ಕಾವ್ಯ ಭಾಗವತ 43: ಸಮುದ್ರ ಮಥನ – 5

43.ಅಷ್ಟಮಸ್ಕಂದ – ಅಧ್ಯಾಯ -2
ಸಮುದ್ರ ಮಥನ – 5
ಅಮೃತೋತ್ಪತ್ತಿಯಾಯಿತೆಂಬ
ಹರ್ಷೋಧ್ಗಾರ
ಎಲ್ಲೆಡೆ ವ್ಯಾಪಿಸಿ
ದೇವದಾನವರು ಸಂಭ್ರಮಿಸುತಿರೆ
ಕೆಲದಾನವರು ಮುನ್ನುಗ್ಗಿ
ಧನ್ವಂತರಿ ಹಸ್ತದಿಂ
ಅಮೃತ ಕಳಶವ ಅಪಹರಿಸಿ
ಓಡಿದಾಗ
ದೇವತೆಗಳು ದಿಗ್ಭಾಂತರಾಗಿ
ತಮ್ಮೆಲ್ಲ ಶ್ರಮ ನಿರರ್ಥಕವಾಯಿತೆಂದು
ಪರಿತಪಿಸುತ
ಅಮೃತ ಪ್ರಾಪ್ತಿಯಿಂದ
ಅಸುರರು ಅಮರರಾಗಿ
ಬಲಾಢ್ಯರಾಗಿ
ಮೆರೆಯುವರೆಂಬ ಭಾವದಿಂ
ವ್ಯಸನಾಕ್ರಾಂತರಾದವರ
ಸಂತೈಸಿದ ಭಗವಂತ
ಅದೃಶ್ಯನಾದ
ಸ್ವರ್ಗಲೋಕದಿಂ ಇಳಿದು ಬಂದಂತೆ
ಭುವನಮೋಹಕ ಸ್ರ್ತೀರೂಪವೊಂದನು
ಸಮೀಪದಲೆ ಕಂಡ
ದೇವದಾನವರಿಗೊಂದು ಅಚ್ಚರಿ
ಅವಳ ರೂಪವ ಕಂಡು
ಭ್ರಮಿತರಾದ ದೇವ ದಾನವರು
ಅಮೃತವ ಮರೆತರು
ಮಹಾ ತಾಮಸ ರಾಜಸ ಪ್ರಕೃತಿಯ
ದಾನವರು ಬಲುಮೋಹಿತರಾಗಿ
ಅವಳನ್ನೇ ಅಮೃತವ
ದೇವದಾನವರ ಮಧ್ಯೆ ಹಂಚುವಂತೆ
ಬೇಡಿಕೊಂಡುದೊಂದು ವಿಪರ್ಯಾಸ
ಆ ಶ್ರೀಮನ್ನಾರಾಯಣನ ಮೋಹವಿಲಾಸ
ಸಾಲಾಗಿ ಕುಳಿತ ದೇವದಾನವರಿಗೆ
ಅಮೃತ ನೀಡುವ ಆಟದಲಿ
ದೇವತಗಳೆಲ್ಲ ಅಮೃತಪಾನ
ಮಾಡಿದ ನಂತರದಲಿ
ಕಳಶ ಖಾಲಿಯಾದುದು
ಭ್ರಮಾಪೀಡಿತ ದಾನವರಿಗೆ
ತಿಳಿಯುವಷ್ಟರಲಿ
ದೇವ ತನ್ನ ಕಾರ್ಯ ಮುಗಿಸಿ
ಗರುಡಾರೂಢನಾಗಿ ವೈಕುಂಠವ ಸೇರಿದ್ದ
ದೇವದಾನವರಿಬ್ಬರೂ ಸಮರಾಗಿ ಶ್ರಮಿಸಿ
ಸಮುದ್ರ ಮಥನ ಮಾಡಿದರೂ
ದೇವತೆಗಳು ತಮ್ಮೆಲ್ಲ ಕಾರ್ಯಗಳು
ಭಗವಂತನಾರಾಧನೆಯೆಂದು ನಂಬಿ
ಪ್ರಾರಂಭದಿಂ ಅಮೃತಪ್ರಾಪ್ತಿ ಪರ್ಯಂತ
ಭಗವದಧೀನ ಮನಸ್ಕರಾಗಿದ್ದು
ಅಮೃತವ ಪಡೆಯಲು ಅರ್ಹರಾದರು
ದಾನವರು ಅಹಂಕಾರ, ಮಮಕಾರವಿಷ್ಟರಾಗಿ
ಮೋಹಿನೀ ರೂಪದ ವಿಷ್ಣುವಿನ
ನಿಜಸ್ವರೂಪವನ್ನರಿಯದೆ
ಕಾಮ ಮೋಹಿತರಾಗಿ
ಫಲಪ್ರಾಪ್ತಿಗೆ ಅರ್ಹರಾಗದೆ
ಅಮೃತ ವಂಚಿತರಾದರು
ಇದು ಸಮುದ್ರ ಮಂಥನ
ಭಾವ ಅರ್ಥ ಅಭಾವಗಳ ಮಂಥನ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=42590
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಸಮುದ್ರ ಮಥನದಿಂದ ಉತ್ಪತ್ತಿಯಾದ ಅಮೃತದ ಹಂಚಿಕೆಯ ರೀತಿ ವಿಸ್ಮಯಕರವಾಗಿದೆ.
ಧನ್ಯವಾದಗಳು
ಎಂದಿನಂತೆ ಭಾಗವತದ ಕಾವ್ಯಭಾಗ ಓದಿಸಿಕೊಂಡುಹೋಯಿತು.. ಸೊಗಸಾದ ಚಿತ್ರ ಮನ ಸೆಳೆಯಿತು..
Nice
ಅಮೃತ ಹಂಚಿಕೆಗಾಗಿ ಭಗವಂತ ಮೋಹಿನಿ ರೂಪ ಪಡೆದು ಲೀಲೆ ತೋರಿದ ಪರಿ ಅದ್ಭುತ!
ಇದು ಸಮುದ್ರ ಮಂಥನ
ಭಾವ ಅರ್ಥ ಅಭಾವಗಳ ಮಂಥನ….
ಮನ ಮಂಥನ ನಡೆಸಬೇಕಾದ ಸಾರ್ವಕಾಲಿಕ ಸತ್ಯ ತುಂಬಿದ ಅರ್ಥಗರ್ಭಿತ ಸಾಲುಗಳು.
ಪ್ರಕಟಿಸಿದ ಸುರಹೊನ್ನೆ ಸಂಪಾದಕರಿಗೆ ಧನ್ಯವಾದಗಳು