ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ದಿನ 7: ‘ ಹೊ ಚಿ ಮಿನ್ಹ್ ‘ ನಗರ, ವಿಯೆಟ್ನಾಂ ಲಾಕ್ಯರ್ ಪೈಂಟಿಂಗ್ ಫಾಕ್ಟರಿ..
ಹೊ ಚಿ ಮಿನ್ಹ್ ನಗರದ ರಿಯುನಿಫಿಕೇಶನ್ ಪ್ಯಾಲೇಸ್ ಗೆ ಭೇಟಿ ಕೊಟ್ಟು, ಸುದೀರ್ಘ, ಅಸಹನೀಯ ಯುದ್ದದ ಕ್ಷಣಗಳನ್ನು ದಾಖಲಿಸಿಡಲಾದ ಮ್ಯೂಸಿಯಂಗೂ ಸುತ್ತು ಹಾಕಿದ ನಂತರ ಪ್ರಯಾಣ ಮುಂದುವರಿಯಿತು. ನಮ್ಮ ಮಾರ್ಗದರ್ಶಿ ವಿನ್ಸಂಟ್ ಜೊತೆಗೆ ಮಾತನಾಡುವಾಗ ಗೊತ್ತಾದ ವಿಷಯವೇನೆಂದರೆ, ದಕ್ಷಿಣ ವಿಯೆಟ್ನಾಂನ ಈ ಭಾಗದಲ್ಲಿ ಯಾವುದೇ ಧರ್ಮವನ್ನು ಪಾಲಿಸದೇ ಇರುವ 70 % ಜನ ಇದ್ದಾರೆ. 20 % ಮಂದಿ ಬೌದ್ದಧರ್ಮೀಯರು . ಇನ್ನು 10 % ಜನರಲ್ಲಿ ಕಂಪ್ಯೂಶಿಯನ್ , ಚಾಂಪ್ ಜನರು, ಕ್ರಿಶ್ಚಿಯನರು, ಕಾಂಬೋಡಿಯಾ, ಲಾವೋಸ್, ಚೈನಾ, ಭಾರತ, ಇಂಡೋನೇಶ್ಯಾ ಮೊದಲಾದ ದೇಶಗಳಿಂದ ಬಂದವರು ಇದ್ದಾರೆ.
ನಾನು ಗಮನಿಸಿದಂತೆ, ವಿಯೆಟ್ನಾಂನಲ್ಲಿ ಕಾಣಸಿಕ್ಕಿದ ದೇವಾಲಯಗಳು ಬೌದ್ಧರ ಪಗೋಡಾ ಮಾದರಿಯಲ್ಲಿದ್ದುವು. ಆದರೆ ಇವುಗಳಿಗೂ ಲೇಹ್ , ಲಡಾಕ್ ಮೊದಲಾದ ಹಿಮಾಲಯದ ಪ್ರಾಂತ್ಯಗಳಲ್ಲಿ ಕಾಣಿಸುವ ಸ್ತೂಪಗಳಿಗೂ ಆಕಾರ ಹಾಗೂ ಆಚರಣೆಯಲ್ಲಿ ವ್ಯತ್ಯಾಸಗಳಿದ್ದುವು. ಸಾಮಾನ್ಯವಾಗಿ ಹಿಮಾಲಯದ ಕೆಲವು ಪ್ರಾಂತ್ಯಗಳಲ್ಲಿ ದಾರಿಯುದ್ದಕ್ಕೂ ಗಾಳಿಯಲ್ಲಿ ಪಟಪಟಿಸುವ ಬಣ್ಣಬಣ್ಣದ ಪತಾಕೆಗಳು ಕಾಣಿಸುತ್ತವೆ. ಅಲ್ಲಿಯ ಬೌದ್ಧರ ಆರಾಧನಾ ಮಂದಿರದಲ್ಲಿ ದೊಡ್ಡ ಗಾತ್ರದ ಬುದ್ಧನ ವಿಗ್ರಹಗಳು, ಆವರಣದಲ್ಲಿ ತಿರುಗುತ್ತಿರುವ ವಿವಿಧ ಗಾತ್ರದ ‘ಧಮ್ಮಚಕ್ರಗಳು ‘ , ಕೆಂಪು ಬಟ್ಟೆ ಧರಿಸಿ ಅತ್ತಿತ್ತ ಓಡಾಡುವ ಲಾಮಾ ಜನರು , ಕೈಯಲ್ಲಿ ಪುಟ್ಟ ಧಮ್ಮಚಕ್ರವನ್ನು ತಿರುಗಿಸುತ್ತಾ ಏನೋ ಮಂತ್ರ ಉಚ್ಚರಿಸುವ ಜನರು ಕಾಣಿಸುತ್ತಾರೆ. ಆದರೆ ವಿಯೆಟ್ನಾಂನಲ್ಲಿ ಈ ರೀತಿ ಇರಲಿಲ್ಲ. ಪಗೋಡಾದ ಒಳಗೆ ಸಾಧಾರಣ ಗಾತ್ರದ ಬುದ್ಧನ ವಿಗ್ರಹಗಳಿರುತ್ತಿದ್ದುವು . ಇನ್ನು ಪಗೋಡಾದ ಆವರಣದಲ್ಲಿ ಧೂಪ ಅಥವಾ ಅಗರಬತ್ತಿ ಉರಿಸಲಾಗುತ್ತಿತು. ಬಾವುಟಗಳು, ಪತಾಕೆಗಳು ಹಾಗೂ ತಿರುಗುವ ಧಮ್ಮಚಕ್ರಗಳು ಇರಲೇ ಇಲ್ಲ. ಈ ಬಗ್ಗೆ ಕೇಳಿದಾಗ, ಇಲ್ಲಿಯ ಬೌದ್ಧರು ‘ತೆರವಾಡ’ ಬೌದ್ಧರೆಂದೂ, ಇವರು ಬುದ್ಧನ ಮೂಲ ಬೋಧನೆಯನ್ನು ಪಾಲಿಸುವವರೆಂದೂ ಗೊತ್ತಾಯಿತು. ಇದರ ಮುಂದುವರಿದ ಇನ್ನೊಂದು ರೂಪವಾದ ಮಹಾಯಾನ ಮತ್ತು ವಜ್ರಯಾನ ಪಂಗಡಗಳು ಹಿಮಾಲಯ, ಟಿಬೆಟ್, ಚೀನಾ, ಶ್ರೀಲಂಕಾ ಮೊದಲಾದ ಕಡೆ ‘ ನೆಲೆಸಿರುವರೆಂದೂ, ಎಲ್ಲಾ ಪಂಗಡಗಳಿಗೆ ಹಲವಾರು ಉಪಪಂಗಡಗಳೂ ಇವೆಯೆಂದು ತಿಳಿಸಿದರು. ಈ ಪಂಗಡಗಳಲ್ಲಿ ಆಚರಣೆ ಹಾಗೂ ನಂಬಿಕೆಗಳಲ್ಲಿ ವ್ಯತ್ಯಾಸ ಇದೆಯಾದರೂ , ಎಲ್ಲರೂ ಬುದ್ಧನ ಮೂಲ ಉಪದೇಶಗಳನ್ನು ಗೌರವಿಸುತ್ತಾ ಹಾಗೂ ಪರಸ್ಪರ ಸೌಹಾರ್ದಯುತವಾಗಿ ಇರುತ್ತಾರಂತೆ. ಬೌದ್ಧರಲ್ಲಿಯೂ ಹಿಂದೂಗಳಂತೆ ಹಲವಾರು ಉಪಪಂಗಡಗಳಿವೆ ಎಂಬ ಮಾಹಿತಿ ನನ್ನ ಅರಿವಿಗೆ ಹೊಸದು.
ಮಧ್ಯಾಹ್ನದ ಊಟಕ್ಕೆ ವಿಯೆಟ್ನಾಂ ಹೋಟೆಲ್ ಗೆ ಕರೆದೊಯ್ದರು. ಸಸ್ಯಾಹಾರಿಗಳಾದ ನಮಗೆ ಒಂದು ವಿಧದ ಅಕ್ಕಿ ರೊಟ್ಟಿ ( ಪ್ಯಾನ್ ಕೇಕ್), ಅಣಬೆಯಿಂದ ತಯಾರಿಸಿದ ಗ್ರೇವಿ ಮತ್ತು ಕಂದು ಅಕ್ಕಿಯ ಅನ್ನದ ಪಲಾವ್ ನಂತಹ ತಿನಿಸನ್ನು ಮೇಜಿನಲ್ಲಿ ತಂದಿರಿಸಿದರು . ಈ ಆಹಾರ ನೋಡಲು ಚೆನ್ನಾಗಿತ್ತು. ಆದರೆ ಉಪ್ಪು-ಹುಳಿ-ಖಾರ ತಿಂದು ಅಭ್ಯಾಸವಾದ ನಮಗೆ ತೀರಾ ಸಪ್ಪೆ ಎನಿಸುವಂತಹ ರುಚಿ. ನಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಅದಾಗಲೇ ಖಾಯಂ ಸ್ಥಾನ ಪಡೆದಿದ್ದ ಮನೆ ಉಪ್ಪಿನಕಾಯಿ ನೆಂಚಿಕೊಂಡು ತಟ್ಟೆ ಖಾಲಿ ಮಾಡಿದೆವು.
ನಮ್ಮ ಮುಂದಿನ ಪ್ರಯಾಣವು ವಿಯೆಟ್ನಾಂ ಯುದ್ದದಲ್ಲಿ ಮುಖ್ಯ ಭೂಮಿಕೆಯಾಗಿದ್ದ ‘ಕು ಚಿ ಸುರಂಗಗಳ‘ ಕಡೆಗೆ ಆಗಿತ್ತು. ಹೊ ಚಿ ಮಿನ್ಹ್ ನಗರದಿಂದ ಸುಮಾರು 55 ಕಿಮೀ ದೂರದಲ್ಲಿರುವ ಇಲ್ಲಿಗೆ ಪ್ರಯಾಣಿಸಲು 1: 30 ಗಂಟೆ ಸಮಯ ಬೇಕಾಗುತ್ತದೆ. ಕು ಚಿ ಸುರಂಗಗಳಿಗೆ ಹೋಗುವ ಮೊದಲು , ನಮ್ಮನ್ನು ‘ವಿಯೆಟ್ನಾಂ ಲಾಕ್ಯರ್ ಪೈಂಟಿಂಗ್ ಫಾಕ್ಟರಿಗೆ’ ಕರೆದೊಯ್ದರು. ಇಲ್ಲಿ, ಮರದ ಹಲಗೆಗಳ ಮೇಲೆ ಬಹಳ ಸೊಗಸಾದ ಚಿತ್ರಗಳನ್ನು ಮೂಡಿಸುತ್ತಾರೆ. ಎಳೆಯ ಯುವತಿಯೊಬ್ಬಳು ಅಲ್ಲಿ ರಚಿಸಲ್ಪಡುವ ಸುಂದರ ಕಲಾಕೃತಿಗಳ ಹಿನ್ನೆಲೆಯನ್ನು ವಿವರಿಸಿದಳು. ವಿಯೆಟ್ನಾಂ ಯುದ್ದದ ನಂತರ ಹಲವಾರು ಜನರು ಅಂಗವಿಕಲರಾದರು ಹಾಗೂ ನಿರಾಶ್ರಿತರಾದರು. ಅವರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಸರಕಾರವು ಈ ಕರಕುಶಲ ವಸ್ತುಗಳನ್ನು ತಯಾರಿಸುವ ಸಂಸ್ಥೆಯನ್ನು ಹುಟ್ಟುಹಾಕಿತು. ನಮ್ಮನ್ನು ತನ್ನೊಡನೆ ಬರಹೇಳಿ, ಅಲ್ಲಿದ್ದ ಹಲವಾರು ಮಂದಿ ಮಾಡುತ್ತಿದ್ದ ಕೆಲಸಗಳ ಬಗ್ಗೆ ವಿವರಿಸಿದಳು. . ಅವರುಗಳು ಮರದ ಹಲಗೆಗಳನ್ನು ಬೇಕಿದ್ದ ಆಕಾರಕ್ಕೆ ಕತ್ತರಿಸುವುದು, ನೆನೆಸುವುದು, ಮರಳು ಕಾಗದದಿಂದ ಉಜ್ಜಿ ಸಪಾಟಾಗಿಸುವುದು, ಸೂಕ್ತ ಬಣ್ಣ ಬಳಿಯುವುದು, ಅದರ ಮೇಲೆ ಮೊಟ್ಟೆಯ ಹೊರಕವಚ ಅಥವಾ ಸಮುದ್ರಜೀವಿಗಳ ಚಿಪ್ಪಿನ ತುಣುಕುಗಳಿಂದ ಸುಂದರವಾದ ಚಿತ್ರಗಳನ್ನು ಪಡಿಮೂಡಿಸುವುದು…….ಹೀಗೆ ಒಂದು ಪುಟ್ಟ ಕಲಾಕೃತಿ ಸಿದ್ದವಾಗಲು ಬೇಕಾಗುವ ಪೂರ್ವಭಾವಿ ಹಂತಗಳನ್ನು ತೋರಿಸಿದಳು. ಆ ಕುಶಲಕರ್ಮಿಗಳು ಅಂಗವಿಕಲರು ಅಥವಾ ಯುದ್ದದಿಂದಾಗಿ ನಿರಾಶ್ರಿತರಾದವರೆಂದೂ, ಅವರು ತಯಾರಿಸಿದ ಕಲಾಕೃತಿಗಳನ್ನು ನಾವು ಕೊಂಡರೆ ಆ ಹಣವು ಸದುಪಯೋಗವಾಗುವುದೆಂದೂ ಒತ್ತಿ ಹೇಳಿದಳು.
ಆಮೇಲೆ ಒಳಗಡೆ ಇದ್ದ ದೊಡ್ಡ ಹಾಲ್ ಗೆ ಕರೆದೊಯ್ದರು. ಮರದಿಂದ ತಯಾರಿಸಿದ ಪುಟ್ಟ ಕೀ ಪಂಚ್ ನಿಂದ ಹಿಡಿದು ಬ್ಯಾಗ್ ಗಳು, ಆಭರಣ ಪೆಟ್ಟಿಗೆಗಳು, ಬುಟ್ಟಿಗಳು, ಟೋಪಿಗಳು, ಗೋಡೆಗೆ ನೇತುಹಾಕುವ ವಿವಿಧ ವಿನ್ಯಾಸದ ಕಲಾಕೃತಿಗಳು……..ಬಹಳಷ್ಟು ಇದ್ದುವು, ಅದ್ಭುತವಾಗಿದ್ದುವು. ಬೆಲೆಯೂ ದುಬಾರಿ ಇತ್ತು. ಆದರೆ ಆಕೆ ಮುಂಚಿತವಾಗಿ, ನಾವು ಮಾಡುವ ವ್ಯಾಪಾರದ ಸ್ವಲ್ಪಾಂಶವು ಯುದ್ದದಲ್ಲಿ ಅಂಗವಿಕಲರಾದವರ ದತ್ತಿನಿಧಿಗೆ ಹೋಗುತ್ತದೆ ಎಂದು ತಿಳಿಸಿದ ಕಾರಣ ಏನಾದರೂ ಕೊಂಡುಕೊಳ್ಳೋಣ ಅನಿಸಿತ್ತು. ನನಗೆ ಅಷ್ಟೇನೂ ಉಪಯೋಗವಿಲ್ಲದಿದ್ದರೂ, ರೋಸ್ ವುಡ್ ನಿಂದ ತಯಾರಿಸಿದ, ಆಭರಣಗಳನ್ನಿಡಬಹುದಾದ ಕಲಾತ್ಮಕವಾದ ಪುಟ್ಟ ಪೆಟ್ಟಿಗೆಯನ್ನು ಖರೀದಿಸಿದೆ.
ಇವರು ವಿಕಲಾಂಗರಲ್ಲ, ಪ್ರವಾಸಿಗರ ಗಮನ ಸೆಳೆಯಲು ಪ್ರಾತ್ಯಕ್ಷಿಕೆ ಕೊಡುತ್ತಾರೆ, ಇವೆಲ್ಲಾ ಪ್ರವಾಸಿಗರನ್ನು ಮರುಳುಮಾಡುವ ವಿವಿಧ ತಂತ್ರಗಳೆಂದು ಕೆಲವರು ಗೊಣಗಿದ್ದೂ ಕೇಳಿಸಿತು. ಪಕ್ಕದಲ್ಲಿ ಒಂದು ಕೆಫೆ ಇತ್ತು. ದುಬಾರಿ ಬೆಲೆ ತೆತ್ತು ನಾನು ಅಲ್ಲಿ ಕಾಫಿ ಕುಡಿದೆ. ನಾನು ಗಮನಿಸಿದಂತೆ, ನಮ್ಮ ಸ್ಥಳೀಯ ಮಾರ್ಗದರ್ಶಿಗಳು ತಾವೂ ಕಾಫಿ-ಚಹಾ ಕುಡಿಯುವುದಿಲ್ಲ, ನಮಗೆ ಬೇಕೆ ಎಂದು ವಿಚಾರಿಸುವುದೂ ಇಲ್ಲ. ನಮಗೆ ಕಾಫಿ-ಚಹಾ ಕುಡಿಯಬೇಕೆನಿಸಿದರೆ ನಾವು ಅಲ್ಲಿ ಕಾಣಿಸುವ, ದುಬಾರಿ ಬೆಲೆಯ ಶಾಪ್ ಗಳಲ್ಲಿ ಖರೀದಿಸಬೇಕು. ಈ ವಿಷಯದಲ್ಲಿ ನಮ್ಮ ದೇಶದಲ್ಲಿ ಏನೂ ಕೊರತೆಯಿಲ್ಲ. ಯಾವುದೇ ಸಾಧಾರಣ ಪ್ರವಾಸಿ ತಾಣಕ್ಕೆ ಹೋದಾಗಲೂ ನಮಗೆ ಕಡಿಮೆ ಬೆಲೆಗೆ ಕಾಫಿ-ಚಹಾ ಅಲ್ಲಲ್ಲಿ ಲಭ್ಯವಿರುತ್ತದೆ.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : http://surahonne.com/?p=42238
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡುಹೋಯಿತು ಪೂರಕ ಚಿತ್ರ ಗಳು ಮನಸೆಳೆದವು ಹಾಗೇ ಬರೆಹದಲ್ಲಿ..ಸೂಕ್ಷ್ಮ ಅವಲೋಕನವೂ ಕಂಡುಬಂತು..ವಂದನೆಗಳು ಗೆಳತಿ ಹೇಮಾ
ಧನ್ಯವಾದಗಳು
ಪ್ರವಾಸೀ ಕಥನದ ಈ ಕಂತೂ ಸಹ ವಿಚಾರ ವೈವಿಧ್ಯತೆಯಿಂದ ಕೂಡಿತ್ತು.
ಧನ್ಯವಾದಗಳು
ಹೊ ಚಿ ಮಿನ್ಹ್ ನಗರ, ವಿಯೆಟ್ನಾಂ ಲಾಕ್ಯರ್ ಪೈಂಟಿಂಗ್ ಫಾಕ್ಟರಿ, ಅಲ್ಲಿಯ ಜನಜೀವನ, ದುಬಾರಿ ಕಾಫಿ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ… ಇತ್ಯಾದಿಗಳ ಸವಿವರ ಪ್ರವಾಸ ಕಥನ ಸೂಪರ್!!
ಧನ್ಯವಾದಗಳು
ಬಹಳ ಸೊಗಸಾಗಿದೆ