ಅಸೀಮ ‘ಅನಂತ’ ಅಮೇಯ !

Share Button

ಅಸೀಮ ಎಂದರೆ ಎಲ್ಲೆಕಟ್ಟಿಲ್ಲದ ಅನಿಕೇತನ ಚೇತನ. ಅನಂತ ಎಂದರೆ ಇಂಥದೊಂದು ಚೈತನ್ಯಕ್ಕೆ ಅಂತ್ಯವೇ ಇಲ್ಲ; ದಣಿವೆಂಬುದೇ ಗೊತ್ತಿಲ್ಲ! ಅಮೇಯ ಎಂದರೆ ಅಳತೆಗೇ ಸಿಗದ ಎಂದು. ಈ ಮೂರೂ ಮುಪ್ಪುರಿಗೊಂಡ ಆದರೆ ಮುಪ್ಪಿಲ್ಲದ ಭಾರತೀಯ ಚಲನಚಿತ್ರ ರಂಗ ಕಂಡ ಅನನ್ಯ ಮತ್ತು ಅದ್ಭುತ ಕಲಾಪ್ರತಿಭೆ ನಮ್ಮ ಅನಂತನಾಗ್. ಅವರ ಸಹಜ ಸ್ವಾಭಾವಿಕ ಶೈಲಿಯ ನಟನೆಯೇ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ಕುಟುಂಬ ಪ್ರಧಾನ ಚಿತ್ರಗಳಲ್ಲಿ ಅವರ ನವರಸಗಳ ಅಭಿವ್ಯಕ್ತಿ ಎಂದೆಂದಿಗೂ ಸ್ಮರಣೀಯ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ, ಮರಾಠಿ ಮತ್ತು ಹಿಂದಿಭಾಷೆಯ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಈವರೆಗೆ ಆರು ಫಿಲಂಫೇರ್ ಮತ್ತು ಐದು ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ತೊಂಬತ್ತರ ದಶಕದಲ್ಲಿ ರಾಜಕೀಯಕ್ಕೂ ಬಂದ ಇವರು 1994 ರಲ್ಲಿ ಜೆ ಎಚ್ ಪಟೇಲ್ ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. ಇವರ ಮಡದಿ ಗಾಯತ್ರಿ ಅವರು ಕೂಡ ಚಿತ್ರರಂಗದ ಹಿರಿಯ ಅಭಿನೇತ್ರಿ. ಇದೀಗ ಅನಂತನಾಗ್ ಅವರಿಗೆ 2025 ಭಾರತ ಸರ್ಕಾರದ ಪದ್ಮಭೂಷಣ ಪುರಸ್ಕಾರ ಲಭಿಸಿದೆ. ಮೊನ್ನೆ ತಾನೇ ನಮ್ಮ ರಾಷ್ಟ್ರಾಧ್ಯಕ್ಷರು ಇದನ್ನು ಪ್ರದಾನ ಮಾಡುವಾಗ ತಮ್ಮ ಎಂದಿನ ಸರಳ ವೇಷಭೂಷಣದಲ್ಲಿ ಕಾಣಿಸಿಕೊಂಡು, ವಿನೀತವಾಗಿ ಸ್ವೀಕರಿಸಿ, ಆ ಪುರಸ್ಕಾರಕ್ಕೇ ಒಂದು ಗೌರವ ಮೂಡಿಸಿದರು. ಇವರು ಕೇವಲ ಕಲಾವಿದರಲ್ಲ, ಪ್ರಗಲ್ಭ ವಿದ್ವಾಂಸರು ಕೂಡ. ಸನಾತನ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವ ಅದರೆಲ್ಲ ಆಳ ಅಗಲಗಳನ್ನು ಬಲ್ಲ ಅಪರೂಪದ ವಾಗ್ಮಿ. ಏನಾದರೂ ಹೊಸತನ್ನು ಮಾಡಬೇಕೆಂಬ ಪ್ರಯೋಗಶೀಲ ಚಡಪಡಿಕೆಯ ಗುಣವಂತ. ಯಂಡಮೂರಿ ವೀರೇಂದ್ರನಾಥರ ಕಾದಂಬರಿ ಆಧಾರಿತ ‘ಬೆಳದಿಂಗಳ ಬಾಲೆ’ ಚಲನಚಿತ್ರದಲ್ಲಿ ಕೇವಲ ದೂರವಾಣಿಯ ದನಿಗೆ ಕಿವಿಗೊಟ್ಟು ಆಲಿಸಿ ಅಭಿನಯಿಸಿದ ಅನಂತರದು ಅಸಾಧ್ಯ ಸಂವೇದನ ಮತ್ತು ಆಲೋಚನ.

ಎಪ್ಪತ್ತೇಳು ವಸಂತಗಳನ್ನು ಕಂಡುಂಡ ಅನಂತರು ಮೂಲತಃ ರಂಗಭೂಮಿಯ ಪ್ರತಿಭೆ. ವಿದ್ಯಾಭ್ಯಾಸ ಮಾಡುವಾಗಲೇ ಹಿಂದಿ ಮತ್ತು ಮರಾಠಿ ನಾಟಕಗಳಲ್ಲಿ ಅಭಿನಯ. ಆ ತರುವಾಯ ಕನ್ನಡ, ಕೊಂಕಣಿ, ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ನಾಟಕಗಳನ್ನು ನಿರ್ಮಿಸಿ, ನಿರ್ದೇಶಿಸಿ, ಪಾತ್ರಗಳನ್ನೂ ಮಾಡಿದರು. ಮುಂದೆ ಬೆಂಗಳೂರಿಗೆ ಬಂದ ಮೇಲೂ ತಮ್ಮ ಶಂಕರನಾಗರೊಂದಿಗೆ ಸೇರಿ ನಾಟಕಗಳನ್ನು ಮಾಡಿದ್ದರು. 1972 ರಲ್ಲಿ ಕನ್ನಡದ ‘ಸಂಕಲ್ಪ’ ಮತ್ತು ಶ್ಯಾಮ್ ಬೆನಗಲ್ ಅವರ ‘ಅಂಕುರ್’ ಎಂಬ ಹಿಂದಿ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಮುಂದೆ ಜಿ ವಿ ಅಯ್ಯರ್ ಅವರ ನಿರ್ದೇಶನದ ತರಾಸು ಅವರ ಕಾದಂಬರಿ ಆಧಾರಿತ ಚಿತ್ರ ‘ಹಂಸಗೀತೆ’ಯಲ್ಲಿ ಸಂಗೀತಗಾರರಾದ ಭೈರವಿ ವೆಂಕಟಸುಬ್ಬಯ್ಯನರ ಪಾತ್ರದಲ್ಲಿ ಮನೆ ಮಾತಾದರು. 1975 ರಲ್ಲಿ ದೊರೈ ಭಗವಾನ್ ನಿರ್ದೇಶನದ ‘ಬಯಲುದಾರಿ’ ಚಿತ್ರದಲ್ಲಿ ದಿವಂಗತ ನಟಿ ಕಲ್ಪನಾ ಅವರೊಂದಿಗೆ ಅಭಿನಯಿಸಿ ಚರಿತ್ರೆ ಬರೆದರು. ಜೂಲಿ ಲಕ್ಷ್ಮಿಯವರೊಂದಿಗೆ ‘ಚಂದನದ ಗೊಂಬೆ’ಯಲ್ಲಿ ನಟಿಸಿದ ಮೇಲೆ ಈ ಜೋಡಿಯು ಇಪ್ಪತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿತು. ಇವರಿಬ್ಬರದು ಅದ್ಭುತ ಕೆಮಿಸ್ಟ್ರಿ ಎಂದೇ ಚಿತ್ರನಗರಿ ಕೊಂಡಾಡಿತು. ಇಡೀ ಕನ್ನಡ ಚಿತ್ರರಂಗದ ಅದಮ್ಯ ಸ್ಫುರದ್ರೂಪಿ ನಟ; ರಮಣೀಯ ಚಿತ್ರಗಳಲ್ಲಿ ಗಂಡಿಗೂ ಮಾದಕತೆಯೆಂಬುದಿದೆ ಎಂಬುದನ್ನು ಸಾಬೀತು ಪಡಿಸಿದವರು. ಇವರ ಇನ್ನೊಂದು ಪ್ರಮುಖ ಸಾಧನೆಯೆಂದರೆ, ನಾಯಕನಟನು ಹಾಸ್ಯಪ್ರಧಾನ ಚಿತ್ರಗಳಲ್ಲೂ ಅಭಿನಯಿಸಿ ಯಶಸ್ಸು ಪಡೆಯಬಹುದೆಂಬುದನ್ನು ತೋರಿಸಿ ಕೊಟ್ಟಿದ್ದು. ನಿರ್ದೇಶಕರಾದ ಫಣಿ ರಾಮಚಂದ್ರರ ‘ಗಣೇಶ ಸೀರಿಸ್ ಚಿತ್ರ’ಗಳ ತುಂಟಾಟಕ್ಕೆ ಅನಂತರು ಹೇಳಿ ಮಾಡಿಸಿದ ಇಮೇಜು. ಬದಲಾದ ಕಾಲಮಾನ ಮತ್ತು ಮನೋಮಾನಗಳಿಗೆ ಅನುಗುಣವಾಗಿ ವ್ಯಂಗ್ಯ, ವಿನೋದ ಮತ್ತು ಚಮಕಿತ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದು. ಕನ್ನೇಶ್ವರ ರಾಮ, ಅವಸ್ಥೆ, ಬರ, ಉದ್ಭವ, ಮಿಂಚಿನ ಓಟ, ಹೊಸ ನೀರು, ಆಕ್ಸಿಡೆಂಟ್, ಮತದಾನ, ಮೌನಿ, ರಾಮಾಪುರದ ರಾವಣ, ನಾ ನಿನ್ನ ಬಿಡಲಾರೆ, ಬೆಂಕಿಯ ಬಲೆ, ಇಬ್ಬನಿ ಕರಗಿತು, ಮುದುಡಿದ ತಾವರೆ ಅರಳಿತು, ನೋಡಿ ಸ್ವಾಮಿ ನಾವಿರೋದು ಹೀಗೆ, ಅನುಪಮ, ಮುಳ್ಳಿನ ಗುಲಾಬಿ, ಬಾಡದ ಹೂ ಹೀಗೆ ಇನ್ನೂರೈವತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಇವರ ಅಭಿನಯ ವೈವಿಧ್ಯಮಯವಾಗಿದ್ದು, ಒಂದು ಕಾಲದ ಕನ್ನಡ ಚಿತ್ರರಂಗವನ್ನು ಸಿರಿವಂತಗೊಳಿಸಿದ್ದು ಈಗ ಇತಿಹಾಸ. ಅಂದಿನ ನಾಯಕನಟರುಗಳಾದ ಡಾ. ರಾಜ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರುಗಳ ಸಿನಿಮಾಗಳೊಂದಿಗೆ ಅನಂತನಾಗರು ನಟಿಸಿದ ಸಿನಿಮಾಗಳು ಸಹ ಜೊತೆ ಜೊತೆಗೆ ತೆರೆ ಕಂಡು, ಏಕಕಾಲಕ್ಕೆ ಕನ್ನಡ ಚಿತ್ರರಸಿಕರ ಔದಾರ್ಯವನ್ನೂ ಆಂತರ್ಯವನ್ನೂ ಅರ್ಥ ಮಾಡಿಸಿದವು. ಇನ್ನು ವಿದೂಷಕತ್ವ ಮತ್ತು ಜಾಣತನದ ಬಹುತ್ವ – ಇವೆರಡನ್ನೂ ಪ್ರತಿಪಾದಿಸುವ ಮನೋರಂಜನಾತ್ಮಕ ಚಿತ್ರಗಳಿಂದ ಅನಂತರ ಅಪಾರವೂ ಅಮೇಯವೂ ಆದ ನಟನೆಯ ವೈಖರಿಗಳು ಬೆಳಕಿಗೆ ಬಂದವು.

ನಾರದ ವಿಜಯ, ಗೋಲ್‌ಮಾಲ್ ರಾಧಾಕೃಷ್ಣ, ಗೌರಿ ಗಣೇಶ, ಗಣೇಶ ಸುಬ್ರಮಣ್ಯ, ಚಾಲೆಂಜ್ ಗೋಪಾಲಕೃಷ್ಣ, ಸಮಯಕ್ಕೊಂದು ಸುಳ್ಳು, ಸುಖ ಸಂಸಾರಕ್ಕೆ ಹನ್ನೆರಡು ಸೂತ್ರ, ಹೆಂಡ್ತಿಗ್ಹೇಳ್ಬೇಡಿ, ಹಾಸ್ಯರತ್ನ ರಾಮಕೃಷ್ಣ ಇಂಥವು. ಡಾ. ರಾಜ್‌ರೊಂದಿಗೆ ಕಾಮನಬಿಲ್ಲು ಚಿತ್ರದಲ್ಲೂ ವಿಷ್ಣುವರ್ಧನ್‌ರೊಂದಿಗೆ ನಿಷ್ಕರ್ಷ, ಜೀವನದಿ, ಮತ್ತೆ ಹಾಡಿತು ಕೋಗಿಲೆ ಚಿತ್ರಗಳಲ್ಲೂ ರವಿಚಂದ್ರನ್ ಅವರೊಂದಿಗೆ ರಣಧೀರ, ಶಾಂತಿಕ್ರಾಂತಿಗಳಲ್ಲೂ ನಟಿಸಿದ್ದಾರೆ. ಆನಂತರ ಮುಂಗಾರು ಮಳೆ, ಗಾಳಿಪಟ, ಪಂಚರಂಗಿ, ವಾಸ್ತು ಪ್ರಕಾರ ಮೊದಲಾದ ಚಿತ್ರಗಳಲ್ಲಿ ಪೋಷಕಪಾತ್ರವಾಗಿ ಅಭಿನಯಿಸಿದ್ದು ಕೂಡ ಹೆಮ್ಮೆಯ ಸಂಗತಿ. ಇಷ್ಟಲ್ಲದೇ ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲೂ ನಟನೆ ಮಾಡಿದ್ದಾರೆ. ಇವರ ಜೀವನದ ಬಹು ದೊಡ್ಡ ವಿಧಿ ವಿಪರ್ಯಯವೆಂದರೆ ಅದು ಶಂಕರ್‌ನಾಗರನ್ನು ಅಪಘಾತದಲ್ಲಿ ಕಳೆದುಕೊಂಡಿದ್ದು. ಪ್ರೀತಿಯ ಸೋದರನ ನೆನಪನ್ನು ‘ನನ್ನ ತಮ್ಮ ಶಂಕರ’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದು, ಇದಕ್ಕೆ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ. ಹನ್ನೆರಡಕ್ಕೂ ಹೆಚ್ಚಿನ ಹಿಂದಿ ಸಿನಿಮಾಗಳಲ್ಲಿ ಅಭಿನಯ, ಪ್ರೀತಿ ಇಲ್ಲದ ಮೇಲೆ, ಗರ್ವ ಮೊದಲಾದ ಕನ್ನಡ ಧಾರಾವಾಹಿಗಳಲ್ಲೂ ತಮ್ಮ ಅದ್ಭುತ ನಟನಾಕೌಶಲವನ್ನು ತೋರಿದ್ದಾರೆ. ಇತ್ತೀಚೆಗಷ್ಟೇ ನಟಿಸಿದ ರಿಷಭ್‌ಶೆಟ್ಟಿಯವರ ‘ರುದ್ರಪ್ರಯಾಗ’ ಮತ್ತು ವಿನು ಬಳಂಜರ ‘ನಾಥೂರಾಮ್’ ಎಂಬ ಎರಡು ಸಿನಿಮಾಗಳು ಇದೇ ಆಗಸ್ಟ್ ಮಾಹೆಯಲ್ಲಿ ತೆರೆ ಕಾಣಲಿವೆ. ಇವರು ನಟಿಸಿದ ‘ಗೋದಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಅಭಿನಯವಂತೂ ಏಕಮೇವ ಅದ್ವಿತೀಯ! ಇವರು ಎಂದೂ ನಟಿಸುವುದೇ ಇಲ್ಲ; ಸಹಜಾಭಿನಯ. ಪಾತ್ರಗಳಲ್ಲಿ ಬದುಕುತ್ತಾರೆ; ಪಾತ್ರವೇ ಆಗಿಬಿಡುತ್ತಾರೆ; ಪಾತ್ರದ ಸೂತ್ರವಾಗಿ ಬಿಡುತ್ತಾರೆ. ಇದು ಇವರ ವೈಶಿಷ್ಟ್ಯ.

ಇವೆಲ್ಲಾ ಇವರ ಅಭಿನಯ ಶಾರದೆ ಒಲಿದ ಮತ್ತು ಕಲಾವಂತಿಕೆ ಅರಳಿ ಘಮಘಮಿಸಿದ ಮಾತಾಯಿತು. ಪ್ರವೃತ್ತಿಯನ್ನೇ ವೃತ್ತಿಯನ್ನಾಗಿಸಿಕೊಂಡು ಬದುಕಿನ ಯಶಸ್ಸು ಉಂಡಾಯಿತು. ಆದರೆ ಇವರ ಇನ್ನೊಂದು ಮುಖವಿದೆ. ಅದೇ ಅನಂತರ ತತ್ತ್ವಶಾಸ್ತ್ರ! ಮಮತೆ ವಾತ್ಸಲ್ಯವುಣಿಸಿದ ಅಪಾರ ಪ್ರತಿಭಾವಂತನಾಗಿದ್ದ ತಮ್ಮನನ್ನು ಕಳೆದುಕೊಂಡ ಮೇಲೆ ಇವರಿಗೆ ಜೀವ ಜೀವನದ ಇನ್ನೊಂದು ಆಯಾಮ ಅರ್ಥವಾಯಿತು. ಒಂದು ರೀತಿಯಲ್ಲಿ ಅಣ್ಣನಂತಲ್ಲದೇ ತಂದೆಯಾಗಿ ಸಾಕಿ, ಬೆಳೆಸಿದ ಅನಂತರಿಗೆ ಇದು ಬಹು ದೊಡ್ಡ ಆಘಾತ. ಇಬ್ಬರೂ ಸೇರಿ ಹಮ್ಮಿಕೊಂಡಿದ್ದ ಹಲವು ಪ್ರಾಜೆಕ್ಟುಗಳು ಅಪೂರ್ಣಗೊಂಡಿದ್ದ ವೇಳೆಯಲ್ಲೇ ಒಬ್ಬಂಟಿಯಾದರು. ಅದರ ಹಣಕಾಸಿನ ವಹಿವಾಟು ಮತ್ತು ಸಾಲದ ಹೊರೆಯಿಂದ ಮುಕ್ತರಾಗಲು ಹತ್ತು ವರುಷ ಬೇಕಾಯಿತು. ಈ ಸಂದರ್ಭದಲ್ಲಿ ಇವರಿಗೆ ಹೆಗಲೆಣೆಯಾಗಿ ನಿಂತು ಎಲ್ಲ ರೀತಿಯಲ್ಲೂ ಜೊತೆಯಾದವರು ಮಡದಿ ಗಾಯತ್ರಿಯವರು. ಲೋಕದ ಎಲ್ಲವೂ ಪೂರ್ವ ನಿರ್ಧಾರಿತ; ನಾವು ಕೇವಲ ನಿಮಿತ್ತ ಎಂಬ ತೀರ್ಮಾನಕ್ಕೆ ಬರುತ್ತಾರೆ. ‘ಭಗವಂತನು ಎಲ್ಲರಿಗೂ ಭಗವಂತನೇ ಆದರೂ ನನ್ನ ತಮ್ಮನನ್ನು ಕೇವಲ ಅವನ ಮೂವತ್ತೈದು ವರುಷಕ್ಕೆ ತನ್ನ ಬಳಿಗೆ ಕರೆದುಕೊಂಡು ಹೋಗಿದ್ದಕ್ಕೆ ನಾನೆಂದಿಗೂ ದೇವರನ್ನು ಕ್ಷಮಿಸುವುದಿಲ್ಲ’ ಎಂದಿವರು ಯಾತನಿಸುವಾಗ ಅವರ ನೋವಿನಾಳ ಅರಿವಾಗುತ್ತದೆ. ‘ನೊಂದ ನೋವ ನೋಯದವರು ಎತ್ತ ಬಲ್ಲರು? ದುಃಖ ದುಗುಡದ ಕಡಲಾಳ ಯಾರು ಬಲ್ಲರು?’

ಅನಂತನಾಗರ ಅಭಿನಯ ಸ್ವರೂಪವನ್ನು ಎಲ್ಲ ನಿರ್ದೇಶಕರು ಮೆಚ್ಚಿದ್ದಾರೆ. ‘ತಮ್ಮ ಕಣ್ಣನ್ನೂ ಮತ್ತು ಧ್ವನಿಯನ್ನೂ ತುಂಬಾ ಕಂಜೂಸಾಗಿಯೂ ಕರಾರುವಾಕ್ಕಾಗಿಯೂ ಬಳಸುವವರು; ನಟನೆಗೊಂದು ಡಿಗ್ನಿಟಿ ತಂದುಕೊಟ್ಟ ಅಪರೂಪದ ಕಲಾವಿದರು’ ಎಂಬುದಾಗಿ ಯೋಗರಾಜಭಟ್ಟರು ಶ್ಲಾಘಿಸಿದ್ದಾರೆ. ಅನಂತರು ಭಾರತೀಯ ದರ್ಶನ ಪರಂಪರೆಯನ್ನು ಅರಿತವರು, ತಮ್ಮ ಓದಿನಿಂದ ಮತ್ತು ಅನುಭವದಿಂದ. ಅವರ ಬಾಯಿಯಲ್ಲಿ ಹಲವು ನೂರು ಶ್ಲೋಕಗಳೂ ಸೂಕ್ತಿಗಳೂ ದೃಷ್ಟಾಂತಗಳೂ ಆಗಿಂದಾಗ್ಗೆ ಸಂದರ್ಶನದ ವೇಳೆಯಲ್ಲಿ ಉಚ್ಚರಿತವಾಗುತ್ತಿರುತ್ತವೆ; ಜೊತೆಗೆ ಅವುಗಳ ಅರ್ಥವೂ! ಚಿತ್ರರಂಗದಲ್ಲಿದ್ದೂ ಯಾವುದೇ ವರ್ಣರಂಜಿತವಾದ ಮತ್ತು ಅತಿಮಾನುಷವಾದ ಭ್ರಮಾತ್ಮಕ ಆವರಣವನ್ನು ಕಟ್ಟಿಕೊಳ್ಳದೇ ತಮ್ಮ ಸಹಜ ಇಮೇಜಿನ ಸಾಮಾನ್ಯ ಸ್ವಾಭಾವಿಕ ಸುಸಂಸ್ಕೃತ ಮತ್ತು ಸಂಭಾವಿತ ನಡೆನುಡಿಯ ಆದರ್ಶನೀಯ ವ್ಯಕ್ತಿತ್ವವನ್ನು ಹೊಂದಿದವರು; ಅಂತೆಯೇ ಸರಳವಾಗಿ ಜೀವಿಸುತ್ತಿರುವವರು. ಇಂಥದೊಂದು ಧಾರ್ಮಿಕತೆ ಇರುವುದರಿಂದಲೇ ಅವರ ಮಾತುಗಳಲ್ಲಿ ಆಧ್ಯಾತ್ಮಿಕವಾದ ಆತ್ಯಂತಿಕ ಸತ್ಯಗಳು ಗೋಚರ. ಅವರ ದೈಹಿಕ ಆರೋಗ್ಯದಂತೆಯೇ ಮನಸು ಸಹ ಸ್ವಚ್ಛ ಸುಂದರ ಮತ್ತು ಸಮರಸ ಸಹಿತ. ಇಂಥ ಮಹಾನ್ ಮೇರು ನಟ ನಮ್ಮ ಕನ್ನಡದವರು ಎಂಬುದೇ ನಮ್ಮೆಲ್ಲರ ಭಾಗ್ಯ. ಇವರಿಗೆ ಪದ್ಮಭೂಷಣ ಬಂದ ಈ ಶುಭ ಸಂದರ್ಭದಲ್ಲಿ ಇದೊಂದು ನುಡಿಗೌರವ.

ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

9 Responses

  1. ವೆಂಕಟಾಚಲ says:

    ಬಹಳ ಅರ್ಥಪೂರ್ಣ ಬರೆವಣಿಗೆ

  2. Nagaraj Ningegowda says:

    ಅನಂತರ ವ್ಯಕ್ತಿ ಚಿತ್ರಣವನ್ನು ಸೊಗಸಾಗಿ ಕಟ್ಟಿಕೋಟ್ಟಿದ್ದೀರಿ. ಶುಭಾಶಯಗಳು

  3. ಮೇರು ನಟ ಅನಂತನಾಗ್ ಅವರ ಪರಿಚಯಾತ್ಮಕ ಲೇಖನ ಸೊಗಸಾದ ನಿರೂಪಣೆ ಯೊಂದಿಗೆ ಅನಾವರಣಮಾಡಿದ್ದೀರಿ ಮಂಜು ಸಾರ್..ಧನ್ಯವಾದಗಳು

  4. ಪದ್ಮಾ ಆನಂದ್ says:

    ನಮ್ಮ ಮೆಚ್ಚಿನ ನಟನ ಗುಣಗಾನವನ್ನು ಸೊಗಸಾಗಿ ಮಾಡಿದ್ದೀರಿ ಸರ್. ಪ್ರತಿಯೊಂದು ವಾಕ್ಯವನ್ನು ಓದುವಾಗಲೂ ಮನ ‘ಹೌದು, ಹೌದು’ ಎನ್ನುತಿತ್ತು.

  5. ನಯನ ಬಜಕೂಡ್ಲು says:

    ಅನಂತ ನಾಗ್ ಅವರಿಗೆ ದೊರೆತ ಪ್ರಶಸ್ತಿ ಅರ್ಹರಿಗೆ ಸಂದ ಗೌರವ. ಮಾಹಿತಿಪೂರ್ಣ ಲೇಖನ

  6. Nirmala G V says:

    ಅನಂತ್ ನಾಗ್ ಎನ್ನುವ ಅದ್ಭುತ ಕರ್ನಾಟಕದ ಸಿನಿಮಾ ಪ್ರಪಂಚದ ಧ್ರುವ ತಾರೆ. ಅವರ ಬಗ್ಗೆ ಇಷ್ಟೊಂದು ವಿಷಯಗಳನ್ನು ತಿಳಿಸಿರುವುದಕ್ಕಾಗಿ ವಂದನೆಗಳು.

  7. Hema Mala says:

    ಮೇರುನಟ ಅನಂತನಾಗ್ ಬಗ್ಗೆ ಸಮಗ್ರವಾಗಿ ಬರೆದ ಈ ಲೇಖನ ಸಕಾಲಿಕ, ಸಾಂದರ್ಭಿಕ.

  8. Dr. HARSHAVARDHANA C N says:

    Sir, Nice article about Ananthnag

  9. ಶಂಕರಿ ಶರ್ಮ says:

    ಎಲ್ಲರ ಮೆಚ್ಚಿನ ಮೇರುನಟ, ಚಿತ್ರರಂಗದಲ್ಲಿ ಸದಾ ಇರುವಂತಹ ಯಾವುದೇ ರೀತಿಯ ಸ್ಪರ್ಧೆ, ಗಾಸಿಪ್ ಗಳಿಂದ ದೂರವಿದ್ದು, ತಮ್ಮ ಸಹಜ ನಟನೆಯಿಂದಲೇ ಪ್ರೇಕ್ಷಕರ ಮನಗೆದ್ದ ಅನಂತನಾಗ್ ಅವರಿಗೆ ಸಲ್ಲಿಸಿದ ನುಡಿಗೌರವ ಮೆಚ್ಚುವಂತಹುದಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: