ನಾನೊಂದು ಚಿನಾರ್

ನಾನೊಂದು ಸುಂದರ ಚಿನಾರ್ ಮರ
ನನ್ನ ತವರು ಅತಿಸುಂದರ ಕಾಶ್ಮೀರ
ದಶಕಗಳಿಂದ ನಿಂತಿರುವೆ ನಾನಿಲ್ಲಿ
ವರ್ಷವಿಡೀ ಸುಂದರ ಎಲೆಗಳಲ್ಲಿ
ಆಶೆಯಿಹುದು ಶಾಂತಿಯ ನಿರೀಕ್ಷೆಯಲ್ಲಿ
ಕಾಶ್ಮೀರಿಗಳಿಗೆಲ್ಲ ಒಳ್ಳೆಯದಾಗಲಿ
ಆಗಾಗ ನಡೆಯುವುದು ರಕ್ತಪಾತ
ಮುಗ್ಧ ಜೀವಿಗಳ ಮಾರಣಹೋಮ
ಆಗುವೆ ನಾನಾಗ ಒಂದು ಮೂಕಸಾಕ್ಷಿ
ಆಗುವುದು ನನ್ನ ಪ್ರತಿ ಎಲೆ ಕಣ್ಣೀರ ಹನಿ
ನನ್ನ ಬೇರುಗಳು ಆಳದಲ್ಲಿದ್ದರೂ
ನೆನೆದಿವೆ ಕೆಂಪು ರಕ್ತದೋಕುಳಿಯಲ್ಲಿ
ನನ್ನ ಬೇರುಗಳು ಹೀರಿವೆ ರಕ್ತವ
ನಾನೇನು ಮಾಡಲಿ ಅಸಹಾಯಕಳು
ಅಲ್ಲೇ ಕಣಿವೆಯಲ್ಲಿ ಢಂಢಂ ಸದ್ದು
ಎಲ್ಲೋ ಒಬ್ಬೊಬ್ಬರಾಗಿ ಬಿದ್ದ ಸದ್ದು
ನವವಧುವಾದಳು ನವ ವಿಧವೆ
ಅವಳ ಬಾಳೆಲ್ಲ ಹಾಳಾಯಿತಲ್ಲವೆ
ತಂದೆಯ ಸಾವನ್ನು ಎದುರಿಗೇ
ಕಂದಮ್ಮಗಳು ನೋಡಿ ತತ್ತರಿಸಿ
ಬೆಂದ ಮನದಿಂದ ಇರಬೇಕಲ್ಲ
ಎಂದೆಂದಿಗೂ ದುಃಖದಲ್ಲಿ
ಕಾಶ್ಮೀರವು ಭಾರತ ಮಾತೆಯ ಮುಕುಟ
ಇಲ್ಲೇಕೆ ಈ ಪರಿಯ ದ್ವೇಷದಾಟ
ಎಲ್ಲರೂ ಒಂದಲ್ಲವೇ ಅಕಟಕಟ
ಇಲ್ಲರಲಿ ಶಾಂತಿಯ ಕಿರೀಟ
–ಡಾ.ಎಸ್.ಸುಧಾ, ಮೈಸೂರು
ಹೇಮಾಮಾಲಾ ಅವರಿಗೆ ನಮಸ್ಕಾರ. ಕಾಶ್ಮೀರ ದ ಚಿನಾರ್ ಮರಗಳು ಬಹಳ ಸುಂದರ. ಆದರೆ ರಕ್ತಪಾತಕ್ಕೆ ಸಾಕ್ಷಿ. ನೋಡಿ ಬಂದಾಗ ಈ ಕವಿತೆ ಮೂಡಿತು. ಪ್ರಕಟಿಸಿದ್ದಕ್ಕೆ ಧನ್ಯವಾದಗಳು.
ಎಂತಹ ಪದಪುಂಜಗಳು. ಅಲ್ಲೋಲಕಲ್ಲೋಲವಾದ ಮನಸ್ಸಿನ ಚಿತ್ರಣ ಸುಲಲಿತವಾಗಿ ಹರಿದು ಬಂದಿದೆ. ಘಟನೆಗಳು ಇಂದಿಗೂ ಹಸಿರಾಗಿವೆ. ಮತ್ತೆಂದೂ ಮರುಕಳಿಸದಿರಲಿ. ಕವನದ ರಚನೆಗೆ ಅಭಿನಂದನೆಗಳು.
ಥ್ಯಾಂಕ್ಸ್ ನಿರ್ಮಲ. ಜೊತೆಗೆ ನೀನೂ ಇದ್ದೆಯಲ್ಲ.
ಥ್ಯಾಂಕ್ಸ್ ಗೆಳತಿ. ಜೊತೆಗೆ ನೀನೂ ಇದ್ದೆಯಲ್ಲ
ಕವಿತೆ ಚೆನ್ನಾಗಿ ಮೂಡಿಬಂದಿದೆ ಸುಧಾ ಮೇಡಂ.. ಅರ್ಥಪೂರ್ಣ ವಾದ ಚಿಂತನೆ ಗೆ ಹಚ್ಚುವ ಕವಿತೆ… ಅಭಿನಂದನೆಗಳು..
ನಾಗರತ್ನ ಥ್ಯಾಂಕ್ಸ್. ಪ್ರತ್ಯಕ್ಷ ನೋಡಿದ್ದು ಬರೆದಿದ್ದೇನಷ್ಟೇ.
ಕಾಶ್ಮೀರ ದ ಪೂರ್ತಿ ಚಿತ್ರಣವನ್ನು ಕಟ್ಟಿ ಕೊಡುವ ಸಾಲುಗಳು ಚೆನ್ನಾಗಿವೆ.
ಥ್ಯಾಂಕ್ಸ್ ನಯನ. ಪರಿಸ್ಥಿತಿ ಹಾಗಿದೆ
ಕಾಶ್ಮೀರದಲ್ಲಿ ನಡೆದ ರಕ್ತಪಾತವೇ ಕಣ್ಣಿಗೆ ಕಟ್ಟಿದಂತಾಯಿತು…ಎದೆ ನಡುಗಿತು. ..ನೆನಪು ಮಾಸದಂತೆ ಮಾಡಿತು.
ಶಂಕರಿಯವರೇ, ಪಹಲ್ಗಮ್ ಘಟನೆಗೆ 1 ವಾರ ಮೊದಲು ನಾನಲ್ಲಿದ್ದೆ. ಅದು ತುಂಬಾ ಕಾಡುತ್ತಿತ್ತು. ಧನ್ಯವಾದಗಳು ಮೆಚ್ಚಿದಕ್ಕೆ.
ಸುಂದರ ಪ್ರಕೃತಿಯ ತಾಣ ಕಾಶ್ಮೀರದಲ್ಲಿ ನಡೆಯುತ್ತಿರುವ ರಕ್ತಪಾತವನ್ನು ಕಂಡು ಮರುಗಿದ ಮನದಿಂದ ಮೂಡಿಬಂದ ಕವಿತೆ ಮನೋಜ್ಞವಾಗಿದೆ.
ಧನ್ಯವಾದಗಳು ಪದ್ಮಾ. ಇನ್ನು ಮುಂದೆ ಶಾಂತಿ ನೆಲಸಲಿ ಎಂದು ಹಾರೈಸುವೆ.