ಕಾವ್ಯ ಭಾಗವತ 31 : ಪಶುಮೋಹ

31. ಪಂಚಮ ಸ್ಕಂದ
ಅಧ್ಯಾಯ – 2
ಪಶುಮೋಹ
ನದೀತೀರದಿ
ಜಪಕೆ ಕುಳಿತ
ಭರತ,
ಸಿಂಹ ಘರ್ಜನೆಗೆ ಹೆದರಿ
ಪ್ರಾಣ ಭಯದಿಂ,
ನದಿಯದೊಂದು ದಡದಿಂ
ಮತ್ತೊಂದು ದಡಕೆ
ಹಾರಿ
ಅಸುನೀಗಿದ
ತುಂಬು ಗರ್ಭಿಣಿ ಜಿಂಕೆ
ಪ್ರಸವಿಸಿದ
ಮರಿಜಿಂಕೆಯ
ಜೀವವುಳಿಸಿ ಬದುಕಿಸಿದ
ವಿರಕ್ತ ಭರತಂಗಂಟಿತು
ಮೋಹ ಪಾಶ,
ಜಿಂಕೆಮರಿಯ ಪ್ರೇಮಪಾಶ
ಆರಂಭದಿ ಹಾಲುಣಿಸಿ,
ಆಶ್ರಮದಲಿ ಬೆಚ್ಚಗೆ
ಮಲಗಿಸಿ
ದಿನರಾತ್ರಿಯೆನ್ನದೆ
ಪೋಷಿಸಿ, ಕಾಪಾಡಿ
ಮರಿ ಬೆಳೆದಂತೆ
ಚಿಗುರು ಗರಿಕೆಯ ತಿನಿಸಿ,
ಮೈ ತೊಳೆದು
ಮೋಹದಿಂ ಅಪ್ಪಿಗೆಯನಿತ್ತ.
ಮರಿ ಬೆಳೆದು
ಎಳೆಯ ಕೊಂಬುಗಳು ಮೂಡಿದ
ಕಂಡು ಮುಟ್ಟಿ, ಮುಟ್ಟಿ
ಸಂಭ್ರಮಿಸಿದ
ಭರತಂಗೆ, ಜಪತಪ
ಸ್ನಹ, ಅಹನ್ಯಾದಿ
ಕರ್ಮಗಳ ನೆನಪೆಲ್ಲಿ
ರಾಜ್ಯ, ಕೋಶ, ಸತಿ ಸುತರ
ಮೋಹವೆಲ್ಲ ತೊರೆದ ರಾಜಶ್ರೀ
ಭರತಂಗೆ
ಪಶು, ಜಿಂಕೆಯ ಮೋಹ
ಅದು ಅವನ ತೊರೆದು
ಬನಕೆ ಹೋದರೂ
ಪಶು ಮೋಹ ಬಿಡದೆ
ಕೊರಗಿ
ಅಸುನೀಗಿದ ಭರತ
ಮತ್ತೆ
ಜಿಂಕೆ ಜನ್ಮವ ಪಡೆದುದು
ಜನ್ಮಂತರ
ಕರ್ಮವಲ್ಲದೆ
ಮತ್ತೇನು!
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41905
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಚೆನ್ನಾಗಿದೆ. ಮೋಹ ಪಾಶ ದ ಪ್ರಭಾವ ಎಷ್ಟು ಅನ್ನುವ ಅರಿವು ಇಲ್ಲಿ ಸಿಗುತ್ತದೆ
ಚೆನ್ನಾಗಿದೆ ಸಾರ್ ಮೋಹ…ಎಂಥವರನ್ನೂ ಜಾಡದೆ ಬಿಡದೆಂಬ ತತ್ವದ ನಿರೂಪಣೆ..ಕಾವ್ಯ ಮುಖೇನ ಸ್ಪಷ್ಟಪಡಿಸಿರುವ ಬಗೆ ಚೆನ್ನಾಗಿದೆ..
ಕಾವ್ಯ ಭಾಗವತದಲ್ಲಿ ಜಡಭರತನ ಕಥೆಯು ಸತ್ವಪೂರ್ಣವಾಗಿ ಮೂಡಿಬಂದಿದೆ.
ಮೋಹದ ಪಾಶಕ್ಕೆ ಸಿಕ್ಕ ಮನುಜನ ಮನೋಭೂಮಿಕೆಯ ಚಿತ್ರಣ ಸೊಗಸಾಗಿ ಮೂಡಿ ಬಂದಿದೆ.