“ಕರ್ನಾಟಕ ರತ್ನ” ಪುನೀತ್ ರಾಜಕುಮಾರ್.

Share Button


ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿನೂತನ ಶೈಲಿಯಿಂದ ನಟನೆಗೆ ಹೆಸರುವಾಸಿಯಾಗಿದ್ದ “ಅಪ್ಪು” ರವರ  50ನೇ ಹುಟ್ಟುಹಬ್ಬವನ್ನ ಅವರ ಅಭಿಮಾನಿಗಳು, ಇಡೀ ಕರ್ನಾಟಕ, ಆಚರಿಸಿದೆ. ಹಲವು ಕಡೆ ಪುನೀತ್ ರಾಜಕುಮಾರ್ ಗಾಗಿಯೇ ದೇವಸ್ಥಾನವನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಅವರ ಹೆಸರು ರಸ್ತೆಗೆ ವ್ಯಕ್ತಿಗೆ ಸಮಾಜಕ್ಕೆ ಇಟ್ಟಿದ್ದಾರೆ. ಸತ್ತ ನಂತರವೂ ಕೂಡ ಬದುಕು ಅಂದರೇ ಇದೆ ಅಲ್ಲವೇ?!.

ಅಪ್ಪು ಎಂದೆಂದೂ ಅಮರ:

ಅಪ್ಪುವಿನ ಅಭಿಮಾನಿಗಳು ಇವತ್ತಿಗೂ ಕೂಡ ಅವರ ಎಲ್ಲಾ ಚಿತ್ರಗಳನ್ನು, ನಟನೆಯನ್ನು, ಹಾಡುಗಳನ್ನು ಎಂದಿಗೂ ಮರೆಯುವುದಿಲ್ಲ. ಈಗಲೂ ಕೂಡ ಅವರ ಮೊಬೈಲ್ ನಲ್ಲಿ,  ಮನೆಯಲ್ಲಿ ಅಥವಾ ಪ್ರವಾಸಕ್ಕೆ ಹೋದಾಗ ಅಪ್ಪುವಿನ ಹಾಡುಗಳನ್ನು ಹಾಕಿಕೊಂಡು ಕೇಳುತ್ತಾರೆ. ನಟಿಸಿರುವ ಚಿತ್ರಗಳನ್ನು ವೀಕ್ಷಿಸುತ್ತಾರೆ. ಮೈ ಮರೆಯುತ್ತಾರೆ.  ಅಪ್ಪುವಿನ ಹೆಸರಿನಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಅನೇಕ ಸಂಘ ಸಂಸ್ಥೆಗಳು…… ವ್ಯಕ್ತಿಗಳು….. ಮಾಡುತ್ತಾ ಬರುತ್ತಿದ್ದಾರೆ.   “ಮಾನವ ಜನ್ಮ ದೊಡ್ಡದು, ಅದು ಸಿಗುವುದೇ ಅಪರೂಪ, ಅದನ್ನು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ!” ಎಂಬ ದಾಸರ ಮಾತು ಎಷ್ಟೊಂದು ಅರ್ಥಪೂರ್ಣ!.  ಹುಟ್ಟು  ಉಚಿತ…. ಸಾವು ಖಚಿತ…. ಆದರೆ ಆ ನಡುವಿನ ಪ್ರೀತಿ, ಸಾಧನೆ ಮಾತ್ರ ಶಾಶ್ವತ!.

ಈ ಮೇಲಿನ ಎಲ್ಲಾ ಪೀಠಿಕೆಗಳಿಗೆ ಒಬ್ಬ “ನಟ” ಅತ್ಯುತ್ತಮ ಉದಾಹರಣೆ ಯಾಗುತ್ತಾರೆ. ಪ್ರತಿಯೊಬ್ಬ ಕನ್ನಡಿಗರಿಗೂ, ಕನ್ನಡೇತರರಿಗೂ ಕೂಡ ಗೊತ್ತಾಗಿರುವ ವಿಷಯ. ಅವರೇ ನಮ್ಮ “ಪುನೀತ್ ರಾಜ್‍ಕುಮಾರ್ ” ರವರು.

ಸದ್ದಿಲ್ಲದೆ ಸುದ್ದಿ ಮಾಡಿದವರು….

“ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋಗಿದ್ದರೂ ಕೂಡ, ಇದ್ದಷ್ಟು ದಿನ ಎಲ್ಲೆಡೆ ತನ್ನ ಬೆಳ್ಳಿ ಕಿರಣವನ್ನು ಬೀರಿ, ಹಲವರ ಬಾಳಿಗೆ ದಾರಿ ದೀಪವಾಗಿದ್ದಾರೆ.  ಸದ್ದಿಲ್ಲದೆ ಸುದ್ದಿ ಮಾಡಿ ಅಮರರಾದವರು ಪುನೀತ್ ರಾಜ್ ರವರು. ಅಪ್ಪು ಸಮಾಧಿ ಈಗ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಪ್ರತಿದಿನ ಅಭಿಮಾನಿಗಳು ಹುಟ್ಟು ಹಬ್ಬದ ದಿನ, ಜೊತೆಗೆ ಇನ್ನಿತರ ದಿನಗಳಲ್ಲೂ ಕೂಡ ಹೋಗಿ ಬರುತ್ತಾರೆ.  ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಪ್ರತಿಯೊಂದು ಗ್ರಾಮದಲ್ಲೂ ಕೂಡ ಆಳೆತ್ತರದ ಕಟೌಟ್ ಮೂಲಕ ರಾರಾಧಿಸುವಂತೆ ಮಾಡಿದ್ದು ಇದೊಂದು ವಿಶೇಷ.  ಈಗಲೂ ಕೂಡ ಅನೇಕ ಜಿಲ್ಲೆಗಳಲ್ಲಿ ಅಪ್ಪುವಿನ ಪ್ರತಿಮೆಗಳನ್ನು ವೃತ್ತಗಳಲ್ಲಿ ಸ್ಥಾಪಿಸಿದ್ದಾರೆ. ಅನೇಕ ಆಟೋ ನಿಲ್ದಾಣ ಗಳಿಗೆ ಅಪ್ಪುವಿನ ಹೆಸರು ಇಟ್ಟಿದ್ದಾರೆ.

 “ಮಳೆ ನಿಂತರೂ ಮರದಡಿ ಹನಿಗಳು….” ಎನ್ನುವಂತೆ ಆ ಹನಿಗಳೇ “ಸ್ವಾತಿಮುತ್ತು”ಗಳಾಗಿ ಕನ್ನಡದ ಮನೆ -ಮನಗಳಲ್ಲಿ ರಾರಾಜಿಸಿದೆ.  ರಿಯಾಲಿಟಿ ಶೋ ಗಳಲ್ಲಿ “ಅಪ್ಪು” ನಟಿಸಿರುವ ಚಿತ್ರಗಳ ಹಾಡುಗಳು…. ಅಥವಾ ಅವರ ಬಗ್ಗೆ ಯಾವುದಾದರೂ ಮಾಹಿತಿ ಬಂದರೆ ಸಾಕು ಆಬಾಲವೃದ್ಧರಾಗಿಯಾಗಿ ಎಲ್ಲರೂ ತಮ್ಮ ಮೊಬೈಲ್ ಗಳನ್ನು ಆನ್ ಮಾಡಿ ಮೊಬೈಲ್ ಟಾರ್ಚ್ ಮೂಲಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಾರೆ.  ಇದು ಅಪ್ಪುರವರಿಗೆ ಸಲ್ಲಿಸುವ ಭಾವಪೂರ್ಣ ನಮನ.  ಅಪ್ಪು ಅಮರರಾಗಿದ್ದಾರೆ. ಅವರು ನಮ್ಮನ್ನಗಲಿಲ್ಲ  ಅವರು ತಮ್ಮದೇ ಆದ ವಿಶಿಷ್ಟ ರೀತಿಯ ಸಾಧನೆ ಮೂಲಕ ಶಾಶ್ವತವಾಗಿ ಉಳಿದಿದ್ದಾರೆ.  ಜೊತೆಗೆ ಪ್ರತಿಯೊಬ್ಬರಿಗೂ ಕೂಡ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅವರು ಬದುಕಿದ್ದ ಅವಧಿಯಲ್ಲಿ ಮಾಡಿದ ಸಾಧನೆ ನಿಜಕ್ಕೂ ಅಮೋಘವಾದದ್ದು.

ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದಾತ.

ಬಾಲ್ಯದಿಂದಲೂ ತಮ್ಮ ನಟನೆಯ ಜೊತೆ ಜೊತೆಗೆ ಕೇವಲ ಚಿತ್ರ ನಟನೆ ಅಲ್ಲದೆ ಹೀಗೂ ಕೂಡ ಸಾಧನೆ ಮಾಡಬಹುದು ಎಂಬುದನ್ನು ಸಾಧಿಸಿ, ತೋರಿಸಿಕೊಟ್ಟಿದ್ದಾರೆ. ಜೊತೆಗೆ ಇತರರಿಗೆ ಮಾದರಿಯಾಗಿದ್ದಾರೆ. ಡಾ|| ಪುನೀತ್ ರಾಜ್‍ಕುಮಾರ್ ( 17.03.1975 ರಲ್ಲಿ ಜನಿಸಿದರು. 29 ಅಕ್ಟೋಬರ್ 2021 ನಮ್ಮನ್ನಗಲಿದರು). ಚಿತ್ರನಟ, ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಮತ್ತು ಸಿನಿಮಾ ನಿರ್ಮಾಪಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆ ಮೆರೆದಿದ್ದಾರೆ.  ಇವರು ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ನಿರ್ಮಾಣ ಮಾಡಿದ್ದರು. 25ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿ ಲಕ್ಷಾಂತರ ಅಭಿಮಾನಿಗಳನ್ನು ಸೆಳೆದಿದ್ದಾರೆ.

ತಂದೆಗೆ ತಕ್ಕ ಮಗನಾದರು!.

ಬಾಲ್ಯದಲ್ಲಿ ತನ್ನ ತಂದೆ ಮೇರು ನಟ ಡಾ. ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ಇವರು “ವಸಂತ ಗೀತ”, “ಭಾಗ್ಯವಂತ”, “ಚಲಿಸುವ ಮೋಡಗಳು”, “ಎರಡು ನಕ್ಷತ್ರಗಳು”, “ಭಕ್ತ ಪ್ರಹ್ಲಾದ”, “ಯಾರಿವನು” ಮತ್ತು “ಬೆಟ್ಟದ ಹೂವು” ಚಿತ್ರಗಳಲ್ಲಿ ನಟನೆಗೆ ಮೆಚ್ಚುಗೆ ಪಡೆದಿದ್ದಾರೆ. “ಬೆಟ್ಟದ ಹೂವು” ಚಿತ್ರದ ‘ರಾಮು’ ಪಾತ್ರಕ್ಕೆ “ಅತ್ಯುತ್ತಮ ಬಾಲ ಕಲಾವಿದ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ  ಪಾತ್ರರಾಗಿದ್ದರು. ಜೊತೆಗೆ “ಚಲಿಸುವ ಮೋಡಗಳು” ಮತ್ತು “ಎರಡು ನಕ್ಷತ್ರಗಳು” ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದರು. ಅವರು ಬಾಲ ಕಲಾವಿದನಾಗಿ ನಟಿಸಿರುವ ಚಿತ್ರಗಳು ಈಗಲೂ ಬಹಳ ಜನಪ್ರಿಯ ಪಡೆದಿವೆ.    ನಟನೆಯನ್ನೇ ಬಾಲ್ಯದಲ್ಲೇ ಉಸಿರಾಗಿಸಿಕೊಂಡ ಪುನೀತ್ ಅವರು 2002ರಲ್ಲಿ “ಅಪ್ಪು” ಚಿತ್ರದಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ಸಿನಿಮಾರಂಗದ ಪಯಣ ಆರಂಭಿಸಿದ್ದು ಈಗ ಇತಿಹಾಸ.

ಕರ್ನಾಟಕ ರತ್ನ ನಮ್ಮ ಪುನೀತ:-

ಕರ್ನಾಟಕ ಸರ್ಕಾರ ಇವರಿಗೆ ಮರಣೋತ್ತರವಾಗಿ “ಕರ್ನಾಟಕ ರತ್ನ” ಪ್ರಶಸ್ತಿಯ ನೀಡಿ, ಅದರ ಗೌರವಕ್ಕೆ ಭಾಜನರಾಗುವಂತೆ ಮಾಡಿದ್ದಾರೆ. ಡಾ ರಾಜಕುಮಾರ್ ಅವರು ಸಹ “ಕರ್ನಾಟಕ ರತ್ನ” ಪಡೆದಿದ್ದಾರೆ. ತಂದೆಯ ಹಾದಿಯಲ್ಲೇ ಸಾಗಿ ಮತ್ತಷ್ಟು ಸಾಧನೆ ಮಾಡುವ ಹಂತದಲ್ಲಿ, ಅವರ ನಿರ್ಗಮನ  ಕನ್ನಡ ಸಿನಿಮಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ.  ರಿಯಾಲಿಟಿ ಶೋ ಗಳಲ್ಲಿ ಅವರ ಹೃದಯ ತುಂಬಿದ ಸ್ಪೂರ್ತಿಯುತ ಮಾತುಗಳು ಹಲವರಿಗೆ ದಾರಿ ದೀಪವಾಗಿದ್ದವು. ತಂದೆಯ ಹಾದಿಯಲ್ಲಿ ಸಾಗಿ ತಂದೆಯನ್ನು ಮೀರಿಸುವ ಸಾಧನೆ ಮಾಡಿ ಅಮರರಾಗಿದ್ದಾರೆ.    “ಮಾಸ್ಟರ್ ರೋಹಿತ್”, ಪವರ್ ಸ್ಟಾರ್ “ಪುನೀತ್” ರಾಗಿ ಬೆಳೆದದ್ದು ಮಾತ್ರ ಒಂದು ದಂತಕತೆಯೇ ಸರಿ!”.

ಬಹುಮುಖ ಪ್ರತಿಭೆ:-

ನಾ ಮೊದಲೇ ತಿಳಿಸಿದಂತೆ ಒಬ್ಬ ನಟನಾಗಿ,ಗಾಯಕನಾಗಿ, ನಿರ್ಮಾಪಕನಾಗಿ, ನೃತ್ಯಗಾರನಾಗಿ, ಜೊತೆಗೆ ಸಮಾಜಮುಖಿ ಸೇವೆಯನ್ನುಮಾಡುತ್ತ ತಮ್ಮ ವಿಭಿನ್ನ ಮುಖಗಳ ದರ್ಶನ ಮಾಡಿದ್ದಾರೆ.  ತಮ್ಮ ಅಭಿಮಾನಿಗಳ ಮೂಲಕ  ಅಪ್ಪು, ಪವರ್ ಸ್ಟಾರ್, ಕನ್ನಡದ ರಾಜರತ್ನ ,ಯುವರತ್ನ, ಬಾಕ್ಸ್ ಆಫೀಸ್ ಕಿಂಗ್ ಇನ್ನು ಮುಂತಾದ ಹೆಸರುಗಳಿಂದ ಕರೆಸಿಕೊಂಡಿದ್ದರು.   ಟಿವಿ ಕಾರ್ಯಕ್ರಮಗಳ ನಿರೂಪಕರಾಗಿ ಚಿತ್ರರಂಗದಲ್ಲಿ ಗಮನ ಸೆಳೆದಿದ್ದರು.

ಡಾ|| ಪುನೀತ್ ರಾಜ್‍ಕುಮಾರ್

ಸದಭಿರುಚಿಯ ಚಿತ್ರಗಳು:-

ಅವರು ನಟಿಸಿದ ಅಪ್ಪು ಅಭಿ, ವೀರಕನ್ನಡಿಗ, ಮೌರ್ಯ, ಆಕಾಶ್, ಅಜಯ್, ಅರಸು, ಮಿಲನ, ವಂಶಿ, ರಾಮ್, ಪೃಥ್ವಿ, ಜಾಕಿ, ಹುಡುಗರು, ಅಣ್ಣಾ ಬಾಂಡ್ , ಪವರ್, ರಣವಿಕ್ರಮ, ದೊಡ್ಮನೆ ಹುಡುಗ, ರಾಜಕುಮಾರ, ಯುವರತ್ನ, ಜೇಮ್ಸ್  ಸೇರಿದಂತೆ ಇತರ ಹಲವು ಚಲನಚಿತ್ರಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಕನ್ನಡದ ಕೋಟ್ಯಧಿಪತಿಯ ನಿರೂಪಣೆ ಮಾಡಿದ್ದಾರೆ. ಇಲ್ಲಿ ಅವರ ಸ್ಫೂರ್ತಿಯುತ ಮಾತುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದವು.  ಕರ್ನಾಟಕ ರಾಜ್ಯಸರ್ಕಾರದ ವಿವಿಧ ಯೋಜನೆಗಳ ರಾಯಭಾರಿಯಾಗಿ….. ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿಯೂ ಅವರು ಸೇವೆ ಸಲ್ಲಿಸಿ ಸತ್ತ ನಂತರವೂ ಕೂಡ ನಮ್ಮೊಟ್ಟಿಗೆ ಬದುಕಿದ್ದಾರೆ.

ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆಗಳು, ಇನ್ನು ಹಲವರ ಪಾಲಿಗೆ ಬೆಳಕಾಗದವರು. ಒಬ್ಬ “ನಟ”ನಿಗಾಗಿ ಒಂದು ಗುಡಿಯನ್ನೇ ತಮ್ಮ ಅಭಿಮಾನಿಗಳು ಗಂಗಾವತಿ ತಾಲೂಕಿನಲ್ಲಿ ಕಟ್ಟಿಸಿದ್ದಾರೆ! ಎಂದರೆ “ಪುನೀತ್” ರವರ ಬಗ್ಗೆ ಅಭಿಮಾನ ಎಷ್ಟು ದೊಡ್ಡದು ಎಂಬುದು ಇದರಿಂದ ತಿಳಿಯುತ್ತದೆ.  ಅನೇಕ ಕಾರ್ಯಕ್ರಮಗಳಲ್ಲಿ ಪುನೀತ್ ರಾಜ್ ಚಿತ್ರವನ್ನು ಅವರ ಹಾಡು ಮುಗಿಯುವಷ್ಟರಲ್ಲಿ ಬರೆದು ದಾಖಲೆ ಮಾಡುವ ಚಿತ್ರ ಕಲೆಗಾರರು ಇದ್ದಾರೆ.  ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ. ಬೆಂಗಳೂರಿನಲ್ಲಿ  ಇಂಟರ್ನ್ಯಾಷನಲ್ ಆಸ್ಪತ್ರೆಯನ್ನು ಕೂಡ ಸ್ಥಾಪಿಸಿದೆ.

ಸಮಾಜಕ್ಕೆ ಕೊಡುಗೆ:-

ಸಮಾಜಮುಖಿ ಚಿಂತನೆಗಳೊಂದಿಗೆ  ಜನಮಾನಸದಲ್ಲಿ ಅತಿ ಎತ್ತರವಾಗಿ ತಾವು ಬೆಳೆದು ಇತರರನ್ನೂ ಬೆಳೆಸಿದ್ದರು. ಇವರ ಹೆಸರು ಇಂದಿಗೂ ಕೂಡ ಅಮರವಾಗಿದೆ. ಅವರು ತಂದೆಯ ಮಾರ್ಗದರ್ಶನದಲ್ಲೇ ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಿ, ಸಾಧನೆಯ ಹಾದಿಯಲ್ಲಿ ಸಾಗಿ ಬಂದವರು. ಅಲ್ಲದೇ ತಂದೆಯಂತೆ ಅವರು ಕೂಡ ಸತ್ತ ನಂತರ “ನೇತ್ರದಾನ” ಮಾಡಿ ಮತ್ತಷ್ಟು ಅಭಿಮಾನಿಗಳು ನೇತ್ರದಾನ ಮಾಡಲು ಸ್ಪೂರ್ತಿ ಯಾಗಿ  ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ನೇತ್ರದಾನ ಮಾಡಿಸುವುದರೊಂದಿಗೆ ಅಂದರ ಬಾಳಿಗೆ ಬೆಳಕಾಗಿದ್ದಾರೆ. ಇದು ಇದು ಒಬ್ಬ ನಟನಿಂದ ಆಗಿರುವುದು ಹೆಮ್ಮೆಯ ಸಂಗತಿ. ಅಪ್ಪು ರವರು ಅಮರರು…..ಅಜರಾಮರರು ಎಂದಿಗೂ…. ಎಂದೆಂದಿಗೂ……ನೀವು ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ಹೇಳುವುದು ಅರ್ಥಪೂರ್ಣವಾಗಿದೆ.

ಸಮಾಜಮುಖಿ ಕೆಲಸ ಮಾಡೋಣ!.

ನಾಲ್ಕು ದಿನದ ಈ ಬದುಕಿನಲ್ಲಿ ಬರುವಾಗಲೂ ಒಂಟಿ, ಹೋಗುವಾಗಲೂ ಒಂಟಿ. ಆದರೆ ಹಲವು ಜಂಟಿಗಳೊಂದಿಗೆ ಬದುಕಿದ್ದಾಗ ಅದು ಬೇಕು, ಇದು ಬೇಕು ಎಂದು, ಸ್ವಾರ್ಥ ಚಿಂತನೆಯ ಮೂಲಕ ಸಮಯವನ್ನು ಕಳೆದು, ಕೇವಲ ಹಣ ಸಂಪಾದನೆ ಮಾಡುವುದನ್ನು ಉದ್ಯೋಗವನ್ನಾಗಿಸಿ ಕೊಂಡಿರುವ ಈ ಕಾಲದಲ್ಲಿ “ಅಪ್ಪು” ಅಂತವರು ಎಲ್ಲರಿಗೂ ಮಾದರಿಯಾಗುತ್ತಾರೆ. ಸಮಾಜದೊಂದಿಗೆ ಏನಾದರೂ ಒಂದು ಭಾವನಾತ್ಮಕ ಸಂಬಂಧ ಇಟ್ಟುಕೊಳ್ಳೋಣ. ಜೊತೆಗೆ ನೊಂದವರ ಬಾಳಿಗೆ ದಾರಿದೀಪವಾಗೋಣ. ಒಮ್ಮೆಲೆ ಸಮಾಜವನ್ನು ನಾವು ತಿದ್ದುವುದಕ್ಕೆ ಸಾಧ್ಯವಿಲ್ಲ. ಆದರೆ “ಹನಿ ಹನಿ ಗೂಡಿದರೆ ಹಳ್ಳ”- ಎನ್ನುವಂತೆ ಮೊದಲು ನಮ್ಮಿಂದ, ನಮ್ಮ ಮನೆಯಿಂದ, ನಮ್ಮ ಸುತ್ತಮುತ್ತಲಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಸಾಗೋಣ. ಆಗ ಒಬ್ಬರು ಮತ್ತೊಬ್ಬರಿಗೆ ಸ್ಪೂರ್ತಿಯಾಗುತ್ತಾರೆ!. ಒಂದಿಷ್ಟು ಕೆಲಸ ಮಾಡುತ್ತಾರೆ. ಸ್ವಲ್ಪ ಸಮಯದ ನಂತರವಾದರೂ ಕೂಡ ಸಮಾಜ ಬದಲಾಗುತ್ತದೆ!. ಈ ಮಾನವ ಜನ್ಮ ಸಿಗುವುದೇ ಅಪರೂಪ ಈ ನಡುವೆ ಒಳ್ಳೆಯ ಕೆಲಸಗಳನ್ನು ಮಾಡೋಣ. ಒಂದಿಷ್ಟು ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗೋಣ. ಮುಂದಿನ ಪೀಳಿಗೆಯವರೂ ಕೂಡ ನೆನಪಿಸಿಕೊಳ್ಳುವ ಕೆಲಸಗಳನ್ನು ಮಾಡೋಣ ಎನ್ನುವುದೇ ನನ್ನ ಆಶಯ.

ಕಾಳಿಹುಂಡಿ ಶಿವಕುಮಾರ್, ಮೈಸೂರು.

10 Responses

  1. ಅಪ್ಪುವಿನ ಬಗ್ಗೆ ಮಾಹಿತಿ ಪೂರ್ಣ ಬರೆಹ ಚೆನ್ನಾಗಿದೆ.. ಸಾರ್

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ನಿಮಗೆ ತುಂಬ ತುಂಬ ಧನ್ಯವಾದಗಳು ಮೇಡಂ .

  2. MANJURAJ H N says:

    ಅಪ್ಪುವಿನಿಂದ ಪುನೀತರಾದೆವು. ಧನ್ಯವಾದಗಳು ಸರ್

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ಅಪ್ಪು ನಿಜಕ್ಕೂ ಅಜರಾಮರ. ಧನ್ಯವಾದಗಳು ಸರ್

  3. ಪದ್ಮಾ ಆನಂದ್ says:

    ಅತ್ಯಂತ ವಸ್ತುನಿಷ್ಠ ಭಾವಪೂರ್ಣ ನುಡಿನಮನ.

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ಧನ್ಯವಾದಗಳು ಮೇಡಂ.

  4. ಶಂಕರಿ ಶರ್ಮ says:

    ಪುನೀತ್ ರಾಜಕುಮಾರ್, ಅಪ್ಪುವಾಗಿ ಎಲ್ಲರ ಹೃದಯ ತುಂಬಿ, ಬೆಳ್ಳಿತೆರೆಯ ಮೇಲೆ ವಿಜೃಂಭಿಸಿದಂತೆಯೇ ತೆರೆಯ ಮರೆಯಲ್ಲಿ ಮರೆಯಲಾರದಂತಹ ಸಮಾಜಮುಖಿ ಕಾರ್ಯವನ್ನೆಸಗಿ ಮಿಂಚಿ ಕಣ್ಮರೆಯಾದ ದಿವ್ಯಾತ್ಮನಿಗೆ ನಿಜಾರ್ಥದಲ್ಲಿ ಸಲ್ಲಿಸಿದ ನುಡಿನಮನ.

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ಧನ್ಯವಾದಗಳು ನಿಮಗೆ.. ಎರಡು ಮುಖಗಳಲ್ಲಿ ಅವರ ಸಾಧನೆ ಇದಕ್ಕೂ ಅಮರ. ಸಮಾಜಮುಖಿ ಕೆಲಸ ಮಾಡಿದಾಗ ಹೆಚ್ಚು ಕಾಲ ಉಳಿಯುತ್ತಾರೆ ಎನ್ನುವುದಕ್ಕೆ ಇವರೇ ಸಾಕ್ಷಿ.

  5. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಬರಹ.

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ಧನ್ಯವಾದಗಳು ಮೇಡಂ ನಿಮಗೆ.

Leave a Reply to MANJURAJ H N Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: