ಇ ಬುಕ್ ರೀಡರುಗಳಲ್ಲಿ ಸಹ ನಾವು ಓದುವ ಅವಕಾಶವಿದೆ. ಬ್ಲಾಗು ಬರೆಹಗಳನ್ನೂ ಆನ್‌ಲೈನ್ ಪತ್ರಿಕೆ-ಮ್ಯಾಗಜೀನುಗಳನ್ನೂ ನಾವು ಓದುವುದು ಹೀಗೆಯೇ! ಹಾಗೆಯೇ ಒಮ್ಮೆ ಬರೆದು ಆಮೇಲೆ ಟೈಪಿಗೆ ಕೊಡುವುದೋ ಟೈಪು ಮಾಡುವುದೋ ಇದ್ದುದು ಈಗ ಬಹುತೇಕ ಒಮ್ಮೆಗೇ ಟೈಪು ಮಾಡಿ, ಅದನೊಮ್ಮೆ ಅವಲೋಕಿಸಿ, ತಿದ್ದುಪಡಿ ಇದ್ದರೆ ಸರಿಪಡಿಸಿ, ಮೇಲ್ ಮಾಡುವ ಜಾಯಮಾನದ ಜಮಾನ ಇದಾಗಿದೆ! ಹೀಗಿರುವಾಗ ನಾನಿಲ್ಲಿ ನೇರವಾಗಿ ನನ್ನ ಅನುಭವದ ಹಿನ್ನೆಲೆಯಲ್ಲಿ ಬರೆವಣಿಗೆಯ ಕೆಲವೊಂದು ಸೌಕರ್ಯಗಳನ್ನೂ ತಾಪತ್ರಯಗಳನ್ನೂ ಹಂಚಿಕೊಳ್ಳಲು ಹೊರಟಿರುವೆ.
ಹಾಳೆಗಳನ್ನು ಜೋಡಿಸಿಕೊಂಡೋ ಲಾಂಗ್ ನೋಟ್‌ಬುಕ್ಕಿನಲ್ಲೋ ಬರೆದು, ಆನಂತರ ಅದನ್ನು ನೋಡಿಕೊಂಡು ಟೈಪಿಸುವ ಕಾಲವೊಂದಿತ್ತು. ಹೀಗೆ ಟೈಪಿಸುವಾಗಲೂ ತಿದ್ದುಪಡಿಗಳಾಗುತ್ತಿದ್ದವು; ಪದವನ್ನೋ ವಾಕ್ಯವನ್ನೋ ಬದಲಿಸಲು ಸುಲಭವಾಗುತ್ತಿತ್ತು. ‘ಪದವಿಟ್ಟಳುಪದೊಂದಗ್ಗಳಿಕೆ, ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ’ ಎಂದ ಕುಮಾರವ್ಯಾಸನು ಆಗಲೇ ತಾಳೆಗರಿಯಲ್ಲಿ ಕೊರೆಯುವಾಗಲೇ ಹೇಳಿದ್ದು ನೆನಪಾಗುತ್ತಿದೆ. ‘ಒಮ್ಮೆ ಒಂದು ಪದ ಬರೆದ ಮೇಲೆ ನಾನು ಅಳಿಸಲಾರೆ ಹಾಗೆಯೇ ಇನ್ನೊಬ್ಬ ಕವಿ ಬಳಸಿದ ಪದವ ಕೊಳ್ಳಲಾರೆ’ ಎಂದವನಿವ. ತುಸು ಜಾಸ್ತಿಯೇ ಆದ ಆತ್ಮಪ್ರತ್ಯಯವಿದು. ‘ವಾಗ್ದೇವಿಯ ಭಂಡಾರದ ಮುದ್ರೆಯನೊಡೆದೆನ್’ ಎಂದ ಶಕ್ತಿಕವಿ ರನ್ನನ ಅಹಮಿಗಿಂತ ಕೊಂಚ ವಾಸಿ! ಇರಲಿ. ನಾವೀಗ ಬಿಳಿಹಾಳೆಗಳಲ್ಲಿ ಬರೆದು ಪುಟಸಂಖ್ಯೆಯನಿಟ್ಟು, ಟ್ಯಾಗು ಸೇರಿಸಿ, ಮತ್ತೆ ಒಂದಾವರ್ತಿ ಓದಿ, ತಿದ್ದುಪಡಿ ಮಾಡಿ ಪ್ರಕಟಣೆಗೆ ಕಳಿಸುವುದು ತೀರಾ ಅಪರೂಪವಾಗಿದೆ; ನೇರವಾಗಿ ಸಿಸ್ಟಮಿನಲ್ಲಿ ಎಂಎಸ್ ವರ್ಡ್ ಓಪನಿಸಿಕೊಂಡು, ನುಡಿಯಲ್ಲೋ, ಯುನಿಕೋಡ್ ಕನ್ನಡದಲ್ಲೋ ಟೈಪಿಸಿ, ಹಾಗೆಯೇ ಮೇಲ್ ಮಾಡುವುದೇ ನಿಜರೂಪವಾಗಿದೆ! ಕಂಪ್ಯೂಟರಿನಲ್ಲಿ ಅಂದರೆ ಡೆಸ್ಕ್‌ಟಾಪ್ ಆಗಿರಬಹುದು, ಲ್ಯಾಪ್‌ಟಾಪ್ ಆಗಿರಬಹುದು. ಒಟ್ಟಿನಲ್ಲಿ ಹೀಗೆ ನೇರವಾಗಿ ಟೈಪು ಮಾಡಲು ನಮಗೆ ಬೇಕಾದದ್ದು: ಮೂರು ಬಗೆಯ ತಂತ್ರಾಂಶಗಳು. ಸಿಸ್ಟಮಿನ ಓಎಸ್, ಅದರಲ್ಲಿ ಸಂಸ್ಥಾಪನೆಗೊಂಡ ಎಂಎಸ್ ಆಫೀಸ್ ಮತ್ತು ಬರೆಹ ಅಥವಾ ನುಡಿ ಅಥವಾ ಯುನಿಕೋಡ್ ಕನ್ನಡ. ಆಸ್ಕಿ (ASCII) ಮತ್ತು ಇಸ್ಕಿ (ISCII) ಇವೆರಡೂ ಕಂಪ್ಯೂಟರಿನಲ್ಲಿ ಅಕ್ಷರಗಳನ್ನು ಮೂಡಿಸಲು ಬಳಸುವ ಸಂಕೇತ ವ್ಯವಸ್ಥೆ. ಆಸ್ಕಿಯು ಇಂಗ್ಲಿಷ್ ಅಕ್ಷರಗಳನ್ನು ಮೂಡಿಸಿದರೆ, ಇಸ್ಕಿಯು ಭಾರತೀಯ ಭಾಷೆಗಳಿಗಾಗಿಯೇ ನಿರ್ದಿಷ್ಟವಾಗಿ ವಿನ್ಯಾಸ ಮಾಡಿರುವಂಥವು. ಇಸ್ಕಿಯು ಭಾರತೀಯ ಭಾಷೆಗಳ ಅಕ್ಷರಗಳನ್ನು ಎನ್‌ಕೋಡ್ ಮಾಡಿಕೊಡುವುದರಿಂದ ಆಸ್ಕಿಗಿಂತ ಇಸ್ಕಿಯು ಮೂಡುವ ಕಾಲಾವಧಿ ಸ್ವಲ್ಪ ನಿಧಾನ; ನುಡಿ ತಂತ್ರಾಂಶವು ಇಸ್ಕಿ.
ಸಾಮಾನ್ಯರಾದ ನಾವು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ (ವಿಂಡೋಸ್ ಕಂಪೆನಿಯ ಕಾರ್ಯಾಚರಿತ ವ್ಯವಸ್ಥೆ) ಅನ್ನೇ ಬಳಸುವುದು. (ಮುಕ್ತ ಬಳಕೆಯ ಆಂಡ್ರಾಯ್ಡ್, ಮುಕ್ತ ಸೋರ್ಸ್ಕೋಡಿನ ಲಿನಕ್ಸ್, ಆಪಲ್ ಕಂಪೆನಿಯ ಮ್ಯಾಕ್ ಮುಂತಾದ ಬೇರೆ ಬೇರೆ ಕಾರ್ಯಾಚರಣ ವ್ಯವಸ್ಥೆಗಳಿವೆ.) ಈ ವಿಂಡೋಸ್‌ನಲ್ಲಿ ಹಲವು ಬಗೆಯ ಆವೃತ್ತಿಗಳಿವೆ. ವಿಂಡೋಸ್ 3.1, ವಿಂಡೋಸ್ 95, ವಿಂಡೋಸ್ 98, ವಿಂಡೋಸ್ 2000, ವಿಂಡೋಸ್ ಎಕ್ಸ್‌ಪಿ, ವಿಂಡೋಸ್ ವಿಸ್ತಾ, ವಿಂಡೋಸ್ 7, ವಿಂಡೋಸ್ 8, ವಿಂಡೋಸ್ 10, ಮತ್ತು ವಿಂಡೋಸ್ 11. ಇದೀಗ ಕೊನೆಯ ಎರಡು ಚಾಲ್ತಿಯಲ್ಲಿವೆ. ಒಎಸ್‌ಗಳು ನವೀಕರಣಗೊಳ್ಳುವಷ್ಟು ಶೀಘ್ರವಾಗಿ ಬರೆವಣಿಗೆಯ ತಂತ್ರಾಂಶಗಳು ನವೀಕರಣಗೊಳ್ಳುವುದಿಲ್ಲ. ಹಾಗಾಗಿಯೇ ವಿಂಡೋಸ್ 7 ಮತ್ತು 10 ಒಎಸ್ ತಂತ್ರಾಂಶಗಳು ಕನ್ನಡ ಗಣಕ ಪರಿಷತ್ತಿನ (ಕಗಪ) ನುಡಿ 5.0 ತಂತ್ರಾಂಶವನ್ನು ಬೆಂಬಲಿಸುತ್ತಿದ್ದವು. ಆದರೆ ವಿಂಡೋಸ್ 11 ಮಾತ್ರ ನುಡಿ 5.0 ಆವೃತ್ತಿಯನ್ನು ಬೆಂಬಲಿಸುವುದಿಲ್ಲ; ನುಡಿ 6.0 ಆವೃತ್ತಿ ಅಂದರೆ ಯುನಿಕೋಡ್ ನುಡಿಯನ್ನು ಮಾತ್ರ ಬೆಂಬಲಿಸುತ್ತದೆ. ನುಡಿ ತಂತ್ರಾಂಶದ್ದು ಸೀಮಿತ ಬಳಕೆ. ಯುನಿಕೋಡ್ ನುಡಿಯು ಯುನಿವರ್ಸಲ್ ಬಳಕೆ. ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ಒಎಸ್‌ಗಳು ಬೇರೆ ಬೇರೆ ಆಗಿರುವುದರಿಂದ ನುಡಿಯಲ್ಲಿ ಟೈಪು ಮಾಡಿದ ಬರೆವಣಿಗೆಯ ಕಡತವು ಫೋನು, ಟ್ಯಾಬುಗಳಲ್ಲಿ ತೆರೆದುಕೊಳ್ಳುವುದಿಲ್ಲ! ಅದಕಾಗಿಯೇ ಯುನಿಕೋಡ್ ಬಂದಿದ್ದು. ಈ ಯುನಿಕೋಡ್ ನುಡಿಯನ್ನು ಬಳಸುವುದರಿಂದ ಯಾವ ತೆರನಾದ ಡಿವೈಸುಗಳಾಗಿದ್ದರೂ ನಮ್ಮ ಬರೆವಣಿಗೆಯನ್ನು ಓಪನಿಸಿ ಓದಬಹುದಾಗಿದೆ. ಇಮೇಲ್‌ಗಳನ್ನು ಅಟ್ಯಾಚಿಸಿದ ಮೇಲೆ ಕೊಡುವ ಸಂಕ್ಷಿಪ್ತ ವಿವರಣೆಯನ್ನು ಸಹ ಕನ್ನಡದಲ್ಲೇ ಟೈಪಿಸಬಹುದು ಮತ್ತು ಓದಬಹುದು. ಆದರೆ ನುಡಿ 4.0 ಆಗಲೀ ನುಡಿ 5.0 ತಂತ್ರಾಂಶಗಳಲ್ಲಿ ಈ ಅನುಕೂಲವಿಲ್ಲ. ನಾವು ಟೈಪು ಮಾಡುವ ಮುನ್ನ ಬಳಸುವ ಕಂಪ್ಯೂಟರಿನ ವಿಂಡೋಸ್ ಕಾರ್ಯಾಚರಿತ ವ್ಯವಸ್ಥೆ ಅಂದರೆ ಒಎಸ್ ಆವೃತ್ತಿಯು ಹತ್ತೋ? ಹನ್ನೊಂದೋ? ತಿಳಿದುಕೊಳ್ಳಬೇಕು. ವಿಂಡೋಸ್ ಟೆನ್ ಮತ್ತು ವಿಂಡೋಸ್ ಇಲೆವೆನ್ ಎರಡೂ ಚಾಲ್ತಿಯಲ್ಲಿವೆ. ವಿಂಡೋಸ್ ಸೆವೆನ್ ಎಂಬುದೀಗ ಹಳೆಯದಾಗಿದ್ದು, ಸಪೋರ್ಟ್ ಇಲ್ಲದೇ ನಿಸ್ತೇಜವಾಗಿದೆ. ಸಾಫ್ಟ್‌ವೇರ್ ಅಪ್ಲಿಕೇಶನ್ಸ್ ಕಾರ್ಯ ನಿರ್ವಹಿಸುವುದೇ ಈ ವಿಂಡೋಸ್‌ನಿಂದ. ವಿಂಡೋಸ್ ಆವೃತ್ತಿ ಹತ್ತರಲ್ಲಿ ಕನ್ನಡ ಟೈಪು ಮಾಡುವ ನುಡಿ ತಂತ್ರಾಂಶ ಕೆಲಸ ಮಾಡುತ್ತದೆ. ಆದರೆ ವಿಂಡೋಸ್ ಆವೃತ್ತಿ ಹನ್ನೊಂದರಲ್ಲಿ ನುಡಿ ತಂತ್ರಾಂಶದಲ್ಲಿ ಟೈಪು ಮಾಡಿದ ಕಡತಗಳನ್ನು ವೀಕ್ಷಿಸಬಹುದು; ಆದರೆ ಟೈಪು ಮಾಡಲು ಆಗುವುದಿಲ್ಲ. ಇದಕ್ಕಾಗಿ ಯುನಿಕೋಡ್ ಬಳಸಬೇಕು. ನುಡಿ ತಂತ್ರಾಂಶ ಅಕ್ಷರಶೈಲಿಯದು ಸೀಮಿತ ಪರಿಧಿ; ಆದರೆ ಯುನಿಕೋಡ್ ಅಕ್ಷರಶೈಲಿಯದು ಸಾರ್ವತ್ರಿಕ. ಮೂಲತಃ ಯುನಿಕೋಡ್ ಎಂಬುದೇ ಯೂನಿವರ್ಸಲ್ ಕೋಡ್. ‘ಯಾವುದರಲ್ಲಿ ಟೈಪು ಮಾಡಿದರೇನು? ಟೈಪು ಮಾಡಿದರೆ ಸಾಕಲ್ಲವೇ?’ ಎಂದು ಕೇಳಬಹುದು. ಇಲ್ಲೇ ಒಂದು ಸ್ವಾರಸ್ಯ ಇರುವುದು. ಪ್ರಾರಂಭದಲ್ಲಿ ನುಡಿ ತಂತ್ರಾಂಶವನ್ನು ಬಳಸುವವರು ಅದನ್ನು ಟೈಪು ಮಾಡುವ ವಿಧಾನಕ್ಕೆ ಮತ್ತು ಅಕ್ಷರವಿನ್ಯಾಸಕ್ಕೆ ಹೊಂದಿಕೊಂಡಿದ್ದರು. ಆ ತರುವಾಯ ಕಾಣಿಸಿಕೊಂಡಿದ್ದು ಯುನಿಕೋಡ್. ಮೊಬೈಲ್ ಫೋನುಗಳಲ್ಲಿ ನುಡಿ ಸಿಗುವುದಿಲ್ಲ ಏಕೆಂದರೆ ಮೊಬೈಲ್ ಫೋನುಗಳದು ಆಂಡ್ರಾಯ್ಡ್ ಕಾರ್ಯಾಚರಿತ ವ್ಯವಸ್ಥೆ. ಅದಕ್ಕಾಗಿಯೇ ಯುನಿಕೋಡ್‌ನಲ್ಲಿ ಟೈಪು ಮಾಡಲು ಹೊರಟಿದ್ದು. ನುಡಿಗೂ ಯುನಿಕೋಡ್‌ಗೂ ಟೈಪು ಮಾಡುವ ವಿಧಾನದಲ್ಲಿ ಒಂದೆರಡು ವ್ಯತ್ಯಾಸಗಳಿವೆ. ಕನ್ನಡದ ಅರ್ಕಾವೊತ್ತು (ಸರಿಯಾದ ರೂಪ: ಅರಾವೊತ್ತು, ಅಂದರೆ ಅರ್ಧ ರ) ಇರುವ ಪದಗಳನ್ನು ಟೈಪು ಮಾಡುವ ಶೈಲಿಯಲ್ಲಿ ಭಿನ್ನತೆಯಿದೆ. ನುಡಿಯಲ್ಲಿ ಇದಕ್ಕಾಗಿ ಎಫ್ ಗುಂಡಿಯನ್ನು ಮೀಸಲಿಡಲಾಗಿತ್ತು. ‘ಸೂರ್ಯ’ ಎಂದೂ ಸೂರ‍್ಯ ಎಂದೂ ಎರಡೂ ರೀತಿಯಲ್ಲಿ ಟೈಪಿಸಬಹುದು. ಆದರೆ ಯುನಿಕೋಡ್‌ನಲ್ಲಿ ಕಡುಕಷ್ಟ! ಅರಾವೊತ್ತಿಗೆ ಎಫ್ ಗುಂಡಿಯನ್ನು ಮೀಸಲಿಟ್ಟಿಲ್ಲ. ಇದರಲ್ಲಿ ಸೂರ್ಯ ಎಂಬುದನ್ನು ಟೈಪು ಮಾಡಲು ಕ್ರಮವಾಗಿ ಎಸ್, ಶಿಫ್ಟ್ ಯು, ಆರ್, ಎಫ್ ಮತ್ತು ವೈ ಗುಂಡಿಗಳನ್ನು ಒತ್ತಬೇಕು. ಅಂದರೆ ಕನ್ನಡ ಭಾಷೆಯ ಉಚ್ಚಾರಣೆಯ ರೀತ್ಯ ಟೈಪು ಮಾಡುವ ವೈಜ್ಞಾನಿಕತೆಯನ್ನು ಅಳವಡಿಸಲಾಗಿದೆ. ಯುನಿಕೋಡ್‌ನಲ್ಲಿ ಅಂದರೆ ನುಡಿ 6.0 ತಂತ್ರಾಂಶದ ಮೂಲಕಡತವನ್ನು ತೆರೆದು ಅಲ್ಲಿ ಎಸ್, ಶಿಫ್ಟ್ ಯು, ಆರ್, ಶಿಫ್ಟ್ ಎಫ್, ವೈ ಎಂಬುದನ್ನು ಟೈಪಿಸಿಕೊಂಡು, ಸೂರ‍್ಯ ಈ ರೂಪವನ್ನು ಪಡೆದು, ನಕಲಿಸಿ, ಎಂ ಎಸ್ ವರ್ಡ್ ಕಡತಕ್ಕೆ ಅಂಟಿಸಬೇಕು! ಅರಾವೊತ್ತು ಇರುವ ಎಲ್ಲ ಪದಗಳ ವಿಚಾರದಲ್ಲೂ ಇದೇ ಮಂತ್ರ. Rank ಎಂದು ನುಡಿಯಲ್ಲಿ ಸುಲಭವಾಗಿ ಟೈಪು ಮಾಡಬಹುದು; ಆದರೆ ಯುನಿಕೋಡ್‌ನಲ್ಲಿ ಸಾಧ್ಯವಿಲ್ಲ! ರ್ಯಾಂಕ್ ಎಂದೇ ಮೂಡುತ್ತದೆ! ಹಾಗಾಗಿ ನಾನು ಯುನಿಕೋಡ್ ಬಳಸುವಾಗ ರಾಂಕ್ ಎಂದು ಬರೆಯುತ್ತಿದ್ದೆ. ಆನಂತರ ಕಂಡುಕೊಂಡೆ: ಆರ್, ಶಿಫ್ಟ್ ಎಫ್, ವೈ, ಎ, ಶಿಫ್ಟ್ ಎಂ, ಕೆ ಮತ್ತು ಎಫ್ ಎಂದು ಯುನಿಕೋಡ್ ಮೂಲಕಡತದಲ್ಲಿ ಟೈಪಿಸಿದರೆ, ರ‍್ಯಾಂಕ್ ಎಂಬ ರೂಪ ದೊರೆಯುತ್ತದೆ! ಯಥಾಪ್ರಕಾರ ಅಲ್ಲಿಂದ ನಕಲಿಸಿಯೋ ಕತ್ತರಿಸಿಯೋ ವರ್ಡ್ ಫೈಲಿಗೆ ಅಂಟಿಸಬೇಕು. ಇದು ಸಾಹಸ ಮತ್ತು ಸಮಯ ನುಂಗುವ ಕೆಲಸ. ಇಂಥ ಗುಣಿತಾಕ್ಷರಗಳ ಸಮಸ್ಯೆಯು ನುಡಿಯಲ್ಲಿ ಇರಲಿಲ್ಲ; ಯುನಿಕೋಡ್‌ನಲ್ಲಿ ಬಗೆಹರಿದಿಲ್ಲ! ಇನ್ನು ಫಾಂಟುಗಳ ವಿಚಾರ. ಇದೇ ಇನ್ನೊಂದು ಲೋಕ! ಫಾಂಟ್ ಎಂದರೆ ಅಕ್ಷರ ವಿನ್ಯಾಸ. ನುಡಿಯ ಫಾಂಟುಗಳೇ ಬೇರೆ; ಯುನಿಕೋಡ್‌ನ ಫಾಂಟುಗಳೇ ಬೇರೆ. ನಾವು ಬಳಸುವ ಫಾಂಟುಗಳು ಬೇರೊಂದು ಸಿಸ್ಟಮಿನಲ್ಲಿ ಇರದೇ ಹೋದರೆ ಕಡತವು ಓದಲಾಗದೇ ಸಮಸ್ಯೆಯಾಗುತ್ತದೆ. ಚಿತ್ರವಿಚಿತ್ರ ಲಿಪಿಯಲ್ಲಿ ಕಾಣಿಸಿಕೊಂಡು ಆಘಾತ ತರಿಸುತ್ತದೆ. ಸಾಮಾನ್ಯವಾಗಿ ನುಡಿಯಲ್ಲಿ ಓಣಜು 01 ಅನ್ನೂ ಯುನಿಕೋಡ್‌ನಲ್ಲಿ ತುಂಗಾ ಅಥವಾ ನಿರ್ಮಲ ಯುಐ ಫಾಂಟನ್ನು ಬಳಸುವುದು ರೂಢಿ. ನುಡಿಯಲ್ಲೇ ಯುನಿಕೋಡ್ ಫಾಂಟುಗಳಿವೆ. ಆಹ್ವಾನ ಪತ್ರಿಕೆ, ಸರ್ಟಿಫಿಕೇಟ್ ಮೊದಲಾದ ಅಂದಚೆಂದ ವಿನ್ಯಾಸಕ್ಕಾಗಿ ನಾನು ವಿವಿಧ ಫಾಂಟುಗಳನ್ನು ಡೌನ್‌ಲೋಡ್ ಮಾಡಿಕೊಂಡು ಸಂದರ್ಭಾನುಸಾರ ಬಳಸುತ್ತೇನೆ. ಇವೆಲ್ಲವೂ ಉಚಿತ ತಂತ್ರಾಂಶಗಳೇ. ನಮ್ಮ ಕೆಲಸಕ್ಕೆ ಉಚಿತವೇ ಸಾಕು; ಮುದ್ರಕರಾದರೋ ಪಾವತಿಸಿದ (ಪೇಯ್ಡ್ ವರ್ಶನ್) ತಂತ್ರಾಂಶಗಳನ್ನೂ ಫಾಂಟುಗಳನ್ನೂ ಬಳಸುತ್ತಾರೆ. ಅವರಿಗೆ ಅದು ಆವಶ್ಯಕ.
(ಮುಂದುವರಿಯುವುದು)
–ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ
ನೀವು ..ಯಾವುದೇ ವಿಷಯ ತೆಗೆದುಕೊಂಡು ಬರೆದರೂ… ಚಿಂತನೆ ಗೆ ಹಚ್ಚುವಂತ್ತಿರುತ್ತದೆ…ತಿಳುವಳಿಕೆ …ಮೂಡಿಸುವಂತಿರುತ್ತದೆ..ಈ ಲೇಖನ ವೂ ಹಾಗೇ ಪ್ರಾರಂಭವಾಗಿ ಮುಂದಿನ ಕಂತನ್ನು ನಿರೀಕ್ಷಿಸುವಂತಿದೆ..ಮಂಜು ಸಾರ್..ನಾನಂತು ಈ ಕಂಪ್ಯೂಟರ್ ವಿಭಾಗದಲ್ಲಿ ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತೇನೆ..
ಹೌದಾ ಮೇಡಂ, ನಿಮ್ಮ ಮುಕ್ತ ಶ್ಲಾಘನೆಗೆ ನನ್ನ ಪ್ರಣಾಮ. ಪೂರ್ಣವಾದ ಮೇಲೆ ಸಂದೇಹಗಳಿದ್ದರೆ ತಿಳಿಸಿ.
ಅದರಿಂದ ನನಗೂ ನೆರವಾದೀತು. ಉತ್ತರ ಕಂಡುಕೊಳ್ಳುವಲ್ಲಿ ಪ್ರೇರಣೆಯಾದೀತು. ವಂದನೆಗಳು
ಸೊಗಸಾದ, ಸಾಕಷ್ಟು ವಿಚಾರಗಳನ್ನು ಒಳಗೊಂಡಿರುವಂತಹ ಬರಹ.
ಶರಣು ಮೇಡಂ
ಕನ್ನಡ ಟೈಪಿನ ತಂತ್ರಜ್ಞಾನದ ಒಳಗು ಹೊರಗುಗಳನ್ನು ಕೂಲಂಕಷವಾಗಿ ನಿರೂಪಿಸಿದ ನಿಮ್ಮ ಲೇಖನದಿಂದ ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳುವಂತಾಯಿತು. ಬರೆಹ ತಂತ್ರಾಂಶದಲ್ಲಿ ಅಥವಾ ಮೊಬೈಲ್ನಲ್ಲಿ ಟೈಪಿಸುವ ನನಗೆ ಅದರ ಬಗ್ಗೆ ಇದ್ದ ಕುತೂಲಹವನ್ನು ತಣಿಸಿತು.
ಹೌದೇ, ತುಂಬ ಸಂತೋಷ, ಧನ್ಯವಾದಗಳು
ವಿವರಗಳು ತಿಳಿಯದೆ ಕುರುಡು ಕುರುಡಾಗಿ ಬಳಸುತ್ತಿದ್ದ ನನಗೆ ಈ ಲೇಖನದಿಂದ ಹಲವಾರು ವಿಚಾರಗಳು ತಿಳಿಯುವಂತಾಗುತ್ತಿದೆ.
ಧನ್ಯವಾದ ಮೇಡಂ…….