ಪುನರುತ್ಥಾನದ ಪಥದಲ್ಲಿ: ಹೆಜ್ಜೆ 31
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 11:
ಪ್ರಾಚೀನ ಮಹೇಂದ್ರಪರ್ವತ…ಆಧುನಿಕ ಪೊನಾಮ್ ಕೂಲೆನ್
25 ಸೆಪ್ಟೆಂಬರ್ 2024 ರಂದು ಕಾಂಬೋಡಿಯಾದಲ್ಲಿ ಬೆಳಗಾಯಿತು. ಅಂದಿಗೆ ನಮ್ಮ ಈ ಪ್ರವಾಸದ ಕೊನೆಯ ದಿನ. ಹಾಗಾಗಿ ಹೈಮವತಿ ಮತ್ತು ನಾನು ಇಬ್ಬರೂ ಬಹುತೇಕ ಪ್ರವಾಸ ಯಶಸ್ವಿಯಾಗಿ ಮುಗಿಯಿತು, ಎಷ್ಟು ಬೇಗ 10 ದಿನಗಳಾದುವು, ಈವತ್ತು ಒಂದೇ ದಿನ, ನಾಳೆ ನಮ್ಮ ಮನೆ ತಲಪುತ್ತೇವೆ ಎಂದು ಮಾತನಾಡಿಕೊಂಡೆವು. ಎಂದಿನಂತೆ ಸ್ನಾನಾದಿ ಪೂರೈಸಿ, ಬೆಳಗಿನ ಉಪಾಹಾರಕ್ಕಾಗಿ ನೆಲಮಟ್ಟದಲ್ಲಿದ್ದ ರೆಸ್ಟಾರೆಂಟ್ ಗೆ ಹೋಗುವಾಗ ಪ್ರತಿ ಮಹಡಿಯಲ್ಲಿಯೂ ಲಿಫ್ಟ್ ನ ಬಾಗಿಲು ತೆರೆದೆವು. ಕಾರಣ, ಹೋಟೆಲ್ ಪಿಯರಿಯ ಪ್ರತಿ ಮಹಡಿಯಲ್ಲಿಯೂ ತೂಗುಹಾಕಿದ್ದ ಬಹಳ ಸೊಗಸಾಗಿದ್ದ ಕಾಷ್ಟಶಿಲ್ಪಗಳನ್ನು ಪೊಟೊ ತೆಗೆಯಬೇಕಿತ್ತು. ಹೋಟೆಲ್ ನ ರಿಸೆಪ್ಶನ್ ಸ್ಥಳದಲ್ಲಿಯೂ , ಛಾವಣಿಯಲ್ಲಿಯೂ ಮರದಿಂದ ಮಾಡಿದ ಶಿಲ್ಪಗಳಿದ್ದುವು. ಉಪಾಹಾರಕ್ಕೆ ಎಂದಿನಂತೆ ಹಣ್ಣುಗಳು, ಬ್ರೆಡ್, ಜ್ಯಾಮ್, ನೂಡಲ್ಸ್ ..ಇತ್ಯಾದಿ ನಮಗೆ ಬೇಕಿದ್ದುದನ್ನು ತಿಂದು ಹೊರಡಲು ಸಿದ್ಧರಾದೆವು.
0800 ಗಂಟೆಗೆ ಬಂದ ಮಾರ್ಗದರ್ಶಿ ಚನ್ಮನ್ ನಮ್ಮನ್ನುದ್ದೇಶಿಸಿ , ಈವತ್ತು ನಾವು ಇಲ್ಲಿಂದ 50 ಕಿಮೀ ದೂರದಲ್ಲಿರುವ ‘ಮಹೇಂದ್ರಪರ್ವತ’ದ ಕಡೆಗೆ ಹೋಗಲಿದ್ದೇವೆ. ಈಗ ಪೊನಾಮ್ ಕೂಲೆನ್ ( Phnom Kulen) ಎಂದು ಕರೆಯಲ್ಪಡುವ ಪರ್ವತ ಶ್ರೇಣಿಯಲ್ಲಿರುವ ಈ ಸ್ಥಳವು 8-10 ನೆಯ ಶತಮಾನದ ಅವಧಿಯಲ್ಲಿ ಪ್ರಾಚೀನ ಖ್ಮೇರ್ ಸಾಮ್ರಾಜ್ಯದ ಮೊದಲ ರಾಜಧಾನಿಯಾಗಿತ್ತು. ಪೊನಾಮ್ ಕೂಲನ್ ಎಂದರೆ ‘ಲೀಚ್ ಹಣ್ಣುಗಳ ಪರ್ವತ ‘ ಎಂಬ ಅರ್ಥ. ಕ್ರಿ.ಶ.804 ನೇ ಇಸವಿಯಲ್ಲಿ ಅಂದಿನ ರಾಜ ಜಯವರ್ಮನ್ II ಎಂಬವನು ಈ ಸ್ಥಳದಲ್ಲಿ ಸುವ್ಯವಸ್ಥಿತವಾಗಿ ಯೋಜಿತ ನಗರವನ್ನು ನಿರ್ಮಿಸಿದ್ದ. ಈತ ‘ದೇವರಾಜ’ ಎಂಬ ಕಲ್ಪನೆಯನ್ನು ಹುಟ್ಟುಹಾಕಿದವನು. ಅಂದರೆ ರಾಜನೇ ದೇವರು ಎಂದೂ, ದೇವಾಲಯದ ಗೋಪುರಗಳಲ್ಲಿ ರಾಜನ ಮುಖದ ಚಹರೆಯನ್ನು ಕೆತ್ತಿಸುವುದನ್ನು ಇವನ ಆಡಳಿತದ ಅವಧಿಯಲ್ಲಿ ಆರಂಭಿಸಿದರಂತೆ. ಅರಮನೆಗಳು, ಇಟ್ಟಿಗೆಯ ಕಟ್ಟಡಗಳು, ಕಾಲುವೆಗಳು, ದೇವಾಲಯಗಳು ಇತ್ಯಾದಿ ಪ್ರಾಚೀನ ಶೈಲಿಯ ಜನವಸತಿ ಸೌಕರ್ಯಗಳನ್ನು ಕಾಡಿನ ತಪ್ಪಲಿನಲ್ಲಿ ನಿರ್ಮಿಸಲಾಗಿದ್ದ ಬಗ್ಗೆ ಸ್ಥಳೀಯ ಪುರಾತತ್ವ ಇಲಾಖೆಯವರಿಗೆ ಪಳೆಯುಳಿಕೆಗಳು ಸಿಕ್ಕಿವೆಯಂತೆ. ಕಾಲಾನಂತರದಲ್ಲಿ, ಕೃಷಿ ನೀರಾವರಿಗೆ ಅನುಕೂಲತೆಗಳು ಕಡಿಮೆ ಎಂದು ರಾಜಧಾನಿಯನ್ನು ಆಂಗ್ ಕೋರ್ ವಾಟ್ ಗೆ ಸ್ಥಳಾಂತರಿಸಿದರಂತೆ. ಹೀಗಾಗಿ, ಹಳೆಯ ಖ್ಮೇರ್ ರಾಜಧಾನಿಯು ಕಾಡಿನ ಸಸ್ಯಸಂಕುಲಗಳ ಮಧ್ಯೆ ಕಳೆದು ಹೋಯಿತು. ಆದರೂ ಇಲ್ಲಿರುವ ತೀರ್ಥಕ್ಷೇತ್ರಗಳು ಹಾಗೂ ಪ್ರಾಕೃತಿಕ ಸೌಂದರ್ಯದಿಂದಾಗಿ ಜನರನ್ನು ಸೆಳೆಯುತ್ತಿದೆ.
ಇಕ್ಕೆಡೆಯಲ್ಲಿ ಹಸಿರು ಹೊಲಗಳುಳ್ಳ ರಸ್ತೆಯ ಮೂಲಕ ಸುಮಾರು ಒಂದು ಗಂಟೆ ಪ್ರಯಾಣಿಸಿ ಮಹೇಂದ್ರಪರ್ವತದ ಬಳಿಗೆ ಬಂದೆವು. ಎತ್ತರದ ಮರಗಳಿದ್ದ ನಿತ್ಯಹರಿದ್ವರ್ಣ ಕಾಡುಗಳು, ಅಲ್ಲಲ್ಲಿ ಮಳೆಯಿಂದ ಸೃಷ್ಟಿಯಾದ ತೊರೆಗಳು, ಕೆಲವೆಡೆ ಕೆಸರು ನೀರಿದ್ದ ಇದ್ದ ರಸ್ತೆ , ಯಾವುದೋ ಕಾಡುಮರಗಳ ಚೆಕ್ಕೆ, ನಾರು, ಬೇರು, ಬಾಳೆಹಣ್ಣು, ಎಳನೀರು ಇತ್ಯಾದಿಗಳನ್ನು ಮಾರುತ್ತಿದ್ದ ಸ್ಥಳೀಯರು, ವಿರಳ ಜನಸಂಚಾರ ಇವೆಲ್ಲವೂ ನನಗೆ ಕರ್ನಾಟಕದ ಪಶ್ಚಿಮ ಘಟ್ಟದ ಕಾಡುಗಳನ್ನು ನೆನಪಿಸಿದುವು. ಮಹೇಂದ್ರಪರ್ವತದಲ್ಲಿ ಹರಿಯುವ . ಕಬಾಲ್ ಸ್ಪಿಯನ್ (Kbal Spean) ನದಿಯಲ್ಲಿರುವ ಸಹಸ್ರಲಿಂಗಗಳು ಇಲ್ಲಿಯ ಪ್ರಮುಖ ಆಕರ್ಷಣೆ. ನದಿಯಲ್ಲಿ ಸಮಾನಾಂತರದಲ್ಲಿ ಕೆತ್ತಲಾದ ನೂರಾರು ಶಿವಲಿಂಗಗಳಿವೆ. ಚನ್ಮನ್ ನದಿಯಲ್ಲಿ ನೀರಿನ ಹರಿವು ಕಡಿಮೆ ಇರುವ ಜಾಗದಲ್ಲಿ ನೋಡಿ ಎಂದು ತಿಳಿಸಿದ. ಶಿವಲಿಂಗಗಳು ಸ್ಪಷ್ಟವಾಗಿ ಕಾಣಿಸಿದುವು.
ನದಿಯ ಒಂದೆಡೆ ಕರೆದುಕೊಂಡು ಹೋಗಿ, ಇಲ್ಲಿ ವಿಷ್ಣುವಿನ ಉಬ್ಬುಶಿಲ್ಪವನ್ನು ನದೀಪಾತ್ರದ ಬಂಡೆಯಲ್ಲಿ ಕೆತ್ತಲಾಗಿದೆ. ನೀರು ಶುಭ್ರವಾಗಿದ್ದಾಗ ಮತ್ತು ನೀರಿನ ಹರಿವು ಕಡಿಮೆಯಿರುವಾಗ ವಿಗ್ರಹಗಳು ಸೊಗಸಾಗಿ ಕಾಣಿಸುತ್ತದೆ. ಇಂದು ಮಳೆನೀರು ಇರುವುದರಿಂದ ಸ್ಪಷ್ಟವಾಗಿ ಕಾಣುವುದಿಲ್ಲ, ಸೂಕ್ಷ್ಮವಾಗಿ ಗಮನಿಸಿ ಎಂದ. ನಮಗೂ ಬಂಡೆಹಾಸಿನಲ್ಲಿ ಕೆತ್ತಲಾದ ವಿಷ್ಣುವಿನ ವಿಗ್ರಹ ಸುಮಾರಾಗಿ ಕಾಣಿಸಿತು. ಈ ಬಗ್ಗೆ ಗೂಗಲ್ ನಲ್ಲಿ ಹುಡುಕಿದಾಗ ಯಾರೋ ಪೋಸ್ಟ್ ಮಾಡಿದ್ದ ಚಿತ್ರ ಲಭಿಸಿತು. ಅದನ್ನು ಲಗತ್ತಿಸಿದ್ದೇನೆ. ಇನ್ನೂ ಹಲವಾರು ದೇವರುಗಳ ಶಿಲ್ಪಗಳಿವೆಯಂತೆ.
ಚನ್ಮನ್ ಹೇಳಿದ ಪ್ರಕಾರ, ಸಹಸ್ರ ಶಿವಲಿಂಗಗಳ ಮೇಲಿನಿಂದ ಹರಿದು ಹೋಗುವ ನದೀನೀರು ತೀರ್ಥವಾಗುತ್ತದೆ. ಹಾಗಾಗಿ, ಕಾಂಬೋಡಿಯಾದ ನಗರಕ್ಕೆ ಸದಾ ತೀರ್ಥ ಸಿಗಲಿ ಎಂಬ ಉದ್ದೇಶದಿಂದ ಖ್ಮೇರ್ ರಾಜರು ನದೀಪಾತ್ರದಲ್ಲಿ ಸಹಸ್ರ ಶಿವಲಿಂಗಗಳನ್ನು ಕೆತ್ತಿಸಿದರಂತೆ. ಇದು ಬಹಳ ಅದ್ಭುತ ಪರಿಕಲ್ಪನೆ ಹಾಗೂ ಉತ್ತಮ ಸಾಮಾಜಿಕ ಚಿಂತನೆ ಎನಿಸಿತು.
ಅಲ್ಲಿಂದ ಇನ್ನೂರು ಮೀಟರ್ ದೂರದಲ್ಲಿ ಬೌದ್ಧರ ಚಿಕ್ಕ ಮಂದಿರವಿತ್ತು. ಆ ಮಂದಿರದ ಪಕ್ಕದಲ್ಲಿ ಅಂದಾಜು 2 ಮೀ ವ್ಯಾಸ, ನಾಲ್ಕು ಅಡಿ ಆಳ ಇದ್ದಿರಬಹುದಾದ ಕೊಳವಿತ್ತು. ಕೊಳದ ಪಕ್ಕ ನಾವು ಕೈಚಪ್ಪಾಳೆ ಹೊಡೆದರೆ ನೀರಿನಿಂದ ಗುಳ್ಳೆಗಳು ಬರುತ್ತವೆ ಎಂದು ಚನ್ಮನ್ ಚಪ್ಪಾಳೆ ಹೊಡೆದು ತೋರಿಸಿದ. ಶಬ್ದ ಕೇಳಿದಾಗ ಆ ಕೊಳದ ನೀರಿನಲ್ಲಿ ಸಣ್ಣ ಗುಳ್ಳೆಗಳು ಮೇಲೇಳುವುದನ್ನು ಗಮನಿಸಿದೆವು. ಹಿಂದೊಮ್ಮೆ ಕರ್ನಾಟಕದ ದಾಂಡೇಲಿಯ ಸಮೀಪದ ‘ಉಳವಿ’ ಎಂಬಲ್ಲಿಗೆ ಚಾರಣ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಇದೇ ರೀತಿಯ ವಿಷಯವನ್ನು ನಮಗೆ ತಿಳಿಸಿದ್ದರು. ‘ಉಳವಿ’ಯ ದಟ್ಟವಾದ ಕಾಡಿನಲ್ಲಿ ಸುಮಾರು 4 ಮೀ ವ್ಯಾಸ ಇರಬಹುದಾದ ಕೊಳವಿದೆ. ಇದಕ್ಕೆ ‘ಹರಳಯ್ಯನ ಚಿಲುಮೆ’ ಎಂದು ಹೆಸರು. ಅದರ ಪಕ್ಕದಲ್ಲಿ ನಿಂತು ನಾವು ಕೈಚಪ್ಪಾಳೆ ಹೊಡೆಯುವುದು, ಓಂ ಮಂತ್ರ ಉಚ್ಚರಿಸುವುದು ಹೀಗೆ ಏನಾದರೂ ಶಬ್ದ ಮಾಡಿದರೆ ನೀರಿನಲ್ಲಿ ಸಣ್ಣದಾಗಿ ಗುಳ್ಳೆಗಳು ಬರುತಿದ್ದುವು. ನಿರಂತರವಾಗಿ ,ಗುಂಪಾಗಿ ಓಂಕಾರ ಉಚ್ಚರಿಸಿದಾಗ ಗುಳ್ಳೆಗಳು ನಿರಂತವಾಗಿ ಬರುತ್ತಿದ್ದುವು. ಇದು ನೀರಿನಲ್ಲಿ ಇರಬಹುದಾದ ಯಾವುದಾದರೂ ಸೂಕ್ಷ್ಮಜೀವಿಗಳ ಪ್ರತಿಕ್ರಿಯೆಯಾ ಅಥವಾ ಏನಾದರೂ ವೈಜ್ಞಾನಿಕ ಕಾರಣಗಳಿವೇ ಎಂದು ಗೊತ್ತಿಲ್ಲ.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://surahonne.com/?p=42790
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಪ್ರವಾಸಕಥನ ಎಂದಿನಂತೆ ಓದಿಸಿಕೊಂಡುಹೋಯಿತು.. ಚಿತ್ರ ಗಳು ಪೂರಕವಾಗಿವೆ… ಗೆಳತಿ ನಿರೂಪಣೆ ಎಂದಿನಂತೆ ಸೊಗಸು
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು
ಕೈಗೊಂಡ ಪ್ರವಾಸವನ್ನು ಬರಹ ರೂಪಕ್ಕೆ ತರುವ ನಿಮ್ಮ ಶೈಲಿ ಬಹಳ ಸುಂದರ. ಓದುಗರಿಗೆ ತಾವೇ ಹೋಗಿ ಬಂದ ಅನುಭವ ನೀಡುವಂತಿದೆ.
ಎಂದಿನಂತೆ ಚೆಂದದ ನಿರೂಪಣೆ.. ಅವುಗಳು ಶಿವಲಿಂಗಗಳಂತೆ ಭಾಸವಾಗುವುದೇ ಇಲ್ಲ..ನಿಮ್ಮ ಬರಹದಿಂದ ತಿಳಿಯತ್ತದೆ..
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು
ವಿಯೆಟ್ನಾಂ – ಕಾಂಬೋಡಿಯಾ ಪ್ರವಾಸದ ಕೊನೆಯ ಹಂತದ ಹೆಜ್ಜೆಯು ಬಹಳ ರಸವತ್ತಾಗಿ ಮೂಡಿಬಂದಿದೆ.
ದೇವನೇ ರಾಜನೆಂಬ ಭಾವನೆ, ದೇಗುಲದ ಗೋಪುರಗಳಲ್ಲಿ ಅವನ ಮುಖದ ಕೆತ್ತನೆ, ಮಹೇಂದ್ರ ಪರ್ವತದಲ್ಲಿರುವ ಕಬಾಲ್ ಸ್ಪಿಯನ್ ನದಿಯ ನೀರನ್ನು ಸಹಸ್ರಾರು ಶಿವಲಿಂಗಗಳ ಮೇಲೆ ಹರಿಸಿ, ಪವಿತ್ರಗೊಳಿಸಿ, ಕಾಂಬೋಡಿಯಾ ಜನತೆಗೆ ನೀಡುವ ಸಾಮಾಜಿಕ ಕಳಕಳಿಯ ರಾಜ, ಕೈ ಚಪ್ಪಾಳೆಗೆ ನೀರಿನಲ್ಲಿ ಏಳುವ ಗುಳ್ಳೆಗಳಂತಹ ಪ್ರಾಕೃತಿಕ ವೈಚಿತ್ರ್ಯ…ಎಲ್ಲವೂ ಸುಂದರ ನಿರೂಪಣೆಯಿಂದ ಮನಮುಟ್ಟುವಂತೆ ಮೂಡಿಬಂದಿವೆ
ತಮ್ಮ ಮೆಚ್ಚುಗೆ, ವಿವರವಾದ ಪ್ರತಿಕ್ರಿಯೆಗೆ ಧನ್ಯವಾದಗಳು
ಹಲವಾರು ಮಾಹಿತಿಗಳನ್ನು , ನಿಸರ್ಗ ವೈವಿಧ್ಯಗಳನ್ನು ತಿಳಿಸಿದ ಪ್ರವಾಸ ಕಥನ.
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು