ಮುಚ್ಚಿಟ್ಟ ಬದುಕು.
“ಸಾರ್..ಸಾರ್.. ನಿಮ್ಮನ್ನು ಭೇಟಿಮಾಡಲು ಯಾರೋ ಬಂದಿದ್ದಾರೆ. ಒಳಗೆ ಕಳಿಸಲೇ?” ಎಂದು ಇಂಟರ್‌ಕಾಂನಿಂದ ಕೇಳಿಬಂತು ರಿಸೆಪ್ಷನಿಸ್ಟಳ ಧ್ವನಿ. ಆಗ ತಾನೇ ಬಿಸಿನೆಸ್ ಮೀಟಿಂಗ್ ಮುಗಿಸಿ ಆಫೀಸಿಗೆ ಹಿಂದಿರುಗಿದ್ದ ವಿಶ್ವಾಸ್‌ಗೆ ತಕ್ಷಣ ಯಾರನ್ನೂ ಭೇಟಿಮಾಡುವ ಆಸಕ್ತಿಯಿರಲಿಲ್ಲ. ಆದರೂ ಬಂದವರಾರೆಂಬ ಕುತೂಹಲದಿಂದ “ಅವರ ಹೆಸರೇನು?” ಎಂದು ಕೇಳಿದ.
“ಅವರು ಕಂಟ್ರಾಕ್ಟರ್ ಮಾಧವ ಎನ್ನುವವರು” ಎಂದು ಉತ್ತರ ಬಂತು.
“ಓ ಅವರಾ ! ಕಳಿಸಿ” ಎಂದ ವಿಶ್ವಾಸ್ ಚೇಂಬರ್‌ನಲ್ಲಿದ್ದ ವಾಷ್ಬೇಸಿನ್ನಿನಲ್ಲಿ ಮುಖಕ್ಕೆ ನೀರೆರೆಚಿಕೊಂಡು ಅಲ್ಲಿದ್ದ ಹ್ಯಾಂಡ್ ತವೆಲ್ಲಿನಿಂದ ಒರೆಸಿಕೊಂಡು ಖುರ್ಚಿಯಲ್ಲಿ ಕುಳಿತುಕೊಂಡ. ಬಾಗಿಲು ಟ್ಯಾಪ್ ಮಾಡಿದ್ದು ಕೇಳಿಸಿತು. “ಬನ್ನಿ..ಒಳಗೆ ಬನ್ನಿ” ಎಂದ.
“ಅದೇನೋ ಹೊಸದಾಗಿ ನನಗೆ ಬನ್ನಿ ಅಂತ ಎಂದೂ ಇಲ್ಲದ ಮರ್ಯಾದೆ? ಎನ್ನುತ್ತಾ ವಿಶ್ವಾಸನ ಗೆಳೆಯ ಮಾಧವ ಎದುರುಗಿದ್ದ ಖುರ್ಚಿಯಲ್ಲಿ ಕುಳಿತ.
“ಅಭ್ಯಾಸಬಲ. ಹೂಂ.ಹೇಳು ನಮ್ಮ ಆಫೀಸಿನವರೆಗೂ ಪಾದ ಬೆಳೆಸಿದ್ದೀಯಲ್ಲ ಯಾಕೆ? ಏನೂ ಕೆಲಸವಿರಲಿಲ್ಲವೇ?”
“ಕೆಲಸಕ್ಕೇನು ಒಂದು ಖಂಡುಗ ಇದೆ. ಆದರೆ ನನ್ನ ಗೆಳೆಯನೊಬ್ಬ ತನ್ನ ಹಳೆಯ ಮನೆಯನ್ನು ಖಾಲಿಮಾಡಿ ನನ್ನ ಸುಪರ್ದಿಗೆ ಕೊಡುತ್ತೇನೆ ಅಂದಿದ್ದ. ಭೂಪ ಮೂರುತಿಂಗಳ ಟೈಂ ಕಳೆದರೂ ಹಾಕಿದ್ದ ಬೀಗ ತೆರೆದೇ ಇಲ್ಲದ್ದು ಕಂಡು ಅನೇಕ ಸಲ ಫೋನ್ ಮಾಡಿದರೂ ಸಿಕ್ಕಲಿಲ್ಲ. ಆಟವಾಡಿಸುತ್ತಿದ್ದಾನೆ ಅನ್ನಿಸಿತು. ಬೇರೆ ದಾರಿಯಿಲ್ಲದೆ ಮುದ್ದಾಂ ನಾನೇ ಆಫೀಸಿನವರೆಗೂ ಬರಬೇಕಾಯಿತು. ದಯವಿಟ್ಟು ಈಗಲಾದರೂ ನನ್ನ ಮೇಲೆ ಕರುಣೆತೋರಿ ಬೇಕಾದ್ದು ಬೇಡಾದ್ದು ಹೊರಕ್ಕೆ ಸಾಗಿಸಿ ಗುಡ್ಡೆ ಹಾಕಿಕೊಂಡು ವಿಲೇವಾರಿ ಮಾಡಿ ಮನೆ ಬಿಟ್ಟುಕೊಟ್ಟರೆ ಈ ಕಂಟ್ರಾಕ್ಟರ್ ಮಾಧವ ಕೃತಾರ್ಥನಾಗುತ್ತಾನೆ” ಎಂದು ನಾಟಕೀಯವಾಗಿ ಹೇಳಿ ಕ್ಥಜೋಡಿಸಿದ. ಬಾಲ್ಯದ ಗೆಳೆಯನ ಈ ಅಭಿನಯವನ್ನು ನೋಡಿ ಜೋರಾಗಿ ನಕ್ಕ ವಿಶ್ವಾಸ್. “ಲೋ,ಮಾಧು ಖಂಡಿತ ಬಿಟ್ಟುಕೊಡುತ್ತೇನೋ, ನಿನಗೆ ಗೊತ್ತಿಲ್ಲವಾ ನನ್ನ ಕೆಲಸದ ಹೊರೆ.”
“ಅದೆಲ್ಲಾ ಗೊತ್ತು, ನೋಡೀಗ ನಿನ್ನ ಹಳೇಮನೆ ಡಿಮಾಲಿಷನ್ ಮಾಡಲು ಒಳ್ಳೆ ಸಂದರ್ಭ ಬಂದಿದೆ. ಏಕೆಂದರೆ ನಿನ್ನ ಬಲಗಡೆ ಮನೆಯವರು ಸದ್ಯಕ್ಕೆ ದೇಶದಿಂದ ಹೊರಗೆ ಹೋಗಿದ್ದಾರೆ. ಆ ಕಡೆ ಪಕ್ಕ ಡೆಡ್ ಎಂಡ್. ಎದುಗಡೆ ಬಯಲು. ಸಮಸ್ಯೆ ಬರಲ್ಲ. ನಿನಗಾಗದಿದ್ದರೆ ನಮ್ಮ ಹುಡುಗರನ್ನೇ ಬಿಡಲಾ?”
ಅವನ ಮಾತನ್ನು ಮಧ್ಯದಲ್ಲೇ ತಡೆಯುತ್ತಾ “ಬೇಡ ಬೇಡ, ಮಾಧು ಸಾಮಾನುಗಳೆಲ್ಲ ಶಿಫ್ಟ್ ಆಗಿವೆ. ಆ ಮನೆ ನನ್ನ ಹಿರಿಯರಿದ್ದದ್ದು ಬಹಳ ಕಾಲ ಬಾಳಿ ಬದುಕಿದ್ದದ್ದು. ನನಗೆ ಬೇಕಾದದ್ದು ಏನಾದ್ರೂ ಬಿಟ್ಟಿದ್ದೀನೇನೋ? ಎಂದು ಹುಡುಕಿನೋಡಿ ನಂತರ ಬಿಟ್ಟು ಕೊಡುತ್ತೇನೆ. ಇನ್ನೊಂದು ವಾರ ಟೈಂ ಕೊಡು.” ಎಂದು ವಿಶ್ವಾಸ್.
“ಆಯ್ತು ಮೂರುತಿಂಗಳಿಂದ ಕಾಯ್ದಿದ್ದೇನೆ. ಇನ್ನೊಂದು ವಾರ ಕಾಯಲಾಗದೇ? ಕಾಯುತ್ತೇನೆ. ಹಾಗೇ ಒಂದು ಮಾತು, ನಿನ್ನ ಹೀರೀಕರ ಮನೆಯ ಮೂಲೆ ಮೂಲೆಯನ್ನು ಫೋಟೋ ತೆಗೆದು ಸೇವ್ ಮಾಡಿ ನಿನಗೆ ಅಪ್‌ಲೋಡ್ ಮಾಡುತ್ತೇನೆ. ಈಗ ಹೇಳಿದ ಮಾತಿಗೇನಾದರೂ ನೀನು ತಪ್ಪಿದರೆ ನಾನೇ ಬೀಗ ಒಡೆಸಿ ಒಳಕ್ಕೆ ನುಗ್ಗಿ… ”
“ಬೇಡ..ಬೇಡ ಅಂಥಹ ಪರಿಸ್ಥಿತಿಗೆ ತರುವುದಿಲ್ಲ. ಈಗ ಆ ವಿಷಯ ಬಿಡು. ಕಾಫಿ ತರಿಸಲಾ?” ಎಂದ ವಿಶ್ವಾಸ್.
“ಈಗಾಗಲೇ ಊಟದ ಹೊತ್ತಾಗಿದೆ. ನಡಿ ನಾವು ಒಟ್ಟಿಗೆ ಊಟಮಾಡಿ ಬಹಳ ಕಾಲವಾಯಿತು.” ಎಂದೆನ್ನುತ್ತಾ ಗೆಳೆಯನ ಕೈ ಹಿಡಿದು ಆಫೀಸಿನಿಂದ ಹೊರಕ್ಕೆ ಕರೆತಂದ ಮಾಧವ.
ವಿಶ್ವಾಸನಿಗೂ ಹೊಟ್ಟೆ ಹಸಿದು ತಾಳ ಹಾಕುತ್ತಿತ್ತು. ಹೋಟೆಲೊಂದರಲ್ಲಿ ಇಬ್ಬರೂ ಊಟಮಾಡಿ ಗೆಳೆಯನನ್ನು ಬೀಳ್ಕೊಟ್ಟು ಮತ್ತೆ ಆಫೀಸಿಗೆ ಬಂದ ವಿಶ್ವಾಸ್. ಶ್ರೀಮಂತ ಕುಟುಂಬದಲ್ಲಿ ಒಬ್ಬನೇ ಮಗನಾಗಿ ಹುಟ್ಟಿದ್ದ ವಿಶ್ವಾಸ್ ತನ್ನ ತಂದೆಯು ಕುಟುಂಬವನ್ನು ಆ ಮಟ್ಟಕ್ಕೆ ತರಲು ಎಷ್ಟು ಕಷ್ಟಪಟ್ಟಿದ್ದರೆಂಬ ಸಂಗತಿಯನ್ನು ತನ್ನ ಅಜ್ಜಿಯ ಬಾಯಿಂದ ಒಂದು ಸಾವಿರ ಸಲವಾದರೂ ಕೇಳಿರಬೇಕು. “ಕೂಸೇ, ನೀನು ಹುಟ್ಟಿ ಸ್ವಲ್ಪ ದೊಡ್ಡವನಾದಮೇಲೆ ನಿನ್ನಮ್ಮ ತನ್ನದೇ ವ್ಯಾಪಾರಿ ಮಳಿಗೆಯನ್ನು ಪ್ರಾರಂಭಿಸಿದಳು. ನಂತರವೇ ನಾವು ಈ ಹಂತವನ್ನು ಮುಟ್ಟಿದೆವು. ಅಮ್ಮನನ್ನೇ ಹೋಲುವ ನೀನು ಅದೃಷ್ಟವಂತ” ಎಂದು ಯಾವಾಗಲೂ ಹೇಳುತ್ತಿದ್ದರು.
ಅಪ್ಪ ದಿನಸಿ ಸಗಟು ವ್ಯಾಪಾರದ ಅಂಗಡಿ, ಅಮ್ಮ ಇಂಟೀರಿಯರ್ ಡೆಕೋರೇಷನ್ ವಿಭಾಗ ನಡೆಸಿದ್ದರು. ವಿಶ್ವಾಸನ ಮಕ್ಕಳು ಶಶಾಂಕ, ಶರತ್ ಆ ಮಳಿಗೆಯಲ್ಲೇ ಮ್ಯಾರೇಜ್ ಬ್ಯೂರೋ, ಈವೆಂಟ್ ಮ್ಯಾನೇಜ್‌ಮೆಂಟ್ ಸೆಂಟರ್ ನಡೆಸುತ್ತಿದ್ದಾರೆ. ಅಪ್ಪ ಅಮ್ಮನೊಡನಿದ್ದಾಗ ವಿಶ್ವಾಸನಿಗೆ ಮಕ್ಕಳದ್ದು ಅಷ್ಟೊಂದು ಜವಾಬ್ದಾರಿಯಿರಲಿಲ್ಲ. ಆದರೆ ಅಮ್ಮನ ದಿಢೀರ್ ಸಾವಿನಿಂದ ಅಪ್ಪ ಇವುಗಳೆಲ್ಲದರಿಂದ ವಿಮುಖರಾಗಿ ನಮಗೇ ಎಲ್ಲವನ್ನೂ ವಹಿಸಿಬಿಟ್ಟಿದ್ದಾರೆ. ಪ್ರತಿದಿನ ಬರದಿದ್ದರೂ ಪರವಾಗಿಲ್ಲ ಆಗೊಮ್ಮೆ ಈಗೊಮ್ಮೆ ಬನ್ನಿ ಎಂದರೂ ಅವರ ಉತ್ತರ ಮೌನವಾಗಿದೆ. ಹೀಗಾಗಿ ಮಕ್ಕಳಿಗಿನ್ನೂ ಅನುಭವ ಸಾಲದೆಂದು ವಿಶ್ವಾಸನೇ ಎಲ್ಲಾ ಉಸ್ತುವಾರಿಯನ್ನೂ ನೋಡಿಕೊಳ್ಳುತ್ತಾ ಸ್ವಲ್ಪ ಸ್ವಲ್ಪವಾಗಿ ಮಕ್ಕಳಿಗೆ ವಹಿಸಬೇಕಾಗಿದೆ. ಹೀಗೇ ಯೋಚಿಸುತ್ತಿರುವಾಗಲೇ ಬಾಗಿಲು ಬಡಿದ ಶಬ್ಧ ಎಚ್ಚರಿಸಿತು.
ವಿಶ್ವಾಸ್ “ಯಾರು?” ಎಂದು ಕೇಳಿದ.
“ನಾನು ಸಾರ್” ಎನ್ನುತ್ತಾ ಮ್ಯಾನೇಜರ್ ಚಂದ್ರಪ್ಪ ಒಳಬರಲು ಕಾಯುತ್ತಿದ್ದರು.
“ಬನ್ನಿ..ಬನ್ನಿ ನಾನೇ ನಿಮ್ಮನ್ನು ಕರೆಯೊಣವೆಂದಿದ್ದೆ, ನೀವೇ ಬಂದದ್ದು ಒಳ್ಳೆಯದೇ ಆಯ್ತು” ಎಂದ ವಿಶ್ವಾಸ್.
“ತಾವು ತಂದಿದ್ದ ಕಛೇರಿಯ ಕೆಲವು ಕಡತಗಳಿಗೆ ವಿಶ್ವಾಸನ ಸಹಿ ಪಡೆದು ಚಂದ್ರಪ್ಪ “ಅದೇನು ಸಾರ್ ನೀವು ನನಗೆ ಹೇಳಿ ಕಳುಹಿಸಬೇಕಾದ ವಿಷಯ?” ಎಂದು ಕೇಳಿದರು. “ಹಾ ! ಅಂಥಾದ್ದೇನು ಗಾಭರಿಯಾಗುವಂತಹುದಲ್ಲ. ಒಂದೆರಡು ದಿನಗಳು ಆಫೀಸಿನ ಕೆಲಸಕಾರ್ಯಗಳನ್ನು ನೀವೇ ನೋಡಿಕೊಳ್ಳಿ. ಹುಡುಗರು ಬರುತ್ತಾರೆ. ಅವರಿಗೆ ಅವರದ್ದೇ ಕೆಲಸಗಳಿರುತ್ತವೆ. ಈ ಕಡೆಗೆ ಅಷ್ಟು ನಿಗಾ ಇರುವುದಿಲ್ಲ. ಅದಕ್ಕೇ”
ಅಯ್ಯೋ ಅದರಲ್ಲೇನಿದೆ, ನೀವೇನೂ ಚಿಂತೆ ಮಾಡಬೇಡಿ ಈ ವಾರದಲ್ಲಿ ಸಪ್ಲೈ ಮಾಡುವ ಕೆಲಸಗಳಷ್ಟೇ, ಹೊರಗಿನಿಂದ ತರಿಸುವುದೇನೂ ಇಲ್ಲ. ಅಂದ ಹಾಗೇ ನೀವು ರಜೆ ತೆಗೆದುಕೊಳ್ಳುವುದೇ ಅಪರೂಪ. ಅದರಲ್ಲೂ ದೊಡ್ಡ ಅಮ್ಮನವರು ಹೋದಮೇಲಂತೂ ಇಲ್ಲವೇ ಇಲ್ಲ. ಈಗ ಅಂತಹ ವಿಷಯವೇನೆಂದು ಕೇಳಬಹುದೇ? ತಪ್ಪು ತಿಳಿಯಬೇಡಿ”
“ಛೇ..ಛೇ.. ಆ ರೀತಿ ಕೇಳಬೇಡಿ. ನೀವು ಹಿರಿಯರು. ಮಿಗಿಲಾಗಿ ನಮ್ಮ ತಂದೆಯವರ ಆಪ್ತ ಸ್ನೇಹಿತರ ಮಗ. ನಿಮ್ಮಲ್ಲಿ ಹೇಳಲು ನನಗೇಕೆ ಸಂಕೋಚ. ನಮ್ಮ ಹಿರಿಯರಿದ್ದ ಹಳೆಯಮನೆ, ಅದೇ ನಮ್ಮ ಅಮ್ಮನವರು ಅಲ್ಲೇ ಕಾಲವಾಗಿದ್ದು, ಅದನ್ನು ಸಂಪೂರ್ಣ ಡಿಮಾಲಿಷ್ ಮಾಡಿಸಿ ಅದೇ ಜಾಗದಲ್ಲಿ ಹೊಸದಾಗಿ ಮಳಿಗೆಗಳನ್ನು ಕಟ್ಟಿಸುವ ವಿಷಯ ನಿಮಗೆ ಗೊತ್ತಿದ್ದದ್ದೇ. ಆ ಕೆಲಸವನ್ನು ನನ್ನ ಗೆಳೆಯ ಕಂಟ್ರಾಕ್ಟರ್ ಮಾಧವನಿಗೆ ಕೊಡಲಾಗಿದೆ. ಅವನಿಗೆ ಆ ಮನೆ ಖಾಲಿಮಾಡಿ ಬಿಟ್ಟುಕೊಡಬೇಕಾಗಿದೆ. ಅವನು ಕೊಟ್ಟಿದ್ದ ಮೂರುತಿಂಗಳ ಗಡುವೂ ಮುಗಿದು ತಡವಾಗಿದೆ. ಇವತ್ತು ಆಫೀಸಿಗೇ ಬಂದು ವರಾತಮಾಡಿದ. ಬೇಸರ ಮಾಡಿಕೊಂಡು ಹೋದ. ಅದಕ್ಕೇ ನಾನು”
‘ಹೌದಾ ಸರ್, ಸರಿ ಏನಾದರೂ ಸಹಾಯಕ್ಕೆ ಹುಡುಗರು ಬೇಕಿದ್ದರೆ ಫೋನ್ ಮಾಡಿ, ನಾನು ಕಳುಹಿಸಿಕೊಡುತ್ತೇನೆ. ಇಲ್ಲ್ಲಿಯ ಕೆಲಸಗಳ ಬಗ್ಗೆ ಏನೂ ಯೋಚಿಸಬೇಡಿ ಸರ್. ನಾನು ನೋಡಿಕೊಳ್ಳುತ್ತೇನೆ.” ಎಂದು ಹೇಳಿ ಚಂದ್ರಪ್ಪ ಹೊರನಡೆದರು.
ಮ್ಯಾನೇಜರ್ ಅತ್ತ ಹೋಗುತ್ತಿದ್ದಂತೆ ನಿರಾಳವಾದ ಮನಸ್ಸಿನಿಂದ ವಿಶ್ವಾಸ್ ಕೂಡ ಮನೆಗೆ ಹೊರಟನು.
ಮಧ್ಯಾಹ್ನ ನಿದ್ರಿಸುವ ಅಭ್ಯಾಸ ಇಲ್ಲವಾದ್ದರಿಂದ ಅವನ ಪತ್ನಿ ಲೀಲಾ ಮನೆಯ ಹೊರಗಿನ ಪೋರ್ಟಿಕೋದಲ್ಲಿದ್ದ ಖುರ್ಚಿಯಲ್ಲಿ ಕುಳಿತು ವಿರಾಮವಾಗಿ ಶಿವರಾಮಕಾರಂತರ ಕಾದಂಬರಿ ‘ಮರಳಿಮಣ್ಣಿಗೆ’ ಓದುತ್ತಿದ್ದಳು. ಯಾವುದೋ ಕಾರಿನ ಹಾರನ್ ಕೇಳಿದಾಗ ಆಕೆಗೆ ಅದು ವಿಶ್ವಾಸನ ಕಾರೇ ಎಂಬುದು ಗುರುತಾಯಿತು. ತನ್ನ ವಾಚ್ ನೋಡಿಕೊಂಡಳು. ಇನ್ನೂ ನಾಲ್ಕು ಗಂಟೆ. ಈ ಹೊತ್ತಿನಲ್ಲಿ ತನ್ನ ಗಂಡ ಮನೆಗೆ? ಮದುವೆಯಾಗಿ ಇಪ್ಪತ್ತೈದು ವರ್ಷಗಳಲ್ಲಿ ಈ ರೀತಿ ಬೇಗನೇ ಬಂದದ್ದೇ ಇಲ್ಲ. ಮದುವೆ ಸಮಾರಂಭ ಮುಂತಾದ ಮೊದಲೇ ನಿಗದಿಯಾಗಿದ್ದ ದಿನಗಳು, ಅಥವಾ ದೇಹಾಲಸ್ಯವಾದಾಗ ಮಾತ್ರ ಬೇಗನೇ ಬರುತ್ತಿದ್ದುದುಂಟು. ಹಾಗಾದರೆ ಅವರ ಆರೋಗ್ಯದಲ್ಲೇನಾದರೂ ವ್ಯತ್ಯಾಸವಾಗಿರಬಹುದೇ? ಎಂಬೆಲ್ಲ ಆಲೋಚನೆ ಬಂದು ಓದುತ್ತಿದ್ದ ಪುಸ್ತಕವನ್ನು ಖುರ್ಚಿಯ ಮುಂದಿದ್ದ ಟೀಪಾಯಿಯ ಮೇಲೆ ಮುಚ್ಚಿಟ್ಟು ಗೇಟನ್ನು ಆತುರಾತುರವಾಗಿ ಸಮೀಪಿಸಿದಳು. ಅಷ್ಟರಲ್ಲಿ ವಿಶ್ವಾಸನೇ ಗೇಟು ತೆರೆದುಕೊಂಡು ಒಳಬಂದ. ಅಚ್ಚರಿಯಿಂದ ಗಂಡನನ್ನು ನೋಡುತ್ತಾ ಅವನ ಹಣೆ, ಕತ್ತು ಮುಟ್ಟಿನೋಡಿ ಕೈಹಿಡಿದು ತಾನು ಕುಳಿತಿದ್ದ ಖುರ್ಚಿಯ ಮೇಲೆ ಕೂಡ್ರಿಸಿದಳು. ತನ್ನ ಹೆಂಡತಿಯ ಹೊಸರೀತಿಯಿಂದ ನೋಡಿ ಆಶ್ಚರ್ಯದಿಂದ ‘ಲೀಲಾ ಏಕೆ ಹೀಗೆ ಮಾಡುತ್ತಿದ್ದೀಯಾ?” ಎಂದು ಪ್ರಶ್ನಿಸಿದ.
“ಅಲ್ಲಾರೀ, ಫೋನ್ ಮಾಡಿದರೂ ಕೈಗೆ ಸಿಕ್ಕದೇ, ಬರಬೇಕಾದ ಸಂದರ್ಭಗಳಲ್ಲೂ ಕಾಯಿಸಿ ಲೇಟಾಗಿ ಬರುತ್ತಿದ್ದ ನೀವು ಹೀಗೆ ಏಕಾಏಕಿ ಬೇಗನೇ ಬಂದಿದ್ದಕ್ಕೆ ನೋಡಿ ಹುಷಾರಿಲ್ಲವೇನೋ ಎಂದುಕೊಂಡೆ” ಎಂದಳು. ಹೆಂಡತಿಯ ಮಾತಿಗೆ ನಗುತ್ತಾ “ಹಾಗೇನಿಲ್ಲ ಲೀಲಾ” ಎಂದು ಮಧ್ಯಾಹ್ನ ಆಫೀಸಿಗೇ ಬಂದಿದ್ದ ಗೆಳೆಯ ಕಂಟ್ರಾಕ್ಟರನ ಬಗ್ಗೆ ತಿಳಿಸಿದ. “ಇನ್ನು ತಡಮಾಡಿದರೆ ಅವನು ಹೇಳಿದಂತೆ ಮಾಡಿಬಿಡುತ್ತಾನೆ. ಇವತ್ತು ಆ ಕೆಲಸವನ್ನು ಮುಗಿಸಿಬಿಡೊಣವೆಂದು ಬಂದೆ” ಎಂದನು ವಿಶ್ವಾಸ್.
“ಹಾಗೇನು, ನಿಮಗೆ ಹಾಗೇ ಆಗನೇಕು. ಹಳೆಮನೆಯಿಂದ ಎಲ್ಲ ಬೆಲೆಬಾಳುವ ವಸ್ತುಗಳನ್ನು ಸಾಗಿಸಲಾಗಿದೆ. ಉಳಿದದ್ದು ಹರುಕು ಮುರುಕಷ್ಟೇ. ನಾನೇ ವಿಲೇವಾರಿ ಬಿಡುತ್ತೇನೆಂದರೂ ಬಿಡುತ್ತಿಲ್ಲ. ನೀವೂ ಮಾಡಿ ಮುಗಿಸಲಿಲ್ಲ. ಪಾಪ ಅವರಿಗೆ ಬಿಟ್ಟುಕೊಡದಿದ್ದರೆ ಕೆಲಸ ಪ್ರಾರಂಭಿಸುವುದು ಹೇಗೆ? ಸತಾಯಿಸುತ್ತಿದ್ದೀರಿ. ಈಗೇನು ಹಳೆಮನೆಯ ಕಡೆ ಹೋಗುತ್ತಿದ್ದೀರಾ? ನಾನೂ ಬರಲೇ ಸಹಾಯಕ್ಕೆ?” ಎಂದದ್ದಕ್ಕೆ “ ಏನೂ ಬೇಡ, ಮನೆಯ ಕೀ ಕೊಡು” ಎಂದ. ಲೀಲಾ ಮನೆಯ ಬೀಗದ ಕೈ ತಂದುಕೊಟ್ಟಳು.
ಮುಂದಿನ ಬೀದಿಯಲ್ಲಿದ್ದ ಹಳೆಮನೆಗೆ ನಡೆದುಕೊಂಡೇ ಹೋಗಬಹುದಾಗಿದ್ದರೂ ವಿಶ್ವಾಸ್ ಕಾರಿನಲ್ಲಿ ಹೊರಟ. ಗಂಡನನ್ನು ನೋಡುತ್ತಾ ಅದೇನೇನು ಹೊತ್ತುಕೊಂಡು ಬರುತ್ತಾರೊ ನೋಡೋಣ ಎಂದುಕೊಂಡು ಮಾವನವರಿಗೆ ಹೇಳಿದರೆ ಅವರು “ಹೋಗಲಿ ಬಿಡಮ್ಮಾ, ಅವನು ಯಾವಾಗ ಬೀಳಿಸು ಅನ್ನತ್ತಾನೋ ಆವಾಗಲೇ ಬೀಳಿಸಲಿ. ಅವನಿಗೆ ಏನೋ ಹಳೆಯ ನೆನಪುಗಳು ಅವನನ್ನು ಕಾಡುತ್ತಿರಬಹುದು” ಎಂದು ಮಾತಿನಲ್ಲೇ ತೇಲಿಸಿಬಿಟ್ಟರು. “ಹೇಗೋ ಅಂತೂ ಖಾಲಿಮಾಡಿ ಹ್ಯಾಂಡೋವರ್ ಮಾಡಿಸಪ್ಪಾ ಭಗವಂತಾ” ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದಳು.
ಇತ್ತ ಕಾರನ್ನು ಹಳೆಯ ಮನೆಮುಂದೆ ನಿಲ್ಲಿಸಿದ ವಿಶ್ವಾಸ್ ಸುತ್ತಮುತ್ತ ಕಣ್ಣಾಡಿಸಿದ. ಸದ್ಯಕ್ಕೆ ಯಾರೂ ಕಣ್ಣಿಗೆ ಬೀಳಲಿಲ್ಲ. ನನ್ನಮ್ಮನ ಖಾಸಾಭಂಟಿ ಗಂಗಮ್ಮನ ಸವಾರಿ ಇತ್ತಕಡೆಗೆ ಬರದಿದ್ದರೆ ಸಾಕು. ಬೇಗ ನನ್ನ ಕೆಲಸ ಮುಗಿಸಿ ಹೊರಟುಬಿಡಬೇಕೆಂದು ಮನೆಯ ಬೀಗ ತೆಗೆದು ಒಳಕ್ಕೆ ಕಾಲಿಟ್ಟ. ಅದು ಕರ‍್ರೆಂದು ಸದ್ದು ಮಾಡುತ್ತಾ ಬಿಚ್ಚಿಕೊಂಡಿತು. ಒಳಗೆ ಕಿಟಕಿ ಬಾಗಿಲುಗಳೆಲ್ಲವನ್ನೂ ಮುಚ್ಚಿದ್ದರಿಂದ ಕತ್ತಲು ಆವರಿಸಿತ್ತು. ಪರಿಚಯದ ಜಾಗವಾದ್ದರಿಂದ ಒಳಗಿನ ಅಂಗಳದ ವರೆಗೆ ಹೋದನು. ಸೂರ್ಯ ನಿಧಾನವಾಗಿ ಕೆಳಕ್ಕೆ ಸರಿಯುತ್ತಿದ್ದ. ಸಂಜೆಯ ಮಂದಬೆಳಕು ಇನ್ನೂ ಇತ್ತು. ಮನೆಯ ಸುತ್ತಾ ಒಂದು ಬಾರಿ ಬಂದು ಮತ್ತೆ ಅಂಗಳಕ್ಕೆ ಬಂದ. ಕಾಲಲ್ಲಿದ್ದ ಶೂ ಕಳಚಿ ಅಲ್ಲಿದ್ದ ನಲ್ಲಿಯ ನೀರಿನಿಂದ ಕೈಕಾಲು ತೊಳೆದುಕೊಂಡ. ಕರ್ಚೀಫಿನಿಂದ ಒರೆಸಿಕೊಂಡು ಖಾಲಿಯಾಗಿದ್ದ ದೇವರ ಕೋಣೆಗೆ ನಡೆದ. ದೇವರ ಪೀಠ ಖಾಲಿಯಾಗಿತ್ತು. ಅದರ ಇಕ್ಕೆಲಗಳಲ್ಲಿ ಹಿಡಿಕೆಯಾಕಾರದ ಮರದ ಬೆಣೆಯನ್ನು ನಿಧಾನವಾಗಿ ತಿರುಗಿಸಿದ. ತೆರೆದ ಭಾಗದಲ್ಲಿ ಬಗ್ಗಿ ನೋಡಿದ. ಕತ್ತಲಿನಲ್ಲಿ ಏನೂ ಕಾಣಿಸಲಿಲ್ಲ. ಮೊಬೈಲ್ ತೆಗೆದು ಅದರ ಲೈಟ್ ಆನ್ ಮಾಡಿ ಮೂಲೆಗಳನ್ನು ಪರಿಶೀಲಿಸದ. ತಡಕಾಡಿದಾಗ ಒಂದು ಪತ್ರಗಳ ಕಟ್ಟು ಸಿಕ್ಕಿತು.
ಸಂತಸದಿಂದ ಅದನ್ನು ಶರಟಿನೊಳಗಿದ್ದ ನೆಟ್‌ಬನಿಯನ್ನಿನೊಳಕ್ಕೆ ಸೇರಿಸಿದ. ಇದರಲ್ಲೇನಿದೆಯೋ ಎಂಬ ಕುತೂಹಲ. ಏಕೆಂದರೆ ಅವನಮ್ಮ ಯಾವಾಗಲೂ ಅಲ್ಲಿಯೇ ಬಹಳ ಹೊತ್ತಿನವರೆಗೂ ಏನನ್ನೋ ಮಾಡುತ್ತಿರುತ್ತಿದ್ದಳು. ಚಿಕ್ಕಂದಿನಿಂದಲೂ ಈ ಬಗ್ಗೆ ಕುತೂಹಲವಿತ್ತು. ಆದರೆ ಪರೀಕ್ಷಿಸಲು ಅವಕಾಶವಿರಲಿಲ್ಲ. ಸ್ನಾನಮಾಡಿ ದೇವರಿಗೆ ಕೈಮುಗಿದ ನಂತರ ಮತ್ತೊಮ್ಮೆ ಈ ಕೊಠಡಿಗೆ ಪ್ರವೇಶಿಸುವಂತಿರಲಿಲ್ಲ. ಈ ಬಗ್ಗೆ ಅಜ್ಜಿಯನ್ನು ಕೇಳಿದರೆ “ಅಯ್ಯೋ ಕೂಸೇ, ಇದೂ ಒಂದು ಪ್ರಶ್ನೆಯಾ? ನಿಮ್ಮಮ್ಮನಿಗೆ ದೇವರ ಬಗ್ಗೆ ತುಂಬ ನಂಬಿಕೆ. ಅದಕ್ಕೇ ಹೆಚ್ಚುಹೊತ್ತು ಅಲ್ಲಿ ಪೂಜೆ ಮಾಡುತ್ತಾ ಏನೇನೋ ಓದುತ್ತಿರುತ್ತಾಳೆ” ಎಂದು ಹೇಳುತ್ತಿದ್ದರು. ಆ ಉತ್ತರದಿಂದ ವಿಶ್ವಾಸ್ ನ ಕುತೂಹಲ ತಣಿದಿರಲಿಲ್ಲ. ಮುಂದೆ ಆತನ ಕೆಲಸಕಾರ್ಯಗಳ ನಡುವೆ ಬಿಡುವೇ ಆಗುತ್ತಿರಲಿಲ್ಲ. ಈಗ ಅವಕಾಶ ಸಿಕ್ಕಿತ್ತು. ಅಮ್ಮ ವಿಪರೀತ ಮಳೆ ಬಂದಾಗ ಒಂದುದಿನ ಹಿಂಭಾಗದ ಗೋಡೆಯೊಂದು ಕುಸಿದು ಅಲ್ಲಿಯೇ ಇದ್ದ ಅಮ್ಮನ ಮೇಲೇ ಬಿದ್ದಿತ್ತು. ಅಮ್ಮ ಅದರಡಿಯಲ್ಲೇ ಅಸು ನೀಗಿದ್ದಳು. ಎಲ್ಲರು ಓಡಿಬಂದರೂ ಏನೂ ಮಾಡಲಾಗಿರಲಿಲ್ಲ. ಅಂದಿನಿಂದ ಅಪ್ಪ ಸಂಪೂರ್ಣ ಅಂತರ್ಮುಖಿಯಾಗಿಬಿಟ್ಟಿದ್ದರು. ನಿಡಿದಾದ ನಿಟ್ಟುಸಿರು ಬಿಟ್ಟು ಮನೆಗೆ ಬೀಗಹಾಕಿ ಮತ್ತೊಮ್ಮೆ ಮನೆಯನ್ನು ಅವಲೋಕಿಸಿ ಹೊರನಡೆದ ವಿಶ್ವಾಸ್ .
ಹಳೆಯ ಮನೆಯಿಂದ ಬರಿಗೈಯಲ್ಲಿ ಹಿಂದಿರುಗಿದ ಗಂಡನನ್ನು ನೋಡಿ “ಅಲ್ರೀ ಅರ್ಧ ಫರ್ಲಾಂಗ್ ಕೂಡ ದೂರವಿಲ್ಲದ ಮನೆಗೆ ಕಾರು ತೆಗೆದುಕೊಂಡು ಹೋಗಿದ್ರಿ. ಏನೂ ತರದೇ ವಾಪಸಾಗಿದ್ದೀರಿ. ನಿಮ್ಮ ಹಳೆಯ ನೆನಪುಗಳನ್ನು ಮೆಲುಕುಹಾಕಲು ಹೋಗಿದ್ರಾ?” ಎಂದಳು ಲೀಲಾ.
“ಹಾಗೇ ಅಂತಿಟ್ಟುಕೋ. ಈಗ ನನಗೆ ಒಂದು ಕಪ್ಪು ಕಾಫಿ ಮತ್ತು ಏನಾದರೂ ಲಘುವಾದ ಸ್ನ್ಯಾಕ್ಸ್ ಕೊಡು. ನನಗೆ ತುಂಬ ಕೆಲಸವಿದೆ” ಎನ್ನುತ್ತಾ ವಿಶಾಲ್ ತನ್ನ ರೂಮಿನೊಳಕ್ಕೆ ಹೋದ. ಅಲ್ಲಿಂದ ತಂದಿದ್ದ ಕಾಗದಗಳ ಕಟ್ಟನ್ನು ತನ್ನ ಕಛೇರಿಯ ಒಂದು ಫೈಲಿನೊಳಕ್ಕಿಟ್ಟ. ಕಾಫಿ ತಂದಾಗ ಫೈಲನ್ನೋದುವಂತೆ ತಲೆ ಹುದುಗಿಸಿದ್ದ ಪತಿಯನ್ನು ನೋಡಿ ಲೀಲಾ ಏನೂ ಪ್ರಶ್ನಿಸಲಿಲ್ಲ. ಅವನು ಹೆಂಡತಿ ಹೊರನಡೆಯುತ್ತಲೇ ಕೋಣೆಯ ಬಾಗಿಲನ್ನು ಭದ್ರಪಡಿಸಿ ತಂದಿದ್ದ ಕಾಗದಗಳನ್ನು ಪರಿಶೀಲಿಸತೊಡಗಿದನು. ನೋಡಿದರೆ ತಮ್ಮ ಕುಟುಂಬಕ್ಕೆ ತಲೆಮಾರಿನಿಂದ ಬಂದಿದ್ದ ವ್ಯಾವಹಾರಿಕ ಪತ್ರಗಳು, ನಂತರ ಅವುಗಳಿಂದ ಲಾಭನಷ್ಟಗಳ ವಿವರಗಳು, “ಅಯ್ಯೋ ಇವೆಲ್ಲವನ್ನ್ಲೂ ನನ್ನಪ್ಪ ನನ್ನ ಕೈಗೆ ಕೊಟ್ಟಿದ್ದಾರಲ್ಲಾ. ಇವೆಲ್ಲ ಅದರ ಪ್ರತಿಗಳು ಮಾತ್ರ.” ನಿರಾಸೆಯಿಂದ ವಿಶಾಲ್ “ಬೆಟ್ಟ ಅಗೆದು ಇಲಿಯೊಂದನ್ನು ಹಿಡಿದಂತಾಯ್ತು” ಎಂದುಕೊಂಡ. ಅಷ್ಟು ಹೊತ್ತಿಗೆ ಊಟಕ್ಕೆ ಬರಬೇಕಂತೆ ಎಂಬ ಕೂಗು ಕೇಳಿಸಿತು. ಇನ್ನು ತಡಮಾಡಿದರೆ ಅಪ್ಪನೇ ಬಂದುಬಿಡುತ್ತಾರೆ ಎಂದುಕೊಂಡು ಊಟಮಾಡಲು ಹೋದ. ಮೌನವಾಗಿ ಎಂದಿನಂತೆ ಮಾತುಕತೆಯಾಡದೆ ಊಟಮಾಡುತ್ತಿದ್ದ ವಿಶ್ವಾಸ್ ನನ್ನು ನಾಲ್ಕು ಗಂಟೆಗೆ ಅವನು ಮನೆ ಬಂದಾಗಿನಿಂದಲೂ ರಾಯರು ಗಮನಿಸಿದ್ದರು. “ಹಳೆಯಮನೆ ಹತ್ತಿರ ಹೋಗಿದ್ದೆಯಂತೆ. ಲೀಲಾ ಹೇಳಿದಳು.”ಎಂದದ್ದಕ್ಕೆ ಮೊಮ್ಮಕ್ಕಳಾದ ಶಶಾಂಕ್ ಮತ್ತು ಶರತ್ “ಹೂ ತಾತಾ ಅಪ್ಪ ಆ ಹಳೇ ಮನೆ ಹಿಂದೆ ಏಕೆ ಬಿದ್ದಿದ್ದಾರೆ ಅರ್ಥವಾಗುತ್ತಿಲ್ಲ’ ಎಂದರು. ವಿಶ್ವಾಸ್ “ ಹೂಂ ಅಪ್ಪಾ, ಈಗ ಮಾಧವನಿಗೆ ಈಗ ಫೋನ್ ಮಾಡಿ ಹೇಳುತ್ತೇನೆ. ನಾಳೆ ಬಂದು ವಹಿಸಿಕೋ ಅಂತ ಕೆಲಸ ಪ್ರಾರಂಭಿಸಲಿಕ್ಕೆ” ಎಂದ. “ಒಂದೆರಡು ದಿನ ಆಫೀಸಿಗೆ ರಜೆ ಹಾಕಿದ್ದೇನೆ.”ಎಂದು ಕೈತೊಳೆದು ಹೊರನಡೆದ. ಮೊಮ್ಮಕ್ಕಳು ತಾತನ ಮುಖ ನೋಡುತ್ತಾ ನಗುತ್ತಾ ತಮ್ಮತಮ್ಮ ರೂಮಿಗೆ ನಡೆದರು.
ತಾವೂ ಊಟ ಮುಗಿಸಿ ಹೊರಗಿನ ವೆರಾಂಡಾದಲ್ಲಿ ಸ್ವಲ್ಪ ಹೊತ್ತು ಅಡ್ಡಾಡಿ ತಮ್ಮ ರೂಮಿಗೆ ಹೋದರು ರಾಯರು. ಮೊದಲೇ ಸಿದ್ಧಪಡಿಸಿದ್ದ ಹಾಸಿಗೆಮೇಲೆ ಕುಳಿತರು. ಪ್ರತಿದಿನದಂತೆ ವ್ಯಾಸಭಾರತದ ಕೈಗೆತ್ತಿಕೊಂಡರು. ಏಕೋ ಆದಿನ ಪ್ರಾರ್ಥನಾ ಪದ್ಯದಿಂದ ಮುಂದಕ್ಕೆ ಓದಲಾಗಲೇ ಇಲ್ಲ. ಅಲ್ಲೇ ಟೇಬಲ್ ಮೇಲಿಟ್ಟುಕೊಂಡಿದ್ದ ಪತ್ನಿ ಗೀತಾಳ ಭಾವಚಿತ್ರದ ಕಡೆ ದೃಷ್ಟಿ ಸಾಗಿತು. ಮನಸ್ಸಿನ ಆಲೋಚನೆ ಐವತ್ತು ವರ್ಷ ಹಿಂದಕ್ಕೆ ನೆನಪುಗಳತ್ತ ಸರಿಯಿತು.
ಮೂಲತಃ ಮೈಸೂರಿನವರೇ ಆಗಿದ್ದ ಶ್ರೀಪಾದರಾಯರು ವ್ಯಾಪಾರಸ್ಥರು. ಮದುವೆ ನಂತರ ಹಾಸನದಲ್ಲಿ ತಮ್ಮ ವೈವಾಹಿಕ ಜೀವನವನ್ನು ಪ್ರಾರಂಭಿಸಬೇಕಾಯಿತು. ಕಾರಣ ಮಾವನಿಗಿದ್ದ ಅಪಾರ ಆಸ್ತಿಯ ನಿರ್ವಹಣೆಯ ಜೊತೆಗೆ ಅವರ ಒಬ್ಬಳೇ ಮಗಳನ್ನು ವರಿಸಿದ್ದರಿಂದ. ಆದರೂ ಮೈಸೂರಿನ ನಂಟನ್ನು ಬಿಡದೆ ನಂಬಿಕಸ್ತರೊಬ್ಬರನ್ನಿಟ್ಟು ಅಲ್ಲಿನ ವ್ಯಾಪಾರ ನೋಡಿಕೊಳ್ಳುವಂತೆ ಏರ್ಪಾಡು ಮಾಡಿದ್ದರು. ಆ ಕುಟುಂಬ ಅಲ್ಲಿ ನೆಲೆಸಲು ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದರು. ಆಗಿಂದಾಗ್ಗೆ ಬಂದು ಹೋಗುತ್ತಿದ್ದರು. ಮೂರು ಮಕ್ಕಳ ತಂದೆಯಾದ ಅವರಿಗೆ ಪತ್ನಿ ವಿಯೋಗವಾಯ್ತು. ಚಿಕ್ಕ ವಯಸ್ಸಿನಲ್ಲಿಯೇ ಹೆಂಡತಿಯನ್ನು ಕಳೆದುಕೊಂಡ ಅಳಿಯನಿಗೆ ಮಾವನವರು ತಾವೇ ಮರುಮದುವೆ ಮಾಡಿಸಿದರು. ಅವರ ಎರಡನೆಯ ಹೆಂಡತಿಗೆ ಜನಿಸಿದ ಮಗನೇ ಚಿದಾನಂದ. ಶ್ರೀಪಾದರಾಯರ ಎರಡನೆಯ ಹೆಂಡತಿಯಾಗಿ ಮನೆಗೆ ಕಾಲಿಟ್ಟ ಗಿರಿಜಮ್ಮ ತನಗೊಬ್ಬ ಮಗ ಹುಟ್ಟಿದರೂ ಮಲಮಕ್ಕಳನ್ನು ಎಂದೂ ಅಸಡ್ಡೆ ಮಾಡದೆ ಹೆತ್ತ ತಾಯಿಯಂತೆಯೇ ಅಕ್ಕರೆಯಿಂದ ಬೆಳೆಸಿದ್ದರು.
ಶ್ರೀಪಾದರಾಯರು ಅಂದರೆ ಚಿದಾನಂದನ ತಂದೆ ಮತ್ತು ಅವರ ಮಾವ ಚಿದಾನಂದನ ಅಜ್ಜ ಬದುಕಿರುವವರೆಗೂ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಗುತ್ತಿದ್ದ ಮನೆಯಲ್ಲಿ ಅವರಿಬ್ಬರೂ ಕಾಲವಾದ ನಂತರ ಊಹಿಸಲಾರದಷ್ಟು ಬದಲಾವಣೆಗಳು ಆಗತೊಡಗಿದವು. ಶ್ರೀಪಾದರಾಯರ ಮೊದಲ ಹೆಂಡತಿಯ ಮೂವರು ಮಕ್ಕಳು (ಚಿದಾನಂದನ ಮಲಅಣ್ಣಂದಿರು) ಆಸ್ತಿ ವಿಭಾಗ ಮಾಡಿಕೊಂಡರು. ಅದರಲ್ಲಿ ಒಂದು ಚಿಕ್ಕಾಸನ್ನಾಗಲೀ, ಒಂದು ಅಂಗೈ ಅಗಲ ಭೂಮಿಯನ್ನಾಗಲೀ, ಯಾವುದೇ ವ್ಯವಹಾರದಲ್ಲಿ ಪಾಲನ್ನಾಗಲೀ ಚಿದಾನಂದ ಮತ್ತು ಅವರ ತಾಯಿ ಗಿರಿಜಮ್ಮನವರಿಗೆ ಕೊಡದೇ ಅವರ ಇರುವಿಕೆ ತಮಗೆ ಅನಗತ್ಯವೆಂಬಂತೆ ವರ್ತಿಸುತ್ತಾ ಅವರನ್ನು ತಿರಸ್ಕಾರ ಮಾಡಿದರು. ಇದರಿಂದ ಬೇಸತ್ತ ಚಿದಾನಂದ ತಾಯಿಯನ್ನು ಕರೆದುಕೊಂಡು ತನ್ನಪ್ಪನ ಮೂಲ ಸ್ಥಾನ ಮೈಸೂರಿಗೇ ಬಂದುಬಿಟ್ಟರು. ಅಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಂಡು ಅಲ್ಲಿದ್ದ ಅವರ ತಂದೆಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ನಂಬಿಕಸ್ತ ಹಿರಿಯರ ಸಲಹೆ ಸೂಚನೆಯಂತೆ ತಾವೂ ಅವರೊಡನೆ ಆ ವ್ಯಾಪಾರ ವ್ಯವಹಾರವನ್ನು ಮುಂದುವರೆಸಿದರು. ಬಿ.ಬಿ.ಎಂ., ಪದವೀಧರರಾಗಿದ್ದ ಚಿದಾನಂದರಾಯರು ತಮ್ಮ ಜಾಣ್ಮೆ, ಕುಶಲತೆಗಳಿಂದ ಬಹುಬೇಗ ವ್ಯವಹಾರದಲ್ಲಿ ಜನಾನುರಾಗಿಗಳಾದರು. ಚಿಲ್ಲರೆ ವ್ಯಾಪಾರ ಮಾಡುತ್ತಿದ್ದವರು ಸಗಟು ಖರೀದಿಸಿದ ಸಾಮಾನುಗಳನ್ನು ಬೇರೆ ಅಂಗಡಿಗಳಿಗೆ ಇವರೇ ಸರಬರಾಜು ಮಾಡತೊಡಗಿದರು. ಮತ್ತೊಂದು ಮಳಿಗೆಯನ್ನು ಕೊಂಡು ಅಂಗಡಿಯನ್ನು ವಿಸ್ತರಿಸಿದರು. ದಿನೇದಿನೇ ಪ್ರವರ್ಧಮಾನಕ್ಕೆ ಬರುತ್ತಾ ಅವರು ನಾಲ್ಕು ಜನರಲ್ಲಿ ಗುರುತಿಸಿಕೊಳ್ಳುವ ಹಂತಕ್ಕೆ ಬಂದಾಗ ಅವರನ್ನು ಗೃಹಸ್ಥನನ್ನಾಗಿ ಮಾಡಲು ತಾಯಿ ಗಿರಿಜಮ್ಮ ಹಲವಾರು ಕಡೆ ಹೆಣ್ಣುಗಳ ಬಗ್ಗೆ ವಿಚಾರಿಸುತ್ತಿದ್ದರು.
ಚಿದಾನಂದರಾಯರು ಮತ್ತು ಅವರ ತಾಯಿ ಮೈಸೂರಿಗೆ ಹಿಂದಿರುಗಿದಾಗ ಅವರನ್ನು ಸ್ವಾಗತಿಸಿ ಸಹಕಾರ ನೀಡಿ ವ್ಯಾಪಾರದಲ್ಲಿ ಅವರು ಅಭಿವೃದ್ಧಿ ಹೊಂದಲು ಸಹಾಯಕರಾದ ಶ್ರೀಪಾದರಾಯರ ನಂಬಿಕಸ್ತರ ಕುಟುಂಬದಲ್ಲಿಯೇ ಒಬ್ಬ ಕನ್ಯೆಯಿದ್ದು ಅವಳನ್ನು ಚಿದಾನಂದರಾಯರಿಗೆ ವಿವಾಹ ಮಾಡಿಕೊಡಲು ಆಕೆಯ ಅಣ್ಣ ಮುಂದೆ ಬಂದರು. ಆಕೆ “ಗೀತಾ” ಇಂಟೀರಿಯರ್ ಡೆಕೋರೇಷನ್ ಕೋರ್ಸ್ ಪಾಸುಮಾಡಿ ಗೆಳತಿಯೊಬ್ಬಳ ಜೊತೆ ಸೇರಿ ಮಡಿಕೇರಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂಬ ವಿವರಗಳು ತಿಳಿದುಬಂದವು. ಅವಳನ್ನು ಆಗೊಮ್ಮೆ ಈಗೊಮ್ಮೆ ಅವರ ಮನೆಗೆ ಬಂದಾಗ ನೋಡಿದ್ದೂ ಉಂಟು. ತುಂಬ ಸುಂದರವಾಗಿ ಬಂಗಾರದ ಪುತ್ಥಳಿಯಂತಿದ್ದಳು. ಆಕೆ ಸ್ವತಂತ್ರ ವ್ಯವಹಾರ ಮಾಡುತ್ತಿರುವ ದಿಟ್ಟ ಹೆಣ್ಣು ಸಾಧಾರಣ ರೂಪಿನ ಚಿದಾನಂದನನ್ನು ಮದುವೆಯಾಗಿ ಮೈಸೂರಿನಲ್ಲಿ ಇರಲು ಒಪ್ಪುತ್ತಾಳೆಯೋ? ಎಂಬ ಸಂದೇಹವಿತ್ತು. ಗಿರಿಜಮ್ಮನವರು “ಆಕೆಗೆ ಏನೋ ಕಾರಣದಿಂದ ಈ ವರೆಗೆ ಕಂಕಣಬಲ ಕೂಡಿಬಂದಿಲ್ಲ. ಅವಳು ಅಲ್ಲಿ ಏನು ವ್ಯವಹಾರ ಮಾಡುತ್ತಾಳೆಯೋ ಅದನ್ನು ಇಲ್ಲೇ ಮಾಡಲಿ ಬಿಡು. ನಿನಗೂ ಒತ್ತಾಸೆಯಾಗಿರುತ್ತಾಳೆ” ಎಂದು ಮಗನನ್ನು ಬಲವಂತಮಾಡಿ ಒಪ್ಪಿಸಿದರು. ಒಪ್ಪಂದವಾಗಿ ಮದುವೆಗೆ ಇನ್ನೊಂದು ವಾರವಿತ್ತು. ಒಂದುದಿನ ಚಿದಾನಂದರಾಯರು ಏನೋ ಕೆಲಸಕ್ಕಾಗಿ ಹೋಗಿದ್ದವರು ಅದನ್ನು ಮುಗಿಸಿ ಮನೆಯ ಹಾದಿ ಹಿಡಿದಿದ್ದರು. ಕೆ.ಆರ್.ಎಸ್. ಹಿನ್ನೀರಿನ ಬಳಿ ಬರುತ್ತಿರುವಾಗ ಯಾರೋ ಅಲ್ಲಿ ಒಂಟಿಯಾಗಿ ಕುಳಿತಿರುವುದು ಅವರ ಗಾಡಿಯ ಬೆಳಕಿನಿಂದ ಕಾಣಿಸಿತು. ಗಾಡಿ ನಿಲ್ಲಿಸಿ ಕುತೂಹಲದಿಂದ ಸದ್ದಾಗದಂತೆ ಮೆಲ್ಲಗೆ ಹತ್ತಿರಕ್ಕೆ ಹೋದಾಗ ಕುಳಿತಿದ್ದ ವ್ಯಕ್ತಿಯ ಗುರುತು ಸಿಕ್ಕಿತು. ಮುಂದಿನವಾರ ಚಿದಾನಂದರ ಜೊತೆ ಹಸೆಮಣೆಯೇರಬೇಕಾದ ಗೀತಾ. ಹೌಹಾರಿದರು. ಮರೆಯಲ್ಲಿ ನಿಂತು ಸ್ವಲ್ಪ ಹೊತ್ತು ನೋಡತೊಎಗಿದರು. ಸುಮಾರು ಸಮಯವಾದಮೇಲೂ ಕುಳಿತಿದ್ದವಳು ಅಲುಗಾಡಲೇ ಇಲ್ಲ. ನಂತರ ನಿಧಾನವಾಗಿ ಮೇಲಕ್ಕೆದ್ದು ಮುಂದಕ್ಕೆ ಹೆಜ್ಜೆಯಿಡುತ್ತಾ ನೀರಿನಂಚಿನತ್ತ ಸಾಗಿ ಇನ್ನೇನು ಮುಂದಕ್ಕೆ ಬೀಳಬೇಕೆನ್ನುವಷ್ಟರಲ್ಲಿ ಚಂಗನೆ ನೆಗೆದು ಚಿದಾನಂದರು ಅವಳ ಕೈಯನ್ನು ಭದ್ರವಾಗಿ ಹಿಡಿದರು. “ಬಿಟ್ಟುಬಿಡಿ, ನಾನು ಸಾಯಬೇಕು.” ಎಂದು ಕೊಸರಿಕೊಳ್ಳಲು ಪ್ರಯತ್ನಿಸಿದಳು. “ಏಕೆ ಅಂಥಾ ಸಾಯುವಂತದ್ದೇನಾಗಿದೆ?” ಎಂದು ಪ್ರಶ್ನಿಸಿದರು ಚಿದಾನಂದರು. ಅವರ ಧ್ವನಿಯನ್ನು ಕೇಳಿ ಇತ್ತ ತಿರುಗಿದ ಗೀತಾ “ನೀವಾ !” ಎಂದಳು.
“ಹಾಂ ನಾನೇ, ನಿಮಗೆ ನನ್ನನ್ನು ಮದುವೆಯಾಗಲು ಇಷ್ಟವಿಲ್ಲದಿದ್ದರೆ ಬೇಡ. ಬಲವಂತವಿಲ್ಲ. ಈಗಲೂ ಏನಾದರೊಂದು ಕಾರಣ ಹೇಳಿ ಮದುವೆಯನ್ನು ನಾನೇ ನಿಲ್ಲಿಸುತ್ತೇನೆ. ನೀವು ಸಾಯಬೇಕಾಗಿಲ್ಲ” ಎಂದರು ಚಿದಾನಂದ.
“ಅದಕ್ಕಲ್ಲಾ , ನಾನು ನಿಮಗೆ ಯೋಗ್ಯಳಲ್ಲ. ನಿಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳಲು ನನ್ನ ಮನಸ್ಸು ಒಪ್ಪುತ್ತಿಲ್ಲ. ನಾನೊಬ್ಬರನ್ನು ಪ್ರೀತಿಸುತ್ತಿದ್ದೇನೆಂಬ ವಿಷಯವನ್ನು ಅಣ್ಣನಿಗೆ ಹೇಳಿ ಒಪ್ಪಿಸುವಷ್ಟರಲ್ಲಿ ನನ್ನ ಪ್ರೇಮಿಯು ಆಕಸ್ಮಿಕವೊಂದರಲ್ಲಿ ಸಾವಿಗೀಡಾದ. ಆದರೆ ನಮ್ಮಿಬ್ಬರ ನಡುವೆಯಿದ್ದ ಅತಿ ಸಲಿಗೆಯ ಪರಿಣಾಮವಾಗಿ ನಾವು ಕಾಲು ಜಾರಿದ್ದೇವೆ. ಈಗ ನನ್ನ ಹೊಟ್ಟೆಯಲ್ಲಿ ಅವನ ಪ್ರೇಮದ ಫಲ ಬೆಳೆಯುತ್ತಿದೆ. ಇಂತಹ ಸ್ಥಿತಿಯಲ್ಲಿ ನಾನು ಹೇಗೆ ಬದುಕಿರಲಿ?” ಎಂದು ಒಂದೇ ಉಸುರಿಗೆ ಹೇಳಿ ಕಣ್ಣೀರಿಟ್ಟಳು.
“ಈ ವಿಚಾರವೇನಾದರೂ ನಿಮ್ಮ ಅಣ್ಣನಿಗೆ ಗೊತ್ತೇ?”
“ಇಲ್ಲ, ವಿಷಯವನ್ನು ಅಣ್ಣನಿಗೆ ಹೇಳುವಷ್ಟರಲ್ಲ್ಣಿ ಅವನೇ ಇಲ್ಲದಂತಾದ”
ಚಿದಾನಂದ ಮನಸ್ಸಿನಲ್ಲೇ ಆಲೋಚಿಸಿದ. ಹೌದು ಸ್ವಾತಂತ್ರ್ಯವೆಂಬ ಸ್ವೇಚ್ಛಾಚಾರದ ಫಲವಿದು. ಈಗ ಇದು ಎರಡು ಕುಟುಂಬಗಳ ಮರ್ಯಾದೆಯ ಪ್ರಶ್ನೆಯಾಗಿದೆ. ಅವರ ಎಲ್ಲ ಪರಿವಾರ, ಬಂಧುಗಳು ಕಣ್ಮುಂದೆ ಬಂದರು. ಏನೋ ನಿರ್ಧಾರಕ್ಕೆ ಬಂದ ಚಿದಾನಂದ. “ಆಯಿತು, ನೀವು ಚಿಂತಿಸಬೇಡಿ. ಈ ಗುಟ್ಟು ನಮ್ಮಿಬ್ಬರಲ್ಲಿಯೇ ಇರಲಿ. ಈಗ ನೀವು ಮನೆಗೆ ನಡೆಯಿರಿ.” ಎಂದು ಬಲವಂತದಿಂದ ಆಕೆಯನ್ನು ಮನೆಗೆ ಕರೆತಂದರು ಚಿದಾನಂದ. ಅನಂತರ ನಡೆದದ್ದು ಕನಸೆಂಬಂತೆ ಆಯಿತು. ವಿವಾಹ ಪೂರ್ವನಿರ್ಧಾರದಂತೆ ನಡೆಯಿತು. ಗೀತಾ ಏಳು ತಿಂಗಳಿಗೇ ಮಗುವನ್ನು ಹಡೆದಳು. ಪುಣ್ಯಕ್ಕೆ ಅಮ್ಮನ ಪಡಿಯಚ್ಚು. ಇದೆಲ್ಲ ಹೊರಗಿನವರ ಕಣ್ಣಿಗೆ. ಮಗು ಬೆಳೆದಂತೆಲ್ಲ ಗೀತಾಳೂ ಊಹಿಸಲಾರದಷ್ಟು ಬದಲಾವಣೆಯಾದಳು. ಆಕೆ ಚಿದಾನಂದರಾಯರ ನೆರವಿನಿಂದ ತನ್ನದೇ ಉದ್ಯಮವನ್ನು ನಡೆಸಿದಳು. ಗೃಹಕೃತ್ಯವನ್ನೂ ಲೋಪವಿಲ್ಲದಂತೆ ನಿರ್ವಹಿಸಿದಳು. ಯಾರಿಗೂ ಸುಳಿವು ಕೂಡ ಸಿಗದೇ ಆದರ್ಶ ಸತಿಯೆನ್ನಿಸಿಕೊಂಡಳು. ಗಿರಿಜಮ್ಮನ ಅಕ್ಕರೆಯ ಸೊಸೆಯಾದಳು.
ಮಗ ಬೆಳೆದು ಅವನು ವಿದ್ಯಾವಂತನಾಗಿ ವ್ಯವಹಾರದಲ್ಲಿ ಪಳಗಿದ. ಅವನ ವಿವಾಹವಾಗಿ ಮಕ್ಕಳೂ ಹುಟ್ಟಿ ಕುಟುಂಬದಲ್ಲಿ ಸುಖಸಂತೋಷಗಳು ನೆಲೆಗೊಂಡವು. ವೈಯಕ್ತಿಕವಾಗಿ ಚಿದಾನಂದರಾಯರು, ಗೀತಾರ ಬಾಳಿನಲ್ಲಿ ಮಧುಚಂದ್ರ ಬರಲೇ ಇಲ್ಲ. ಮೈಲಿಗೆಯಾದ ನನ್ನ ಮೈಯನ್ನು ದೇವರಂಥಹ ನಿಮಗೆ ಒಪ್ಪಿಸಲಾರೆ ಎಂದು ಆಕೆ ಹೇಳಿದರೆ, ವಿವಾಹ ಪೂರ್ವದ ಘಟನೆಗಳು ಅವರಲ್ಲಿ ದೈಹಿಕ ಕಾಮನೆಗಳನ್ನು ಸುಟ್ಟು ಹಾಕಿಬಿಟ್ಟವು. ಗೀತಾ ಪತಿಯ ಭಾವಚಿತ್ರವೊಂದನ್ನು ದೇವರ ಪೀಠದಬಳಿಯಿಟ್ಟು ಪೂಜಿಸುತ್ತಿದ್ದಳು. ಅದರ ಮುಂದೆ ತನ್ನೆಲ್ಲ ಭಾವನೆಗಳನ್ನು ನಿವೇದಿಸಿಕೊಳ್ಳುತ್ತಿದ್ದಳು. ಬಹಳ ಹೊತ್ತು ದೇವರ ಕೋಣೆಯಲ್ಲಿ ಕಳೆಯುತ್ತಿದ್ದ ಅಮ್ಮನ ರೀತಿಯನ್ನು ಮಗ ವಿಶ್ವಾಸ್ ಕುತೂಹಲದಿಂದ ಹಣಿಕಿ ನೋಡುತ್ತಿದ್ದ. ಹಾಗೆಯೇ ಗುಟ್ಟನ್ನು ಭದ್ರವಾಗಿ ಕಾಪಿಟ್ಟುಕೊಂಡು ದಿನಗಳೆಯುತ್ತಿದ್ದಳು. ಚಿದಾನಂದರಾಯರು ಅನುಮಾನದಿಂದ “ಈಕೆ ನನ್ನ ಫೊಟೋ ಇಟ್ಟು ಪೂಜೆ ಮಾಡುತ್ತಾಳೋ ಅಥವಾ ಮತ್ತೇನಾದರೂ ನಡೆಸಿದ್ದಾಳೋ ಎಂಬುದನ್ನು ಪರಿಶೀಲಿಸಲು ಒಂದು ರಾತ್ರಿ ಎಲ್ಲರು ಮಲಗಿದ್ದ ಸಮಯದಲ್ಲಿ ಚಿದಾನಂದರಾಯರು ದೇವರ ಪೀಠದ ಬಳಿ ಹುಡುಕಾಟ ನಡೆಸಿದರು. ಅವರ ಊಹೆ ಸುಳ್ಳಾಗಿರಲಿಲ್ಲ. ಗೀತಾ ತನ್ನ ಬದುಕಿನ ಎಲ್ಲ ಮಜಲುಗಳ ಬಗ್ಗೆ ಯಥಾವತ್ತಾಗಿ ನಿರೂಪಿಸಿ ಬರೆದಿಟ್ಟ ಕಾಗದಗಳ ಕಟ್ಟು ಸಿಕ್ಕಿತು. ಅದನ್ನು ಯಾರಿಗೂ ತಿಳಿಯದಂತೆ ತೆಗೆದು ಅದರ ಬದಲಿಗೆ ಅದೇ ಜಾಗದಲ್ಲಿ ತಮ್ಮ ವ್ಯಾಪಾರ ವ್ಯವಹಾರದ ಕಾಗದ ಪತ್ರಗಳ ಕಟ್ಟನ್ನು ಇರಿಸಿಬಿಟ್ಟರು. ಹೆಂಡತಿಯೇನಾದರೂ ಅದರ ಬಗ್ಗೆ ತಮ್ಮನ್ನು ಪ್ರಶ್ನಿಸಿದರೆ ಅವಳಿಗೆ ಕೊಡೋಣವೆಂದು ಆಲೋಚಿಸಿದ್ದರು . ದುರಾದೃಷ್ಟವಶಾತ್ ಅದರ ಮಾರನೆಯ ದಿನವೇ ಬಿರುಮಳೆ ಬಂದು ಹಿಂಭಾಗದ ಗೋಡೆಯೊಂದು ಮುಗುಚಿಬಿದ್ದಿತು. ಅದರಡಿಯಲ್ಲೇ ಸಿಕ್ಕಿ ಗೀತಾ ಅಸು ನೀಗಿದ್ದಳು. ಅವಳ ಬದುಕಿನ ಗುಟ್ಟು ಬಚ್ಚಿಟ್ಟಂತೆಯೇ ಉಳಿದು ಬಿಟ್ಟಿತು. ರಾಯರು ಆ ಬದುಕಿನ ಪುಟಗಳನ್ನು ಅಷ್ಟಕ್ಕೇ ಅಂತ್ಯಗೊಳಿಸಿದ್ದರು.
ಆಲೋಚನೆಯಲ್ಲೇ ಮುಳುಗಿ ಅತ್ತಿತ್ತ ಹೊರಳಾಡುತ್ತಿದ್ದ ಚಿದಾನಂದರಾಯರನ್ನು ಮಗ ವಿಶ್ವಾಸ್ “ಏಕಪ್ಪಾ ನಿದ್ರೆ ಬರಲಿಲ್ಲವೇ?” ಎಂದು ಕೇಳಿದಾಗ ವಾಸ್ತವಕ್ಕೆ ಹಿಂದಿರುಗಿದರು. “ನಿಮ್ಮ ರೂಮಿನಲ್ಲಿ ಇನ್ನೂ ಲೈಟು ಉರಿಯುತ್ತಿದ್ದುದನ್ನು ಕಂಡು ಕೇಳಬೇಕಾಯ್ತು. ಏಕೆ ಹುಷಾರಾಗಿದ್ದೀರಾ ತಾನೇ?” ಎಂದು ಒಳಬಂದು ಅಪ್ಪನ ಮೈ ಮುಟ್ಟಿ ನೋಡಿದ. ಪಕ್ಕದಲ್ಲಿ ಕುಳಿತಿದ್ದ ಮಗನನ್ನು ಅಕ್ಕರೆಯಿಂದ ನೋಡಿದರು ರಾಯರು. ನನ್ನ ರಕ್ತ ಹಂಚಿಕೊಂಡು ಹುಟ್ಟದಿದ್ದರೂ ನನ್ನ ಮನೆಯಂಗಳದಲ್ಲಿ ಮಗನಾಗಿ ಬೆಳೆದು ಅಂತರಂಗದಲ್ಲಿ ನೆಲೆಸಿದ್ದಾನೆ. ಅವನಿಂದ ನಾನು ತಂದೆಯ ಗೌರವದ ಪಟ್ಟವನ್ನು ಪಡೆದೆ. ಅವನು ನನ್ನದೆಲ್ಲಕ್ಕೂ ವಾರಸುದಾರನಾಗಿದ್ದಾನೆ. ಯಾವ ಜನ್ಮದ ಋಣಾನುಬಂಧವೋ ಕಾಣೆ. ಇದೆಲ್ಲವೂ ಆಗುವಂತೆ ರೂಪಿಸಿದವನು ಆ ಭಗವಂತನೇ. ನನ್ನ ಕರ್ತವ್ಯವನ್ನು ನಿರ್ವಂಚನೆಯಿಂದ ನನ್ನ ಕೈಯಲ್ಲಿ ದೇವರೇ ಮಾಡಿಸಿದ. ಎಂದು ಕೈಯೆತ್ತಿ ಆಕಾಶದತ್ತ ಮುಖಮಾಡಿ ನಮಸ್ಕರಿಸಿದರು. “ಅಪ್ಪಾ ! ಎಲ್ಲಿ ಕಳೆದು ಹೋದಿರಿ?” ಎಂದು ರಾಯರ ಮೈಯನ್ನು ಜೋರಾಗಿ ಅಲುಗಾಡಿಸಿದ. ಅವರ ದೇಹ ಮಗನ ಕೈಯಲ್ಲಿದ್ದಂತೆಯೇ ಪಕ್ಕಕ್ಕೆ ವಾಲಿತು. ಅವರು ಆಗಲೇ ದೈವಾಧೀನರಾಗಿದ್ದರು.
–ಬಿ.ಆರ್.ನಾಗರತ್ನ, ಮೈಸೂರು
ಪ್ರಕಟಿಸಿದ ಗೆಳತಿ ಹೇಮಾ ಅವರಿಗೆ ಧನ್ಯವಾದಗಳು
ತುಂಬಾ ಚೆನ್ನಾಗಿದೆ ಕಥೆ.
ಧನ್ಯವಾದಗಳು ನಯನಮೇಡಂ
ನಾಜೂಕಾಗಿ ಸೊಗಸಾದ ಕಥೆ ಹೆಣೆಯುವುದರಲ್ಲಿ ಬಹಳ ನಿಸ್ಸೀಮರಿದ್ದೀರಿ ನೀವು… ನಾಗರತ್ನ ಮೇಡಂ! ಅತ್ಯಂತ ಕುತೂಹಲಕಾರಿ ತಿರುವುಗಳಿಂದ ಕೂಡಿದ ಚೊಕ್ಕ ಕಥೆ ತುಂಬಾ ಇಷ್ಟವಾಯ್ತು.
ನಿಮ್ಮ ಪ್ರತಿಕ್ರಿಯೆಗೆ ಹೃತ್ಪೂರ್ವಕವಾದ ಧನ್ಯವಾದಗಳು ಶಂಕರಿ ಮೇಡಂ
ಮನ ಮಿಡಿಯುವ ಕತೆ
ಧನ್ಯವಾದಗಳು ಗಾಯತ್ರಿ ಮೇಡಂ
ಜೀವನದ ಕೆಲವು ರಹಸ್ಯಗಳು ಹಾಗೇ ಉಳಿದು ಬಿಡುವುದು ಎಷ್ಟೋ ವೇಳೆ, ನೆಮ್ಮದಿಯ ಜೀವನಕ್ಕೆ ಸಹಕಾರಿ ಎನ್ನುವುದನ್ನು ಸಾರುವ ಕುತೂಹಲಕಾರಿ ಕಥೆ ಎಂದಿನಂತೆ ಚೆನ್ನಾಗಿ ಮೂಡಿ ಬಂದಿದೆ.