ಕಾದಂಬರಿ : ತಾಯಿ – ಪುಟ 10

Share Button

ರಾಜಲಕ್ಷ್ಮಿಗೆ ಸಮಾಧಾನವಾಯಿತು. ನೀಲಕಂಠ ನೋಡಿಕೊಳ್ಳುತ್ತಿರುವ ವೃದ್ಧಾಶ್ರಮದವರನ್ನು ಹೇಗೆ ಕರೆದೊಯ್ಯುವುದು?” ಎಂಬ ಸಮಸ್ಯೆ ಎದುರಾಯಿತು.
“ಅವರನ್ನು ಕರೆದುಕೊಂಡು ಬರುವ ಜವಾಬ್ಧಾರಿ ನನ್ನದು. ಯೋಚಿಸಬೇಡಿ” ಎಂದರು ಗೌರಮ್ಮ.

ಒಂದು ತಿಂಗಳ ಒಳಗೆ ಎಲ್ಲಾ ಏರ್ಪಾಡಾಡುಗುವುದು ಸಾಧ್ಯವಿರಲಿಲ್ಲ. ‘ಭರತ್ ಬಂದು ಹೋದ ನಂತರ ಶಿಫ್ಟ್ ಆಗುವುದು’ ಎಂದುಕೊಂಡರು ರಾಜಲಕ್ಷ್ಮಿ.
ಹೇಳಿದ್ದಂತೆ ಭರತ್-ಇಂದಿರಾ ಆ ತಿಂಗಳ ಕೊನೆಯಲ್ಲಿ ಬಂದರು. ಒಂಟಿಕೊಪ್ಪಲ್ ಮನೆ ರಾಜಲಕ್ಷ್ಮಿ ಹೆಸರಿನಲ್ಲಿ ರಿಜಿಸ್ಟ್ರೇಷನ್ ಆಯಿತು. ಅವರಿಬ್ಬರೂ ಬಾಂಬೆಗೆ ಹೊರಡಬೇಕೆಂದುಕೊಳ್ಳುತ್ತಿದ್ದಾಗ ರಾಜಲಕ್ಷ್ಮಿ ಹೇಳಿದರು “ನಾಳೆ ನೀವಿಬ್ಬರೂ ನಮ್ಮ ಆಶ್ರಮಕ್ಕೆ ಊಟಕ್ಕೆ ಬರಬೇಕು.”
“ಖಂಡಿತಾ ಬರ‍್ತೀವಿ. ಊಟ ಮಾಡ್ತೀವಿ. ಆದರೆ ನೀವು ನಮಗೆ ಯಾವ ಉಡುಗೊರೆಯೂ ಕೊಡಬಾರದು. ಊಟಾನೂ ಸಿಂಪಲ್ ಆಗಿರಲಿ.”
“ಯಾಕೆ ಹಾಗಂತೀರಾ?”
“ಇಂದಿರಾ ಸೀರೆ ಉಡುವುದು ಕಡಿಮೆ. ರಜನಿ ಉಪಯೋಗಿಸುತ್ತಿದ್ದ ಬೆಳ್ಳಿ ಪಾತ್ರೆಗಳು ಬೇಕಾದಷ್ಟಿವೆ. ನಮಗೆ ಯಾವ ಉಡುಗೊರೆಯೂ ಬೇಡ. ನಿಮ್ಮ ಪ್ರೀತಿ, ವಿಶ್ವಾಸ ಸಾಕು.”
“ಆಗಲಿ. ನಾಳೆ 12 ಗಂಟೆಗೆ ಬನ್ನಿ” ಎಂದರು ರಾಜಲಕ್ಷ್ಮಿ.

ಮರುದಿನರಾಜಲಕ್ಷ್ಮಿ ತಾವೇ ಖುದ್ದಾಗಿ ನಿಂತು ಭರತ್ ತುಂಬಾ ಇಷ್ಟಪಡುವ ಕೂಟು, ಸಾರು ಮಾಡಿಸಿದರು.
“ಸ್ವೀಟ್ ಏನು ಮಾಡಲಿ?”
“ಶಾವಿಗೆ ಪಾಯಸ ಮಾಡಿ. ಭರತ್‌ಗೆ ಅರಳು ಸಂಡಿಗೆ ಇಷ್ಟ. ಹಪ್ಪಳ, ಸಂಡಿಗೆ ಕರೆದರೆ ಸಾಕು.”
“ಅಮ್ಮ ಪಲ್ಯ, ಗೊಜ್ಜು ಏನೂ ಬೇಡವಾ?”
“ಸೌತೆಕಾಯಿ, ಟೊಮ್ಯಾಟೋ ಹಾಕಿ ಮೊಸರುಬಜ್ಜಿ ಮಾಡಿ.”
“ಸರಿ ರಾಜಮ್ಮ” ಎಂದರು ಗೌರಮ್ಮ.
ಸರಿಯಾಗಿ 12 ಗಂಟೆಯ ಹೊತ್ತಿಗೆ ಭರತ್ ಇಂದಿರಾ ಜೊತೆ ಬಂದ. ಇಂದಿರಾ ಒಂದು ರೌಂಡ್ ಆಶ್ರಮದ ಎಲ್ಲಾ ಕೋಣೆಗಳಿಗೂ ಹೋಗಿ ಬಂದಳು.

ನಂತರ ಎಲ್ಲರೂ ಊಟಕ್ಕೆ ಕುಳಿತರು. ಗೌರಮ್ಮ ಚಿನ್ಮಯಿ ಉಪಚಾರ ಮಾಡುತ್ತಾ ಬಡಿಸಿದರು. ಭರತ್ ಇಂದಿರಾ ತುಂಬಾ ಖುಷಿಯಿಂದ ಅಡಿಗೆ ಹೊಗಳುತ್ತಾ ಊಟ ಮಾಡಿದರು. ಊಟದ ನಂತರ ಎಲ್ಲರೂ ಡ್ರಾಯಿಂಗ್ ರೂಂನಲ್ಲಿ ಸೇರಿದರು. ಭರತ್-ಇಂದಿರಾ ತಮ್ಮ ಮುಂದಿನ ಪ್ರೋಗ್ರಾಂ ಬಗ್ಗೆ ಹೇಳುತ್ತಿದ್ದ. ಇಂದಿರಾ ಅಯೋಧ್ಯಾಗೆ, ಬನಾರಸ್‌ಗೆ ನೋಡಿ ವಾಪಸ್ಸಾಗುವುದೆಂದು ಹೇಳುತ್ತಿದ್ದಳು. ಅದೇ ವೇಳೆಯಲ್ಲಿ ಭುವನೇಶ್ವರಿ 2 ಪ್ಯಾಕೆಟ್ ತಂದು ಭರತ್ ಇಂದಿರಾಗೆ ಕೊಟ್ಟರು.
“ಏನಿದು?”
“ತೆಗೆದು ನೋಡಿ.”
ಅವರು ತಮ್ಮ ಕೈಯ್ಯಲ್ಲಿದ್ದ ಪ್ಯಾಕೆಟ್ ಬಿಚ್ಚಿದರು. ಕಡುನೀಲಿ ಬಣ್ಣದ ಸ್ವೆಟರ್‌ಗಳಿದ್ದವು.
“ನಾನು ನನ್ನ ಕೈಯಾರೆ ಹಾಕಿದ ಸ್ವೆಟರ್‌ಗಳಿವು. ನನಗೂ ನಿಮ್ಮ ವಯಸ್ಸಿನ ಮಗ-ಸೊಸೆ ಇದ್ದಾರೆ. ಆದರೆ ಅವರಿಗೆ ನಾನು ಬೇಡ. ನಿಮ್ಮನ್ನು ಕಳೆದ ಸಲ ನೋಡಿದಾಗಲೇ ನಿಮಗೆ ಸ್ವೆಟರ್ ಕೊಡಬೇಕು ಅನ್ನಿಸಿತ್ತು. ಅದಕ್ಕೆ ಹಾಕಿದೆ….”
ಭರತ್-ಇಂದಿರಾ ತಕ್ಷಣ ಸ್ವೆಟರ್ ಹಾಕಿಕೊಂಡು ಹೇಳಿದರು. “ತುಂಬಾ ಚೆನ್ನಾಗಿದೆ ಅಮ್ಮಾ ತುಂಬಾ ಥ್ಯಾಂಕ್ಸ್.”
ಭುವನೇಶ್ವರಿಯವರ ಮುಖ ಅರಳಿ ಕಣ್ಣುಗಳಲ್ಲಿ ನೀರು ತುಂಬಿಕೊಂಡವು.

ಭರತ್-ಇಂದಿರಾ ಅರ್ಧಗಂಟೆಯ ನಂತರ ಹೊರಟುನಿಂತರು. ರಾಜಲಕ್ಷ್ಮಿಗೆ ಮಗಳು ನೆನಪಾದಳು.
“ಅಮ್ಮಾ, ನಾವಿನ್ನು ಹೊರಡುತ್ತೇವೆ. ನಿಮ್ಮನ್ನು ನೋಡಿ ನನಗೆ ಹೆಮ್ಮೆ ಅನ್ನಿಸ್ತಿದೆ. ಈ ವಯಸ್ಸಿನಲ್ಲಿ ಧೈರ್ಯ ತಂದುಕೊಂಡು ವೃದ್ಧಾಶ್ರಮ ಶುರು ಮಾಡ್ತಿದ್ದೀರ….”
“ನಿಮ್ಮೆಲ್ಲರ ಸಹಕಾರವಿಲ್ಲದಿದ್ದರೆ ನಾನು ಮಾಡಲು ಸಾಧ್ಯವಿತ್ತಾ?”
“ನೀವು ಮನಸ್ಸು ಮಾಡಿದ್ದರಿಂದ ತಾನೆ ನಾವು ಸಹಕಾರ ನೀಡಿದ್ದು. ನಿಮ್ಮ ಮನಸ್ಸು ತುಂಬಾ ದೊಡ್ಡದು. ಆದ್ದರಿಂದ ನಿಮ್ಮ ಹಣ ಖರ್ಚು ಮಾಡಿ ವೃದ್ಧಾಶ್ರಮ ಆರಂಭಿಸ್ತಿದ್ದೀರ. ಹತ್ತು ಜನರಿಗೆ ಸಹಾಯ ಮಾಡಬೇಕು ಎನ್ನುವ ಮನಸ್ಸು ಎಲ್ಲರಿಗೂ ಇರಲ್ಲ. ನಿಮಗಿಲ್ಲಿ ಒಳ್ಳೆಯ ಸ್ನೇಹಿತರಿದ್ದಾರೆ. ಅವರ ಸಹಕಾರದಿಂದ ನೀವು ಖಂಡಿತಾ ಈ ವೃದ್ಧಾಶ್ರಮ ಚೆನ್ನಾಗಿ ನಡೆಸುತ್ತೀರ ಎನ್ನುವ ನಂಬಿಕೆ ನಮಗಿದೆ. ಆಲ್ ದ ಬೆಸ್ಟ್.”
ರಾಜಲಕ್ಷ್ಮಿಯ ಹೃದಯ ತುಂಬಿ ಬಂತು. ಅವರಿಗೆ ಮಾತನಾಡಲಾಗಲಿಲ್ಲ.

“ಅಮ್ಮಾ ವೃದ್ಧಾಶ್ರಮಕ್ಕೆ ನಮ್ಮದೊಂದು ಕಿರುಕಾಣಿಕೆ. ದಯವಿಟ್ಟು ಈ ಚೆಕ್ ತೆಗೆದುಕೊಳ್ಳಿ. ಬೇಡಾಂತ ಮಾತ್ರ ಹೇಳಬೇಡಿ.”
ಭರತ್ ಹತ್ತು ಲಕ್ಷ ರೂಪಾಯಿಯ ಚೆಕ್ ನೀಡಿದ. ರಾಜಲಕ್ಷ್ಮಿ ಮರುಮಾತನಾಡದೆ ತೆಗೆದುಕೊಂಡರು.

ಮರುದಿನ ಬೆಳಿಗ್ಗೆ ತಿಂಡಿ ತಿನ್ನುವಾಗ ಮಧುಮತಿ ಕೇಳಿದರು.
“ರಾಜಲಕ್ಷ್ಮಿ ನೀಲಕಂಠನ ವೃದ್ಧಾಶ್ರಮದಿಂದ ಆ ಹೆಂಗಸರನ್ನು ಹೇಗೆ ಕರೆದುಕೊಂಡು ಬರ‍್ತೀರ.”
ರಾಜಲಕ್ಷ್ಮಿ ಉತ್ತರ ಕೊಡುವ ಮೊದಲೇ ಗೌರಮ್ಮ ಹೇಳಿದರು.
“ಆ ವಿಚಾರ ನನನಗೆ ಬಿಡಿ. ಆ ನೀಲಕಂಠನಿಗೆ ತಿಳಿಯದ ಹಾಗೆ ವಾರಕ್ಕೆ 5 ಜನರನ್ನು ಕರೆದು ತಂದರಾಯ್ತು ಬಿಡಿ.”
“ಆ ತರಹ ಕರೆತರೋದು ಬೇಡ. ಯಾವುದೇ ಕೆಲಸ ಮಾಡಿದರೂ ವ್ಯವಸ್ಥಿತವಾಗಿ ಮಾಡಬೇಕು. ನಾವು ಯೋಚಿಸದೆ ಕೆಲಸ ಮಾಡಿದರೆ ನಾಳೆ ತೊಂದರೆಗೆ ಸಿಗಬೇಕಾಗುತ್ತದೆ.”
“ಸರಿಯಾಗಿ ಹೇಳಿದ್ರಿ ರಾಜಲಕ್ಷ್ಮಿ. ನೀವು ಹೇಗೆ ಅವರನ್ನು ಕರೆತರಬಹುದೂಂತ ಯೋಚಿಸಿ. ನಾವು ಖಂಡಿತಾ ಸಹಕಾರ ಕೊಡ್ತೀವಿ.”

ರಾಜಲಕ್ಷ್ಮಿ ಹೋಗಿ ಮಂಚದ ಮೇಲೆ ಉರುಳಿಕೊಂಡರು. ತಲೆ ತುಂಬಾ ಯೋಚನೆಗಳಿರುವಾಗ ನಿದ್ರೆ ಮಾಡಲು ಹೇಗೆ ಸಾಧ್ಯ? ತಾವು ಮುಂದೆ ಮಾಡಬೇಕಾದ ಕೆಲಸಗಳು ಸಾಲುಸಾಲಾಗಿ ಕಣ್ಮುಂದೆ ಮೆರವಣಿಗೆ ಮಾಡಿದವು. ಅವರು ಮನಸ್ಸಿನಲ್ಲೇ ಲೆಕ್ಕ ಹಾಕಿದರು. ಭರತ್ ಕೊಟ್ಟಿರುವ 10 ಲಕ್ಷದಿಂದ ಮಂಚ, ಹಾಸಿಗೆ ಕೊಳ್ಳಬಹುದು. ಕರ್ಟನ್‌ಗಳನ್ನು ತರಬೇಕು. ಹಾಲ್‌ಗೆ ಫರ್ನೀಚರ್ ತರಬೇಕು. ಪ್ರತಿರೂಮ್‌ಗಳಿಗೂ ಒಂದು ಟೇಬಲ್ ಕುರ್ಚಿ ಹಾಕಬೇಕು. ಇಡೀ ಕಟ್ಟಡಕ್ಕೆ ಬಣ್ಣದ ಕೆಲಸವಾಗಬೇಕು. ಊಟದ ತಟ್ಟೆಗಳು, ಲೋಟಗಳನ್ನು ತರಬೇಕು. ಒಂದೇ-ಎರಡೇ ಕೆಲಸಗಳು. ಮುಖ್ಯವಾಗಿ ಆ ವೃದ್ಧಾಶ್ರಮದವರನ್ನು ಕರೆತರಬೇಕು.

ಅವರನ್ನು ಹೇಗೆ ಕರೆತರುವುದು ಎಂದು ಯೋಚಿಸುತ್ತಿರುವಾಗ ಅವರ ತಲೆಗೊಂದು ಐಡಿಯಾ ಹೊಳೆಯಿತು.
ಕಾಫಿಯ ಕಾರ್ಯಕ್ರಮದ ನಂತರ ಅವರು ಗೌರಮ್ಮನ ಜೊತೆ ಗೋದಾಮಣಿ ರೂಮು ಪ್ರವೇಶಿಸಿದರು.
“ಬನ್ನಿರಾಜಲಕ್ಷ್ಮಿ. ಏನು ಯೋಚನೆ ಮಾಡಿದಿರಿ?”
“ಆ ವೃದ್ಧಾಶ್ರಮದ ಓನರ್‌ನ ಭೇಟಿ ಮಾಡಿ ಅವರಿಗೆ ಅವರು ನಡೆಸುತ್ತಿರುವ ವೃದ್ಧಾಶ್ರಮದ ಪರಿಸ್ಥಿತಿ ತಿಳಿಸಿ, ‘ಅವರು ಖರ್ಚು ಮಾಡುತ್ತಿರುವ ಹಣ ವೃದ್ಧರಿಗೆ ತಲುಪುತ್ತಿಲ್ಲ’ ಎಂದು ಹೇಳಬಹುದಲ್ವಾ?”
“ಐಡಿಯಾ ಚೆನ್ನಾಗಿದೆ. ಆ ಓನರ್ ಯಾರೂಂತ ನಿಮಗೆ ಗೊತ್ತಾ?”
“ಗೌರಮ್ಮ ವಿಳಾಸ ತಂದುಕೊಡ್ತಾರೆ.”
“ನಾವು ಹೇಳುವುದನ್ನು ಅವರು ನಂಬ್ತಾರಾ?”
“ಅವರೇ ಬಂದು ನೇರವಾಗಿ ವೃದ್ಧಾಶ್ರಮದಲ್ಲಿರುವವರನ್ನು ಭೇಟಿ ಮಾಡಲಿ, ಅವರ ಸ್ಥಿತಿ ಕಣ್ಣಾರೆ ನೋಡಲಿ. ಆಗ ನಂಬುತ್ತಾರಲ್ವಾ?”
“ಪ್ರಯತ್ನ ಪಡಬಹುದು. ಗೌರಮ್ಮ ಮೊದಲು ವಿಳಾಸ ತಂದುಕೊಡಿ.”
“ಆಯ್ತಮ್ಮ. ಮೊದಲು ಆ ವೃದ್ಧಾಶ್ರಮದಲ್ಲಿ ಕೌಶಿಕ್ ಅಂತ ಒಬ್ಬ ಹುಡುಗ ಲೆಕ್ಕ ಬರೆಯುತ್ತಿದ್ದ. ಅವನ ಹತ್ತಿರ ಖಂಡಿತಾ ವಿಳಾಸ ಇರುತ್ತದೆ.”

“ಓನರ್ ಹೆಸರು ನಿಮಗೆ ಗೊತ್ತಾ ಗೌರಮ್ಮ?”
“ನಾಗಮೋಹನ್‌ದಾಸ್ ಅಂತ. ವ್ಯಾಪಾರಸ್ಥರು. ಅವರು ಹೆಂಡತಿ ಹೋದಮೇಲೆ ಹೆಂಡತಿ ಹೆಸರಲ್ಲಿ ಈ ವೃದ್ಧಾಶ್ರಮ ಆರಂಭಿಸಿದರು. ಮೊದಮೊದಲು ತಿಂಗಳಿಗೊಂದು ಸಲ ಬರ್ತಿದ್ದರು. ಈಗ ವಯಸ್ಸಾಯ್ತು. ಬರಕ್ಕಾಗಲ್ಲ. ಅವರ ಮಗ ಚಂದ್ರಮೋಹನ್‌ದಾಸ್‌ಗೆ ವೃದ್ಧಾಶ್ರಮ ನಡೆಸಲು ಆಸಕ್ತಿಯಿಲ್ಲ. ವೃದ್ಧಾಶ್ರಮ ಇರುವ ಮನೆ ಮಾರಬೇಕೆಂದು ಪ್ರಯತ್ನಪಟ್ಟಿದ್ದೂ ಉಂಟು. ನಾಗಮೋಹನ್ ವೃದ್ಧಾಶ್ರಮ ನಡೆಸಕ್ಕೆ ಬ್ಯಾಂಕ್‌ನಲ್ಲಿ ತುಂಬಾ ದೊಡ್ಡ ಮೊತ್ತ ಇಟ್ಟಿದ್ದಾರಂತೆ.”
“ಸರಿ ಗೌರಮ್ಮ. ನೀವು ಅಡ್ರೆಸ್ ತಂದುಕೊಡಿ” ಎಂದರು ಗೋದಾಮಣಿ.
ಮರುದಿನವೇ ನಾಗಮೋಹನ್ ವಿಳಾಸ ಫೋನ್ ನಂಬರ್ ಅವರ ಕೈ ಸೇರಿತು.

“ಗೋದಾಮಣಿಯವರೇ ನೀವು ತುಂಬಾ ಚೆನ್ನಾಗಿ ಮಾತಾಡ್ತೀರ. ದಯವಿಟ್ಟು ನೀವು ನಾಗಮೋಹನ್ ಜೊತೆ ಮಾತಾಡಿ. ಅವರು ಯಾವಾಗ ಸಿಗ್ತಾರೆ ತಿಳಿದುಕೊಳ್ಳಿ. ನಂತರ ನೀವೇ ಅವರನ್ನೂ, ಅವರ ಮಗನನ್ನೂ ಭೇಟಿಮಾಡಿದರೆ ಒಳ್ಳೆಯದು ಅನ್ನಿಸ್ತಿದೆ.”
“ಈ ಭಾನುವಾರ ನಾನು ಗೌರಮ್ಮನ್ನ ಕರೆದುಕೊಂಡು ಹೋಗಿ ಬರ‍್ತೀನಿ. ಇವತ್ತೇ ನಾಗಮೋಹನ್‌ರವರಿಗೆ ಫೋನ್ ಮಾಡ್ತೀನಿ.”
“ನೀವು ಮೂವರೂ ಹೊರಗಡೆ ಕೆಲಸ ಮಾಡಿದವರು, ಅನುಭವ ಇರುವವರು. ಭರತ್ ಕೊಟ್ಟಿರುವ ಹತ್ತು ಲಕ್ಷವನ್ನು ಮಂಚಗಳು, ಹಾಸಿಗೆ, ಕರ್ಟನ್ ತರಲು ಉಪಯೋಗಿಸೋಣಾಂತಿದ್ದೇನೆ. ಜೊತೆಗೆ ಕರ್ಟನ್ ತರಬೇಕು. ಈ ಕೆಲಸ ನೀವೇ ಮಾಡಬೇಕು.”
“ನಮಗೆ ಆ ಕೆಲಸ ವಹಿಸಿ ನಾನು ನಾಗಮಣಿ ಮಾಡಿಕೊಂಡು ಬರ‍್ತೀವಿ” ಎಂದರು ಮಧುಮತಿ.

“ರಾಜಲಕ್ಷ್ಮಿ ನೀವೀಗ ದೊಡ್ಡ ಕೆಲಸಕ್ಕೆ ಕೈ ಹಾಕಿದ್ದೀರ. ನಾವು ನಮ್ಮ ಕೈಲಾದ ನೆರವು ನೀಡ್ತೀವಿ. ಆದರೆ ಹೊರಗಡೆ ಓಡಾಡಿ ಕೆಲಸ ಮಾಡಕ್ಕೆ ನಿಮ್ಮ ವೃದ್ಧಾಶ್ರಮದ ಅಕೌಂಟ್ಸ್ ನೋಡಿಕೊಳ್ಳಕ್ಕೆ ಒಬ್ಬರು ಬೇಕು. ಅವರ ಹತ್ರ ವೆಹಿಕಲ್ ಇದ್ರೆ ನೀವು ರಿಕ್ಷಾಗೆ ಸುರಿಯೋದು ತಪ್ಪತ್ತೆ” ಎಂದರು ನಾಗಮಣಿ.
“ನನ್ನ ಪರಿಚಯದ ಹುಡುಗ ಭಾಸ್ಕರಾಂತ ಇದ್ದಾನೆ. ಅವನನ್ನು ಕೇಳ್ತೀನಿ. ಮೊದಲು ನಾಗಮೋಹನ್-ವೃದ್ಧಾಶ್ರಮದ ಸಮಸ್ಯೆ ಪರಿಹಾರವಾಗಲಿ” ಎಂದರು.
ಅಂದೇ ಸಾಯಂಕಾಲ ಗೋದಾಮಣಿ ನಾಗಮೋಹನ್‌ಗೆ ಫೋನ್ ಮಾಡಿದರು. ಅವರ ಸೊಸೆ ಮಯೂರಿಮೋಹನ್ ಕಾಲ್ ರಿಸೀವ್ ಮಾಡಿದರು.
ಗೋದಾಮಣಿ ತಮ್ಮ ಪರಿಚಯ ಹೇಳಿ “ನಾಗಮೋಹನ್ ಸರ್ ಹತ್ತಿರ ಮಾತನಾಡಬೇಕಿತ್ತು” ಎಂದರು.
“ಅವರಿಗೆ ಇತ್ತೀಚೆಗೆ ಕಿವಿ ಕೇಳಿಸ್ತಿಲ್ಲ. ಅವರ ವ್ಯವಹಾರವನ್ನು ನಾವೇ ನೋಡಿಕೊಳ್ತಿದ್ದೇವೆ. ನಮ್ಮನೆಯವರ ಹತ್ತಿರ ಮಾತಾಡಿ. ಅವರಿಗೆ ಫೋನ್ ಕೊಡ್ತೀನಿ.”
ಚಂದ್ರಮೋಹನ್ ತುಂಬಾ ಚೆನ್ನಾಗಿ ಮಾತನಾಡಿದರು.

“ನನ್ನಿಂದ ಏನಾಗಬೇಕು?”
“ನಿಮ್ಮ ಹತ್ತಿರ ಮಾತನಾಡಬೇಕು. ನಿಮ್ಮನ್ನು ಖುದ್ದಾಗಿ ಭೇಟಿಯಾಗಬೇಕು. ನೀವು ಭಾನುವಾರ ಎಷ್ಟು ಹೊತ್ತಿಗೆ ಬಿಡುವಾಗರ‍್ತೀರ ತಿಳಿಸಿದ್ರೆ ನಾವು ಬಂದು ಮೀಟ್ ಮಾಡ್ತೀವಿ.”
“ಯಾವ ವಿಚಾರದ ಬಗ್ಗೆ ಮೀಟ್ ಮಾಡಲು ಬಯಸುತ್ತೀರಾ?”
“ನೀವು ನಡೆಸುತ್ತಿರುವ ವೃದ್ಧಾಶ್ರಮದ ಬಗ್ಗೆ.”
“ಓ.ಕೆ. ಭಾನುವಾರ ಬೆಳಿಗ್ಗೆ 11 ಗಂಟೆಗೆ ಬನ್ನಿ. ಮನೆ ಲೊಕೇಷನ್ ಕಳಿಸ್ತೀನಿ.”

(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : 
   https://www.surahonne.com/?p=41760

-ಸಿ.ಎನ್. ಮುಕ್ತಾ

6 Responses

  1. ನಯನ ಬಜಕೂಡ್ಲು says:

    ಸುಂದರವಾದ ಕಾದಂಬರಿ

  2. ಸದುದ್ದೇಶದಿಂದ ಸಮಾಜಮುಖಿ ಕೆಲಸ ಪ್ರಾರಂಭಿಸಿದಮೇಲೆ ಅದನ್ನು ಪರಭಾರೆ ಮಾಡುವಾಗ ಅದನ್ನು ಮುಂದುವರೆಸಿಕೊಂಡು ಹೋಗುತ್ತಾರೆಂಬ ಭರವಸೆ ಮೂಡಿದಮೇಲೆ ಕೊಡಬೇಕು ಇಲ್ಲದಿದ್ದರೆ..ಏನಾಗುತ್ತದೆಂಬ..ಸಂಗತಿಗಳನ್ನು ಕಾದಂಬರಿ ಯಲ್ಲಿ ತಿಳಿಸಿರುವ ರೀತಿ ನನಗಿಷ್ಟವಾಯಿತು..ಮುಂದೇನಾಗುತ್ತದೆಂಬ ಕುತೂಹಲ ವಂತೂ ಇದೆ ಮೇಡಂ..

  3. ಕುತೂಹಲಕಾರಿ ಘಟ್ಟದಲ್ಲಿ ನಿಂತಿದೆ ಕಥೆ.

  4. ಶಂಕರಿ ಶರ್ಮ says:

    ಕಥೆಯು ಉತ್ತಮ ಸಂದೇಶ ನೀಡುವುದರ ಜೊತೆಗೆ ಕುತೂಹಲಕಾರಿಯಾಗಿದೆ…ಧನ್ಯವಾದಗಳು ಮೇಡಂ.

  5. ಮುಕ್ತ c. N says:

    ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಇವರಿಗೂ ಹಾಗೂ ಕಾದಂಬರಿ ಯ ಬಗ್ಗೆ ಅಭಿಪ್ರಾಯ ತಿಳಿಸಿರುವ ಆತ್ಮೀಯ ಗೆಳತಿಯರಿಗೆ

    ಧನ್ಯವಾದಗಳು..

  6. ಪದ್ಮಾ ಆನಂದ್ says:

    ಕುತೂಹಲಭರಿತವಾಗಿ ಮುಂದೆ ಸಾಗುತ್ತಿದೆ “ತಾಯಿ” ಕಾದಂಬರಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: