ನೆನಪಿನಂಗಳದಲ್ಲಿ ಮರೆಯಲಾಗದ “ಜಾತ್ರೆಗಳು”…

Share Button

ಮಳೆ ನಿಂತರೂ ಮರದಡಿ ಹನಿ….” ಎನ್ನುವಂತೆ, ಯಾವುದೇ ಜಾತ್ರೆಗಳು ಮುಗಿದರೂ ಕೂಡ ಜಾತ್ರೆಯ ಸೊಬಗು, ರೋಮಾಂಚಕ ಕ್ಷಣಗಳು ಮಾತ್ರ ಮತ್ತೆ ಮತ್ತೆ ಮರುಕಳಿಸುತ್ತವೆ!. ಜೊತೆಗೆ ಬಾಲ್ಯದ ದಿನಗಳು ಕೂಡ ನೆನಪಾಗುತ್ತವೆ! ಎಚ್ ಡಿ ಕೋಟೆ ತಾಲೂಕಿನ ಮೂರು ಪ್ರಮುಖ ಜಾತ್ರೆಗಳಾದ ತುಂಬಸೋಗೆ, ಅಂತರಸಂತೆ, ಮತ್ತು ಭೀಮನಕೊಲ್ಲಿ ಜಾತ್ರೆಯೂ ಕೂಡ ಈಗ ಮುಗಿದಿವೆ. ಈ ವರ್ಷ ನಾನು ಮೂರು ಜಾತ್ರೆಗಳಿಗೂ ಕೂಡ ಹೋಗಿದುದು ನನಗೆ ವಿಶೇಷ ಎಂದನಿಸಿತು. ಜನವರಿ, ಫೆಬ್ರವರಿ ತಿಂಗಳು ಮುಗಿಯುವ ಒಳಗೆ ಈ ಮೂರೂ ಜಾತ್ರೆಗಳು ನಡೆಯುತ್ತವೆ.

ಮೊದಲು ತುಂಬಸೋಗೆ ಜಾತ್ರೆ ನಡೆಯಿತು. ಹೆಚ್ಚಾಗಿ ಈ ಜಾತ್ರೆಯನ್ನು ನೂರಲಕುಪ್ಪೆ ಜಾತ್ರೆಯೆಂದು ಕೂಡ ಕರೆಯುತ್ತಾರೆ. ಒಟ್ಟಿನಲ್ಲಿ ಎರಡು ಊರಿನವರು ಸೇರಿಕೊಂಡು ಈ ಜಾತ್ರೆಯನ್ನ ಅದ್ದೂರಿಯಾಗಿ ಮಾಡುತ್ತಾರೆ. ತುಂಬಸೋಗೆ ಜಾತ್ರೆಗೂ ಕೂಡ ನನ್ನ ಬಾಲ್ಯದ ನಂಟು ಉಂಟು. ಏಕೆಂದರೆ ನಮ್ಮ ಚಿಕ್ಕಮ್ಮನ ಮನೆ ಆಗಿರುವುದರಿಂದ ನಾವು ಪ್ರತಿ ವರ್ಷವೂ ಜಾತ್ರೆಗೆ ತಪ್ಪದೆ ಹೋಗುತ್ತಿದ್ದೆವು. ತುಂಬ ಸೋಗೆಯ ಪಕ್ಕದಲ್ಲೇ ಬೀಚನಹಳ್ಳಿಯಿಂದ ಕಪಿಲ ನದಿಯು ಹರಿದು ಬರುತ್ತದೆ. ತುಂಬುಸೋಗೆ ಸೇತುವೆ ದಾಟಿದರೆ ಸಂತೆ ಸರಗೂರು ಸಿಗುತ್ತದೆ. ಸರಗೂರು ಈಗ ಹೊಸ ತಾಲೂಕು ಆಗಿದೆ. ನದಿಯ ದಡದಲ್ಲಿ ಮಹದೇಶ್ವರ ದೇವಸ್ಥಾನವು ಇದೆ. ನಮ್ಮ ಬಾಲ್ಯದ ದಿನದಲ್ಲಿ ಇದ್ದ ದೇವಸ್ಥಾನಕ್ಕೂ ಹೀಗಿರುವ ದೇವಸ್ಥಾನಕ್ಕೂ ಸ್ವಲ್ಪ ವ್ಯತ್ಯಾಸವಿದೆ. ವರ್ಷ ಕಳೆದಂತೆ ಜೀರ್ಣೋದ್ದಾರಗೊಂಡಿದೆ. ಇಲ್ಲಿ ಕಬಿನಿ ಎಡದಂಡ ನಾಲೆಯು ಇರುವುದರಿಂದ ಹೆಚ್ಚಾಗಿ ಭತ್ತವನ್ನು ಬೆಳೆಯುತ್ತಾರೆ. ಭತ್ತದ ಕೊಯ್ಲು ಆದ ನಂತರವೇ ಜಾತ್ರೆ ನಡೆಯುವುದರಿಂದ ದೇವಸ್ಥಾನದ ಸುತ್ತಮುತ್ತ ವಿಶಾಲವಾದ ಸ್ಥಳ ಸಿಗುತ್ತದೆ. ಅಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳು, ಆಟದ ಸಾಮಾನುಗಳು, ಇನ್ನಿತರ ಎಲ್ಲ ಪದಾರ್ಥಗಳು ಸಿಗುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯುತ್ತವೆ. ನಾನು ಹಲವು ವರ್ಷಗಳಿಂದ ಈ ಜಾತ್ರೆಗೆ ಹೋಗುತ್ತೇನೆ. ಸಮಯ ಇಲ್ಲದಾಗ ಮೂರು ದಿನ ನಡೆಯುವ ಜಾತ್ರೆಗೆ ಒಂದು ದಿನವಾದರೂ ಬಂದು ಹೋಗುತ್ತೇನೆ. ಕೋವಿಡ್ 19 ಸಂದರ್ಭದಲ್ಲಿ ನಾವು ತುಂಬಸೋಗೆಯಲ್ಲಿ ಹೆಚ್ಚಾಗಿ ಉಳಿದಿದ್ದರಿಂದ ಜಾತ್ರೆಯ ಸುತ್ತಮುತ್ತಲಿನ ವಾತಾವರಣವನ್ನು ಒಂದು ದಿನ ಪೂರ್ತಿ ಶುಚಿಗೊಳಿಸಿದ ನೆನಪು ಈ ಕ್ಷಣದಲ್ಲಿ ಮೂಡಿತು. ನಾವು ಏಳೆಂಟು ಜನರು ಸೇರಿಕೊಂಡು ಈ ರೀತಿಯ ಸ್ವಚ್ಛತಾ ಕಾರ್ಯಕ್ರಮವನ್ನ ಮಾಡಿದೆವು.

ಇನ್ನು ಎರಡನೆಯ ಜಾತ್ರೆ ಅಂತರಸಂತೆ ಜಾತ್ರೆ. ಅಂತರಸಂತೆಯು ನಮ್ಮ ತಾಯಿ ಊರಾಗಿರುವುದರಿಂದ ನಮ್ಮ ಬಾಲ್ಯದ ದಿನಗಳು ಸುವರ್ಣಾಕ್ಷರದಿಂದ ಬರೆದಿಡುವಂತದ್ದು. ನಮಗೆ ಅಂತರಸಂತೆ ಎಂದರೆ ಮೊದಲು ನೆನಪಾಗುವುದೇ ನಮ್ಮ ಅಜ್ಜಿ- ತಾತ. ಏಕೆಂದರೆ ನಮ್ಮ ತಾತನಿಗೆ ಐದು ಜನ ಹೆಣ್ಣು ಮಕ್ಕಳು, ನಾಲ್ಕು ಗಂಡು ಮಕ್ಕಳು ತುಂಬುಸಂಸಾರ. ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಸೇರಿದರೆ ಬರೋಬ್ಬರಿ 40ಕ್ಕೂ ಹೆಚ್ಚು ವಾಸವಿದ್ದ ಸ್ಥಳ ಈಗ ಇಲ್ಲವಾದರೂ ಕೂಡ, ಊರ ಹೊರಗಡೆ ದೊಡ್ಡ ದೊಡ್ಡ ಮನೆಗಳಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅಲ್ಲಿ ಒಂದು ಚಿತ್ರದ ಟೆಂಟ್ ಕೂಡ ಇತ್ತು. ಈಗ ಆಧುನಿಕತೆಯ ನೆಪದಲ್ಲಿ ಆ ಟೆಂಟ್ ಕೂಡ ಮಾಯವಾಗಿದೆ. ನಾವು ಹಳೆಯ ಅನೇಕ ಚಿತ್ರಗಳನ್ನು ಇಲ್ಲಿ ನೋಡಿದ್ದೇವೆ. ನಮಗೆ ರಾಜಕುಮಾರ್ ಅಂಬರೀಶ್ ವಿಷ್ಣುವರ್ಧನ್ ಚಿತ್ರಗಳು ಎಂದರೆ ತುಂಬಾ ಅಚ್ಚುಮೆಚ್ಚು ಬಾಕ್ಸಿಂಗ್ ಇರುವ ಚಿತ್ರಗಳನ್ನು ಇಲ್ಲಿ ಹಾಕುತ್ತಿದ್ದರು.

ನಮಗೆ ಬೇಸಿಗೆ ರಜೆ, ಇನ್ನಿತರ ರಜೆಗಳು ಬಂದಾಗ ಅಂತರ ಸಂತೆಗೆ ಹೋಗುತ್ತಿದ್ದೆವು. ಅದರಲ್ಲೂ ಜಾತ್ರೆಗೆ ಮೂರು ದಿನವೂ ಹಾಜರಾಗುತ್ತಿದ್ದೆವು. ಒಂದು ವಾರ ಎನ್ನುವಾಗಲೇ ಊರಿಗೆ ಒಂದು ರೀತಿಯಲ್ಲಿ ಸಂಭ್ರಮ ಬರುತ್ತಿತ್ತು. ಊರಿನ ಬೀದಿ, ಮನೆ ಎಲ್ಲವನ್ನೂ ಕೂಡ ಸಿಂಗಾರ ಮಾಡುತ್ತಿದ್ದರು. ಊರಿನಿಂದ ಮದುವೆಯಾಗಿ ಹೋದ ಹೆಣ್ಣು ಮಕ್ಕಳ ಕುಟುಂಬವು ಕೂಡ ಹಾಜರಾಗುತ್ತಿತ್ತು. ಸಂಬಂಧಿಕರೆಲ್ಲ ಒಟ್ಟಾಗಿ ಸೇರುತ್ತಿದ್ದರು. ಮನೆಗೆ ಬರುವ ನೆಂಟರೆಲ್ಲಾ ಕೂಡ ನಮಗೆ 10 ಅಥವಾ 20 ರೂಪಾಯಿ ಕೊಡುತ್ತಿದ್ದರು. ಎಲ್ಲವನ್ನು ಒಟ್ಟಾಗಿ ಸೇರಿಸಿಕೊಂಡು ನಾವು ಮೂರು ದಿನವೂ ಕೂಡ ಜಾತ್ರೆಯ ತುಂಬೆಲ್ಲ ಓಡಾಡುತ್ತಿದ್ದೆವು. ತಿಂಡಿ ತಿನಿಸು ತಿನ್ನುತ್ತಿದ್ದೆವು. “ಆನೆ ನಡೆದಿದ್ದೇ ದಾರಿ..” ಎನ್ನುವಂತೆ ದೊಡ್ಡವರ ಕಣ್ಣು ತಪ್ಪಿಸಿ ಊರೆಲ್ಲಾ ತಿರುಗುತ್ತಿದ್ದೆವು. ಇಲ್ಲೂ ಕೂಡ ಜಾತ್ರೆ ನಡೆಯುವ ಸಮಯದಲ್ಲಿ ಹೊಲದಲ್ಲಿ ಹಾಕಿದ್ದ ಬೆಳೆಗಳೆಲ್ಲ ಕಟಾವು ಮಾಡಿದ್ದರಿಂದ ದೇವಸ್ಥಾನದ ಸುತ್ತಮುತ್ತ ವಿಶಾಲವಾದ ಜಾಗ ಸಿಗುತ್ತಿತ್ತು. ದೇವಸ್ಥಾನದ ಪಕ್ಕದಲ್ಲಿ ಕಾಲೇಜು ಕೂಡ ಇದೆ. ಜೊತೆಗೆ ಈಗ ದಾಸೋಹ ಭವನವನ್ನು ಕೂಡ ನಿರ್ಮಾಣ ಮಾಡಲಾಗಿದೆ. ಜಾತ್ರೆ ಮೂರು ದಿನವೂ ಕೂಡ ಅನ್ನ ಸಂತರ್ಪಣೆ ನಡೆಯುತ್ತದೆ. ಮೈದಾನದ ಮಧ್ಯದಲ್ಲಿ ಮಹದೇಶ್ವರ ಸ್ವಾಮಿಯ ದೇವಸ್ಥಾನವು ಕೂಡ ಇದೆ. ಇಲ್ಲಿ ತಾತ್ಕಾಲಿಕವಾಗಿ ವೇದಿಕೆಯನ್ನು ನಿರ್ಮಾಣ ಮಾಡುತ್ತಾರೆ. ಆ ವೇದಿಕೆಯಲ್ಲಿ ಮೂರು ದಿನವೂ ಕೂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಶಾಲಾ- ಕಾಲೇಜು ಮಕ್ಕಳ ಕಾರ್ಯಕ್ರಮಗಳು ಒಂದಡೆಯಾದರೆ, ಹರಿಕಥೆ, ಜಾನಪದ ಕಾರ್ಯಕ್ರಮ ಆರ್ಕೆಸ್ಟ್ರಾ ಕಾರ್ಯಕ್ರಮಗಳು ಕೂಡ ನಡೆಯುತ್ತವೆ. ಒಟ್ಟಿನಲ್ಲಿ ಮೂರು ದಿನವೂ ಕೂಡ ಮನರಂಜನಾ ಕಾರ್ಯಕ್ರಮಗಳು ಎಲ್ಲರನ್ನು ಕೈಬೀಸಿ ಕರೆಯುತ್ತವೆ.ಅದರಲ್ಲೂ ಈ ವರ್ಷ ಜಾತ್ರೆಯ ಎರಡನೇ ದಿನ ನಮ್ಮ ಮೈಸೂರಿನ “ನವಗಾನ ಮಿಲನ ಟ್ರಸ್ಟ್” ನ ಸದಸ್ಯರು ಚಿತ್ರಗೀತೆಗಳನ್ನು ಸಾದರ ಪಡಿಸಿದ್ದು ವಿಶೇಷ ಎಂದಿನಿಸಿತು!. ಜೊತೆಗೆ ಒಂದು ಅವಕಾಶವೂ ಕೂಡ ನಮಗೆ ಸಿಕ್ಕಿತು. ಮುಂದಿನ ಕಾರ್ಯಕ್ರಮಕ್ಕೆ ಇದೊಂದು ವೇದಿಕೆಯಾಯಿತು. ಕೊಂಡೋತ್ಸವ, ತೆಪ್ಪೋತ್ಸವ, ರಥೋತ್ಸವ ಮೂರು ಕೂಡ ಸಾಂಗವಾಗಿ ನಡೆಯುತ್ತವೆ. ನಾವು ಹೆಚ್ಚಾಗಿ ಜಾತ್ರೆಯ ಸವಿ ಸವಿ ನೆನಪುಗಳನ್ನು ನೆನಪಿಸಿಕೊಂಡರೆ ನಿಜಕ್ಕೂ ಇಂದಿಗೂ ಕೂಡ ಮೈ- ಮನಗಳು ಪುಳಕಗೊಳ್ಳುತ್ತವೆ. ರಾತ್ರಿ ಊಟವಾದ ನಂತರ ನಮ್ಮ ಒಟ್ಟು ಕುಟುಂಬ ಎಲ್ಲರೂ ಕೂಡ ಸೇರಿ ಜಾತ್ರೆಯ ಮೈದಾನಕ್ಕೆ ಹೋಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡುತ್ತಿದ್ದೆವು.

ಇನ್ನು ಮೂರನೆಯ ಜಾತ್ರೆ ಭೀಮನ ಕೊಲ್ಲಿ ಜಾತ್ರೆ. ಇದರ ವಿಶೇಷ ಎಂದರೆ ಕಬಿನಿ (ಕಪಿಲಾ) ಹಿನ್ನೀರಿನಲ್ಲಿ ಇರುವ ಈ ದೇವಾಲಯದ ವಿಹಂಗಮದ ನೋಟ ನೋಡಲು ಎರಡು ಕಣ್ಣು ಸಾಲದು.ಜೊತೆಗೆ ಒಂದು ದಿನದ ಪ್ರವಾಸಿ ತಾಣವಾಗಿಯೂ ಕೂಡ ಇದು ಪ್ರಸಿದ್ಧಿಯನ್ನು ಪಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಈ ದೇವಾಲಯ ಒಂದಲ್ಲ ಒಂದು ರೀತಿಯಲ್ಲಿ ಜೀರ್ಣೋದ್ಧಾರಗೊಂಡು ಎಲ್ಲಾ ಭಕ್ತರನ್ನ ಕೈ ಬೀಸಿ ಕರೆಯುತ್ತದೆ. ಮೈಸೂರಿನಿಂದ ಸುಮಾರು 70 ಕಿಲೋಮಿಟರ್ ದೂರದಲ್ಲಿರುವ ಭೀಮನ ಕೊಲ್ಲಿಗೆ ನಾವು ಎರಡು ಮಾರ್ಗವಾಗಿ ಪ್ರಯಾಣ ಮಾಡಬಹುದಾಗಿದೆ. ಮೊದಲ ಮಾರ್ಗ ಎಂದರೆ ಮೈಸೂರಿನಿಂದ ಹ್ಯಾಂಡ್ ಪೋಸ್ಟ್ ಗೆ ಬಂದು, ಬೀಚನಹಳ್ಳಿ ಮಾರ್ಗವಾಗಿ ಬಿದರಳ್ಳಿ ಸರ್ಕಲ್ ಮೂಲಕ ಸಾಗಿ ನಂತರ ಮೂರ್ ಬಂದ್ ಗ್ರಾಮದಲ್ಲಿ ಬಲಗಡೆಗೆ ಆರ್ಚ್ (ಸ್ವಾಗತ ಕಮಾನ್) ಮೂಲಕ ಸಾಗಿದರೆ ಭೀಮನಕೊಲ್ಲಿ ಸಿಗುತ್ತದೆ. ಅದೇ ರೀತಿ ಮೈಸೂರಿನಿಂದ ಹ್ಯಾಂಡ್ ಪೋಸ್ಟ್ ಗೆ ಬಂದು ಸರಗೂರು ಮೂಲಕ ಬಿದರಳ್ಳಿ ಸರ್ಕಲ್ ಮೂಲಕ ಮೊದಲಿನಂತೆ ಸಂಚರಿಸಬಹುದು. ಜಾತ್ರಾ ಸಮಯದಲ್ಲಿ ಭೀಮನಕೊಲ್ಲಿಗೆ ಹೆಚ್ ಡಿ ಕೋಟೆ, ಮೈಸೂರು, ಗುಂಡ್ಲುಪೇಟೆ, ನಂಜನಗೂಡು ಮಾರ್ಗವಾಗಿ ಬಸ್ಸುಗಳ ಸಂಚಾರವು ಕೂಡ ಇರುವುದರಿಂದ ಕೇವಲ ಮೈಸೂರು ಜಿಲ್ಲೆ ಅಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದಲೂ ಕೂಡ ಭಕ್ತಾದಿಗಳು ತಂಡೋಪ ತಂಡವಾಗಿ ಬರುತ್ತಾರೆ. ಜಾತ್ರಾ ಸಮಯದಲ್ಲಿ ಬರುವ ಭಕ್ತರು ಒಂದು ಕಡೆಯಾದರೆ ಬೇರೆ ದಿನಗಳಲ್ಲೂ ಕೂಡ ಪ್ರವಾಸದ ನೆಪದಲ್ಲಿ ಭೀಮನಕೊಲ್ಲಿಗೆ ಬಂದು ಹೋಗುವ ಭಕ್ತರು ಕೂಡ ಇದ್ದಾರೆ.

ಕಬಿನಿಗೆ ಅಣೆಕಟ್ಟು ಕಟ್ಟಿದಾಗ ಮೂಲ ದೇವಾಲಯ ಮುಳುಗಿದ ನಂತರ ಈ ಭೀಮನ ಕೊಲ್ಲಿ ದೇವಸ್ಥಾನವನ್ನು ಹೊಸದಾಗಿ ನಿರ್ಮಾಣ ಮಾಡಲಾಯಿತು. ಈಗಲೂ ಕೂಡ ಬೇಸಿಗೆ ಕಾಲದಲ್ಲಿ ನೀರು ಕಡಿಮೆಯಾದಾಗ, ಹಳೆಯ ದೇವಾಲಯಗಳ ಪುರಾವೆಗಳನ್ನ ಕೂಡ ನಾವು ನೋಡಬಹುದು. ಜೊತೆಗೆ ಈ ದೇವಸ್ಥಾನದ ಪಕ್ಕದಲ್ಲಿ ಹಾದು ಹೋಗಿದ್ದ ಮಾನಂದವಾಡಿ ರಸ್ತೆಯನ್ನು ಕೂಡ ನಾವು ಕಬಿನಿಹಿನ್ನೀರಿನಲ್ಲಿ ಕಾಣಬಹುದು. ಹಲವು ವರ್ಷಗಳ ಹಿಂದೆ ಕಬಿನಿ ನೀರು ದಾಖಲೆ ರೀತಿಯಲ್ಲಿ ಕಡಿಮೆಯಾದಾಗ ಅನೇಕ ದೇವಾಲಯಗಳು ಕೂಡ ಕಾಣಿಸಿಕೊಂಡ ನಿದರ್ಶನಗಳು ಇವೆ. ಭೀಮನ ಕೊಲ್ಲಿ ಸ್ಥಳಕ್ಕೆ ತನ್ನದೇ ಆದ ಇತಿಹಾಸ ಇದೆ. ಭೀಮನ ಕೊಲ್ಲಿಯ ಸುತ್ತಮುತ್ತ ಅನೇಕ ಕಥೆಗಳು ಇವೆ. ಅನೇಕ ಪುರಾಣ, ಇತಿಹಾಸದ ಅಂಶಗಳು ಕೂಡ ಕಂಡು ಬಂದಿವೆ.

ಉತ್ತರ ದೇಶದಿಂದ ಮಹದೇಶ್ವರ ಇಲ್ಲಿಗೆ ಬಂದರೆಂದು ಪ್ರತೀತಿ ಇದೆ. 33 ಹಳ್ಳಿಗಳಿಗೂ ಒಡೆಯರಾಗಿದ್ದ ಹಲಗೇಗೌಡರ ಕನಸಿನಲ್ಲಿ ಮಹದೇಶ್ವರ ಬಂದು ನನಗೆ ಇಲ್ಲಿ ಜಾಗ ತೋರಿಸುವಂತೆ ಹೇಳಿದರೆಂಬ ಪ್ರತೀತಿ ಇದೆ. 15 ದಿನಗಳ ನಂತರ ಮತ್ತೇ ಕನಸಿನಲ್ಲಿ ಮಹದೇಶ್ವರ ಧ್ವನಿ ಒಂದು ರೀತಿಯಲ್ಲಿ ರೂಪ ಪಡೆದುಕೊಂಡಿತು. 33 ಹಳ್ಳಿಗಳ ದನಕರುಗಳು ಕಾಡಿಗೆ ಜನರ ಸಂಗಡ ಎಲ್ಲ ಗ್ರಾಮಸ್ಥರು ಸಿದ್ದರಾಗಿ ಹೋಗುತ್ತಿದ್ದರು. ಹಾಗೂ ಒಂದು ದೊಡ್ಡ ಕಥೆಯೇ ನಡೆಯಿತು. ದನಗಳ ಸಮೂಹದಲ್ಲಿ ಒಂದು ಹಸು ಕಾಡಿನಲ್ಲಿ ಮೇಯಲು ಹೋದಾಗ ಪ್ರತ್ಯೇಕವಾಗಿ ಸಾಗಿ ಮಹಾದೇಶ್ವರ ಲಿಂಗಕ್ಕೆ ಹಾಲನ್ನು ನೀಡಿ, ಮನೆಯಲ್ಲಿ ರಕ್ತವನ್ನು ನೀಡುತ್ತಿದ್ದಿತಂತೆ. ಇದರಿಂದ ವಿಚಲಿತರಾದ ಹಲಗೇಗೌಡರು ತನ್ನ ಮನೆಯ ಆಳನ್ನು ಕರೆದು ಬೆದರಿಸಿ ಕೇಳಿದಾಗ ವಾಸ್ತವಂಶವನ್ನು ಹೇಳಿದನಂತೆ ನಾವು ದನ ಮೇಯಿಸಲು ಹೋಗುವಾಗ ಒಂದು ಹಸು ಪ್ರತ್ಯೇಕವಾಗಿ ಒಂದು ಮಾರ್ಗದಲ್ಲಿ ಸಾಗುತ್ತದೆ. ಇದರ ಬಗ್ಗೆ ತಿಳಿಸಿದಾಗ, ಅದರ ಸತ್ಯವನ್ನು ತಿಳಿಯಲು ತೀರ್ಮಾನ ಮಾಡಿದನು. ಮಾರನೇ ದಿನ ಅಲ್ಲಿಗೆ ನಿಜ ತಿಳಿಯಲು ಕಾಡಿಗೆ ಹಲಗೇಗೌಡರು ಹೋಗುತ್ತಾರೆ. ಅಲ್ಲಿ ಯಥಾಪ್ರಕಾರ ಪ್ರತ್ಯೇಕವಾಗಿ ಸಾಗಿದ ಹಸುವನ್ನ ಹಿಂಬಾಲಿಸಿದಾಗ ಅದು ಒಂದು ಕಡೆ ಲಿಂಗದಲ್ಲಿ ನಾಲ್ಕು ಕಾಲುಗಳ ಮಧ್ಯೆ ಹಾಲನ್ನು ನೀಡುತ್ತಿರುತ್ತದೆ. ಅಲ್ಲಿಯೇ ಅದಕ್ಕೆ ಒಂದು ನಾಲ್ಕು ಕಂಬಗಳನ್ನ ಮಾಡಿ ಚಪ್ಪರದ ರೀತಿಯಲ್ಲಿ ನಿರ್ಮಾಣ ಮಾಡುತ್ತಾರೆ. ನಂತರದಲ್ಲಿ ಇದು ಇತಿಹಾಸಕ್ಕೆ ಸೇರ್ಪಡೆಯಾಯಿತು.

ಇದೇ ಸ್ಥಳದಲ್ಲಿ ಮತ್ತೊಂದು ಇತಿಹಾಸವಿದೆ. ಆ ಲಿಂಗ ಇದ್ದ ಸ್ಥಳವೇ ಅಂಕೋಲಾ ಬುಡದಲ್ಲಿ ಉದ್ಭವ ಲಿಂಗವಾಗಿ ಜನಜನಿತವಾಯಿತು. ಇದು 400 ವರ್ಷಗಳಿಗೂ ಮೀರಿದ ಕಥೆಯಾಗಿದೆ. ಭೀಮನು ಅಜ್ಞಾತವಾಸದಲ್ಲಿದ್ದಾಗ ಅಂದರೆ ಪಾಂಡವರಿಗೂ ಕೌರವರಿಗೂ ಯುದ್ಧವಾದ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಕೊಲ್ಲಿ ಯ ಮೂಲಕ ವೈನಾಡಿಗೆ ಹೋದರು ಎಂಬ ಸ್ಥಳ ಪುರಾಣವೂ ಇದೆ. ಇದರಿಂದಾಗಿ ಭೀಮನ ಪ್ರವೇಶದಿಂದಾಗಿ ಈ ಸ್ಥಳಕ್ಕೆ “ಭೀಮನ ಕೊಲ್ಲಿ” ಎಂದು ಹೆಸರು ಪಡೆದಿದೆ.

ಇನ್ನೊಂದು ಇತಿಹಾಸದ ಅಂಶದ ಪ್ರಕಾರ ಮಹದೇಶ್ವರ ಸ್ವಾಮಿ ಇಲ್ಲಿನ ಸರಗೂರು ಮಾರ್ಗವಾಗಿ ಬೇಲದಕುಪ್ಪೆ, ನಂಜನಗೂಡು ಮಾರ್ಗವಾಗಿ ಶಂಭುಲಿಂಗ ದೇವಸ್ಥಾನಕ್ಕೆ, ಕೊಳ್ಳೇಗಾಲ ಮಾರ್ಗದಲ್ಲಿ ಮಹದೇಶ್ವರ ಬೆಟ್ಟಕ್ಕೆ, ಇನ್ನು ಬೆಟ್ಟದ ಸಾಲಿನಲ್ಲಿ ನಾಗಮಲೈಗೆ ನಡೆದಾಡಿದ ಇತಿಹಾಸದ ಹೆಜ್ಜೆ ಗುರುತು ಇದೆ. ಪ್ರಥಮ ಅರ್ಚಕರಲ್ಲಿ ಎಂಟನೆಯ ತಲಮಾರಿನ ಬಿ ಎಂ ಸಿದ್ದಮಲ್ಲಪ್ಪ ರವರು ಭೀಮನ ಕೊಲ್ಲಿ ಗೆ ಸಂಬಂಧಿಸಿದ ಪರಂಪರೆಯು ಈ ಮೂಲಕ ನಡೆಯುತ್ತಿದೆ. ಭೀಮನ ಕೊಲ್ಲಿಯಲ್ಲಿ ವರ್ಷದ ಹಲವು ದಿನಗಳಲ್ಲೂ ಕೂಡ ವಿಶೇಷ ಪೂಜೆಯ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ ಅಕ್ಕಪಕ್ಕದ ಗ್ರಾಮಸ್ಥರಲ್ಲಿ ಬಂದು ಮಹದೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. ಇನ್ನು ಬಾಕಿ ಸಂದರ್ಭದಲ್ಲಿ ಅಂದರೆ ಮಾಘ ಮಾಸದ ಎರಡನೆಯ ಸೋಮವಾರ ಪ್ರತಿ ವರ್ಷ ಇಲ್ಲಿ ಜಾತ್ರಾ ಮಹೋತ್ಸವವು ನಡೆಯುತ್ತದೆ. ಆ ಜಾತ್ರಾ ಸಮಯದಲ್ಲಿ ಮೂರು ದಿನವೂ ಕೂಡ ವಿಶೇಷ ಪೂಜೆ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಸೋಮವಾರ ಹಾಲರವಿ….. ಮಂಗಳವಾರ ರಥೋತ್ಸವ….. ಬುಧವಾರ
ತೆಪ್ಪೋತ್ಸವ….. ನಡೆಯುತ್ತದೆ.

ಈ ಮೂರು ದಿನವೂ ಕೂಡ ದೇವಾಲಯದ ಒಳಗಡೆ ವಿಗ್ರಹವು ಸರ್ವಲಂಕಾರ ರೀತಿಯಲ್ಲಿ ವಿವಿಧ ಹೂವಿನ ಅಲಂಕಾರ, ಪೂಜಾ ಸಾಮಗ್ರಿಗಳೊಂದಿಗೆ ಕಂಗೊಳಿಸುತ್ತದೆ.ಜೊತೆಗೆ ದೇವಾಲಯದ ಹೊರಗಡೆಯ ಗೋಪುರ ಕೂಡ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು, ಭೀಮನ ಕೊಲ್ಲಿ ವಿಶಾಲವಾದ ಸ್ಥಳ ನವಧುವಿನಂತೆ ಸಿಂಗಾರ ಗೊಳ್ಳುತ್ತದೆ. ಇಡೀ ವಾತಾವರಣವು ಕಣ್ಮನ ಸೆಳೆಯುತ್ತದೆ. 33 ಹಳ್ಳಿಗಳಿಂದಲೂ ಕೂಡ ಬಂದ ಭಕ್ತರಿಗೆ ಇಲ್ಲಿ ಅನ್ನಸಂತರ್ಪಣೆಯೂ ಕೂಡ ನಡೆಯುತ್ತದೆ. ಕಪಿಲಾ ನದಿಯ ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ. ಇದರಿಂದಾಗಿ ಮಗ್ಗೆ, ಕಾರಾಪುರ, ಬೆಳತ್ತೂರು ಗ್ರಾಮದವರು ಸುಲಭವಾಗಿ ಜಾತ್ರೆಗೆ ಬರಬಹುದು. ಜೊತೆಗೆ ನೀರಿನಲ್ಲಿ ಸ್ನಾನ ಮಾಡುವ ಸವಲತ್ತು ಕೂಡ ಇರುತ್ತದೆ. ಆದರೆ ಇಲ್ಲಿ ಎಚ್ಚರಿಕೆಯಿಂದ ನೀರಿಗೆ ಇಳಿಯಬೇಕು. ಇಲ್ಲಿ ಗೆಸ್ಟ್ ಹೌಸ್ ಕೂಡ ನಿರ್ಮಾಣವಾಗಿದ್ದು, ಉಳಿದುಕೊಳ್ಳುವ ವ್ಯವಸ್ಥೆಯನ್ನು ಕೂಡ ಮುಂಚಿತವಾಗಿ ದೇವಸ್ಥಾನದ ಸಮಿತಿಯೊಂದಿಗೆ ಸಂಪರ್ಕಿಸಿ ಮಾಡಿ ಕೊಳ್ಳಬಹುದಾಗಿದೆ. ಈ ಮಾರ್ಗಕ್ಕೆ ದಿನಾಲೂ ಬಸ್ಸಿನ ವ್ಯವಸ್ಥೆಯು ಕೂಡ ಇದೆ. ಜಾತ್ರೆಯ ಸಮಯದಲ್ಲಿ ಹೆಚ್ಚು ಬಸ್ಸುಗಳನ್ನು ಹಾಕುತ್ತಾರೆ. ಜೊತೆಗೆ ಖಾಸಗಿ ಟೆಂಪೋ, ಆಟೋಗಳ ವ್ಯವಸ್ಥೆಯು ಕೂಡ ಇರುತ್ತದೆ.ಹಲವರು ತಮ್ಮ ದ್ವಿಚಕ್ರದಲ್ಲೂ ಕೂಡ ಈ ದೇವಾಲಯಕ್ಕೆ ಬಂದು ದರ್ಶನ ಪಡೆದು ಹೋಗುವವರು ಇದ್ದಾರೆ.

PC: Internet

ಪ್ರತಿ ಅಮವಾಸ್ಯೆಯಲ್ಲೂ ಕೂಡ ಒಂದು ದಾಸೋಹದ ವ್ಯವಸ್ಥೆಯು ಇಲ್ಲಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಮೂರರಿಂದ ನಾಲ್ಕು ಕ್ವಿಂಟಲ್ ಅನ್ನ ಬೇಯಿಸುತ್ತಾರೆ. ಬೆಳಿಗ್ಗೆ ರುದ್ರಾಭಿಷೇಕ, ಮಹಾಮಂಗಳಾರತಿಯ ನಂತರ ಪ್ರಸಾದ ವ್ಯವಸ್ಥೆಯು ಕೂಡ ಇರುತ್ತದೆ. ಆಷಾಢ ಅಮಾವಾಸ್ಯೆ, ಭೀಮನ ಅಮಾವಾಸ್ಯೆ ದಿನಗಳಲ್ಲೂ ಕೂಡ ಹಲವರ ಭಕ್ತಾದಿಗಳ ನೆರವಿನಿಂದ ದಾಸೋಹ ವ್ಯವಸ್ಥೆಯನ್ನು ಕೂಡ ಸಮರ್ಪಕವಾಗಿ ಮಾಡಲಾಗುತ್ತದೆ. ವಾರದಲ್ಲಿ ಮೂರು ದಿನ ಲಿಂಗಾಭಿಷೇಕ ನಡೆಯುತ್ತದೆ. ಈ ಭೀಮನ ಕೊಲ್ಲಿಯ ಮತ್ತೊಂದು ವಿಶೇಷ ಎಂದರೆ ಸುತ್ತಲೂ ನೀರು ಇದ್ದು, ದ್ವೀಪದಂತೆ ಕಾಣುತ್ತದೆ!. ಆದರೆ ಒಂದೇ ರಸ್ತೆ ಇರುತ್ತದೆ. ಇದಕ್ಕೆ ವಿರುದ್ಧವಾಗಿ ಮಲೆಮಹದೇಶ್ವರ ಬೆಟ್ಟದ ಸುತ್ತಲೂ ಕಾಡಿದ್ದು, ಒಂದೇ ಒಂದು ದಾರಿ ಇರುತ್ತದೆ. ಒಟ್ಟಿನಲ್ಲಿ ಭೀಮನ ಕೊಲ್ಲಿಯಲ್ಲಿ ಮೂರು ಕಡೆ ನೀರು, ಒಂದು ಕಡೆ ರಸ್ತೆ.ಮಹದೇಶ್ವರ ಬೆಟ್ಟದಲ್ಲಿ ಮೂರು ಕಡೆ ಬೆಟ್ಟ, ಒಂದು ಕಡೆ ದಾರಿ. ಈ ಮೂಲಕ ಮಹದೇಶ್ವರರು ನಡೆದಾಡಿದ ಹೆಜ್ಜೆ ಗುರುತುಗಳು ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತದ್ದು. ಇಂತಹ ಇತಿಹಾಸಕ್ಕೆ ಮೊದಲೇ ಹೇಳಿದಂತೆ 400 ವರ್ಷಗಳು ಸಂದಿವೆ. ನಾಲ್ಕು ಕಾರ್ತಿಕ ಸೋಮವಾರಗಳಲ್ಲೂ ಕೂಡ ವಿಶೇಷ ಪೂಜೆಗಳನ್ನು ಕೂಡ ಇಲ್ಲಿ ಮಾಡಲಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಕೂಡ ಜೊತೆಗೆ ಯುಗಾದಿಯ ಸಂದರ್ಭದಲ್ಲಿ ಕೂಡ ಪೂಜೆ ಮಹೋತ್ಸವ ನಡೆಯುತ್ತದೆ. ಪ್ರಥಮ ದ್ವಿತೀಯ ತೃತೀಯ ಎನ್ನುವ ಸೇವಾರ್ಥದಾರರು ಕೂಡ ಹೆಚ್ಚಾಗಿದ್ದಾರೆ.

ಒಟ್ಟಿನಲ್ಲಿ ಭೀಮನಕೊಲ್ಲಿ ದೇವಸ್ಥಾನ ಇತಿಹಾಸದ ಪುಟಗಳಿಂದಲೂ ಕೂಡ ಪ್ರಸಿದ್ಧಿ ಪಡೆದಿದೆ. ಇಲ್ಲಿ ಕೇವಲ ದೇವಸ್ಥಾನದ ಜೊತೆಗೆ ವಿಹಂಗಮವಾದ ಪ್ರವಾಸದ ತಾಣವು ಕೂಡ ಆಗಿರುವುದರಿಂದ ತಾಲೂಕು ಆಡಳಿತ, ಜಿಲ್ಲಾಡಳಿತ ಮತ್ತಷ್ಟು ಸವಲತ್ತುಗಳನ್ನು ಒದಗಿಸಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ. ದೇವಸ್ಥಾನದ ಸಮಿತಿಯವರು ಒಂದು ಟ್ರಸ್ಟ್ ಮೂಲಕ ದೇವಸ್ಥಾನದ ಸುತ್ತಮುತ್ತ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಮಾಡುತ್ತಾ ಬರುತ್ತಿದ್ದಾರೆ. ಹಲವರು ದೊಡ್ಡ ಮೊತ್ತದ ನೆರವನ್ನು ಕೂಡ ನೀಡಿದ್ದಾರೆ. ಇಲ್ಲಿ ಕಲ್ಯಾಣ ಮಂಟಪವು ಚಿಕ್ಕದಾಗಿ ಇರುವುದರಿಂದ ಅನೇಕ ಸರಳ ವಿವಾಹಗಳು ಕೂಡ ನಡೆಯುತ್ತದೆ. ವಿವಾಹ ಸಂದರ್ಭದಲ್ಲಿ ಅಡಿಗೆ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ. ಅದೆಷ್ಟು ಬಡವರ, ಶ್ರೀಮಂತರ ವಿವಾಹ ಕೂಡ ನಡೆಯುತ್ತವೆ. ಅಂದಾಜಿನ ಪ್ರಕಾರ ವರ್ಷಕ್ಕೆ 30ಕ್ಕೂ ಹೆಚ್ಚು ಮದುವೆಗಳು ನಡೆಯುತ್ತವೆ ಎಂದು ದೇವಸ್ಥಾನದ ಸಮಿತಿಯವರು ತಿಳಿಸುತ್ತಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಬರುವ ಭಕ್ತರು ತಾವೇ ಎಲ್ಲಾಸಿದ್ಧತೆಗಳೊಂದಿಗೆ ಈ ದೇವಸ್ಥಾನಕ್ಕೆ ಹಾಜರಾಗಿ ಮದುವೆ, ನಾಮಕರಣ ಇನ್ನಿತರ ಶುಭ ಕಾರ್ಯಗಳನ್ನು ಭಯ- ಭಕ್ತಿಯಿಂದ ಮಾಡಿ, ಒಂದು ದಿನ ಕಳೆದು ಹೋಗುವವರು ಕೂಡ ಇದ್ದಾರೆ.

ಒಟ್ಟಿನಲ್ಲಿ ಎಚ್ ಡಿ ಕೋಟೆ ತಾಲೂಕಿಗೆ ಸೇರಿದ ತುಂಬಸೋಗೆ, ಅಂತರಸಂತೆ, ಮತ್ತು ಭೀಮನ ಕೊಲ್ಲಿ ಜಾತ್ರಾ ಮಹೋತ್ಸವಗಳು ಒಂದು ರೀತಿಯಲ್ಲಿ ಸವಿ ಸವಿ ನೆನಪುಗಳ ಚಿತ್ರವನ್ನು ಮನದಲ್ಲಿ ಮೂಡಿಸುತ್ತವೆ!. ಜಾತ್ರೆಯ ಸಾಂಸ್ಕೃತಿಕ ಸೊಬಗು, ವಿವಿಧತೆಯಲ್ಲಿ ಏಕತೆಯನ್ನು ಸಾರುವ ವೈವಿಧ್ಯತೆಯ ತಾಣ, ಒಂದು ರೀತಿಯಲ್ಲಿ ಸಂಸ್ಕೃತಿಯ ಸಿಂಚನವಾದರೆ, ಅನೇಕರ ಬದುಕಿಗೂ ಕೂಡ ಇದು ದಾರಿದೀಪವಾಗಿದೆ.

ಕಾಳಿಹುಂಡಿ ಶಿವಕುಮಾರ್, ಮೈಸೂರು.

5 Responses

  1. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಬರಹ

  2. ಜಾತ್ರೆ ಈ ಪದವೇ ನಮ್ಮನ್ನು ಹಳೆಯ ನೆನಪನ್ನು ಕೆದಕಿತು..ಇನ್ನು ವಿವರಣೆ ಇನ್ನೂ ನಾವು ಚಿಕ್ಕಂದಿನಲ್ಲಿ ನಮ್ಮೂರ ಸುತ್ತಮುತ್ತಲಿನ ಜಾತ್ರೆ ಗೆ ಹೋಗಿ ಬಂದ ನೆನಪು..ನಿಜವಾಗಿಯೂ ಮನಕ್ಕೆ ಮುದ ತಂದಿತು ಸಾರ್…

  3. ಶಂಕರಿ ಶರ್ಮ says:

    ಜಾತ್ರೆ ಎಂದರೆ ಮನಸ್ಸು ವೇಗವಾಗಿ ಚಿಕ್ಕಂದಿನತ್ತ ದೌಡಾಯಿಸುತ್ತದೆ. ತಾವು ಇತ್ತೀಚೆಗೆ ಮೂರು ಜಾತ್ರೆಗಳ ವೈಭವದಲ್ಲಿ ಪಾಲ್ಗೊಂಡು, ತುಂಬಾ ಚೆನ್ನಾಗಿ ಅನುಭವವನ್ನು ಹಂಚಿಕೊಂಡಿರುವಿರಿ… ಧನ್ಯವಾದಗಳು.

  4. ಮುಕ್ತ c. N says:

    ನಾನು ಸಂತೆಸರಗೂರಿನಲ್ಲಿ ಓದುವಾಗ ಭೀಮನ ಕೊಲ್ಲಿ ಜಾತ್ರೆ ನೋಡಿದ್ದೆ. ಬಾಲ್ಯದದಿನಗಳ ನೆನಪಿಸಿದ ತಮಗೆ ಧನ್ಯವಾದಗಳು.

  5. ಪದ್ಮಾ ಆನಂದ್ says:

    ಜಾತ್ತೆಗಳೊಂದಿಗೆ ಅಂಟಿಕೊಂಡಿರುವ ಬಾಲ್ಯದ ಸುಂದರ ನೆನಪುಗಳೊಂದಿಗೆ ಮೂರು ಜಾತ್ರೆಗಳ ವಿವರಣಾತ್ಮಕ ಲೇಖನ ಮಾಹಿತಿಪೂರ್ಣವಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: