ಬೇಸಗೆಯ ಒಂದು ರಾತ್ರಿ.
ಅಬ್ಬಬ್ಬಾ ! ಏನಪ್ಪಾ ವಿಪರೀತ ಸೆಖೆ, ತಡೆದುಕೊಳ್ಳಲಾಗುತ್ತಿಲ್ಲ, ಸ್ವಲ್ಪ ಹೊರಗಡೆ ಹೋಗಿ ತಣ್ಣನೆಯ ಗಾಳಿಯಲ್ಲಿ ಕುಳಿತರೆ ಹಾಯೆನ್ನಿಸಬಹುದು ಎಂದು ಗುಂಡಪ್ಪ ಹೊರಗೆ ಬಂದರು. ಪಕ್ಕದಲ್ಲೇ ಇದ್ದ ಕಲ್ಲು ಚಪ್ಪಡಿಯ ಮೇಲೆ ಕಾಲು ಚಾಚಿಕೊಂಡು ಕುಳಿತುಕೊಂಡರು. “ಅಬ್ಬಾ ಜೀವಕ್ಕೆ ಈಗ ಸ್ವಲ್ಪ ಸಮಾಧಾನವಾಯ್ತು” ಎನ್ನುತ್ತಾ ಕಣ್ಣುಗಳನ್ನು ಅತ್ತ ಇತ್ತ ಅರಳಿಸಿ ನೋಡತೊಡಗಿದರು.
ಪಕ್ಕದ ಕಲ್ಲು ಚಪ್ಪಡಿಯ ಮೇಲೂ ಯಾರೋ ಕುಳಿತಿದ್ದಾರೆ ಎನ್ನಿಸಿತು. ಅವರು ಕೈಯಲ್ಲಿದ್ದ ಬಟ್ಟೆಯ ತುಂಡಿನಿಂದ ಅತ್ತಿತ್ತ ಅಡಿಸುತ್ತಾ ಗಾಳಿ ಬೀಸಿಕೊಳ್ಳುತ್ತಿದ್ದರು. ಅದೇನು ಬೀಸಣಿಗೆಯೇ ? ಇರಲಾರದು ಉಟ್ಟಿರುವ ಬಟ್ಟೆಯ ಅಂಚನ್ನೇ ಹಿಡಿದಿದ್ದಾರೆ. ಸರಿಯಾಗಿ ಕಾಣಿಸುತ್ತಿಲ್ಲ ಎಂದು ಅಂದುಕೊಳ್ಳುತ್ತಿರುವಾಗಲೇ ಅತ್ತ ಕಡೆಯಿಂದ ಧ್ವನಿ ಬಂತು. “ಓ ನೀವಾ ಅಲ್ಲಿ ಕುಳಿತಿರೋದು? ನಿಮಗೂ ಸೆಖೆ ತಡೆಯಲಾಗದೇ ಹೊರಗಡೆ ಬಂದಿರಾ?” ಎಂದಿತು ವ್ಯಕ್ತಿ.
“ಅರೇ ! ಶಾಂತೂ ನೀನಾ, ನನಗೆ ಗೊತ್ತಾಗಲೇ ಇಲ್ಲ ನೋಡು. ಬಾ ಇನ್ನೂ ಈ ಕಡೆ. ಇಲ್ಲಿ ಗಾಳಿ ಚೆನ್ನಾಗಿ ಬರುತ್ತಿದೆ. ನಿನ್ನ ಕೈಲಿರುವ ಬಟ್ಟೆ ತುದಿಯನ್ನು ಬಿಡು. ಅದರಿಂದೇನೂ ಗಾಳಿ ಸಿಗುವುದಿಲ್ಲ. ನಿನಗ್ಯಾವಾಗ ತಿಳಿವಳಿಕೆ ಬರುತೋ ನಾ ಕಾಣೆ” ಎಂದರು ಗುಂಡಪ್ಪ.
“ನನಗೆ ತಿಳಿವಳಿಕೆ ಬಂದು ಏನಾಗಬೇಕು ಬಿಡಿ, ನನ್ನ ಮಕ್ಕಳು ವಿಪರೀತ ತಿಳಿವಳಿಕಸ್ಥರಾಗಿದ್ದಾರೆ ಅಷ್ಟು ಸಾಕು. ಅದನ್ನು ತಡೆದುಕೊಳ್ಳಲೇ ಆಗುತ್ತಿಲ್ಲ.” ಎಂದು ನಿಟ್ಟುಸಿರು ಬಿಡುತ್ತಾ ತಾನು ಕುಳಿತಿದ್ದ ಜಾಗದಿಂದ ಸ್ವಲ್ಪ ಗುಂಡಪ್ಪನವವರ ಸಮೀಪಕ್ಕೆ ಸರಿದು ಅವರಿಗೆದುರಾಗಿ ಕುಳಿತರು ಶಾಂತಮ್ಮ.
“ಹೂಂ..ನೀನೇಳುವುದರಲ್ಲೂ ಸತ್ಯವಿದೆ. ಏನೆಲ್ಲ ಆಗಿ ಹೋಯಿತು ನೋಡು” ಎನ್ನುತ್ತಿದ್ದಂತೆ ಗುಂಡಪ್ಪನವರಿಗೆ ಗತಿಸಿದ ಕಾಲವನ್ನು ಒಮ್ಮೆ ಹಿಂತಿರುಗಿ ನೋಡೋಣವೆನ್ನಿಸಿತು.
ಮೈಸೂರಿನ ಸಮೀಪದ ಹಾರೋಹಳ್ಳಿಯ ರೈತಾಪಿ ಕುಟುಂಬದ ಭೀಮಪ್ಪ, ದ್ಯಾಮವ್ವ ದಂಪತಿಗಳಿಗೆ ಹುಟ್ಟಿದ್ದ ನಾಲ್ಕು ಮಕ್ಕಳಲ್ಲಿ ಉಳಕೊಂಡವನೇ ಗುಂಡಪ್ಪ. ತಮಗೆ ಉಳಿದಿದ್ದ ಒಬ್ಬನೇ ಮಗನನ್ನು ಜತನವಾಗಿ ನೋಡಿಕೊಂಡು ಅವನನ್ನು ಎಸ್.ಎಸ್.ಎಲ್.ಸಿ., ಟಿ.ಸಿ.ಎಚ್. ಓದಿಸಿ ತಮ್ಮ ಕಣ್ಮುಂದೆಯೇ ಇರಲೆಂದು ತಮ್ಮೂರಿನಲ್ಲಿಯೇ ಶಿಕ್ಷಕನ ಹುದ್ದೆ ಕೊಡಿಸಿದ್ದರು ಭೀಮಪ್ಪ. ಅವರಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಜಮೀನಿನ ಜೊತೆಗೆ ತಾವೂ ಸ್ವಲ್ಪ ಸೇರಿಸಿ ವ್ಯವಸಾಯ ಮಾಡಿಕೊಂಡು ಮಾದರಿಯಾಗಿ ಸಂಸಾರ ಮಾಡಿಕೊಂಡಿದ್ದರು. ಗುಂಡಪ್ಪನೂ ಅವರೂರಲ್ಲೇ ಮಾಸ್ತರಾದಾಗ ಇನ್ನೂ ಪಸಂದಾಯಿತು.
“ರೀ..ಏನು ಮೌನವಾಗಿಬಿಟ್ಟಿರಿ? ಎಲ್ಲೊ ಕಳೆದುಹೋದಿರಿ ಮಾತನಾಡಿ” ಎಂದು ಆಲೋಚನೆಯಲ್ಲಿ ಮುಳುಗಿದ್ದ ಗುಂಡಪ್ಪನವರನ್ನು ಎಚ್ಚರಿಸಿದರು ಶಾಂತಮ್ಮ.
“ ಹೂ..ಅದೇ ಹಳೇ ನೆನಪುಗಳು ಶಾಂತಾ”
“ಅದನ್ಯಾಕೆ ನೆನೆಸಿಕೊಳ್ಳುತ್ತೀರಾ ಬಿಡಿ. ನಿಮ್ಮ ಅಪ್ಪ ಅಮ್ಮನಿಗೆ ನೀವೊಬ್ಬರೇ ಮಗ ಅಂತ ಕೆಳಗೆ ಬಿಟ್ಟರೆ ಎಲ್ಲಿ ಸವೆದೋಗ್ತಾನೋ ಅನ್ನುವಂಗೆ ಸಾಕಿದ್ರಂತೆ. ಅತ್ತೆಯವರು ಇರೋತನಕ ಹೇಳ್ತಾನೇ ಇರೋರು.”
“ಹೂ ಶಾಂತಾ, ಆಮೇಲಾದ್ರೂ ನನ್ನನ್ನು ಒಬ್ಬನೇ ಇರಕ್ಕೆ ಬಿಟ್ಟಿದ್ದರಾ, ನಾವಿರುವ ಊರಲ್ಲೇ ಮೇಷ್ಟ್ರಗಿರಿ ಕೊಡಿಸಿದ್ದೇ ಅಪ್ಪ. ಸರ್ಕಾರಿ ನೌಕರಿಯಲ್ಲಿ ವಗಾವರ್ಗಿ ಸಾಮಾನ್ಯ. ಯಾವುದೇ ಬೇರೆ ಊರಿಗೆ ಹಾಕಿದ್ರೆ ಸಾಕು ಹೇಗೊ ಯಾರನ್ನೊ ಹಿಡಿದು ಶಿಫಾರಸ್ಸು ಮಾಡಿಸಿ ಮತ್ತೆ ಇಲ್ಲಿಗೇ ಅಥವಾ ನಡೆದುಕೊಂಡು ಹೋಗುವಷ್ಟು ದೂರದ ಊರಿಗೆ ಬದಲಾಯಿಸುವಂತೆ ಮಾಡಿದ್ದರು. ಅಷ್ಟು ಚಂದಿತ್ತು ನನ್ನ ಹೆತ್ತವರ ಪ್ರೀತಿ, ಕಾಳಜಿ ಮಗನ ಮೇಲೆ. ಅಲ್ಲಾ ಶಾಂತೂ ನಾನು ನಿಮ್ಮ ಮನೆಗೆ ನಿನ್ನ ನೋಡಕ್ಕೇಂತ ಬಂದಿದ್ದು ನಿನಗೆ ನೆನಪಿದೆಯಾ?” ಎಂದರು ಗುಂಡಪ್ಪ.
‘ಛೀ.. ಹೋಗೀಪ್ಪ, ನೆನೆಸಿಕೊಂಡರೆ ಈಗಲೂ ನನಗೆ ನಾಚಿಕೆಯಾಗುತ್ತೆ. ಅಲ್ಲಾ ನೀವು ಅಷ್ಟೊಂದು ಜನ ಗೆಳೆಯರ ಜೊತೆ ಬಂದಿದ್ರೀ. ಅವರಲ್ಲಿ ಗಂಡು ಯಾರೂ ಅಂತ ಗೊತ್ತಾಗದೆ ತಬ್ಬಿಬ್ಬಾಗಿ ಗೊಂದಲದಲ್ಲಿದ್ದಾಗ ನನಗೆ ನೀವು ಚಟ್ಟಂತ ಮೇಲಕ್ಕೆದ್ದು ನಿಂತು ನನ್ನ ಹೆಸರು ಗುಂಡಪ್ಪ, ಮೇಷ್ಟ್ರು ಗುಂಡಪ್ಪಾ ಅಂತ್ಲೇ ಎಲ್ಲರೂ ಕರೆಯೋದು. ಅಂತ ಪರಿಚಯ ಹೇಳಿಕೊಂಡು ನನ್ನ ಕೈ ಕುಲುಕಲು ಮುಂದಾದಿರಿ. ಅವ್ವಯ್ಯಾ ! ಅದನ್ನು ಊಹಿಸಿಕೊಂಡಾಗ ಮೈಯೆಲ್ಲಾ ಜುಮ್ಮೆನ್ನುತ್ತೆ. ನಾನು ನಾಚಿಕೆಯಿಂದ ಮುದ್ದೆಯಾಗಿ ತಟ್ಟಂತ ಕೈ ಮುಗಿದು ಅಲ್ಲಿಂದ ಒಳಕ್ಕೆ ಪೇರಿಕಿತ್ತೆ” ಎಂದರು ಶಾಂತಮ್ಮ.
“ಹ್ಹ ಹ್ಹ ಅಲ್ಲಿಗೆ ಬಂದಿದ್ದ ಒಬ್ಬರು ವಯಸ್ಸಾದವರು “ ನೀವು ನೀವೇ ಬಂದಿದ್ದೀರಲ್ಲಪ್ಪಾ, ಹಿರಿಯೋರು ಯಾರೂ ಬಂದಂಗಿಲ್ಲಾ” ಎಂದು ರಾಗ ಎಳೆದಾಗ ನಿಮ್ಮಪ್ಪ ಅರ್ಥಾತ್ ನನ್ನ ಭಾವೀ ಮಾವನವರು “ಹಿರಿಯರಿದ್ದಾರೆ, ಅವರು ನಮ್ಮ ಹುಡುಗ ಒಪ್ಪಿದರೆ ನಮ್ಮ ಒಪ್ಪಿಗೇನೂ ಇದ್ದಂಗೆ ಎಂದು ಹೇಳಿದ್ದರು. ಅದಕ್ಕೆ ನಾನೇ ವರನನ್ನೇ ಕಳುಹಿಸಿ ಎಂದು ಹೇಳಿದ್ದೆ” ಎಂದು ಸಮಜಾಯಿಷಿ ಕೊಟ್ಟರು.
“ಹೂಂ..ಅದಕ್ಕೆ ನಿಜವಾದ ಕಾರಣ ನಮ್ಮ ನಿಶ್ಚಿತಾರ್ಥದ ದಿನ ಗೊತ್ತಾಯಿತು. ಅದಕ್ಕೆ ಮೊದಲು ಲೆಕ್ಕವಿಲ್ಲದಷ್ಟು ಹೆಣ್ಣುಗಳನ್ನು ನೋಡಿದ್ದ ಭೂಪ ನೀವು ಅಂತ. ಅದಕ್ಕೇ ನಿಮ್ಮ ಹೆತ್ತವರು ಸಾಕಾಗಿ ಹೋಗಿ ಆಯ್ಕೆಯನ್ನು ನಿಮಗೇ ಬಿಟ್ಟಿದ್ದರು. ಅದೆಲ್ಲ ಸರಿ, ನಿಮ್ಮ ಕಲ್ಪನೆಯ ಕನ್ನಿಕೆ ಬಗ್ಗೆ ಸಾಕಷ್ಟು ಬಾರಿ ನಮ್ಮಿಬ್ಬರ ನಡುವೆ ಚರ್ಚೆ ನಡೆದಿದ್ದು ಜ್ಞಾಪಿಸಿಕೊಳ್ಳಿ. ಅದರ ಬಗ್ಗೆ ನಾನು ಪ್ರಶ್ನೆ ಕೇಳಿದಾಗಲೆಲ್ಲ ಮಾತಲ್ಲಿ ತೇಲಿಸಿ ಉತ್ತರ ಕೊಡುತ್ತಿದ್ದಿರಿ ಅಂತ ನನ್ನ ಗುಮಾನಿ” ಎಂದರು ಶಾಂತಮ್ಮ.
“ ಏ ಹಂಗೇನಿಲ್ಲ ಶಾಂತೂ, ನಿನ್ನ ನಾನು ನೋಡುತ್ತಿದ್ದಂತೆ ಏಕೋ ಏನೋ ನೀನೇ ನನ್ನ ಹೆಂಡ್ತೀ ಅನ್ನಿಸಿಬಿಡ್ತು. ಆಗ ನನ್ನ ಕಲ್ಪನಾ ಸುಂದರಿ ಪಕ್ಕಕ್ಕೆ ಸರಿದು ಹೋದಳು. ನೀನೇನು ಕುರೂಪಿಯೇ? ಚೆನ್ನಾಗಿಯೇ ಇದ್ದೀಯೆ. ನನ್ನ ಮನಸ್ಸು ಪೂರ್ತಿಯಾಗಿ ಅದನ್ನೆ ಹೇಳಿತ್ತು ಗೊತ್ತಾ”
“ಓ ..ನಿಮಗೂ ಹುಡುಗಿಯರನ್ನು ನೋಡಿ ನೋಡಿ ಬೇಸರಿಕೆ ಬಂದಿರಬಹುದು. ಮನೆಯವರನ್ನು ಇನ್ನು ಸತಾಯಿಸಬಾರದು ಅಂತ ಒಪ್ಪಿಕೊಂಡಿರಬೇಕು. ಅದು ನನ್ನ ನಂಬಿಕೆ. ಅದರೂ ಹೊರಗಿನವರು ಯಾರೇ ನೋಡಲಿ ಹೇಳಿ ಮಾಡಿಸಿದಂತಹ ಜೋಡಿ ಎಂದು ತಾರೀಫ್ ಮಾಡುತ್ತಿದ್ದರು. ಅದಂತೂ ಸುಳ್ಳಲ್ಲ.” ಎಂದು ಸಂತಸದಿಂದ ಹೇಳಿದರು ಶಾಂತಮ್ಮ.
“ಶಾಂತೂ ಬರೀ ನೋಡಲಿಕ್ಕೆ ಅನ್ನಬೇಡವೇ, ಒಬ್ಬರಿಗೊಬ್ಬರು ಹೊಂದಿಕೊಂಡು ಬಾಳ್ವೆ ನಡೆಸಿಲ್ಲವೇ. ಮಾಸ್ತರಗಿರಿ, ಜಮೀನಿನ ಉಸ್ತುವಾರಿ, ಎರಡನ್ನೂ ನಿರ್ವಹಿಸುತ್ತಲೇ ಬದುಕು ಕಟ್ಟಿಕೊಂಡೆವು. ಮಕ್ಕಳ ವಿಷಯದಲ್ಲಿ ತುಸು ಎಡವಿದೆವೇನೋ ಅನ್ನಿಸುತ್ತೆ” ನೊಂದು ನುಡಿದರು ಗುಂಡಪ್ಪ.
“ಅದ್ಯಾಕೆ ಹಾಗಂತೀರಾ, ಹಿರಿಯರಿಗೆ ನಮ್ಮ ಮಕ್ಕಳೆಂದರೆ ಪಂಚಪ್ರಾಣ. ಅವರ ಆಸೆಯಂತೆ ನಮಗೆ ನಾಲ್ಕು ಮಕ್ಕಳು. ಹೆಣ್ಣೆರಡು, ಗಂಡೆರಡು. ಎರಡೇ ಹೆರಿಗೆಯಲ್ಲಿ ನಾಲ್ಕು ಮಕ್ಕಳು. ಪ್ರತಿಬಾರಿಯೂ ಅವಳಿಗಳು. ಭಯವಾಗಿ ನಾವು ಮುಂದಕ್ಕೆ ಹೋಗಲಿಲ್ಲ. ಮಕ್ಕಳನ್ನೂ ಚೆನ್ನಾಗಿಯೇ ಬೆಳೆಸಿದೆವು. ಯಾವುದಕ್ಕೂ ಕೊರತೆ ಮಾಡದಂಗೆ. ಆದರೆ ಗಂಡು ಮಕ್ಕಳಿಬ್ಬರೂ ನಿಮ್ಮಾಸೆಯಂತೆ ಹೆಚ್ಚು ಓದಲಿಲ್ಲ. ಹೆಣ್ಣುಮಕ್ಕಳು ತಕ್ಕಮಟ್ಟಿಗೆ ಓದಿಕೊಂಡು ನಮ್ಮ ಮಾತು ಮೀರದ ಹಾಗೆ ನಾವಾರಿಸಿದ ಹುಡುಗರನ್ನೇ ಕಟ್ಟಿಕೊಂಡು ವೈನಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.” ಎಂದರು ಶಾಂತಮ್ಮ.
“ಆದರೆ ಮುಂದಿನದ್ದು ನೆನೆಸಿಕೊಂಡರೆ ಬೇಸರವಾಗುತ್ತೆ ಶಾಂತೂ. ನೇಗಿಲು ಹಿಡಿದ ಗಂಡು ಮಕ್ಕಳಿಗೆ ಕಷ್ಟಪಟ್ಟು ಹೆಣ್ಣುಗಳನ್ನು ಹುಡುಕಿ ತಂದೆವು. ಬಂದ ಹೆಣ್ಣು ಮಕ್ಕಳು ನನಗೆ ಪಿತ್ರಾರ್ಜಿತವಾಗಿ ಬಂದಿದ್ದ ಅಮೂಲ್ಯವಾದ ಜಮೀನನ್ನು ಕೆಲಸಕ್ಕೆ ಬಾರದ್ದು, ಎಲ್ಲ ಲಡ್ಡಾಗಿದೆ, ಇದಕ್ಕೆ ಖರ್ಚುಮಾಡೋದು ವೇಸ್ಟು ಅಂತ ನನ್ನ ಕಣ್ಮುಂದೇನೇ ಅದನ್ನು ಮಾರಾಟಕ್ಕಿಟ್ಟುಬಿಟ್ಟರು. ಅವಾಗ ಈಗ ತಾನೇ ಗುಣಗಾನ ಮಾಡಿದೆಯಲ್ಲಾ ಹೆಣ್ಣುಮಕ್ಕಳು ಅವರ ಭಾಗ ಕೇಳಕ್ಕೆ ಬಂದ್ರು. ಇಬ್ಬರ ನಡುವೆ ಲಟಾಪಟಿ ನಡೆದು ಎರಡು ಭಾಗವಾಗಿ ಹಂಚಿಕೊಂಡರು. ನನ್ನ ಎದೆ ಒಡೆದುಹೋಯ್ತು.”
“ಬಿಡ್ತೂ ಅನ್ನಿ, ಹೆಣ್ಣುಕೊಟ್ಟ ಮನೆಯವರ ಕುಮ್ಮಕ್ಕು ಇದ್ದೇ ಇತ್ತು. ಪಾಪದ ನಮ್ಮ ಮಕ್ಕಳು ಬಲಿಯಾದವು. ಇರಲಿ ಬಿಡಿ ನಾನೇನು ನಿಮ್ಮನ್ನು ಹೆಚ್ಚುಕಾಲ ಕಾಯಿಸಲಿಲ್ಲ. ಬರ‍್ರನೇ ಬಂದುಬಿಟ್ಟೆ. ಎಲ್ಲ ನೇರುಪ್ಪಾಯ್ತು” ಎಂದರು ಶಾಂತಮ್ಮ.
ಅಷ್ಟೆಲ್ಲ ಆದ್ರೂ ನೀನು ಮಕ್ಕಳನ್ನು ಬಿಟ್ಟುಕೊಡಲ್ಲವಲ್ಲಾ ಶಾಂತೂ. ನೀನೇನು ಶಾಂತವಾಗಿ ಬಂದ್ಯಾ, ಎಷ್ಟೆಲ್ಲ ಎಳೆದಾಡಿದರು ನಿನ್ನನ್ನು. ಸುಡುಬಿಸಿಲಲ್ಲಿ ಕಾಯಿಸಿದರು. ಇದು ನನ್ನಪ್ಪನ ಸ್ವಯಾರ್ಜಿತ ನಮಗೆ ಸೇರಬೇಕು. ನಾವು ಕೊಟ್ಟ ಹಣವನ್ನು ಹಿಂದಿರುಗಿಸಿ ಆಗ ಮಾತ್ರ ನನ್ನಪ್ಪನ ಹತ್ತಿರ ನಿನ್ನನ್ನು ಸೇರಿಸುತ್ತೇವೆ ಎಂದು ಹುಯಿಲೆಬ್ಬಿಸಿದರು. ಅಗ ನೀನೆಷ್ಟು ಅತ್ತೆ ಎನ್ನುವುದು ನನಗೆ ಗೊತ್ತಾಗಲಿಲ್ಲ ಅಂದುಕೊಂಡೆಯಾ. ಆಸ್ತಿ ಎನ್ನುವುದು ಏನೆಲ್ಲ ಮಾಡಿಸುತ್ತೆ ನೋಡು ಶಾಂತೂ” ಎಂದರು ಗುಂಡಪ್ಪ.
“ಅವನ್ನೆಲ್ಲ ಮತ್ತೆ ಮತ್ತೆ ನೆನಪಿಸಿಕೊಂಡು ದುಃಖ ಪಡುವುದನ್ನು ಬಿಟ್ಟುಬಿಡಿ. ಹೇಗೋ ಅಂತೂ ಇಂತೂ ನಾನು ನಿಮ್ಮೊಡನೆ ಪಕ್ಕದಲ್ಲಿಯೇ ಸೇರಿಕೊಂಡಿದ್ದೇನೆ. ಮಕ್ಕಳು ಅಷ್ಟು ಮಾಡಿದ್ದಕ್ಕೋಸ್ಕರ ಅವರು ಚೆನ್ನಾಗಿರಲಿ” ಅಂದರ ಶಾಂತಮ್ಮ.
“ಏ ..ಶಾಂತೂ ಮಾತಾಡ್ತಾ ಮಾತಾಡ್ತಾ ಹೊತ್ತು ಹೋಗಿದ್ದೇ ತಿಳಿಯಲಿಲ್ಲ. ಆಗಲೇ ಬೆಳಕು ಹರಿಯುವ ಹೊತ್ತಾಗಿದೆ. ನಡಿ ನಡಿ ಬೇಗ ನಮ್ಮ ಗೂಡೊಳಕ್ಕೆ ಸೇರಿಕೊಳ್ಳೋಣ. ಯಾರಾದರೂ ನೋಡಿಬಿಟ್ಟರೆ ಮತ್ತೆ ಬೇರೆ ಬೇರೆ ಮಾಡಿಬಿಟ್ಟಾರು.” ಎಂದು ಅವಸರ ಮಾಡಿದರು ಗುಂಡಪ್ಪ.
“ಹೌದುರೀ ಇದಕ್ಕೂ ಸಂಚಕಾರ ಬಂದೀತು. ನಾಳೆ ಮತ್ತೆ ಭೇಟಿಯಾಗೋಣ ಬೈ” ಎಂದು ಹೇಳುತ್ತಾ ಎರಡೂ ಆತ್ಮಗಳೂ ತಮ್ಮತಮ್ಮ ಸಮಾಧಿಗಳೊಳಕ್ಕೆ ಸರಕ್ಕನೆ ಸರಿದುಹೋದವು.
–ಬಿ.ಆರ್.ನಾಗರತ್ನ, ಮೈಸೂರು
ಸುಂದರವಾದ ಕಥೆ
.ವಾಸ್ತವಕ್ಕೆ ಬಹಳ ಹತ್ತಿರವಾಗಿದೆ.
ನಿಮ್ಮ ಪ್ರೀತಿಯ ಪ್ರತಿಕ್ರಿಯೆ ಗೆ ಹೃತ್ಪೂರ್ವಕವಾದ ಧನ್ಯವಾದಗಳು ಮೇಡಂ.
ಕುತೂಹಲದಿಂದ ಪ್ರಾರಂಭವಾಗಿ ಆಕರ್ಷಕ ತಿರುವು ಪಡೆದು ಆತ್ಮಾವಲೋಕನದತ್ತ ಹೊರಳಿದ ಕಥೆ ವಿಭಿನ್ನವಾದ ರೀತಿಯಲ್ಲಿ ಮೂಡಿ ಬಂದು ಇಷ್ಟವಾಗುಂತಿದೆ.
ನಿಮ್ಮ ಸ್ಪಂದನೆಗೆ ಧನ್ಯವಾದಗಳು ಪದ್ಮಾ ಮೇಡಂ
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ
ಚಂದದ ಕಥೆ. ಕುತೂಹಲ ಬಹಿರಂಗ ಗೊಂಡ ರೀತಿ ಚೆನ್ನಾಗಿದೆ.
ನಿಮ್ಮ..ಪ್ರತಿ ಕ್ರಿಯೆಗೆ ಧನ್ಯವಾದಗಳು ನಯನಮೇಡಂ
ಆತ್ಮಗಳು ಗೂಡಿಗೆ ಹೋಗುವ ಕಲ್ಪನೆ…. ವಿಭಿನ್ನ ವಾಗಿದೆ ಗೆಳತಿ.
ಧನ್ಯವಾದಗಳು ಸುಧಾ ಮೇಡಂ
ಅಬ್ಬಾ!!!ಇಂಥ ಅಂತ್ಯದ ಸಾಲುಗಳನ್ನು ಊಹಿಸಿರಲಿಲ್ಲ…. ಕಥೆ ಎಲ್ಲಾ ಸಂಸಾರದಲ್ಲೂ ನಡೆಯುವಂಥದ್ದೇ ಅನ್ನಿಸಿದರೂ, ಸರಳ ಹಾಗೂ ನೇರ ನಿರೂಪಣೆ ಕಥೆಯನ್ನು ಸಂಕ್ಷಿಪ್ತವಾಗಿಸಿದೆ… ಆತ್ಮೀಯ ಆತ್ಮಗಳು ಒಂದಕ್ಕೊಂದು ಸಂತೈಸುವ ಪರಿ ಇಷ್ಟ ಆಯ್ತು.
ಧನ್ಯವಾದಗಳು ಗೆಳತಿ ಭಾರತಿ
ವಿಭಿನ್ನ ಕಥನ ಶೈಲಿ, ಕೊನೆಯ ಕ್ಷಣದ ತಿರುವು ಅನಿರೀಕ್ಷಿತ, ಆತ್ಮಗಳು ಸಂವಹನ ಮಾಡುವ ಕಲ್ಪನೆ ಸೊಗಸಾಗಿದೆ.
ಧನ್ಯವಾದಗಳು ಗೆಳತಿ ಹೇಮಾ
ವಿಭಿನ್ನವಾದ ಶೈಲಿ. ಪ್ರಾರಂಭದಲ್ಲೇ ಕತೆಯ ಎಳೆ ತಿಳಿಯಿತು. ಸೂಪರ್.
ಧನ್ಯವಾದಗಳು ಗೆಳತಿ ಪದ್ಮಾ ವೆಂಕಟೇಶ
ವಿಭಿನ್ನವಾದ ಶೈಲಿ, ಪ್ರಾರಂಭದಲ್ಲೇ ಕತೆಯ ಎಳೆ ತಿಳಿಯಿತು. ಸೂಪರ್.
ತಮ್ಮ ತಮ್ಮ ಜೀವನದ ಆಗು ಹೋಗುಗಳನ್ನು ಹಂಚಿಕೊಂಡ ಆತ್ಮಗಳ ಕಥೆ ಸೊಗಸಾಗಿದೆ ನಾಗರತ್ನ ಮೇಡಂ.
ನಿಜ, ಸೊಗಸೆನಿಸಿತು. ಹಿನ್ನೋಟ ತಂತ್ರ ಸಮರ್ಪಕವಾಗಿ ಬಳಸಿಕೊಂಡಿದ್ದೀರಿ.
ಕೊನೆಯಲ್ಲಿ ಕುತೂಹಲ ಮತ್ತು ತಿರುವು ಅನೂಹ್ಯ.
ಅಯ್ಯೋ, ಇಷ್ಟು ಬೇಗ ಮುಗಿದು ಹೋಯಿತೇ ಎನಿಸಿದ್ದು ಸುಳ್ಳಲ್ಲ.
ಧನ್ಯವಾದಗಳು ಸಾರ್..
ಧನ್ಯವಾದಗಳು ಶಂಕರಿ ಮೇಡಂ