ಬಾಳ ಬವಣೆ

Share Button

ನಾರಾಯಣರಾವ್ ನನ್ನ ಬಾಲ್ಯದ ಸಹಪಾಠಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಣ್ಣ ಹಳ್ಳಿಯಿಂದ ಓದಲು ಬೆಂಗಳೂರಿಗೆ ಬಂದಿದ್ದಾತ. ಅವನು ಓದಿನಲ್ಲಿ ತುಂಬ ಆಸಕ್ತಿ ಇಟ್ಟುಕೊಂಡಿದ್ದ ಮೇಧಾವಿ. ಅವನು ಬೆಳೆದು ಬಂದ ಬಡತನದ ಹಿನ್ನೆಲೆಯೇ ಅವನಿಗೆ ಈ ರೀತಿಯ ಮನೋಭಾವನೆ ಬೆಳೆಯಲು ಪ್ರೇರಣೆ. ಚೆನ್ನಾಗಿ ಓದಿ ದೊಡ್ಡ ಹುದ್ದೆಯನ್ನು ಸಂಪಾದಿಸಿ ತನ್ನ ಬಾಲ್ಯದಲ್ಲಿ ವಂಚಿತನಾಗಿದ್ದ ಎಲ್ಲ ಸುಖ ಸೌಲಭ್ಯಗಳನ್ನು ತಾನು ಮತ್ತು ತನ್ನ ತಂದೆತಾಯಿಗಳು ಅನುಭವಿಸಬೇಕೆಂಬುದೇ ಅವನ ಗುರಿ. ಅವನ ಕನಸುಗಳಿಗೆ ಅವನ ಬುದ್ಧಿಶಕ್ತಿ, ಕಠಿಣ ಪರಿಶ್ರಮಗಳೇ ನೀರೆರೆದವು. ಓದಿನಲ್ಲಿ ಮುಂದಿದ್ದ ಅವನಿಗೆ ಮೆರಿಟ್ ಸ್ಕಾಲರ್‌ಶಿಪ್ ಸಿಕ್ಕಿ ಸಾಕಷ್ಟು ಒತ್ತಾಸೆಯಾಯಿತು. ಸಾಲದ್ದಕ್ಕೆ ಅವನಿಗೆ ಬೆಂಗಳೂರಿನಲ್ಲಿದ್ದು ವ್ಯಾಸಂಗಮಾಡಲು ನೆರವಾದದ್ದು ಅವನ ಪಂಗಡದವರ ಉಚಿತ ವಿದ್ಯಾರ್ಥಿನಿಲಯ ವಿದ್ಯಾಭ್ಯಾಸದ ಪೂರ್ಣ ಅವಧಿಗೆ ಊಟ ವಸತಿಗಳಿಗೆ ಆಶ್ರಯವಾಗಿತ್ತು.

ನಾರಾಯಣರಾವ್ ತಂದೆ ಅವರ ಹುಟ್ಟೂರು ಮಲ್ಲಸಂದ್ರದಲ್ಲಿ ಪೂರ್ವಜರಿಂದ ದೊರೆತಿದ್ದ ಎರಡು ಎಕರೆ ಮಳೆಯಾಶ್ರಿತ ಕೃಷಿಭೂಮಿಯನ್ನು ಸಾಗುವಳಿ ಮಾಡಿಕೊಂಡಿದ್ದರು. ಎಷ್ಟೋ ಸಾರಿ ಮಳೆ ಸರಿಯಾಗಿ ಬರದೆ ಬೆಳೆಗಳು ಕೈಗೆ ಹತ್ತುತ್ತಿರಲಿಲ್ಲ. ಅವರು ಊರಿನಲ್ಲಿದ್ದ ಏಕೈಕ ದೇವಾಲಯ ಚಂದ್ರಮೌಳೇಶ್ವರನ ಗುಡಿಯ ಅರ್ಚಕರೂ ಆಗಿದ್ದರು. ಅದರಿಂದ ದೊರಕುತ್ತಿದ್ದ ಅಲ್ಪಸ್ವಲ್ಪ ಅದಾಯ ಸೇರಿ ಹೇಗೋ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು. ಇದರಲ್ಲಿಯೂ ತಮ್ಮ ಮಗ ವಿದ್ಯಾವಂತನಾದರೆ ಎಲ್ಲವೂ ಒಳ್ಳೆಯದಾಗುವುದೆಂಬ ಭರವಸೆಯಿಂದ ಕಾಸಿಗೆಕಾಸು ಗಂಟುಹಾಕಿ ಮಗನಿಗೆ ಕಳುಹಿಸುತ್ತಿದ್ದರು. ತಂದೆತಾಯಿಗಳ ಬವಣೆಯ ಅರಿವಿದ್ದ ನಾರಾಯಣನಿಗೆ ತನ್ನ ವಿದ್ಯಾಭ್ಯಾಸವೇ ಸರ್ವಸ್ವವಾಗಿತ್ತು.

ಪದವಿಪೂರ್ವ ವ್ಯಾಸಂಗದ ಬಳಿಕ ನಮ್ಮ ದಾರಿಗಳು ಕವಲೊಡೆದವು. ನಾರಾಯಣರಾಯ ಇಂಜಿನಿಯರಿಂಗಿನಲ್ಲಿ ಮೆರಿಟ್ ಸೀಟುಪಡೆದು ವ್ಯಾಸಂಗ ಮುಂದುವರೆಸಿದ. ನಾನು ಬಿ.ಎಸ್ಸಿ., ಓದಿದೆ. ನಂತರ ಬಿ.ಎಲ್., ಪದವಿ ಪಡೆದು ವಕೀಲಿವೃತ್ತಿ ಪ್ರಾರಂಭಿಸಿದೆ. ನನಗೆ ಅದೃಷ್ಟವಶಾತ್ ಮೊದಲಲ್ಲೇ ಪ್ರಸಿದ್ಧ ಹಿರಿಯ ವಕೀಲರಲ್ಲಿ ಕೆಲಸ ಕಲಿಯುವ ಅವಕಾಶ ಸಿಕ್ಕಿತು. ಹಲವು ವರ್ಷ ಅನುಭವ ಪಡೆದ ನಂತರ ಸ್ವಂತ ಕಛೇರಿ ಪ್ರಾರಂಭಿಸಿದೆ. ಅಲ್ಲಿಗೂ ಸಾಕಷ್ಟು ಗ್ರಾಹಕರು ಬರಲಾರಂಭಿಸಿದರು. ಹೆಸರೂ, ಹಣ ಎರಡನ್ನೂ ಸಂಪಾದಿಸಿ ಒಬ್ಬ ಗಣ್ಯ ವಕೀಲನೆಂದು ಪ್ರಸಿದ್ಧಿಯನ್ನು ಪಡೆದೆ. ನನ್ನ ಕೈಕೆಳಗೂ ನಾಲ್ಕಾರು ಜನ ಜೂನಿಯರ್‌ಗಳು ಕೆಲಸ ಮಾಡುವಂತಾಯಿತು.

ಇತ್ತೀಚಿನ ಹತ್ತಾರು ವರ್ಷಗಳಲ್ಲಿ ಮಿತ್ರ ನಾರಾಯಣರಾವ್ ಒಡನಾಟ ದೂರವೇ ಆಗಿತ್ತು. ಆತ ಇಂಜಿನಿಯರಿಂಗ್ ಮುಗಿಸಿ ಉತ್ತರ ಕರ್ನಾಟಕದ ಯಾವುದೋ ಊರಿನಲ್ಲಿ ಸಿವಿಲ್ ಇಂಜಿನಿಯರಾಗಿ ಕೆಲಸ ಮಾಡುತ್ತಿದ್ದಾನೆಂಬುದು ಮಾತ್ರ ತಿಳಿದಿತ್ತು. ಒಮ್ಮೆ ಮಾತ್ರ ಆಕಸ್ಮಿಕವಾಗಿ ಬೆಂಗಳೂರು ಬಸ್ ನಿಲ್ದಾಣದಲ್ಲಿ ಕಾರ್ಯನಿಮಿತ್ತ ಧಾರವಾಡಕ್ಕೆ ಹೊಗಲು ರಾತ್ರಿಯ ಬಸ್ಸಿಗೆ ಕಾಯುತ್ತಿರುವಾಗ ನಾರಾಯಣರಾವ್ ದರ್ಶನವಾಯ್ತು. ಅವನೂ ಹುಬ್ಬಳ್ಳಿಗೆ ಹೊರಟಿದ್ದ. ಹೀಗಾಗಿ ಇಬ್ಬರೂ ಒಂದೇ ಬಸ್ಸಿನಲ್ಲಿ ಪ್ರಯಾಣಿಸಿದೆವು. ಅವನ ಮುಖದಲ್ಲಿ ಹೊಸ ಚೈತನ್ಯದ ಕಳೆ ತುಂಬಿದ್ದು ಗೆಲುವಾಗಿ ಕಾಣಿಸಿದ. “ಹೇಗಿದ್ದೀಯಾ?” ಎಂಬ ಪ್ರಶ್ನೆಗೆ “ ಚೆನ್ನಾಗಿದ್ದೇನೆ. ಈಗ ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದೇನೆ.” ತಂದೆ ತಾಯಿಗಳು ಅವನೊಟ್ಟಿಗೇ ಇದ್ದು ಕೆಲವೇ ವರ್ಷಗಳ ಹಿಂದೆ ದೈವಾಧೀನರಾಗಿದ್ದರು. ಅವರು ತಮ್ಮ ಅಂತಿಮ ದಿನಗಳನ್ನು ಮಕ್ಕಳು, ಮೊಮ್ಮಕ್ಕಳ ಒಡನಾಟದಲ್ಲಿ ಖುಷಿಯಾಗಿ ಕಳೆದರು ಎಂಬುದನ್ನು ತಿಳಿದು ಸಂತೋಷವಾಯಿತು. ಅಂತೂ ನಾರಾಯಣರಾಯನ ಆಸೆ ಅವನಂದುಕೊಂಡಂತೆ ಈಡೇರಿತು ಅನ್ನಿಸಿತು.

ನಾರಾಯಣರಾಯನಿಗೆ ಇಬ್ಬರು ಮಕ್ಕಳಿದ್ದರು. ಹಿರಿಯವಳು ಮಗಳು ಹೈಸ್ಕೂಲಿನಲ್ಲಿ, ಕಿರಿಯವನು ಮಗ ಏಳನೆಯ ತರಗತಿಯಲ್ಲಿ ಓದುತ್ತಿದ್ದರು. ಅವನ ಸುಖೀ ಸಂಸಾರದ ಸುದ್ಧಿ ತಿಳಿದು “ಜೀವನ ಎಂದರೆ ಹೀಗಿರಬೇಕು. ನಾರಾಯಣ ಕಷ್ಟಪಟ್ಟು ಅಂದುಕೊಂಡಿದ್ದೆಲ್ಲವನ್ನೂ ಸಾಧಿಸಿದ್ದಾನೆ” ಅಂದುಕೊಂಡೆ. ಮಕ್ಕಳ ಭವಿಷ್ಯದ ಬಗ್ಗೆ ನಾರಾಯಣ ಮುಂಚಿತವಾಗಿಯೇ ಆಲೋಚಿಸಿ ಮಗಳನ್ನು ಇಂಜಿನಿಯರಿಂಗ್, ಮಗನನ್ನು ವೈದ್ಯಕೀಯ ಶಿಕ್ಷಣಕ್ಕೆ ಸೇರಿಸಲು ವ್ಯವಸ್ಥೆ ಮಾಡಿಕೊಂಡಿದ್ದ. ಹುಬ್ಬಳ್ಳಿಯಲ್ಲಿ ಅವನು ಇಳಿದುಹೋದ ಮೇಲೆ ಅವನ ಬಗ್ಗೆಯೇ ನೆನಪುಗಳು ಗಿರಿಕಿ ಹೊಡೆಯುತ್ತಿದ್ದವು. ಬಹಳ ವರ್ಷಗಳ ನಂತರ ಭೇಟಿಯಾದ ಗೆಳೆಯನಿಂದ ಒಳ್ಳೆಯ ಸುದ್ಧಿಗಳನ್ನು ಕೇಳಿ ಮನಸ್ಸು ಉಲ್ಲಾಸವಾಗಿತ್ತು. ಧಾರವಾಡದಲ್ಲಿ ನನ್ನ ಆತ್ಮೀಯರೊಬ್ಬರ ಮನೆಯ ಸಮಾರಂಭದಲ್ಲಿ ಭಾಗವಹಿಸಿ ಬೆಂಗಳೂರಿಗೆ ಹಿಂದಿರುಗಿದೆ. ನನ್ನ ಬಿಡುವಿಲ್ಲದ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡೆ. ಹೀಗೇ ಇನ್ನೂ ಹಲವು ವರ್ಷಗಳು ಸರಿದುವು.

ನಾರಾಯಣರಾಯ ಮತ್ತೆ ಭೇಟಿಯಾಗದಿದ್ದರೂ ದೂರವಾಣಿಯ ಮೂಲಕ ನಮ್ಮಿಬ್ಬರ ನಡುವೆ ಯೋಗಕ್ಷೇಮ ಸಮಾಚಾರಗಳು ತಿಳಿಯುತ್ತಿದ್ದವು. ಒಂದು ಬಾರಿ ಅವನಿಂದ ಬಂದ ಸುದ್ಧಿ ಸ್ವಲ್ಪ ಆಘಾತಕಾರಿಯಾಗಿತ್ತು. ಅವನಾಸೆಯಂತೆಯೇ ಇಂಜಿನಿಯರಿಂಗ್ ಮುಗಿಸಿದ್ದ ಮಗಳು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅವಳಿಗೆ ದೊಡ್ಡ ಸಂಬಳ ಬರುತ್ತಿತ್ತು. ನಾರಾಯಣರಾಯ ಅವಳ ಮದುವೆಯ ಪ್ರಯತ್ನದಲ್ಲಿರುವಾಗ ಆಕೆ ತಾನು ಉತ್ತರ ಭಾರತದಿಂದ ಬಂದು ತನ್ನ ಕಂಪೆನಿಯಲ್ಲೇ ಕೆಲಸ ಮಾಡುತ್ತಿರುವ ಸಹೋದ್ಯೋಗಿಯೊಬ್ಬನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿ ಅವನನ್ನೇ ಮದುವೆಯಾಗುವುದಾಗಿ ತಿಳಿಸಿದಳಂತೆ. “ಗುರುತು ಪರಿಚಯವಿಲ್ಲದ ಕುಟುಂಬದವನಾದ ಅವನ ಜಾತಿ ಯಾವುದೊ? ತಿಳಿಯದು. ಏನು ಮಾಡುವುದೋ ತಿಳಿಯದು” ಎಂದು ಪೇಚಾಡಿಕೊಂಡ. ನಾನು “ಈ ವಿಷಯದಲ್ಲಿ ತುಂಬ ಸೂಕ್ಷ್ಮವಾಗಿ ವ್ಯವಹರಿಸಬೇಕು. ಏಕೆಂದರೆ ಮಗಳು ಪ್ರೌಢಳು. ತಾನೇನು ಮಾಡುತ್ತಿದ್ದೇನೆಂಬ ಅರಿವು ಅವಳಿಗಿರುತ್ತದೆ. ನೀನು ಒತ್ತಾಯ ಮಾಡಿದರೆ ನಂಟೇ ಕಡಿದುಹೋಗಬಹುದು.” ಎಂದು ಹೇಳಿ “ಈಗೆಲ್ಲ ಜಾತಿ, ಕುಲಗಳನ್ನು ಯಾರೂ ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಮಗಳಿಗೆ ಆ ಹುಡುಗನಲ್ಲಿ ಒಳ್ಳೆಯವನೆಂಬ ನಂಬಿಕೆಯಿದ್ದರೆ ಸುಮ್ಮನೆ ಅವರ ಮದುವೆಗೆ ಸಮ್ಮತಿ ನೀಡುವುದೇ ಒಳ್ಳೆಯದು” ಎಂದು ನನಗೆ ತೋಚಿದಂತೆ ನಾಲ್ಕು ಮಾತು ಹೇಳಿದೆ.

ನಂತರ ಬಂದ ಸುದ್ಧಿಯ ಪ್ರಕಾರ ನಾರಾಯಣನ ಪತ್ನಿಕೂಡ ನನ್ನ ಸಲಹೆಯನ್ನೇ ಒಪ್ಪಿಕೊಳ್ಳುವಂತೆ ಒತ್ತಾಯಿಸಿದಳಂತೆ. ಮಗಳ ಮದುವೆ ರಿಜಿಸ್ಟ್ರಾರ್ ಕಛೇರಿಯಲ್ಲಿ ನಡೆದು ಕೆಲವೇ ತಿಂಗಳೊಳಗೆ ಅವರಿಬ್ಬರೂ ಅಮೆರಿಕಾಕ್ಕೆ ಹೋದರಂತೆ. ಅವರು ಹಿಂದಿರುಗುವ ಭರವಸೆ ವಿರಳವೆಂದು ಹೇಳಿದ.

ಈಗ ನಾರಾಯಣನ ಎಲ್ಲ ಆಕಾಂಕ್ಷೆಗಳೂ ಮಗನ ಭವಿಷ್ಯಕ್ಕೆ ಸೀಮಿತವಾಗಿದ್ದವು. ಮಗ ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಖಾಸಗಿ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸಾತಜ್ಞನಾಗಿ ಕೆಲಸ ಮಾಡುತ್ತಿದ್ದ. ಒಳ್ಳೆಯ ಹೆಸರೂ ಗಳಿಸಿದ. ಅವನೊಡನೆಯೇ ಕೆಲಸ ನಿರ್ವಹಿಸುತ್ತಿದ್ದ ಸ್ತ್ರೀರೋಗತಜ್ಞೆ ವೈದ್ಯೆಯೊಬ್ಬಳೊಡನೆ ಅವನಿಗೆ ಒಲವು ಕುಡಿಯೊಡೆಯಿತು. ಅದು ಭದ್ರವಾಗಿ ಅವರಿಬ್ಬರೂ ವಿವಾಹವಾಗುವ ತೀರ್ಮಾನಕ್ಕೆ ಬಂದರು. ಈ ಬಾರಿ ನಾರಾಯಣರಾಯ ದುಡುಕದೆ ಅವರಿಬ್ಬರ ವಿವಾಹವನ್ನು ಭರ್ಜರಿಯಾಗಿ ನೆರವೇರಿಸಿದ. ನಾನೂ ಆಹ್ವಾನಿತನಾಗಿ ಹೋಗಿ ವಧೂವರರಿಗೆ ಶುಭಹಾರೈಸಿ ಬಂದೆ. ನಾರಾಯಣರಾಯ ವಯೋನಿವೃತ್ತನಾಗಿದ್ದ. ಅವನ ಸೇವಾ ಅವಧಿಯ ಉಳಿತಾಯದಿಂದ ಬೆಂಗಳೂರಿನ ಜೆ.ಪಿ. ನಗರದಲ್ಲಿ ಸುಸಜ್ಜಿತವಾದ ಮನೆಯೊಂದನ್ನು ಕಟ್ಟಿಸಿದ್ದ. ಮನೆಯು ಸಾಕಷ್ಟು ವಿಶಾಲವಾಗಿದ್ದು ಹಿಂಬದಿಯಲ್ಲೊಂದು ಔಟ್‌ಹೌಸೂ ಇತ್ತು.

ಮಗ, ಸೊಸೆ, ಪತ್ನಿಯೊಡನೆ ಅಲ್ಲಿಯೇ ವಾಸಿಸುತ್ತಿದ್ದ. ಮನೆಯಲ್ಲಿ ಅಡುಗೆಗೆ ಮತ್ತು ಇತರ ಕೆಲಸಗಳಿಗೆಂದು ಇಬ್ಬರು ಅಳುಗಳಿದ್ದರು. ವೈದ್ಯರಾಗಿದ್ದ ಮಗ ಸೊಸೆ ಕೆಲವು ಕಾಲದ ನಂತರ ತಮ್ಮ ಮಿತ್ರರೊಡನೆ ತಮ್ಮದೇ ಪುಟ್ಟದೊಂದು ನರ್ಸಿಂಗೆಹೋಂ ಏಕೆ ಪ್ರಾರಂಭಿಸಬಾರದೆಂಬ ಆಲೋಚನೆಯಲ್ಲಿದ್ದರು. ಮಿತ್ರವೃಂದದಲ್ಲಿ ಎಲ್ಲ ಬಗೆಯ ವೈದ್ಯರುಗಳೂ ಇರುವುದರಿಂದ ಎಲ್ಲ ಬಗೆಯ ರೋಗಿಗಳಿಗೂ ಒಂದೇ ಕಡೆ ಚಿಕಿತ್ಸೆಯನ್ನೂ ನೀಡಬಹುದು ಎಂದು ನಿರ್ಧರಿಸಿದರು. ನಾರಾಯಣರಾಯ ಕಟ್ಟಿಸಿದ್ದ ಮನೆ ಸಾಕಷ್ಟು ಭವ್ಯವಾಗಿತ್ತು. ಅದನ್ನೇ ಅಧಾರವಾಗಿಟ್ಟು ಬ್ಯಾಂಕಿನಿಂದ ದೊಡ್ಡ ಮೊತ್ತದ ಸಾಲವನ್ನು ಪಡೆಯುವುದೆಂದಾಯಿತು. ನಾರಾಯಣರಾಯ ದಂಪತಿಗಳಿಗೆ ವೃದ್ಧಾಪ್ಯದಲ್ಲಿ ಮತ್ತು ಅವನ ಪತ್ನಿಯ ಅನಾರೋಗ್ಯ ಸ್ಥಿತಯಲ್ಲಿ ಮಗನೊಬ್ಬನೇ ಆಧಾರವಾಗಿದ್ದ. ಮಗನಾಸೆಯನ್ನು ಪೂರ್ತಿ ಮಾಡಲೋಸ್ಕರ ತನ್ನ ಮನೆಯ ದಾಖಲೆಗಳನ್ನು ಆಧಾರವಾಗಿಟ್ಟು ಸಾಲಪಡೆಯಲು ಮಗನಿಗೆ ಕೊಟ್ಟನು. ಸಾಲದ್ದಕ್ಕೆ ಆಪತ್ಕಾಲಕ್ಕೆಂದು ಬ್ಯಾಂಕುಗಳಲ್ಲಿ ತಮ್ಮ ಹೆಸರಿನಲ್ಲಿದ್ದ ಕೆಲವು ಲಕ್ಷರೂಪಾಯಿಗಳ ಠೇವಣಿಗಳನ್ನೂ ನೀಡಿದ. ಬಳಿಯಲ್ಲೇ ಇದ್ದ ಕಟ್ಟಡವೊಂದರಲ್ಲಿ ಖಾಸಗಿ ನರ್ಸಿಂಗ್‌ಹೋಂ ಪ್ರಾರಂಭವಾಯಿತು. ನಾನೂ ಪ್ರಾರಂಭೋತ್ಸವಕ್ಕೆ ಹೋಗಿ ಬಂದೆ. ಸುಸಜ್ಜಿತವಾಗಿಸಲು ಲಕ್ಷಾಂತರ ರೂಪಾಯಿಗಳ ಯಂತ್ರೋಪಕರಣ, ಚಿಕಿತ್ಸಾ ಕೊಠಡಿಗಳು, ವಾರ್ಡುಗಳು, ಲ್ಯಾಬೊರೇಟರಿ, ಗಳೊಂದಿಗೆ ಸಾಕಷ್ಟು ಸಿಬ್ಬಂದಿಯೂ ಇದ್ದರು. ನನಗೂ ಭವಿಷ್ಯದಲ್ಲಿ ಅದು ಬೆಳೆದು ಹೆಸರುವಾಸಿಯಾದ ದೊಡ್ಡಾಸ್ಪತ್ರೆಯಾಗಲಿ ಎಂಬ ಆಶಯವಿತ್ತು. ನಾರಾಯಣರಾಯ ಪತ್ನಿಯ ಅನಾರೋಗ್ಯದಿಂದ ಕುಗ್ಗಿಹೋಗಿದ್ದ. ಅಲ್ಲದೆ ಅವನ ವಯೋಭಾರವೂ ತನ್ನ ಕೊಡುಗೆ ನೀಡಿತ್ತು.

ಕೆಲವು ವರ್ಷಗಳು ನಾನೂ ತುಂಬ ಬಿಸಿಯಾಗಿಬಿಟ್ಟೆ. ಏಕೋ ನಾರಾಯಣರಾಯನೂ ಕರೆ ಮಾಡಲಿಲ್ಲ. ಇತ್ತೀಚೆಗೆ ಒಂದುದಿನ ರಾತ್ರಿ ಎಂಟುಗಂಟೆಯ ಹೊತ್ತಿನಲ್ಲಿ ದೂರವಾಣಿ ಕರೆ ಬಂತು. ನೋಡಿದರೆ ಅದು ನಾರಾಯಣನಿಂದ. ಹಲೋ ಎಂದಾಗ ಅತ್ತಕಡೆಯಿಂದ ಕ್ಷೀಣವಾದ ಧ್ವನಿಯಲ್ಲಿ ಗೆಳೆಯ ಮಾತನಾಡಿದ. ಏಕೋ ತುಂಬ ದುಗುಡದಲ್ಲಿದ್ದ. ನನ್ನನ್ನು ಸಾಧ್ಯವಾದರೆ ಒಮ್ಮೆ ಭೇಟಿಮಾಡಲು ಇಚ್ಛಿಸಿದ. ಕಾರಣ ಕೇಳಿದರೆ “ನೀನು ಬಂದಾಗಲೇ ಹೇಳುತ್ತೇನೆ” ಎಂದು ಫೋನ್ ಕಟ್ ಮಾಡಿದ.

ಕುತೂಹಲ ತಡೆಯಲಾರದೇ ಮಾರನೆಯ ದಿನವಿದ್ದ ಕೋರ್ಟಿನ ಕೆಲಸಗಳನ್ನು ನನ್ನ ಜ್ಯೂನಿಯರ್‌ಗಳಿಗೆ ವಹಿಸಿ ಬೆಂಗಳೂರಿಗೆ ಧಾವಿಸಿದೆ. ಜೆ.ಪಿ.ನಗರದ ಮನೆಗೆ ಹೋದರೆ ಗೇಟಿಗೆ ಬೀಗ ಹಾಕಿ ಅರಗಿನ ಸೀಲ್ ಮಾಡಲಾಗಿತ್ತು. ಬಾಗಿಲಲ್ಲಿ ಘೂರ್ಕನೊಬ್ಬನು ಕಾವಲಿದ್ದ. ವಿಚಾರಿಸಿದಾಗ ಕೋರ್ಟಿನ ಆದೇಶದ ಮೇರೆಗೆ ಮನೆ ಮತ್ತು ಔಟ್ಹೌಸನ್ನು ಬ್ಯಾಂಕಿನವರ ಸಾಲಕ್ಕಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ. ಅತಂಕದಿಂದ ನಾರಾಯಣರಾಯನ ಪೋನ್ ನಂಬರಿಗೆ ಕಾಲ್ ಮಾಡಿದೆ. ಅವನು ತಾನು ಬನ್ನೇರುಘಟ್ಟ ರಸ್ತೆಯಲ್ಲಿರುವ ವೃದ್ಧಾಶ್ರಮವೊಂದರ ವಿಳಾಸ ತಿಳಿಸಿ ಅಲ್ಲಿರುವಾದಾಗಿ ಹೇಳಿದ. ಅಟೋವೊಂದರಲ್ಲಿ ಅಲ್ಲಿಗೆ ಹೋದೆ. ಅಲ್ಲಿದ್ದ ನಲವತ್ತಕ್ಕೂ ಹೆಚ್ಚುಮಂದಿ ವೃದ್ಧರುಗಳ ನಡುವೆ ನಾರಾಯಣರಾಯ ಕಾಣಿಸಿದ. ನನಗೆ ದುಃಖ ಉಮ್ಮಳಿಸಿ ಬಂತು. ಅವನನ್ನು ತಬ್ಬಿಹಿಡಿದು ಅತ್ತುಬಿಟ್ಟೆ. ಅವನು ನನ್ನನ್ನು ಒಳಕೋಣೆಯೊಂದಕ್ಕೆ ಕರೆದುಕೊಂಡು ಹೋದ. ಅಲ್ಲಿ ಕುಳಿತು ತನ್ನ ವಿವರಣೆಯ ಮೂಟೆ ಬಿಚ್ಚಿದ.

“ಮಗನ ನರ್ಸಿಂಗ್‌ಹೋಂ ಬಹಳ ಚೆನ್ನಾಗಿ ನಡೆದು ಹೆಸರು ಗಳಿಸಿತು. ಎರಡು ವರ್ಷಗಳಲ್ಲಿ ಪ್ರಸಿದ್ಧವೆನ್ನಿಸಿತು. ಅಷ್ಟರಲ್ಲಿ ಸಮೀಪದಲ್ಲಿಯೇ ಹಲವು ಸಣ್ಣಪುಟ್ಟ ಆಸ್ಪತ್ರೆಗಳು ತಲೆಯೆತ್ತಿದವು. ಇಲ್ಲಿಗೆ ಖಾಯಮ್ಮಾಗಿ ಬರುತ್ತಿದ್ದ ರೋಗಿಗಳು ಹಂಚಿಹೋಗಿ ಇಲ್ಲಿ ಸಂಖ್ಯೆ ಕಡಿಮೆಯಾಯಿತು. ಇದರಿಂದಾಗಿ ಮಗ ಸೊಸೆಯ ನಡುವೆ ಆಗಾಗ ಬಿಸಿಬಿಸಿ ಚರ್ಚೆಗಳು ಜಗಳಗಳು ನಡೆಯುತ್ತಿದ್ದವು. ಕೊನೆಗೆ ಸೊಸೆ ಮತ್ತು ಕೆಲವು ಮಿತ್ರ ವೈದ್ಯರುಗಳು ಬೇರೆ ಆಸ್ಪತ್ರೆಗಳನ್ನು ಸೇರಿಕೊಂಡರು. ಇಲ್ಲಿಂದ ವೈದ್ಯರುಗಳು ಕಾಲುಕಿತ್ತಿದ ಮೇಲೆ ಮಗನಿಗೆ ಆಸ್ಪತ್ರೆಯ ನಿರ್ವಹಣೆಯೇ ಒಂದು ಸಮಸ್ಯೆಯಾಯಿತು. ಜೊತೆಗೆ ಬ್ಯಾಂಕಿನವರಿಂದ ಸಾಲದ ಕಂತುಗಳಿಗಾಗಿ ನೋಟೀಸುಗಳು ಬರುತ್ತಿದ್ದವು. ಅವುಗಳಿಗೆ ಸಮರ್ಪಕವಾಗಿ ಉತ್ತರಗಳು ಸಲ್ಲಿಸದಿದ್ದುದರಿಂದ ಸಾಲ ಮರುಪಾವತಿಗೆ ಬ್ಯಾಂಕಿನವರು ಕೋರ್ಟಿನ ಮೆಟ್ಟಿಲೇರಿದರು. ಕೋರ್ಟಿನಿಂದ ಅಡವಿಟ್ಟ ಮನೆಯನ್ನು ಜಪ್ತಿಮಾಡಿ ತಮ್ಮ ಸುಪರ್ದಿಗೆ ತೆಗೆದುಕೊಂಡರು. ನಮ್ಮನ್ನು ಹೊರಕ್ಕೆ ಹಾಕಿದರು. ಈ ಗದ್ದಲದಲ್ಲಿ ನನ್ನ ಪತ್ನಿ ಒತ್ತಡಕ್ಕೆ ಸಿಕ್ಕಿ ಕಾಲವಾದಳು. ಮಗ ಕುಡಿತಕ್ಕೆ ಮೊರೆ ಹೋಗಿದ್ದಾನೆ. ಅವನು ಬೇರೊಂದು ಆಸ್ಪತ್ರೆಯಲ್ಲಿ ಕೆಲಸ ಮಾಡಿದರೂ ಮೊದಲಿನ ಸ್ಥಿತಿಗೆ ಮರಳುವುದು ಅಸಾಧ್ಯ. ಬಿಡಿಸಲಾಗದ ಈ ಕಗ್ಗಂಟಿನ ಪರಿಸ್ಥಿತಿಯಲ್ಲಿ ನನ್ನ ಕೆಲವು ಮಿತ್ರರು ನೆರವಾಗಿ ನನ್ನನ್ನು ಈ ವೃದ್ಧಾಶ್ರಮಕ್ಕೆ ತಂದು ಸೇರಿಸಿದರು. ಸರ್ಕಾರಿ ಕೆಲಸದಿಂದ ನಿವೃತ್ತನಾದ್ದರಿಂದ ನನಗೆ ಪೆನ್ಷನ್ ಬರುತ್ತದೆ. ಅದೆಲ್ಲವನ್ನೂ ವೃದ್ಧಾಶ್ರಮಕ್ಕೆ ಕೊಡುತ್ತೇನೆ. ಮಗ ಎಲ್ಲಿದ್ದಾನೆ, ಹೇಗಿದ್ದಾನೆಂಬುದೂ ತಿಳಿದಿಲ್ಲ. ನನ್ನ ಆಪತ್ಕಾಲಕ್ಕೆಂದು ಇಟ್ಟುಕೊಂಡಿದ್ದ ಬ್ಯಾಂಕ್ ಠೇವಣಿಗಳನ್ನೂ ಮಗನಿಗೆ ನರ್ಸುಂಗ್‌ಹೋಂ ಪ್ರಾರಂಭದ ದಿನಗಳಲ್ಲೇ ಕೊಟ್ಟಿದ್ದರಿಂದ ನನ್ನಲ್ಲಿ ಬೇರೆ ಬಿಡಿಗಾಸೂ ಇಲ್ಲ. ಪೆನ್ಷನ್ ಬರದಿದ್ದರೆ ನಾನು ಬೀದಿ ಭಿಕಾರಿಯಾಗುತ್ತಿದ್ದೆ. ಏಕೋ ನಿನ್ನನ್ನೊಮ್ಮೆ ನೋಡಬೇಕೆಂದು ಮನಸ್ಸು ಬಯಸಿತು. ಅದಕ್ಕೇ ನಿನಗೆ ಫೋನ್ ಮಾಡಿದೆ.” ಎಂದು ನನ್ನ ಕೈಗಳೆರಡನ್ನೂ ಹಿಡಿದುಕೊಂಡು ಗೊಳೋ ಎಂದು ರೋಧಿಸಿದ. ಅವನನ್ನು ಸಮಾಧಾನಪಡಿಸಲು ಬಹಳ ಕಷ್ಟವಾಯಿತು. ಅವನನ್ನು ಬೀಳ್ಕೊಂಡು ಹಿಂದಿರುಗಿದ ನನ್ನ ಹೃದಯ ತುಂಬ ಭಾರವಾಗಿತ್ತು.

ಜೀವನದಲ್ಲಿ ಎಷ್ಟೋ ಆದರ್ಶಗಳ ಬೆನ್ನುಹತ್ತಿಹೋದ ಗೆಳೆಯ ನಾರಾಯಣರಾಯ ತನ್ನ ಕರ್ತವ್ಯಗಳನ್ನು ಸಮರ್ಪಕವಾಗಿಯೇ ನಿರ್ವಹಿಸಿದ. ಆದರೆ ಆತ ತಪ್ಪಿದ್ದೆಲ್ಲಿ? ಈ ಪೃಶ್ನೆ ನನ್ನನ್ನು ಈಗಲೂ ಕಾಡುತ್ತಿದೆ.

ಬಿ.ಆರ್.ನಾಗರತ್ನ, ಮೈಸೂರು

13 Responses

  1. SHARANABASAVEHA K M says:

    ಎಂತಹ ದುರ್ವಿಧಿ…….ನೀವು ಕೊನೆಯಲ್ಲಿ ಕೇಳಿದ ಹಾಗೇ ಇದರಲ್ಲಿ ನಾರಾಯಣ ರಾವ್ ಅವರ ತಪ್ಪೇನು…….ದುರಾದೃಷ್ಟ ಕೆಲವೊಬ್ಬರ ಬದುಕಲ್ಲಿ ಈ ಪರಿಸ್ಥಿತಿ ತಂದೊಡ್ಡುತ್ತದೆ. ತುಂಬಾ ಚೆನ್ನಾಗಿದೆ…… ನಾಗರತ್ನ ಮೇಡಂ

  2. ಪದ್ಮಾ ಆನಂದ್ says:

    ಚೆಂದದ ಕಥೆ. ಭವಸಾಗರವನ್ನು ಈಸುವಾಗ ಎಷ್ಟು ಜೋಪಾನವಾಗಿದ್ದರೂ ಜಯಿಸಲು ಅದೃಷ್ಟವೂ ಇರಬೇಕು.

  3. ಪ್ರಕಟಣೆಗಾಗಿ ಹೃತ್ಪೂರ್ವಕವಾದ ಧನ್ಯವಾದಗಳು

    • S.sudha says:

      ನಾರಾಯಣ ರಾವ್ ತಪ್ಪು ಏನು ಇಲ್ಲ ಎನಿಸುತ್ತದೆ. ಈಗಿನ ಬದುಕಿನ ಮೌಲ್ಯಗಳೇ ಬೇರೆ. ಈಗ ದುಡ್ಡೇ ದೊಡ್ಡಪ್ಪ. ಪ್ರಸ್ತುತ ಜೀವನ ಚೆನ್ನಾಗಿ ಮೂಡಿ ಬಂದಿದೆ.

  4. ನಯನ ಬಜಕೂಡ್ಲು says:

    ಎಷ್ಟು ಒಳ್ಳೆಯವರಾಗಿದ್ದರೂ ದುರಾದೃಷ್ಟ ಅನ್ನುವುದು ಕೆಲವೊಮ್ಮೆ ಕಾಡದೆ ಬಿಡದು. ಯಾರು ಹೊಣೆ ಇಂತಹ ಸ್ಥಿತಿ ಗೆ???

  5. ಶಂಕರಿ ಶರ್ಮ says:

    ತನ್ನ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಿದ್ದರೂ ಕೊನೆಯಲ್ಲಿ ನೆಮ್ಮದಿ ಎಂಬುದು ಕನಸಾಯಿತು… ನಾರಾಯಣ ರಾವ್ ಅವರಿಗೆ ವಿಧಿಯಾಟವನ್ನು ಬಲ್ಲವರಾರು?…ಉತ್ತರವನ್ನು ಇನ್ನೂ ಹುಡುಕುತ್ತಲೇ ಇರುವರು…ನಾರಾಯಣ ರಾವ್ ಜೊತೆ ಎಲ್ಲರೂ! ಎಂದಿನಂತೆ ಸೊಗಸಾದ ಕಥಾಹಂದರ..ನಾಗರತ್ನ ಮೇಡಂ.

  6. ವಾಸ್ತವಕ್ಕೆ ತುಂಬಾ ಹತ್ತಿರವಾದ ಕಥೆ. ಹಣೆಬರಹದ ಮೇಲೆ ಎಲ್ಲಾ ಅವಲಂಬಿತ. ಚಂದದ ನಿರೂಪಣೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: