ಪುನರುತ್ಥಾನದ ಪಥದಲ್ಲಿ: ಹೆಜ್ಜೆ 27
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 9:
ಕಾಂಬೋಡಿಯಾದ ಸೀಮ್ ರೀಪ್ ನಲ್ಲಿ
23 ಸೆಪ್ಟೆಂಬರ್ 2024 ರಂದು ಮಧ್ಯಾಹ್ನ ಕಾಂಬೋಡಿಯಾ ತಲಪಿದ ಆದಿನ ಸಂಜೆ ನಮಗೆ ಪೂರ್ವ ನಿಗದಿತ ಕಾರ್ಯಕ್ರಮಗಳೇನೂ ಇರಲಿಲ್ಲ. ಅರ್ಧದಿನದ ಚಿಕ್ಕ ಕಾರ್ಯಕ್ರಮವಿದ್ದರೆ ಒಳ್ಳೆಯದಿತ್ತು ಅನಿಸಿತ್ತು. ಮಾರ್ಗದರ್ಶಿ ಚನ್ಮನ್ ನಮಗೆ ಎದುರು ಕಾಣಿಸುತ್ತಿದ್ದ ನದಿ, ಸೇತುವೆ ಹಾಗೂ ರಸ್ತೆಯನ್ನು ತೋರಿಸಿ ‘ನೀವು ವಿಶ್ರಾಂತಿ ತೆಗೆದುಕೊಳ್ಳುವುದಿದ್ದರೆ ನಿಮ್ಮಿಷ್ಟ. ಶಾಪಿಂಗ್ ಮಾಡಲು ಇಷ್ಟಪಡುವಿರಾದರೆ ಮಾರ್ಕೆಟ್ ಇದೆ, ಆಸಕ್ತಿ ಇದ್ದರೆ ಎದುರುಗಡೆ ಇರುವ ಪಗೋಡಾಕ್ಕೆ ಭೇಟಿ ಕೊಡಬಹುದು. ಪಗೋಡಾಕ್ಕೆ ಹೊಂದಿಕೊಂಡ ರಸ್ತೆಯಲ್ಲಿ ಮುಂದುವರಿದರೆ ‘ ಕರ್ರಿ ಕಿಂಗ್’ ಎಂಬ ಭಾರತೀಯ ರೆಸ್ಟಾರೆಂಟ್ ನಲ್ಲಿ ನಿಮಗೆ ರಾತ್ರಿಯ ಊಟಕ್ಕೆ ಬುಕ್ ಮಾಡಲಾಗಿದೆ. ಒಂದೇ ರಸ್ತೆ, ನಿಮಗೆ ಹೋಗಲು ಸಾಧ್ಯವಾಗುವುದಾರೆ ಹಾಗೆಯೇ ಆಗಲಿ, ನಾನು ಬರಬೇಕಿದ್ದರೆ ಮೆಸೆಜ್ ಮಾಡಿ’ ಎಂದ. ಒಂದೇ ರಸ್ತೆ ತಾನೇ, ನಾವು ನಮ್ಮ ಸಮಯಕ್ಕೆ ಊಟಕ್ಕೆ ಹೋಗುವೆವು ಎಂದೆವು. ಹಾಗಿದ್ದರೆ , ನಾಳೆ ಭೇಟಿಯಾಗೋಣ ಎಂದು ಹೊರಟ.
ನಮ್ಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದ ‘ಹೋಟೆಲ್ ಪಿಯರಿ ಅಂಡ್ ಸ್ಪಾ’ದ ಆವರಣ ಚೆನ್ನಾಗಿತ್ತು. ಪ್ರತಿ ಅಂತಸ್ತಿನ ಸ್ವಾಗತ ಹಾಲ್, ಕಾರಿಡಾರ್ ಎಲ್ಲೆಡೆಯೂ ತೇಗದ ಮರದಲ್ಲಿ ಮಾಡಿದ ಕುಸುರಿ ಕೆತ್ತನೆಯ ಶಿಲ್ಪಗಳು ಬಹಳ ಸೊಗಸಾಗಿದ್ದುವು. ನಾವು ಕೊಠಡಿ ಸೇರಿ ಸಣ್ಣ ನಿದ್ರೆ, ಫೋನ್ ಮಾಡುವುದು, ವಾಟ್ಸಾಪ್ ಸಂದೇಶಗಳನ್ನು ಗಮನಿಸುವುದು ಇತ್ಯಾದಿ ಕಾಲಕ್ಷೇಪ ಮಾಡಿ ಸಾಯಂಕಾಲ ವಾಕಿಂಗ್ ಹೊರಟೆವು. ಹೋಟೆಲ್ ನ ಎದುರುಗಡೆ ಸ್ವಚ್ಚವಾದ ‘ಸೀಮ್ ರೀಪ್’ (Siem Reap) ನದಿ ಹರಿಯುತ್ತಿತ್ತು. ಆ ನದಿಗೆ ಅಡ್ಡವಾಗಿ ಅಲ್ಲಲ್ಲಿ ಸೇತುವೆಗಳಿದ್ದುವು. ಈ ಸೇತುವೆಗಳುದ್ದಕ್ಕೂ, ಬೃಹತ್ ಹಾವಿನಾಕಾರದ ಸಿಮೆಂಟ್ ಕಟ್ಟೆಯನ್ನು ಗಮನಿಸಿದೆವು. ಸೇತುವೆಯ ಆರಂಭದಲ್ಲಿ ದೊಡ್ಡದಾದ ಸಿಮೆಂಟ್ ಹಾವಿನ ಹೆಡೆ ಇದ್ದರೆ, ಕಟ್ಟೆಯುದ್ದಕ್ಕೂ ಹಾವು ಪವಡಿಸಿದಂತೆ ಇತ್ತು. ಕಾಂಬೋಡಿಯಾದ ಹಲವೆಡೆ, ಮುಖ್ಯ ರಸ್ತೆಗಳಲ್ಲಿ, ದೇವಾಲಯಗಳ ಮೆಟ್ಟಿಲಿನಲ್ಲಿ, ಕಟ್ಟಡಗಳ ಸ್ವಾಗತ ಕಮಾನಿನಲ್ಲಿ….ಹೀಗೆ ಹಲವೆಡೆ ಹಲವಾರು ತಲೆಗಳುಳ್ಳ ಹಾವಿನ ಹೆಡೆಯ ಆಕಾರಗಳನ್ನು ಕಂಡೆವು. ಇದನ್ನು ನೋಡುತ್ತಿದ್ದಂತೆ, ವರ್ಣಮಯವಾದ ನಾಗಮಂಡಲ, ನಾಗಬನ, ತಂಬಿಲ ಸೇವೆ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಆಶ್ಲೇಷ ಬಲಿ ಹೀಗೆ ನಮ್ಮ ತುಳುನಾಡಿನ ನಾಗಾರಾಧನೆಯ ವಿವಿಧ ಆಯಾಮಗಳು ಮನೋಭಿತ್ತಿಯಲ್ಲಿ ಮೂಡಿ, ತುಳುನಾಡಿಗೂ ಕಾಂಬೋಡಿಯಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಎನಿಸಿತು.
ಸೀಮ್ ರೀಪ್ ನದಿಗೆ ಅಡ್ಡವಾಗಿ ಕಟ್ಟಿದ್ದ ‘ನಾಗಹೆಡೆ ಸೇತುವೆ’ಯನ್ನು ದಾಟಿ ಸ್ವಲ್ಪ ದೂರ ನಡೆದರೆ ಬಹಳ ಸೊಗಸಾದ ಪ್ರಿಹ್ ಪ್ರೋಮ್ ರೋತ್’ (Preah Promrath) ಎಂಬ ಹೆಸರಿದ್ದ ಪಗೋಡಾ ಕಾಣಿಸಿತು. ಬೃಹತ್ತಾದ ತಾವರೆಯಾಕಾರದ ಆವರಣದಲ್ಲಿ, ಸೊಗಸಾದ ಹೂದೋಟದ ಮಧ್ಯದಲ್ಲಿ ಪಗೋಡಾ ಕಂಗೊಳಿಸುತ್ತಿತ್ತು. ನಾವು ಹೋಗಿದ್ದ ಸಮಯ ಬಾಗಿಲು ಮುಚ್ಚಿದ್ದ ಕಾರಣ ಹೊರಗಡೆ ಸುತ್ತಾಡಿದೆವು.
ನಾವು ವಿಶಾಲವಾಗಿದ್ದ ಪಗೋಡಾಕ್ಕೆ ಪ್ರದಕ್ಷಿಣೆ ಬಂದು ನಿಧಾನವಾಗಿ ನಡೆಯುತ್ತಾ ಮೊದಲು ಕಾಣಿಸಿದ ‘ನಟರಾಜ್’ ಎಂಬ ಹೆಸರಿನ ರೆಸ್ಟಾರೆಂಟ್ ಗೆ ಹೋದೆವು. ದಕ್ಷಿಣ ಭಾರತ ಶೈಲಿಯ ಊಟ ರುಚಿಯಾಗಿತ್ತು. ಅಲ್ಲಿಯ ಮಾಲಿಕರು ಕೇರಳ ಮೂಲದವರಾಗಿದ್ದರು. ಊಟ ಮುಗಿಸಿ, ಅಲ್ಲಿದ್ದ ಮಾರ್ಕೆಟ್ ನಲ್ಲಿ ಕಣ್ಣು ಹಾಯಿಸುತ್ತಾ ನಿಧಾನಕ್ಕೆ ಬಂದೆವು. ಅಲ್ಲಲ್ಲಿ ಡಾಲರ್/ ಪೌಂಡ್ ಕರೆನ್ಸಿಗೆ ಸ್ಥಳೀಯ ಹಣ ಕೊಡುವ ವಿದೇಶಿ ವಿನಿಮಯ ವ್ಯವಸ್ಥೆ ಇತ್ತು. ಎಲ್ಲಾ ಮಾರ್ಕೆಟ್ ಗಳಲ್ಲಿರುವಂತೆ ಇಲ್ಲಿಯೂ ಜನಜಂಗುಳಿ, ಡಿಸ್ಕೌಂಟ್ ಮಾರಾಟಗಳು, ವಿವಿಧ ಆಹಾರದ ಮಳಿಗೆಗಳು, ಬಟ್ಟೆ ಅಂಗಡಿಗಳು, ಕರಕುಶಲ ವಸ್ತುಗಳು ಇತ್ಯಾದಿ ಮಾರಾಟಕ್ಕೆ ಲಭ್ಯ ಇದ್ದುವು. ಅಲ್ಲಲ್ಲಿ ಮಸಾಜ್ ಸೆಂಟರ್ ಗಳು, ಸ್ಪಾ ಗಳು ಇದ್ದುವು. ಫುಟ್ ಪಾತ್ ನಲ್ಲಿ ದೊಡ್ಡದಾದ ಅಕ್ವೇರಿಯಂಗಳಿದ್ದುವು . ಜನರು ಅಲ್ಲಿ ನಿಗದಿತ ಹಣ ಕೊಟ್ಟು, ತಮ್ಮ ಪಾದಗಳನ್ನು ಅಕ್ವೇರಿಯಂನಲ್ಲಿ ಅದ್ದಿ, ಮೀನುಗಳ ಮೂಲಕ ತಮ್ಮ ಪಾದಗಳಿಗೆ ‘ಫಿಶ್ ಮಸಾಜ್’ ಪಡೆಯಬಹುದಿತ್ತು.
ಗೂಗಲ್ ಮಾಹಿತಿ ಮತ್ತು ನಮ್ಮ ಮಾರ್ಗದರ್ಶಿಯ ವಿವರಣೆ ಪ್ರಕಾರ ಕಾಂಬೋಡಿಯಾ ಜನರ ನಾಗಾರಾಧನೆಯ ಹಿನ್ನೆಲೆ ಬಲು ಸ್ವಾರಸ್ಯಕರವಾಗಿದೆ. ಖ್ಮೇರ್ (Khmer) ಸಂಸ್ಕೃತಿಯ ಪ್ರಕಾರ, ನಾಗವು ಶಕ್ತಿ ಹಾಗೂ ರಕ್ಷಣೆಯ ಸಂಕೇತ. ಕಾಂಬೋಡಿಯಾವು ಮೆಕಾಂಗ್ ನದಿಯ ಫಲವತ್ತಾದ ಜಾಗವನ್ನು ಒಳಗೊಂಡಿದ್ದು , ಇಲ್ಲಿ ನೀರು ಹಾಗೂ ಪ್ರಕೃತಿ ಜನಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾಗವು ಪ್ರಕೃತಿ ಮತ್ತು ಫಲವತ್ತತೆಯ ಸಂಕೇತವೂ ಆಗಿದೆ. ಇನ್ನು ಪೌರಾಣಿಕ ದಂತಕತೆಯ ಪ್ರಕಾರ ಭಾರತದ ಹಿಂದೂ ರಾಜಕುಮಾರ ಹಾಗೂ ಸ್ಥಳೀಯ ನಾಗ ರಾಜಕುಮಾರಿಯ ವಿವಾಹದಿಂದಾಗಿ ಖ್ಮೇರ್ ವಂಶ ಜನ್ಮ ತಾಳಿತು. ಖ್ಮೇರ್ ವಂಶದ ಅವನತಿಯ ನಂತರ ಅಸ್ತಿತ್ವಕ್ಕೆ ಬಂದ ‘ತೆರವಾಡ’ ಪಂಥದ ಬೌದ್ಧ ಧರ್ಮೀಯರ ನಂಬಿಕೆ ಪ್ರಕಾರ ಸರ್ಪಗಳ ರಾಜನಾದ ‘ ಮುಕಾಲಿಂಡ’ (Mucalinda)ನು ಬುದ್ಧನ ಶಿರದ ಮೇಲೆ ಛತ್ರಿಯಂತೆ ಇದ್ದು ರಕ್ಷಣೆ ಕೊಡುತ್ತಾನೆ. ಹೀಗೆ ಎರಡೂ ಧರ್ಮದವರು ತಂತಮ್ಮ ಧಾರ್ಮಿಕ ಆಚರಣೆಗಳಲ್ಲಿ ಸರ್ಪಕ್ಕೆ ಮಹತ್ವ ಕೊಟ್ಟಿದ್ದಾರೆ. ಹೀಗಾಗಿ ಕಾಂಬೋಡಿಯಾದ ಪ್ರಮುಖ ರಸ್ತೆಗಳಲ್ಲಿ, ದೇವಾಲಯಗಳಲ್ಲಿ, ಮುಖ್ಯ ಕಟ್ಟಡಗಳ ಮೆಟ್ಟಿನಲ್ಲಿ, ಪಗೋಡಾಗಳಲ್ಲಿ ಉದ್ಯಾನವನದಲ್ಲಿ…ಹೀಗೆ ಎಲ್ಲೆಡೆಯೂ ಹಲವಾರು ಹೆಡೆಗಳುಳ್ಳ ಭವ್ಯವಾದ ನಾಗಶಿಲ್ಪಗಳು ಕಾಣಸಿಗುತ್ತವೆ. ಏಳು ಹೆಡೆಯ ನಾಗಶಿಲ್ಪ ಹೆಚ್ಚಾಗಿ ಕಾಣಸಿಗುತ್ತದೆ.
ಕಾಂಬೋಡಿಯಾವು ಕೃಷಿಪ್ರಧಾನ ದೇಶ. ಇಲ್ಲಿಯವರ ಮಾತೃಭಾಷೆಯ ಹೆಸರು ‘ಖ್ಮೇರ್’ . ಕಾಂಬೋಡಿಯಾದ ಜನರು ಪರಸ್ಪರ ಭೇಟಿಯಾದಾಗ ನಮ್ಮ ‘ನಮಸ್ತೆ’ ಶೈಲಿಯಲ್ಲಿ ಎರಡೂ ಕೈ ಜೋಡಿಸಿ , ತಲೆಬಾಗಿಸಿ ‘ ಛಮ್ ರೀಪ್ ಸೊ’ (Chhum Reap Suo) ಎಂದು ಹೇಳುತ್ತಾ ವಂದಿಸುತ್ತಾರೆ. ವಿಯೆಟ್ನಾಂ ಜನರ ದೈಹಿಕ ಚಹರೆ, ಬಣ್ಣ, ಆಹಾರ ಹಾಗೂ ಜನಜೀವನವು ಚೀನೀಯರ ಪ್ರಭಾವಕ್ಕೆ ಒಳಪಟ್ಟಂತೆ ಕಾಣಿಸುತ್ತದೆ. ಆದರೆ ವಿಯೆಟ್ನಾಂಗೆ ಹೊಂದಿಕೊಂಡಿರುವ ಕಾಂಬೋಡಿಯಾದವರು ಸ್ವಲ್ಪ ಮಟ್ಟಿಗೆ ಭಾರತೀಯರನ್ನು ಹೋಲುತ್ತಾರೆ. ಇಲ್ಲಿಯ ರಸ್ತೆಗಳಲ್ಲಿ ನಡೆಯುವಾಗ, ನಮ್ಮ ದೇಶದಲ್ಲಿ ಇರುವಂತೆಯೇ 5 ಅಡಿ ಮೇಲ್ಪಟ್ಟ, ಸ್ಥೂಲಕಾಯವುಳ್ಳ, ಕಂದು, ಬಿಳುಪು ಬಣ್ಣದ ಚಹರೆಯ ಯುವಕ ಯುವತಿಯರು ಕಾಣಸಿಕ್ಕಿದರು. ಇಲ್ಲಿನ ಜನಸಂಖ್ಯೆಯ 87 % ‘ಖ್ಮೇರ್’ ಜನಾಂಗವರು. ಅಕ್ಕಪಕ್ಕದ ವಿಯೆಟ್ನಾಂ, ಥಾಯ್ ಲ್ಯಾಂಡ್, ಲಾವೋಸ್ ಮೊದಲಾದ ದೇಶದವರು ಇಲ್ಲಿಯ ಅಲ್ಪಸಂಖ್ಯಾತರು. ಭಾರತೀಯರೂ ಸೇರಿದಂತೆ ಉದ್ಯೋಗ, ವ್ಯಾಪಾರಕ್ಕೆಂದು ಇತರ ದೇಶಗಳಿಂದ ಬಂದು ನೆಲೆಸಿರುವ ಹಲವಾರು ಮಂದಿ ಇದ್ದಾರೆ.
ಪ್ರಾಚೀನ ಕಾಲದಲ್ಲಿ ‘ಕಂಪೂಚಿಯ’ ಎಂದು ಕರೆಯಲ್ಪಡುತ್ತಿದ್ದ ಈ ದೇಶದ ಇತಿಹಾಸ ಭವ್ಯವಾದುದು. ಒಂದನೆಯ ಶತಮಾನದಲ್ಲಿ, ಪೌರಾತ್ಯ ದೇಶಗಳೊಂದಿಗೆ ವ್ಯಾಪಾರ ಮಾಡುತ್ತಿದ್ದ ಭಾರತೀಯ ವರ್ತಕರ ಮೂಲಕ ಇಲ್ಲಿಗೆ ಹಿಂದೂ ಧರ್ಮ ತಲಪಿತು. ಸ್ಥಳೀಯ ಜಾನಪದ ಮಾಹಿತಿಯ ಪ್ರಕಾರ, ಅಂದಿನ ಕಂಪೂಚಿಯಾದ ರಾಜಧಾನಿಯಾಗಿದ್ದ ‘ ಫುನಾನ್’ (Funan) ಎಂಬ ಬಂದರು ನಗರಕ್ಕೆ , ಭಾರತೀಯ ಮೂಲದ ‘ ಕೌಂಡಿನ್ಯ’ ಎಂಬ ಬ್ರಾಹ್ಮಣ ಬಂದಿದ್ದ. . ಆತನಿಂದಾಗಿ ಫುನಾನ್ ನಲ್ಲಿ ಸ್ಥಳೀಯ ವ್ಯವಸ್ಥೆಯೊಂದಿಗೆ ಹಿಂದೂ ಸಂಸ್ಕೃತಿ ಮತ್ತು ಆಚರಣೆಗಳು ಬೆಸೆಯುವಂತಾಯಿತು. ಆತ ಸ್ಥಳೀಯ ರಾಜಕುಮಾರಿಯನ್ನು ವಿವಾಹವಾದ . ಮುಂದೆ ಭಾರತದಲ್ಲಿ ಪಲ್ಲವ ವಂಶದವರ ಆಡಳಿತ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಅವಧಿಯಲ್ಲಿ ಇಲ್ಲಿದ್ದ ರಾಜರುಗಳಿಂದ ಹಿಂದೂ ಧರ್ಮಕ್ಕೆ ಆಡಳಿತಾತ್ಮಕ ಬೆಂಬಲವೂ ಲಭಿಸಿತು. 5-6 ನೇ ಶತಮಾನದಲ್ಲಿ ಫುನಾನ್ ನ ರಾಜನಾಗಿದ್ದ ಜಯವರ್ಮನ್ 1 ಕಾಲದಲ್ಲಿ ಇಲ್ಲಿ ಹಿಂದೂ ಸಂಸ್ಕೃತಿಯ ಉನ್ನತಿಗೆ ಕಾರಣನಾದ. ಇವನ ಅನಂತರದ ರಾಜರ ಕಾಲದಲ್ಲಿ, ಫುನಾನ್ ಅವನತಿಗೀಡಾಯಿತು ಹಾಗೂ ಮುಂದೆ ‘ಚೆನ್ಲಾ ವಂಶ’ (Chenla) ಅಧಿಕಾರಕ್ಕೆ ಬಂತು.
ಭಾರತದ ಪಲ್ಲವ ವಂಶದ ರಾಜರಿಂದ ಪ್ರಭಾವಿತರಾಗಿದ್ದ ಚೆನ್ಲಾ ವಂಶದ ರಾಜರುಗಳು ( 6-9 ಶತಮಾನ) ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಶಿವ ಹಾಗೂ ವಿಷ್ಣು ಮಂದಿರಗಳಾನ್ನು ಕಟ್ಟಿಸಿದರು. 6 ನೆ ಯ ಶತಮಾನದಲ್ಲಿ ಭಾವವರ್ಮನ್ 1 ಎಂಬ ರಾಜ ಶೈವ ಪಂಥಕ್ಕೆ ಹೆಚ್ಚು ಒತ್ತು ಕೊಟ್ಟನು. ಇದು ನಂತರದ ಮಹೇಂದ್ರವರ್ಮನ್ ಕಾಲದಲ್ಲಿಯೂ ಮುಂದುವರಿಯಿತು . ಏಳನೆಯ ಶತಮಾನದ ಜಯವರ್ಮನ್ 1 ರಾಜನು ‘ ದೇವ-ರಾಜ’ ಎಂಬ ಸಿದ್ಧಾಂತವನ್ನು ಪ್ರಚುರಪಡಿಸಿದನು. ಅದರ ಪ್ರಕಾರ, ರಾಜರು ಜೀವಂತ ದೇವರೆಂದೂ ಅವರು ಆರಾಧಿಸುವ ಶಿವ ಅಥವಾ ವಿಷ್ಣುವಿನ ಪ್ರತಿರೂಪವೆಂದೂ ಬಿಂಬಿಸಲಾಯಿತು. ಈ ಮೂಲಕ ಹಿಂದೂ ಹಾಗೂ ಖ್ಮೇರ್ ಮಿಶ್ರ ಸಂಸ್ಕೃತಿಯ ಆಚರಣೆಗಳು ಆರಂಭವಾದುವು. ಮುಂದಿನ ಖ್ಮೇರ್ ರಾಜರುಗಳಲ್ಲಿ ಕೆಲವರು ಶಿವನ ಆರಾಧಕರಾಗಿದ್ದರು ಇನ್ನು ಕೆಲವರು ವಿಷ್ಣುವನ್ನು ಪೂಜಿಸುತ್ತಿದ್ದರು. ಇದೇ ಸಂಸ್ಕೃತಿ ಮುಂದುವರಿದು, ರಾಜರುಗಳು ಆಯ್ಕೆಗೆ ತಕ್ಕಂತೆ ಪ್ರಭುತ್ವಕ್ಕೆ ದೈವತ್ವವನ್ನು ಸೇರಿಸಿಕೊಂಡು ಹಲವಾರು ಶಿವ ಹಾಗೂ ವಿಷ್ಣು ಮಂದಿರಗಳನ್ನು ನಿರ್ಮಿಸಿದರು. ಹೀಗೆ ಕೆಲವು ಶತಮಾನಗಳ ಕಾಲ , ಖ್ಮೇರ್ ರಾಜರುಗಳು ಕಟ್ಟಿಸಿದ ಹಲವಾರು ದೇವಾಲಯಗಳ ಸಮೂಹವು ವಿಶ್ವದಲ್ಲೇ ಅತಿದೊಡ್ಡ ಹಿಂದೂ ದೇವಾಲಯ ಸಮುಚ್ಛಯವಾದ ‘ಅಂಗ್ ಕೋರ್ ವಾಟ್ ‘ ಎಂದು ಪ್ರಸಿದ್ಧವಾಯಿತು.
ಆಂಗ್ ಕೋರ್ ಅವಧಿ ಎಂದು ಕರೆಯಲಾಗುವ 9-12 ಶತಮಾನದಲ್ಲಿ , ಇಂದಿನ ಆಂಗ್ ಕೋರ್ ವಾಟ್ ದೇವಾಲಯ ಸಮುಚ್ಛಯದಲ್ಲಿ ಮುಖವಾದ ವಿಷ್ಣು ದೇವಾಲಯ ನಿರ್ಮಾಣಗೊಂಡಿತು. ಸೂರ್ಯವರ್ಮನ್ 2 ಎಂಬ ರಾಜನ ಸಮಯವನ್ನು ಕಾಂಬೋಡಿಯಾದಲ್ಲಿ ಹಿಂದೂ ಧರ್ಮದ ಸುವರ್ಣ ಯುಗ ಎಂದು ಗುರುತಿಸಲಾಗಿದೆ. ನಂತರದ ಕಾಲದಲ್ಲಿ ಆಂತರಿಕ ಕಲಹಗಳಿಂದಾಗಿ ಖ್ಮೇರ್ ಸಾಮ್ರಾಜ್ಯದ ಅವನತಿ ಆರಂಭವಾಯಿತು. ಮುಂದೆ ರಾಜ ಜಯವರ್ಮನ್ 7 ಎಂಬವನು ಬೌದ್ಧ ಧರ್ಮದತ್ತ ಒಲವನ್ನು ತೋರಿಸಿದ ಕಾರಣ ಈ ಪರಿವರ್ತನೆಯ ಹಂತದಲ್ಲಿ ಹಿಂದೂ ಧರ್ಮವು ನಶಿಸಲಾರಂಭಿಸಿತು.
ಕಾಲಾನಂತರದಲ್ಲಿ ‘ ತೆರವಾಡ’ ಬೌದ್ಧ ಧರ್ಮವು ವ್ಯಾಪಕವಾಗಿ ಹಬ್ಬಿತು. ಈಗ ಕಾಂಬೋಡಿಯಾದಲ್ಲಿ ಪ್ರಚಲಿತವಿರುವ ಬೌದ್ಧಧರ್ಮದ ಆಚರಣೆಗಳಲ್ಲಿ ಹಿಂದೂ ಧರ್ಮದ ಛಾಯೆ ಕಾಣಿಸುತ್ತದೆ. ಉದಾಹರಣೆಗೆ, ದೇವರಿಗೆ ನೈವೇದ್ಯ ಅರ್ಪಿಸುವುದು, ಆರತಿ ಮಾಡುವುದು, ಪ್ರಸಾದ ಕೊಡುವುದು ಇತ್ಯಾದಿ. ಇದು ಮೂಲ ಬೌದ್ಧ ಧರ್ಮ ಎಂದು ಸ್ಥಳೀಯರು ಹೇಳುತ್ತಾರೆ. ಭಾರತದ ಲೇಹ್ -ಲಡಾಕ್ ಮೊದಲಾದೆಡೆ ಪ್ರಚಲಿತವಿರುವ ‘ಮಹಾಯಾನ’ ಬೌದ್ಧ ಧರ್ಮವನ್ನು ರೂಪಾಂತರ ಹೊಂದಿದ ಬೌದ್ಧಧರ್ಮ ಎಂದು ಗುರುತಿಸುತ್ತಾರೆ.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=42598
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಕಾಂಬೋಡಿಯಾದ ಚಾರಿತ್ರಿಕ ಹೆನ್ನೆಲೆಯನ್ನು ಸರಳ, ಸುಂದರವಾಗಿ ಈ ವಾರದ ಪ್ರವಾಸ ಕಥನ ತಿಳಿಸಿ ಕೊಟ್ಟಿದೆ.
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ.
ಪ್ರವಾಸ ಕಥನ ಓದಿಸಿಕೊಂಡುಹೋಯಿತು… ಸೊಗಸಾದ ನಿರೂಪಣೆ ನಾವೇ ಅಲ್ಲಿಗೆ ಹೋಗಿದ್ದರೂ ಇಷ್ಟು ವಿಚಾರಗಳು ತಿಳಿಯುತಿತ್ತೋ ಎಲ್ಲವೋ ಅಷ್ಟು ಚೆನ್ನಾದ ವಿವರಣೆ.. ಚಿತ್ರಗಳು ಪೂರಕವಾಗಿವೆ.. ವಂದನೆಗಳು ಗೆಳತಿ ಹೇಮಾ
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ.
ಆಹಾ… ಮನ ತುಂಬುವ ಬರಹ. ಬಹಳ ಚಂದ.
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಎಲ್ಲೆಡೆ ಕಾಣುವ ಏಳು ಹೆಡೆಯ ನಾಗಶಿಲ್ಪ, ಎರಡನೇ ಸೂರ್ಯವರ್ಮನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಹಿಂದೂಧರ್ಮ, ಬಳಿಕ ವ್ಯಾಪಕವಾಗಿ ಹಬ್ಬಿದ ಬೌದ್ಧಧರ್ಮ ಇತ್ಯಾದಿಗಳ ಮೇಲೆ ಬೆಳಕು ಚೆಲ್ಲುವ ಪ್ರವಾಸ ಲೇಖನವು ಆಸಕ್ತಿಕರವಾಗಿದೆ.
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ವಿಯೆಟ್ನಾ ಕಾಂಬೋಡಿಯ ಲೇಖನ ಅದ್ಭುತವಾಗಿ ಮೂಡಿಬರುತ್ತದೆ
ಮತ್ತೆ ಒಮ್ಮೆ ನೋಡಿದಂತಾಗುತ್ತಿದೆ
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಮಾಹಿತಿ ಪೂರ್ಣ ಪ್ರವಾಸ ಕಥನ.. ಇಂದು ಮೊದಲ ಬಾರಿಗೆ ಓದಿದೆ… ಮೊದಲಿನ ಭಾಗಗಳನ್ನು ಓದಬೇಕಾಗಿದೆ..ಚೆನ್ನಾಗಿದೆ ಮೇಡಂ..
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.