ಸಿದ್ಧಾರ್ಥ ಬುದ್ಧನಾಗಿದ್ದು (ಬೋಧಗಯಾ)

Share Button

ಪ್ರಸಂಗ-1.
ಹೊರಟಿದ್ದಳು ಸುಜಾತ ತನ್ನ ಹಸುಗಳನ್ನು ಹೊಡೆದುಕೊಂಡು ಕಾಡಿನತ್ತ. ಕಂಡಳು ನಿರಂಜನ ನದಿಯ ತಟದಲ್ಲಿ ಅರೆಪ್ರಜ್ಞಾನವಸ್ಥೆಯಲ್ಲಿದ್ದ ಸನ್ಯಾಸಿಯೊಬ್ಬನನ್ನು. ಕೃಶನಾಗಿದ್ದ ಅವನನ್ನು ಕಂಡವಳೇ ತನ್ನ ಕುಟೀರದತ್ತ ಓಡಿ ಹೋಗಿ ತಂದಳು ಪಾಯಸವನ್ನು ಒಂದು ಬಟ್ಟಲಲ್ಲಿ ತುಂಬಿ. ಮರದ ಕೆಳಗೆ ಕುಳಿತಿದ್ದ ಸನ್ಯಾಸಿಗೆ ಗುಟುಕು ಗುಟುಕಾಗಿ ಕುಡಿಸಿದಳು ಪಾಯಸವನ್ನು. ಸನ್ಯಾಸಿಯು ನಿಧಾನವಾಗಿ ಕಣ್ಣು ತೆರೆದು ನೋಡಿದಾಗ, ಅವನಿಗೆ ಕಂಡದ್ದು ತನಗೆ ಮರುಜನ್ಮ ನೀಡಿದ ಮಹಾತಾಯಿ. ಅಂದಿನಿಂದ ನಿತ್ಯ ಸುಜಾತ ಸನ್ಯಾಸಿಗೆ ಪಾಯಸವನ್ನು ಬಟ್ಟಲಲ್ಲಿ ತುಂಬಿ ತಂದು ಕೊಡುತ್ತಿದ್ದಳು. ಆ ತಾಯಿ ನೀಡಿದ ಪಾಯಸವನ್ನು ಕುಡಿದು ಚೇತರಿಸಿಕೊಂಡ ಸನ್ಯಾಸಿಯು ಬೋಧಿವೃಕ್ಷದಡಿ ಧ್ಯಾನಮಗ್ನನಾಗಿ ಕುಳಿತು ಬಿಡುತ್ತಿದ್ದ. ಈ ಸನ್ಯಾಸಿ ಮತ್ಯಾರೂ ಅಲ್ಲ, ಇವನೇ ಕಪಿಲವಸ್ತುವಿನ ರಾಜಕುವರ ಸಿದ್ದಾರ್ಥ. ಇದೇ ಬೋಧಿವೃಕ್ಷದಡಿ ಧ್ಯಾನಸ್ಥನಾಗಿ ಕುಳಿತ ಸಿದ್ಧಾರ್ಥನಿಗೆ ಜ್ಞಾನೋದಯವಾಗಿ ಗೌತಮ ಬುದ್ಧನಾದ.

ಪ್ರಸಂಗ-2
‘ತಂದೆ, ನನ್ನ ಕರುಳಕುಡಿಯನ್ನು ಬದುಕಿಸಿ ಕೊಡು’, ಎಂದು ಗೋಳಾಡುತ್ತಿದ್ದಳು ಕಿಸಾಗೌತಮಿ. ಸಾವನ್ನಪ್ಪಿದ್ದ ತನ್ನ ಮಗನ ದೇಹವನ್ನು ತಂದು ಬುದ್ಧನ ಚರಣಗಳಲ್ಲಿಟ್ಟು, ಅವನನ್ನು ಬದುಕಿಸಿಕೊಡು ಎಂದು ಅಂಗಲಾಚುತ್ತಿದ್ದಳು. ಕರುಣೆಯಿಂದ ಅವಳನ್ನು ದಿಟ್ಟಿಸಿದ ಬುದ್ಧನು, ‘ಸಾವಿಲ್ಲದ ಮನೆಯಿಂದ ಸಾಸುವೆಯನ್ನು ತಾ ಮಗಳೇ, ನಾನು ನಿನ್ನ ಮಗನನ್ನು ಬದುಕಿಸಿಕೊಡುವೆ’ ಎಂದುಸುರುವನು. ಮನೆ ಮನೆಗೆ ಹೋಗಿ ಬೇಡುವಳು ಒಂದು ಹಿಡಿ ಸಾಸಿವೆಯನ್ನು ಕಿಸಾಗೌತಮಿ, ಜೊತೆಗೇ ಅರ್ತಳಾಗಿ ಕೇಳುವಳು. ‘ನಿಮ್ಮ ಮನೆಯಲ್ಲಿ ಯಾರೂ ಸತ್ತಿಲ್ಲ ತಾನೆ?’. ಆದರೆ ಅವಳಿಗೆ ಎಲ್ಲಿಯೂ ಸಿಗಲಿಲ್ಲ ಸಾವಿಲ್ಲದ ಮನೆ. ಸೋತು ಹಿಂತಿರುಗುವಳು ಕಿಸಾಗೌತಮಿ ಬುದ್ಧನ ಬಳಿ. ಹುಟ್ಟಿದವರೆಲ್ಲಾ ಒಂದು ದಿನ ಸಾಯಲೇಬೇಕು ಎಂಬ ಸತ್ಯವನ್ನು ಅರಿತು ಬುದ್ಧನ ಅನುಯಾಯಿಯಾಗುವಳು ಕಿಸಾಗೌತಮಿ.

ಪ್ರಸಂಗ-3.
‘ಏಯ್ ಸನ್ಯಾಸಿ, ನಿಲ್ಲು ಅಲ್ಲಿಯೇ. ಇಲ್ಲವಾದರೆ ನಿನ್ನನ್ನು ಕೊಂದು ನಿನ್ನ ಹೆಬ್ಬೆರಳನ್ನು ಕತ್ತರಿಸಿ, ಸೇರಿಸಿಕೊಳ್ಳುವೆ ನನ್ನ ಕೊರಳ ಹಾರದಲ್ಲಿ’ ಎಂದು ಘರ್ಜಿಸಿದನು ಬೆಟ್ಟದ ನೆತ್ತಿಯ ಮೇಲೆ ನಿಂತಿದ್ದ ಅಂಗುಲಿಮಾಲ. ಬುದ್ಧನು ನಸುನಕ್ಕು, ‘ಚಲಿಸುತ್ತಿರುವನು ನೀನು, ನಿಂತಿರುವೆ ನಾನು ಸ್ಥಿರವಾಗಿ’ ಎಂದು ಅಂಜದ ಅಳುಕದೆ ಉತ್ತರಿಸುವನು. ಆ ಗ್ರಾಮಸ್ಥರಿಗೆ ಸಿಂಹಸ್ವಪ್ನವಾಗಿದ್ದ ಅಂಗುಲಿಮಾಲನು, ‘ನಡೆಯುತ್ತಿರುವನು ನೀನು, ನಿಂತಿರುವನು ನಾನು, ನಿನ್ನ ಮಾತಿನ ಗೂಡಾರ್ಥವೇನು? ಎಂದು ಅಚ್ಚರಿಯಿಂದ ಕೇಳುವನು. ಆಗ ಬುದ್ಧನು, ‘ನೀನು ಅರಿಷಡ್ವರ್ಗಗಳ ದಾಸನಾಗಿ ಸುತ್ತುತ್ತಲೇ ಇರುವೆ, ನಾನು ಜಿತೇಂದ್ರಿಯಗಳನ್ನು ಜಯಿಸಿ ಸ್ಥಿತಪ್ರಜ್ಞನಂತೆ ನಿಂತಿರುವೆ’ ಎಂದು ನುಡಿದಾಗ, ಅಂಗುಲಿಮಾಲನು ಅವನಿಗೆ ಶರಣಾಗಿ ಬೌದ್ಧ ಬಿಕ್ಷುವಾಗುವನು.

ಬಾಲ್ಯದಿಂದ ಈ ಪ್ರಸಂಗಗಳನ್ನು ಕೇಳುತ್ತಾ ಬೆಳೆದ ನನಗೆ ಬಿಹಾರದಲ್ಲಿರುವ ಬೌದ್ಧರ ಪ್ರಮುಖ ಕೇಂದ್ರವಾದ ಬೋಧಗಯಾಕ್ಕೆ ಹೋಗುವ ಅವಕಾಶ ದೊರೆತಾಗ ನಾನೇ ಧನ್ಯಳು ಎಂಬ ಭಾವ. ಏಪ್ರಿಲ್ 17, 2025ರಂದು ಕುಟುಂಬ ಸಮೇತ ನಿರ್ಮಲಾ ಪ್ರವಾಸಿ ಸಂಸ್ಥೆಯೊಂದಿಗೆ ಸಾಗಿತ್ತು ನಮ್ಮ ಪಯಣ. ಇದೊಂದು ಮಹತ್ವದ ಯಾತ್ರೆಯಾಗಿತ್ತು, ಕಾಶಿಯಲ್ಲಿ ವಿಶ್ವನಾಥನ ದರ್ಶನ, ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಹಾಗೂ ಬೋಧಗಯಾದಲ್ಲಿ ಸಿದ್ಧಾರ್ಥನಿಗೆ ಜ್ಞಾನೋದಯವಾದ ಪವಿತ್ರತಾಣ ನಮ್ಮ ಪ್ರವಾಸದ ವೇಳಾಪಟ್ಟಿಯಲ್ಲಿದ್ದವು.

ಬನ್ನಿ ಮೊದಲಿಗೆ ಗಯಾದಲ್ಲಿರುವ ಪುಟ್ಟಗ್ರಾಮ ಬೋಧಗಯಾಕ್ಕೆ ಹೋಗೋಣ – ಕಪಿಲವಸ್ತುವಿನ ರಾಜ ಶುದ್ಧೋದನ ಹಾಗೂ ರಾಜಮಾತೆ ಮಾಯಾದೇವಿಗೆ ನೇಪಾಳದ ಲುಂಬಿನಿಯಲ್ಲಿ ಜನಿಸಿದ ಶಿಶುವೇ ಸಿದ್ಧಾರ್ಥ. ಮಗುವಿನ ಜಾತಕವನ್ನು ನೋಡಿದ ಜ್ಯೋತಿಷಿಗಳು, ‘ಈ ಮಗು ದೊಡ್ಡವನಾದಾಗ ಚಕ್ರವರ್ತಿಯಾಗುವನು ಇಲ್ಲವೇ ವಿಶ್ವಗುರುವಾಗುವನು.’ ಎಂದು ನುಡಿಯುವರು. ಆಗ ಮಹಾರಾಜನು ಮಗನಿಗೆ ಹೊರಗಡೆಯಿರುವ ಜಗತ್ತಿನ ಪರಿಚಯವನ್ನೇ ಮಾಡಿಸದೆ, ತನ್ನರಮನೆಯ ಒಳಾಂಗಣದಲ್ಲಿಯೇ ಸಕಲ ಸೌಭಾಗ್ಯಗಳೂ ದೊರೆಯುವಂತೆ ಮಾಡಿ, ಪಂಜರದ ಗಿಳಿಯಂತೆ ಸಲಹುವನು. ದೊಡ್ಡವನಾದ ರಾಜಕುವರನಿಗೆ ಮದುವೆಯನ್ನೂ ಮಾಡುವರು. ಅವರ ಸುಖೀ ದಾಂಪತ್ಯದ ಫಲವಾಗಿ ರಾಹುಲನೆಂಬ ಮುದ್ದಾದ ಮಗುವೂ ಜನಿಸುವುದು. ಅವನಿಗೆ ಇಪ್ಪತ್ತೊಂಬತ್ತು ವರ್ಷವಾದಾಗ ಸಿದ್ಧಾರ್ಥನು ತನ್ನ ಸಾರಥಿ ಚೆನ್ನನನ್ನು ಕರೆದುಕೊಂಡು ಮೊದಲ ಬಾರಿಗೆ ಅರಮನೆಯ ಹೊರಗಡೆ ಇರುವ ನಗರ ಪ್ರದಕ್ಷಿಣೆ ಹಾಕಲು ಹೊರಡುವನು. ನಗರದ ಬೀದಿಗಳಲ್ಲಿ ಕಂಡ ದೃಶ್ಯಗಳು ಅವನ ಮನಸ್ಸನ್ನು ಕಲಕಿ ಬಿಡುವುವು. ರೋಗಿಷ್ಟನಾಗಿ ನರಳುತ್ತಿದ್ದ ಒಬ್ಬ ವ್ಯಕ್ತಿ, ಹಣ್ಣು ಹಣ್ಣು ಮುದುಕನಾಗಿದ್ದ ಇನ್ನೊಬ್ಬ, ಶವವಾಗಿ ಮಲಗಿದ್ದ ಮತ್ತೊಬ್ಬ ವ್ಯಕ್ತಿಯನ್ನು ಕಂಡಾಗ ಬದುಕಿನಲ್ಲಿ ಕಾಡುವ ಈ ನೋವು ಸಂಕಟಗಳಿಗೆ ಕೊನೆಯೆಲ್ಲಿದೆ? ಎಂದು ಚಿಂತಿಸುತ್ತಾ, ಅಂದೇ ರಾತ್ರಿ ತನ್ನರಮನೆಯನ್ನೂ, ಮಡದಿ ಮಕ್ಕಳನ್ನೂ ತೊರೆದು ಈ ಸಂಕಷ್ಟಗಳಿಗೆ ಪರಿಹಾರ ಹುಡುಕುತ್ತಾ ಹೊರಟು ಬಿಡುವನು. ಆರು ವರ್ಷಗಳ ಕಾಲ ಹಲವು ಮಹರ್ಷಿಗಳ ಬಳಿ ಅಧ್ಯಯನ ಮಾಡುತ್ತಾ ಕಠಿಣವಾದ ವ್ರತಗಳನ್ನು ಆಚರಿಸುವನು. ಐದು ಜನ ಸಾಧಕರು ಅವನ ಜೊತೆಗೂಡುವರು. ಅನ್ನಾಹಾರಗಳನ್ನು ತ್ಯಜಿಸುವನು, ಹಗಲು ರಾತ್ರಿ ಧ್ಯಾನದಲ್ಲಿ ನಿರತನಾಗುವನು. ಕಠಿಣವಾದ ವ್ರತ ನೇಮಗಳಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಸಿದ್ಧಾರ್ಥನನ್ನು ಕಂಡವಳು ಮಮತಾಮಯಿಯಾದ ಹೆಣ್ಣು ಸುಜಾತ. ಅವಳು ನೀಡಿದ ಪಾಯಸದಿಂದ ಚೇತರಿಸಿಕೊಂಡ ಸಿದ್ಧಾರ್ಥನಿಗೆ ಸ್ವಸ್ಥವಾದ ಮನಸ್ಸು ಸ್ವಸ್ಥವಾದ ದೇಹದಲ್ಲಿ ಮಾತ್ರ ಇರಲು ಸಾಧ್ಯ ಎಂಬ ಕಟುಸತ್ಯದ ಮನವರಿಕೆಯಾಗುತ್ತದೆ. ಭೋಗಜೀವನಕ್ಕೆ ತಿಲಾಂಜಲಿಯಿತ್ತಿದ್ದ ಸಿದ್ಧಾರ್ಥನು ಅಂದಿನಿಂದ ಅತ್ಯಂತ ಕಠಿಣವಾದ ವ್ರತನೇಮಗಳನ್ನು ನಿಲ್ಲಿಸಿ ಮಧ್ಯಮಮಾರ್ಗವನ್ನು ಅನುಸರಿಸುವನು. ಆಗ ಸಿದ್ಧಾರ್ಥನ ಅನುಯಾಯಿಗಳಾಗಿದ್ದ ಐವರು ಸಾಧಕರು ಅವನನ್ನು ತೊರೆದು ಹೊರಟು ಬಿಡುವರು. ಕಾರಣ, ಕಠಿಣ ವ್ರತಗಳನ್ನು ನಿಲ್ಲಿಸಿ, ಒಂದು ಹೆಣ್ಣಿನ ಕೈಯಿಂದ ಪಾಯಸ ಕುಡಿದವನು ಸನ್ಯಾಸಿ ಹೇಗಾದಾನು ಎಂಬ ಭಾವ ಅವರದ್ದು.

ಸಿದ್ಧಾರ್ಥನಿಗೆ ಜ್ಞಾನೋದಯವಾದ ಪವಿತ್ರತಾಣವನ್ನು ನೋಡೋಣ ಬನ್ನಿ. ಕ್ರಿಸ್ತಪೂರ್ವ ಮೂರು. ಅಂದು ವೈಶಾಖ ಶುದ್ಧ ಪೂರ್ಣಿಮೆ, ಸಿದ್ಧಾರ್ಥನು ಉರುವೇಲಾದ ಅರಣ್ಯವೊಂದರಲ್ಲಿ ಬೋಧಿ ವೃಕ್ಷದ ಅಡಿಯಲ್ಲಿ ಧ್ಯಾನಮಗ್ನನಾಗಿ ಕುಳಿತಿರುವನು. ದುಃಖದ ಮೂಲ ಯಾವುದು? ದುಃಖದಿಂದ ಮುಕ್ತಿ ಪಡೆಯುವ ಮಾರ್ಗ ಯಾವುದು? ಈ ಹುಟ್ಟುಸಾವಿನ ಚಕ್ರದಿಂದ ಬಿಡುಗಡೆ ಹೊಂದಿ ನಿರ್ವಾಣ ಹೊಂದುವ ಮಾರ್ಗ ಯಾವುದು ಎಂಬ ಸುದೀರ್ಘ ಚಿಂತನೆಯಲ್ಲಿ ಮುಳುಗಿದ್ದಾನೆ. ಇದ್ದಕಿದ್ದಂತೆ ಪ್ರಖರವಾದ ಬೆಳಕು ಧ್ಯಾನಮಗ್ನನಾಗಿದ್ದ ಸಿದ್ಧಾರ್ಥನ ಮುಂದೆ ಬೆಳಗಿತು, ಅವನು ಹುಟ್ಟಿದ ದಿನವಾದ ಬೈಸಾಕಿ ಪೂರ್ಣಿಮೆಯಂದೇ ಅವನಿಗೆ ಜ್ಞಾನೋದಯವಾಗಿತ್ತು. ಒಂದು ವಾರ ಮರದಡಿಯಲ್ಲಿ ಧ್ಯಾನಸ್ಥನಾಗಿ ಕುಳಿತ ಬುದ್ಧನಿಗೆ ಕೇಳಿ ಬರುವ ಅಮೃತವಾಣಿ ‘ಆಸೆಯೇ ದುಃಖಕ್ಕೆ ಕಾರಣ’.

ಜ್ಞಾನೋದಯವಾದ ನಂತರ ಬುದ್ಧನು ಇದೇ ಅರಣ್ಯದಲ್ಲಿ ಏಳು ವಾರಗಳ ಕಾಲ ಸಾಧನೆಯನ್ನು ಮಾಡುವನು. ಮೊದಲನೆಯ ವಾರ ಧ್ಯಾನಮಗ್ನನಾಗಿದ್ದ ಸಿದ್ಧಾರ್ಥನಿಗೆ ಜ್ಞಾನೋದಯವಾಗುವುದು. ಎರಡನೆಯ ವಾರ ಬುದ್ಧನು, ತನಗೆ ಜ್ಞಾನದ ಬೆಳಕನ್ನು ನೀಡಿದ ವೃಕ್ಷವನ್ನು ಕಣ್ಣುರೆಪ್ಪೆಯನ್ನು ಮಿಟುಕಿಸದೆ ದಿಟ್ಟಿಸುವನು. ಇದನ್ನು ”ಅನಿಮೇಷನಲೋಚನ ಚೈತ್ಯ” ಎಂದು ಕರೆಯಲಾಗಿದೆ. ಮೂರನೆಯ ವಾರ, ತನಗೆ ಜ್ಞಾನೋದಯವಾದದ್ದನ್ನು ದೇವತೆಗಳಿಗೆ ಪ್ರಚುರ ಪಡಿಸಲು ಭೂಮಿಯಿಂದ ಸ್ವರ್ಗಕ್ಕೆ ಹೊನ್ನಿನ ಹದಿನೆಂಟು ಮೆಟ್ಟಿಲುಗಳನ್ನು ನಿರ್ಮಿಸಿ ಅವುಗಳ ಮೇಲೆ ಹೆಜ್ಜೆ ಹಾಕುವನು, ಇವನು ಹೆಜ್ಜೆಯಿಟ್ಟಲ್ಲೆಲ್ಲಾ ಕಮಲಗಳು ಅರಳುತ್ತಿದ್ದವು. ಇದನ್ನು ”ರತ್ನಚಕ್ರಮ” ಎಂದು ಕರೆಯುತ್ತಾರೆ. ಇಂದಿಗೂ ಅಲ್ಲಿ ಕಲ್ಲಿನಲ್ಲಿ ಕೆತ್ತಲಾದ ಕಮಲಗಳನ್ನು ನೋಡಬಹುದು. ನಾಲ್ಕನೆಯ ವಾರ ಬುದ್ಧನು ರತ್ನಘರ್ ಚೈತ್ಯದಲ್ಲಿ ಪ್ರಾರ್ಥನೆ ಸಲ್ಲಿಸುವನು. ಮುತ್ತುರತ್ನಗಳಿಂದ ಅಲಂಕರಿಸಲ್ಪಟ್ಟ ಈ ಪ್ರಾರ್ಥನಾ ಮಂದಿರದಲ್ಲಿ, ಆವನ ಪರಿಶುದ್ಧವಾದ ಮನಸ್ಸಿನಿಂದ ಐದು ವರ್ಣಗಳುಳ್ಳ ಬೆಳಕಿನ ಬಿಲ್ಲು ಮೂಡಿ ಬಂತು. ಹಳದಿ ಬಣ್ಣ ಪಾವಿತ್ರ್ಯದ ಸಂಕೇತ, ಶ್ವೇತ ವರ್ಣ ಶುಭ್ರತೆಯ ಸಂಕೇತ, ನೀಲ ವರ್ಣ ಆತ್ಮವಿಶ್ವಾಸದ ದ್ಯೋತಕ, ಕೆಂಪು ಜ್ಞಾನದ ಸಂಕೇತ, ಕಿತ್ತಳೆ ವರ್ಣ ವೈರಾಗ್ಯದ ಸಂಕೇತ. ಈ ಐದು ವರ್ಣಗಳು ಪಂಚಭೂತಗಳ ಸಂಕೇತವಾಗಿಯೂ ನಿಲ್ಲುತ್ತವೆ ಎಂದೂ ಕೆಲವು ತಜ್ಞರು ಹೇಳುತ್ತಾರೆ.

ಐದನೆಯ ವಾರ ಬುದ್ಧನು ಅಜಪಾಲ ಮರದ ಕೆಳಗೆ ಕುಳಿತು ಧ್ಯಾನಸ್ಥನಾಗಿದ್ದಾಗ ಮಾರನ ಅಧೀನಲ್ಲಿದ್ದ ಮೂವರು ಅಪ್ಸರೆಯರು ಇವನ ತಪೋಭಂಗ ಮಾಡಲು ಯತ್ನಿಸಿ, ಕೊನೆಗೆ ಸೋತು ಹಿಂದಿರುಗುವರು. ಆಗ ಅಲ್ಲಿಗೆ ಆಗಮಿಸಿದ ಕೆಲವು ಬ್ರಾಹ್ಮಣ ಪಂಡಿತರ ಜೊತೆ ಬುದ್ಧನು ಆಧ್ಯಾತ್ಮಿಕ ಸಂಗತಿಗಳ ಕುರಿತಾಗಿ ಚರ್ಚೆ ನಡೆಸುವನು. ಆರನೆಯ ವಾರ ಕಮಲಗಳು ಅರಳಿದ್ದ ಒಂದು ಕೊಳದ ಮಧ್ಯೆ ಕುಳಿತು ಧ್ಯಾನ ಮಾಡುತ್ತಿರುವಾಗ, ಗುಡುಗು ಸಿಡಿಲು ಸಮೇತ ಜೋರಾದ ಮಳೆ ಸುರಿದಿತ್ತು. ಆಗ ಆ ಕೊಳದಲ್ಲಿ ವಾಸವಾಗಿದ್ದ ಸರ್ಪಗಳ ಒಡೆಯನಾದ ಆದಿಶೇಷನು ತನ್ನ ಏಳು ಹೆಡೆಯನ್ನು ಬಿಚ್ಚಿ ಬುದ್ಧನ ರಕ್ಷಣೆಗೆ ಮುಂದಾಗುವುದು. ಏಳನೆಯ ವಾರ ರಾಜಯತಾನ ವೃಕ್ಷದ ಕೆಳಗೆ ಕುಳಿತು ಬುದ್ಧನು ತಪಸ್ಸನ್ನಾಚರಿಸುತ್ತಿರುವಾಗ ಇಬ್ಬರು ವರ್ತಕರು ಬಂದು ಅವನಿಂದ ನೆನಪಿನ ಕಾಣಿಕೆಯನ್ನು ಬೇಡುವರು. ಬುದ್ಧನು ಅವರಿಗೆ ತನ್ನ ತಲೆಯ ಕೂದಲನ್ನು ನೀಡುವನು. ವರ್ತಕರು ಕೃತಾರ್ಥರಾಗಿ ಬುದ್ಧನು ನೀಡಿದ ಪವಿತ್ರ ವಸ್ತುವನ್ನು ಜೋಪಾನವಾಗಿ ಕೊಂಡೊಯ್ದು ಬೌದ್ಧ ವಿಹಾರಗಳಲ್ಲಿಟ್ಟು ಪೂಜೆ ಸಲ್ಲಿಸುತ್ತಾರೆ. ಹೀಗೆ ಬುದ್ಧನು ಏಳು ವಾರಗಳ ಕಾಲ ಈ ದಟ್ಟವಾದ ಅರಣ್ಯದಲ್ಲಿ ತಪಗೈಯುವನು. ಸಂಕುಚಿತ ಮನೋಭಾವದಿಂದ ಬುದ್ಧನನ್ನು ತೊರೆದಿದ್ದ ಐವರು ಸಾಧಕರು, ಇವನ ಸಾಧನೆಯನ್ನು ಕಂಡು, ಮತ್ತೆ ಬುದ್ಧನಿಗೆ ಶರಣಾಗಿ, ಅವನ ನಿಷ್ಠಾವಂತ ಅನುಯಾಯಿಗಳಾಗುವರು. ಆಗ ಮೊಳಗುವ ಘೋಷಣೆ, ಬುದ್ಧಂ ಶರಣಂ ಗಚ್ಛಾಮಿ, ದಮ್ಮಂ ಶರಣಂ ಗಚ್ಛಾಮಿ’ ಎಂದು.

ಬೌದ್ಧರಿಗೆ ಪ್ರಮುಖ ಕೇಂದ್ರವಾಗಿರುವ ಬೋಧಗಯಾದಲ್ಲಿ ಇಪ್ಪತ್ತೊಂಭತ್ತು ರಾಷ್ಟ್ರಗಳು ನಿರ್ಮಿಸಿರುವ ಬೌದ್ಧವಿಹಾರಗಳಿದ್ದು, ಒಂದೊಂದು ದೇಗುಲದ ವಾಸ್ತುಶಿಲ್ಪವೂ ಭಿನ್ನವಾಗಿದ್ದು ಪ್ರವಾಸಿಗರಿಗೆ ಮೋಡಿ ಹಾಕುವಂತಿವೆ. ಶ್ರೀಲಂಕಾ, ಭೂತಾನ್, ಥೈಲ್ಯಾಂಡ್, ಚೈನಾ, ಟಿಬೆಟ್, ಕೊರಿಯಾ ಮುಂತಾದ ಬೌದ್ಧವಿಹಾರಗಳು ಬೌದ್ಧರನ್ನು ಕೈಬೀಸಿ ಕರೆಯುತ್ತಿವೆ. ನಮಗೆ ಕಾಲಾವಕಾಶ ಇರಲಿಲ್ಲವಾದ್ದರಿಂದ ಥೈಲ್ಯಾಂಡ್ ಮತ್ತು ಭೂತಾನ್ ಮೊನಾಸ್ಟ್ರಿಗಳಿಗೆ ಭೇಟಿ ನೀಡಿ 1989ನೇ ಸಾಲಿನಲ್ಲಿ ನಿರ್ಮಾಣವಾದ ಎಂಭತ್ತು ಅಡಿ ಎತ್ತರವಿದ್ದ ಬೃಹತ್ತಾದ ಬುದ್ಧನ ವಿಗ್ರಹವನ್ನು ನೋಡಲು ಹೋದೆವು. ಬುದ್ಧನ ಮುಖದ ಮೇಲೆ ಮೂಡಿದ್ದ ಮಂದಹಾಸ, ಅರೆನಿಮೀಲಿತ ನೇತ್ರಗಳು, ಧ್ಯಾನಮುದ್ರೆ ನಮ್ಮಲ್ಲಿ ಭಕ್ತಿಭಾವ ಮೂಡಿಸಿದ್ದವು. ಬುದ್ಧನ ಸುತ್ತಲೂ ನಿರ್ಮಿಸಲಾಗಿದ್ದ ಹತ್ತು ಬೌದ್ಧ ಬಿಕ್ಷುಗಳ ವಿಗ್ರಹಗಳು ವಿಭಿನ್ನ ಭಂಗಿಗಳಲ್ಲಿ ನಿಂತು ಶಾಂತಿ, ಕರುಣೆ, ಸತ್ಯ, ಅಹಿಂಸೆಯ ಕಿರಣಗಳನ್ನು ಬೀರುತ್ತಿದ್ದವು.

ಕ್ರಿ.ಶಕ. ಎಂಭತ್ತರಲ್ಲಿ ಅಯೋಧ್ಯೆಯಲ್ಲಿ ಜನಿಸಿದ ಬೌದ್ಧ ದಾರ್ಶನಿಕ, ತತ್ವಜ್ಞಾನಿ ಹಾಗೂ ಪ್ರಖ್ಯಾತ ಲೇಖಕ ಅಶ್ವಘೋಷ. ಇವನು ಬೋಧಗಯಾವನ್ನು ಎಲ್ಲಾ ಧರ್ಮಗಳ ನಾಭಿ ಪ್ರದೇಶವೆಂದು ಅಂದರೆ ಮೂಲ ಆಧಾರವೆಂದು ನುಡಿಯುತ್ತಾನೆ. ಬೋಧಿ ಎಂದರೆ ಆಧ್ಯಾತ್ಮದ ಬೇಳಕು, ಹುಟ್ಟು ಸಾವಿನ ಚಕ್ರದಲ್ಲಿ ಸಿಲುಕಿರುವ ಮಾನವರನ್ನು ಮೋಕ್ಷ ಮಾರ್ಗದತ್ತ ಕೊಂಡೊಯ್ಯುವ ಸಾಧನ. ಬುದ್ಧ ಎಂದರೆ ಸಂಕಷ್ಟಗಳಿಂದ ಬಿಡುಗಡೆ ಕೊಡಿಸುವನು, ಕರುಣಾಮಯಿ, ಎಲ್ಲವನ್ನೂ ಅರಿತ ಜ್ಞಾನದ ಜ್ಯೋತಿ ಎಂಬ ಅರ್ಥ.

ಬೋಧಗಯಾದ ದೇಗುಲವು ಯುನೆಸ್ಕೋದ ಪಾರಂಪರಿಕ ಪಟ್ಟಿಗೆ ಸೇರಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಲ್ಲವೇ? ಬೋಧಗಯಾದ ದೇಗುಲವನ್ನು ಕಟ್ಟಿಸಿದವನು ಯಾರು ಎಂದು ಹೇಳಬೇಕಾಗಿಲ್ಲ. ಎರಡು ಶತಕಗಳ ನಂತರ ಬಂದ ಅಶೋಕ ಚಕ್ರವರ್ತಿಯು ಬೌದ್ಧ ಧರ್ಮಕ್ಕೆ ಮತಾಂತರಗೊಂಡು, ಸಿದ್ಧಾರ್ಥನಿಗೆ ಜ್ಞಾನೋದಯವಾದ ಈ ಪವಿತ್ರ ಸ್ಥಳದಲ್ಲಿ ಒಂದು ದೊಡ್ಡ ದೇಗುಲವನ್ನು ನಿರ್ಮಿಸುವನು. ಇಟ್ಟಿಗೆಗಳಿಂದ ನಿರ್ಮಿಸಲ್ಪಟ್ಟ ಅತ್ಯಂತ ಸುಂದರವಾದ ದೇಗುಲವೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ದಕ್ಷಿಣ ಭಾರತದ ವಾಸ್ತುಶಿಲ್ಪ ಮಾದರಿಯಲ್ಲಿ ಕಟ್ಟಲಾಗಿರುವ ಈ ದೇಗುಲವನ್ನು ಗುಪ್ತರು, ಮೌರ್ಯರು ಮುಂತಾದ ರಾಜವಂಶಸ್ಥರು ನವೀಕರಿಸುತ್ತಾ ಹೋದರು. ದೇಗುಲದ ಮಧ್ಯೆ ಎದ್ದು ಕಾಣುವ ರಾಜಗೋಪುರ, ನಾಲ್ಕು ದಿಕ್ಕುಗಳಲ್ಲಿಯೂ ರಮಣೀಯವಾದ ಗೋಪುರಗಳಿಂದ ಸುತ್ತುವರೆಯಲ್ಪಟ್ಟಿದೆ. ಅಲ್ಲಲ್ಲಿ ವಿವಿಧ ಗಾತ್ರಗಳ ಸ್ತೂಪಗಳನ್ನು ನಿರ್ಮಿಸಲಾಗಿದ್ದು, ಬೌದ್ಧ ಧರ್ಮದ ಅನುಯಾಯಿಗಳು ತಮ್ಮ ಸಾಮರ್ಥ್ಯಕ್ಕನುಗಣವಾಗಿ ಈ ಸ್ತೂಪಗಳನ್ನು ನಿರ್ಮಿಸಿದ್ದಾರೆ. ದೇಗುಲದ ಹಿಂಬದಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೌದ್ಧಬಿಕ್ಷುಗಳು ಜಪ ಮಾಡುತ್ತಾ ಕುಳಿತಿದ್ದರು, ‘ಇವರ ಮುಂದೆ ಇತ್ತು ವಜ್ರಾಸನ, ಬುದ್ಧನಿಗೆ ಜ್ಞಾನೋದಯವಾದ ಪವಿತ್ರ ಸ್ಥಳದಲ್ಲಿ ಅಶೋಕ ಚಕ್ರವರ್ತಿಯು ನಿರ್ಮಿಸಿದ್ದ ಚಿನ್ನದ ಮಂಟಪದ ಮಧ್ಯೆಯಿರುವ ವಜ್ರಖಚಿತವಾದ ಆಸನ.’ ಆ ಸ್ಥಳವನ್ನು ಸಂರಕ್ಷಿಸಲಾಗಿದ್ದು, ಇದರ ಪಕ್ಕದಲ್ಲಿಯೇ ಬುದ್ಧನ ಹೆಜ್ಜೆಯ ಗುರುತುಗಳನ್ನು ಕಲ್ಲಿನ ಮೇಲೆ ಕೆತ್ತಲಾಗಿದೆ. ನಾವು ಭಕ್ತಿಭಾವದಿಂದ ಆ ಪಾದಗಳಿಗೆ ಹಣೆಯಿಟ್ಟು ನಮಸ್ಕರಿಸಿ ಮುಂದೆ ಸಾಗಿದೆವು.

ಮುಂದೆ ಸಾಗಿದಾಗ ನಮ್ಮ ಗೈಡ್ ಕೆಲವು ಆಘಾತಕಾರಿ ವಿಷಯಗಳನ್ನು ಹೇಳಿದ, ‘ಅಶೋಕ ಚಕ್ರವರ್ತಿಯ ಪತ್ನಿ ‘ತ್ರಿಸಾರಕ್ಕಾ’ ತನ್ನ ಪತಿ ಬೌದ್ಧಧರ್ಮದ ಅನುಯಾಯಿಯಾದನೆಂಬ ಸಿಟ್ಟಿನಿಂದ ಈ ಬೋಧಿವೃಕ್ಷವನ್ನು ಕಡಿಸುತ್ತಾಳೆ. ಆದರೆ ಆ ವೃಕ್ಷ ಮತ್ತೆ ಹುಲುಸಾಗಿ ಬೆಳೆಯುತ್ತದೆ. ನಂತರದಲ್ಲಿ ಬಂದ ‘ಪುಷ್ಯಮಿತ್ರ ಶುಂಗ’ ಎಂಬ ದೊರೆ ಎಲ್ಲೆಡೆ ಹರಡುತ್ತಿದ್ದ ಬೌದ್ಧ ಧರ್ಮವನ್ನು ಮಟ್ಟಹಾಕಲು, ಮತ್ತೆ ಈ ಬೋಧಿವೃಕ್ಷವನ್ನು ಕಡಿಸುತ್ತಾನೆ. ಆದರೆ ಜ್ಞಾನದ ಬೆಳಕನ್ನು ಬೀರುತ್ತಿದ್ದ ಈ ವೃಕ್ಷ ಮತ್ತೆ ಚಿಗುರೊಡೆದು ಬೆಳೆಯುತ್ತದೆ. ಕ್ರಿ.ಶ. ಆರುನೂರರಲ್ಲಿ ಈ ಪ್ರದೇಶವನ್ನು ಆಳಿದ ಶಶಾಂಕ ಮಹಾರಾಜನು ಬೌದ್ಧಧರ್ಮವನ್ನು ನಿರ್ನಾಮ ಮಾಡಲು ಮತ್ತೆ ಈ ವೃಕ್ಷಕ್ಕೆ ಕೊಡಲಿಯೇಟು ಹಾಕುತ್ತಾನೆ. ಈಗ ಇಲ್ಲಿರುವುದು ನಾಲ್ಕನೇ ತಲೆಮಾರಿನ ಬೋಧಿವೃಕ್ಷ ಎಂದು ನಮ್ಮ ಗೈಡ್ ಹೇಳಿದ ಮಾತುಗಳನ್ನು ಚಿಂತನ ಮಂಥನ ಮಾಡುತ್ತಾ ವಿಶ್ರಾಂತ ಸ್ಥಿತಿಯಲ್ಲಿರುವ ಹೊಂಬಣ್ಣದ ಲೇಪನವಿದ್ದ ಬುದ್ಧನ ವಿಗ್ರಹವನ್ನು ನೋಡಲು ಹೊರಟೆವು. ಸಂಜೆಯಾಗಿತ್ತು, ಭಾಸ್ಕರನು ಮೆಲ್ಲಮೆಲ್ಲಗೆ ಆಗಸದಿಂದ ಕೆಳಗಿಳಿಯುತ್ತಿದ್ದ. ಭುವಿಯಲ್ಲಿರುವುದೆಲ್ಲವನ್ನೂ ತನ್ನ ಹೊಂಬಣ್ಣದ ಕಿರಣಗಳಿಂದ ಅಲಂಕರಿಸಿದ್ದ. ಮಹಾಪರಿನಿರ್ವಾಣ ಸ್ಥಿತಿಯಲ್ಲಿ ವಿಶ್ರಮಿಸುತ್ತಿದ್ದ ಬುದ್ಧನ ಮೂರ್ತಿ ಎಲ್ಲರ ಕಣ್ಮನ ಸೆಳೆದಿತ್ತು. ಸುಮಾರು ನೂರು ಅಡಿ ಉದ್ದವಿದ್ದು ಮೂವತ್ತು ಅಡಿ ಎತ್ತರವಿರುವ ಈ ವಿಗ್ರಹ ಭಾರತದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಬೌದ್ಧರಿಗೆ ಅತ್ಯಂತ ಪವಿತ್ರಕ್ಷೇತ್ರವಾದ ಬೋಧಗಯಾದಲ್ಲಿ ನಿರ್ಮಾಣವಾದ ಈ ಮೂರ್ತಿಯನ್ನು 2023 ಡಿಸೆಂಬರ್‌ನಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಪ್ರಸನ್ನವದನಾಗಿ ಮಲಗಿದ್ದ ಬುದ್ಧನ ಮೂರ್ತಿಯನ್ನು ನೋಡುತ್ತಾ ನಿಂತವರು ಮೌನಕ್ಕೆ ಶರಣಾಗಿದ್ದೆವು.

ಡಾ.ಗಾಯತ್ರಿದೇವಿಸಜ್ಜನ್ , ಶಿವಮೊಗ್ಗ

7 Responses

  1. ಪದ್ಮಾ ಆನಂದ್ says:

    ಬುದ್ಧಪೂರ್ಣಿಮೆಯ ಸಂದರ್ಭದಲ್ಲಿ ಹಲವಾರು ಆಸಕ್ತಿದಾಯಕ ವಿಷಯಗಳನ್ನೊಳಗೊಂಡ ಚಂದದ ಲೇಖನ.

  2. ನಾವು ನಿಮ್ಮೊಡನೆ ಒಂದು ಸುತ್ತು ಸಿದ್ಧಾರ್ಥ ಬುದ್ದನಾಗಿದ್ದ ವಿಚಾರ ನಂತರದ ವಿಚಾರ..ಎಲ್ಲವೂ ಸೊಗಸಾದ ನಿರೂಪಣೆಯಲ್ಲಿ..ಮನನ ಮಾಡುಕೊಂಡಂತಾಯಿತು..ಚಿತ್ರ ಗಳೂ ಪೂರಕವಾಗಿವೆ ಮನಕ್ಕೆ ಮುದತಂದಿತು.ವಂದನೆಗಳು ಗಾಯತ್ರಿ ಮೇಡಂ.

  3. ಈ ಲೇಖನವನ್ನು ಚಂದದ ಚಿತ್ರದೊಂದಿಗೆ ಪ್ರಕಟಿಸಿದ ಹೇಮಮಾಲಾ ಅವರಿಗೆ ಧನ್ಯವಾದಗಳು
    ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ವಂದನೆಗಳು ಪದ್ಮ ಹಾಗೂ ನಾಗರತ್ನ ಮೇಡಂ ರವರಿಗೆ

  4. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ

  5. ಶಂಕರಿ ಶರ್ಮ says:

    ಪೂರಕ ಪ್ರಸಂಗಗಳನ್ನು ಉದ್ಧರಿಸುತ್ತಾ, ಬುದ್ಧಗಯಾದ ವಿಶೇಷತೆಗಳನ್ನು ಬಣ್ಣಿಸುತ್ತಾ, ನಾಲ್ಕು ಬಾರಿ ಬುಡಸಮೇತ ಕಡಿಯಲ್ಪಟ್ಟ ಬೋಧಿವೃಕ್ಷವು; ಕೇವಲಜ್ಞಾನವನ್ನು ಎಂದಿಗೂ ಯಾರಿಂದಲೂ ನಿರ್ನಾಮ ಮಾಡಲಾಗದೆಂಬ ಸಂದೇಶವನ್ನು ಸಾರುತ್ತಾ ಪುನರಪಿ ಚಿಗುರೊಡೆದು ಮಹಾವೃಕ್ಷವಾಗಿ ಬೆಳೆದ ಪರಿ…ಎಲ್ಲವೂ ರೋಚಕವಾಗಿ ಮೂಡಿಬಂದಿದೆ…ಧನ್ಯವಾದಗಳು ಗಾಯತ್ರಿ ಮೇಡಂ.

    • ನಿಮ್ಮ ಪ್ರತಿಕ್ರಿಯೆಗಾಗಿ
      ಶಂಕರಿ ಶರ್ಮ ಮೇಡಂ ರವರಿಗೆ ಹೃದಯಪೂರ್ವಕ ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: