ಅರಳು ಸಂಡಿಗೆ ಅರಳು…ಬಿರಿದು ರುಚಿಯನು ನೀಡು
ಓ, ಏನಪ್ಪಾ ಇದು, ಜನಪ್ರಿಯ ಗೀತೆಯ ಪಲ್ಲವಿಯನ್ನೇ ಸ್ವಲ್ಪ ಬದಲಾವಣೆ ಮಾಡಿ, ಶೀರ್ಷಿಕೆ ಇಟ್ಟುಬಿಟ್ಟಿದ್ದಾರಲ್ಲಾ . . ಎಂದುಕೊಳ್ಳಬೇಡಿ. ಆ ಹಾಡಿನಲ್ಲಿ “ಅರಳು ಮಲ್ಲಿಗೆ ಅರಳು”ವಿನ ಎರಡೂ “ಅರಳು”ಗಳಿಗೂ ಒಂದೇ ಅರ್ಥ ಚಿಗುರು, ಪಲ್ಲವಿಸು ಅಂತ. ಆದರೆ ಈ ನನ್ನ ಸಂಡಿಗೆಯ ಶೀರ್ಷಿಕೆಯ ಎರಡು “ಅರಳು”ಗಳಿಗೂ ವಿಭಿನ್ನ ಅರ್ಥ. ಆದ್ರೆ ಸೋಜಿಗ ಅಂದ್ರೆ ಯಾವ “ಅರಳು”ಗೆ ಯಾವ ಅರ್ಥ ಬೇಕಾದರೂ ಕೊಡಬಹುದು, ಹಿಂದು ಮುಂದಾಗಿಯೂ ಸಹ! ಅರ್ಥದಲ್ಲಿ ವ್ಯತ್ಯಾಸವೇನೂ ಆಗುವುದಿಲ್ಲ. ಗಲಿಬಿಲಿಗೊಳ್ಳಬೇಡಿ, ಹೇಳಿ ಬಿಡುತ್ತೇನೆ ಇರಿ, ಒಂದು “ಅರಳು” ಎಂದರೆ ಪಲ್ಲವಿಸು, ವಿಕಸಿಸು, ವಿಕಾಸ ಹೊಂದು ಎಂಬರ್ಥವಾದರೆ ಇನ್ನೊಂದು “ಅರಳು” ಭತ್ತವನ್ನು ಹುರಿದು ತಯಾರಿಸಿದ “ಅರಳು” ಎಂದರ್ಥ. ಬೇಸಿಗೆಯಲ್ಲಿ ಈ ಅರಳು ಸಂಡಿಗೆಯನ್ನು ಮಾಡಿ ಡಬ್ಬದಲ್ಲಿ ತುಂಬಿಟ್ಟುಕೊಂಡರೆ ವರ್ಷಪೂರ್ತಿ ಮನ ಬಂದಾಗ, ಮನೆಗೆ ನೆಂಟರಿಷ್ಟರು ಬಂದಾಗ, ಹಬ್ಬ ಹರಿದಿನಗಳಲ್ಲಿ, ಕೆಲವು ವ್ಯಂಜನಗಳ ಜೊತೆ ಕಾಂಬಿನೇಷನ್ ಚೆನ್ನಾಗಿರುತ್ತಾದರಿಂದ, ಆ ವ್ಯಂಜನಗಳನ್ನು ಮಾಡಿದಾಗ, ಮಳೆ, ಸೋನೆ ಮಳೆ ಸುರಿವಾಗ, ಛಳಿಗೆ ಬೆಚ್ಚಗೆ ಪುಸ್ತಕ ಓದುತ್ತಾ ಕುಳಿತಾಗ ಬಾಣಲೆಯಲ್ಲಿ ಸ್ವಲ್ಪ ಜಾಸ್ತಿಯೇ ಎಣ್ಣೆಯನ್ನು ಬಿಸಿಗೆ ಇಟ್ಟು ಹದವಾಗಿ ಕರಿದಾಗ ಭತ್ತದ ಅರಳಿನಿಂದ ಮಾಡಿದ ಸಂಡಿಗೆ ಹೂವಿನಂತೆ ಅರಳಿ, ಪಲ್ಲವಿಸಿ ಬಿರಿದು ಎಣ್ಣೆಯಿಂದ ಮೇಲೆ ಬಂದಾಗ ತೆಗೆದು ತಿಂದರೆ . . . ಆಹಾ . . . ಸ್ವರ್ಗಕ್ಕೆ ಕಿಚ್ಚು ಹಚ್ಚಲು ಮನ ಬಯಸುವುದರಲ್ಲಿ ಸಂಶಯವೇ ಬೇಡ.
ಬೇಸಿಗೆ ಬಂದಿತೆಂದರೆ ಹೆಂಗಳೆಯರು ವಿಧ ವಿಧವಾದ ಸಂಡಿಗೆ, ಹಪ್ಪಳ, ಪೇಣಿ, ಬಾಳಕ, ಚಿಪ್ಸು, ಉಪ್ಪಿನಮೆಣಸಿನಕಾಯಿಗಳನ್ನು ಮಾಡಿ ಡಬ್ಬದಲ್ಲಿ ತುಂಬಿಸಿ ಬೇರೆ ಊರು, ಮನೆಗಳಲ್ಲಿ ನೆಲೆಸಿರುವ ಮನೆಯ ಮಕ್ಕಳು, ನೆಂಟರಿಷ್ಟರು, ಆಪ್ತೇಷ್ಟರಿಗೆಲ್ಲಾ ಸ್ವಲ್ಪ ಸ್ವಲ್ಪ ಹಂಚಿ ಇಟ್ಟುಕೊಳ್ಳುತ್ತಾರೆ. ಈಗಿನ ವಿಭಕ್ತ ಕುಟುಂಬಗಳಲ್ಲಿ ಕಮ್ಮಿಯಾಗಿದೆ ಎಂದರೂ, – ಅಯ್ಯೋ ನಾವಿರುವ ಮೂರು ಮತ್ತೊಂದು ಜನಕ್ಕೆ ಎಷ್ಟು ಮಾತ್ರ ಬೇಕು, ಅದಕ್ಯಾಕೆ ಕಷ್ಟ ಪಡಬೇಕು, ಕೊಂಡು ತಂದರೆ ಆಯಿತು – ಎನ್ನುವ ಧೋರಣೆ ಕಂಡರೂ, ಇನ್ನೂ ಪೂರ್ಣವಾಗಿ ನಶಿಸಿ ಕಣ್ಮರೆಯಾಗಿಲ್ಲ ಎಂಬದಕ್ಕೆ ನಾನೂ ಒಂದು ಉದಾಹರಣೆ.
ಮೇಲೆ ಹೇಳಿದ ಎಲ್ಲಾ ವೆರೈಟಿಗಳಲ್ಲೂ “ಅರಳು ಸಂಡಿಗೆ”ಯನ್ನೇ ರಾಜ, ಚಕ್ರವರ್ತಿ ಎನ್ನಬಹುದೆಂಬುದು ನನ್ನ ಅಭಿಪ್ರಾಯ. ಅದರ ರುಚಿಯೇ ಬೇರೆ, ಅದರ ಗಮ್ಮತ್ತೇ ಬೇರೆ. ಹಾಗಾಗಿ ನಾನಿಂದು “ಅರಳು ಸಂಡಿಗೆ”ಯ ಕುರಿತಾಗಿಯೇ ಬರೆಯುತ್ತಾ ಹೋಗುತ್ತೇನೆ.
ಹಾಗೆ ನೋಡಿದರೆ ಇತ್ತೀಚಿನ ದಿನಗಳಲ್ಲಿ “ಸಂಡಿಗೆ” ಮಾಡುವ ಕ್ರಿಯೆ ಎಷ್ಟೊಂದು ಸುಧಾರಣೆ ಕಂಡಿದೆ. ನಮ್ಮ ಅಮ್ಮ ಅವರೆಲ್ಲಾ ಮನೆಯಲ್ಲೇ ಭತ್ತವನ್ನು ಹುರಿದು ಅರಳು ಮಾಡಿ ಅದನ್ನು ಎರಡೆರಡು ಸಲ ಸೋಸಿ, ಆರಿಸಿ, ಅದರಲ್ಲಿರುವ ಭತ್ತದ ಹೊಟ್ಟುಗಳನ್ನೆಲ್ಲಾ ತೆಗೆದು ಸಂಡಿಗೆ ಇಡುತ್ತಿದ್ದರು. ಅದೂ ಹೊಸ ಮೊರಗಳಲ್ಲಿ ಇಡುತ್ತಿದ್ದರು. ಎಷ್ಟೋ ವೇಳೆ ಹೆಚ್ಚೆಚ್ಚು ಮೊರಕ್ಕೇ ಅಂಟಿಕೊಂಡು ತೆಗೆಯುವಾಗ ಪುಡಿಯಾಗುತಿತ್ತು.
ಇತ್ತೀಚೆಗೆ ಚಾಪೆಯ ಮೇಲೆ ಉದ್ದಕ್ಕೆ ಪ್ಲಾಸ್ಟಿಕ್ ಶಿಟನ್ನೋ ಹಳೆಯ ಸೀರೆಯನ್ನೋ ಹಾಸಿ ಸಂಡಿಗೆ ಇಡುವ ವಿಧಾನ ಸುಮಾರು ಸುಲಭವಾಗಿದೆ. ಅಲ್ಲದೆ ಶುದ್ಧೀಕರಿಸಿದ ಅರಳೇ ಸಿಗುವುದರಿಂದ ಅದೂ ಕೆಲಸ ಕಮ್ಮಿಯಾಗಿದೆ. ಆದಾಗ್ಯೂ ಮಾಡುವವರು ಕಮ್ಮಿಯಾಗಿದ್ದಾರೆ. ವ್ಯಾಪರಕ್ಕೆಂದು ಮಾಡುವವರು ಮಾತ್ರ ಬಿಡದೇ ಮಾಡುತ್ತಾರೆ, ಮಾಡಲೇ ಬೇಕಲ್ಲಾ?
ಆದರೆ ನಮ್ಮ ಮನಯಲ್ಲಿ ಮಾತ್ರ ನಮಗೆಲ್ಲಾ ಮನೆಯಲ್ಲಿ ಮಾಡಿದ ಅರಳು ಸಂಡಿಗೆಯೇ ಆಗಬೇಕು. ನಮ್ಮ ಸ್ನೇಹಿತರ ಮನೆಯಲ್ಲಿ ಮಗನಿಗೆ ಹೊಸದಾಗಿ ಮದುವೆಯಾಗಿತ್ತು. ಹೊಸ ಹೆಂಡತಿಗೆ ಅಡುಗೆ ಮಾಡಲು ಇಷ್ಟವೇ ಇರಲಿಲ್ಲ. ಹೊರಗಡೆಯ ತಿಂಡಿ, ತಿನಿಸುಗಳ ಆಸೆಗೆ ನಾಲಿಗೆ ಒಗ್ಗಿ ಹೋಗಿತ್ತು. ಅವಳನ್ನು ಕುರಿತು ಅವಳ ಗಂಡ ಒಂದು ಚುಟುಕು ಬರೆದ –
“ಮಾಡು ಎಂದರೆ ಅಡುಗೆ
ನನ್ನವಳ ಮುಖ ಆಗುವುದು ಗಡಿಗೆ
ನಡೆ, ಹೊರಗೆ ತಿನ್ನೋಣವೆಂದೊಡೆ
ಅರಳುವುದು ಅವಳ ವದನ
ಕರಿದ ಅರಳು ಸಂಡಿಗೆ“
ಅರಳು ಸಂಡಿಗೆಗಳಲ್ಲೂ ವೈವಿಧ್ಯತೆ ಇರುತ್ತದೆ. ಬೂದುಗುಂಬಳಕಾಯಿ, ಕರಬೂಜದ ಹಣ್ಣಿನ ಬೀಜಗಳು, ಈರುಳ್ಳಿ, ಹೀಗೆ ಯಾವುದಾದರೊಂದನ್ನು ಸೇರಿಸಿ ಮಾಡಬಹುದು. ಹಬ್ಬಹರಿದಿನಗಳ ಮಡಿಯ ಅಡುಗೆ ಮಾಡುವಾಗ ಬೂದುಗುಂಬಳಕಾಯಿ, ಕರಬೂಜದ ಹಣ್ಣಿನ ಬೀಜಗಳ ಸಂಡಿಗೆಯೇ ಆಗಬೇಕು, ಆದರೆ ಮಿಕ್ಕೆಲ್ಲಾ ದಿನಗಳಿಗೆ ಈರುಳ್ಳಿ ಸಂಡಿಗೆ ಓಕೆ. ಆದರೆ ಈರುಳ್ಳಿ ಸಂಡಿಗೆ ಕೊಡುವ ರುಚಿಗೆ ಸರಿಸಾಟಿಯೇ ಇಲ್ಲ. ಈಗೆಲ್ಲಾ ಈರುಳ್ಳಿ ಕಟರ್ ಕೂಡ ಬಂದು ಬಿಟ್ಟಿರುವುದರಿಂದ ಕೆಲಸ ತುಂಬಾ ಹಗುರಾಗಿಬಿಟ್ಟಿದೆ.
ಮನೆ ಮನೆಗಳಲ್ಲಿ ಸಂಡಿಗೆ ಮಾಡುವ ಸಂಭ್ರಮವೇ ಬೇರೆ. ಹಿಂದಿನ ದಿನವೇ ಚಾಪೆ, ಪ್ಲಾಸ್ಟಿಕ್ ಶೀಟುಗಳನ್ನು ತೊಳೆದು ಒಣಗಿಸಿಟ್ಟುಕೊಂಡು ಈರುಳ್ಳಿ ಸಿಪ್ಪೆ ಬಿಡಿಸಿಟ್ಟುಕೊಂಡು ಬಿಟ್ಟರೆ ಬೆಳಗ್ಗೆ ಬೇಗ ಎದ್ದು ಬಿಸಿಲೇರುವ ಮುಂಚೆಯೇ ಇಟ್ಟು ಬಿಟ್ಟರೆ, ಎರಡು ಮೂರು ದಿನಗಳ ಜೋರು ಬಿಸಿಲಿನಲ್ಲಿ ಒಣಗಿಸಿದರೆ ಸಂಡಿಗೆ ರೆಡಿ. ವರ್ಷಪೂರ್ತಿ ಕರಿದು ತಿನ್ನಬಹುದು.
ಮಾಡುವ ವಿಧಾನಗಳಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಅರಳನ್ನು ಶುದ್ಧನೀರಿನಲ್ಲಿ ಅದ್ದಿ ತೆಗೆದು ಅದಕ್ಕೆ ಮೇಲೆ ಹೇಳಿದ ಯಾವುದೇ ಒಂದು ಸಣ್ಣಗೆ ಹೆಚ್ಚಿದ ತರಕಾರಿ, ರುಚಿಗೆ ತಕ್ಕಷ್ಟು ಅರೆದ ಕಲ್ಲುಪ್ಪು ಹಸಿಮೆಣಸಿನಕಾಯಿಯ ಪೇಸ್ಟು, ಘಂ ಎನ್ನುವ ಇಂಗನ್ನು ಬೆರೆಸಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿಸೊಪ್ಪನ್ನು ಧಂಡಿಯಾಗಿ ಹಾಕಿ ಹಗುರವಾಗಿ ಕಲಸಿ ಸಾಲು ಸಾಲಾಗಿ ಸಂಡಿಗೆ ಇಡಬೇಕು. ಕೆಲವರು ಕೊತ್ತಂಬರಿಸೊಪ್ಪು ಹಾಕಿದರೆ ಎಣ್ಣೆ ಜಾಸ್ತಿ ಕುಡಿಯುತ್ತದೆ, ಹಾಗೂ ಒಣಗಿಸುವುದರಿಂದ ಅದರ ವಾಸನೆಯೂ ಇರುವುದಿಲ್ಲ, ಹಾಗಾಗಿ ಬೇಡ ಎನ್ನುತ್ತಾರೆ. ಈರುಳ್ಳಿ ಸಂಡಿಗೆಗೆ ಇಂಗು ಬೇಡ, ಈರುಳ್ಳಿಯ ಘಾಡ ವಾಸನೆಯ ಮುಂದೆ ಇಂಗಿನ ಘಮ ಎಲ್ಲಿ ಉಳಿಯುತ್ತದೆ, ಹಾಗಾಗಿ ಇಂಗೂ ಬೇಡ ಎನ್ನುತ್ತಾರೆ. ಅಲ್ಲದೆ ಒಂದು ಗಾದೆ ಇದೆಯಲ್ಲಾ, “ಉಪ್ಪು ಊರುತ್ತೆ, ಇಂಗು ಹಾರುತ್ತೆ” ಅಂತ. ಅಂದರೆ ಒಣಗಿದಾಗ, ಕರಿದಾಗ ಉಪ್ಪಿನಲ್ಲಿರಬಹುದಾದ ತೇವಾಂಶ ಇಂಗಿ ಉಪ್ಪಿನ ರುಚಿ ಸ್ಟ್ರಾಂಗ್ ಆಗುತ್ತೆ, ಇಂಗಿನ ವಾಸನೆ ಬಿಸಿಲಿಗೆ ಇಟ್ಟಾಗ ಇಲ್ಲವಾಗುತ್ತೆ ಅಂತ ಲಾಜಿಕ್ಕು. ಆದರೆ ನಾನೇನೋ ಎರಡನ್ನೂ ಹಾಕಿಬಿಡುತ್ತೀನಿ. ಇಂಗು ಜೀರ್ಣಕಾರಿ ಮತ್ತು ಹಸಿರಾದ ಕೊತ್ತಂಬರಿಸೊಪ್ಪು ಆರೋಗ್ಯಕಾರಿ ಅಂತ.
ಸಂಡಿಗೆ ಇಡುವುದು ಸುಲಭವೇನೋ ಹೌದಾದರೂ ಅದರಲ್ಲಿ ಹಲವಾರು ಸೂಕ್ಷ್ಮತೆಗಳಿವೆ. ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ಸಾಲು ಸಾಲಾಗಿ ಇಟ್ಟಿದ್ದರೆ ಅದನ್ನು ನೋಡುವುದೇ ಚೆನ್ನ. ಇಡುವಾಗಿನ ಟಿಪ್ಸ್ ಅಂದರೆ ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಹಗುರಾಗಿ ಉಂಡೆ ಮಾಡಿ ಇಡಬೇಕು. ತೀರಾ ಹಗುರಾಗಿ ಉಂಡೆ ಮಾಡಿ ಇಟ್ಟರೆ ಒಣಗಿದ ನಂತರ ಪುಡಿ ಪುಡಿಯಾಗಿ ಬಿಡುತ್ತದ. ಸ್ವಲ್ಪ ಜಾಸ್ತಿ ಒತ್ತಡ ಹಾಕಿ ಉಂಡೆ ಕಟ್ಟಿದರೆ ಎಣ್ಣೆಯಲ್ಲಿ ಕರಿದಾಗ ಒಳಗಿನ ಭಾಗ ಅರಳಿಕೊಳ್ಳುವುದೇ ಇಲ್ಲ, ಕಟುಕಲಾಗಿ ಬಿಡುತ್ತದೆ. ಹಾಗಾಗಿ ಪ್ರತೀ ಸಲ ಸಂಡಿಗೆ ಇಟ್ಟಾಗ, ಮೊದಲ ಸಂಡಿಗೆಯನ್ನು ಕರಿಯುವಾಗ ಹೇಗೆ ಅರಳುವುದೋ ಎಂದು ತಿಳಿಯಲು ಮುಖ್ಯವಾದೊಂದು ಪರೀಕ್ಷೆಗೆ ಕಟ್ಟಿ ಫಲಿತಾಂಶ ಪ್ರಕಟಗೊಳ್ಳುವ ಸಮಯದ ಆತಂಕವೇ ಎಲ್ಲ ಹೆಂಗಳೆಯರಿಗೆ. ಅಲ್ಲದೆ ಮೊದಲ ದಿನ ಜೋರು ಬಿಸಿಲು ಬೀಳಬೇಕು, ಇಲ್ಲದಿದ್ದರೂ ಕಟುಕಲಾಗಿ ಬಿಡುತ್ತದೆ.
ಮನೆಯ ಹೆಂಗಳೆಯರು ಒಟ್ಟಾಗಿ ಸೇರಿ ನಗುತ್ತಾ ಹರಟುತ್ತಾ ಸಂಡಿಗೆ ಇಡುತ್ತಿದ್ದರೆ ಅದರ ಸೊಗಸೇ ಬೇರೆ. ಒಬೊಬ್ಬರೂ ಇಡುವ ಸಂಡಿಗೆಯ ಆಕಾರಗಳಿಂದಲೇ ಇದು ಯಾರು ಇಟ್ಟ ಸಂಡಿಗೆ ಎಂದು ನಿರ್ಧರಿಸಬಹುದು. ನಮ್ಮ ಕುಟುಂಬದಲ್ಲಿ ನನ್ನ ನಾದಿನಿ ಸಂಡಿಗೆಯ ಎಕ್ಸಪರ್ಟ. ಅವರ ಮೇಲ್ವಿಚಾರಣೆಯಲ್ಲಿ ಸಂಡಿಗೆ ಮಾಡಿದರೆ ಕೆಡುವ ಸಾಧ್ಯತೆಯೇ ಇಲ್ಲ. ಹೊಸ ಸಂಡಿಗೆ ಮಾಡಿ ಕರಿದಾಗ ಒಳಗಡೆಯ ಒಂದೇ ಒಂದು ಅರಳು ಕೂಡ ಸರಿಯಾಗಿ ಅರಳದಿದ್ದರೂ ಅವರು ಸಂಡಿಗೆಯನ್ನು ನಪಾಸು ಮಾಡಿಬಿಡುತ್ತಾರೆ. ʼಇಲ್ಲಾ, ಈ ಸಲ ಸಂಡಿಗೆ ಸರಿಯಾಗಿ ಬಂದಿಲ್ಲʼ ಎನ್ನುತ್ತಾರೆ. ನನ್ನ ನಾದಿನಿಯೊಂದಿಗಿನ ಸಂಡಿಗೆ ಇಡುವ ಒಂದೆರಡು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಂಡೇ ಬಿಡುತ್ತೇನೆ.
ಒಮ್ಮೆಯಂತೂ ನಾನು ಮತ್ತು ಅವರು ಸೇರಿ ಸಂಡಿಗೆ ಇಡುವ ಕಾರ್ಯಕ್ರಮವನ್ನು ಬೆಳಗ್ಗೆ ಬೆಳಗ್ಗೆ ನಿರ್ಧರಿಸಿಬಿಟ್ಟೆವು. ಇದೊಂದು ಇಪ್ಪತ್ತು ವರ್ಷಗಳಷ್ಟು ಹಿಂದಿನ ಮಾತು. ಆಗಿನ್ನೂ ನಮ್ಮಗಳ ಮನೆಗೆ ಈರುಳ್ಳಿ ಕಟರ್ ಬಂದಿರಲಿಲ್ಲ. ಈಳಿಗೆಮಣೆಯಲ್ಲೇ ಸಣ್ಣಗೆ ಹೆಚ್ಚಿ ಎಲ್ಲಾ ಸರಿಮಾಡಿಕೊಂಡು ಟೆರೇಸ್ ಮೇಲೆ ಹೋಗುವ ವೇಳೆಗೇ ಹನ್ನೊಂದು ಗಂಟೆಯಾಗಿ ಹೋಗಿತ್ತು. ಬಿಸಿಲಿನ ಝಳ ಅತ್ಯಂತ ಜೋರಾಗಿತ್ತು. ಕೆಳಗೆ ನೆಲ ಮತ್ತು ಮೇಲಿನ ನೆತ್ತಿ ಕಾಯುತಿತ್ತು. ಹಸಿಮೆಣಸಿನಕಾಯಿಯ ಖಾರಕ್ಕೆ ಕೈ ಉರಿಯುತಿತ್ತು. ಆದರೂ ಛಲಬಿಡದ ತ್ರಿವಿಕ್ರಮಿಯರುಗಳಂತೆ ಐವತ್ತು ಸೇರು ಅರಳಿನ ಸಂಡಿಗೆಯನ್ನು ಇಡುತಿದ್ದೆವು. ಆಗಲೇ ಗಂಟೆ ಹನ್ನೆರಡು ಆಗಿಬಿಟ್ಟಿತ್ತು. ಕಾಕತಾಳೀಯವೋ ಎಂಬಂತೆ ಇಬ್ಬರೂ ಉಟ್ಟಿದ್ದ ಕೆಂಪು ಸೀರೆಯನ್ನೇ ತಲೆಯ ಮೇಲೆ ಹಾಕಿಕೊಂಡು ಮುಖದ ಮುಂದೆ ಬಂದು ತೊಂದರೆ ಕೊಡದಂತೆ ಕಿವಿಯ ಹಿಂದೆ ಸಿಕ್ಕಿಸಿಕೊಂಡು, ನೆತ್ತಿಯ ಮೇಲೆ ಸ್ವಲ್ಪ ಸ್ವಲ್ಪ ತಣ್ಣಿರನ್ನು ಚುಮುಕಿಸಿಕೊಂಡು ಒಬ್ಬರನ್ನೊಬ್ಬರನ್ನು ರೇಗಿಸಿಕೊಳ್ಳುತ್ತಾ ನಮ್ಮಗಳ ಮನೆಯಲ್ಲಿ ಹಿಂದೆ ಇರುತ್ತಿದ್ದ ಮಡಿಹೆಂಗಸು ಅಜ್ಜಿಯರನ್ನು ಜ್ಞಾಪಿಸಿಕೊಳ್ಳುತ್ತಾ ಅಂತೂ ಇಂತೂ ಮುಗಿಸಿ ಎರಡು ಮಹಡಿ ಇಳಿದು ಕೆಳಗೆ ಬಂದೆವು. ಮತ್ತೊಮ್ಮೆ ಸ್ನಾನ ಮಾಡಿ ಊಟ ಮಾಡಿ ಮಂಚಕ್ಕೆ ತಲೆ ಇಟ್ಟೊಡನೆಯೇ ಆಯಾಸಕ್ಕೆ ನಿದ್ರಾದೇವಿ ಆವರಿಸಿದಳು. ಅಂದೋ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಇದ್ದಕ್ಕಿದ್ದಂತೆ ಏನೋ ಜೋರಾಗಿ ಸುರಿಯುತ್ತಿರುವ ಶಬ್ಧವಾಗಿ ಧಡಕ್ಕೆಂದು ಎಚ್ಚರವಾಗಿ ಆಚೆ ಬಂದು ನೋಡಿದರೆ ಧೋ ಎಂದು ಮುಸಲಧಾರೆಯಂತೆ ಮಳೆ ಸುರಿಯುತ್ತಿದೆ. ಯಾವಾಗ ಮೋಡ ಕಟ್ಟಿತೋ, ಮಳೆ ಪ್ರಾರಂಭವಾಯಿತೋ ತಿಳಿಯಲೇ ಇಲ್ಲ. ಸಂಜೆ ತನಕ ಸುರಿದ ಮಳೆ ನಿಂತ ನಂತರ ಮೇಲೆ ಹೋಗಿ ನೋಡಿದರೆ ಟೆರೇಸಿನ ತುಂಬಾ ಮಡುಗಟ್ಟಿ ನಿಂತಿದ್ದ ನೀರಿನಲ್ಲಿ ನಮ್ಮ ಅಷ್ಟೂ ಸಂಡಿಗೆ ಪುಡಿಯಾಗಿ ತೇಲುತ್ತಿದ್ದವು, ಛೇ . . . ಈಗ ನೆನೆಸಿಕೊಂಡರೂ . . .
ನಾನು ಆಗಲೇ ಹೇಳಿದಂತೆ ಸಂಡಿಗೆ ಇಡುವ ರೀತಿಯೇ ಅದರ ಸಕ್ಸಸ್ಸಿನ ಬೀಜಮಂತ್ರ. ಕೆಲವೊಮ್ಮೆ ನಮ್ಮ ಜೊತೆಗೂಡುವವರು ಆ ಸೂಕ್ಷ್ಮವನ್ನು ಅರಿತಿರದಿದ್ದರೆ, ಹೇಳಿದರೆ ಕೇಳುವ ಮನಸ್ಥಿತಿಯೂ ಇಲ್ಲದಿದ್ದರೆ ಕಷ್ಟವಾಗುತ್ತದೆ. ನಾನು ಹಿಂದೆಯೇ ಹೇಳಿದಂತೆ ನಮ್ಮ ನಾದಿನಿ ತುಂಬಾ ಪರ್ಟಿಕ್ಯುಲರ್. ಅವರ ಮನೆಯ ಹತ್ತಿರ ಒಬ್ಬರು ಆಂಟಿ ಇದ್ದರು. ಅವರು ಸಂಕೇತಿಯವರು. ಅವರನ್ನು ಕರೆಯುತ್ತಿದ್ದುದೇ ಸಂಕೇತಿ ಆಂಟಿ ಅಂತ. ತುಂಬಾ ಸಹೃದಯಿ, ಸಹಾಯ ಹಸ್ತ ನೀಡುತ್ತಿದ್ದರು. ಆದರೆ ಸ್ವಲ್ಪ ಜೋರು, ತಮ್ಮದೇ ಸರಿ ಎನ್ನುವ ಮನೋಭಾವ, ಸುಮಾರು ಸಲ ಅದು ಹೌದೂ ಆಗಿರುತಿತ್ತು. ಹಾಗೆಯೇ ಮಾತೂ ತುಂಬಾ ಜಾಸ್ತಿ. ಅವರು ನನ್ನ ನಾದಿನಿಗೆ – ನೀನೊಬ್ಬಳೇ ಕಷ್ಟ ಪಡಬೇಡ, ನಾನೂ ಬಂದು ಸಂಡಿಗೆ ಇಡಲು ಸಹಾಯ ಮಾಡ್ತೀನಿ – ಎನ್ನುತ್ತಿದ್ದರು. ಇವರಿಗೆ ಟೆನಷನ್ ಶುರುವಾಗಿ ಬಿಡುತಿತ್ತು. ಏಕೆಂದರೆ ಸಂಡಿಗೆ ಇಡುವ ಸಮಯದಲ್ಲಿ ಮಾತನಾಡುತ್ತಾ ಆಡುತ್ತಾ ಬಿಗಿಯಾಗಿ ಉಂಡೆ ಕಟ್ಟಿ ಕಟ್ಟಿ ಇಡುತ್ತಿದ್ದರು. ಮಾತಿನ ವಿಷಯವೇನಾದರೂ ಹೆಚ್ಚು ಗಂಭೀರದ್ದಾದರೆ ಪಾಪ ಸಂಡಿಗೆಯ ಮೇಲಿನ ಒತ್ತಡವೂ ಜಾಸ್ತಿಯಾಗುತಿತ್ತು. ಅವರಿಗೆ ಹೇಳುವಂತಿಲ್ಲ, ಬಿಡುವಂತಿಲ್ಲ. ಅದಕ್ಕೆಂದೇ ನಮ್ಮ ನಾದಿನಿ ಸಂಡಿಗೆ ಇಡುವ ಹಿಂದಿನ ರಾತ್ರಿಯೆಲ್ಲಾ ನಿದ್ರೆ ಇಲ್ಲದೆ ಹೊರಳಾಡಿ ಬೆಳಗಿನ ಝಾವ ನಾಲ್ಕು ಗಂಟೆಗೇ ಎದ್ದು ಎಲ್ಲ ತಯಾರಿ ನಡೆಸಿ, ಅವರು ಒಂಭತ್ತು ಗಂಟೆಗೆ ಬರುವ ವೇಳೆಗೆ ಶೇಕಡಾ ತೊಂಭತ್ತು ಭಾಗ ಮುಗಿಸಿಬಿಟ್ಟಿರುತ್ತಿದ್ದರು.
ಇಂದಿನ ದಿನಗಳಲ್ಲಿ ವಿಭಕ್ತ ಕುಟುಂಬಗಳು ಜಾಸ್ತಿಯಾಗುತ್ತಾ ತಾವು ತಾವೇ ಮಾಡಿಕೊಳ್ಳುವುದೂ ಜಾಸ್ತಿಯಾಗುತ್ತಿದೆ. ನಮ್ಮ ಅಣ್ಣನ ಹೆಂಡತಿ ಯಾರನ್ನೂ ಕರೆಯುತ್ತಿರಲಿಲ್ಲ. ನಮ್ಮ ಅಣ್ಣನನ್ನೇ ಸೇರಿಸಿಕೊಂಡು ಸಂಡಿಗೆ ಇಡುತ್ತಿದ್ದರು. ಅವನೋ ವೃತ್ತಿಯಲ್ಲಿ ಇಂಜಿನಿಯರ್. ಇಲ್ಲೂ ತನ್ನ ಇಂಜಿನಿಯರ್ ಬುದ್ಧಿ ಬಿಡುತ್ತಿರಲಿಲ್ಲ. ಕೈಯಲ್ಲಿ ಇಡುವುದು ಬೇಡ ಎಂದು ಅಂಗಡಿಯಿಂದ ಒಂದು ಚಿಕ್ಕದು ಅಂದ್ರೆ ತುಂಬಾ ಚಿಕ್ಕ ಬಟ್ಟಲನ್ನು ತಂದು ಅದರಲ್ಲಿ ಹಗುರಾಗಿ ತುಂಬಿ ಬಗ್ಗಿಸಿ ಇಟ್ಟುಬಿಡುತ್ತಿದ್ದ. ಒಂದೇ ಸೈಜ್, ಒಂದೇ ಶೇಪ್ ಇರುತಿತ್ತು. ಆದರೂ ಒಳಗೆಲ್ಲೋ ಸ್ವಲ್ಪ ಜಾಸ್ತಿ ಗಟ್ಟಿಯಾಗಿ, ಅಷ್ಟು ಸರಿಯಾಗಿ ಕೆಲವೊಮ್ಮೆ ಸಂಡಿಗೆಗಳು ಅರಳುತ್ತಿರಲಿಲ್ಲ. ʼಸುಮ್ಮನೆ ಕೈಲಿ ಇಡೋಣ ಅಂದ್ರೆ ನೀವು ಕೇಳೊಲ್ಲಾʼ ಅಂತ ಅತ್ತಿಗೆಯ ಕೈಲಿ ಬೈಸಿಕೊಳ್ಳುತ್ತಿದ್ದ. ಊರಲಿದ್ದ ಅಮ್ಮ ಮಾತ್ರ – ಅಯ್ಯೋ ಹೊಟ್ಟೆ ಬಟ್ಟೆ ಕಟ್ಟಿ ನನ್ನ ಮಗನ್ನ ದೊಡ್ಡ ಎಂಜಿನಿಯರ್ ಮಾಡಿಸಿದ್ರೆ, ಇವಳು ಬಂದು ಸಂಡಿಗೆ ಇಡಕ್ಕೆ ಹಾಕಿಕ್ಕೊಂಡು ಬಿಟ್ಟಳು – ಅಂತ ಹಲಬುತ್ತಿದ್ದರು.
ಎಣ್ಣೆ ಇಟ್ಟು ಕರಿಯುವಾಗಲೂ ಅಷ್ಟೇ. ಅರಳು ಸಂಡಿಗೆಗೆ ಬಾಣಲೆಯ ತುಂಬಾ ಎಣ್ಣೆ ಇಟ್ಟು ಚೆನ್ನಾಗಿ ಕಾಯಿಸಿ ಹದವಾಗಿ ಕರಿದಾಗಲೇ ಚೆನ್ನಾಗಿ ಅರಳುವುದು. ಅಣ್ಣ ಪರ್ಮ್ಯುಟೇಷನ್ ಕಾಂಬಿನೇಷನ್ ಸೂತ್ರ ಅಳವಡಿಸಿ ಎಣ್ಣೆ ಉಳಿಯಬಾರದು ಎಂದು ಒಂದು ಸಂಡಿಗೆಗೆ ಎಷ್ಟು ಚಮಚ ಎಣ್ಣೆ ಬೇಕು ಅಂತ ಲೆಕ್ಕ ಹಾಕಿ ಕರಿಯಬೇಕು ಎನ್ನುತ್ತಿದ್ದ. ಮೊದಲ ಸಂಡಿಗೆಗಳು ಚೆನ್ನಾಗಿ ಅರಳಿದರೆ ನಂತರದವು ಎಣ್ಣೆ ಸಾಲದೆ ಸರಿಯಾಗಿ ಅರಳುತ್ತಿರಲಿಲ್ಲ. ಆದರೂ ಅವನು ಹೆಚ್ಚಿಗೆ ಎಣ್ಣೆ ಇಡಲು ಬಿಡುತ್ತಿರಲಿಲ್ಲ. ಕೊನೆಯ ಎರಡು ಸಂಡಿಗೆಗಳನ್ನು ಪುಡಿ ಮಾಡಿ ಕರಿದು ಎಣ್ಣೆಯನ್ನು ಪೂರೈಸಿಬಿಡು ಎಂದು ಹೇಳಿ ಅತ್ತಿಗೆಯ ಕೈಲಿ ಬೈಸಿಕೊಳ್ಳುತ್ತಿದ್ದ.
ಅವನನ್ನು ನೋಡಿಯೇ ನಾನು ಸಂಡಿಗೆ ಇಟ್ಟರೆ, ಯಾರಿಗಾದರೂ ಕೊಡುವಾಗ ತುಂಬಾ ಎಣ್ಣೆ ಇಟ್ಟು ಕರಿಯಿರಿ ಎಂದು ಹೇಳಿ ಕೊಡುತ್ತೇನೆ. ಅಕಸ್ಮಾತ್ ಅವರು ತುಂಬಾ ಆರೋಗ್ಯದ ಕಾಳಜಿ ಉಳ್ಳವರು, ಸರಿಯಾಗಿ ಕರಿಯುವುದಿಲ್ಲ ಎಂಬ ಸಂಶಯವಿದ್ದರೆ ಅವರಿಗೆ ಕೊಡುವುದೇ ಇಲ್ಲ, ಅವರು ನಮ್ಮ ಮನೆಗೆ ಬಂದಾಗ ಊಟ ತಿಂಡಿಗಳೊಂದಿಗೆ ಕರಿದು ಕೊಟ್ಟು ಬಿಡುತ್ತೀನಿ.
ಸಂಡಿಗೆ ಇಟ್ಟು ಪೂರ್ತಿಯಾಗಿ ಒಣಗಿದ ನಂತರ ತೆಗೆದು ಅಳೆದು ಶೇಖರಿಸಿ ಇಡುವಾಗ ಕೆಲವೊಂದಿಷ್ಟು ಪುಡಿ ಬರುತ್ತದೆ. ಹೆಚ್ಚು ಪುಡಿ ಬಂದ್ರೆ, ಈ ಸಲ ಸಂಡಿಗೆ ಇಟ್ಟದ್ದು ಸರಿಯಾಗಲಿಲ್ಲ ಎಂದರ್ಥ. ಕಡಿಮೆ ಪುಡಿ ಬಂದರೆ ಪರೀಕ್ಷೆಯಲ್ಲಿ ಪಾಸ್. ಹಾಗಂತ ಬಂದ ಪುಡಿಯನ್ನೇನು ಬಿಸಾಕುವುದಿಲ್ಲ, ಅದನ್ನು ಸಂಡಿಗೆ ಪುಡಿ ಚಿತ್ರಾನ್ನಕ್ಕೆ ಉಪಯೋಗಿಸಿಕೊಳ್ಳುತ್ತೀವಿ.
ಹುಂ ರೀ, ಸಂಡಿಗೆ ಪುಡಿ ಚಿತ್ರಾನ್ನ ಮಾಡುವುದು ಬಲು ಸುಲಭ, ರುಚಿ ಅದ್ಭುತ. ನಿಂಬೆ ಹಣ್ಣಿನ ಚಿತ್ರಾನ್ನ, ಮಾವಿನ ಕಾಯಿ ಚಿತ್ರಾನ್ನ ಅಥವಾ ಮಾಮೂಲಿನ ಒಗ್ಗರಣೆ ಅನ್ನ ಮಾಡುವಾಗ ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಇಟ್ಟಾಗಲೇ ಒಂದಿಷ್ಟು ಸಂಡಿಗೆಯ ಪುಡಿಯನ್ನು ಕರಿದು ತೆಗೆದಿಟ್ಟುಕೊಂಡು ಎಲ್ಲಾ ಚಿತ್ರಾನ್ನವನ್ನು ಕಲೆಸಿದ ಮೇಲೆ ಬಡಿಸುವ ಮೊದಲು ಕರಿದ ಸಂಡಿಗೆ ಪುಡಿಯನ್ನು ಬೆರೆಸಿ ಹಗೂರಕ್ಕೆ ಮತ್ತೊಮ್ಮ ಕಲೆಸಿ ಬಡಿಸಿದರೆ ತಿನ್ನುವಾಗ ಮಧ್ಯೆ ಮಧ್ಯೆ ಕುರುಂ ಕುರುಂ ಎಂದು ಬಾಯಿಗೆ ಸಿಕ್ಕಿ ಅದರ ರುಚಿ ನಾಲಿಗೆಗೆ ಇಳಿಯುವಾಗಿನ ಸೊಗಸೇ ಬೇರೆ.
ಹಾಗೆಯೇ ಹುಳಿಯವಲಕ್ಕಿ ಜೊತೆ, ಮಜ್ಜಿಗೆ ಹುಳಿ ಜೊತೆ, ಹುಳಿಯನ್ನದ ಜೊತೆ, ಸಾರನ್ನದ ಜೊತೆ ಕರಿದ ಸಂಡಿಗೆ ಇದ್ದರೆ ಊಟದ ಸೊಗಸು ಹೆಚ್ಚುವುದರಲ್ಲಿ ಸಂಶಯವೇ ಬೇಡ.
ಸಂಡಿಗೆ ಪುಡಿ ಎಂದಾಗ ಕೆಲವಾರು ವರ್ಷಗಳ ಹಿಂದೆ ನಡೆದ ಮತ್ತೊಂದು ಘಟನೆಯನ್ನೂ ಹೇಳಿಬಿಡುತ್ತೇನೆ. ಆ ಸಲ ಅಂತೂ ಒಬ್ಬಳೇ ಐವತ್ತು ಸೇರು ಅರಳಿಗೆ ಸಂಡಿಗೆಯನ್ನು ಮಾಡಿದ್ದೆ. ತುಂಬಾ ಚೆನ್ನಾಗಿ ಬಂದಿತ್ತು. ಪುಡಿಯೂ ಸ್ವಲ್ಪವೇ ಸ್ವಲ್ಪ ಬಂದಿತ್ತು. ತುಂಬಾ ಖುಷಿಯಾಗಿತ್ತು. ಕೊಡುವವರಿಗೆಲ್ಲಾ ಪ್ಯಾಕೆಟ್ಟುಗಳಲ್ಲಿ ತೆಗೆದಿಟ್ಟು ಮಿಕ್ಕಿದ ಸಂಡಿಗೆಯನ್ನು ಡಬ್ಬದ ಪೂರ್ತಿ ತುಂಬಿ ಬಡುವಿನ ಮೇಲೆ ಇಡಲು ಹೋದಾಗ ಏನು ಕೈ ಜಾರಿತೋ ಏನೋ ʼಹಂʼ ಎಂದು ಡಬ್ಬ ಕೆಳಗೆ ಬಿದ್ದು ಮುಚ್ಚಳ ತೆರೆದುಕೊಂಡು ಎಲ್ಲಾ ಪುಡಿ ಪುಡಿಯಾಗಿ ಬಿಟ್ಟಿತು, ಛೇ . . . ಆ ವರ್ಷವೆಲ್ಲಾ ನಮ್ಮನೆಯಲ್ಲಿ ಸಂಡಿಗೆ ಪುಡಿ ಚಿತ್ರಾನ್ನ ಮಾಡಿದ್ದೇ ಮಾಡಿದ್ದು.
ಕರೋನಾ ಸಮಯದಲ್ಲಿ ಸೊಸೆ ಬಾಣಂತನಕ್ಕೆ ಹೋಗಿದ್ದಳು. ಮನೆಯಲ್ಲಿ ನಾನು, ಯಜಮಾನರು, ಮಗ ಮೂರೇ ಜನ. ಮಗ ವರ್ಕ್ ಫ್ರಂ ಹೋಂ. ಸದಾ ಫೋನು, ಲ್ಯಾಪ್ ಟಾಪಿನಲ್ಲೇ ಇರುತ್ತಿದ್ದ. ಯಜಮಾನರು ಟಿವಿ ರಿಮೋಟ್ ಚೇಂಜ್ ಮಾಡುವುದರಲ್ಲೇ ನಿರತರಾಗಿರುತ್ತಿದ್ದರು. ಬರಿಯ ಮನೆಯ ಕೆಲಸದಿಂದ ರೋಸಿ ಹೋಗಿ ಒಂದು ದಿನ ಸಂಡಿಗೆ ಇಡುವ ಕಾರ್ಯಕ್ರಮವನ್ನು ಹಮ್ಮಿಕೊಂಡೆ. ಮೊದಲಿನಿಂದ ಕೊನೆಯವರೆಗೂ ಒಬ್ಬಳೇ ಎಲ್ಲಾ ಕೆಲಸ ಮುಗಿಸಿ ಸಾಲಾಗಿ ಸಂಡಿಗೆಯಿಟ್ಟು ಬೆವರೊರೆಸಿಕೊಳ್ಳುತ್ತಾ ಕೆಳಗೆ ಬರಲು ಅಣಿಯಾದೆ.
ʼಏನಮ್ಮಾ, ಏನು ಮಾಡ್ತಾ ಇದೀಯ?ʼ – ಎನ್ನುತ್ತಾ ಮೇಲೆ ಬಂದ ಮಗ ಸಾಲು ಸಾಲಾಗಿ ಇಟ್ಟಿದ್ದ ಸಂಡಿಗೆಯ ನೋಡಿ ʼವ್ಹಾʼ ಎಂದು ಉದ್ಗರಿಸುತ್ತಾ ನಾಲ್ಕಾರು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ನನಗೆ ತೋರಿಸಿದ. ನೋಡಿ ಖುಷಿಯಾಗಿ ಆದ ಆಯಾಸವೆಲ್ಲಾ ಪರಿಹಾರವಾದಂತೆನಿಸಿತು. ನಂತರ ನೋಡಿದರೆ ಅವುಗಳಲ್ಲೇ ಒಂದು ಫೋಟೋವನ್ನು ಹಲವಾರು ತಿಂಗಳುಗಳ ಕಾಲ ಸ್ಕ್ರೀನ್ ಸೇವರ್ ಆಗಿ ಇಟ್ಟುಕೊಂಡಿದ್ದ. ಅದನ್ನು ನೋಡಿ ನನ್ನ ಸಂತಸ ಇಮ್ಮಡಿಸಿತು.
–ಪದ್ಮಾಆನಂದ್, ಮೈಸೂರು
ಪ್ರಕಟಿಸಿದ “ಸುರಹೊನ್ನೆ” ಗೆ ಧನ್ಯವಾದಗಳು.
ಸಂಡಿಗೆ ಪುರಾಣ ಚೆನ್ನಾಗಿದೆ. ನಿಮ್ಮ ಲೇಖನ ಓದಿ ಅಮ್ಮ ಸಂಡಿಗೆ ಕಾಯಲು ಹೇಳುತ್ತಿದ್ದುದು ನೆನಪಾಯಿತು. ನಾವು ಅರ್ಧ ಒಣಗಿದ ಸಂಡಿಗೆ ಹಾಗೆಯೇ ತಿಂದು ಅಮ್ಮ ನಿಂದು ಬೈಸಿಕೊಳ್ಳುತ್ತಿದ್ದೆವು.
ಧನ್ಯವಾದಗಳು ಮೇಡಂ, ನನ್ನ ಲೇಖನ ನಿಮ್ಮ ನೆನಪುಗಳನ್ನು ಹಸಿರಾಗಿಸಿದ್ದು ಸಂತಸ ತಂದಿತು.
ಸತ್ಯವಾಗಿಯೂ ಸಂಡಿಗೆ ಲೇಖನ ಚೆನ್ನಾಗಿ ಬಂದಿದೆ..ನಮಗೂ ಬಾಲ್ಯ ದ ನೆನಪು ಕಣ್ಮುಂದೆ ಬಂದು ನಿಂತಿತು..ಸಂಡಿಗೆ ಚೂರುಗಳನ್ನು ಚಿತ್ರಾನ್ನಕ್ಕಿರಲಿ ಮಂಡಕ್ಕಿ ಒಗ್ಗರಣೆಗೂ ಹಾಕಿ ತಿನ್ನುವ ಹವ್ಯಾಸ ಇತ್ತು..ಸಂಜೆ ಶಾಲೆಯಿಂದ ಬಂದಾಗ ತಿನ್ನಲು ಏನೂ ಇರದಿದ್ದರೆ ಸಂಡಿಗೆ.. ಡಬ್ಬಕ್ಕೆ ಕೈಹಾಕುತ್ತಿದ್ದೆವು…ಮೇಡಂ..
ಸತ್ಯವಾಗಿಯೂ ನಿಮ್ಮ ಪ್ರತಿಕ್ರಿಯೆ ಸಂತಸ ತಂದಿದೆ ಗೆಳತಿ. ಧನ್ಯವಾದಗಳು.
ತುಂಬಾ ಚೆನ್ನಾಗಿದೆ ಬರಹ. ಬೇಸಿಗೆ ಬಂತೆಂದರೆ ಬಗೆ ಬಗೆಯ ಸಂಡಿಗೆ ಮಾಡಿ ಡಬ್ಬದಲ್ಲಿ ತುಂಬಿಡುವುದೇ ಒಂದು ಸಂಭ್ರಮ
ನಿಮ್ಮ ಪ್ರತಿಕ್ರಿಯೆಯೂ ನನ್ನಲ್ಲಿ ಸಂಭ್ರಮವನ್ನುಂಟು ಮಟಡಿತು, ವಂದನೆಗಳು.
ಸೊಗಸಾಗಿದೆ ಮೇಡಂ, ಹಿಂದೆಲ್ಲಾ ಸಂಡಿಗೆ, ಉಪ್ಪಚ್ಚಿಮೆಣಸಿನಕಾಯಿಗಳೇ
ನಮಗೆ ನಂಚಿಕೊಳ್ಳಲು ಇದ್ದುದು; ಮನೆಯಲ್ಲೇ ಮಾಡಿದುದು.
ಕುಂಬಳಕಾಯಿ ತಿರುಳು ಹಾಕಿದ ಸಂಡಿಗೆ, ಈರುಳ್ಳಿ ಸಂಡಿಗೆ ಹೀಗೆ.
ಪರೋಕ್ಷವಾಗಿ ಇದು ಮನೆಮಂದಿಯ ಸಹನಾಪರೀಕ್ಷೆ; ಜೊತೆಗೆ ಸೈರಣೆ ಕಲಿಕೆ.
ಈಗೆಲ್ಲಿ? ಕುರುಕ್ ತಿಂಡಿಗಳದೇ ಸಾಮ್ರಾಜ್ಯ. ಬಾಯಲ್ಲಿ ನೀರೂರಿಸಿದ ನಿಮಗೆ
ಧನ್ಯವಾದ ಹೇಳಲೋ? ಈಗಿಂದೀಗ ರಾತ್ರಿಯೂಟಕೆ ಬಾಣಲೆಯಿಟ್ಟು ಕರಿಸಿಯೇ
ಸಂಡಿಗೆ ಮೆಲ್ಲುವುದೋ? ಕಸಿವಿಸಿಯಾಗುತಿದೆ. ಏಕೆಂದರೆ ಎಣ್ಣೆ ಪದಾರ್ಥ!
ಬಿಟ್ಟನೆಂದರೂ ಬಿಡದೀ ಮಾಯೆ.
ಧನ್ಯವಾದಗಳು ಸರ್, ನಿಮ್ಮ ಚಂದದ ಪ್ರತಿಕ್ರಿಯೆಗೆ. ಬಿಟ್ಟೆನೆಂದರೂ ಹೇಗೂ ಮಾಯೆ ನಮ್ಮನ್ನಗಲದು, ಹಾಗಾಗಿ ಮಾಯೆಯೊಂದಿಗೇ ಸಂಡಿಗೆ ಮೆಲ್ಲುತ್ತಾ ಇತಿಮಿತಿಯಲ್ಲಿ ಇದ್ದುಬಿಡೋಣ ಸರ್.
ಸಂಡಿಗೆ ಲೇಖನ ಸಖತ್ತಾಗಿದೆ ಪದ್ಮಾ ಮೇಡಂ. ಗರಿಗರಿಯಾದ, ರುಚಿಕರವಾದ ಸಂಡಿಗೆ ಸಮಾರಾಧನೆ ನಮ್ಮೂರಲ್ಲಿ ಬಹಳ ಕಡಿಮೆ. ನಾವು ಅಪರೂಪಕ್ಕೆ ಸಂಡಿಗೆ ಹಾಕುವಾಗ ವಡೆಯಂತೆ ಚಪ್ಪಟೆ ಮಾಡಿ ಹಾಕಿ ಒಣಗಿಸುತ್ತೇವೆ. ಸಂಡಿಗೆಯ ಪೂರ್ಣ ರೂಪದ ಪ್ರವರ ಖುಷಿ ಕೊಟ್ಟಿತು.
ನಿಮ್ಮ ಪ್ರತಿಕ್ರಿಯೆಗಾಗಿ ವಂದನೆಗಳು ಶಂಕರಿ ಮೇಡಂ, ತಮಗೆ ಖುಷಿಯಾದದ್ದು, ನನಗೆ ಸಂತಸ ತಂದಿತು.
ಅಹಾ…ಮನವರಳಿಸಿದ ರುಚಿ ರುಚಿ ಬರಹ….ಸೂಪರ್.
ನಿಮ್ಮ ಚಂದದ ಪ್ರತಿಕ್ರಿಯೆಗೆ ನನ್ನ ಮನವೂ ಅರಳಿತು, ಧನ್ಯವಾದಗಳು.