ಪರಿಸರ ; ಸರಸರ ; ಅವಸರ !?

Share Button

ಪ್ರತಿ ವರುಷ ಜೂನ್ ಐದರಂದು ವಿಶ್ವ ಪರಿಸರ ದಿನವನ್ನು ಆಚರಿಸುತ್ತೇವೆ. ಅರಿವು, ಜಾಗೃತಿ ಮತ್ತು ನೂತನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕಂಡುಕೊಳ್ಳುವ ಪರಿಹಾರೋಪಾಯಗಳೇ ಇದರ ಸದಾಶಯ. 1973 ರಿಂದಲೂ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಜಗತ್ತಿನಾದ್ಯಂತ ಆಚರಿಸಲಾಗುವುದು. ಭಾಷಣ, ಲೇಖನ, ಪ್ರಚಾರೋಪನ್ಯಾಸಗಳ ಮೂಲಕ, ಶಾಲಾ ಕಾಲೇಜುಗಳಲ್ಲಿ ಚರ್ಚೆ, ಪ್ರಬಂಧ, ಭಿತ್ತಿಚಿತ್ರ ಸ್ಪರ್ಧೆಗಳ ಮೂಲಕ, ಎಲ್ಲ ಸರ್ಕಾರಿ ಸಂಸ್ಥೆ ಮತ್ತು ಕಛೇರಿಗಳಲ್ಲಿ ಸಹ ಪರಿಸರ ದಿನವನ್ನು ಇಚ್ಛೆಪಟ್ಟು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಹಲವಾರು ಕಾರ್ಯಯೋಜನೆಗಳನ್ನು ಹಾಕಿಕೊಳ್ಳಲಾಗುವುದು. ಪ್ರಕೃತಿಯು ಯಾವುದನ್ನೂ ವಿನಾಕಾರಣ ಸೃಷ್ಟಿಸಿರುವುದಿಲ್ಲ; ಹಾಗೆಯೇ ವ್ಯರ್ಥಗೊಳಿಸುವುದಿಲ್ಲ, ಸಕಲ ಜೀವರಾಶಿಗಳಿಗೂ ಪರಿಸರವೇ ಮೂಲಚೂಲ ಎಂಬ ಅರಿವು ಮುಖ್ಯವಾಗಿದೆ. ಪ್ರತಿ ವರುಷ ಒಂದು ನಿರ್ದಿಷ್ಟ ಧ್ಯೇಯವನ್ನು ಕಣ್ಣಮುಂದಿಟ್ಟುಕೊಂಡು, ಅದನ್ನು ಸಾಕಾರಗೊಳಿಸುವತ್ತ ವರ್ಷ ಪೂರ್ತ ಶ್ರಮಿಸುವುದು ಈ ದಿನದ ವಿಶೇಷ. ಪ್ಲಾಸ್ಟಿಕ್ ಮಾಲಿನ್ಯವನ್ನು ಇನ್ನಿಲ್ಲವಾಗಿಸುವುದೇ ಬಾರಿಯ ಕರೆ! ಪ್ಲಾಸ್ಟಿಕ್ ಶೂನ್ಯ ಎಂಬುದೇ ಇದು. ಬಳಸುವುದೇ ಆದರೆ ಮರುಬಳಕೆ ಮಾಡುವಂಥ ಪ್ಲಾಸ್ಟಿಕ್ ತಯಾರು ಮಾಡೋಣ ಎಂಬುದೇ ಇದರ ಜಾಗೃತಿ ಸಂದೇಶ. ನೂರೈವತ್ತಕ್ಕೂ ಹೆಚ್ಚಿನ ದೇಶಗಳು ಒಟ್ಟುಗೂಡಿ, ಒಗ್ಗೂಡಿ ಕೆಲಸ ಮಾಡುವಂಥ ಬೃಹತ್ ಯೋಜನೆ. ಪರಿಸರ ಮಾಲಿನ್ಯದ ಬಹುಮುಖ್ಯ ಮೂಲವಾಗಿ ನಮಗಿಂದು ಪ್ಲಾಸ್ಟಿಕ್ ಬಿಸಿತುಪ್ಪವಾಗಿದೆ. ಪ್ಲಾಸ್ಟಿಕ್ ನಮ್ಮ ಜೀವನಕ್ಕೆ ಹಲವು ನೂತನ ಆಯಾಮಗಳನ್ನು ತೆರೆದು ತೋರಿರುವುದು ನಿಸ್ಸಂಶಯ. ಆದರೀಗ ಅದೇ ಸಮಸ್ಯೆಯಾಗಿದೆ. ಪ್ಲಾಸ್ಟಿಕ್‌ನಿಂದ ನಾವು ಜೀವನವನ್ನು ಹಗುರವಾಗಿಯೂ ಸಲೀಸಾಗಿಯೂ ನಡೆಸಲು ಅನುವಾಗಿದೆ. ಆದರೆ ಬರು ಬರುತ್ತಾ ಇದೇ ಸಮಸ್ಯೆಯಾಗಿ ಬದುಕಿಗೇ ಭಾರವಾಗಿದೆ. ನಮ್ಮ ಹಿಂದಿನವರು ನಮಗಿತ್ತ ಜಗತ್ತನ್ನು ನಾವು ಇನ್ನಷ್ಟು ಚೆಂದಗೊಳಿಸಿ ಮುಂದಿನವರಿಗೆ ಬಿಟ್ಟು ಹೋಗುವುದು ಕೇವಲ ಕರ್ತವ್ಯವಲ್ಲ; ಧರ್ಮ ಕೂಡ. ಆದರೆ ಇಂದು ಏನಾಗಿದೆ? ವರ್ಷವೆಲ್ಲಾ ಪರಿಸರ ಅಧ್ಯಯನದ ಪಾಠ ಕೇಳಿದ ವಿದ್ಯಾರ್ಥಿಯು ತಾನು ನೀರು ಕುಡಿದ ಬಾಟಲಿಯನ್ನು ಎಲ್ಲೆಂದರಲ್ಲಿ ಎಸೆಯುವಂಥ ನಿಷ್ಕಾಳಜಿ! ವಿದ್ಯಾವಂತ ನಾಗರಿಕ ಬುದ್ಧಿವಂತರೇ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವುದು!

ಅಲ್ಲೆಲ್ಲೋ ಹೊಲ ಗದ್ದೆ ಉಳುವ ರೈತನು ಇಂದಿಗೂ ತನಗೆ ಅನ್ನ ಕೊಡುವ ಭೂಮಿಯನ್ನು ಪ್ರೀತಿಸುತ್ತಾನೆ. ಉಳುಮೆ ಮಾಡುವ ಮೊದಲು ಮಣ್ಣನ್ನು ಕಣ್ಣಿಗೊತ್ತಿಕೊಂಡು ಭೂದೇವಿಗೆ ನಮಸ್ಕರಿಸಿ ಮುಂದುವರಿಯುತ್ತಾನೆ. ‘ನಾನು ನಿನ್ನನ್ನು ಬಗೆಯುತ್ತೇನೆ, ನೋವು ನೀಡುತ್ತೇನೆ, ಇದು ನನಗೆ ಅನಿವಾರ್ಯ. ಏಕೆಂದರೆ ನೀನು ಅನ್ನ ಕೊಡುವವಳು. ಹಾಗಾಗಿ ನನ್ನನ್ನು ಕ್ಷಮಿಸು’ ಎಂಬುದಿದರ ಅರ್ಥ. ಆಧುನಿಕತೆಯೂ ನವ ನಾಗರಿಕತೆಯೂ ತಂದೊಡ್ಡಿರುವ ಹಲವು ಬಗೆಯ ಮಾಲಿನ್ಯಗಳೇ ಇಂದು ನಮಗೆ ಸವಾಲಾಗಿವೆ. ನೆಲ, ಜಲ ಮತ್ತು ವಾಯು ಮಾಲಿನ್ಯಗಳು ಬರಲಿರುವ ಭೀಕರ ಭವಿಷ್ಯಕ್ಕೆ ಮುನ್ನುಡಿಯೇ ಆಗಿವೆ. ಹಾಗಾಗಿ ಪರಿಸರ ದಿನವು ಕೇವಲ ಭಾಷಣ, ಲೇಖನ, ಸ್ಪರ್ಧಾಜಗತ್ತಿಗೆ ಮಾತ್ರ ಸೀಮಿತವಾಗಿರದೇ ನಮ್ಮ ದಿನನಿತ್ಯ ಜೀವನದ ಅರಿವಾಗಬೇಕು; ಹೀಗಾಗಿದ್ದಕ್ಕೆ ಮರುಗಬೇಕು; ಒಬ್ಬರೇ ಆಂತರ್ಯದಲ್ಲಿ ಕೊರಗಬೇಕು. ಯಾರಿಂದಲೇ ಆಗಿರಲಿ, ನನ್ನಿಂದ ಸರಿಪಡಿಸುವ ಮತ್ತು ನನ್ನನ್ನು ಸರಿಪಡಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬೇಕು. ಎಷ್ಟು ಸಾಧ್ಯವೋ ಅಷ್ಟೂ ಪರಿಸರಕ್ಕೆ ಪೂರಕವಾದ ನಡೆವಳಿಕೆಗಳನ್ನು ಅಳವಡಿಸಿಕೊಳ್ಳಬೇಕು. ಏಕೆಂದರೆ ಇದು ಒಂದು ದಿನದ ಆಚರಣೆಯಲ್ಲ; ವರ್ಷಪೂರ್ತಿ ನಡೆಯುವ ಉತ್ಸವದಂತಾಗಬೇಕು. ‘ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಹೊಣೆ’ ಎಂಬುದನ್ನು ಮನವರಿಕೆ ಮಾಡಿಕೊಳ್ಳುವವರೆಗೂ ನಾವು ಮೂರ್ಖರು ಮತ್ತು ವಿವೇಕಹೀನರು.

ಬಹಳ ಮುಖ್ಯವಾಗಿ ಜಾಗತಿಕ ಶಾಂತಿ ಕಾಪಾಡಿಕೊಳ್ಳಬೇಕು. ಅನಿವಾರ್ಯವಾಗುವ ತನಕ ಯುದ್ಧ ಮಾಡಬಾರದು. ಮರಗಳನ್ನು ಕಡಿದು ಕಾಗದ ತಯಾರಿಸುವುದನ್ನೂ ಕಾಗದ ಬಳಸುವುದನ್ನೂ ಬಿಡಬೇಕು. ಆದಷ್ಟೂ ವಿದ್ಯುನ್ಮಾನ ಮಾಧ್ಯಮಗಳನ್ನು ಬಳಸಬೇಕು. ಅಗತ್ಯವಾದ ಕಡೆ ಮಾತ್ರ ಸ್ವಂತ ವಾಹನಗಳನ್ನು ಬಳಸಬೇಕು. ಉಳಿದ ಸಂದರ್ಭದಲ್ಲಿ ಸಮೂಹ ಸಾರಿಗೆಯೇ ಪರಿಸರಕ್ಕೆ ಪೂರಕ. ಸಂಸ್ಕೃತಿ ಮತ್ತು ಪರಂಪರೆಯ ಹೆಸರಿನಲ್ಲಿ ಪಟಾಕಿಗಳನ್ನು ಹಚ್ಚಿ ವಾಯುಮಾಲಿನ್ಯ ಮಾಡಬಾರದು. ಉಸಿರಾಡುವ ಗಾಳಿ, ಕುಡಿಯುವ ನೀರು ಮತ್ತು ತಿನ್ನುವ ಆಹಾರ ಕೊಡುವ ಮಣ್ಣು – ಈ ಮೂರನ್ನೂ ನಾವು ಹಾಳು ಮಾಡಿಕೊಂಡಿದ್ದೇವೆ. ಇದರಲ್ಲಿ ಯಾವ ಪ್ರಾಣಿಯ ಪಾತ್ರವೂ ಇಲ್ಲ; ಎಲ್ಲವೂ ಮತಿವಂತ ಮಾನವ ಎಂದು ಕರೆದುಕೊಳ್ಳುವ ನಾವೇ ನಮ್ಮ ಕಯ್ಯಾರೆ ಮಲಿನಗೊಳಿಸಿದ್ದೇವೆ. ಪ್ರತಿಷ್ಠೆ, ಅಹಂಕಾರ ಮತ್ತು ಅಧಿಕಾರದ ಅಮಲಿನಲ್ಲಿ ಮನುಕುಲ ಮಾತ್ರವಲ್ಲ, ಸಕಲ ಜೀವರಾಶಿಗಳೂ ಪ್ರಪಂಚದಿಂದ ಕಣ್-ಮರೆಯಾಗುವತ್ತ ಮುನ್ನುಡಿ ಬರೆದಾಗಿದೆ! ಇನ್ನೊಂದು ಗ್ರಹದಲ್ಲಿ ವಾಸ ಮಾಡಲು ಯೋಜನೆ ರೂಪಿಸಿ ಯೋಚಿಸಲಾಗುತ್ತಿದೆ. ನಾವು ಕೇವಲ ಈ ಭೂಮಿಯನ್ನು ಮಾತ್ರವಲ್ಲ, ಆಕಾಶವನ್ನೂ ಮಲಿನ ಮಾಡಿಕೊಳ್ಳುತ್ತಿದ್ದೇವೆ. ಅಂತೂ ಕೊನೆಯಲ್ಲಿ ಕಾಣಿಸಿಕೊಂಡ ಮನುಷ್ಯಜೀವಿಯೇ ಮೊದಲು ನಾಶಗೊಳ್ಳುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿದೆ. ಭೂಮಿಯ ತಾಪಮಾನ ಏರಿಕೆಯಾಗಿದೆ, ಅರಣ್ಯನಾಶ ನಿರಂತರವಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಯು ದೇಶಗಳಿಗಲ್ಲ; ಒಟ್ಟಾರೆ ಭೂಮಿಗೇ ಶಾಪವಾಗಿದೆ. ಮಾನವ ಸಂಪನ್ಮೂಲ ಮಾತ್ರವಲ್ಲ, ಪ್ರಾಕೃತಿಕ ಅಸಮತೋಲನವುಂಟಾಗಿದೆ. ಇದಕ್ಕೆ ನಮ್ಮ ಸ್ವಾರ್ಥಮೂಲ ದುರಾಸೆಯೇ ಕಾರಣವಾಗಿದೆ. ಬುದ್ಧರ ಹೆಸರು ಹೇಳುತ್ತೇವೆ; ಆತನು ಉಪದೇಶ ಮಾಡಿದ ಅಸಂಗ್ರಹ ಪ್ರವೃತ್ತಿಯನ್ನು ಜಾಣತನದಿಂದ ಮರೆಯುತ್ತೇವೆ. ಗಾಂಧೀಜಿಯವರ ಹೆಸರು ಹೇಳುತ್ತೇವೆ. ಪ್ರಕೃತಿಯು ಮಾನವನ ಬದುಕಿಗೆ ಅಗತ್ಯವಿರುವಷ್ಟನ್ನು ಪೂರೈಸಬಲ್ಲದು; ಆದರೆ ಆತನ ದುರಾಸೆಗಳನ್ನಲ್ಲ! ಎಂಬ ಅವರ ಮಾತನ್ನು ಉದ್ಧರಿಸುತ್ತೇವೆ. ಆದರೆ ಕಾಡನ್ನು ಕಡಿದು, ಬೀಟೆ-ತೇಗಗಳನ್ನು ಲೂಟಿ ಮಾಡಿ, ಪೀಠೋಪಕರಣಗಳನ್ನು ಮನೆಯಲ್ಲಿ ಹಾಕಿಕೊಂಡು ಖುಷಿ ಪಡುತ್ತೇವೆ. ಒಂದಂತೂ ನಿಜ: ಪರಿಸರವು ಹಾಳಾಗುತ್ತಿರುವುದು ಆರ್ಥಿಕ ಮಾನದಂಡಗಳಿಂದ ಅಳೆಯಲಾಗುವ ಅಭಿವೃದ್ಧಿಯಿಂದಲೇ! ಅದಕಾಗಿ ಸುಸ್ಥಿರ ಅಭಿವೃದ್ಧಿ ಎಂದು ಕರೆಯಲಾಗುವ ಸಮತೋಲಿತ ಆರ್ಥಿಕ ನೀತಿಯನ್ನು ಜಾರಿಗೆ ತರಲಾಗಿದೆ. ಒಂದು ಮರ ಕಡಿಯುವ ಮುನ್ನ ನೂರು ಸಸಿಗಳನ್ನು ನೆಡುವ ಯೋಜನೆ ಚಾಲ್ತಿಯಲ್ಲಿದೆ. ವಾಸಕ್ಕೆ, ಕಾರ್ಖಾನೆಗೆ ಮತ್ತು ಸುಂದರ ರಸ್ತೆಗೆ ಮರಗಳ ಹನನವಾಗುತ್ತದೆ. ಕೃಷಿಭೂಮಿಯು ನಿವೇಶನಗಳಾಗುತ್ತವೆ; ಕೃಷಿಗಾಗಿ ಕಾಡಂಚಿನ ಜಾಗಗಳನ್ನು ಒತ್ತುವರಿ ಮಾಡಲಾಗುತ್ತದೆ. ನಿಧಾನವಾಗಿ ಕಾಡೇ ಕೃಷಿಭೂಮಿಯಾಗುತ್ತದೆ. ಮುಂದೊಂದು ಕಾಲಕ್ಕೆ ಆ ಕೃಷಿಭೂಮಿಯೂ ನಿವೇಶನಗಳಾಗಿ, ಮನೆಗಳಾಗಿ ರಾರಾಜಿಸುತ್ತವೆ. ಇದಕ್ಕೆ ಕೊನೆ ಮೊದಲಿಲ್ಲವಾಗಿದೆ. ಮತ್ತೊಂದು ಕಡೆಯಲ್ಲಿ ಮನುಷ್ಯಪರವಾದ ಯೋಜನೆಗಳಿಂದಾಗಿ ಜೀವವೈವಿಧ್ಯ ನಾಶವಾಗುತ್ತಿದೆ. ಮಣ್ಣ ಸವಕಳಿಯು ನಿರಂತರವಾಗಿದೆ. ಅಕಾಲಿಕ ಮಳೆ ಮತ್ತು ಅದರ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹವಾಮಾನ ಬದಲಾವಣೆಯೇ ‘ಎಲ್ಲವೂ ಮೊದಲಿನಂತಿಲ್ಲ’ ಎಂಬ ಸಂದೇಶವನ್ನು ಸದ್ದಿಲ್ಲದೇ ರವಾನಿಸಿದೆ. ಸುಖಲೋಲುಪ ಜೀವನಮಾರ್ಗಗಳು ಸಹ ನಮ್ಮ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹಾಗಾಗಿ ಇರುವ ಒಂದೇ ಸರಿಯಾದ ಮಾರ್ಗವೆಂದರೆ ಪ್ರಕೃತಿಗೆ ಪೂರಕವಾದ ಜೀವನವಿಧಾನವನ್ನು ನಡೆಸುವುದು. ಇದಕ್ಕಾಗಿ ಯುವ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ನೀಡುವುದು. ನಾವು ಅವರಿಗೆ ಮಾದರಿಯಾಗಿರುವುದು. ಮಕ್ಕಳು ನಾವು ಹೇಳಿದ್ದನ್ನು ಕೇಳುವುದಿಲ್ಲ; ನಾವು ಮಾಡಿದ್ದನ್ನು ಅನುಕರಿಸುತ್ತಾರೆ.

ಇದಕ್ಕಾಗಿಯೇ ನಮ್ಮ ಪೂರ್ವಜರು ಎಲ್ಲ ಪ್ರಾಕೃತಿಕ ಶಕ್ತಿಗಳನ್ನು ದೇವರುಗಳನ್ನಾಗಿಸಿ ಆರಾಧಿಸುತ್ತಿದ್ದರು. ಆ ಮೂಲಕ ದೈವೀಭಾವ ನೆಲೆಯೂರಿ, ಭಕ್ತಿಯ ಹೆಸರಿನಲ್ಲಿ ಧರ್ಮ ಪಾಲನೆಯಾಗುತ್ತಿತ್ತು. ದೇವರ ಕಾಡು ಎಂದು ಕರೆದು, ಅದನ್ನು ಉಳಿಸಿಕೊಳ್ಳುತ್ತಿದ್ದರು. ‘ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ’ ಎನ್ನುತ್ತದೆ ಅಥರ್ವವೇದದ ಪೃಥ್ವೀಸೂಕ್ತ. ಭೂಮಿಯು ನಮ್ಮೆಲ್ಲರ ತಾಯಿ; ಆಕೆಯನ್ನು ಗೌರವಿಸಬೇಕು. ‘ವನಾನಿ ನ ಪ್ರಜಹಿತಾನಿ’ ಎಂಬುದೊಂದು ಋಗ್ವೇದದ ಮಂತ್ರ. ಅರಣ್ಯ ನಾಶ ಒಳ್ಳೆಯದಲ್ಲ ಎಂಬುದಿದರ ಅರ್ಥ. ನಮ್ಮ ಅಗತ್ಯಗಳಿಗಾಗಿ ಪರಿಸರವನ್ನು ಆಶ್ರಯಿಸಬೇಕು; ಕೊನೆಯಿಲ್ಲದ ಬೇಡಿಕೆಗಳಿಗಾಗಿಯಲ್ಲ! ಆದರೆ ನಾವೇನು ಮಾಡುತ್ತಿದ್ದೇವೆ? ಭೂಮಿಯೊಡಲನ್ನು ಬಗೆಯುತ್ತಿದ್ದೇವೆ. ಸಮುದ್ರದ ಪಾತಾಳವನ್ನೂ ಬಿಡದೆ ಗಲೀಜು ಮಾಡಿದ್ದೇವೆ. ನಾವು ಪುಟ್ಟವರಿದ್ದಾಗ ಕುಡಿಯುವ ನೀರಿನ ಬಾಟಲಿಯನ್ನು ಕಂಡಿರಲಿಲ್ಲ; ಆದರೆ ಮುಂದೆ ಹುಟ್ಟಲಿರುವ ಮಕ್ಕಳು ನೆಲದಲ್ಲಿ ನಡೆದಾಡುವ ವ್ಯೋಮಯಾನಿಗಳ ವೇಷಭೂಷಣವನ್ನು ನೋಡುವಂತಾಗಿದೆ. ಇನ್ನೇನು ಕೆಲವೇ ವರುಷಗಳಲ್ಲಿ ನಾವೆಲ್ಲರೂ ಶುದ್ಧ ಗಾಳಿಯ ಆಕ್ಸಿಜ಼ನ್ ಸಿಲಿಂಡರನ್ನು ಹೆಗಲಿನ ಮೇಲೆ ಹೊತ್ತುಕೊಂಡು ಓಡಾಡಲಿದ್ದೇವೆ. ನಾವು ಅಂದುಕೊಂಡಿರುವುದಕಿಂತಲೂ ಪ್ರಕೃತಿ ನೊಂದಿದೆ; ನಮ್ಮ ಮನೋವ್ಯಸನಗಳಿಂದ ಬೆಂದಿದೆ. ನನ್ನ ಮನೆ, ನನ್ನ ಕುಟುಂಬ, ನನ್ನ ಜನ, ನನ್ನ ಆಸ್ತಿ ಎಂಬ ಭಾವ ಇರುವ ಹಾಗೆ, ‘ನಮ್ಮ ಭೂಮಿ’ ಎಂಬ ವಾಂಛಲ್ಯವೇ ಇಲ್ಲವಾಗಿದೆ. ‘ನಮಗ್ಯಾಕೆ? ಎಂದು ನಾವೂ ನಿಮಗ್ಯಾಕೆ? ಎಂದು ಅವರು!’ ಒಟ್ಟಾರೆ ಎಲ್ಲರೂ ಬೇಜವಾಬ್ದಾರಿಗಳಾಗಿದ್ದೇವೆ. ಇಂಥ ಹೊತ್ತಲ್ಲಿ ಇನ್ನೊಂದು ಪರಿಸರ ದಿನ ಎದುರಾಗಿದೆ. ಇಂದಿನ ಅವಸರದ ವೇಗೀಕೃತ ಜೀವನದಲ್ಲಿ ಎಲ್ಲವೂ ಸರಸರ ; ಯಾರಿಗೆ ಬೇಕಿದೆ ಪರಿಸರ ?

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ.

9 Responses

  1. MANJURAJ says:

    ಸುರಹೊನ್ನೆಗೆ ಧನ್ಯವಾದ
    ಓದುಗರಿಗೆ ವಿಶ್ವ ಪರಿಸರದಿನದ ಶುಭಾಶಯ….

  2. ಪರಿಸರದ ಬಗ್ಗೆ ಉತ್ತಮ ಬರೆಹ ಹಾಗೇ ನಮ್ಮ ನ್ನು ಎಚ್ಚರಿಸುವ ಬರೆಹ..ಧನ್ಯವಾದಗಳು ಮಂಜು ಸಾರ್ ಚಿತ್ರ ಗಳೂ ಪೂರಕವಾಗಿವೆ..

  3. ನಯನ ಬಜಕೂಡ್ಲು says:

    ಉತ್ತಮ ಲೇಖನ

  4. S.sudha says:

    ವಿಚಾರ ಬಹಳ ಗಹನ ವಾದದ್ದು. ಯಾರೂ ಸರಿಯಾಗಿ ಗಮನ ನೀಡುತ್ತಿಲ್ಲ. ತುಂಬಾ ಒಳ್ಳೆಯ ಲೇಖನ.

  5. Roopa manjunath says:

    ನಮ್ಮ ಪರಿಸರದಲ್ಲೇ ನಮ್ಮ ಬದುಕಿದೆ. ಅದನ್ನ ಸ್ವಚ್ಛವಾಗಿ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಅಲ್ವಾ ಸರ್. ಲೇಖನ ಸೂಪರ್.

  6. ಪದ್ಮಾ ಆನಂದ್ says:

    ಪರಿಸರದ ಕುರಿತಾಗಿ ಅತ್ಯಂತ ಕಾಳಜಿಯ ಬರಹ ಎಚ್ಚರಿಕೆಯ ಗಂಟೆ ಬಾರಿಸುತ್ತಾ ಬಡಿದೆಬ್ಬಿಸುವಂತಿದೆ.

  7. Hema Mala says:

    ಚೆಂದದ ಸಕಾಲಿಕ ಬರಹ..

  8. ಶಂಕರಿ ಶರ್ಮ says:

    ‘ಕಾಡು ಬೆಳೆಸಿ, ನಾಡು ಉಳಿಸಿ’ ಎಂಬುದು ಬರೇ ಧ್ಯೇಯವಾಕ್ಯವಾಗಿ ಉಳಿದಿರುವುದು ವಿಪರ್ಯಾಸ. ಅಭಿವೃದ್ಧಿ ನೆಪದಲ್ಲಿ ಲಕ್ಷಾಂತರ ಮರಗಳ ಮಾರಣಹೋಮ ಸಂಭವಿಸುತ್ತಲೇ ಇದೆ. ಸ್ವಾರ್ಥಿ ಮಾನವ ಎಚ್ಚೆತ್ತುಕೊಳ್ಳುವ ವೇಳೆಗೆ…???
    ಸಕಾಲಿಕ ಲೇಖನವು ಅರ್ಥಗರ್ಭಿತವಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: