ಜೋಡಿ ಸುಮಗಳು

ಮುಗಿಲೆತ್ತರಕೆ ಹಬ್ಬಿದ ಒಂದೇ ಬಳ್ಳಿಯ ಹೂಗಳು ನಾವು
ಜೊತೆಗೆ ಬೆಳೆದು ಬಿರಿದು ಚೆಲುವ ಸೂಸುತಿಹೆವು
ಮೊದ ಮೊದಲು ಎಲ್ಲರೂ ಎನ್ನಯ ಸುಂದರತೆಯ ನೋಡಿ ಹೊಗಳುವವರೇ
ದಳ ದಳಗಳಲಿ ಮಾಸದ ಸೌಂದರ್ಯ ಕಂಡು ಖುಷಿಪಟ್ಟವರೇ
ನನ್ನ ನೋಡಲು ಬಂದವರು ಜೊತೆಗಿರುವ ನಿನ್ನ ಕೂಡ ಕಣ್ಣುತುಂಬಿಕೊಂಡರು
ನನ್ನ ನಿನ್ನ ಬೇರ್ಪಡಿಸದೆ ಒಂದೇ ತೆರನಾಗಿ ಕಂಡರು
ನನ್ನಯ ಅಸ್ತಿತ್ವ ಜಗತ್ತಿಗೆ ನಿನ್ನನು ಪರಿಚಯಿಸಿತು
ಕಳೆಯದ ಕಾಂತಿ ಪ್ರಭೆ ಎನ್ನೊಡನೆ ಸೇರಿ ಬೆಳಗಿತು
ನಾನೆಂದೂ ನಿನ್ನ ಎನ್ನ ಸ್ಪರ್ಧೆ ಅಂದುಕೊಳ್ಳಲಿಲ್ಲ
ನನ್ನಯ ಏಳಿಗೆಯಲ್ಲಿ ನಿನ್ನ ಅಭ್ಯುದಯ ಬಯಸಿದೆನೆಲ್ಲಾ
ಅದ್ಯಾವ ಘಳಿಗೆಯಲ್ಲಿ ನೀನು ನನ್ನೊಡನೆ ಪಂಥಕ್ಕಿಳಿದೆಯೋ
ಕಾಲನ ಮಹಿಮೆಯಿಂದ ಮಾಸುವ ಚೆಲುವ ಕಂಡು ಒಳಗೊಳಗೆ ಖುಷಿಪಟ್ಟೆಯೋ
ಎನ್ನ ಬಾಡಿಸಿ ನೀನು ಅರಳುವ ಕನಸು ಕಾಣುತ್ತಿರುವೆ
ನಮ್ಮೀರ್ವರ ಸಾಂಗತ್ಯವೇ ಈ ಲತೆಯ ಜೀವ ಎಂದು ಮರೆತಿರುವೆ
ಬೀಸಿದ ಕುಳಿರ್ಗಾಳಿಗೆ ಸ್ವಲ್ಪ ಬಣ್ಣ ಕುಂದಿರಬಹುದು
ಛಲ ತುಂಬಿದ ಹೋರಾಟ ಎನ್ನ ಕೆಳಗೆ ಬೀಳಲು ಬಿಡದು
ಮತ್ತೆ ಬಿಚ್ಚಿಕೊಂಡ ಪಕಳೆಗಳೊಡನೆ ನೋಡುಗರ ಕಣ್ಮನ ಸೆಳೆಯುವ ದಿನಗಳು ದೂರವಿಲ್ಲ
ಸತ್ಯ ಪರಿಶ್ರಮ ತುಂಬಿದ ಪ್ರಯತ್ನ ಶಿವನೊಲುಮೆ ತಂದು ಶಾಶ್ವತ ಚೆಲುವ ತುಂಬುವುದ ಬಿಡುವುದಿಲ್ಲ
– -ಶರಣಬಸವೇಶ ಕೆ. ಎಂ
ಚೆನ್ನಾದ ಕವನ ಸಾರ್
ಅರ್ಥವತ್ತಾದ ಕವನ
ಗೆಳೆತನದ ಬಾಂಧವ್ಯದಲ್ಲಿ ಬೆಸೆದೆರಡು ಜೀವಗಳು ಪಂಥಕ್ಕಿಳಿದು ಬೇರ್ಪಟ್ಟ ನೋವಿನಲ್ಲೂ ಆಶಾಭಾವದ ಪ್ರಕಟ…
ಸುಂದರ ಭಾವಪೂರ್ಣ ಕವನ.
ಅರ್ಥಪೂರ್ಣ ಕವನ ಸೊಗಸಾಗಿದೆ.