ಅತ್ರಿಪುತ್ರ ದೂರ್ವಾಸ ಮಹರ್ಷಿ
ರಾಮಾಯಣ, ಮಹಾಭಾರತ, ಭಾಗವತಗಳಲ್ಲಿ ಬರುವ ಪಾತ್ರಗಳು ನಮಗೆ ಮಹತ್ತರ ಆಶ್ವಾಸನೆ ನೀಡುತ್ತವೆ. ನಮ್ಮ ಮನದೊಳಗೆ ಬಿಂದುವಾಗಿದ್ದ ಬುದ್ಧಿಯನ್ನು ಊದಿ ಊದಿ ಸಿಂಧುವಾಗಿಸುವ ಶಕ್ತಿ ಅವುಗಳಿಗಿದೆ. ಆದರೆ ಅವುಗಳನ್ನು ಉಪಯೋಗಿಸಿ ಕೊಳ್ಳುವ ತಾಕತ್ತು ನಮಗಿರಬೇಕು. ಎಷ್ಟೊಂದು ಸದ್ವಿಚಾರಗಳು! ಏನೆಲ್ಲ ನೀತಿಗಳು! ತರತರದಲ್ಲಿ ತತ್ವಗಳು! ಅವುಗಳನ್ನು ಮನನ ಮಾಡುವ ಮನಸ್ಸು ನಮಗಿರಬೇಕು!
ಒಬ್ಬಳು ತಾಯಿ ತನ್ನ ಮಗಳಿಗೆ ಅಡಿಗೆ ಮಾಡಲು ಕಲಿಸುವಾಗ ಬೆಂಕಿ ಉರಿಸಿ ಬೇಯಿಸುವ ಬಗೆಯನ್ನು ಮಾತ್ರ ಕಲಿಸಿದರೆ ಸಾಲದು, ಜಾಗರೂಕತೆ ತಪ್ಪಿದಲ್ಲಿ ಅಗ್ನಿಯಿಂದಾಗುವ ಅಪಾಯ, ಅನಾಹುತಗಳನ್ನೂ ತಿಳಿಹೇಳಬೇಕು. ಈ ರೀತಿ ಸರಿಯಾದ ಮಾರ್ಗದರ್ಶನ ಕೊಡದಿದ್ದಲ್ಲಿ ಕಲಿಕೆ ಅಪೂರ್ಣವಾಗದು. ಅಂತೆಯೇ ರಾಮಾಯಣದಲ್ಲಿ ರಾವಣನು ಸೀತಾದೇವಿಯನ್ನು ಅಪಹರಿಸಿ ಕೊಂಡೊಯ್ಯುವಷ್ಟೇ ಕತೆ ಓದಿದರೆ ಸಾಲದು. ಕೊನೆಗೆ ಆ ರಾವಣನಿಗೆ ಆತನ ತಪ್ಪಿಗೆ ತಕ್ಕ ಶಾಸ್ತಿ ಏನಾಯಿತು? ಎಂಬುದನ್ನೂ ತಿಳಿಯಬೇಕು. ಮಹಾಭಾರತದ ಶಕುನಿ, ದುರ್ಯೋಧನರ ಕುತಂತ್ರದ ಪಗಡೆಯಾಟದ ಗೆಲುವು ಸರಿಯಾದ ಗೆಲುವೇ? ಕೊನೆಗೆ ಅಂತಹವರಿಗೆ ಏನಾಯ್ತು ಎಂಬುದಕ್ಕೆ ಕಥೆಯನ್ನು ಆ ಮೂಲಾಗ್ರ ತಿಳಿದಿರಬೇಕಲ್ಲವೇ!
ರುದ್ರಮಂತ್ರದಲ್ಲಿ ‘ತಸ್ಕರಾಣಾಂ ಪತಯೇ ನಮಃ’ ಎಂದಿದೆ. ಅಂದರೆ ಕಳ್ಳನಿಗೆ,ಕಳ್ಳನ ಒಡೆಯನಿಗೆ ನಮಸ್ಕಾರ ಎಂಬರ್ಥ. ಇಲ್ಲಿ ಕಳ್ಳತನಲ್ಲಿರುವ ಒಳ್ಳೆಯ ಗುಣಕ್ಕೆ, ಅವನಾತ್ಮಕ್ಕೆ ನಮಸ್ಕಾರ ಎಂಬುದೇ ತಿರುಳು. ಜನನಕ್ಕೆ ಬರುವಾಗ ಯಾರೂ ಕಳ್ಳರೂ ಅಲ್ಲ, ಕೆಟ್ಟವರೂ ಅಲ್ಲ! ಕೆಲವೊಂದು ಪರಿಸ್ಥಿತಿಯಿಂದಲಾಗಿ ಅವರು ಆ ರೀತಿ ಮಾರ್ಪಾಡು ಹೊಂದುತ್ತಾರೆ.
ಕೋಪವೆಂಬುದು ತಾನು ಪಾಪದಾ ನೆಲೆಗಟ್ಟು ಕೋಪಿ ತಾ ಇಳಿವ ಕೋಪಕ್ಕೆ! ಎಂದು ಸರ್ವಜ್ಞ ತನ್ನ ವಚನದಲ್ಲಿ ಹೇಳಿದ್ದಾನೆ. ಮುಂಗೋಪ ಮನುಷ್ಯನಿಗೆ ಇರಬಾರದು ಎಂದು ಹತ್ತು ಹಲವು ಬಗೆಯಲ್ಲಿ ಸನಾತನದಿಂದಲೇ ಹೇಳುತ್ತ ಬಂದಿದ್ದಾರೆ.ಪುರಾಣಗಳಲ್ಲಿ ದುಷ್ಟರ, ಕೋಪಿಷ್ಠರ ಪಾತ್ರಗಳು ಬಂದರೆ ಅವುಗಳನ್ನು ಆಳವಾಗಿ ಚಿಂತಿಸಬೇಕು. ಕೋಪಿಷ್ಠರೆಂದು ತೋರಿದವರ ಪಾತ್ರಗಳಿಂದ ನಾವು ಕಲಿಯುವುದು ಬಹಳಷ್ಟಿದೆ.
‘ವಿಶ್ವಾಮಿತ್ರ’ ಮಹರ್ಷಿ ಹಾಗೂ ‘ದೂರ್ವಾಸ’ ಮಹರ್ಷಿಗಳ ಹೆಸರು ಕೇಳಿದೊಡನೆಅವರ ಮುಂಗೋಪ ಸ್ಮರಣೆಗೆ ಬಾರದಿರದು. ವಿಶ್ವಾಮಿತ್ರ ಋಷಿಯ ಬಗ್ಗೆ ಈ ಅಂಕಣದಲ್ಲಿ ಹಿಂದೆ ಬರೆದಿದ್ದೆ. ಈಗ ದೂರ್ವಾಸರ ಕುರಿತಾಗಿ ಚಿಂತಿಸೋಣ. ಕೋಪ ಹೆಚ್ಚಾದವರನ್ನು ದೂರ್ವಾಸರ ವಂಶದವನು ಎಂದು ಹೋಲಿಕೆ ಹೇಳಿ ಮಾತಾಡುವುದನ್ನು ಕೇಳಿದ್ದೇವೆ. ಮುಂಗೋಪ ಸಲ್ಲದು ಎಂಬುದಕ್ಕೆ ವ್ಯಾಸ ಮಹರ್ಷಿಯು ದೂರ್ವಾಸ ಕಥೆಯ ಮೂಲಕ ಎಚ್ಚರಿಸುತ್ತಾನೆ. ಅಂತೆಯೇ ದೂರ್ವಾಸರಿಂದ ಹಲವಾರು ಸತ್ಕಾರ್ಯಗಳೂ ಒದಗಿ ಬಂದಿವೆ.
‘ಅತ್ರಿ’ ಮಹರ್ಷಿ ಹಾಗೂ ಅನುಸೂಯ ದಂಪತಿಗಳ ಪುತ್ರನೇ ‘ದೂರ್ವಾಸ’. ಈತನು ಶಿವನ ಅಂಶದಿಂದ ಜನಿಸಿದನು ಎಂದು ಹೇಳಲಾಗುತ್ತದೆ. ದತ್ತಾತ್ರೇಯನೂ ಚಂದ್ರನೂ ಇವನ ಸಹೋದರರು. ಕುಂತಿಭೋಜನ ಮಗಳೂ ಪಾಂಡು ಚಕ್ರವರ್ತಿಯ ಪತ್ನಿಯೂ ಆದ ಕುಂತಿಯೂ ಬಾಲ್ಯದಲ್ಲಿ ತಂದೆಯ ಅನುಪಸ್ಥಿತಿಯಲ್ಲಿ ಅರಮನೆಗೆ ಬಂದ ದೂರ್ವಾಸರ ಸೇವೆಯನ್ನು ಮಾಡಿದಳು. ಇದರಿಂದ ಸಂತೋಷಗೊಂಡ ಮಹರ್ಷಿಯು ಕನ್ನಿಕೆಗೆ ಐದು ವರಗಳನ್ನಿತ್ತು ನಿನಗೆ ಅಗತ್ಯ ಬಂದಾಗ ಉಪಯೋಗಿಸು ಎಂಬುದಾಗಿ ಹೇಳಿ ಹೋದರು. ಇಂತಿರಲು ಒಮ್ಮೆ ಗಂಗಾನದಿಯ ತೀರದಲ್ಲಿ ಬೊಂಬೆಯಾಟಕ್ಕಾಗಿ ಒಂದು ಮಗುವು ಬೇಕೆಂದು ಇಚ್ಛೆಪಟ್ಟು ದೂರ್ವಾಸರು ಉಪದೇಶಿಸಿದ ಒಂದು ಮಂತ್ರವನ್ನು ತಾನು ಕನೈಯಾಗಿರುವಾಗಲೇ ಅನುಷ್ಠಾನಕ್ಕೆ ತಂದು ಕರ್ಣನನ್ನು ಪಡೆದಿದ್ದಳು. ಪಾಂಡುರಾಜನ ಮದುವೆಯಾದ ಮೇಲೆ ಅವನಿಗೆ ಕಿಂದರ್ಮ ಮಹರ್ಷಿಗಳ ಶಾಪದಿಂದಾಗಿ ಸಂತಾನವಾಗದಿರಲು ದೂರ್ವಾಸರ ವರದಿಂದ ಪಾಂಡವ ವಂಶ ಬೆಳೆಯಿತು. ಶಕುಂತಳೆಗೆ ಶಾಪ, ಕುಂತಿಗೆ ವರವನ್ನಿತ್ತ ಮಹರ್ಷಿ ದೂರ್ವಾಸರು.
ಪಾಂಡವರನ್ನು ಸಂಕಷ್ಟದಲ್ಲಿ ಸಿಲುಕಿಸಿಕೊಳ್ಳುವುದಕ್ಕಾಗಿ ದುರ್ಯೋಧನನು ಎಸಗಿದ ಹತ್ತು ಹಲವು ದುಷ್ಟ ಕಾರ್ಯಗಳಲ್ಲಿ ಅಕ್ಷಯಪಾತ್ರೆಯ ಪ್ರಕರಣವೂ ಒಂದು. ಪಾಂಡವರಿಗೆ ವನವಾಸದಲ್ಲಿದ್ದಾಗ ಸೂರ್ಯನಿಂದ ಅಕ್ಷಯಪಾತ್ರೆಯು ಲಭಿಸಿತ್ತು. ದೌಪದಿಯ ಭೋಜನಾನಂತರ ಅಕ್ಷಯ ಪಾತ್ರೆಯ ಕಾರ್ಯ ಅಂದಿಗೆ ಮುಕ್ತಾಯ ಎಂಬ ವಿಷಯ ತಿಳಿದಿದ್ದ ದುರ್ಯೋಧನ ದೂರ್ವಾಸರನ್ನು ಪಾಂಡವರ ಆಶ್ರಮಕ್ಕೆ ಹೋಗುವಂತೆ ಕಳುಹಿಸುತ್ತಾನೆ. ಆದರೆ ಪಾಂಡವರು ಶ್ರೀಕೃಷ್ಣನ ಸಹಾಯದಿಂದ ದೂರ್ವಾಸರನ್ನು ಸಂತುಷ್ಟಗೊಳಿಸುವಂತಾಯ್ತು. ದೂರ್ವಾಸರು ಕಾಶೀಕ್ಷೇತ್ರಕ್ಕೆ ಒಮ್ಮೆ ಹೋಗಿದ್ದಾಗ ಅಲ್ಲಿ ಶಿವನನ್ನು ಕುರಿತು ಉಗ್ರ ತಪಸ್ಸಗೈಯಲು ಶಿವನು ಪ್ರತ್ಯಕ್ಷನಾಗಲಿಲ್ಲ. ಕೊನೆಗೆ ಆ ಕ್ಷೇತ್ರದ ಬಗ್ಗೆ ಶಂಕೆ ಮೂಡಿ ಶಾಪಕೊಡಲು ಮುಂದಾದರು. ಶಿವನು ಪ್ರತ್ಯಕ್ಷನಾಗಿ ಗಹಗಹಿಸಿ ನಕ್ಕು ಅವನ ಮುಂಗೋಪಕ್ಕೆ ಬುದ್ಧಿ ಹೇಳಲು ದೂರ್ವಾಸರಿಗೆ ನಾಚಿಕೆಯಾಯ್ತು. ಶಿವನಲ್ಲಿ ಕ್ಷಮೆಯಾಚಿಸಲು ಶಿವಲಿಂಗ ಮೂಡಿಬರಲು ಅದಕ್ಕೆ ‘ದೂರ್ವಾಸೇಶ್ವರ ಲಿಂಗ’ವೆಂದು ಹೆಸರಿಡಲು ಸೂಚಿಸಿದರು.
ಶ್ರೀರಾಮನು ರಾಜ್ಯಾಡಳಿತ ಮಾಡುತ್ತಿದ್ದಾಗ ದೂರ್ವಾಸರು ತನ್ನ ಅರವತ್ತು ಸಾವಿರ ಶಿಷ್ಯರೊಡನೆ ಬಂದು ಧೇನು, ಮಣಿ, ಅಗ್ನಿಯ ಸಹಾಯವಿಲ್ಲದೆ ಭೋಜನ ತಯಾರಿಸಿ ಬಡಿಸಬೇಕೆಂದು ಬೇಡಿದರು. ಶ್ರೀರಾಮನು ಸ್ವರ್ಗದಿಂದ ಕಲ್ಪವೃಕ್ಷ ಮತ್ತು ಪಾರಿಜಾತಗಳನ್ನು ಅಯೋಧ್ಯೆಗೆ ತರಿಸಿ ಅವುಗಳ ಸಹಾಯದಿಂದ ಮುನಿಗಳಿಗೆ ಮೃಷ್ಟಾನ್ನವನ್ನಿತ್ತು ತೃಪ್ತಿಪಡಿಸಿದನು.’ಕ್ರೋಧ ಬುದ್ಧಿಯನ್ನು ತಿನ್ನುತ್ತದೆ. ಅಹಂಕಾರ ಜ್ಞಾನವನ್ನು ತಿನ್ನುತ್ತದೆ’ ಎಂಬ ಪಾಠವನ್ನು ದೂರ್ವಾಸರಿಂದ ಕಲಿಯಬಹುದಾಗಿದೆ.
–ವಿಜಯಾಸುಬ್ರಹ್ಮಣ್ಯಕುಂಬಳೆ
ಪ್ರಕಟಿಸಿದ ಸುರಹೊನ್ನೆ ಸಂಪಾದಕಿಗೆ ಅನಂತಧನ್ಯವಾದಗಳು.
ಧನ್ಯವಾದಗಳು ಅಡ್ಮಿನ್ ಸುರಹೊನ್ನೆ ಇವರಿಗೆ.
ಎಂದಿನಂತೆ ಪುರಾಣ ಕಥೆ ಓದಿಸಿಕೊಂಡುಹೋಯಿತು… ಇವತ್ತಿನ ಪುರಾಣಕಥೆ ನನಗೆ ಗೊತ್ತಿರಲಿಲ್ಲ… ತಿಳಿಸಿ ಕೊಟ್ಟಿದಕ್ಕೆ ವಂದನೆಗಳು ವಿಜಯಾ ಮೇಡಂ
ದೇವಾದಿ ದೇವರನ್ನೂ ಸೇರಿದಂತೆ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುತ್ತುದ್ದ ದುರ್ವಾಸ ಕಥಾ ಪುರಾಣವು ತಿಳುವಳಿಕೆಯನ್ನು ಹೆಚ್ಚಿಸುವಂತಿದೆ.
Nice
ಕೋಪದ ಇನ್ನೊಂದು ರೂಪವೇ ದೂರ್ವಾಸ ಎನ್ನುವ ಕುಖ್ಯಾತಿವೆತ್ತ ಮುನಿಗಳ ಶಾಂತರೂಪದ ಚಿತ್ರಣವು ಹೊಸ ವಿಷಯವನ್ನು ತಿಳಿಸಿತು.
ಮನನವಾಯಿತು. ನೀವು ಹೇಳಿದಂತೆ ಮನಸಿರಬೇಕು
ದೂರ್ವಾಸರ ಹೆಸರಷ್ಟೇ ತಿಳಿದವರಿಗೆ ಹಿನ್-ನೆಲೆ ತಿಳಿದಂತಾಯಿತು.
ಧನ್ಯವಾದಗಳು ಮೇಡಂ