ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 17

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ದಿನ 5:  ‘ಡ ನಾಂಗ್’ ನ ನೆಲದಲ್ಲಿ….  19/09/2024

ಗೋಲ್ಡನ್  ಬ್ರಿಡ್ಜ್ ನಲ್ಲಿ ಮುಂದುವರಿಯುತ್ತಾ ಪಕ್ಕದಲ್ಲಿದ್ದ ವೈವಿಧ್ಯಮಯವಾದ ಥೀಮ್ ಪಾರ್ಕ್ ಗಳತ್ತ ನಡೆದೆವು.  ಅಲ್ಲಿ  ಕಲ್ಲಿನ ಶಿಲ್ಪಗಳಿದ್ದುವು.     ಮನುಷ್ಯರ ತಲೆಬುರುಡೆಯನ್ನು ಹೋಲುವ ದೈತ್ಯಾಕಾರದ  ತಲೆ,  ಕೈ . ಕಾಲುಗಳನ್ನು  ಬಿಡಿಭಾಗಗಳಂತೆ  ನಿರ್ಮಿಸಿದ್ದರು.  ನಮಗಿಂತ ಎತ್ತರವಾದ  ವೈನ್  ಬಾಟಲಿಯ  ರಚನೆಯಿತ್ತು.  ಇನ್ನೊಂದು ಬದಿಯಲ್ಲಿ  ಬಣ್ಣಬಣ್ಣದ ವಿವಿಧ ಹೂಗಳನ್ನು ಕಲಾತ್ಮಕವಾಗಿ  ಬೆಳೆಸಿ, ವಿಶಿಷ್ಟ ಆಕಾರಗಳಲ್ಲಿ ಕತ್ತರಿಸಿದ್ದ ಉದ್ಯಾನವಿತ್ತು.  ರಾಜಕುಮಾರಿಯೊಬ್ಬಳ ಪ್ರತಿಮೆಗೆ  ಹೂವಿನ ಅಲಂಕಾರವಿತ್ತು. ಇಲ್ಲಿಗೆ ಕಪಲ್ ಗಾರ್ಡನ್ ಎಂಬ ಹೆಸರು.  ಅಲ್ಲಿರುವ ಕೆಲವು ಪ್ರತಿಮೆಗಳ ಜೊತೆಗೆ ಫೊಟೊ ಕ್ಲಿಕ್ಕಿಸಲು ಅವಕಾಶವಿತ್ತು.  ‘ಈಡನ್ ಗಾರ್ಡನ್ ‘ಎಂಬಲ್ಲಿ  ವಿಶಾಲವಾದ ಜಾಗದಲ್ಲಿ ನೆಲದಲ್ಲಿ  ನವಿಲಿನ ಗರಿಗಳಂತೆ ವಿನ್ಯಾಸ ಮೂಡಿಸಿದ್ದರು.  ಇನ್ನೊದೆಡೆ ‘ಆರ್ಕಿಡ್  ಗಾರ್ಡನ್’ ಇತ್ತು . 

ಆಸುಪಾಸಿನಲ್ಲಿದ್ದ  ಕೆಲವು   ಕಟ್ಟಡಗಳು 200 ವರ್ಷಕ್ಕೂ ಹಳೆಯದಾಗಿದ್ದು ಈಗಲೂ ಸುಸ್ಥಿತಿಯಲ್ಲಿವೆ.   ಫ್ರೆಂಚ್ ವರ್ತಕರು ಇಲ್ಲಿ ವಾಸವಾಗಿದ್ದರಂತೆ. ಇಂದಿಗೂ ಅಲ್ಲಿ ‘ವೈನ್ ಯಾರ್ಡ್’ ಇದೆ.  ವಾತಾವರಣದಲ್ಲಿ ಹಿತವಾದ ಸುಮಧುರ ಸಂಗೀತ ತೇಲಿ ಬರುತ್ತಿತ್ತು. ಜೊತೆಗೆ ಮಂಜಿನ ಲೇಪನವೂ ಸೇರಿ ನಮಗೆ  ಯುರೋಪಿನ ನಗರಿಯಲ್ಲಿದ್ದ ಅನುಭವವನ್ನು ಕೊಡುತ್ತಿದ್ದುವು.   ಈ ಸುಂದರ ದೃಶ್ಯಗಳನ್ನು  ಮನಸ್ಸಿನಲ್ಲೂ, ಕ್ಯಾಮರಾದಲ್ಲೂ ಸೆರೆ  ಹಿಡಿಯುತ್ತಾ, ಅನತಿ ದೂರದಲ್ಲಿರುವ  ‘ಲಿನ್ ಉಂಗ್ ‘ ಪಗೋಡಾಕ್ಕೂ ಭೇಟಿ ಕೊಟ್ಟೆವು.

ಅನಂತರ ಟೋಮಿಯ ಮಾರ್ಗದರ್ಶನದಲ್ಲಿ ಇನ್ನೊಂದು ಕೇಬಲ್ ಕಾರ್ ಸ್ಟೇಷನ್ ಗೆ ಬಂದೆವು. ಇಲ್ಲಿಂದ  ಫ್ರೆಂಚ್ ವಿಲೇಜ್   ಎಂಬಲ್ಲಿಗೆ  ಕೇವಲ ಐದು ನಿಮಿಷಗಳ  ಕೇಬಲ್ ಕಾರಿನ ಪ್ರಯಾಣವಿತ್ತು.  ಇಲ್ಲಿ ಚರ್ಚ್,  ಫ್ರೆಂಚ್ ಶೈಲಿಯ ಲೋಹದ ಮಾನವ ಶಿಲ್ಪಗಳು, ಕಲ್ಲುಹಾಸಿನ ರಸ್ತೆ ಇವೆಲ್ಲವೂ ಯುರೋಪಿನ ನಗರಿಯೊಂದನ್ನು ಅನಾಮತ್ತಾಗಿ ಎತ್ತಿ ತಂದು ಈ ಬೆಟ್ಟದ ಮೇಲೆ ಇರಿಸಿದ ಹಾಗೆ ಕಾಣಿಸುತ್ತಿದ್ದುವು.    ಅಲ್ಲಿಯ ಮಾರ್ಕೆಟ್ ನ ಮಧ್ಯಭಾಗದಲ್ಲಿ    ಕಲ್ಲಿನ ಪಿಟೀಲು, ಗೋಲಗಳು, ಕಲ್ಲಿನ ಪ್ರಾಣಿಗಳು, ವಾಹನಗಳ ಪ್ರತಿಕೃತಿ …ಹೀಗೆ ವಿಶಿಷ್ಟ  ರಚನೆಗಳಿದ್ದುವು. ನೂರಾರು  ವಿವಿಧ ಗಾತ್ರದ, ಹಲವು ಬಣ್ಣದ ಸಿಹಿಗುಂಬಳಕಾಯಿಗಳನ್ನು ಜೋಡಿಸಿದ್ದರು.   ಇಷ್ಟೂ ಸಿಹಿಗುಂಬಳಕಾಯಿಗಳು ತಾಜಾ ತರಕಾರಿಗಳೇ  ಅಥವಾ ಕಲ್ಲಿನ ಶಿಲ್ಪಕ್ಕೆ ಬಣ್ಣ ಬಳಿದುವೇ ಎಂದು ಗೊತ್ತಾಗಲಿಲ್ಲ.  ಮಾರ್ಗದರ್ಶಿಯನ್ನು ಕೇಳಿದಾಗ ‘ ದೆ ಆರ್ ಪ್ರಿಪಾರಿಂಗ್ ಫಾರ್ ಹಾಲೋವೀನ್ ಡೇ ‘ ಎಂದ.  ಸಿಹಿಗುಂಬಳಕಾಯಿಗಳನ್ನು ಮುಟ್ಟಬಾರದು ಎಂಬ ಫಲಕ ಇದ್ದರೂ ಒಂದೆರಡು ಮಹಾಗಾತ್ರದ ಸಿಹಿಗುಂಬಳಕಾಯಿಗಳನ್ನು ಮೆಲ್ಲಗೆ  ತಟ್ಟಿ ನೋಡಿದೆ. ಕಲ್ಲಿನವು ಅನಿಸಿತು! ಚಿಕ್ಕ ಪುಟ್ಟ   ಸಿಹಿಗುಂಬಳಕಾಯಿಗಳು ತಾಜಾ ತರಕಾರಿಯಂತೆ ಕಾಣಿಸಿದುವು.   ಅಲ್ಲಿದ್ದ  ಕೆಲವು ಅಂಗಡಿ ಮುಂಗಟ್ಟುಗಳು 200 ವರ್ಷಕ್ಕೂ ಹಳೆಯದಾಗಿದ್ದು,  ಶ್ರೀಮಂತ ಫ್ರೆಂಚ್ ವ್ಯಾಪಾರಿಗಳು ಅಲ್ಲಿ ವಾಸಿಸುತ್ತಿದ್ದರು ಹಾಗೂ ಇಲ್ಲಿಂದಲೇ  ರಫ್ತು  ವ್ಯಾಪಾರ ಮಾಡುತ್ತಿದ್ದರಂತೆ. ಈಗ ಅವುಗಳಲ್ಲಿ ಕೆಲವು ಸ್ಥಳೀಯ ಆಡಳಿತ ಕಛೇರಿಗಳಾಗಿವೆ.

ಫ್ರೆಂಚರು ವಿಯೆಟ್ನಾಂ ಅನ್ನು ತಮ್ಮ ವಸಾಹತನ್ನಾಗಿ ಮಾಡಿಕೊಂಡು ಸ್ಥಳೀಯರನ್ನು ಆಳಿದ್ದರು.  ಯುದ್ದವನ್ನೂ ಮಾಡಿದ್ದರು.   ಇನ್ನು ಅಮೇರಿಕದವರು  ದಕ್ಷಿಣ ವಿಯೆಟ್ಣಾಂಗೆ  ಬೆಂಬಲ ಕೊಡುತ್ತೇವೆಂದು ಹೇಳಿಕೊಂಡು,  ರಷ್ಯಾ ಬೆಂಬಲಿತ ಉತ್ತರ ವಿಯೆಟ್ನಾಂನವರ ವಿರುದ್ದ ಯುದ್ದ ಮಾಡುವ ಮೂಲಕ ಪೌರಾತ್ಯ ದೇಶದಲ್ಲಿ  ರಷ್ಯಾದ ಪ್ರಾಧಾನ್ಯತೆ ಇರಬಾರದು ಎಂಬ ತಮ್ಮ ಉದ್ದೇಶವನ್ನು  ನೆರವೇರಿಸಲಿ ಹಣಾಹಣಿ ಯುದ್ದ ಮಾಡಿದರು. ಇವೆರಡೂ ಯುದ್ದಗಳ ಒಟ್ಟಾರೆ ಪರಿಣಾಮ  ವಿಯೆಟ್ನಾಂನಲ್ಲಿ  ಎರಡು ದಶಕಕ್ಕೂ ಹೆಚ್ಚು ಕಾಲ ನಡೆದ ಒಂದಿಲ್ಲೊಂದು ಯುದ್ದ ಹಾಗೂ ಸ್ಠಳೀಯರ ಸಾವು, ನೋವು.  ನಾವು ಮಾತನಾಡಿಸಿದ ಪ್ರತಿಯೊಬ್ಬರ ಮನೆಯವರೂ ಯುದ್ದದಲ್ಲಿ ಭಾಗಿಯಾಗಿದ್ದರು ಅಥವಾ ಹತರಾಗಿದ್ದರು.  ಹೀಗಿದ್ದೂ, ಫ್ರೆಂಚ್ ಸರಕಾರವನ್ನು ‘ನೆನಪಿಸಿಕೊಳ್ಳುವ’  ರೀತಿ, ಅವರ ಮಾದರಿಯ ನಗರಿಯನ್ನು ನಿರ್ಮಿಸಿ ಅದನ್ನೂ  ಮುಖ್ಯ ಪ್ರವಾಸಿತಾಣವನ್ನಾಗಿ ಮಾಡಿ ಆದಾಯ ಗಳಿಸುತ್ತಿರುವ ವಿಯೆಟ್ನಾಂ ಜನರು ಬಲು ಜಾಣರು ಅನಿಸಿತು.   ಈ ಬಗ್ಗೆ ಮಾರ್ಗದರ್ಶಿಯನ್ನು ಕೇಳಿದಾಗ ಆತ ಹೇಳಿದುದೇನೆಂದರೆ, ‘ನಾವು ಫ್ರೆಂಚರನ್ನಾಗಲಿ, ಅಮೇರಿಕಾದವರನ್ನಾಗಲಿ ದೂಷಿಸುವುದಿಲ್ಲ.  ಫ್ರೆಂಚರ ವಾಸ್ತುಶಿಲ್ಪ ನಮಗೆ ಪ್ರಯೋಜನಕಾರಿಯಾಗಿದೆ.  ನಮ್ಮ ಈಗಿನ ಸಾಧನೆಗೆ ಹೆಮ್ಮೆ ಪಡುತ್ತೇವೆ ಹಾಗೂ ಇದಕ್ಕೆ ಕಾರಣರಾದ, ತಮ್ಮ ಮನೆಯ ಯೋಧರನ್ನೂ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಕಾರಣರಾದ ನಾಯಕ ‘ ‘ಹೊ ಚು ಮಿನ್ಹ್’ ಅವರನ್ನೂ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇವೆ. ನಾವು ಅವರನ್ನು ಕ್ಷಮಿಸುತ್ತೇವೆ, ಆದರೆ ಮರೆಯುವುದಿಲ್ಲ’. ಈಗ ಅವರಿಗೆ ನಿಮ್ಮ ದೇಶಕ್ಕೆ ಬರಲು ವೀಸಾ ಸಿಗುತ್ತದೆಯೇ ಎಂದಾಗ,  ‘ ಯಸ್, ಅಫ್ ಕೋರ್ಸ್. ಮೆನಿ  ಪೀಪಲ್ ಕಮ್, ವಿ ವೆಲ್ಕಮ್, ವಿ ಫೊರ್ ಗಿವ್- ಬಟ್ ನಾಟ್  ಫೊರ್ ಗೆಟ್ ‘ ಎಂದ.  ಎಳೆಯ ವಯಸ್ಸಿಗೆ  ಎಂತಹಾ ಪ್ರಬುದ್ಧ ನಡವಳಿಕೆ! ಶಾಲಾ ದಿನಗಳಲ್ಲಿಯೇ ತಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಗ್ಗೆ ಸ್ಪಷ್ಟ ಚಿತ್ರಣವನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸಿದುದರ ಸತ್ಪರಿಣಾಮವಿದು ಅನಿಸಿತು.

French Village , Ba Na Hills, Vietnam PC: Internet

ಇವುಗಳನ್ನು  ನೋಡಿದ ಮೇಲೆ ಬಾ ನಾ ಬೆಟ್ಟದಲ್ಲಿರುವ  ದೊಡ್ಡದಾದ ರೆಸ್ಟಾರೆಂಟ್ ಬಳಿ ನಮ್ಮನ್ನು ಊಟಕ್ಕಾಗಿ ಕರೆದೊಯ್ದ.  ನೀವು ಇಲ್ಲಿ ಊಟ ಮಾಡಿ, ಎಂದು ಹೇಳಿ ನಮಗೆ  ಟಿಕೆಟ್ ತೆಗೆದು ಕೊಟ್ಟು  ತಾನು ಬೇರೆ ಎಲ್ಲಿಗೋ ಹೋಗಿ ಊಟ ಮಾಡಿ ಬರುತ್ತೇನೆಂದ.  ಈ ರೆಸ್ಟಾರೆಂಟ್ ನಲ್ಲಿ  ವಿವಿಧ ದೇಶಗಳ ಬಹಳಷ್ಟು ಪ್ರವಾಸಿಗರಿದ್ದರು.  ನಾವು ಒಳ ಹೋಗುತ್ತಿದ್ದಂತೆ ಬಾಗಿಲಿನಲ್ಲಿ ಇದ್ದ  ಎಳೆ ಯುವತಿಯೊಬ್ಬಳು ‘ ಯು ಕ್ಯಾನ್ ಈಟ್ ಫ್ರಮ್ ಎನಿ ಕೌಂಟರ್ , ಬಟ್ ಡೋಂಟ್ ವೇಸ್ಟ್ ಫುಡ್’ ಎಂದು ಒಳಗೆ ಹೋಗಲು ಅನುಮತಿ ದಾರಿ ತೋರಿಸಿದಳು.  ಇವಳ್ಯಾಕೆ ಹೀಗೆ ಎಚ್ಚರಿಕೆ ಸಮೇತ ಹೀಗೆ ಸ್ವಾಗತಿಸಬೇಕು ?  ಅಲ್ಲಿದ್ದ ಹಲವಾರು ವಿವಿಧ ದೇಶಗಳ  ಜನರು ಸ್ಥಳೀಯ ವಿಯೆಟ್ನಾಮಿಗರಿಗೆ ಹೋಲಿಸದರೆ  ನಾವು ‘ಗಲಿವರ್ /ಗಲಿವರಿಣಿ’ ಯಂತೆ ಇದ್ದಿದ್ದು ಹೌದಾದರೂ, ನಾನೇನು ಆಕೆಗೆ ಬಕಾಸುರನ ವಂಶದವಳಂತೆ  ಅಥವಾ ಆಹಾರವನ್ನು ಚೆಲ್ಲಾಡುವವಳಂತೆ  ಕಾಣಿಸಿದೆನೆ ಎನಿಸಿ  ಒಂತರಾ ಪೆಚ್ಚಾಯಿತು.  ಏನೂ ಉತ್ತರಿಸದೆ ಒಳಗೆ ಬಂದಾಯಿತು. 

ಅಲ್ಲಿದ್ದ   ಹಲವಾರು ಕೌಂಟರ್ ಗಳಲ್ಲಿ ಇದ್ದ ಬಫೆಟ್ ಊಟವನ್ನು ನೋಡಿಯೇ ಸುಸ್ತಾದೆ.  ವಿಯೆಟ್ನಾಂನ ಆಹಾರ, ಕಾಂಟಿನೆಂಟಲ್ ಫುಡ್,  ಏಷಿಯನ್ ಫುಡ್, ಚೈನೀಸ್ ಫುಡ್, ಕೊರಿಯನ್ ಫುಡ್ ,  ಟರ್ಕಿ ಫುಡ್, ಜಪಾನ್ ಫುಡ್ , ಇಂಡಿಯನ್ ಫುಡ್, ಜ್ಯೂಸ್ ಗಳು, ಹಣ್ಣುಗಳು, ನೂಡಲ್ಸ್ ಗಳು, ಕುಕೀಸ್…ಹೀಗೆ  ಕನಿಷ್ಟ 400 ಬಗೆಯ ಆಹಾರ ಅಲ್ಲಿ ಇದ್ದಿರಬಹುದು.   ‘ರೈಸ್ ಪಾರಿಡ್ಜ್’ ಎಂಬ ಹೆಸರಿನಲ್ಲಿ  ಬೆಳ್ತಿಗೆ ಅಕ್ಕಿಯ ಅನ್ನ-ಗಂಜಿ ಕೂಡಾ ಇತ್ತು.  ಈಗ ನನಗೆ ಬಾಗಿಲಿನಲ್ಲಿ ಎಚ್ಚರಿಕೆ ಕೊಟ್ಟ ಚೆಲುವೆಯ ಮಾತು ನೆನಪಾಯಿತು. ಬಹುಶ: ಎಲ್ಲಾ ಆಹಾರವನ್ನು ರುಚಿ ನೋಡುವ ತವಕದಲ್ಲಿ ತಟ್ಟೆಗೆ ಹಾಕಿಕೊಂಡು ವ್ಯರ್ಥ ಮಾಡಿದ್ದನ್ನು ಆ ರೆಸ್ಟಾರೆಂಟ್ ನವರು ಗಮನಿಸಿದ್ದಿರಬಹುದು. ಹಾಗಾಗಿ ಈ ಎಲ್ಲರಿಗೂ  ಎಚ್ಚರಿಕೆ ಕೊಟ್ಟಿರಬಹುದು ಅಂದುಕೊಂಡೆ.  ಊಟ ಚೆನ್ನಾಗಿತ್ತು. ಇಬ್ಬರೂ  ಬಗೆಬಗೆಯಾದ ಆಹಾರದಲ್ಲಿ  ಬೇಕಿದ್ದನ್ನು ಬೇಕಾದಷ್ಟೇ ಹಾಕಿಕೊಂಡು  ಊಟ ಮಾಡಿದೆವು. 

ನಾವು ಹೊರಗೆ ಬಂದು ಮಾರ್ಗದರ್ಶಿಗೆ ಫೋನ್ ಮಾಡಿದಾಗ ಆತ ಬಂದು ನಮ್ಮನ್ನು ಇನ್ನೊಂದು ಕೇಬಲ್ ಕಾರ್ ಸ್ಟೇಷನ್ ಗೆ ಕರೆದೊಯ್ದ. ಈ ಕೇಬಲ್ ಕಾರ್ ಸ್ಟೇಷನ್ ಮೂಲಕ ನಾವು  ಬಾ ನಾ ಬೆಟ್ಟದಿಂದ ಕೆಳಗಿಳಿದೆವು.  ಆಗ ನಾವು ಕುಳಿತಿದ್ದ ಎಂಟು ಜನ ಕೂರಬಹುದಾದ 6 x 6 ಅಡಿ ಇರಬಹುದಾದ ಆ ಕೇಬಲ್ ಕಾರಿನಲ್ಲಿ  ಒಬ್ಬರು ಬ್ರೆಜಿಲ್ ನವರು, ನಾಲ್ವರು  ಕೊರಿಯಾ ದೇಶದವರು, ನಾವಿಬ್ಬರು ಭಾರತೀಯರು, ಮಾರ್ಗದರ್ಶಿ ವಿಯೆಟ್ನಾಂ ದೇಶದವ.  15 ನಿಮಿಷಗಳ ಕೇಬಲ್ ಕಾರಿನ ಪ್ರಯಾಣದ ಸಮಯದಲ್ಲಿ ಪರಸ್ಪರ ಪರಿಚಯಿಸಿಕೊಂಡೆವು. ಪರಸ್ಪರ ಹವ್ಯಾಸಗಳನ್ನು ಕೇಳಿ ತಿಳಿದು ಮೆಚ್ಚಿಕೊಂಡೆವು. ಪ್ರಪಂಚ ಎಷ್ಟು  ಕಿರಿದಾಗಿದೆ ಅನಿಸುವುದು ಇಂತಹ ಸನ್ನಿವೇಶದಲ್ಲಿ , ಅಲ್ಲವೇ?

ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=41977

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು

10 Responses

  1. ನಯನ ಬಜಕೂಡ್ಲು says:

    Beautiful. ಪೆಚ್ಚಾಗಿಸುವ ಸಂಧರ್ಭಗಳನ್ನೂ ಪಾಸಿಟಿವ್ ದೃಷ್ಟಿಯಿಂದ ತೆಗೆದುಕೊಳ್ಳುವ ನಿಮ್ಮ ದೃಷ್ಟಿ ಕೋನ ಇಷ್ಟ ಆಯಿತು

  2. ಪ್ರವಾಸ ನಿಮ್ಮ ಜೊತೆಗೆ ನಾವು ಮಾಡುತಿದ್ದೇವೆಎನ್ನುವಷ್ಟು ಆಪ್ತವಾಗಿ ಮೂಡಿಬರುತ್ತಿದೆ.. ಗೆಳತಿ ಹೇಮಾಪೂರಕ ಚಿತ್ರ ಗಳು ಸೂಪರ್..

  3. ಶಂಕರಿ ಶರ್ಮ says:

    ವೈವಿಧ್ಯಮಯ ಹೂತೋಟಗಳು, ಪ್ರತಿಕೃತಿಗಳು, ತರೆಹೇವಾರಿ ತಿನಿಸುಗಳು… ಕೇಬಲ್ ಕಾರು ಅನುಭವ… ಎಲ್ಲವನ್ನೂ ಒಳಗೊಂಡ ಬರೆಹವು ಆಪ್ತವಾಗಿದ್ದು ಅಗತ್ಯ ಮಾಹಿತಿಗಳನ್ನೂ ಒಳಗೊಂಡಿದೆ ಧನ್ಯವಾದಗಳು ಮಾಲಾ ಅವರಿಗೆ.

  4. ಪ್ರವಾಸ ಕಥನದಲ್ಲಿ ಹೂ ತೋಟದ ವರ್ಣನೆಯ ಜೊತೆ ಜೊತೆಗೆ ಫ್ರೆಂಚರ , ಅಮೆರಿಕನರ ಜೊತೆ ನಡೆದ ಯುದ್ಧಗಳು, ವಿಯೆಟ್ನಾಂ ನವರ ಪ್ರತಿಕ್ರಿಯೆ ಚೆನ್ನಾಗಿ ಮೂಡಿ ಬಂದಿದೆ

  5. ಪದ್ಮಾ ಆನಂದ್ says:

    ಚೆಂದದ ವಿವರಣೆಯೊಂದಿಗೆ ಪ್ರವಾಸ ಕಥನ ಆಪ್ತವಾಗಿಯೂ ಮೂಡಿ ಬರುತ್ತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: