ವಿಶೇಷ ದಿನ

ಜೀವ ವೈವಿಧ್ಯತೆಯ ರಕ್ಷಣೆ ನಮ್ಮ ಹೊಣೆ

Share Button

ಅಗಾಧವಾದ ಸಂಪನ್ಮೂಲವನ್ನು ಒಳಗೊಂಡ ಪ್ರಕೃತಿಯಲ್ಲಿ ಜೀವ ವೈವಿಧ್ಯತೆಯನ್ನು ಕಾಣುತ್ತೇವೆ. ಈ ಜೀವ ವೈವಿಧ್ಯತೆ ಪ್ರಕೃತಿಯ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೀವವೈವಿಧ್ಯತೆಯ ಮಹತ್ವವನ್ನು ತಿಳಿಯುವಲ್ಲಿ ವಿಫಲರಾಗಿರುವುದು ನಿಸರ್ಗದ ಅವನತಿಯ ಮೊದಲ ಹೆಜ್ಜೆ ಎನ್ನಬಹುದು.ಈ ವೈವಿಧ್ಯತೆಯ ನೆಲೆ ಅರಣ್ಯಗಳು.

ಜೀವ ವೈವಿಧ್ಯತೆ ಎಂದರೇನು?

ಪರಿಸರದಲ್ಲಿ ಪ್ರಕೃತಿಗೆ ಪೂರಕವಾದ ಬೇರೆ ಬೇರೆ ಜೀವಿಗಳನ್ನು ಅಂದರೆ ಪ್ರಾಣಿ, ಪಕ್ಷಿ, ಗಿಡ ಮರ, ಕ್ರಿಮಿ, ಕೀಟ, ಹೂ ಹಣ್ಣು ಜಲಚರಗಳು, ಭೂಚರಗಳು, ವಾಯುಚರಗಳು, ಉಭಯವಾಸಿಗಳು, ಸರೀಸೃಪಗಳು, ವನ್ಯ ಜೀವಿಗಳು,ವಿವಿಧ ಸಸ್ಯ ಸಂಪತ್ತು, ವಿವಿಧ ಪ್ರಾಣಿಸಂಪತ್ತನ್ನು ಒಳಗೊಂಡ ಪ್ರಕೃತಿಯ ಬ್ರಹ್ಮಾಂಡರೂಪ. ಜೀವ ಜಾಲದ ಕೊಂಡಿಯನ್ನು ಭೂಮಂಡಲದಲ್ಲಿ ಕಾಣುತ್ತೇವೆ. ಈ ವಿವಿಧತೆ ಜೈವಿಕ ಭದ್ರತೆಗೆ ಅತೀ ಅವಶ್ಯಕ.

ರವೀಂದ್ರನಾಥ ಟಾಗೋರವರು ತಮ್ಮ ತಪೋವನ ಎಂಬ ಪ್ರಬಂಧದಲ್ಲಿ “ಅರಣ್ಯಗಳು ಕೇವಲ ಜ್ಞಾನ ಹಾಗೂ ಸ್ವಾತಂತ್ರ್ಯ ದ ಆಧಾರಗಳಲ್ಲ ಅವು ಸೌಂದರ್ಯ, ಸಂತೋಷ, ಸಾಮರಸ್ಯ,ಸಂತೃಪ್ತಿ, ಪರಿಪೂರ್ಣತೆಗಳಿಗೆ ಆಧಾರವಾಗಿವೆ.” ಎನ್ನುತ್ತಾರೆ.
ಅಂದರೆ ನಿಸರ್ಗ ಎಲ್ಲರ ಒಳಿತಿನ ಮೂಲ ಎಂಬುದು ಇಲ್ಲಿ ಸ್ಪಷ್ಟವಾಗಿದೆ

ಇಂದಿನ ಪರಿಸ್ಥಿತಿ ಹೇಗಿದೆ?

ಆಧುನಿಕತೆ ಬೆಳೆದಂತೆ ಪ್ರಕೃತಿಯನ್ನು ತಾಯಿ ಎಂಬ ಭಾವದಲ್ಲಿ ಕಾಣುವ ರೀತಿ ಮಾಯವಾಗಿ ಕೇವಲ ನಮ್ಮ ಆಸೆಗಳನ್ನು, ಪೂರೈಸುವ ಒಂದು ವಸ್ತುವನ್ನಾಗಿ ಕಾಣುತ್ತಿದ್ದೇವೆ. .ಅಂದಿನಿಂದ ಪ್ರಕೃತಿಯ ಮೇಲೆ ನಮ್ಮ ಶೋಷಣೆ ನಡೆಯುತ್ತಾ ಹೋಯಿತು.ಇದರ ಪರಿಣಾಮದಿಂದ ಜೀವಜಾಲದ ಕೊಂಡಿ ಕಳಚುತ್ತಾ ಹೋಯಿತು. ಹಾಗಾಗಿ ಆಧುನಿಕತೆಯ ಭರಾಟೆಗೆ ಅನೇಕ ಜೀವಿಗಳು ಪರಿಸರದಿಂದ ನಾಶವಾದವು.ಇಂದು ನೈಸರ್ಗಿಕ ಪರಿಸರ ಮಾಯವಾಗಿ ಮಾನವ ನಿರ್ಮಿತ ಪರಿಸರವನ್ನು ಕಾಣುತ್ತಿದ್ದೇವೆ. ಇಂದು ಜಗತ್ತಿನಲ್ಲಿ ಶೇ 25 ರಷ್ಟು ಜೀವ ಹಾಗು ಸಸ್ಯ ಪ್ರಬೇಧಗಳು ಅಳಿವಿನಂಚಿಗೆ ಸಾಗಿವೆ ಎಂಬುದನ್ನು ನಂಬಲು ಕಷ್ಟವಾದರೂ ನಂಬಲೇ ಬೇಕು. ಹೀಗೆ ನಾಶವಾದರೆ ಜೀವಜಾಲದ ಕೊಂಡಿ ಕಳಚಿ ವಿನಾಶ ಸಂಭವಿಸುವುದರಲ್ಕಿ ಯಾವುದೇ ಸಂದೇಹವಿಲ್ಲ.ಹಾಗೂ ಕಾಡುಗಳನ್ನು ಕಡಿದು ನಾಡನ್ನಾಗಿಸಿದಾಗ ಸಹಜವಾಗಿ ಅಲ್ಲಿಯ ಜೀವಜಂತುಗಳು ಅಳಿವನ್ನು ಪಡೆಯುತ್ತವೆ. ಒಂದು ನಲವತ್ತು ಐವತ್ತು ವರ್ಷಗಳ ಹಿಂದೆ ನಾವು ಹಳ್ಳಿಗಳಲ್ಲಿ ಕಾಣುತ್ತಿದ್ದ ದೊಡ್ಡಗಾತ್ರದಹಳದಿ, ಕೆಂಪು ವಿವಿಧ ಬಣ್ಣದ ಸುಂದರವಾದ ಚಿಟ್ಟೆಗಳನ್ನು ಮನೆಯ ಒಳಗೆ ಬಂದು ಚಿಲಿಪಿಲಿಗುಡುವ ಗುಬ್ಬಚ್ಚಿ ಗಳು, ಹೊಲವನ್ನು ಉತ್ತಿ ಬೀಜ ಬಿತ್ತಿದಾಗ ಮುತ್ತುವ ಕೆಂಪು ಕೊಕ್ಕಿನ ಗಿಳಿಗಳು, ಪಾರಿವಾಳಗಳು, ಅಷ್ಟೇ ಏಕೆ? ಒಂದಗುಳ ಕಂಡರೆ ತನ್ನ ಬಳಗವನ್ನೇ ಕರೆಯುವ ಕಾಗೆಗಳನ್ನು , ಕೆಲವು ಜಾತಿಯ ಮೀನುಗಳನ್ನು,ವಿವಿಧ ರೀತಿಯ ಹಾತೆಗಳನ್ನು ಇನ್ನು ಅನೇಕ ವೈವಿಧ್ಯಮಯ ಜೀವಿಗಳನ್ನು ಇಂದು ಕಾಣುತ್ತಿಲ್ಲ ಎಂಬುದು ವಾಸ್ತವ.

ನಾವು ಉಪಯೋಗಿಸುವ ವೈಯರ್ ಲೆಸ್ ಸಲಕರಣೆಗಳು, ಮೊಬೈಲ್ಗಳು, ಕೇಬಲ್ಗಳು ಎಲ್ಲದರಲ್ಲೂ ಇರುವ ರೇಡಿಯೇಶನ್ ಪ್ರಮಾಣ ಕ್ರಮೇಣವಾಗಿ ಜೀವಸಂಕುಲದ ಒಂದೋಂದೇ ಕೊಂಡಿ ಕಳಚಲು ಕಾರಣವಾಗಿದೆ ಎಂಬುದನ್ನು ಒಪ್ಪಲು ಕಷ್ವಾದರೂ ಒಪ್ಪಲೇಬೇಕು.

ಇರುವುದೊಂದೇ ಭೂಮಿ

ಹೌದು, ಎಲ್ಲರಿಗೂ ಗೊತ್ತಿದೆ ಜೀವಿಗಳ ವಾಸಕ್ಕೆ ಯೋಗ್ಯವಾದ ಏಕೈಕ ತಾಣ ಭೂಮಿ ಮಾತ್ರ. ನೀರು, ಗಾಳಿ ಬೆಳಕು, ನೆಲ ಎಲ್ಲವೂ ಇದ್ದ ಭೂಮಿ ಮಾತ್ರ ವಾಸಕ್ಕೆ ಯೋಗ್ಯ. ಆದರೆ ಇರುವ ಒಂದು ಭೂಮಿಯನ್ನು ನಾವು ನಮ್ಮದು ಎಂಬ ಅಹಂ ನಲ್ಲಿ ಸತತ ಗಧಾಪ್ರಹಾರ ಮಾಡುತ್ತಿದ್ದಾನೆ.ಹೀಗೆ ಪ್ರಾಕೃತಿಕ ಸಂಪತ್ತನ್ನು ಹಾಳುಮಾಡುತ್ತಿದ್ದರೆ, ಮಣ್ಣನ್ನು, ವಾಯುವನ್ನು, ಜಲವನ್ನು, ಬೆಳಕನ್ನು ಮಾಲಿನ್ಯಮಾಡುತ್ತಿದ್ದರೆ ಇನ್ನೆಷ್ಟು ದಿನ ಭೂಮಿ ವಾಸಕ್ಕೆ ಯೋಗ್ಯವಾದೀತು? ಅಲ್ಲದೇ ಮನುಷ್ಯರಾದ ನಾವು ಈ ಭೂಮಿ ಕೇವಲ ನಮಗೇ ಎಂದು ತಿಳಿದು ಶೋಷಣೆ ಮಾಡುತ್ತಿದ್ದರೆ ಉಳಿದ ಜೀವಸಂಕುಲದ ಗತಿಯೇನು? ಕೊನೆಯಲ್ಲಿ ಮಾನವನ ಗತಿಯೇನು? ಎಂದು ಗಹನವಾಗಿ ಚಿಂತಿಸುವ ಅವಶ್ಯಕತೆ ಇದೆ. ಕಾರಣ , ಪರಿಸರ ಮಾಲಿನ್ಯ…ಮಾಲಿನ್ಯವೆಂದು ಬಾಯಿಬಡಿದುಕೊಳ್ಳುವ ನಮಗೆ ಮಣ್ಣಿನಲ್ಲಿ ಇಂದು ಹೆಚ್ಚಾಗಿ ಕಾಣುತ್ತಿರುವುದು ಎಲ್ಲೆಂದರಲ್ಲಿ ಬೀಸಾಡಿದ ಪ್ಲಾಸ್ಟಿಕ್,ಬಳಸಿದ ರಾಸಾಯನಿಕಗಳು, ಗಾಳಿಯಲ್ಲಿ ಕಾರುವ ಇಂಗಾಲದ ಡೈ ಆಕ್ಸೈಡ್, ಜಲದಲ್ಲಿ ಹರಿಬಿಟ್ಟ ರಾಸಾಯನಿಕಗಳು, ಹರಿದ ಓಝೋನ್ ನಿಂದ ಹೊಮ್ಮುವ ನೇರಳಾತೀತ ಕಿರಣಗಳು. ಅಷ್ಟೇ ಅಲ್ಲ ಅರಣ್ಯಪ್ರದೇಶಗಳಲ್ಲಿ ಸಹಜವಾಗಿ ಹಾಗೂ ಮಾನವನ ಕುಟಿಲತೆಯಿಂದ ಹರಡುವ ಕಾಡ್ಗಿಚ್ಚು ಎಷ್ಟೊಂದು ಪ್ರಕೃತಿ ಸಂಪತ್ತಿನ ನಾಶಕ್ಕೆ ಕಾರಣವಾಗಿದೆ ಎಂಬುದನ್ನುಊಹಿಸಲಾಗದು. ಹೀಗಿರುವಾಗ ಸುಂದರ ಬದುಕು ಕನಸಾಗುತ್ತಿದೆ ಅನಿಸುತ್ತದೆ.

ಈಗ…ನಾವೇನು ಮಾಡಬಹುದು?

ಪ್ರಕೃತಿಯಲ್ಲಿ ತಿಳಿದವರಾದ ಮಾನವರ ಕರ್ತವ್ಯ ಬಹಳವಿದೆ.

  • ಅರಣ್ಯಗಳನ್ನು ರಕ್ಷಿಸುವುದು ಮತ್ತು ಗಿಡಮರಗಳನ್ನು ನೆಟ್ಟು ಪೋಷಿಸುವುದು.
  • ಪ್ಲಾಸ್ಟಿಕ್ ತ್ಯಾಜ್ಯಗಳ ಬಳಕೆಯನ್ನು ಮಿತಗೊಳಿಸುವುದು ಅಥವಾ ಕಡ್ಡಾಯವಾಗಿ ನಿಷೇಧ ಮಾಡುವುದು.
  • ಪ್ಲಾಸ್ಟಿಕ್ ಗೆ ಪೂರಕವಾಗಿ ಜೈವಿಕ ವಸ್ತುಗಳ ಉತ್ಪಾದನೆ ಮತ್ತು ಬಳಕೆ
  • ಕಾಡಿಗೆ ಸಹಜವಾಗಿ ಬೀಳುವ ಬೆಂಕಿಯ ಕಡೆಗೆ ಪ್ರತಿಯೊಬ್ಬರೂ ನಿಗಾ ಇರಿಸುವುದು.
  • ಕಾಡಿಗೆ ಮನುಷ್ಯರು ಹಾಕುವ ಬೆಂಕಿಯನ್ನು ನಿಯಂತ್ರಿಸುವುದು.
  • ಮಾನವರಲ್ಲಿ ಭೂಮಿಯನ್ನು ಶೋಷಣೆಮಾಡುವ ಕುಟಿಲ ಬುದ್ದಿ ನಶಿಸಬೇಕು.
  • ನಮ್ಮಲ್ಲಿಯ ಕೊಳ್ಳಬಾಕ ಸಂಸ್ಕೃತಿ ಹಾಗೂ ಸ್ವಾರ್ಥ ಅಳಿಯಬೇಕು.
  • ನಾ ಮೇಲು ನೀಕೀಳು ಎಂಬ ಬುದ್ಧಿಯಲ್ಲಿ ನಡೆಯುವ ಆಕ್ರಮಣಗಳು, ಯುದ್ಧಗಳು, ಬಾಂಬು ಸ್ಪೋಟಗಳು ಕಡ್ಡಾಯವಾಗಿ ಜಗತ್ತಿನಿಂದ ಮಾಯವಾಗಬೇಕು.
  • ಈ ಮೇಲಿನ ಎಲ್ಲ ಅಂಶಗಳೂ ಕಾರ್ಯಗತವಾಗಬೇಕೆಂದರೆ, ಇತಿಹಾಸಕಾರ ಹಾಗೂ ತತ್ವಜ್ಞಾನಿ ಕೆರೋಲಿನ್ ಮರ್ಚಂಟ್ ರವರ ಹೇಳಿಕೆಯಂತೆ ಪ್ರಕೃತಿ ನಮ್ಮಹೆತ್ತ ತಾಯಿಯಂತೆ ಅದಕ್ಕೆ ಜೀವವಿದೆ, ಹಣ, ಬಂಗಾರಕ್ಕಾಗಿ ತಾಯಿಯ ಗರ್ಭವನ್ನು ಸೀಳದೇ ಆ ತಾಯಿಯನ್ನು ಪ್ರೀತಿಯಿಂದ ರಕ್ಷಣೆ ಮಾಡಿದಾಗ ಮಾತ್ರ ಇರುವ ಒಂದೇ ಭೂಮಿಯನ್ನು ಇಡೀಪ್ರಕೃತಿಯನ್ನು ರಕ್ಷಿಸಬಹುದು.
    ಪ್ರತೀವರ್ಷ ಮೇ 22 ನ್ನು ಅಂತರ್ ರಾಷ್ಟ್ರೀಯ ಜೀವ ವೈವಿಧ್ಯತೆಯ ದಿನವನ್ನು ಆಚರಿಸುವ ಮೂಲಕವಾಗಿ ಜೀವ ಸಂಕುಲದ ಬಗ್ಗೆ, ಅಳಿಯುತ್ತಿರುವ ಪ್ರಾಣಿ , ಸಸ್ಯ ಪ್ರಬೇಧಗಳಬಗ್ಗೆ ಅರಿವನ್ನು ಮೂಡಿಸಬಹುದು.

ಶುಭಲಕ್ಷ್ಮಿ ಆರ್ ನಾಯಕ

10 Comments on “ಜೀವ ವೈವಿಧ್ಯತೆಯ ರಕ್ಷಣೆ ನಮ್ಮ ಹೊಣೆ

  1. ಪ್ರಕಟಣೆಗೆ ಧನ್ಯವಾದಗಳು ಮೇಡಮ್.

  2. ಮಕ್ಕಳು ಪರಿಸರ ಉಳಿಸುವಲ್ಲಿ ಮುಖ್ಯ, ಅವರು ನಾಳಿನ ಪ್ರಜೆಗಳು. ಅವರಲ್ಲಿ ಅರಿವು ಮೂಡಿಸಬೇಕು. ಓಳ್ಳೆಯ ಲೇಖನ

  3. ಸಮಯೋಚಿತ ಬರೆಹ, ಈ ದಿನ ಇದಕಾಗಿ ಮೀಸಲು.
    ನಾವೇನು ಮಾಡಬಹುದು? ಉಪಯುಕ್ತ ನಾವೆಲ್ಲ ಅನುಸರಿಸಿದರೆ ಅದುವೇ ಯುಕ್ತಾಯುಕ್ತ.
    ಧನ್ಯವಾದ

  4. ಸಕಾಲಿಕ ಲೇಖನ ಅಂಕಿ ಅಂಶಗಳನ್ನೊಳಗೊಂಡು ಬಡಿದೆಬ್ಬಿಸುವಂತಿದೆ.

  5. ಜಗತ್ತಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಪ್ರಕೃತಿ ನಾಶವನ್ನು ತಡೆಯುವ ಕಾಳಜಿ ಹೊತ್ತ ಚಿಂತನಾತ್ಮಕ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *