ಅವನ ಮನಸ್ಸು

Share Button

“ಅಮ್ಮಾ…. ಕಾಲೇಜಿಗೆ ಹೋಗಿ ರ‍್ತೀನಿ, ಬರೋದು ಸ್ವಲ್ಪ ಲೇಟಾಗುತ್ತೆ”
“ಹೌದಾ?”
“ಹೂಂ, ಈವತ್ತು ನನ್ನ ಫ್ರೆಂಡ್ ಬರ್ತಡೇ ಇದೆ, ಅದಕ್ಕೇ ನಮಗೆಲ್ಲಾ ಪಾರ್ಟಿ ಕೊಡಿಸ್ತೀನಿ ಅಂದಿದ್ದಾಳೆ.”
“ಸರಿಯಮ್ಮ, ಆದ್ರೂ ತುಂಬಾ ಲೇಟ್ ಮಾಡ್ಕೋಬೇಡ ಕಣೆ ಸಿರಿ.”
“ಆಯ್ತು, ಆದಷ್ಟು ಬೇಗ ರ‍್ತೀನಿ, ತಲೆಕೆಡಿಸ್ಕೋಬೇಡ.”
ಮಗಳನ್ನು ಕಾಲೇಜಿಗೆ ಕಳಿಸಿಕೊಟ್ಟು ಲೀಲಾವತಿ ಒಳಗೆ ಬಂದರು, ಅಡಿಗೆ ಮನೆಗೆ ಹೋಗಿ ಮಾಡಿಟ್ಟಿದ್ದ ಉಪ್ಪಿಟ್ಟನ್ನು ಪ್ಲೇಟಿಗೆ ಹಾಕಿಕೊಂಡು ಬಂದು ಗಂಡನಿಗೆ ಕೊಟ್ಟರು.

ಓದುತ್ತಿದ್ದ ಪೇಪರನ್ನು ಪಕ್ಕಕ್ಕಿಟ್ಟ ಚಂದ್ರಶೇಖರ್ ಪ್ಲೇಟನ್ನು ಕೈಗೆ ತೆಗೆದುಕೊಂಡು “ಲೀಲಾ…. ನಿಂಜೊತೆ ಸ್ವಲ್ಪ ಮಾತಾಡ್ಬೇಕು ಕೂತ್ಕೋ” ಅಂದರು.
“ಅರ್ಜೆಂಟಾ? ಯಾಕೆ ಅಂದ್ರೆ ನಂಗೆ ಸ್ವಲ್ಪ ಕೆಲಸ ಇದೆ.”
“ನಿನ್ನ ಕೆಲಸ ಸದಾ ಇದ್ದದ್ದೇ…. ಸ್ವಲ್ಪ ಹೊತ್ತು ಕೂತ್ಕೊ ಬಾ, ಸಿರಿ ಕಾಲೇಜಿಗೆ ಹೋದ್ಲು ಅಲ್ವಾ?”
“ಹೂಂ,”
“ನಮ್ಮನೆ ಮೇಲ್ಗಡೆ ಎರಡು ರೂಮಿನಲ್ಲಿ ಬಾಡಿಗೆಗೆ ಇದ್ದಾರಲ್ಲ ಆ ಹೆಣ್ಣು ಮಕ್ಕಳ ಫೈನಲ್ ಪರೀಕ್ಷೆ ಈ ವರ್ಷ ಮುಗಿದು ಹೋಗುತ್ತೆ ಅಲ್ವ ಲೀಲಾ….?”
“ಹೂಂ, ಈಗ ಇರೋ ಹುಡುಗಿಯರದು ಸ್ವಲ್ಪ ಕೂಡ ಗಲಾಟೆ ಇಲ್ಲರೀ,…. ಈ ವರ್ಷ ಎಲ್ಲರ ಪೋಸ್ಟ್ ಗ್ರಾಜುಯೇಶನ್ ಮುಗಿದು ಹೋಗುತ್ತೆ, ರೂಮು ಖಾಲಿ ಮಾಡಿಬಿಡ್ತಾರೆ. ಮೊನ್ನೆ ಸಿರಿ ಕೂಡ ಅವರು ಹೊರಟು ಹೋದ್ರೆ ಬೇಜಾರು ಅಂತಿದ್ಲು.”
“ಹೌದಾ….?”
“ಹೂಂ, ಆ ಹುಡುಗಿಯರು ಇವಳಿಗೆ ಒಳ್ಳೇ ಸ್ನೇಹಿತೆಯರಾಗಿದ್ರು.”

“ಅದ್ಸರಿ. ಆದ್ರೆ ಈ ಹುಡುಗಿಯರು ರೂಮು ಖಾಲಿ ಮಾಡಿದ್ಮೇಲೆ ಅದನ್ನ ಗಂಡು ಹುಡುಗರಿಗೆ ಬಾಡಿಗೆಗೆ ಕೊಟ್ರೆ ಹೇಗೆ?”
ಲೀಲಾವತಿ ಕೊಂಚ ಗೊಂದಲದಿಂದ ಗಂಡನ ಮುಖ ನೋಡಿದರು.
“ಗಂಡು ಹುಡುಗರಿಗಾ?”
“ಹೌದು ಲೀಲಾ….”
“ನೀವು ಆ ರೂಮುಗಳನ್ನು ಕಟ್ಟಿಸಿ ಹತ್ತು ವರ್ಷ ಆಯ್ತು, ಇದುವರೆಗೂ ಹೆಣ್ಣು ಮಕ್ಕಳಿಗೆ ಮಾತ್ರ ಬಾಡಿಗೆಗೆ ಕೊಡ್ತಾ ಇದ್ರಿ ಅಲ್ವಾ?”
“ಅದೇನೋ ನಿಜ.”
“ಮತ್ತೆ ಈಗ್ಯಾಕೆ ಈ ದಿಢೀರ್ ಬದಲಾವಣೆ?”
“ನನ್ನ ಸ್ನೇಹಿತ ನಾಗೇಶ ಗೊತ್ತಲ್ವ ನಿಂಗೆ?”
“ಹೂಂ ಗೊತ್ತು.”
“ಅವನ ದೊಡ್ಡಪ್ಪನ ಮಗ ಶಿವಸ್ವಾಮಿ ಅಂತ ಪಾಂಡುಪುರದಲ್ಲಿದ್ದಾರಂತೆ.”
“ಸರಿ.”
“ಆ ಶಿವಸ್ವಾಮಿಯ ಇಬ್ಬರು ಮಕ್ಕಳ ಜೊತೆಗೆ ಅವರ ಇಬ್ಬರು ಸ್ನೇಹಿತರು ಈ ಊರಲ್ಲೇ ಓದ್ತಾ ಇದ್ದಾರಂತೆ, ಆದ್ರೆ ಈಗ ಅವರಿರೋ ಜಾಗ ಅಷ್ಟು ಸರಿಯಾಗಿಲ್ಲವಂತೆ. ಅದಕ್ಕೇ ನಿಮ್ಮನೆ ಮೇಲ್ಗಡೆ ರೂಮುಗಳು ಖಾಲಿಯಾಗಿದ್ರೆ ಬಾಡಿಗೆಗೆ ಕೊಡ್ತೀಯ ಅಂತ ಕೇಳಿದ.”

ಲೀಲಾವತಿಯ ಕಣ್ಣ ಮುಂದೆ ಮುಗ್ಧ ಮನಸ್ಸಿನ ಮುದ್ದು ಮುಖದ ಸಿರಿಯ ರೂಪ ತೇಲಿ ಬಂತು….
ಗಂಡು ಹುಡುಗರಿಗೆ ರೂಮು ಬಾಡಿಗೆಗೆ ಕೊಡೋದು ಎಷ್ಟರ ಮಟ್ಟಿಗೆ ಸರಿ ಅನಿಸಿತು.
“ರೀ….ನಮಗೊಬ್ಬಳು ಚೆಂದದ ಮಗಳಿದ್ದಾಳೆ ಅನ್ನೋದು ನೆನಪಿದೆಯೆ?”
“ಅದು ನಂಗೊತ್ತಿಲ್ವ ಲೀಲಾ? ನಾನು ನಾಗೇಶಂಗೆ ಅದೇ ಹೇಳ್ದೆ ಅದಕ್ಕವನು ನಮ್ಮ ಶಿವಸ್ವಾಮಿ ಮಕ್ಕಳು, ಅವನ ಸ್ನೇಹಿತರು ಹಳ್ಳಿಯಲ್ಲಿ ಬೆಳೆದಿದ್ದಾರೆ, ಭಯ ಭಕ್ತಿ ಇರುವಂಥ ಮಕ್ಕಳು, ಒಳ್ಳೇ ಸಂಸ್ಕಾರವಂತರು ನೀನೇನೂ ಯೋಚಿಸ್ಬೇಡಾ. ಅವರು ನಿಮ್ಮನೆಯಲ್ಲಿದ್ರೆ ನಮ್ಮನೆಯಲ್ಲಿದ್ದಷ್ಟೇ ಧೈರ್ಯ ಶಿವಸ್ವಾಮಿಗೆ, ನಾನು ನಿನ್ನ ಕುಟುಂಬದ ಬಗ್ಗೆ ಎಲ್ಲಾ ಅವನಿಗೆ ಹೇಳಿದ್ದೀನಿ, ನೀನು ಹೆದರೋದು ಬೇಡ ಅಂದು ಬಿಟ್ಟ ಕಣೆ, ಅದು ಅಲ್ದೇ ನಮ್ಮನೆ ಗೇಟು ಇರೋದು ಮನೆಯ ಎಡಗಡೆಗೆ, ಮೇಲಿನ ಹುಡುಗರು ಉಪಯೋಗಿಸೋದು ಬಲಗಡೆ ಗೇಟು. ಹೀಗಾಗಿ ನಾವುಗಳು ಭೇಟಿಯಾಗೋದು ಕಡಿಮೆ ಅಲ್ವಾ?”
“ಸರಿ ಹಾಗಾದ್ರೆ….” ಮಾತು ಮುಗಿಸಿದ ಲೀಲಾವತಿ ಮೇಲೆದ್ದರು.

ಮೇಲುಗಡೆಯ ಎರಡೂ ರೂಮುಗಳು ಖಾಲಿಯಾದ ಮೇಲೆ ಶಿವಸ್ವಾಮಿ ನಾಲ್ಕು ಹುಡುಗರನ್ನು ಕರೆದುಕೊಂಡು ಬಂದರು. ಶಿವಸ್ವಾಮಿಯ ಇಬ್ಬರು ಅವಳಿ ಮಕ್ಕಳು ನಂದೀಶ ಮತ್ತು ಸುರೇಶ ತುಂಬಾ ಲಕ್ಷಣವಾಗಿದ್ದರು. ಚುರುಕಾಗಿದ್ದರು ಆದರೆ ಅವರ ಸ್ನೇಹಿತರಿಗೆ ತುಂಬಾ ಸಂಕೋಚ ಅನಿಸಿತು. ಹುಡುಗರು ಒಳ್ಳೆಯವರ ಹಾಗೆ ಕಾಣ್ತಾರೆ ತಲೆಕೆಡಿಸಿಕೊಳ್ಳೋದು ಬೇಡ. ಅದೇನೇ ಇದ್ರೂ ಬರೀ ಎರಡು ವರ್ಷ ಇದ್ದು ಹೋಗೋರು ತಾನೇ….ಅಂತ ಸಮಾಧಾನ ಪಟ್ಕೊಂಡ್ರು ಲೀಲಾವತಿ. ಚಂದ್ರಶೇಖರ್‌ದೂ ಅದೇ ಅಭಿಪ್ರಾಯ.

ದಿನಗಳು ಕಳೆಯತೊಡಗಿದವು…. ಮಹಡಿ ಮೇಲಿನ ಹುಡುಗರು ತಮ್ಮಷ್ಟಕ್ಕೆ ತಾವಿದ್ದರು. ಯಾವುದೇ ಗಲಾಟೆ ಇರಲಿಲ್ಲ. ರಾತ್ರಿ ಹನ್ನೆರಡು ಗಂಟೆಯವರೆಗೂ ದೀಪ ಉರಿಯುತ್ತಿತ್ತು. ಮಕ್ಕಳು ಚೆನ್ನಾಗಿ ಓದಿಕೊಳ್ತಾ ಇದ್ದಾರೆ ಅಂತ ಚಂದ್ರಶೇಖರ್‌ಗೆ ಸಮಾಧಾನವಾಗುತ್ತಿತ್ತು. ಆಗಾಗ ಶಿವಸ್ವಾಮಿ ಪಾಂಡುಪುರದಿಂದ ಮಕ್ಕಳನ್ನು ನೋಡಲು ಬರುತ್ತಿದ್ದರು. ಬರುವಾಗಲೆಲ್ಲ “ನಮ್ಮ ತೋಟದಲ್ಲಿ ಬೆಳೆದದ್ದು….” ಅಂತ ಹಣ್ಣು ತರಕಾರಿ ತಂದು ಕೊಡುತ್ತಿದ್ದರು. ಲೀಲಾವತಿಗೆ ಸಂಕೋಚವಾಗುತ್ತಿತ್ತು. “ಅಯ್ಯೋ….ಇದೆಲ್ಲಾ ನಮಗೆ ಕೊಡೋದು ಯಾಕೆ ನಿಮ್ಮ ಮಕ್ಕಳಿಗೆ ಕೊಡಿ ಸಾಕು” ಅನ್ನುತ್ತಿದ್ದರು.
“ಅವರಿಗೂ ತಂದಿದ್ದೀನಮ್ಮ, ಜೊತೆಗೆ ನಿಮಗೂ ಸ್ವಲ್ಪ ತಂದಿದ್ದೀನಿ ಅಷ್ಟೇ. ನಮ್ಮದೇ ತೋಟದಲ್ವ” ಅಂತ ವಿಶ್ವಾಸದಿಂದ ಹೇಳುತ್ತಿದ್ದರು.
ಲೀಲಾವತಿ ಕೊಟ್ಟ ಕಾಫಿ ಕುಡಿದು ಚಂದ್ರಶೇಖರ್ ಜೊತೆ ಒಂದಿಷ್ಟು ಹೊತ್ತು ಮಾತಾಡಿಕೊಂಡು ತಮ್ಮ ಮಕ್ಕಳ ರೂಮಿಗೆ ಹೋಗುತ್ತಿದ್ದರು.

ಬಹುಬೇಗ ಎರಡು ವರ್ಷಗಳು ಉರುಳಿಹೋಗಿತ್ತು. ಸಿರಿಯ ಬಿ.ಕಾಂ. ಫೈನಲ್ ಸೆಮಿಸ್ಟರ್ ಮುಗಿದಿದ್ದು ಅವಳು ನಿರಾಳವಾಗಿದ್ದಳು. ಮೇಲುಗಡೆ ರೂಮಿನ ಹುಡುಗರ ಪರೀಕ್ಷೆಯೂ ಮುಗಿದಿತ್ತು.

ಅವರುಗಳು ನಾಲ್ಕಾರು ದಿನಗಳಲ್ಲಿ ರೂಮು ಖಾಲಿ ಮಾಡುವವರಿದ್ದರು.
ಅಂದು ರಾತ್ರಿ ಸುಮಾರು ಎಂಟು ಗಂಟೆ ಸಮಯ…. ಸಿರಿ ಬಂದು ತಂದೆಯ ಬಳಿ ಕುಳಿತು “ಅಪ್ಪಾ…. ಟಿವಿ ಆಫ್ ಮಾಡ್ತೀರಾ…. ನಾನು ನಿಮ್ಮ ಜೊತೆ ಮಾತಾಡ್ಬೇಕು” ಅಂದಳು.
ಚಂದ್ರಶೇಖರ್ ಟಿವಿ ಆಫ್ ಮಾಡಿ “ಹೇಳು ಸಿರಿ” ಅನ್ನುತ್ತಿದ್ದಂತೆಯೇ ಲೀಲಾವತಿಯೂ ಬಂದು ಗಂಡನ ಪಕ್ಕ ಕುಳಿತರು.
“ಅಪ್ಪಾ…. ನಾನು ಮೇಲ್ಗಡೆ ರೂಮಲ್ಲಿರೋ ನಂದೀಶನ್ನ ಇಷ್ಟ ಪಡ್ತಾ ಇದೀನಿ. ಅವನನ್ನೇ ಮದುವೆ ಆಗ್ಬೇಕು ಅನ್ಕೊಂಡಿದ್ದೀನಿ.”
“ಏನು….?” ಗಾಬರಿಯಿಂದ ಕೇಳಿದರು ಲೀಲಾವತಿ.
“ಹೌದಮ್ಮ, ನಾನು ನಂದೀಶನ್ನ ಪ್ರೀತಿಸ್ತಾ ಇದೀನಿ.”
“ನೀನೇನೋ ಅವನನ್ನ ಪ್ರೀತಿಸ್ತಾ ಇದೀಯ, ಆದ್ರೆ ನಂದೀಶನೂ ನಿನ್ನ ಇಷ್ಟ ಪಡ್ತಾ ಇದಾನೇನಮ್ಮ?” ಚಂದ್ರಶೇಖರ್ ಮೆಲ್ಲನೆ ಪ್ರಶ್ನಿಸಿದರು.
“ಹೌದಪ್ಪ ಖಂಡಿತ ಅವನೂ ಪ್ರೀತಿಸ್ತಾ ಇದ್ದಾನೆ. ಅವನಿಗೆ ಕೆಲಸ ಸಿಕ್ಕಿದ ಮೇಲೆ ನಾವು ಮದುವೆ ಆಗ್ಬೇಕು ಅನ್ಕೊಂಡಿದ್ದೀವಿ.”

“ನಾನು ಒಪ್ಪದೇ ಇದ್ರೆ….?”
“ಅಪ್ಪಾ….!”
“ಹೌದು ಸಿರಿ, ನಾನು ಒಪ್ಪಿಕೊಳ್ದೇ ಇದ್ರೆ ಏನ್ ಮಾಡ್ತೀಯಮ್ಮ?”
“ಅಯ್ಯೋ…. ಹಾಗೆಲ್ಲ ಹೇಳ್ಬೇಡಿ ಅಪ್ಪ ಪ್ಲೀಸ಼್….ನೀವು ಒಪ್ಕೋತೀರಿ ಅಂತ ನಾನು ನಂಬಿದ್ದೀನಿ.”
“ನಂದೀಶ ಖಂಡಿತ ನಿನ್ನ ಪ್ರೀತಿಸ್ತಾ ಇದ್ದಾನ?”
“ಹೂಂ.”
“ನಿಮ್ಮ ವಿಷಯ ಶಿವಸ್ವಾಮಿಗೆ ಗೊತ್ತಾ?”
“ಅದೆಲ್ಲಾ ನಂಗೊತ್ತಿಲ್ಲ.”
“ಅವರಿಗೆ ಖಂಡಿತ ಗೊತ್ತಿರೋಲ್ಲ. ಕಳೆದ ವಾರ ಬಂದಿದ್ದಾಗ ಬೇರೆ ಬೇರೆ ವಿಷಯಗಳನ್ನ ಸಾಕಷ್ಟು ಹೊತ್ತು ಮಾತಾಡಿದೆವು. ಈ ವಿಷಯದ ಬಗ್ಗೆ ಅವರು ಏನೂ ಹೇಳಲಿಲ್ಲ.”
“ಈ ಸಲ ಊರಿಗೆ ಹೋದಾಗ ಕೇಳ್ತಾನೆ ಅನಿಸುತ್ತೆ.”
“ಸರಿ ಈ ವಿಷಯದ ಬಗ್ಗೆ ನಿರ್ಧಾರ ತಗೋಳೋಕೆ ನಂಗೆ ಸ್ವಲ್ಪ ಸಮಯ ಬೇಕು.”
“ಆಗ್ಲಿ ಅಪ್ಪ.”
ಲೀಲಾವತಿ ಮಾತಾಡದೇ ಅಡಿಗೆ ಮನೆಗೆ ಹೊರಟು ಹೋದರು.

ಅಂದು ಭಾನುವಾರ. ಬೆಳಗಿನ ತಿಂಡಿ ತಿಂದಾದ ಮೇಲೆ ಚಂದ್ರಶೇಖರ್ ಮಗಳನ್ನು ಕರೆದರು. “ಸಿರಿ….ಬಾಮ್ಮ ಇಲ್ಲಿ.”
ಸಿರಿ ಯಾವುದೋ ಸುಂದರ ಕಲ್ಪನೆಯಿಂದ ಓಡಿ ಬಂದು ತಂದೆಯ ಮುಂದೆ ನಿಂತಳು.
ಚಂದ್ರಶೇಖರ್ ಮುಖ ಗಂಭೀರವಾಗಿತ್ತು
“ಸಿರಿ…. ನಂಗೆ ಈ ಮದುವೆ ಇಷ್ಟವಿಲ್ಲ.”
“ಅಪ್ಪಾ….”
“ಹೌದಮ್ಮ, ನಂಗೆ ಈ ಮದುವೆ ಇಷ್ಟವಿಲ್ಲ…. ಆದ್ರೆ….”
“ಆದ್ರೆ….?”
“ನೀನು, ನಂದೀಶ ಇಬ್ರೂ ಇಷ್ಟಪಟ್ಟು ಮದುವೆ ಮಾಡ್ಕೊಂಡು ಸುಖವಾಗಿರ‍್ತೀವಿ ಅನ್ನೋ ನಂಬಿಕೆ ನಿಮಗಿಬ್ಬರಿಗೂ ಇದ್ರೆ ನನ್ನ ಅಭ್ಯಂತರವಿಲ್ಲ. ನೀನು ಮನೆ ಬಿಟ್ಟು ಅವನ ಜೊತೆ ಹೋಗಿ ಮದುವೆ ಮಾಡ್ಕೋ. ಆದ್ರೆ ನನ್ನ ಸ್ವಂತ ಮನೆ, ಇತ್ತೀಚೆಗೆ ಕೊಂಡಿರೋ ಸೈಟು, ಹಳ್ಳಿಯಲ್ಲಿರೋ ಎರಡೆಕರೆ ತೋಟ, ನಿನ್ನ ಹೆಸರಿನಲ್ಲಿರೋ ಹಣ, ಮಾಡಿಸಿರೋ ಒಡವೆ…. ಯಾವುದನ್ನೂ ಕೊಡೋಲ್ಲ ನಿಂಗೆ. ನೀನು ಉಟ್ಟ ಬಟ್ಟೆಯಲ್ಲೇ ಮನೆ ಬಿಟ್ಟು ಹೊರಡಬೇಕು.”

ಒಂದು ನಿಮಿಷ ಯೋಚಿಸುತ್ತಾ ನಿಂತಿದ್ದ ಸಿರಿ ಮನೆಯ ಹೊರಗೆ ಬಂದು ಮಹಡಿಯ ಮೆಟ್ಟಿಲೇರಿದಳು.
ನಂದೀಶನ ರೂಮಿನ ಮುಂದೆ ನಿಂತು ಕಾಲಿಂಗ್ ಬೆಲ್ ಮಾಡಿದಾಗ ಅವನೇ ಬಾಗಿಲು ತೆಗೆದ.
“ಓ ಸಿರಿ…. ಬಾ….”
“ಯಾರು ಇಲ್ವಾ?”
“ಇಲ್ಲ…. ಎಲ್ರೂ ಪರ್ಚೇಸಿಂಗ್‌ಗೆ ಅಂತ ಹೊರಗೆ ಹೋಗಿದ್ದಾರೆ, ನಾನೂ ಹೊರಟಿದ್ದೆ ಅಷ್ಟರಲ್ಲಿ ನೀನು ಬಂದೆ.”
“ನಂದೀಶ….”
“ಹೇಳು ಸಿರಿ.”
“ನಮ್ಮಪ್ಪ ನಮ್ಮ ಮದುವೆಗೆ ಒಪ್ಪಿದ್ದಾರೆ.”
“ಓ…. ಎಷ್ಟೊಂದು ಖುಷಿ ವಿಷಯ ಸಿರಿ, ಆದ್ರೆ ನೀನ್ಯಾಕೆ ಈ ವಿಷಯವನ್ನ ಇಷ್ಟು ಡಲ್ ಆಗಿ ಹೇಳ್ತಾ ಇದೀಯ?”
“ಅಪ್ಪ ಮದುವೆಗೆ ಒಪ್ಪಿರೋದೇನೋ ನಿಜ ನಂದೀಶ, ಆದ್ರೆ….”
“ಆದ್ರೇನು ಸಿರಿ, ಇನ್ನೇನಾದ್ರೂ ಹೇಳಿದ್ರಾ?”
“ಹೂಂ, ನಾನು ನಿನ್ನ ಮದುವೆ ಮಾಡ್ಕೋ ಬಹುದಂತೆ ಆದ್ರೆ ಅವರ ಆಸ್ತಿಯಲ್ಲಿ ನಂಗೆ ಒಂದು ರೂಪಾಯಿ ಕೂಡ ಕೊಡಲ್ವಂತೆ.”
“ವ್ಹಾಟ್….! ಏನ್ ಹೇಳ್ತಾ ಇದೀಯ ಸಿರಿ?”
“ನಾನು ಹೇಳ್ತಾ ಇರೋದು ನಿಜ ಕಣೋ….”

ಎರಡು ಹೆಜ್ಜೆ ಮುಂದೆ ಬಂದಿದ್ದ ನಂದೀಶ ನಾಲ್ಕು ಹೆಜ್ಜೆ ಹಿಂದಕ್ಕೆ ಸರಿದ.
“ಈಗ ಏನು ಮಾಡೋದು ಸಿರಿ?”
“ಮಾಡೋದೇನು ನಂದೀಶ….ನಾವಿಬ್ರೂ ಪ್ರೀತಿಸ್ತಾ ಇರೋದು ನಿಜ ತಾನೆ? ನಿಮ್ಮಪ್ಪನಿಗೆ ವಿಷಯ ತಿಳಿಸೋಣ. ಮದುವೆ ಆಗಿಬಿಡೋಣ ಅಷ್ಟೇ.”
“ನಾವು ಮದುವೆ ಆಗಿಬಿಡೋದು ಅಷ್ಟು ಸುಲಭ ಅಲ್ಲ ಸಿರಿ.”
“ಯಾಕೋ ಹೀಗೆ ಮಾತಾಡ್ತಾ ಇದೀಯ? ನಿಮ್ಮಪ್ಪ ಒಪ್ಪಲ್ವಾ?”
“ಅವರು ಒಪ್ಕೋಬಹುದು ಆದ್ರೂ….”
“ಆದ್ರೂ ಅಂತ ಯಾಕೋ ರಾಗ ಎಳೀತೀಯ? ನೀನು ನನ್ನ ಪ್ರೀತಿಸ್ತಾ ಇರೋದು ನಿಜ ತಾನೆ?”
“ಈಗ ಸತ್ಯವನ್ನೇ ಹೇಳ್ತೀನಿ ಕೇಳು ಸಿರಿ. ನಾನು ನಿನ್ನನ್ನ ಪ್ರೀತಿಸ್ತೀನಿ. ಜೊತೆಗೆ ನಿಂಜೊತೆಗೆ ಸಿಗುವ ಆಸ್ತಿಯನ್ನು ಕೂಡ. ನಂಗೆ ನೀನೂ ಬೇಕು, ಜೊತೆಗೆ ನಿನ್ನ ಆಸ್ತಿಯೂ ಬೇಕು.”
“ಆಸ್ತಿ ಇಲ್ಲದೆ ಬರುವ ನಾನು ನಿಂಗೆ ಬೇಡ್ವಾ?”
“ಇಲ್ಲ ಸಿರಿ, ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡು. ನಿಮ್ಮಪ್ಪನಿಗೆ ಹೇಳಿ ಒಪ್ಪಿಸು. ನಂಗೆ ನಿಂಜೊತೆ ಬರುವ ಆಸ್ತಿಯೂ ಮುಖ್ಯ ಕಣೇ. ನೀನೇನು ಸಾಫ್ಟ್ವೇರ್ ಇಂಜಿನಿಯರಾ? ಲಕ್ಷ ಲಕ್ಷ ಹಣ ಸಂಪಾದನೆ ಮಾಡ್ತೀಯ?”
“ಏನೋ ಹೀಗೆ ಮಾತಾಡ್ತಾ ಇದೀಯ ನಂದೀಶ? ನಿಂಗೆ ನನ್ನ ಪ್ರೀತಿಗಿಂತಲೂ ನನ್ನ ಹಣವೇ ಮುಖ್ಯವಾ?”
“ಹಾಗೇ ಅನ್ಕೋ. ನಂಗೆ ಸಿರಿಲಕ್ಷ್ಮಿಯಾಗಿ ಬರುವ ಸಿರಿ ಬೇಕಾಗಿದೆಯೇ ಹೊರತೂ ಖಾಲಿ ಕೈಯ ಸಿರಿ ಅಲ್ಲ.”

ಸಿರಿಗೆ ದುಃಖ ಒತ್ತರಿಸಿ ಬಂತು. ದಢದಢನೆ ಓಡುತ್ತಾ ಬಂದು ಮೆಟ್ಟಲಿಳಿದಳು. ಮಗಳ ಹಿಂದೆಯೇ ಬಂದು ಇಬ್ಬರ ಮಾತುಗಳನ್ನು ಕೇಳಿಸಿಕೊಂಡಿದ್ದ ಚಂದ್ರಶೇಖರ್ ಸಿರಿಯ ಹಿಂದೆಯೇ ಬಂದರು. ಸೋಫಾ ಮೇಲೆ ಕುಳಿತು ಮುಖ ಮುಚ್ಚಿಕೊಂಡು ಬಿಕ್ಕಳಿಸುತ್ತಿದ್ದ ಮಗಳ ಪಕ್ಕ ಕೂತು ತಲೆ ನೇವರಿಸಿದರು.
“ಅಪ್ಪಾ….”

“ಅಳಬೇಡ ಮಗಳೇ…. ನಾನೊಂದು ಚಿಕ್ಕ ಪರೀಕ್ಷೆ ಇಟ್ಟಿದ್ದೆ ಅಷ್ಟೇ. ನಂದೀಶ ನಿನ್ನ ಹತ್ರ ‘ನಂಗೆ ಆಸ್ತಿಯ ಆಸೆ ಇಲ್ಲ. ನಾನು ನಿನ್ನ ಮದುವೆ ಆಗ್ತೀನಿ’ ಅಂತ ಹೇಳಿದ್ದಿದ್ರೆ ನಂಗೆ ತುಂಬಾ ಸಂತೋಷ ಆಗ್ತಿತ್ತು. ನಾನು ಸಂತೋಷವಾಗಿ ನಿನ್ನ ಮದುವೆ ಮಾಡಿಕೊಟ್ಟು ನನ್ನ ಆಸ್ತಿಯನ್ನೆಲ್ಲಾ ನಿನ್ನ ಹೆಸರಿಗೆ ಬರೆದುಕೊಡ್ತಾ ಇದ್ದೆ. ನಂಗಾದ್ರೂ ಇನ್ಯಾರಿದ್ದಾರೆ ಹೇಳು? ಆದ್ರೆ ನಂದೀಶನಿಗೆ ನಿನ್ನ ಮೇಲಿನ ಪ್ರೀತಿಗಿಂತ ನಿನ್ನ ಜೊತೆ ಬರೋ ಹಣವೇ ಹೆಚ್ಚಾಗಿ ಹೋಯ್ತು.”
“ಹೌದಪ್ಪ…. ಆದ್ರೆ ನಿಜವಾಗ್ಲೂ ನಂದೀಶನ ಮನಸ್ಸಿನೊಳಗೆ ಈ ತರದ ಆಸೆ ಇದೆ ಅಂತ ನನಗೆ ಗೊತ್ತಾಗ್ಲೇ ಇಲ್ಲ.”
“ಇನ್ನೂ ಒಂದು ವಿಷಯ ಮಗಳೇ….”
“ಏನಪ್ಪ?”
“ನಂದೀಶ ತುಂಬಾ ಬಡವನಾಗಿದ್ದಿದ್ರೆ ಪಾಪ ಬಾಲ್ಯದಿಂದ ಕಷ್ಟಪಟ್ಟಿದ್ದಾನೆ, ಈಗ ಅವನು ಆಸ್ತಿಗಾಗಿ ಆಸೆ ಪಡೋದು ಸಹಜ ಅನ್ನಿಸ್ತಾ ಇತ್ತು. ಆದ್ರೆ ಅವನ ಮನೆಯವರು ಸಾಕಷ್ಟು ಅನುಕೂಲವಾಗೇ ಇದ್ದಾರೆ. ಶಿವಸ್ವಾಮಿಗೆ ಸ್ವಂತ ಮನೆ, ಗದ್ದೆ, ತೋಟ…. ಎಲ್ಲಾ ಇದೆ. ಹಾಗಿದ್ದ ಮೇಲೂ ಇವನು ಹೆಂಡತಿಯ ಹಣಕ್ಕೆ ಆಸೆ ಪಡ್ತಾನೆ ಅಂದ್ರೆ ಅದು ದುರಾಸೆ ಅಲ್ವ?”
“ನಂದೀಶ ತುಂಬಾ ಸ್ವಾರ್ಥಿ ಅಪ್ಪ.”
“ಪ್ರಪಂಚದಲ್ಲಿ ಹೆಚ್ಚಿನ ಜನರು ಸ್ವಾರ್ಥಿಗಳೇ ಕಣಮ್ಮ. ನಾವು ಸರಿಯಾಗಿ ಅರ್ಥ ಮಾಡ್ಕೋಬೇಕು ಅಷ್ಟೇ. ಇರ‍್ಲಿ ಬಿಡಮ್ಮ ನಿನ್ನನ್ನೇ ಇಷ್ಟ ಪಡೋ ಹುಡುಗನ್ನ ನಾನು ಹುಡುಕ್ತೀನಿ.”

“ಅಪ್ಪಾ…. ನಂಗೀಗ್ಲೇ ಮದುವೆ ಬೇಡ. ನಾನು ಎಂ.ಕಾಂ. ಓದ್ತೀನಿ.”
“ಸರಿಯಮ್ಮ ನಿನ್ನ ಇಷ್ಟಕ್ಕೆ ನನ್ನ ಬೆಂಬಲ ಇದ್ದೇ ಇದೆ.”
“ಥ್ಯಾಂಕ್ಸ್ ಅಪ್ಪ.”
ತಂದೆಯ ಭುಜಕ್ಕೊರಗಿದ ಸಿರಿಯ ಕಣ್ಣು ತುಂಬಿತ್ತು ಆದರೆ ತುಟಿಯಂಚಿನಲ್ಲಿ ನಗು ಮಿಂಚಿತ್ತು.

-ಸವಿತಾ ಪ್ರಭಾಕರ್, ಮೈಸೂರು

7 Responses

  1. ಸರಳವಾದ ಕಥೆ.. ಚೆನ್ನಾಗಿ ದೆ ಗೆಳತಿ ಸವಿತಾ ಅಭಿನಂದನೆಗಳು..

  2. ನಯನ ಬಜಕೂಡ್ಲು says:

    ಬದುಕಿನ ಪಯಣದಲ್ಲಿ ಸಾಗುವಾಗ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು. ಇಲ್ಲಿ ಎಡವಿ ನೋವು ಅನುಭವಿಸುವ ಸಂದರ್ಭಗಳು ಬಹಳ ಇವೆ. ಚಂದದ ಕಥೆ

  3. MANJURAJ H N says:

    ಅರ್ಥಪೂರ್ಣವಾಗಿದೆ ಮೇಡಂ, ಪಾತ್ರಗಳ ಮುಖಾಮುಖಿ ಮತ್ತದರ ಚುಟುಕು
    ಸಂಭಾಷಣೆ ಇಷ್ಟವಾಯಿತು. ಸಹಜವಾದ ಆವರಣ, ಸ್ವಾರ್ಥದ ಅನಾವರಣ

    ದುರಾಸೆಗೆ ಮಿತಿಯಿಲ್ಲ; ಪ್ರೀತಿಯ ಕಪಟನಾಟಕ, ಪುರುಷರ ದೋಚುಬುದ್ಧಿ
    ಸ್ವಾಭಿಮಾನಶೂನ್ಯ ಯುವವರ್ಗ, ಛೇ! ಘನತೆಯಿಲ್ಲದ ಬಾಳು ; ಹೆಣ್ಣಿಗದು ಗೋಳು

    ಸ್ವಭಾವೋಕ್ತಿ ನಿಮ್ಮ ಲೇಖನಿಯ ಗುಣ, ದಯಮಾಡಿ ಹೆಚ್ಚು ಬರೆಯಿರಿ. ನಂಗಿಷ್ಟವಾಯಿತು.

  4. ಸವಿತಾ ಪ್ರಭಾಕರ್ says:

    ಪ್ರಕಟಿಸಿದ ಗೆಳತಿ ಹೇಮಾ ಅವರಿಗೂ, ಅಭಿಪ್ರಾಯ ತಿಳಿಸಿದ ಅಭಿಮಾನಿಗಳಿಗೂ ಹೃದಯ ಪೂರ್ವಕ ಧನ್ಯವಾದಗಳು.

  5. ಶಂಕರಿ ಶರ್ಮ says:

    ಪುಟ್ಟ ಪರೀಕ್ಷೆಯಿಂದ ಸಿರಿ ಎಚ್ಚೆತ್ತುಕೊಳ್ಳುವಂತಾಯಿತು. ಧನ ದಾಹದ ಮಾದರಿಯನ್ನು ತೋರಿದ ಕಥೆಯು ಧನ ದಾಹಿ ಯುವ ವರ್ಗಕ್ಕೆ ಚಾಟಿ ಏಟಿನಂತಿದೆ.

  6. ಪದ್ಮಾ ಆನಂದ್ says:

    ಸರಳ ಸುಂದರವಾದ ಕತೆಯ ಮೂಲಕ ಹೇಳಿದ ನೀತಿಪಾಠ ಆಪ್ತವಾಗಿ ಮೂಡಿಬಂದಿದೆ.

  7. Hema Mala says:

    ಸೂಕ್ತವಾದ ಸಂದೇಶವುಳ್ಳ ಕತೆ, ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: