ಕರ್ಣ:  ನಾಯಕನೋ? ಖಳನಾಯಕನೋ?

Share Button


ಮಹಾಭಾರತದ  ಪ್ರಮುಖ ಪಾತ್ರಗಳಲ್ಲಿ ಕರ್ಣನೂ ಒಬ್ಬ. ಅವನ ವ್ಯಕ್ತಿತ್ವ ಅತ್ಯಂತ ಸಂಕೀರ್ಣ. ಅವನು ಒಬ್ಬ ನಾಯಕನೋ? ಅಥವಾ ಖಳನಾಯಕನೋ? ಎಂಬ ಪ್ರಶ್ನೆ ಸದಾ ಚರ್ಚೆಯ ವಿಷಯವಾಗಿದೆ . ಮೊದಲಿಗೆ ಅವನಲ್ಲಿದ್ದ ನಾಯಕನ ಲಕ್ಷಣಗಳನ್ನು ನೋಡೋಣ.

ಅಪಾರ ದಾನ ಶೀಲ ಗುಣವನ್ನು ಹೊಂದಿದ್ದ ಕರ್ಣ “ದಾನ ಶೂರ “ಎಂಬ ಬಿರುದಾಂಕಿತನು. ಇವನು ತನ್ನ ಜೀವನದಲ್ಲಿ ಯಾರಿಗೂ “ಇಲ್ಲ” ಎಂಬ ಪದವನ್ನೇ ಬಳಸದವನು. ದೇವೇಂದ್ರ ರಣರಂಗದಲ್ಲಿ ಮಾರುವೇಶದಲ್ಲಿ ಬಂದು ಹುಟ್ಟಿನಿಂದಲೇ ಬಂದ  ಕವಚ, ಕುಂಡಲಗಳನ್ನು , ದಾನವಾಗಿ ಪಡೆಯುತ್ತಾನೆ. ಹಾಗೂ  ಕುಂತಿಯು ಅವನಿಗೆ ಸತ್ಯವನ್ನು ಹೇಳಿ ನಿನ್ನ ತಮ್ಮಂದಿರನ್ನು ಕೊಲ್ಲಬೇಡ, ಎಂದು ಹೇಳಿ ಅವನಿಂದ ವಚನವನ್ನು ಪಡೆಯುತ್ತಾಳೆ. ಈ ಎಲ್ಲಾ ವಿಚಾರಗಳಿಂದ ನಿಜ ಪರಾಕ್ರಮಿಯಾದ ಕರ್ಣನು “ದಾನಶೂರ”ನೆನಿಸಿಕೊಂಡನು.

ಅತುಲ ಪರಾಕ್ರಮಿ ,ಅಪಾರ ಶಕ್ತಿಶಾಲಿ, ಶೌರ್ಯವಂತ, ವೀರಯೋಧನಾದ ಇವನನ್ನು “ಅಜೇಯ ಯೋಧ” ಎನ್ನಬಹುದು. ಕೌರವ ಪಕ್ಷ ಸೇರಿ ಅರ್ಜುನನ ಪ್ರತಿಸ್ಪರ್ಧಿಯಾಗುತ್ತಾನೆ.

ರಾಜ ಧೃತರಾಷ್ಟ್ರನ ಕರುಣೆಯಿಂದ ಕರ್ಣನಿಗೆ ದ್ರೋಣರ ಬಳಿ ಶಸ್ತ್ರಾಭ್ಯಾಸ ಮಾಡಲು ಅನುಮತಿ ದೊರೆಯುತ್ತದೆ. ಆದರೆ ಸೂತಪುತ್ರನೆಂಬ ಕಾರಣದಿಂದ ದ್ರೋಣರು ಅವನಿಗೆ ಮಂತ್ರಾಸ್ತ್ರಗಳನ್ನು ಬೋಧಿಸುವುದಿಲ್ಲ. “ಕಲಿಯುವ ಸಾಮರ್ಥ್ಯವನ್ನು ಹೊಂದಿದ್ದರೂ ಕಲಿಯಲಾಗದ ಅಸಹಾಯಕತೆ” ಒದಗುತ್ತದೆ ಕರ್ಣನಿಗೆ. ಬಳಿಕ ಅವನು ಬ್ರಾಹ್ಮಣ ವೇಷಧಾರಿಯಾಗಿ ರುದ್ರನ ಶಿಷ್ಯರಾದ  ಪರಶುರಾಮರ ಬಳಿ ಸುಳ್ಳನ್ನಾಡಿ ಅವರ ಶಿಷ್ಯನಾಗುತ್ತಾನೆ. “ಪರಶುರಾಮರ ಗುರುತ್ವವು ತನಗೊಂದು ರಕ್ಷಣಾ ಕವಚವಾದೀತೆಂಬುದಾಗಿತ್ತು ಕರ್ಣನ ಯೋಚನೆ. ” ಕನಸುಗಳ ಹಿಂದೆ ಬಿದ್ದವನಿಗೆ ಹಸಿವು, ಬಾಯಾರಿಕೆ, ಆಯಾಸ ಇತ್ಯಾದಿಗಳ ಪರಿವೆ ಇರುವುದಿಲ್ಲ.”

ಗುರುವಿಗೆ ಇವನು “ಯೋಗ್ಯ ಶಿಷ್ಯ” ಎಂಬ ಭಾವನೆ ಬಂದರೆ, ಗುರು-ಶಿಷ್ಯರ ಸಂಬಂಧ ತಂದೆ ಮಗನ ಸಂಬಂಧಕ್ಕಿಂತಲೂ ಗಾಢವಾಗುತ್ತದೆ. ಅಂತೆಯೇ ಅಪೂರ್ವವಾದ ಬ್ರಹ್ಮಾಸ್ತ್ರವನ್ನು, ಅಷ್ಟೇ ಅಲ್ಲದೆ ಅವರ ಸತ್ವ ಭೂಯಿಷ್ಟವಾದ  “ಮಹಾಭಾರ್ಗವಾಸ್ತ್ರವನ್ನು” ಉಪದೇಶ ಮಾಡುತ್ತಾರೆ. 

ಆದರೆ ದೈವಾನುಗ್ರಹವೇ ಇರಬೇಕಲ್ಲವೇ ? ಒಂದು ದಿನ ಕರ್ಣನು ಬ್ರಾಹ್ಮಣ ಕುಮಾರನಲ್ಲ ಎಂಬ ಸತ್ಯವನ್ನರಿತು ಭಾರ್ಗವ ಮುನಿಯ ಶಾಪಕ್ಕೆ ಗುರಿಯಾಗುತ್ತಾನೆ. “ನಿನ್ನ ಮರಣ ಕಾಲದಲ್ಲಿ ನಾನು ಉಪದೇಶಿಸಿದ ಮಂತ್ರಗಳು ನೆನಪಿಗೆ ಬಾರದಿರಲಿ” ಎಂದು ಅವರು ಶಪಿಸುತ್ತಾರೆ.ಶಾಪಗ್ರಸ್ತನಾಗಿ ಕರ್ಣನು ಹಸ್ತಿನಾವತಿಗೆ ಬರುತ್ತಿದ್ದಂತೆಯೇ ಅಲ್ಲಿ ರಾಜಕುಮಾರರ ವಿದ್ಯಾ ಪ್ರದರ್ಶನವನ್ನು ನೋಡುತ್ತಾನೆ; ತಾನೂ ಅದರಲ್ಲಿ ತನ್ನ ಬಲ ಪರಾಕ್ರಮವನ್ನು ಪ್ರದರ್ಶಿಸಬೇಕೆಂಬ ಆಶಯ ಉಳ್ಳವನಾಗಿ ಮುಂದಡಿಯಿಡುತ್ತಾನೆ. ಅರ್ಜುನನನ್ನು ದ್ವಂದ್ವ ಯುದ್ಧಕ್ಕೆ ಆಹ್ವಾನಿಸುತ್ತಾನೆ.ಆದರೆ ಅಲ್ಲಿ”ಸೂತಪುತ್ರನಾದ ನಿನಗೆ ರಾಜಕುಮಾರರೊಂದಿಗೆ ಯುದ್ಧ ಮಾಡುವ ಆಶಯವೇ”? ಎಂಬ ಅಪಹಾಸ್ಯಕ್ಕೆ ಗುರಿಯಾಗುತ್ತಾನೆ. ಇದರಿಂದ ಬೇಸತ್ತವನಿಗೆ ಅದೇ ಸಂದರ್ಭದಲ್ಲಿ ಅವನನ್ನು ಗುರುತಿಸಿದ ದುರ್ಯೋಧನನು ಅವನಿಗೆ ಅಂಗ ರಾಜ್ಯದ ರಾಜನಾಗಿ ಅಧಿಕಾರವನ್ನು ಕೊಡುತ್ತಾನೆ. ನಿಷ್ಠೆಯಿಂದ ಸ್ನೇಹಕ್ಕೆ ಪ್ರಾಣವನ್ನಾದರೂ ಕೊಡಲು ಕರ್ಣನು ಸಿದ್ಧನಾಗುತ್ತಾನೆ. ದುರ್ಯೋಧನನು ಅವನಿಗೆ ಮಾಡಿರುವ ಸಹಾಯವನ್ನು ಯಾವತ್ತೂ ಮರೆಯದೆ, ಶುದ್ಧ ಸ್ನೇಹದಿಂದ ಇರುತ್ತಾನೆ.

ತನ್ನ ಹಕ್ಕಿಗಾಗಿ ಹೋರಾಟ ಮಾಡಿದವನು ಇವನು. ಸಮಾಜದಲ್ಲಿ ಎಲ್ಲರೂ ಸೂತಪುತ್ರ ಎಂದಾಗ, ಮತ್ತು ಶಿಕ್ಷಣ ಕೊಡಲು ದ್ರೋಣಾಚಾರ್ಯರು ನಿರಾಕರಿಸಿದಾಗ, ನೊಂದು ತನ್ನ ಮಾನವೀಯ ಹಕ್ಕುಗಳ ಪರ ಹೋರಾಡುವ ಛಲ ಹೊಂದಿದವನು. ಅರ್ಜುನನಷ್ಟೇ ಸಮಬಲ ತಾನೆಂಬ ಆತ್ಮವಿಶ್ವಾಸ ಹೊಂದಿದ್ದರೂ, ಅದನ್ನು ಪ್ರಕಟಪಡಿಸಲು ಅವಕಾಶ ಸಿಗಲಿಲ್ಲ. ಅರ್ಜುನನನ್ನು ಸೋಲಿಸುವುದೇ ತನ್ನ  ಜೀವನದ ಉದ್ದೇಶ ಎಂಬಂತೆ ಬಾಳಿದವನು, ಅವಮಾನದ ದಳ್ಳುರಿಯಲ್ಲಿ ಬೇಯುತ್ತಿದ್ದನು.

ಖಳನಾಯಕನಾಗಿ ಕರ್ಣನನ್ನು ನೋಡುವುದಾದರೆ, ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ  ಆಕೆಯ ಗೋಳಾಟವನ್ನು ಕಂಡು ಮಾನವೀಯತೆಯನ್ನು ಕಳೆದುಕೊಂಡವನಂತೆ ವರ್ತಿಸುತ್ತಾ, ವಿಕೃತ ಆನಂದವನ್ನು ಅನುಭವಿಸಿದನು. ಏಕೆಂದರೆ ತುಂಬಿದ ಸ್ವಯಂವರ ಮಂಟಪದಲ್ಲಿ ಆಕೆ ತನ್ನನ್ನು ಸೂತಪುತ್ರನೆಂದು ಅವಮಾನಿಸಿದಳೆಂಬ ಕಾರಣದಿಂದ ಅವಳಿಗೆ ಈಗ ತಕ್ಕ ಶಾಸ್ತಿಯಾಗಿದೆ, ಎಂದು ಖುಷಿ ಪಟ್ಟನವನು.  ಅಲ್ಲದೆ ದ್ರೌಪದಿಗೆ ಈಗ ನೀನು ದುರ್ಯೋಧನನ ದಾಸಿಯಾಗಿರುವೆ; ಅವನ ಅಂತಪುರದಲ್ಲಿ ಪರಿಚಾರಿಕೆಯಾಗಿರು ಅಥವಾ ಇನ್ನೊಬ್ಬನನ್ನು ಆರಿಸಿಕೋ ಎಂದು ವ್ಯಂಗ್ಯವಾಡಿದನು. ಇದು ಕುರು ವಂಶದ ಕುಲವಧುಗೆ ಮಾಡಿದ ಘೋರ ಅಪರಾಧ ಹಾಗೂ ನೈತಿಕ ತಪ್ಪು. ಮಹಿಳೆಯರ ಮಾನ ಕಾಪಾಡಬೇಕಾದ ಒಂದು ಜವಾಬ್ದಾರಿಯ ಸ್ಥಾನದಲ್ಲಿದ್ದ ಅವನು ಈ ರೀತಿಯಾಗಿ ತನ್ನ ಕ್ರೋಧವನ್ನು ತೋರಿದುದು  ಖಳನಾಯಕನ ಲಕ್ಷಣವಲ್ಲವೇ?

ಅಭಿಮನ್ಯುವಿನ ಬಲಿದಾನದ ಸಂದರ್ಭದಲ್ಲಿ ಚಕ್ರವ್ಯೂಹವನ್ನು ಭೇದಿಸಿ ಒಳ ನುಗ್ಗಿದ ವೀರ, ಶೂರ ಬಾಲಕನಾದ ಅಭಿಮನ್ಯುವನ್ನು  ವೀರಾಧಿ-ವೀರರೆನಿಸಿಕೊಂಡ ದುರ್ಯೋಧನನ ಬೆಂಬಲಿಗರು ಅನೇಕರು ಎದುರಿಸಲು ಅಸಾಧ್ಯವಾದಾಗ ಹಲವು ಮಂದಿ ಸೇರಿ ಅವನನ್ನು ಕೊಲ್ಲುವಲ್ಲಿ ಕರ್ಣನೂ ಭಾಗಿಯಾಗಿದ್ದನು. ಒಬ್ಬ ನಿಜವಾದ ನಾಯಕನಾದವನು ಯುದ್ಧ ನೀತಿಯನ್ನು ಪಾಲಿಸಬೇಕಾಗಿದ್ದರೂ ಕರ್ಣ ಅದನ್ನು ಉಲ್ಲಂಘಿಸಿದನು.

ಧೂರ್ತ ದುರ್ಯೋಧನನನ್ನು ಆಶ್ರಯಿಸಿ, “ಸ್ನೇಹಿತನ ವೈರಿ ತನ್ನ ಕಡುವೈರಿ” ಎಂಬಂತೆ ವರ್ತಿಸುತ್ತಾನೆ. ಅವನು ತನ್ನ ಸ್ವಾರ್ಥ ಸಾಧನೆಗಾಗಿ ಅಧರ್ಮಿಗಳಾದ ಕೌರವ ಪಕ್ಷ ಸೇರಿದ್ದು, ಅವರಿಗೆ ಪ್ರಚೋದನೆ, ಸಹಾಯ ನೀಡಿದ್ದು,ಇವೆಲ್ಲವೂ ಖಳನಾಯಕನ ಲಕ್ಷಣಗಳಾಗಿವೆ.

ಒಬ್ಬ  ವ್ಯಕ್ತಿಯಲ್ಲಿ ಎಷ್ಟೇ ಉತ್ತಮವಾದ ಗುಣಗಳಿದ್ದರೂ, ಅವನು ಎಂತಹ ಮಹಾ ಕೊಡುಗೈ ದಾನಿಯಾಗಿದ್ದರೂ, ಸಾವಿರಾರು ಒಳ್ಳೆಯ ಕೆಲಸಗಳನ್ನು ಮಾಡಿದ್ದರೂ ಒಂದೇ ಒಂದು ಕೆಟ್ಟ ಕೆಲಸ ಹೆಸರನ್ನು ಕೆಡಿಸುತ್ತದೆ. “ಎಲ್ಲಾ ಬಣ್ಣವನ್ನು ಮಸಿನುಂಗಿತು” ಎಂಬ ಗಾದೆಯಂತೆ ಅವನು ಮಾಡಿದ ಎಲ್ಲ ಒಳ್ಳೆಯ ಕೆಲಸಗಳು ಮರೆಯಾಗಿ ಕೇವಲ ಕೆಟ್ಟ ಕೆಲಸ ಮಾತ್ರ ಜನರಿಗೆ ಗೋಚರವಾಗುತ್ತದೆ. ಅರ್ಜುನ ದ್ವೇಷಿಯಾದ ಕರ್ಣ ತನಗೆ ಸಿಕ್ಕಿದ ಎಲ್ಲಾ ಸಂದರ್ಭಗಳನ್ನು ಉಪಯೋಗಿಸಿಕೊಂಡು ದುರ್ಯೋಧನನನ್ನು ಪಾಂಡವರ ವಿರುದ್ಧ ಎತ್ತಿ ಕಟ್ಟುವ ಸಂಚು ಮಾಡುತ್ತಲೇ ಇದ್ದನು ಮತ್ತು ದುರ್ಯೋಧನನ ಅಧರ್ಮ ಕಾರ್ಯಗಳಿಗೆ ಪ್ರೇರಣೆಯನ್ನು ನೀಡಿದವನು ಕರ್ಣ.

ಕುಂತಿಯ ಮಗನಾಗಿದ್ದರೂ ಕೂಡ ಕರ್ಣನಿಗೆ ಅವಳ ಇತರ ಮಕ್ಕಳ ಸದ್ಬುದ್ಧಿ ಬರಲಿಲ್ಲ. ಕಾರಣ ದುರಾಚಾರಿಗಳ ಸಹವಾಸ, ಅಧರ್ಮಿಗಳ ಒಡನಾಟ, ಕುತಂತ್ರಿಗಳ, ದುಷ್ಟರ, ಅಹಂಕಾರಿಗಳ ಸ್ನೇಹ. “ಬೇರೆಯವರ ಋಣಕ್ಕೆ ಒಳಗಾದರೆ ಅವರು ಮಾಡಿದ್ದನ್ನೆಲ್ಲ ಸಮರ್ಥಿಸುವ ಅನಿವಾರ್ಯತೆ” ಇರುತ್ತದೆ. ” ಈ ಹಂಗು ಮುಳ್ಳಿನ ಬಲೆಯಂತೆ” ಇಷ್ಟವಿಲ್ಲದಿದ್ದರೂ ಅವರಿಗೆ ಪ್ರಿಯವಾದದನ್ನೇ ಮಾಡಬೇಕಾಗುತ್ತದೆ”.” ಕನಸುಗಳ ಬೆನ್ನ ಹಿಂದೆ ಬಿದ್ದವನಿಗೆ ಹಸಿವು, ಬಾಯಾರಿಕೆ, ಆಯಾಸ” ಇತ್ಯಾದಿಗಳ ಪರಿವೆ ಇರುವುದಿಲ್ಲ.

ಅಸ್ತ್ರದ ಸಿದ್ಧಿಗಿಂತ ಅದರ ಉಪಸಂಹಾರದ ಶಕ್ತಿಗೆ ಮಹತ್ವ ಇರುವುದು. ಸುಳ್ಳು ,ಅಧರ್ಮ,ವಂಚನೆ ಇತ್ಯಾದಿ ಗುಣಗಳಿಗೆ ವಶನಾದವನ ಬಳಿಯಲ್ಲಿ ಯಾವ ವಿಶಿಷ್ಟ ಮಂತ್ರಗಳು ಪ್ರಯೋಜನಕ್ಕೆ ಬರುವುದಿಲ್ಲ.

ಮನೋವಿಜ್ಞಾನದ ದೃಷ್ಟಿಯಿಂದ ಕರ್ಣನ ಜೀವನವನ್ನು ಅವಲೋಕಿಸಿದರೆ ಸಮಾಜದಲ್ಲಿ ಅವನಿಗಾದ ಅವಮಾನದಿಂದ  ಅವನ ರಕ್ತ ಕುದಿಯುತ್ತದೆ. ಹೆತ್ತ ತಾಯಿಯ ನಿರಾಕರಣೆ, ಹಿರಿಯರಿಂದ ಆದ ಅವಮಾನ, ತಿರಸ್ಕಾರ ಮುಂತಾದ ಕಾರಣಗಳು ಅವನಲ್ಲಿ ಆಕ್ರೋಶವನ್ನು ತರಿಸುತ್ತದೆ. ಅದೇ ಸಂದರ್ಭದಲ್ಲಿ ದೊರೆತ ಕೌರವನ ಸಹಾಯ ಹಸ್ತ ಅವನಿಗೆ ಸ್ವರ್ಗ ಸಿಕ್ಕಂತಾಗಿ ಕೌರವನಿಗೆ ಬಹಳ ನಿಷ್ಠೆಯಿಂದ ಇರುವಂತೆ ಮಾಡುತ್ತದೆ. ತನ್ನ ಪರಾಕ್ರಮವನ್ನು ಜಗತ್ತಿನಲ್ಲಿ ತೋರಿಸಿಕೊಡಲು, ಅವನ ಕ್ಷಾತ್ರ ತೇಜಸ್ಸು ಹಾತೊರೆಯುತ್ತಿತ್ತು. ತಾನು ಯಾವ ಕ್ಷತ್ರಿಯ ರಾಜನಿಗೂ  ಕಡಿಮೆ ಇಲ್ಲ, ಎಂಬುದನ್ನು ಜಗತ್ತಿಗೆ ಸಾರಬೇಕೆಂಬ ತೀವ್ರ ಬಯಕೆಗಳು ಅವನನ್ನು ಮಾನಸಿಕ ಗೊಂದಲಕ್ಕೆ ಗುರಿ ಮಾಡುತ್ತದೆ. ಆಗ ಮುಳುಗುವವನಿಗೆ “ಹುಲ್ಲುಕಡ್ಡಿ ಸಹಾಯ ಸಿಕ್ಕಂತೆ”,  ದುರ್ಯೋಧನನ ಸಹಾಯ ಹಸ್ತವನ್ನು ಸ್ವೀಕರಿಸುವಂತೆ ಮಾಡುತ್ತದೆ.

ಕರ್ಣನನ್ನು ಒಬ್ಬ ವ್ಯಕ್ತಿಯಾಗಿ ಗುರುತಿಸುವುದಾದರೆ, ಅದರ ಮೂಲ ಸ್ತಂಭಗಳು ದುರ್ಯೋಧನನ ಸ್ನೇಹ ಮತ್ತು ಇನ್ನೊಂದು ಅರ್ಜುನನ ದ್ವೇಷ. ಇವೆಲ್ಲ ಈವರೆಗೆ ಪ್ರಪಂಚ ಕಂಡ ಸೂತಪುತ್ರ ಕರ್ಣನಾಗಿರುವುದೇ ಸರಿ. ನಾನು ದುಷ್ಟ, ಅಧರ್ಮಿ,  ಸುಳ್ಳುಗಾರ, ಪಾಂಡವ ವಿರೋಧಿ ಏನೇ ಅನಿಸಿಕೊಂಡರೂ ಪರವಾಗಿಲ್ಲ; ಆದರೆ ವಿಶ್ವಾಸದ್ರೋಹಿ ಆಗಲಾರೆ; ಎಂಬ ನಿರ್ಣಯದಿಂದ ದುರ್ಯೋಧನನಿಗೆ ಸ್ವಾಮಿ ನಿಷ್ಠೆಯಿಂದ ಬದುಕುತ್ತಾನೆ. ಆದರೂ ಕೃಷ್ಣನ ಭೇದೋಪಾಯವೂ ಕರ್ಣನ ಅಂತಃಕರಣವನ್ನು ಕಲಕುತ್ತದೆ. ಇಂದ್ರನು ಬಂದು ಹುಟ್ಟಿನಿಂದ ಬಂದ ಕವಚವನ್ನು ಕೇಳಿದಾಗ ತನ್ನ “ದಾನ ಶೂರ” ಎಂಬ ಹೆಸರಿಗೆ ಕಳಂಕ ಬರಬಾರದೆಂಬ ಉದ್ದೇಶದಿಂದ ಅದನ್ನೂ ಕೊಟ್ಟುಬಿಡುತ್ತಾನೆ.

ಪರಶುರಾಮ ಬಳಿ ಮಿಥ್ಯ ಹೇಳಿದ ಕಾರಣ ಅವನ “ಸತ್ಯಸಂಧತೆ”ಯೂ ನಷ್ಟವಾಯಿತು. ಅಲ್ಲದೆ ಅವರಿಂದ ಪಡೆದ ಬ್ರಹ್ಮಾಸ್ತ್ರದಂತಹ ಮಹಾ ಮಂತ್ರಾಸ್ತ್ರವು ಕೂಡ  ನಷ್ಟವಾಯಿತು.ಈ ರೀತಿಯಾಗಿ ಅವನಿಗೆ ಲಭಿಸಿದ್ದ ಪರಶುರಾಮರಿಂದ ದೊರೆತ “ಬ್ರಹ್ಮಾಸ್ತ್ರವೆಂಬ ಕವಚ”, “ಹುಟ್ಟಿನಿಂದ ಬಂದಿದ್ದ ಕವಚ”, “ಸತ್ಯದಕವಚ” “ಯಾವುದೂ ಅವನ ರಕ್ಷಣೆಗೆ ಸಿಗಲಿಲ್ಲ.

ಹೀಗೆ ಕರ್ಣನ ಪಾತ್ರ ತೀರ ಗೊಂದಲಭರಿತವಾಗಿದೆ. ಅವನಲ್ಲಿ ಕೆಲವೊಂದು ಒಳ್ಳೆಯ ಗುಣಗಳಿದ್ದರೂ, ಬಹಳಷ್ಟು ದುಷ್ಟ ಗುಣಗಳಿದ್ದುವು. ಹುಟ್ಟಿದ ಆರಂಭದಿಂದ ವಿಷಮ ಪರಿಸ್ಥಿತಿಗಳನ್ನು ಎದುರಿಸಿದ, ಅವನು ಅನುಭವಿಸಿದ ಅವಮಾನಗಳು, ಅವನನ್ನು ಛಲವಾದಿಯನ್ನಾಗಿಸಿತು. ಆದರೆ ಅವನು ಆ ಛಲವನ್ನು ನ್ಯಾಯದ ರೀತಿಯಲ್ಲಿ , ಸತ್ಯಸಂಧತೆಯಿಂದ ಬಳಸಿದ್ದರೆ ಅವನು ಒಬ್ಬ ಅಪ್ರತಿಮ ನಾಯಕನಾಗುವುದರಲ್ಲಿ  ಯಾವುದೇ ಸಂದೇಹ ಇರುತ್ತಿರಲಿಲ್ಲ. ಆದರೆ ಅದರ ಬದಲಾಗಿ ಅವನು ಆರಿಸಿದ ಮಾರ್ಗ ಅಧರ್ಮದಾಗಿತ್ತು. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಆಯ್ಕೆ ಮಾಡಿದ ದಾರಿ ಸರಿ ಇರಲಿಲ್ಲ. “ದುಷ್ಟರ ಸಹವಾಸ ಯಾವಾಗಲೂ ಕೆಟ್ಟ ಪರಿಣಾಮವನ್ನೇ ಕೊಡುತ್ತದೆ.” ಒಬ್ಬ ವ್ಯಕ್ತಿಯ ಬದುಕಿನಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳು ಹೇಗೆ ಒಗ್ಗೂಡುತ್ತವೆ; ಎಂಬುದಕ್ಕೆ ಕರ್ಣನ ಜೀವನವೇ ನಿದರ್ಶನ.

ಕರ್ಣನ ಜೀವನದಿಂದ ನಮಗೆ ಸಿಗುವ ಪಾಠವೆಂದರೆ ನಮ್ಮ ವ್ಯಕ್ತಿತ್ವ ಒಳ್ಳೆಯದಾಗಿದ್ದು ಮುಂದೆಯೂ ಒಳ್ಳೆಯ ವ್ಯಕ್ತಿತ್ವವನ್ನು ಉಳಿಸಿಕೊಳ್ಳಬೇಕೆಂದರೆ ನಾವು ಸೇರುವ ಪಕ್ಷ ನ್ಯಾಯಯುತವಾಗಿ, ಧರ್ಮಯುತವಾಗಿರಬೇಕು. ವಿವೇಕದಿಂದ ಯೋಚಿಸಿ ಒಂದು ಒಳ್ಳೆಯ ತೀರ್ಮಾನಕ್ಕೆ ಬರಬೇಕು. ನಮಗೆ ಎಷ್ಟೇ ಅನ್ಯಾಯ, ಅವಮಾನಗಳ ಆದರೂ ನಾವು ಸರಿಯಾದ  ಸಂಘಗಳನ್ನು ಸೇರಬೇಕು. ಇದನ್ನು ನಿರ್ಧರಿಸುವಲ್ಲಿ ಸತ್ಯ, ಧರ್ಮ ,ನೀತಿ ಇತ್ಯಾದಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

ವನಿತಾ ಪ್ರಸಾದ್ ಪಟ್ಟಾಜೆ, ತುಮಕೂರು. 

5 Responses

  1. ಕರ್ಣನ ಬಗ್ಗೆ ಸರಳ ಸುಂದರ… ವಿಶ್ಲೇಷಣೆ.. ಮೇಡಂ..

  2. Anonymous says:

    ದಾನಶೂರ, ಮಹಾವೀರ ಕರ್ಣನ ಪಾತ್ರ ವಿಶ್ಲೇಷಣೆಯು ಅತ್ಯಂತ ಸೊಗಸಾಗಿ ಮೂಡಿಬಂದಿವೆ.

  3. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

    ತುಂಬು ಹೃದಯದ ಧನ್ಯವಾದಗಳು ನಾಗರತ್ನ ಮೇಡಂ ನಮಸ್ಕಾರಗಳು

  4. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

    ನನ್ನ ಚಿಂತನವನ್ನು ಪ್ರಕಟಿಸಿದ ಹೇಮಮಾಲ ಮೇಡಂ ಅವರಿಗೆ ಅನಂತಾನಂತ ವಂದನೆಗಳು

  5. ಪದ್ಮಾ ಆನಂದ್ says:

    ಕರ್ಣನ ಜೀವನಗಾಥೆಯನ್ನು ವಿಶ್ಲೇಷಿಸುತ್ತಲೇ ಮನಸ್ಸನ್ನು ಚಿಂಚನೆಗೆ ಹಚ್ಚುವ ಲೇಖನ ಇದಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: