ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು
11-5-2025ರಂದು (ತಾಯಂದಿರ ದಿನದ ಸಂದರ್ಭಕ್ಕಾಗಿ)
ಅನೇಕ ಹಿಂದಿ ಚಲನಚಿತ್ರಗಳಲ್ಲಿ ನಾಯಕ ಖಳನಾಯಕರ ಎದುರು ಹೇಳುವ ಒಂದು ಸಾಮಾನ್ಯ ಮಾತು. “ಇಲ್ಲಿ ತಾಯಿ ಹಾಲು ಕುಡಿದ ಗಂಡು ಯಾರಾದ್ರೂ ಇದ್ರೆ ಬನ್ನಿ ನನ್ನೊಂದಿಗೆ ಹೊಡೆದಾಡಲು”. ತಾಯಿ ಹಾಲು ಮಗುವಿನ ಪೋಷಣೆ, ಆರೋಗ್ಯ ರಕ್ಷಣೇಲಿ ವಹಿಸುವ ಪಾತ್ರವನ್ನು ವೈದ್ಯರು, ವಿಜ್ಞಾನಿಗಳು ಹಿಂದಿನಿಂದ ಒತ್ತಿ ಹೇಳುತ್ತಿದ್ದಾರೆ. ನಮ್ಮೆಲ್ಲರ ಜೀವನದಲ್ಲಿ ಆರಂಭದಿಂದ ನಮಗೆ ಪ್ರೀತಿ, ಬೆಂಬಲ, ಮಾರ್ಗದರ್ಶನ ನೀಡುವ ದೇವತೆಯೇ ಅಮ್ಮ. ಪ್ರಪಂಚದ ಎಲ್ಲ ಅಮ್ಮಂದಿರೂ ಈ ಭೂಮಿ ಮೇಲೆ ಅವತರಿಸಿರುವ ದೇವತೆಗಳೇ. ನಾನು ನಕ್ಕಾಗ ನಕ್ಕು, ನಾನು ಅತ್ತಾಗ ತಾನೂ ಅತ್ತು, ನನ್ನ ಕಣ್ಣೀರು ಒರೆಸಿ, ನಗಿಸಿ, ಚಂದಮಾಮಾ ತೋರಿಸಿ, ಕಥೆ ಹೇಳಿ ನನಗೆ ತುತ್ತು ತಿನ್ನಿಸಿ, ಬೆಳೆಸಿದ ನನ್ನಮ್ಮ ಗಿರಿಜಾ, ನನ್ನ ಮೊದಲ ದೈವ. ಚಿಕ್ಕಂದಿನಲ್ಲಿ ನನಗೆ ಹಲ್ಲುಜ್ಜುವುದು, ಮಾತಾಡುವುದು, ಹಾಡುವುದು, ಎಲ್ಲ ಕಲಿಸಿದವಳೇ ನನ್ನಮ್ಮ. ಚಿಕ್ಕಂದಿನಿಂದ ನಾನು ಭಾಷಣ, ನಾಟಕ, ಡ್ಯಾನ್ಸ್, ಮಾಡಿದ್ದು ಮೊದಲು ಅಮ್ಮನ ಎದುರಿಗೇ. ಚೆನ್ನಾಗಿತ್ತು ಎಂಬ ಮೊದಲ ಮೆಚ್ಚುಗೆ, ಮೊದಲ ಚಪ್ಪಾಳೆ ಆಕೆಯಿಂದಲೇ. ಆ ನನ್ನ ಮಮತೆಯ ತಾಯಿಯ ಮೊದಲ ಚಪ್ಪಾಳೆಯಿಂದ, ಆ ನನ್ನ ತಂದೆ ವಾಮನ್ ಮೆಚ್ಚುಗೆಯಿಂದಲೇ, ಇಂದು ನಾನು ರೇಡಿಯೋ –ರಂಗಭೂಮಿ, ನಾಟಕಕಾರ-ನಟ-ನಿರ್ದೇಶಕನಾಗಿ 111 ಪುಸ್ತಕ ಬರೆದು ಪ್ರಕಾಶನ ಮಾಡಿ, ಅಂಕಣ ಬರೆಹ, ಅಂತರ್ಜಾಲ, ಉಪನ್ಯಾಸ ಮಾಡುವ ಮಟ್ಟಿಗೆ ಬೆಳೆಯಲು ಸಾಧ್ಯವಾಗಿದೆ ಎಂಬ ಮಾತು ಶತಸಿದ್ಧ. ಈ ನನ್ನ ತಾಯಿ ನಮ್ಮನಗಲಿ 8 ವರ್ಷಗಳಾಗಿವೆ. ಆಕೆಯ ಭಾವಚಿತ್ರಕ್ಕೆ ಈ ವರ್ಷದ ತಾಯಂದಿರ ದಿನಾಚರಣೆಯ ನನ್ನ ಪೂಜೆ. ಪ್ರಿಯ ಓದುಗರೇ, ನಿಮ್ಮ ತಾಯಂದಿರ ಬಗ್ಗೆ ಹೀಗೆ ನೆನಪಿಸಿಕೊಳ್ಳಿ. ನನ್ನ ಅಮ್ಮನ ಜೀವನದರ್ಶನದ ಕೆಲವು ನೆನಪುಗಳು ಇಲ್ಲಿವೆ. ಸಿನಿಮಾಗೆ ಕರಿಯಿರಿ. ನಾಟಕಕ್ಕೆ ಕರೆಯಿರಿ. ಹರಿಕಥೆ ಅಥವಾ ದೇವಸ್ಥಾನಕ್ಕೆ ಕರೆಯಿರಿ. ಆ ಬೇರೆ ಊರುಗಳಿಗೆ ಕರೆಯಿರಿ. ‘ಉಹುಂ’ ಎಂಬ ಪದವೇ ಅವರ ಬಳಿ ಇಲ್ಲ ನಮಗಿಂತಲೂ ಮೊದಲೇ ರೆಡಿಯಾಗುತ್ತಿದ್ದರು .ನನ್ನಮ್ಮ. ಗಿರಿಜಾ ವಾಮನ್. ವಯಸ್ಸು ಎಂಬತ್ತು ದಾಟಿದ್ದರೂ, 18ರ ವಯಸ್ಸಿನವರನ್ನೂ ನಾಚಿಸುವ ಉತ್ಸಾಹ, ಯಾರನ್ನೂ ಅವಲಂಬಿಸದೇ ಸ್ವಾವಲಂಬಿ ಬದುಕು ಸಾಗಿಸುವ ಉಮೇದು ಅವರದಾಗಿತ್ತು.
ಮದುವೆಯಾದಾಗ ಗಿರಿಜಾ ಇನ್ನೂ 15ರ ಬಾಲೆ. ಮೈಸೂರು ಅರಮನೆಯ ಸಾರೋಟಿನಲ್ಲಿ ಓಡಾಡಿಕೊಂಡಿದ್ದ ಮುಗ್ದೆ, ಅವರ ಬದುಕೇ ಈಗಿನ ಮಹಿಳೆಯರಿಗೆ ಮಾದರಿ, ನೋವು-ನಲಿವಿನ ಸವಿಯೂಟದ ಜೀವನವನ್ನು ಬಂದದ್ದನ್ನು ಬಂದಂತೆಯೇ ಸ್ವೀಕರಿಸಿದ ಹಿರಿಯ ಚೇತನ ಪ್ರತಿನಿತ್ಯ ಶುಭ್ರ ಬಟ್ಟೆ ಧರಿಸಿ, ನಗುನಗುತ್ತ ಸಮಾಧಾನದ ಬದುಕು ನಡೆಸುತ್ತಿದ್ದ ಆಕೆ, ತಮ್ಮ ಕೆಲಸ ತಾವೇ ಮಾಡಿಕೊಳ್ಳುತ್ತಿದ್ದರು. ಅಷ್ಟೇ ಏಕೆ, ನಿತ್ಯ ಮನೆಯ ಕಸ ಗುಡಿಸುತ್ತಿದ್ದರು. ಪಾತ್ರೆ ತೊಳೆಯುತ್ತಿದ್ದರು.. ಚುರುಕಿನಿಂದ ಓಡಾಡಿಕೊಂಡಿದ್ದ ಹುಡುಗಿಗೆ ಇದ್ದಕ್ಕಿದ್ದಂತೆ ಮದುವೆ ನಿಶ್ಚಯವಾಯಿತು. ತಾಳಿ ಕಟ್ಟಿಸಿಕೊಳ್ಳುವವರೆಗೂ ವರನನ್ನು ನೋಡಿಯೇ ಇರಲಿಲ್ಲ ನಾಟಕದ ಹುಚ್ಚು ಹಿಡಿದಿದ್ದ ರಂಗಭೂಮಿ ಹಾಗೂ ಆಕಾಶವಾಣಿ ಕಲಾವಿದ ಎನ್.ಎಸ್. ವಾಮನ್ ಇವರಿಗೆ ನಿಶ್ಚಯವಾಗಿದ್ದ ಗಂಡು. ಆತನ ತಾತ ವೆಂಕಟಾಚಲ ಶಾಸ್ತ್ರಿ ಮೈಸೂರು ಅರಮನೆಯ ಧರ್ಮಾಧಿಕಾರಿಗಳು, ಸಂಸ್ಕೃತ ಪಂಡಿತರು. ಇಬ್ಬರ ಮನೆತನಗಳೂ ಅರಮನೆಯ ಪ್ರಭಾವಲಯದಲ್ಲಿ ಇದ್ದವು. ಮನೆಯಲ್ಲಿ ಏನೇ ಶುಭ ಕಾರ್ಯವಾದರೂ ಮನೆ ಮುಂದೆ, ಅರಮನೆಯ ಹಸು, ಕುದುರೆ ಆನೆ, ಪಲ್ಲಕ್ಕಿ ಸೈನಿಕರ ಪಡೆ ಗೌರವ ಸೂಚಿಸಲು ಅರಮನೆಯ ಲಾಂಛನದ ಕೊಡೆ ಹೊತ್ತು ತರುತ್ತಿದ್ದವಂತೆ !
ಮುಂದೆ ದೇಶ ಭಾಷೆ ತಿಳಿಯದ ದಿಲ್ಲಿಗೆ ಗಂಡನೊಂದಿಗೆ ಹೋದರು. ಹಿಂದಿ ಪ್ರಪಂಚದಲ್ಲಿ ಧೈರ್ಯದಿಂದ ಜೀವನ ಸಾಗಿಸಿದರು. ಭಾರಿ ಬಂಗೈ ಆಳುಗಳು, ಶ್ರೀಮಂತಿಕೆಯ ಜೀವನ-ಇಲ್ಲಿಂದ ಬಂದ ಈಕೆ ಒಬ್ಬಂಟಿಯಾಗಿ ಇದ್ದಿಲು ಒಲೆಯಲ್ಲಿ ಅಡುಗೆ ಮಾಡಿದರು. ಅಂದಿನಿಂದ 1998ರವರೆಗೆ ಗಂಡನೊಂದಿಗೆ ಮನೆಗೆ ತಂಡೋಪತಂಡಗಳಲ್ಲಿ ಬರುತ್ತಿದ್ದ ಸಹೋದ್ಯೋಗಿಗಳು, ನಾಟಕ ಹಾಗೂ ಸಿನಿಮಾ ಕಲಾವಿದರಿಗೆ ನಿತ್ಯ ಅನ್ನ ಸಂತರ್ಪಣೆ. ಇವರ ಅಡುಗೆ ರುಚಿ ಸವಿದವರಲ್ಲಿ ರಾಜ್ ಕುಮಾರ್, ಬಾಲಕೃಷ್ಣ ನರಸಿಂಹರಾಜು, ಜಿ.ವಿ. ಅಯ್ಯರ್, ಕೆ.ಎಸ್. ಅಶ್ವತ್ ಮಾಸ್ಟರ್ ಹಿರಣ್ಣಯ್ಯ ಕೂಡ ಸೇರಿದ್ದಾರೆ.
ಧಾರವಾಡದಲ್ಲಿದ್ದಾಗ ರಾತ್ರಿ 3 ಗಂಟೆಗೆ ಮನೆ ಹೊರಗಿನಿಂದ ನೀರು ಹೊತ್ತು ತರಬೇಕು. ನಾಲ್ಕು ಗಂಡು ಮಕ್ಕಳನ್ನು ಸಾಕಬೇಕು, ಮೈಸೂರು, ದಿಲ್ಲಿ ಬೆಂಗಳೂರು, ಧಾರವಾಡಗಳಲ್ಲೂ ಗಂಡ, ಮಕ್ಕಳನ್ನು ಪ್ರೀತಿಯಿಂದ ಜೋಪಾನ ಮಾಡಿದರು. ಸಿನಿಮಾ- ನಾಟಕ ನೋಡಿದ್ದರು. ಮಹಿಳಾ ಮಂಡಲ ಸೇರಿದ್ದರು. ರೇಡಿಯೋ ಹಾಗೂ ರಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅಡುಗೆಯ ನಾನಾ ರೀತಿ, ಹಿತಮಿತವಾದ ಪದಾರ್ಥಗಳ ಬಳಕೆ, ಅಡುಗೆ ಮನೆ, ಸ್ನಾನಗೃಹ ಹಾಗೂ ಶೌಚಾಲಯ ನಿರ್ವಹಣೆ ಬಗ್ಗೆ ಅಪಾರ ಕಾಳಜಿ ವಹಿಸಿ, ಇತರರಿಗೂ ಸದಾ ಮಾರ್ಗದರ್ಶನ ನೀಡಿದ್ದರು.
ಎಲ್ಲವನ್ನೂ ಕಲಿಯುತ್ತ ಬದುಕಿನಲ್ಲಿ ಅಳವಡಿಸಿಕೊಂಡು ಖುಷಿ ಪಡುವ ಆಕೆ ತೃಪ್ತಿ- ಸಂತಸಗಳ ಆಗರ. ಆ ಕಾಲದಲ್ಲಿಯೇ ಹೆಣ್ಣು ಓದಬೇಕು, ಶೋಷಣೆ ವಿರುದ್ದ ಹೋರಾಡಬೇಕು, ಮಿತ ಕುಟುಂಬವಿರಬೇಕು ಎಂದು ಎಲ್ಲರೊಂದಿಗೆ ಹೇಳುತ್ತ ಬಂದಿದ್ದವರು ತನ್ನ ಹಲವಾರು ಗರ್ಭಪಾತ, ನಾಲ್ಕು ಮಕ್ಕಳನ್ನು ಬೆಳೆಸುವ ಕಷ್ಟ ಅನುಭವಿಸಿದ ಈಕೆಯ ಬೋಧನೆ ‘ಗಂಡಾಗಲಿ, ಹೆಣ್ಣಾಗಲಿ, ಒಂದೇ ಮಗು ಸಾಕು’ ಪುಟ್ಟ ಶಿಶುಗಳಿಂದ ಮಕ್ಕಳು ಯುವಕ-ಯುವತಿಯರು, ಹಿರಿಯರು, ರೋಗಿಗಳು ಎಲ್ಲರೊಂದಿಗೆ ಹೊಂದಿಕೊಳ್ಳುವ ಜಾಯಮಾನ ಆಕೆಯದಾಗಿತ್ತು.
ನಾನು 3 ವರ್ಷದವನಾಗಿದ್ದಾಗ ದಿಲ್ಲಿಯಲ್ಲಿ 3ನೇ ಮಹಡಿಯಿಂದ ಬಿದ್ದು ಬಲಗಾಲು ಮುರಿದುಕೊಂಡು ಮೈಸೂರಿಗೆ ಬಂದಾಗ ಅನೇಕ ವರ್ಷ ನನ್ನ ಕಾಲಿನ ಉಪಚಾರ ಮಾಡಿ, ಜಡೆಬಾಚಿ, ಹೂ ಮುಡಿಸಿ, ನಿತ್ಯ ನನಗೆ ಕಥೆ ಹೇಳಿ,ಎಣ್ಣೆ ನೀರು ಹಾಕಿ ಸಿಹಿ ತಿನ್ನಿಸಿ, ನಮ್ಮೊಂದಿಗೆ ಫ್ಯಾನ್ಸಿ ಡ್ರೆಸ್ ಹಾಕಿ, ಹೊಸ ಅಡುಗೆ ಮಾಡಿ, ಪಟಾಕಿ ಹೊಡೆದು ಸಂಭ್ರಮಿಸಿದ ನನ್ನ ಮಾಮಿ ನನ್ನ 2ನೇ ತಾಯಿ. 74 ವರ್ಷಗಳ ಕೆಳಗೆ ಮದುವೆಯಾಗಿ ಕಣಿವೆ ಕೆಳಗಿನಿಂದ ಬಂದು, ಮೈಸೂರಲ್ಲಿ ನೆಲಸಿದ ತಮಿಳು ಕನ್ಯೆ. ಕನ್ನಡ ಕಲಿತು ಕವಿತೆ ರಚಿಸಿ, ಸಂಗೀತ-ಗಮಕ ಕಲಿತು, ಹಿಂದೀ ಭಾಷೆಯ ಪ್ರವೀಣಳಾಗಿ, ಎದುರು ಬಂದ ಕೌಟುಂಬಿಕ, ಆರೋಗ್ಯದ ಸಮಸ್ಯೆಗಳ ಮಹಾಪೂರದೆದುರು ಅಚಲಳಾಗಿ ನಿಂತು, 90 ದಾಟಿದ್ದರೂ ದೃಷ್ಟಿ ಕಾಣದಿದ್ದರೂ ಅಪಾರ ನೆನಪಿನ ಶಕ್ತಿಯಿಂದ, ಇಂದಿಗೂ ರಾರಾಜಿಸುತ್ತಿದ್ದಾರೆ ರಾಜಲಕ್ಷ್ಮಿ ರಾಮಚಂದ್ರನ್. ನಾದಿನಿಯ ಮಕ್ಕಳೊಂದಿಗೆ ಹಿಂದೆ ದಿನ ದಿನಪತ್ರಿಕೆ, ಮ್ಯಾಗಜಿನ್‌ಗಳಲ್ಲಿ ಬಂದ ಹೊಸ ರುಚಿ ಪ್ರಯೋಗ ಅಂದಂದೇ ಮಾಡುತ್ತಿದ್ದರು. ಗಂಡು ಮಕ್ಕಳೂ ಹೊಡೆಯಲು ಹೆದರುವ ಆಟಂಬಾಂಬ್, ರಾಕೆಟ್ ಧೈರ್ಯದಿಂದ ಹೊಡೆಯುತ್ತಿದ್ದರು. ಈಕೆ ಕೌಟುಂಬಿಕ ಸಮಸ್ಯೆಗಳ ಮಧ್ಯೆ ಮತ್ತೆ ಸಂಗೀತದ ಸೆಳೆತ ಅನಂತರಾಮ ಶರ್ಮ ಬಳಿ ಮತ್ತೆ ಮತ್ತೆ ಕಲಿತರು. ಪಾಲಘಾಟ ಶಂಕರ್ ಅವರ ಬಳಿ 3 ವರ್ಷ ಗಾಯನ ಕಲಿತರು. ಕೃಷ್ಣಮೂರ್ತಿ ಹಾಗೂ ನಾಗರತ್ನ ಸದಾಶಿವ ಬಳಿ ಸಂಗೀತಗ ಮುಂದುವರೆಸಿ, ಜ್ಯೂನಿಯರ್ ಸೀನಿಯರ್, ವಿದ್ವತ್ ಪಾಸಾದರು. ಗಿರಿಧರ್ ಅವರ ಬಳಿ 11/2 ವರ್ಷ ಗಮಕ ಕಲಿತರು. ಆಸಕ್ತಿಯಿಂದ ಸಂಗೀತದ ಜೊತೆಗೆ, ಸ್ಪಲ್ಪ ಸಾಹಿತ್ಯ ಓದಿ ಕಲಿತರು. ಗಮಕದ ರಾಘವೇಂದ್ರರಾವ್ ನಡೆಸಿ ಸಂದರ್ಶನದಲ್ಲಿ ಪಾಸಾಗಿ, ಗಮಕದಲ್ಲಿ ಪ್ರವೇಶ, ಪ್ರೌಢ ಪರೀಕ್ಷೆ ಪಾಸಾದರು. ಹಿಂದಿ ಭಾಷೆಯಲ್ಲಿ ಆಸಕ್ತಿ ಮೂಡಿತು.ತಮ್ಮ ಎಲ್ಲ ನೋವು ಮರೆತು ಪುಟ್ಟ ಮಕ್ಕಳಿಗೆ ಹಿಂದೀ ಕಲಿಸಿದರು. ಕನ್ನಡ ಓದಿಸಿದರು. ತಾವು ಪ್ರವೀಣ್ ಓದಿ, ಚೆನೈನಲ್ಲಿ ಹಿಂದಿ ಪ್ರಚಾರ ಸಭಾದಿಂದ ಗೌರವದ ಶಾಲು ಪಡೆದಿದ್ದಾರೆ. ಶ್ರೀ ರಾಘವೇಂದ್ರ ಸ್ವಾಮಿಗಳ ಬಗ್ಗೆ 8 ಭಕ್ತಿಗೀತೆ ಹಾಗೂ ಸ್ತೋತ್ರ ಬರೆದು ರಾಗ ಸಂಯೋಜಿಸಿ ಹಾಡಿದ್ದಾರೆ.
ಈಗ 94ರ ವಯಸ್ಸು, ಗ್ಲೂಕೋಮಾ ಕಣ್ಣಿನ ದೃಷ್ಟಿ ಕಿತ್ತುಕೊಂಡಿದೆ. ನೆನಪಿನ ಆಧಾರದಲ್ಲಿ ಸ್ವತಂತ್ರವಾಗಿ ಓಡಾಡುತ್ತಾರೆ. ಟಿ.ವಿ ಹಾಕಿ ಸೀರಿಯಲ್ ಕೇಳುತ್ತಾರೆ. ರೇಡಿಯೋ ಆಸ್ಪಾದಿಸುತ್ತಾರೆ. ಹಿಂದಿನ ನೆನಪುಗಳನ್ನು ಮರೆಯದೇ, ವಿವರವಾಗಿ ಹೇಳುತ್ತಾರೆ. ದಿನವಿಡೀ ಸ್ತೋತ್ರ, ಸಂಗೀತ ತಮ್ಮಷ್ಟಕ್ಕೆ ತಾವೇ ಹಾಡಿಕೊಳ್ಳುತ್ತಾರೆ.
ಕಣ್ಣಿಗೆ ಕಾಣದ ದೇವರಿಗಿಂತ, ಕಣ್ಣಿಗೆ ಕಾಣುವ ನಮ್ಮ ತಾಯಿ-ತಂದೆಯರನ್ನೇ ಇರುವಾಗ ಗೌರವಿಸಿ, ಅವರ ವೃದ್ದಾಪ್ಯದಲ್ಲಿ ಚೆನ್ನಾಗಿ ನೋಡಿಕೊಂಡು ಅವರು ನಮ್ಮನ್ನಗಲಿದಾಗ ಅವರನ್ನು ಮರೆಯದೇ ಸದಾ ಸ್ಮರಿಸುವ ಪವಿತ್ರ ಜವಾಬ್ದಾರಿ ನಮ್ಮೆಲ್ಲರದು ಏನಂತೀರಾ?
–ಎನ್.ವ್ಹಿ.ರಮೇಶ್
ಹೆತ್ತಮ್ಮ ಮತ್ತು ಸಾಕುತಾಯಿಗೆ ಅಮ್ಮಂದಿರ ದಿನಾಚರಣೆಯ ಸಮಯದಲ್ಲಿ ಅರ್ಪಿಸಿದ ನುಡಿನಮನ ಸಂದರ್ಭೋಚಿತವಾಗಿದೆ.
ಹೃದಯ ಸ್ಪರ್ಶಿಯಾದ ಲೇಖನ.. ಸಾರ್
ಅಮ್ಮಾ ಎಂದರೆ ಹಾಗೇ.ನಿಮ್ಮಮ್ಮನ ಬಗ್ಗೆ ತುಂಬಾ ಚೆನ್ನಾಗಿಅನ ಮುಟ್ಟುವ ಹಾಗೆ ತಿಳಿಸಿದ್ದೀರ…ತಂದೆ ತಾಯಿ ಅಜ್ಜ ಅಜ್ಜಿ ಸಂಸ್ಕಾರವೇ ನಿಮ್ಮ ಉಜ್ವಲ ಭವಿಷ್ಯಕ್ಕೆ ದಾರಿ ದೀಪವಾಗಿ ಕಂಗೊಳಿಸಿದೆ…ನಿಮ್ಮ ಶ್ರದ್ಧೆ ಆಸಕ್ತಿಜೊತೆಗೆ ನಿಮ್ಮ ಬಾಳ ಸಂಗಾತಿಯ ಧೀ ಶಕ್ತಿ ಎಲ್ಲವೂ ಸೇರಿದೆ..ನಿಮ್ಮ ಬರೆಹದ ಈ ಲೇಖನ ಹೃದಯ ಸ್ಪರ್ಶಿ ಯಾಗಿ ಮೂಡಿಬಂದಿದೆ..ಅಭಿನಂದನೆಗಳು ನಿಮಗೆ..ಸರ್ ..
ತಾಯಂದಿರ ದಿನದ ಸಲುವಾಗಿ ಮೂಡಿಬಂದ ಸುಂದರ, ಅತ್ಮೀಯವಾದ ಲೇಖನದಲ್ಲಿ; ಹಡೆದ ತಾಯಿ ಮತ್ತು ಸಾಕುತಾಯಿಯಾದ ಮಾಮಿ… ಇವರ ಒಡನಾಟದಲ್ಲಿ ಬೆಳೆದು, ಅವರಿಂದಲೇ ಸ್ಫೂರ್ತಿ ಪಡೆದು ಪ್ರತಿಭಾವಂತರಾದ ಬಗೆ ಆಸಕ್ತಿದಾಯಕವಾಗಿದೆ.