ಅಪ್ಪನ ಆಪ್ತ ನೆನಪುಗಳು…

Share Button

ಎಲ್ಲಾ ಸಾಹಿತ್ಯಾಭ್ಯಾಸಿಗಳಿಗೂ ತಮ್ಮ ನೆಚ್ಚಿನ ಸಾಹಿತಿ ಮತ್ತು ಕವಿಗಳ ಬಗೆಗೆ ಒಂದು ಆಕರ್ಷಣೆಯಿದ್ದೇ ಇರುತ್ತದೆ. ನಮ್ಮೆದುರು ಒಂದು ಸುಂದರ ಕಲ್ಪನಾಲೋಕವನ್ನು ಕಟ್ಟಿಕೊಡುವ ಈ ಸೃಜನಶೀಲರ ಬದುಕಿನ ಬಗ್ಗೆ ಕುತೂಹಲವಿರುತ್ತದೆ. ಹಲವು ಹತ್ತು ಪರಿಚಿತರ ಬರಹಗಳಿಂದ, ಮಾತುಗಳಿಂದ, ಆಪ್ತಜನಗಳು ಕಟ್ಟಿಕೊಟ್ಟ ವಿವರಗಳಿಂದ, ಎಲ್ಲರ ಅನಿಸಿಕೆಗಳನ್ನೂ ನಮ್ಮಲ್ಲೇ ಮಥಿಸಿ ಕವಿಯ / ಸಾಹಿತಿಯ ಒಂದು ವ್ಯಕ್ತಿತ್ವವನ್ನು ನಮ್ಮಲ್ಲಿ ಮೂಡಿಸಿಕೊಳ್ಳುವುದಾಗುತ್ತದೆ.

ಅ ನ ಕೃ ಜೀವನ ಚರಿತ್ರೆಯನ್ನು ಬರೆಯುವ ಮುನ್ನ ತ ರಾ ಸು ʻಹಲವು ವರ್ಷ ಅ ನ ಕೃ ಜೊತೆಗೇ ವಾಸಿಸುತ್ತಿದ್ದುದರಿಂದ ಅವರ ಹಲವು ಮುಖಗಳನ್ನು ಅಭ್ಯಾಸಮಾಡಲು ಸಾಧ್ಯವಾಯಿತುʼ ಎಂದು ಹೇಳಿಕೊಂಡಿದ್ದಾರೆ. ಅಂತೆಯೇ ತ ರಾ ಸು ಬಗ್ಗೆ ಬರೆಯಲು ಬಂದ ನಾ. ಪ್ರಭಾಕರರನ್ನು ತ ರಾ ಸು ವರ್ಷಗಳ ಕಾಲ ತಮ್ಮೊಂದಿಗೇ ಇರಿಸಿಕೊಂಡಿದ್ದರು. ಬೇರೆಯವರೊಬ್ಬರು ಬರೆಯುವಾಗ ಈ ಕ್ರಮ ಅಪೇಕ್ಷಣೀಯ. ಆದರೆ ಇಂದು ನಮ್ಮ ಕಣ್ಣೆದುರಿರುವ “ನನ್ನ ಅಪ್ಪ ಕೆ ಎಸ್‌ ನ” ಗ್ರಂಥವನ್ನು ರಚಿಸಿರುವವರು ಹುಟ್ಟಿದಾಗಿನಿಂದಲೂ ಅವರನ್ನು ಅಪ್ಪನಾಗಿ ನೋಡಿರುವ ಶ್ರೀಯುತ ಕೆ. ಎನ್. ಮಹಾಬಲ. ತಮ್ಮ ಬಹುಪಾಲು ಜೀವನವನ್ನು ಅಪ್ಪನೊಂದಿಗೆ ಕಳೆದಿರುವ ಮಹಾಬಲರ ಅನುಭವಗಳು ʻಸತ್ಯಕ್ಕೆ ಸನಿಹವಾದುದುʼ ಅಲ್ಲ ʻಸತ್ಯವೇ ಆಗಿದೆʼ.

ಕೃತಿಯಲ್ಲಿ ಕೆ ಎಸ್ ನ ಅವರ ಬದುಕಿನ ರೀತಿ, ಬವಣೆ, ಧೋರಣೆ, ಮುಗ್ಧತೆ, ಕಾವ್ಯ ಯಾನ, ಜಗತ್ತಿನ ಇತರರೊಂದಿಗಿನ ಅವರ ಭಾವಾನುಬಂಧಗಳು ಎಲ್ಲವೂ ಸಹಜವಾಗಿ ದಾಖಲಾಗಿವೆ. ಅವರ ಸನಿಹಕ್ಕೆ ಬಂದ ಅವರ ಆಪ್ತವಲಯ ಅವರನ್ನು ಕಂಡಿರುವುದು, ಗುರುತಿಸಿರುವುದು ಹೇಗೆಂಬ ವಿವರಗಳಿವೆ. ಅವರೆಲ್ಲರೊಂದಿಗೆ ಕೆ ಎಸ್ ನ ಅವರ ಸಾಂಗತ್ಯ ಹೇಗಿತ್ತು ಎನ್ನುವ ಆಪ್ತವಾದ ವಿವರಗಳಿವೆ. “ನೊಂದ ಹಾಡನ್ನಷ್ಟೇ ಹಾಡಬೇಕೇನು ಬೇಡವೇ ಯಾರಿಗೂ ಸಿರಿಮಲ್ಲಿಗೆ” ಎನ್ನುವ ಅವರ ಕಾವ್ಯ ಧೋರಣೆಯಂತೆ ಇಲ್ಲಿ ಜಗತ್ತಿನೆಲ್ಲದರಲ್ಲಿ, ಎಲ್ಲರಲ್ಲಿ ಕೆ ಎಸ್ ನ ಅವರು ಕಂಡಿರುವ ಜೀವನ ಪ್ರೀತಿ, ಸತ್ಯಗಳು ದಾಖಲಾಗಿವೆ. ಒಬ್ಬ ಮಹಾನ್ ಕವಿಯ ಜೀವನಾವಲೋಕನಕ್ಕೆ ತಕ್ಕ ನ್ಯಾಯ ಸಂದಿದೆ.

ʻಮೈಸೂರು ಮಲ್ಲಿಗೆʼಯ ಬಿಡುಗಡೆಯಂದು ಶ್ರೀಯುತರುಗಳಾದ ಎ. ಆರ್. ಕೃಷ್ಣಶಾಸ್ತ್ರಿಗಳ ಕಾಳಜಿ, ತೀ ನಂ ಶ್ರೀಯವರ ಮತ್ತು ಟಿ ಎಸ್ ವೆಂಕಣ್ಣಯ್ಯನವರ ಬೆಂಬಲ, ಡಿ ವಿ ಜಿ ಯವರ ಮೌಲಿಕ ಮುನ್ನುಡಿ, ಮಾಸ್ತಿಯವರ ಮಮತೆಯ ಆಶೀರ್ವಾದ – ಎಲ್ಲವುಗಳ ವಿವರಗಳು ಆ ಕೃತಿ ಜಗಮನ್ನಣೆಯನ್ನು ಪಡೆಯುವುದೆಂಬ ಭವಿಷ್ಯಕ್ಕೆ ಬರೆದ ಜಾತಕದಂತಿದೆ. ಜಿ ವಿ ಯವರ ಹಕ್ಕೊತ್ತಾಯದ ಬೆಂಬಲ, ಹಲವು ಪುಸ್ತಕಗಳನ್ನು ಮಾರಿಕೊಟ್ಟ ಸುಮತೀಂದ್ರ ನಾಡಿಗರ ಸಹಾಯದಿಂದ ಕವಿಯ ಕಾವ್ಯಯಾನ ಮುಂದುವರೆದ ವಿಷಯ ಇಲ್ಲಿ ದಾಖಲಾಗಿದೆ. ಚಾಮರಾಜಪೇಟೆಯ ಥ್ರೀ ಮಸ್ಕಟಿಯರ‍್ಸ್ ಎಂದು ಹೆಸರಾಗಿದ್ದ ಕೆ ಎಸ್ ನ, ವಿ ಸೀ ಹಾಗೂ ಮೋಟಗಾನಹಳ್ಳಿ ಸುಬ್ರಹ್ಮಣ್ಯ ಶಾಸ್ತ್ರಿಗಳ ವಾಕಿಂಗ್ನ ವಿನೋದ ಖುಷಿ ತರುತ್ತದೆ. ಪು ತಿ ನ, ಗೊರೂರು ಮತ್ತು ಬಾಕಿನ ಅವರೊಂದಿಗಿನ ಕವಿಯ ಸಖ್ಯ ಹಿತಾನುಭವವನ್ನು ನೀಡುತ್ತದೆ.

ಬೇಂದ್ರೆಯವರು ಕೆ ಎಸ್ ನ ಅವರ ಮನೆಗೆ ಆಗಮಿಸಿದ್ದ ಪ್ರಸಂಗವಂತೂ ಅಂದು ಅವರ ಮನೆಯಲ್ಲಿ ಮಾಡಿದ್ದ ಹೀರೆಕಾಯಿ ಬೋಂಡದಷ್ಟೇ ರುಚಿಕರವಾಗಿದೆ. ಅಡಿಗರ ಮತ್ತು ಕೆ ಎಸ್ ನ ಅವರ “ಒಂದಿಷ್ಟು ಸಮರ, ಕಲಹ ಮತ್ತಷ್ಟು ಪ್ರೀತಿ, ಸ್ನೇಹ” ಪ್ರಸಂಗಗಳು ಆಪ್ತವಾಗುತ್ತವೆ. ಅಂತೆಯೇ ಅಂದು ಎಂಥದೇ ಭಿನ್ನಾಭಿಪ್ರಾಯವಿದ್ದರೂ ಅದು ಪರಸ್ಪರರ ವಿಶ್ವಾಸಕ್ಕೆ, ಅಭಿಮಾನಕ್ಕೆ ಕುಂದು ತರುತ್ತಿರಲಿಲ್ಲವೆನ್ನುವ ವಿಷಯ ವೇದ್ಯವಾಗುತ್ತದೆ. ಕೆ ಎಸ್ ನ ಅಭಿನಂದನಾ ಗ್ರಂಥ ʻಚಂದನʼ ದ ಸಂಪಾದಕರಾಗಿದ್ದ ಜಿ ಎಸ್ ಎಸ್ ಅವರೊಂದಿಗಿದ್ದ ಬಾಂಧವ್ಯ ಹೆಸರಿಸುವಂಥದು. ಪ್ರೀತಿಯನ್ನೇ ಜೀವನಸಾರವಾಗಿ ಮಾಡಿಕೊಂಡಿದ್ದ ನಿಸಾರರೊಂದಿಗಿನ ಕವಿಯ ಸ್ನೇಹ ಸಂಬಂಧದ ವಿವರಣೆ ಮನಮುಟ್ಟುವಂತಿದೆ. ಎಚ್ ಎಸ್ ವಿ ಯವರು ಕೆ ಎಸ್ ನ ಅವರೊಂದಿಗೆ ಇರಿಸಿಕೊಂಡಿದ್ದ ಗೌರವಾದರಗಳು ಅನುಸರಣೀಯ. ಕೆ ಎಸ್ ನ ಅವರ ಸಮಗ್ರ ಕಾವ್ಯ ತರುವಾಗಿನ ಬಾ ಕಿ ನ ಅವರ ಶ್ರಮ, ಪ್ರೀತಿ, ನಿಷ್ಠೆ ಉಲ್ಲೇಖನೀಯ.

ಕಣ್ಣಿನ ದೃಷ್ಟಿ ಮಂದವಾಗಿ ಬರೆಯುವುದನ್ನೇ ನಿಲ್ಲಿಸಿಬಿಡಬೇಕೆಂಬ ತೀರ‍್ಮಾನಕ್ಕೆ ಬಂದಿದ್ದಾಗ ಅವರ ಕಣ್ಣು, ಕೈಯಾದ ಕುಮಾರ್ (ಎಂ ವಿ ವೆಂಕಟೇಶಮೂರ್ತಿ) ಅವರ ಸ್ನೇಹಭರಿತ ಸಹಾಯಹಸ್ತವನ್ನು ಕನ್ನಡಿಗರೆಲ್ಲರೂ ನೆನಪಿನಲ್ಲಿಡಬೇಕಾದದ್ದು. ಕವಿಯ ಸುಮಧುರ ಭಾವಗೀತೆಗಳನ್ನು ಕ್ಯಾಸೆಟ್ಟಿನಲ್ಲಿ ದಾಖಲಾಗಿಸುವಲ್ಲಿ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಶ್ರಮ ಉಲ್ಲೇಖನೀಯ. ಪೊಲೀಸ್ ಕಮೀಶನರ್ ನಿಜಾಮುದ್ದೀನ್ ಅವರು ಜೈಲಿನಲ್ಲಿ ಕವಿಗೋಷ್ಠಿ ನಡೆಸಿದ ಪ್ರಸಂಗ ಮುಖದಲ್ಲಿ ಮುಗುಳ್ನಗು ತರದೇ ಇರದು. ಅಂತೆಯೇ ಜಿ ಪಿ ರಾಜರತ್ನಂ ಅವರ ಗೌರವಭರಿತ ಸ್ನೇಹ ಭಾವ, ಅವರ ಮತ್ತು ಕೆ. ಎಸ್. ನ. ಅವರ ಚಪ್ಪಲಿಗಳು ಬದಲಾದ ಪ್ರಸಂಗವೂ ಮುದ ನೀಡುತ್ತದೆ. ವ್ಯಾಸರಾವ್ ಅವರ ನಿರ್ಮಲ ಸ್ನೇಹ, ಎಲ್ ಎಸ್ ಶೇಷಗಿರಿ ರಾವ್ ಅವರ ಸಹೃದಯ ಬಾಂಧವ್ಯ ಇವುಗಳು ಸೊಗಸಾಗಿ ಮೂಡಿವೆ. ಅಕ್ಕಿಹೆಬ್ಬಾಳು ನರಸಿಂಹನೇ ಮನೆದೇವರಾಗಿರುವ ಕೆ ಎಸ್ ನ ಮತ್ತು ಅ ರಾ ಮಿತ್ರರವರ ಸ್ನೇಹ ದೈವಿಕವಾದದ್ದು. ಒಬ್ಬರ ಮನೆಯಲ್ಲೊಬ್ಬರು ಉಳಿದುಕೊಳ್ಳುವಂತಹ ಬಾಂಧವ್ಯ ಅವರದ್ದು. ಭಾರತಕ್ಕೆ ಬಂದಾಗಲೆಲ್ಲಾ ಭೇಟಿಯಾಗುತ್ತಿದ್ದ ಎ ಕೆ ರಾಮಾನುಜಮ್ ಅವರು ತೋರುತ್ತಿದ್ದ ಕಾವ್ಯ ಪ್ರೀತಿ ಇಲ್ಲಿ ದಾಖಲಾಗಿದೆ. ಎಚ್ಚೆಸ್ಕೆಯವರ ಮನೆಯ ಭೇಟಿ ಅಪರೂಪದ್ದಾಗಿದೆ.

ಮ್ಯಾಗ್ಸೇಸೆ, ಪದ್ಮಶ್ರೀ ಪ್ರಶಸ್ತಿ ವಿಜೇತ ಕೆ ವಿ ಸುಬ್ಬಣ್ಣ ಮತ್ತು ಕೆ ಎಸ್ ನ ಅವರದ್ದು ಕಡೆಯತನಕ ಜೊತೆಗಿದ್ದ ಅಪರೂಪದ ಕೈನಡಿಗೆಯ ಬೆತ್ತದ ಬಾಂಧವ್ಯ. ಕೆ ಎಸ್ ನ ಅದರಲ್ಲೇ ಮಿತ್ರನ ಪ್ರತಿರೂಪವನ್ನು ಕಾಣುತ್ತಿದ್ದರೇನೋ! ವಶೀಲುಬಾಜಿ, ಕಾರ್ಯಸಾಧಕತನಕ್ಕೆ ಸದಾ ದೂರವಾಗಿದ್ದ ಕೆ ಎಸ್ ನ ಅವರಿಗೆ ಒತ್ತಾಯಪೂರ್ವಕವಾಗಿ ಬೆಂಗಳೂರಲ್ಲೊಂದು ನಿವೇಶನ ದೊರಕಿಸಿಕೊಡುವುದಕ್ಕೆ ಕಾರಣಕರ್ತರಾದವರು ಶಿವಮೊಗ್ಗ ಸುಬ್ಬಣ್ಣ. ಮೈಸೂರು ಮಲ್ಲಿಗೆ ಕ್ಯಾಸೆಟ್ ಮತ್ತು ಚಲನಚಿತ್ರವಾಗುವಲ್ಲಿ ದುಡಿದವರು ಸಿ ಅಶ್ವಥ್. ಸಹಪಾಠಿಯಾಗಿದ್ದು ಕಡೆಯತನಕ ಸ್ನೇಹಿತರಾಗಿದ್ದವರು ಪ್ರಖ್ಯಾತ ಗಮಕಿ ರಾಘವೇಂದ್ರರಾಯರು.

ಡಾ. ರಾಜ್ ಕುಮಾರ್ ಅವರ ಸಂಪರ್ಕ ಮತ್ತು ಮನೆಗೆ ನೀಡಿದ ಭೇಟಿಯ ವಿವರಗಳು ಆತ್ಮೀಯವಾಗಿವೆ. ರಾಜ್ ಕುಮಾರ್ ತಮ್ಮನ್ನು ಕೆ ಎಸ್ ನ ಅವರ ಮನೆಮಗ ಎಂದು ಕರೆದುಕೊಂಡಿರುವುದು ಉಲ್ಲೇಖನೀಯ. ʻದೇವ ನಿನ್ನ ಮಾಯೆಗಂಜಿ ನಡುಗಿ ಬಾಳೆನುʼ ಎಂದು ಅಸ್ತಿತ್ವವಾದಕ್ಕೆ ಸವಾಲು ಹಾಕಿದ ಕವಿ ಪೇಜಾವರ ಸ್ವಾಮಿಗಳ ಆತಿಥ್ಯಕ್ಕೆ, ವಿದ್ವಜ್ಜನ ಪ್ರೀತಿಗೆ ತಲೆಬಾಗುತ್ತಿದ್ದರು. ಹಿರಿಯ ಕವಿಗೆ ಹಿತೈಷಿಗಳು ಹಲವರು. ಇವರಲ್ಲಿ ಮುಖ್ಯರಾದವರು ಕವಿ ಬಿ ಆರ್ ಲಕ್ಷ್ಮಣ ರಾವ್, ಹಿ ಮ ನಾಗಯ್ಯ, ಕೇಶವ ಮೂರ್ತಿ, ವೈ ಕೆ ಮುದ್ದುಕೃಷ್ಣ ಮುಂತಾದವರು. ವೈ ಕೆ ಮುದ್ದುಕೃಷ್ಣರವರು ಸರ್ಕಾರವು ಕವಿಯ ಆಸ್ಪತ್ರೆಯ ವೆಚ್ಚ ಭರಿಸುವಂತೆ ಮಾಡಿ, ಅವರಿಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಯುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದವರು. ಕೆಲವು ಅಪರಿಚಿತ ಆಕಸ್ಮಿಕ ಸ್ನೇಹಗಳ ಬಗ್ಗೆಯೂ ಇಲ್ಲಿ ಪ್ರಸ್ತಾಪವಿದೆ.

ಅಜ್ಜಿಯ ಊರು ಹೊಸಹೊಳಲು ಗ್ರಾಮದಲ್ಲಿ ಹುಟ್ಟಿದರೂ ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿಯಾಗಿ ಮಂಡ್ಯ ಜಿಲ್ಲೆಯ ಜನಮನದಲ್ಲಿ ಪ್ರಖ್ಯಾತರಾಗಿ ನೆಲೆಯಾಗಿ ನಿಂತವರು ಕೆ ಎಸ್ ನ. ಜನವರಿ 26ರಂದು ಹುಟ್ಟಿದ ಅವರ ಹುಟ್ಟುಹಬ್ಬವನ್ನು ಇಡೀ ಭಾರತದ ಜನತೆ ಗಣತಂತ್ರದ ಹಬ್ಬದ ರೀತಿಯಲ್ಲಿ ಆಚರಿಸುವಂತಾಗಿದೆ. ಅವರದ್ದು ಮಡದಿ ವೆಂಕಮ್ಮನವರೊಂದಿಗೆ ತೃಪ್ತಿಕರ ಸಾಂಸಾರಿಕ ಜೀವನ. ನೆಂಟರಿಷ್ಟರಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದವರು. ಅವರ ಜೀವನ ಧೋರಣೆ, ಹಲವು ಸಿಹಿ ಕಹಿ ನೆನಪುಗಳು, ಪ್ರಶಸ್ತಿಗಳ ಹಿಂದೆ ಬೀಳದ ಅವರ ಸ್ವಾಭಿಮಾನಿ ವ್ಯಕ್ತಿತ್ವ, ತಾನಾಗಿಯೇ ಅರಸಿಕೊಂಡು ಬಂದ ಪ್ರಶಸ್ತಿ-ಪುರಸ್ಕಾರಗಳು, ಜೀವನದಲ್ಲಿ ಎದುರಿಸಿದ ಕಷ್ಟ-ನಷ್ಟಗಳು ಇವೆಲ್ಲವೂ ಈ ಕೃತಿಯಲ್ಲಿ ಸಾಂದರ್ಭಿಕವಾಗಿ ಬಂದಿವೆ. ಕವಿಯ ಕುಟುಂಬ ಸದಸ್ಯರ ವಿವರಗಳಿವೆ. ಬೋನಸ್ ಓದಿಗೆ ನೀಡಿರುವ ಕವಿಯ ಸಂದರ್ಶನದಲ್ಲಿ ಅವರ ನಿಲುವುಗಳ ದರ್ಶನವಿದೆ. ಅವರ ನಿಧನಾನಂತರ ʻಮೈಸೂರು ಮಲ್ಲಿಗೆʼ ಎಂದು ಇಂದು ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿರುವ ನಾಟಕದಲ್ಲಿರುವುದು ದೋಷಪೂರಿತವಾದ ಅವರ ತಿರುಚಿದ ಜೀವನಗಾಥೆಯ ಕತೆ ಎನ್ನುವ ಸತ್ಯ ಕೋಪವನ್ನು, ವಿಷಾದವನ್ನು ಹುಟ್ಟಿಸುತ್ತದೆ.

ಕೆ ಎನ್ ಮಹಾಬಲ ಅವರದ್ದು ಹದವರಿದ ಬರವಣಿಗೆ. ಸೂಕ್ಷ್ಮ ವಿಷಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಾರೆ. ಓದುಗನಿಗೆ ಎಲ್ಲೂ ಅತಿರಂಜನೆಯಾಗಲೀ, ಅತಿರೇಕವಾಗಲೀ ಇಲ್ಲದೆ ಕವಿಯ ಮನೆಯಲ್ಲೇ ಕುಳಿತು ವೆಂಕಮ್ಮನವರ ಆತಿಥ್ಯವನ್ನು ಸವಿಯುತ್ತಾ ಮನೆಯ ಕಷ್ಟ ಸುಖಗಳನ್ನು ಮಾತನಾಡಿಕೊಳ್ಳುತ್ತಿರುವಂತಿದೆ. ಮಗನೆನ್ನುವ ಅತಿ ಪ್ರೀತಿಯನ್ನು ತೋರದೆ, ಅತಿ ವಸ್ತುನಿಷ್ಠವಾಗಿದ್ದು ದೂರನಿಲ್ಲದೆ ಇಡೀ ಓದು ಆತ್ಮೀಯವಾಗುವಂತೆ ನೋಡಿಕೊಂಡಿದ್ದಾರೆ. ಹೀಗೆ ತಮ್ಮ ಸಂಬಂಧಿಕರ ಬಗ್ಗೆ, ಅಪ್ಪ-ಅಮ್ಮರ ಬಗ್ಗೆ ಈಗಾಗಲೇ ಬಂದಿರುವ ಹಲವು ಕೃತಿಗಳ ಸಾಲಿನಲ್ಲಿ ಈ ಹೊತ್ತಗೆ ವಿಶಿಷ್ಟವಾಗಿ ತೋರುತ್ತದೆ. ನಮ್ಮ ʻಸಸಕಸ ವಾಟ್ಸಾಪ್ʼ ಗುಂಪಿನಲ್ಲಿ ಬಿಡಿಬಿಡಿಯಾಗಿ ಇದರ ಹಲವು ಲೇಖನಗಳನ್ನು ಓದಿದ್ದರೂ, ಒಟ್ಟಾಗಿ ಓದಿ ಆನಂದಿಸುವ ಅನುಭವವೇ ಬೇರೆಯದ್ದು. ಪ್ರತಿ ಅಧ್ಯಾಯಕ್ಕೂ ಬಳಸಿರುವ ಕೆ ಎಸ್ ನ ಅವರ ರೇಖಾಚಿತ್ರಗಳು ಆಕರ್ಷಕವಾಗಿವೆ. ಇದು ಬಹುರೂಪಿ ಪ್ರಕಾಶನದ ಹೆಮ್ಮೆಯ ಪ್ರಕಟಣೆಯೆನ್ನುವುದರಲ್ಲಿ ಸಂದೇಹವೇ ಇಲ್ಲ.

ಟಿ. ಎಸ್.‌ ಶ್ರವಣ ಕುಮಾರಿ.

17 Responses

  1. ಮಹಾಬಲ says:

    ಧನ್ಯವಾದ.ನನ್ನ ಈ ಲೇಖನಗಳು ಕವಿನೆನಪು ಹೆಸರಿನಲ್ಲಿ ಸುರಹೊನ್ನೆಯಲ್ಲೂ ಧಾರಾವಾಹಿಯಾಗಿ ಪ್ರಕಟವಾದದ್ದನ್ನು ಕೃತಜ್ಞತೆಯಿಂದ ನೆನೆಯುತ್ತೇನೆ

  2. Shravanakumari TS says:

    ಪ್ರಕಟಿಸಿದ್ದಕ್ಕೆ ಧನ್ಯವಾದಗಳು

    • Anonymous says:

      ಬಹಳ ಚೆನ್ನಾಗಿ ಪುಸ್ತಕ ಪರಿಚಯ ಮಾಡಿದ್ದೀರಿ. ಕೊಂಡು ಓದಲು ಪ್ರೇರೇಪಿಸುವ ಲೇಖನ. ಧನ್ಯವಾದಗಳು ಶ್ರವಣಕುಮಾರಿಯವರೇ.

  3. ರಂಗನಾಥ says:

    ಮಲ್ಲಿಗೆಯಷ್ಟೇ ಕೋಮಲ ಆದರೆ ಮರೆಯಲಾಗದ ಸುಗಂಧದ ಮಲ್ಲಿಗೆ ಕವಿಯ ಸರಳ ಬದುಕಿನ ಚಿತ್ರಣವನ್ನು ಅವರ ಪುತ್ರ ಮಹಾಬಲ ಈ ಕೃತಿಯ ಮೂಲಕ ಕಟ್ಟಿ ಕೊಟ್ಟಿರುವುದನ್ನೂ ,ಈ ಪುಸ್ತಕದ ಒಟ್ಟಾರೆ ಓದು ನೀಡುವ ಸುಖವನ್ನೂ ತಿಳಿಸಿದ್ದೀರಿ.ವಂದನೆಗಳು

  4. Anonymous says:

    ಓದಬೇಕೆನಿಸುವ ಕೃತಿ ಪರಿಚಯ

  5. Anasuya M R says:

    ಓದಬೇಕೆನಿಸುವ ಕೃತಿ ಪರಿಚಯ

  6. Raghuramu N.V. says:

    ತುಂಬ ಆಪ್ತವಾದ ಬರಹ.

  7. ಜಗನ್ನಾಥ says:

    ತುಂಬಾ ಉತ್ತಮ ಬರಹ. ಇಷ್ಟು ಪುಸ್ತಕದ ಅಣು ಅಣುಗಳನ್ನು ಹೊಕ್ಕು ಭಾವನಾತ್ಮಕವಾಗಿ ಬರದಿರುವ ಪರಿಚಯ.

  8. Anonymous says:

    ಒಳ್ಳೆಯ ಒಂದು ಪರಿಚಯ ಸೊಗಸಾಗಿ ಮೂಡಿಬಂದಿದೆ.

  9. ಪುಸ್ತಕ ಪರಿಚಯ ಸೊಗಸಾಗಿ ಬಂದಿದೆ..ಬಿಡಿಬಿಡಿಯಾದ ಲೇಖನ ಗಳನ್ನು ನಾನು ಸುರಹೊನ್ನೆಯಲ್ಲಿ ಓದಿ ದ ನೆನಪು.. ವಂದನೆಗಳು ಮೇಡಂ

  10. ಪದ್ಮಾ ಆನಂದ್ says:

    ಕನ್ನಡದ ಶ್ರೇಷ್ಠ ಕವಿಯ ಕುರಿತಾಗಿ ಅವರ ಮಗನಿಂದಲೇ ರಚಿತವಾಗಿರುವ ವಿಶಿಷ್ಟ ಹೊತ್ತಿಗೆಯ ಕೃತಿ ಪರಿಚಯ ಆಪ್ತವಾಗಿ ಮೂಡಿ ಬಂದಿದೆ.

  11. ನಯನ ಬಜಕೂಡ್ಲು says:

    ಚೆನ್ನಾಗಿದೆ ಕೃತಿ ಪರಿಚಯ

  12. Anonymous says:

    ಪುಸ್ತಕ ಪರಿಚಯ ಬಹಳ ಚೆನ್ನಾಗಿದೆ. ಪುಸ್ತಕ ಓದುವ ಕುತೂಹಲ ಮೂಡಿಸಿದೆ. ಧನ್ಯವಾದಗಳು

  13. ಶಂಕರಿ ಶರ್ಮ says:

    ಹಿರಿಯ ಸಾಹಿತಿಯೊಬ್ಬರ ಪುತ್ರ ತನ್ನ ತಂದೆಯ ಬಗ್ಗೆ ಬರೆದ ಲೇಖನಮಾಲೆಯನ್ನು ಓದಿದ ನೆನಪನ್ನು ಹಸಿರಾಗಿಸುವಂತೆ ಮೂಡಿಬಂದ ಪುಸ್ತಕ ವಿಮರ್ಶೆಯು ಚೆನ್ನಾಗಿದೆ.

  14. ಸುಂದರ ಪುಸ್ತಕ ಪರಿಚಯ.

  15. MANJURAJ H N says:

    ಆಹಾ ! ನನ್ನಿಷ್ಟದ ಕೆಎಸ್‌ನ ಕುರಿತು ಅವರ ಪುತ್ರರ ಪುಸ್ತಕ.
    ಆನಂದವಾಯಿತು. ಕವಿಯ ಸೊಸೆ ಶ್ರೀಮತಿ ಶ್ರೀಲಕ್ಷ್ಮಿಯವರೊಂದಿಗೆ
    ನಾನು ಸ್ವಲ್ಪ ಕಾಲ ಸಹೋದ್ಯೋಗಿಯಾಗಿದ್ದೆ. ಆಗ ಕೇಳಿದ ಅನುಭವದ
    ಮಾತುಗಳು ನೆನಪಾದವು. ಪರಿಚಯ ಸೊಗಸಾಗಿದೆ. ಧನ್ಯವಾದ ಮೇಡಂ

  16. K.R.Umadevi urala says:

    ಒಳ್ಳೆಯ ಕೃತಿ ಪರಿಚಯ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: