ವಾಟ್ಸಾಪ್ ಕಥೆ 62 : ಹೊಂದಾಣಿಕೆ.

Share Button

ರೇಖಾಚಿತ್ರ : ಬಿ.ಆರ್.ನಾಗರತ್ನ, ಮೈಸೂರು

ಹೊಸದಾಗಿ ವಿವಾಹವಾದ ಮದುಮಗಳು ಗಂಡನ ಮನೆಗೆ ಬಂದಳು. ಮನೆಯಲ್ಲಿ ಆಕೆಯ ಅತ್ತೆ, ಮೈದುನ ಮತ್ತು ಪತಿ ಅಷ್ಟೇ ಜನರ ಸಂಸಾರ. ಆಕೆ ಅತ್ತೆಯ ಮೇಲ್ವಿಚಾರಣೆಯಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಮಾಡಬೇಕಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅತ್ತೆಯು ಇವಳು ಮಾಡುವ ಕೆಲಸಗಳಲ್ಲಿ ಏನಾದರೂ ತಪ್ಪು ಕಂಡುಹಿಡಿದು “ಹೀಗೆ ಮಾಡಿದರೆ ಒಕ್ಕಲುತನ ಹೇಗಾಗುತ್ತದೆ?” ಎಂದು ಟೀಕಿಸುತ್ತಿದ್ದರು. ಅವಳಿಗೆ ತಾನು ಮಾಡುವ ಕೆಲಸದಲ್ಲಿ ತನಗೆ ಸ್ವಾತಂತ್ರ್ಯವಿಲ್ಲ, ಎಲ್ಲದರಲ್ಲೂ ಅತ್ತೆ ಮೂಗು ತೂರಿಸುತ್ತಾರೆ. ಅವರಿಗೆ ನನ್ನನ್ನು ಕಂಡರೆ ಪ್ರೀತಿಯಿಲ್ಲ ಎನ್ನುವ ನಿರ್ಧಾರಕ್ಕೆ ಬಂದಳು.

ಯಾವಾಗ ಮನಸ್ಸುಗಳು ಹೊಂದಲಿಲ್ಲವೋ ಆಗ ಪ್ರತಿಯೊಂದರಲ್ಲೂ ಅತ್ತೆಯ ಬಗ್ಗೆ ಅಸಮಾಧಾನ ಉಂಟಾಗುತ್ತಿತ್ತು. ಕೆಲವು ತಿಂಗಳುಗಳಲ್ಲೇ ಇಬ್ಬರ ನಡುವೆ ಬಿರುಸಿನ ಮಾತುಗಳೂ ಹಾರಾಡಲು ಪ್ರಾರಂಭವಾದವು. ಮನೆಯಲ್ಲಿ ಅಶಾಂತಿಯ ವಾತಾವರಣ ಉಂಟಾಯಿತು. ಆಕೆಯ ಪತಿ ಇಬ್ಬರಲ್ಲಿ ಯಾರ ಪರವಾಗಿಯೂ ವಹಿಸದೆ ತಟಸ್ಥನಾಗಿರುತ್ತಿದ್ದ. ಇದರಿಂದ ಸೊಸೆಗೆ ಇನ್ನಷ್ಟು ಬೇಸರವಾಯಿತು. ಇದರಿಂದ ಸ್ವಲ್ಪ ದಿನ ಬದಲಾವಣೆಯಾಗಲಿ ಎಂದು ಆಕೆ ತನ್ನ ತವರಿಗೆ ಹೋಗಿಬರಲು ಇಚ್ಛಿಸಿದಳು. ಆಕೆಯ ಪತಿಗೂ ಅತ್ತೆಸೊಸೆಯರ ಜಗಳಗಳಿಂದ ಬೇಸರಬಂದು ಕೆಲವು ದಿನ ಮನೆಯಲ್ಲಿ ಶಾಂತಿಯುಂಟಾಗಲಿ ಎಂದು ಆಕೆಯನ್ನು ಮಾವನ ಮನೆಗೆ ಬಿಟ್ಟುಬಂದನು.

ಮನೆಗೆ ಬಂದ ಮಗಳನ್ನು ತಂದೆ ಆದರಿಸಿ “ಹೇಗಿದ್ದೀಯಾ ಮಗಳೇ?” ಎಂದು ವಿಚಾರಿಸಿದರು. ತಕ್ಷಣವೇ ಮಗಳು ತನ್ನೆಲ್ಲ ಅಸಮಾಧಾನವನ್ನು ಹೊರಗೆ ಹಾಕಿ ತಂದೆಯ ಹೆಗಲ ಮೇಲೆ ತಲೆಯಿಟ್ಟು ದುಃಖಿಸಿದಳು. “ಆ ಅತ್ತೆಗೆ ನನ್ನನ್ನು ಕಂಡರೆ ಆಗುವುದಿಲ್ಲ. ನನ್ನನ್ನು ದೇಷಿಸುತ್ತಾರೆ. ವಿನಾಕಾರಣ ತನಗೆ ಕಿರುಕುಳ ಕೊಟ್ಟು ಬೈಯುತ್ತಾರೆ. ನನಗಂತೂ ಸಾಕುಸಾಕಾಗಿದೆ. ಮತ್ತೆ ನನಗೆ ಆ ಮನೆಗೆ ಹೋಗಲು ಇಷ್ಟವೇ ಆಗುತ್ತಿಲ್ಲ. ಆದರೆ ನನ್ನ ಪತಿ ಮತ್ತು ಮೈದುನ ಬಹಳ ಒಳ್ಳೆಯವರು ಅವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇದಕ್ಕೆ ಪರಿಹಾರವೆಂದರೆ ಒಂದೇ, ಆ ಅತ್ತೆ ಬೇಗನೇ ಇಲ್ಲವಾಗಬೇಕು.” ಎಂದೆಲ್ಲಾ ತನ್ನ ಅನಿಸಿಕೆಯನ್ನು ತೋಡಿಕೊಂಡಳು.

ಆಕೆಯ ತಂದೆೆ ಒಬ್ಬ ಆಯುರ್ವೇದಿಕ್ ಪಂಡಿತರು. ತಮ್ಮ ಪತ್ನಿ ಕಾಲವಾದಾಗ ಪುಟ್ಟ ಮಗುವಾಗಿದ್ದ ಮಗಳನ್ನು ಬಹಳ ಮುದ್ದಿನಿಂದ ಸಾಕಿ ಬೆಳೆಸಿದ್ದರು. ಅವರಿಗೆ ಮಗಳ ಸಮಸ್ಯೆ ಅರ್ಥವಾಯಿತು. ಸ್ವಲ್ಪ ದಿನ ಅಲ್ಲಿಯೇ ನೆಮ್ಮದಿಯಾಗಿರು ಎಂದು ಮಗಳನ್ನು ತೌರಿನಲ್ಲಿಯೇ ಉಳಿಸಿಕೊಂಡರು. ಅವರಿಗೆ ತಾನು ಬಹಳ ಮುದ್ದು ಮಾಡಿ ಬೆಳೆಸಿದ್ದೇ ಮಗಳ ಈ ಅಸಹನೆಗೆ ಕಾರಣವಿರಬಹುದೇ? ಎಂದೂ ಆಲೋಚಿಸಿದರು. ಕೊನೆಗೆ ಅವರಿಗೆ ಒಂದು ಉಪಾಯ ಹೊಳೆಯಿತು.

ಮಗಳು ಪತಿಯೊಡನೆ ಊರಿಗೆ ಹೊರಡುವ ದಿನ ಹತ್ತಿರವಾಯಿತು. ಆಗ ಮಗಳನ್ನು ಕೂರಿಸಿಕೊಂಡು ಅವಳಿಗೆ ಬುದ್ಧಿವಾದ ಹೇಳಿದರು. “ನಿನ್ನ ಸಮಸ್ಯೆಯೆಂದರೆ ನಿಮ್ಮ ಅತ್ತೆಯ ಕಾಟದಿಂದ ಮುಕ್ತಿಯಾಗಬೇಕು ಅಲ್ಲವೇ?” ಎಂದು ಕೇಳಿದ್ದಕ್ಕೆ ಹೌದೆಂದಳು ಮಗಳು.

ತಂದೆ ಹೇಳಿದರು “ನಾನೊಂದು ಆಯುರ್ವೇದಿಕ್ ಔಷಧಿಯನ್ನು ನಿನಗೆ ಕೊಡುತ್ತೇನೆ. ನೀನು ಅಲ್ಲಿಗೆ ಹೋದನಂತರ ನಿನ್ನ ಅತ್ತೆಯ ಜೊತೆಯಲ್ಲಿ ವ್ಯವಹರಿಸುವಾಗ ಅವರ ಬಗ್ಗೆ ತುಂಬ ಪ್ರೀತಿ, ವಿಶ್ವಾಸವಿದೆಯೆಂಬಂತೆ ನಡೆದುಕೊಳ್ಳುತ್ತಾ ಅವರಿಗೆ ಊಟ ತಿಂಡಿಗಳನ್ನು ಕೊಡುವಾಗ ಪ್ರತಿದಿನ ಈ ಔಷದಿಯನ್ನು ಒಂದು ಚಮಚದಂತೆ ಅದರಲ್ಲಿ ಗೊತ್ತಾಗದಂತೆ ಬೆರೆಸುಕೊಡುತ್ತಾ ಕೊಡು. ಇದು ಬಹಳ ಗುಟ್ಟಾಗಿರಲಿ ಯಾರಿಗೂ ಅನುಮಾನ ಬರಬಾರದು. ಆರು ತಿಂಗಳೊಳಗೆ ನಿನಗೆ ನಿನ್ನ ಅತ್ತೆಯ ಕಾಟದಿಂದ ಸಂಪೂರ್ಣವಾಗಿ ಮುಕ್ತಿ ಸಿಗುತ್ತದೆ. ಎಚ್ಚರ” ಎಂದು ಹೇಳಿ ದೊಡ್ಡ ಬಾಟಲಿಯೊಂದರಲ್ಲಿದ್ದ ಔಷಧಿಯನ್ನು ಅವಳಿಗೆ ಕೊಟ್ಟರು. ಮಗಳು ಖುಷಿಯಿಂದ ಅದನ್ನು ಸ್ವೀಕರಿಸಿ “ಅಪ್ಪ ಹೇಗೂ ಆಯುರ್ವೇದಿಕ್ ಪಂಡಿತರು. ಇದು ನಿಧಾನವಾಗಿ ಪರಿಣಾಮ ಬೀರುವ ವಿಷವಸ್ತುವಿರಬೇಕು. ಆರು ತಿಂಗಳಲ್ಲಿ ಸಮಸ್ಯೆ ಪರಿಹಾರವಾಗುತ್ತದೆ ಎಂದರೆ ಅಷ್ಟು ಹೊತ್ತಿಗೆ ತನ್ನತ್ತೆ ಸತ್ತುಹೋಗುತ್ತಾರೆ” ಎಂದು ಆಲೋಚಿಸಿದಳು. ಅವಳ ಮುಖದಲ್ಲಿ ನಗೆ ಮೂಡಿತು.

ಗಂಡನೊಡನೆ ಅತ್ತೆಯ ಮನೆಗೆ ಸಂತೋಷದಿಂದಲೇ ಹಿಂದಿರುಗಿದಳು. ಅಂದಿನಿಂದ ಅಪ್ಪನು ಹೇಳಿದಂತೆ ಅತ್ತೆಯ ಬಗ್ಗೆ ಆದರ, ಪ್ರೀತಿ, ವಿಶ್ವಾಸಗಳನ್ನು ತೋರಿಸುತ್ತಿದ್ದಳು. ಅವರ ಮಾತುಗಳಿಗೆ ಪ್ರತ್ಯುತ್ತರ ಕೊಡುತ್ತಿರಲಿಲ್ಲ. ಇದರಿಂದ ಜಗಳಗಳೇ ಇಲ್ಲವಾಯಿತು. ಅವರ ಕೋಪತಾಪಗಳಿಗೆ ತಣ್ಣಗೆ ಪ್ರತಿಕ್ರಯಿಸುತ್ತಿದ್ದ ಸೊಸೆಯ ಮೇಲೆ ಅತ್ತೆಯು ಸಿಟ್ಟು ಮಾಡಿಕೊಳ್ಳುವುದೂ ಕಡಿಮೆಯಾಯಿತು. ಅತ್ತೆಯ ಊಟ ತಿಂಡಿಗಳ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಿದ್ದ ಸೊಸೆಯ ಬಗ್ಗೆ ಅತ್ತೆಗೂ ಪ್ರೀತಿ ಬರತೊಡಗಿತು. ಅಪ್ಪ ಹೇಳಿದಂತೆ ಪ್ರತಿದಿನ ಔಷಧಿಯನ್ನು ಕೊಡುತ್ತಿದ್ದಳು. ಹೀಗೇ ಮೂರು ತಿಂಗಳು ಕಳೆದವು. ಅಷ್ಟು ಹೊತ್ತಿಗೆ ಅತ್ತೆ ಸೊಸೆಯರಲ್ಲಿ ಅತ್ಯಂತ ಆತ್ಮೀಯತೆ ಬೆಳೆದಿತ್ತು. ಸೊಸೆಗೆ ಅತ್ತೆಯ ಬಗ್ಗೆ ಸಿಟ್ಟೇ ಬರುತ್ತಿರಲಿಲ್ಲ. ಬದಲಾಗಿ ತನ್ನತ್ತೆ ಎಷ್ಟು ಒಳ್ಳೆಯವರು ಅನ್ನಿಸತೊಡಗಿತ್ತು.

ಒಮ್ಮೆ ಸೊಸೆಗೆ ಚಿಂತೆಯಾಯಿತು. “ಅಪ್ಪ ಕೊಟ್ಟ ಔಷಧಿಗೆ ಇನ್ನೂ ಮೂರು ತಿಂಗಳ ಗಡುವಿದೆ. ಆರು ತಿಂಗಳೊಳಗೆ ಅತ್ತೆ ಇಲ್ಲವಾಗುತ್ತಾರೆ. ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಅತ್ತೆಯು ಸಾಯಬಾರದು. ನನಗೆ ತಾಯಿಯಿಲ್ಲ. ಆದರೆ ಅತ್ತೆ ಈಗ ಆಸ್ಥಾನವನ್ನು ತುಂಬಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು” ಎಂದು ಮತ್ತೆ ತಂದೆಯನ್ನು ಇದಕ್ಕೆ ಪರಿಹಾರ ಕೊಡುವಂತೆ ಕೇಳೋಣವೆಂದು ತವರುಮನೆಗೆ ಎರಡು ದಿನ ಬಂದಳು. ಮಗಳ ಆಗಮನದಿಂದ ತಂದೆಗೆ ಖುಷಿಯಾದರೂ ಅವಳ ಮುಖ ಮಾತ್ರ ಚಿಂತೆಯಿಂದ ಕೂಡಿದ್ದರಿಂದ ಏನಾಗಿದೆಯೋ ಎಂಬ ಆತಂಕದಿಂದ “ಹೇಗಿದ್ದೀಯೆ ಮಗಳೇ?” ಎಂದು ಪ್ರಶ್ನಿಸಿದರು.

ಮಗಳು “ಅಪ್ಪಾ ನನ್ನನ್ನು ಕ್ಷಮಿಸು, ನಾನು ದೊಡ್ಡ ಪಾಪ ಮಾಡಿದ್ದೇನೆ. ನೀವು ಕೊಟ್ಟಿದ್ದ ವಿಷದ ಔಷಧಿಯನ್ನು ಸತತವಾಗಿ ಮೂರುತಿಂಗಳು ಅತ್ತೆಗೆ ಕೊಟ್ಟುಬಿಟ್ಟಿದ್ದೇನೆ. ಇನ್ನು ಮೂರು ತಿಂಗಳ ಗಡುವಿದೆ. ಅವರು ಸಾಯಬಾರದು. ಅವರು ಬದಲಾಗಿದ್ದಾರೆ ನನ್ನನ್ನು ತುಂಬ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ನನ್ನನ್ನು ಬೈಯುವುದಿಲ್ಲ. ಮಗಳಂತೆ ಕಾಣುತ್ತಾರೆ. ಅವರು ಸತ್ತರೆ ಅದಕ್ಕೆ ನಾನೇ ಕಾರಣಳಾಗುತ್ತೇನೆ. ಆಮೇಲೆ ನನ್ನ ಜೀವನ ಪೂರ್ತಿ ಆ ಪಾಪ ನನ್ನನ್ನು ಕಾಡುತ್ತದೆ. ನೀವು ಹೇಗಾದರೂ ಮಾಡಿ ನಾನು ಅವರಿಗೆ ಕೊಟ್ಟಿರುವ ವಿಷದ ಔಷಧಿಯಿಂದ ಅವರು ಸಾಯದಂತೆ ಪರಿಹಾರ ಸೂಚಿಸಿ” ಎಂದು ಬೇಡಿದಳು.

ಅವಳ ತಂದೆ ಮುಗುಳ್ನಕ್ಕು “ಮಗಳೇ ನೀನು ಬದಲಾಗಿದ್ದೀಯೆ. ಅದರಿಂದಲೇ ನಿಮ್ಮ ಅತ್ತೆ ಕೂಡ ಬದಲಾಗಿದ್ದಾರೆ. ಇದರಲ್ಲಿ ವಿಶೇಷವೇನೂ ಇಲ್ಲ. ಇದೇ ಹೊಂದಾಣಿಕೆಯ ತತ್ವ. ನಾವು ಪ್ರೀತಿ ತೋರಿದರೆ ನಮಗೆ ಪ್ರೀತಿಯೇ ದೊರಕುತ್ತದೆ. ನಾವು ದ್ವೇಷ ಮಾಡಿದರೆ ದ್ವೇಷವೇ ಎದುರಾಗುತ್ತದೆ. ಈ ಪಾಠವನ್ನು ಬರಿಯ ಮಾತಿನಲ್ಲಿ ಹೇಳಿದ್ದರೆ ನೀನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅದಕ್ಕೆ ಈ ಔಷಧಿಯ ನಾಟಕ ಮಾಡಬೇಕಾಯ್ತು. ನಾನು ನಿನಗೆ ಕೊಟ್ಟದ್ದು ವಿಷದ ಔಷಧಿಯಲ್ಲ. ಅದೊಂದು ಶಕ್ತಿವರ್ಧಕ ಟಾನಿಕ್. ಅದರಿಂದ ನಿಮ್ಮ ಅತ್ತೆಯವರು ಸಾಯುವುದಿಲ್ಲ. ಈಗ ನಿನಗೆ ಪರಸ್ಪರ ಹೊಂದಾಣಿಕೆಯ, ಪ್ರೀತಿ ವಿಶ್ವಾಸಗಳ ಮಹತ್ವ ತಿಳಿದಿದೆ. ಇನ್ನು ಮುಂದೆ ನಿನ್ನ ಜೀವನ ಚೆನ್ನಾಗಿರುತ್ತದೆ. ಚಿಂತೆ ಮಾಡಬೇಡ. ನಿನ್ನ ಅತ್ತೆಯವರನ್ನು ಕೊನೆಯವರೆಗೆ ಚೆನ್ನಾಗಿ ನೋಡಿಕೋ. ಅದರಿಂದ ನಿನಗೆ ಒಳ್ಳೆಯದಾಗುತ್ತದೆ” ಎಂದು ಹೇಳಿದರು.

ಮಗಳಿಗೆ ಮನಸ್ಸು ನಿರಾಳವಾಗಿ ಅತ್ತೆಯ ಮನೆಗೆ ಸಂತೋಷದಿಂದ ಹಿಂದಿರುಗಿದಳು. ಅತ್ತೆ ಸೊಸೆಯರ ಅನ್ಯೋನ್ಯತೆ ಹಾಗೆಯೇ ಮುಂದುವರೆಯಿತು. ಅತ್ತೆಗೆ ಮೊಮ್ಮಗನೊಬ್ಬ ಹುಟ್ಟಿದ ನಂತರ ಅದು ಇನ್ನೂ ಹೆಚ್ಚಾಯಿತು.


ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು

9 Responses

  1. ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ

  2. ನಯನ ಬಜಕೂಡ್ಲು says:

    ಬಹಳ ಚೆನ್ನಾಗಿದೆ ಕಥೆ. ಸಾಮರಸ್ಯ ದ ಪಾಠವಿದೆ

  3. ಧನ್ಯವಾದಗಳು ನಯನಮೇಡಂ

  4. ಪದ್ಮಾ ಆನಂದ್ says:

    ಹೊಂದಾಣಿಕೆಯ ಪಾಠವನ್ನು ಜಾಣ್ಮೆಯಿಂದ ಮಾಡಿದ ತುಂಬ ಚೆಂದದ ಕಥೆ ಇದಾಗಿದೆ.

  5. Hema Mala says:

    ಚಿಕ್ಕ, ಚೊಕ್ಕ, ಸಂದೇಶವುಳ್ಳ ಕತೆ ಹಾಗೂ ತಕ್ಕುದಾದ ರೇಖಾಚಿತ್ರ….ಚೆನ್ನಾಗಿದೆ.

  6. ಶಂಕರಿ ಶರ್ಮ says:

    ಹೊಂದಾಣಿಕೆಯ ಮಹತ್ವವನ್ನು ಸಾರುವ ಚೊಕ್ಕ ಕಥೆಯು, ನಿಮ್ಮ ಸುಂದರ, ಸೂಕ್ತ ರೇಖಾಚಿತ್ರದೊಂದಿಗೆ ಅತ್ಯಂತ ಮಹತ್ವಪೂರ್ಣ ಹೊಂದಾಣೆಕೆಯನ್ನು ಮಾಡಿಕೊಂಡಿದೆ, ನಾಗರತ್ನ ಮೇಡಂ.

  7. ಧನ್ಯವಾದಗಳು ಶಂಕರಿ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: