ನೀರೆಯರ ಸೀರೆ

Share Button

ಭಾರತೀಯ ನಾರಿಯರ ಉಡುಪಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವಕ್ಕೆ ಗೌರವ ನೀಡುವ ಸಲುವಾಗಿ ಪ್ರತೀ ವರ್ಷ ದಶಂಬರ 21ರಂದು  ವಿಶ್ವ ಸೀರೆಯ ದಿನವನ್ನಾಗಿ ಆಚರಿಸುವ  ಪದ್ಧತಿಯು ಜಾರಿಗೆ ಬಂದು; ಅಪ್ಪಟ ಭಾರತದ ಉಡುಗೆಯೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯುವಂತಾಗಿರುವುದು ನಮಗಂತೂ ಹೆಮ್ಮೆಯ ವಿಚಾರ! ನೇಕಾರರ ಸಮುದಾಯವನ್ನು ಮತ್ತು ಸೀರೆಗಳ ವಿಶಿಷ್ಟ ಕಲೆಯನ್ನು ಗೌರವಿಸುವ ಉದ್ದೇಶದಿಂದ ಈ ಆಚರಣೆಯನ್ನು ಜಾರಿಗೊಳಿಸಲಾಯಿತು. ಮಾತ್ರವಲ್ಲದೆ, ಸೀರೆಗಳ ವಿಶೇಷತೆ ಹಾಗೂ ಅದರ ಮೌಲ್ಯವರ್ಧನೆ, ಜಾಗತಿಕ ಮಟ್ಟದಲ್ಲಿ ಅವುಗಳ ವ್ಯಾಪಾರೋದ್ಯಮದ ಏರಿಳಿತ ಮತ್ತು ಅವುಗಳನ್ನು ತಯಾರಿಸುವ ಕುಶಲಕರ್ಮಿಗಳ ಕ್ಷೇಮಾಭಿವೃದ್ಧಿ ಇತ್ಯಾದಿಗಳ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚು ತಿಳುವಳಿಕೆ ನೀಡುವಂತಹ ಕಾರ್ಯಕ್ರಮಗಳನ್ನು ಈ ವಿಶೇಷ ದಿನದಂದು ಹಮ್ಮಿಕೊಳ್ಳಲಾಗುವುದು.

ಸಾವಿರಾರು ವರ್ಷಗಳ ಹಿಂದೆ; ಸಿಂಧೂ ನಾಗರಿಕತೆಯ ಕಾಲದಲ್ಲಿಯೇ ಸೀರೆಯು ಬಳಕೆಯಲ್ಲಿತ್ತು ಎಂಬುದು ಇತಿಹಾಸದಲ್ಲಿ ಕಂಡುಬರುತ್ತದೆ. ಅನಾದಿಕಾಲದಿಂದಲೂ ಉಪಯೋಗದಲ್ಲಿರುವ ಸೀರೆಯು ನಾಲ್ಕು ಮೀಟರಿನಿಂದ ಒಂಭತ್ತು ಮೀಟರ್ ವರೆಗೂ ಲಭ್ಯವಿರುತ್ತದೆ. ಮಹಿಳೆಯರ ಸೌಂದರ್ಯವನ್ನು ಇಮ್ಮಡಿಗೊಳಿಸುವ ಈ ಸೀರೆ ಎನ್ನುವ ಉಡುಪು, ಭಾರತೀಯತೆಯ ಗುರುತಿನ ಸಂಕೇತವೂ ಹೌದು. ನಮ್ಮ ಅಕ್ಕಪಕ್ಕದ ರಾಷ್ಟ್ರಗಳಾದ ಶ್ರೀಲಂಕಾ, ಪಾಕಿಸ್ಥಾನ, ನೇಪಾಳ, ಬಾಂಗ್ಲಾದೇಶಗಳಲ್ಲೂ ಸೀರೆಯನ್ನು ಬಳಸುತ್ತಾರೆ. ಸುಮಾರು ಎಂಭತ್ತಕ್ಕೂ ಹೆಚ್ಚು ಬಗೆಯ ವಿವಿಧ ಸೀರೆಗಳಿವೆಯಂತೆ! ಅತೀ ಕಡಿಮೆ ಬೆಲೆಯ ಸೀರೆಗಳಿಂದ ಹಿಡಿದು, ಈಗ ಕೋಟಿಗಟ್ಟಲೆ ಬೆಲೆಯ ಸೀರೆಗಳೂ ಲಭ್ಯ ಎಂದರೆ ಅದರ ವ್ಯಾಪ್ತಿಯನ್ನು ಅಂದಾಜಿಸಲು ಅಸಾಧ್ಯ! ಬಹಳ ಹಿಂದೆ, ರಾಜ ಮಹಾರಾಜರುಗಳ ಕಾಲದಲ್ಲಿ ಅತ್ಯಂತ ಸೂಕ್ಷ್ಮ ಎಳೆಗಳನ್ನು ತಯಾರಿಸಿ ನೇಯ್ದ ಸೀರೆಗಳು ಸಣ್ಣ ಬೆಂಕಿಪೊಟ್ಟಣದ ಒಳಗೆ ಇರಿಸುವಷ್ಟು ಸಣ್ಣಗೆ ಮಡಿಚಲು ಸಾಧ್ಯವಿರುತ್ತಿತ್ತು ಎಂದರೆ; ನಮ್ಮ ಪೂರ್ವಜರ ಕಲೆ ಎಷ್ಟು ಅದ್ಭುತವಾಗಿತ್ತು ಅಲ್ಲವೇ? ಈಗಂತೂ ರೇಶ್ಮೆ ಸೀರೆಗಳ ತಲೆ ಮೇಲೆ ಹೊಡೆದಂತಿರುವ, ಅತಿ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಗುರುತಿಸಬಲ್ಲ ಕಡಿಮೆ ಬೆಲೆಯ ಸೀರೆಗಳು ಕೆಳಮಧ್ಯಮ ವರ್ಗದ ಮಹಿಳೆಯರ ಆಸೆಯನ್ನು ತಣಿಸುತ್ತಿವೆ. ಪ್ರಸ್ತುತ, ನೈಲಾನ್ ಸೀರೆಗಳು ಮಾರುಕಟ್ಟೆಯಲ್ಲಿ ಅತೀ ಕಡಿಮೆ ದರದಲ್ಲಿ ಲಭ್ಯವಿದ್ದು ಬಡವರ ಪಾಲಿಗೆ ವರದಾನವಾಗಿದೆ.

ಮನೆಯಲ್ಲಿಯೂ ಸೀರೆಯುಟ್ಟೇ ಅಭ್ಯಾಸವಿರುವ ನನಗೆ ಅದರಷ್ಟು ಅನುಕೂಲಕರವಾಗಿ ಮನಸ್ಸಿಗೆ ಹಿತವೆನಿಸುವ ಉಡುಪು ಬೇರೊಂದಿಲ್ಲ.. ಆದರೆ, ಸೀರೆಯನ್ನು ಮಡಚಿ ಇಡುವಾಗ ಮಾತ್ರ; ‘ಮಹಿಳೆಯರು ಇಷ್ಟುದ್ದ ಸೀರೆ ಉಡಬೇಕೆಂದು ಯಾರಪ್ಪಾ ಆಜ್ಞೆ ಮಾಡಿದರು??”  ಎಂಬ ಚಿಂತೆ ಮೂಡುತ್ತದೆ! ನೌಕರಿ ಸಲುವಾಗಿ ಉತ್ತರಕನ್ನಡದ ಕುಮಟಾಕ್ಕೆ ಹೋದ ಸಮಯದಲ್ಲಿ ಮೊದಲ ಬಾರಿಗೆ ಅಲ್ಲಿಯ ಹಾಲಕ್ಕಿ ಗೌಡ ಸಮುದಾಯದ ಸ್ತ್ರೀಯರು ಸೀರೆ ಉಡುವ ವೈಖರಿ ಕಂಡು ಬಹಳ ವಿಚಿತ್ರವೆನಿಸಿತು. ಪದ್ಮಶ್ರೀ ಪುರಸ್ಕೃತೆ, ಅಂಕೋಲದ ತುಳಸಿ ಗೌಡ ಅವರ ಚಿತ್ರವನ್ನು ನೀವು ಗಮನಿಸಿರಬಹುದು. ರವಿಕೆ ಧರಿಸದ ಇವರು ಸೀರೆಯನ್ನು ವಿಚಿತ್ರ ರೀತಿಯಲ್ಲಿ ಸುತ್ತಿ ಒಂದು ತುದಿಯನ್ನು ಕೊರಳಲ್ಲಿರುವ ಹತ್ತಾರು ದೊಡ್ಡದಾದ ಮಣಿಹಾರಗಳ ಕಂತೆಗೆ ಗಟ್ಟಿಯಾಗಿ ಸಿಕ್ಕಿಸಿ ಬಿಡುವರು.  ಕೇವಲ ಹತ್ತಿ ನೂಲಿನ ಸೀರೆಯನ್ನು ಮಾತ್ರ ಅವರು ಬಳಸುವುದು ಕಂಡುಬರುತ್ತದೆ.

ನನ್ನ ಇನ್ನೊಂದು ಕುತೂಹಲವೆಂದರೆ, ಯಕ್ಷಗಾನದ ಸ್ತ್ರೀ ವೇಷಧಾರಿಗಳು ಸೀರೆ ಉಡುವ ವೈಖರಿ. ಪುರುಷರೇ ಎಷ್ಟು ಅಚ್ಚುಕಟ್ಟಾಗಿ ಸೀರೆ ಉಡುವರೆಂದರೆ; ನಿಜವಾಗಿಯೂ ನಮಗೂ ಅಷ್ಟು ಚೆನ್ನಾಗಿ ಉಡಲು ಬರುವುದಿಲ್ಲವೆಂದು ನನ್ನೆಣಿಕೆ. ಅಪ್ಪಿ ತಪ್ಪಿಯೂ ಎಲ್ಲೂ ಮೈ ಕಾಣದಂತೆ ಹಾಕಿದ ರವಿಕೆ, ಉಟ್ಟ ಸೀರೆಯು ಅವರು ರಂಗಸ್ಥಳವಿಡೀ ಕುಣಿದು ನಾಟ್ಯವಾಡಿದರೂ ಒಂದಿನಿತೂ ಸರಿದು ಹಾಳಾಗದಿರುವುದು ಆಶ್ಚರ್ಯ! ಇದು ಹೇಗೆ ಸಾಧ್ಯವೆಂದು ನನಗಿನ್ನೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಇದು ನಮ್ಮ  ಪ್ರತಿಷ್ಠೆಗೆ, ಮರ್ಯಾದೆಗೆ ಕುಂದು ಎಂದೇ ನನ್ನ ಭಾವನೆ! ನಾವು ಎಷ್ಟು ಭದ್ರವಾಗಿ ಉಟ್ಟರೂ ಆಗಾಗ ಸರಿ ಮಾಡಿಕೊಳ್ಳದಿದ್ದರೆ ನೆರಿಗೆಗಳು ಎಲ್ಲೆಲ್ಲೋ ಪಯಣಿಸಲು ಪ್ರಾರಂಭಿಸುತ್ತವೆ! ಹಿಂದೆ ಭರತನಾಟ್ಯದ ಮಹಿಳಾ ಕಲಾವಿದರು ನಾಟ್ಯ ಪ್ರದರ್ಶನದ ವೇಳೆ, ಸೀರೆಯನ್ನೇ ಸ್ವಲ್ಪ ಮೇಲಕ್ಕೆ, ಕಲಾತ್ಮಕವಾಗಿ ಉಡುತ್ತಿದ್ದರು. ಈಗ ಆ ಪದ್ಧತಿ ಬದಲಾಗಿ, ಸಿದ್ಧ ಉಡುಪುಗಳನ್ನು ಬಳಸುವರು.

ಸಿನಿಮಾ ನಾಯಕಿ ಉಟ್ಟ ಸೀರೆಗಳು ಅವರ ಹೆಸರಿನಲ್ಲಿಯೇ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ. ತಾರೆಯ ಹೆಸರಿನಿಂದ ಕಂಗೊಳಿಸುತ್ತಾ ಪ್ರಸಿದ್ಧಿ ಪಡೆದ ಸೀರೆಯನ್ನು ಖರೀದಿಸಿ ಉಟ್ಟ ಹೆಂಗೆಳೆಯರು; ತಾವೇ  ಆ ತಾರೆಯೆಂಬಂತೆ ಸಂಭ್ರಮಿಸುವರು! ಹಾಂ!…ಬಿಳೀಹೆಂಡ್ತಿ ಸೀರೆ ನೆನಪಿಗೆ ಬಂತಾ…ನಿಮಗೂ??

ಅಮೆರಿಕಕ್ಕೆ ಹೋಗಿದ್ದಾಗ ಸೀರೆಯುಟ್ಟ ನನ್ನ, ಸಂಜೆಯ ನಡಿಗೆ ನಿತ್ಯ ಸಾಗುತ್ತಿತ್ತು. ನನ್ನ ಉಡುಪನ್ನು ಅಲ್ಲಿಯವರು ನೋಡಿ ಏನೆಂದುಕೊಳ್ಳುವರೋ ಎಂಬ ಮುಜುಗರವೂ ಇತ್ತೆನ್ನಿ. ಗಂಟೆಗಟ್ಟಲೆ ನಡೆದರೂ ಒಂದೆರಡು ಜನರು ಸಿಗುವುದು ಕಷ್ಟ!  ಅಪರೂಪಕ್ಕೆ ಅಲ್ಲಿಯ ಮಹಿಳೆಯರು ಸಿಕ್ಕಿದರೆ ಹತ್ತಿರ ಬಂದು ‘ಇಂಡಿಯಾದವರೇ?` ಎಂದು ಮಾತನಾಡಿಸಿ, ಕುತೂಹಲದಿಂದ ಸೀರೆಯನ್ನು ನೋಡಿ, ಮುಟ್ಟಿ ಮೆಚ್ಚುಗೆ ಸೂಚಿಸುತ್ತಿದ್ದರು.. ಇದರಿಂದ ನನ್ನ ಮುಜುಗರ ಕಾಲ್ಕಿತ್ತಿತು… ಅಭಿಮಾನದಿಂದ ನಡೆಯತೊಡಗಿದೆ. ಸಲ್ವಾರ್ ಧರಿಸಿದ ನಮ್ಮ ದೇಶದ ಮಹಿಳೆಯರು ಸಿಕ್ಕಿದರೆ, ಖುಷಿಯಿಂದ ಹತ್ತಿರ ಬಂದು, ತಮ್ಮವರೆಂದು ಪರಿಚಯ ಮಾಡಿಕೊಳ್ಳುತ್ತಿದ್ದರು.

ಸೀರೆಯ ಒಡಲು ಹೇಗೇ ಇರಲಿ. ಆದರೆ, ಅದರ ಸೆರಗಂತೂ ಭರ್ಜರಿ ಇರುತ್ತದೆ. ತನ್ನೆಲ್ಲಾ ಅಂದವನ್ನು ತುಂಬಿಕೊಂಡು ಹೊಳೆಯುವ ಸೆರಗನ್ನು ಸೀರೆಯ ಜಾಹೀರಾತಿನಲ್ಲೂ ಕಾಣಬಹುದು. ಅದರ ಸೆರಗು ಏನೆಲ್ಲಾ ಉಪಯೋಗಕ್ಕೆ ಬರುತ್ತದೆ ನೋಡೋಣ. ಮುಖ್ಯವಾಗಿ ಮಕ್ಕಳ ಮುಖ ಸ್ವಚ್ಛ ಮಾಡಲು ತಾಯಂದಿರಿಗೆ ಇದುವೇ ಟವೆಲಿನಂತೆ ಉಪಯೋಗ. ಅಲ್ಲದೆ ಮಕ್ಕಳಿಗೂ ತಮ್ಮ ಕೈ ಒರಸಲು ಅಮ್ಮನ/ಅಜ್ಜಿಯ ಸೆರಗೇ ಬೇಕು. ಭುಜದ ಮೇಲಿನ ಸೆರಗಿನ ತುದಿಯನ್ನೇ ತಲೆ ಮೇಲೆ ಸಿಂಬಿ ಸುತ್ತಿ, ನೀರಿನ ಕೊಡ, ಸಣ್ಣಪುಟ್ಟ ಭಾರಗಳನ್ನು ನಿರಾಯಾಸವಾಗಿ ಹೊರಲು ಉಪಯೋಗಿಸುತ್ತಾರೆ, ನಮ್ಮ ಹಳ್ಳಿಯ ಮಹಿಳೆಯರು. ಗುಜರಾತ್, ರಾಜಸ್ಥಾನದ ಮಹಿಳೆಯರು ಸೆರಗಿನಿಂದ ತಮ್ಮ ತಲೆ, ಮುಖವನ್ನು ಮುಚ್ಚಿ(ಮುಖಪರದೆ?) ಹಿರಿಯರಿಗೆ ಗೌರವ ಸೂಚಿಸುವರು. ಹಿಂದೆ, ಹಳ್ಳಿ ಮಹಿಳೆಯರು ತಮ್ಮ ಸೆರಗಿನ ತುದಿಯಲ್ಲಿ ಭದ್ರವಾಗಿ ಕಟ್ಟಿ ಇರಿಸಿದ ಸ್ವಲ್ಪ ಹಣವು ಚಿಕ್ಕಪುಟ್ಟ ಖರ್ಚುಗಳಿಗೆ ಉಪಯೋಗವಾಗುತ್ತಿತ್ತು. ನಮ್ಮ ಅಜ್ಜಿ ಯಾವುದೋ ಕೆಲಸವು ಸಕಾಲದಲ್ಲಿ ನೆನಪಾಗಲೆಂದು, ಸೆರಗಿನ ತುದಿಯಲ್ಲಿ ಗಂಟು ಹಾಕಿಟ್ಟಿರುತ್ತಿದ್ದರು. ಕೊನೆಗೆ, ಆ ಗಂಟು ನೋಡಿದಾಗ ಅದನ್ನು ಹಾಕಿದ್ದು ಯಾವ ಕೆಲಸಕ್ಕೆಂದು ನೆನೆಪಾಗದೆ ಒದ್ದಾಡಿ, ನಮ್ಮೆಲ್ಲರ ನಗುವಿಗೆ ಕಾರಣರಾಗುತ್ತಿದ್ದರು!

ನಮ್ಮೂರಿನ ಕೆಲವು ಪ್ರಸಿದ್ಧ ಬಟ್ಟೆ ಮಳಿಗೆಗಳು ಮಳೆಗಾಲದ ಸಮಯದಲ್ಲಿ, ಭರ್ಜರಿ ದರ ಕಡಿತದ ಮಾರಾಟದ ಜಾಹೀರಾತನ್ನು ಹಾಕುತ್ತವೆ. ಆ ದಿನಗಳಲ್ಲಿ, ಊರಿನ, ಪರಊರಿನ ನೂರಾರು ಮಹಿಳೆಯರ ಸಂದಣಿ, ಗದ್ದಲವನ್ನು ಆ ಮಳಿಗೆಯಲ್ಲಿ ನೋಡಬೇಕು! ಕಂಡ ಯಾವುದಾದರೂ ಒಂದು ಸೀರೆಗಾಗಿಯೇ ಪರಸ್ಪರ ಕಿತ್ತಾಡಿ ರಂಪ ಮಾಡುವುದೂ ಉಂಟು! ನೌಕರಿಯಲ್ಲಿರುವ ಕೆಲವು ಮಹಿಳೆಯರು ನಾಲ್ಕೈದು ಸೀರೆಗಳನ್ನು ಖರೀದಿಸಿ, ಗೆಳತಿಯರಿಗೆ ತೋರಿಸಿ ಹಣ ಉಳಿಸಿದ ಸಂಭ್ರಮದಲ್ಲಿ ಬೀಗಿ, ಖರೀದಿಗೆ ಹೋಗದವರ ಹೊಟ್ಟೆ ಉರಿಯುವಂತೆ ಮಾಡುತ್ತಾರೆ!

ಇನ್ನು, ನಿತ್ಯ ಹೋಗುವಾಗ ಸೀರೆಯ ಆಯ್ಕೆಯ ಪಡಿಪಾಟಲು ಬೇಡಪ್ಪಾ…ಬೇಡ! ಕಪಾಟು ತುಂಬಾ ಸೀರೆಗಳಿದ್ದರೂ ಇದ್ದವುಗಳನ್ನೇ ಅಡಿಮೇಲು ಮಾಡುತ್ತಾ ಕಷ್ಟಪಟ್ಟು ಒಂದು ಸೀರೆಯನ್ನು ಆಯ್ಕೆ ಮಾಡಿ ಅದಕ್ಕೊಪ್ಪುವ ರವಿಕೆಯನ್ನು ಹುಡುಕಾಡಿದರೆ ಸಿಗದೆ; ಸಮಯ ಹಾಳುಮಾಡಿ, ಕೊನೆಗೆ ಕೈಗೆ ಸಿಗುವ ರವಿಕೆಗೆ ಹೊಂದುವ ಸೀರೆಯನ್ನೇ ಉಟ್ಟು ತೃಪ್ತರಾಗುವ  ಪ್ರಸಂಗ ಹೆಚ್ಚಾಗಿ ಎಲ್ಲಾ ಮಹಿಳೆಯರಿಗೂ ಬಂದೇ ಬರುತ್ತದೆ ಅಲ್ಲವೇ? ಇನ್ನು ಮದುವೆ ಸಮಾರಂಭಕ್ಕೆ ಹೊರಡುವಾಗಿನ ಕಷ್ಟ  ನೋಡಿ… ಕಪಾಟಿನಲ್ಲಿರುವ ಸಿಲ್ಕ್ ಸೀರೆಗಳನ್ನು ನೋಡುತ್ತಾ …’ಎಲ ಎಲಾ… ನನಗೆ ಉಡಲು ಸೀರೆಯೇ ಇಲ್ವಲ್ಲಾ!!` ಎಂದು ಮನಸ್ಸಿನಲ್ಲಿಯೇ ಅಲವತ್ತುಕೊಳ್ಳುತ್ತಾ ಅಸಮಾಧಾನದಿಂದಲೇ  ಹೊರಡುವುದಾಗಿದೆ!

ಸೀರೆಯ ಎರಡು ತುದಿಗಳನ್ನು ಮನೆಯ ಚಾವಣಿಯ ಅಡ್ಡಕ್ಕೆ ಬಿಗಿದು ನವಜಾತ ಶಿಶುವನ್ನು ಮಲಗಿಸುವುದು ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಇದರಲ್ಲಿ ಮಗು ಸೊಳ್ಳೆ ಕಾಟವಿಲ್ಲದೆ ತಣ್ಣಗೆ, ಸುಖವಾಗಿ ನಿದ್ರಿಸುವುದು. ಮಾತ್ರವಲ್ಲದೆ, ಶಿಶುವಿನ ತಲೆ ಉರುಟಾದ  ಆಕಾರ ಪಡೆಯಲು ಬೇರೇನೂ ಸಾಧನದ ಅಗತ್ಯವೂ ಇರುವುದಿಲ್ಲ. ಹಗುರವಾದ ಈ ಬಟ್ಟೆಯ ತೊಟ್ಟಿಲು, ಮಗುವನ್ನು ತೂಗಿ ಮಲಗಿಸಲೂ ಬಹಳ ಅನುಕೂಲ. ಇಂದಿನ ದಿನಗಳಲ್ಲಿ, ರಸ್ತೆ ಬದಿ ವಾಸಿಸುವ ಸಂಚಾರಿ ಸಂಸಾರಿಗಳು ಮಾತ್ರ ಮರದ ಟೊಂಗೆಗೆ ಸೀರೆಯನ್ನು ಕಟ್ಟಿ ಮಗುವನ್ನು ಮಲಗಿಸುವುದನ್ನು ಕಾಣಬಹುದು.

ಹಿಂದೆ, ಸೀರೆ ಉಡುವ ಮೊದಲು ‘ಹಾಫ್ ಸಾರಿ’ ಎಂಬ ಅರ್ಧ ಸೀರೆಯನ್ನು ಉಡುವುದು ಬಳಕೆಯಲ್ಲಿತ್ತು…ಇದುವೇ ಲಂಗ-ದಾವಣಿ. ಇದು ಸೀರೆ ಉಡಲು ಅಭ್ಯಾಸ ಮಾಡುವ ತರುಣಿಯರಿಗೆ ಮೊದಲಿನ ಹಂತದ ಪಾಠವೂ ಹೌದು. ಕಾಲೇಜಿಗೆ ಸೇರಿದಾಗ ನಾನು ಸೀರೆ ಉಡಲು ಪ್ರಾರಂಭಿಸುವ ಮೊದಲು ಇದನ್ನೇ ಧರಿಸುತ್ತಿದ್ದೆ. ಆ ಬಳಿಕ, ಕೋಲು ಕಡ್ಡಿಯಂತಿದ್ದ ನನ್ನ ದೇಹ.ದಪ್ಪ ಕಾಣಲು ಎರಡೆರಡು ಲಂಗ ಹಾಕಿ ಸೀರೆ ಉಡುತ್ತಿದ್ದುದನ್ನು ನೆನೆದು ಈಗಲೂ ನಗುವುದಿದೆ.

PC: Internet

ದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಪೂಜೆ ಸಮಯದಲ್ಲಿ ದಿನಕ್ಕೊಂದು ಸೀರೆ ಉಡಿಸಿ ಅಲಂಕಾರ ಮಾಡುವುದರ ಜೊತೆಗೆ, ದೇವಿಗೆ ಹರಕೆ ರೂಪದಲ್ಲಿ ಭಕ್ತರು ಸೀರೆಯನ್ನು ನೀಡುವರು. ಅಲ್ಲಿ ಅದೃಷ್ಟ ಚೀಟಿಯನ್ನು ಖರೀದಿಸಿ, ಅದರಲ್ಲಿ ಗೆದ್ದ ಭಕ್ತರಿಗೆ ಅವುಗಳನ್ನು ನೀಡುವರು. ಆ ಸೀರೆ ಹೇಗೇ ಇರಲಿ, ಪ್ರಸಾದ ರೂಪದಲ್ಲಿ ದೊರತ ಸೀರೆಯನ್ನು ಎಲ್ಲರಿಗೂ ಸಂಭ್ರಮದಿಂದ ತೋರಿಸಿ, ಜನ್ಮ ಸಾರ್ಥಕತೆ ಹೊಂದಿದ ಭಾವದಿಂದ ಸಂತಸಪಡುವರು. ನಮ್ಮೂರಲ್ಲಿ ನಾನು ಪ್ರತೀ ವರ್ಷ ಚೀಟಿ ಖರೀದಿಸಿದರೂ ಆ ಅದೃಷ್ಟ ನನಗೆ ಈ ವರೆಗೂ ಒಲಿಯಲೇ ಇಲ್ಲ. ಬರುವ ಸಲ ಪ್ರಯತ್ನಿಸುವೆ… ನೋಡೋಣ.

ಕೆಲವು ಪಂಗಡದವರು ಮನೆಯ ವಿಶೇಷ ಕಾರ್ಯಕ್ರಮಗಳಿಗೆ, ಒಂಭತ್ತು ಮೀಟರ್ ಉದ್ದದ ಸೀರೆಯನ್ನು ಕಚ್ಚೆ ಹಾಕಿ ಉಡುವುದು ವಿಶೇಷ. ಮಡಿಕೇರಿ ಮಹಿಳೆಯರು ಹಿಂಬದಿಯಲ್ಲಿ ನೆರಿಗೆ ಹಿಡಿದು, ಮುಂದಕ್ಕೆ ಅಡ್ಡಲಾಗಿ ಸೆರಗನ್ನು ಪಿನ್ ಮಾಡಿರುವುದು ನೋಡಲು ಸೊಗಸು. ವೈವಿಧ್ಯಮಯವಾದ ಕೇರಳದ ಕೆನೆಬಣ್ಣದ ಸಣ್ಣ ಅಂಚಿನ ಸೀರೆ, ಮೈ ತುಂಬಾ ಚೌಕುಳಿಗಳಿರುವ ಇಳಕಲ್ಲು ಸೀರೆ, ಶುದ್ಧ ಹತ್ತಿಯ ತಂಪಾದ ಮೆತ್ತನೆಯ ಕೈಮಗ್ಗದ ಸೀರೆ, ಬಾಳೆನಾರಿನ ಸೀರೆ ಬಹು ಚಂದ. ಈಗೀಗ ಸುದ್ದಿಯಲ್ಲಿದೆ.. ಬಿದಿರಿನಿಂದ ಹತ್ತಿ ತಯಾರಿಕೆ. ಅದರ ಸೀರೆಯೂ ಬರಬಹುದು. …ಕಾದು ನೋಡೋಣ ಅಲ್ಲವೇ? ಇತ್ತೀಚೆಗೆ ರಾಜಸ್ಥಾನಕ್ಕೆ ಹೋಗಿದ್ದಾಗ, ಹತ್ತಿ ಬಟ್ಟೆಯ ಮೇಲೆ ನಿಸರ್ಗದತ್ತ ಬಣ್ಣಗಳನ್ನು ಉಪಯೋಗಿಸಿ ವಿವಿಧ ವಿನ್ಯಾಸದ ಚಿತ್ರಗಳನ್ನು ಬಿಡಿಸುವ ಪ್ರಾತ್ಯಕ್ಷಿಕೆಯನ್ನು ಒಂದು ಬಟ್ಟೆ ಮಳಿಗೆಯವರು ನೀಡಿದರು. ಇದೊಂದು ಹೊಸ ಅನುಭವವೂ ಹೌದು. ಅಲ್ಲಿ ಅದೊಂದು ಬೃಹತ್ ಉದ್ಯಮವಾಗಿರುವುದು ವಿಶೇಷ. ಬಾಂದನಿ ಕಲೆಯ ಸೀರೆಗಳು ಇಲ್ಲಿ ಪ್ರಸಿದ್ಧ.

ಹಳೆಯ ಸೀರೆಗಳ ಕಥೆ ಇನ್ನೂ ರೋಚಕ. ನಮ್ಮೆಲ್ಲರ ನೆಚ್ಚಿನ ಸುಧಾಮೂರ್ತಿಯವರನ್ನೇ ಕೇಳಿದರೆ, ಅವರ ‘ಥೌಸೆಂಡ್ ಸ್ಟಿಚಸ್` ಎಂಬ ಸತ್ಯ ಘಟನೆ ಆಧಾರಿತ ಕಾದಂಬರಿಯಲ್ಲಿ; ಉಪಯೋಗಿಸಿ ಹಳೆಯದಾದ ಸೀರೆಗಳಿಂದ ಹೊಲಿದು ಕೊಟ್ಟ ಕೌದಿಯ ಕಥೆ ಮನ ಕರಗಿಸುತ್ತದೆ. ಇತ್ತೀಚೆಗೆ, ಅವರು ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇದೇ ಸೀರೆಯನ್ನು ಉಡುಗೊರೆಯಾಗಿತ್ತು, ಅವರ ಅಭಿನವಪೂರಿತ ಧನ್ಯವಾದಗಳನ್ನು ಪಡೆದ ವಿಷಯ ಭಾರೀ ಸುದ್ದಿ ಮಾಡಿದೆ. ಉಪಯೋಗದಲ್ಲಿ ಇರುವ ಒಂದೊಂದು ಸೀರೆಯ ಹಿಂದೆಯೂ ಒಂದೊಂದು ಕಥೆ ಇರುತ್ತದೆ.  ಕಪಾಟಿನೊಳಗೆ ಇಣುಕು ಹಾಕಿ, ಅದರೊಳಗೆ ಇರುವ ಸೀರೆಗಳನ್ನು ನೋಡುವಾಗ ಪ್ರತಿಯೊಂದರ ಹಿಂದಿರುವ ಮೋಜಿನ, ಪ್ರೀತಿಯ, ಸಂತಸದ ಘಟನೆಗಳು ಮನದಲ್ಲಿ ಮೂಡಿ ನಾವು ಕಳೆದುಹೋಗುತ್ತೇವೆ. ಹಳೆಯ ಗೆಳತಿ ಅಪರೂಪಕ್ಕೆ ಸಿಕ್ಕಾಗ ಇಬ್ಬರೂ ಕೂಡಿ ಖರೀದಿಸಿದ ಒಂದೇ ತರಹದ ಸೀರೆಗಳು, ಅವುಗಳನ್ನುಟ್ಟು ಜೊತೆಗೆ ತೆಗೆದ ಫೊಟೋ, ಹತ್ತಿರದ ಬಂಧುಗಳು ಅವರ ಮನೆಯಲ್ಲಿ ನಡೆಯು ಸಮಾರಂಭಕ್ಕಾಗಿ ಉಡುಗೊರೆ ರೂಪದಲ್ಲಿ ನೀಡುವ ಸೀರೆ, ಮಗಳು ಕೊಟ್ಟ ಸೀರೆ, ಮನೆಯವರು ಕೊಟ್ಟ ಸೀರೆ ಇತ್ಯಾದಿಗಳು  ಸಾಲು ಸಾಲಾಗಿ ಕಣ್ಣ ಮುಂದೆ ಮೆರವಣಿಗೆ ಹೊರಡುತ್ತವೆ! ಹಲವಾರು ದಶಕಗಳ ನೆನಪಿನ ಮೂಟೆ ಹೊತ್ತು ನಡೆಯುತ್ತದೆ…ಮದುವೆ ಸೀರೆ! ಮೈ ತುಂಬಾ ಜರಿ ತುಂಬಿ ಹೊಳೆಯುತ್ತಿದ್ದರೂ, ಉಟ್ಟು ಆನಂದಿಸುವ ಸ್ಥಿತಿಯಲ್ಲಿ ಅದುಇರುವುದಿಲ್ಲ. ಹಾಗೆಂದು ಜರಿಗಾಗಿ ಮಾರುವ ಮನವೂ ಬಾರದು. ಮಧುರವಾದ ಸಿಹಿನೆನಪುಗಳ ಚಾದರ ಹೊದ್ದು, ಇತರ ಸೀರೆಗಳ ಕೆಳಭಾಗದಲ್ಲಿ ಬೆಚ್ಚಗೆ ಮಲಗುತ್ತದೆ, ಧಾರೆ ಸೀರೆ! ಹಳೆಯ ಸೀರೆಯಿಂದ ಕೆಲವು ಹೆಂಗೆಳೆಯರು, ಚಂದದ ಕಾಲೊರಸುವ ಹಾಸನ್ನು ತಯಾರಿಸಿ, ಕಸದಿಂದ…ಅಲ್ಲಲ್ಲ… ಸೀರೆಯಿಂದ ರಸ ತೆಗೆದು ಮನೆಯ ಮುಂಬಾಗಿಲಿಗೆ ಕಳೆಯನ್ನು ನೀಡುವರು. ಇವುಗಳು ಬಹಳ ಆಕರ್ಷಕವಾಗಿದ್ದು ಬಾಳಿಕೆಯನ್ನೂ ಹೊಂದಿವೆ ಎಂಬುದಂತೂ ಸತ್ಯ.  ಹಳ್ಳಿಯಲ್ಲಿ ತರಕಾರಿ ಬೆಳೆಸಿದರೆ, ನವಿಲು, ಮೊಲಗಳ ಕಾಟ ವಿಪರೀತ. ಇದಕ್ಕೆ ಪರಿಹಾರವನ್ನು ಕಂಡುಕೊಂಡ ನಮ್ಮ ಪರಿಚಿತರು, ಅವರ ಮಡದಿಯ ಸೀರೆಗಳನ್ನೇ ಅದರ ಸುತ್ತಲೂ ಕಟ್ಟಿದರು. ಕಾಟವೇನೋ ಸ್ವಲ್ಪಮಟ್ಟಿಗೆ ಕಡಿಮೆಯಾದರೂ, ಮಡದಿ ತನ್ನ ಸೀರೆಗಳೆಲ್ಲಾ ತರಕಾರಿ ತೋಟದ ಸುತ್ತಲೂ ರಾರಾಜಿಸುವುದನ್ನು ಕಂಡು ಅಲವತ್ತುಕೊಂಡಳು…’ಉಡಲು ಸೀರೆಯೇ ಉಳಿದಿಲ್ಲಾ…!`

ಹಳೆಯದಾದಂತೆ  ಬಣ್ಣ ಮಾಸಿದ ಸೀರೆ ಉಡಲು ಮುಜುಗರವಾದರೆ, ಅದು ಹಪ್ಪಳ, ಸಂಡಿಗೆ ಒಣಗಿಸಲು ಉಪಯೋಗಕ್ಕೆ ಬರುತ್ತದೆ. ಹತ್ತಿ ಬಟ್ಟೆ ಸೀರೆಗಳಂತೂ ಉಪಯೋಗ ವೈವಿಧ್ಯತೆಯಲ್ಲಿ ಇನ್ನೂ ಮುಂದು! ನೆಲ ಒರಸಿ, ಹರಿದು ಚಿಂದಿ ಆಗುವ ವರೆಗೂ ತಮ್ಮ ಸೇವೆ ಸಲ್ಲಿಸಿ ಜೀವನ ಸಾರ್ಥಕಪಡಿಸಿಕೊಳ್ಳುತ್ತವೆ! ಹಿಂದೆ, ವಿದ್ಯುಚ್ಛಕ್ತಿ ಇಲ್ಲದ ಕಾಲದಲ್ಲಿ ಸೀಮೆಎಣ್ಣೆಯ ಬುಡ್ಡಿ ದೀಪಗಳೇ ನಮ್ಮ ಟೂಬ್ ಲೈಟುಗಳು! ಈ ದೀಪಗಳಿಗೆ ಹಳೆಯದಾದ ಹತ್ತಿ ಸೀರೆಯ ಬತ್ತಿಯನ್ನು ಹಾಕಿ ಉರಿಸುತ್ತಿದ್ದೆವು. ಹೀಗೆ ಹತ್ತಿ ಸೀರೆಯ ಜೀವನವು ಅದರ ಆಯುಸ್ಸು ಮುಗಿಯುವ ವರೆಗೂ ಇಂಚು ಇಂಚು ಉಪಯೋಗಕ್ಕೆ ಬರುವ ಕಲ್ಪತರು ಎನ್ನೋಣವೇ?!  

ಸೀರೆ ಎಂದರೆ ಅದಕ್ಕೊಪ್ಪುವ ರವಿಕೆ ಬಗ್ಗೆ ಹೇಳದಿದ್ದರೆ ಒಳಿತಲ್ಲ! ರವಿಕೆಯ ಬೆನ್ನ ಹಿಂದಿನ ವಿವಿಧ ವಿನ್ಯಾಸಗಳು ಬಹಳ ಚಂದ…ಆಕರ್ಷಕ. ಕೆಲವೊಮ್ಮೆ, ಹೊಲಿಗೆ ಮಜೂರಿಯು ಸೀರೆಯ ಬೆಲೆಗಿಂತಲೂ ಹೆಚ್ಚಾಗಿರುವುದೂ ಉಂಟು! ಹೊಲಿಗೆ ಕೆಲಸವು ಈ ದಿನಗಳಲ್ಲಿ ಬಹಳ ಬೇಡಿಕೆಯಲ್ಲಿದೆ. ಹಲವಾರು ಮಹಿಳೆಯರು ಬಿಡುವಿನ ವೇಳೆಯಲ್ಲಿ ಮನೆಯಲ್ಲಿಯೇ ಹೊಲಿಗೆಯಿಂದ ಸಾಕಷ್ಟು ಸಂಪಾದಿಸುವುದು ಸರ್ವೇಸಾಮಾನ್ಯ. ಆದರೆ ಸಕಾಲದಲ್ಲಿ, ಸಮರ್ಪಕವಾಗಿ ಹೊಲಿದು ಕೊಡುವವರು ಅಪರೂಪ. ಬರುವ ವಾರ ಖಂಡಿತಾ ಕೊಡುವುದಾಗಿ ನೀಡುವ ಸುಳ್ಳು ಆಶ್ವಾಸನೆಯನ್ನು ನಂಬಿ, ಸಕಾಲಕ್ಕೆ ರವಿಕೆ ಸಿಗದೆ ಒದ್ದಾಡುವುದು ನಿಜಕ್ಕೂ ಶೋಚನೀಯ! ನನಗೆ ರವಿಕೆಯನ್ನು ನಾನೇ ಹೊಲಿದುಕೊಳ್ಳುವುದರಿಂದ ಈ ತರಹದ ಎಡವಟ್ಟು ನನಗಂತೂ ಆಗುವುದಿಲ್ಲ ಬಿಡಿ! ರವಿಕೆಯ ನೂರಾರು ಬಗೆ ವಿನ್ಯಾಸಗಳು ಯಾವಾಗಲೂ ನವನವೀನ. ಪುಗ್ಗೆ ಕೈ, ಉದ್ದ ಕೈ, ಗಿಡ್ಡ ಕೈ, ಪೂರ್ತಿ ಕೈ ಹೀಗೆ ತರೆಹೇವಾರು ಕೈಗಳು; ಹಿಂಭಾಗದ ಕೊರಳಿನ ವಿನ್ಯಾಸ, ಅಲಂಕಾರಗಳಂತೂ ಹುಬ್ಬೇರಿಸುವಂತಿರುತ್ತವೆ.  ಹೊಸ ಸೀರೆ ಕೊಂಡಾಗ ಅದಕ್ಕೊಪ್ಪುವ ರವಿಕೆಯು ಉಪಯೋಗಿಸಿದಂತೆಲ್ಲಾ ಹಾಳಾಗಿಬಿಡುತ್ತದೆ. ನಾನು ಅದಕ್ಕೊಂದು ಸುಲಭದ ಪರಿಹಾರ ಕಂಡುಕೊಂಡಿದ್ದೇನೆ. ಒಂದಕ್ಕಿಂತ ಹೆಚ್ಚು ಬಣ್ಣಗಳ ವಿನ್ಯಾಸವಿರುವ ರವಿಕೆ ಬಟ್ಟೆಯನ್ನು ಕೊಂಡುಕೊಂಡರೆ ಒಂದೇ ರವಿಕೆಯನ್ನು ನಾಲ್ಕೈದು ಸೀರೆಗಳಿಗೆ ಯಾವುದೇ  ಚಿಂತೆ ಇಲ್ಲದೆ ಹಾಕಿಬಿಡಬಹುದು. ಓದುಗ ಭಗಿನಿಯರಾದ ನೀವೂ ಇದನ್ನು ಪ್ರಯತ್ನಿಸಿ ನೋಡಬಹುದು..ನನ್ನದೇನೂ ಅಡ್ಡಿಯಿಲ್ಲ. 

ಈ ದುಬಾರಿ ಸೀರೆ, ರವಿಕೆಗಳನ್ನು ಕಾಪಿಡುವ ಕೆಲಸವೂ ಅಷ್ಟೇ ಸವಾಲಿನದ್ದಾಗಿದೆ ನೋಡಿ. ಅದರಲ್ಲೂ ಸಿಲ್ಕ್ ಸೀರೆಗಳು ಸ್ವಲ್ಪ ಸಮಯದಲ್ಲೇ ತೂತುಬಿದ್ದು ಹಾಳಾಗಿ ನಮ್ಮ ಹೊಟ್ಟೆ ಉರಿಸುವುದು ಸಾಮಾನ್ಯ. ಪ್ರತಿ ವರ್ಷವೂ ಸ್ವಾತಿ ಮಹಾನಕ್ಷತ್ರದ ದಿನಗಳಲ್ಲಿ ಸಿಲ್ಕ್ ಸೀರೆಗಳನ್ನು ಒಂದೆರಡು ತಾಸು ನೆರಳಿನಲ್ಲಿ ಗಾಳಿಗೆ ಹಾಕಿ ಮಡಿಚಿಟ್ಟರೆ ಇಂತಹ ತೊಂದೆರೆಯಿಲ್ಲ ಎಂಬುದು ನಾನು ಕಂಡುಕೊಂಡ ಸತ್ಯ. ಇದನ್ನು ನೀವೂ ಪ್ರಯೋಗಿಸಿ ಲಾಭ ಪಡೆದುಕೊಳ್ಳಬಹುದು.

ಇನ್ನು ಸೀರೆಗೆ ಹೊಂದುವ ಪೆಟ್ಟಿಕೋಟ್/ ಲಂಗ… ಇದರದ್ದು ಇನ್ನೊಂದು ಕಥೆ. ಇದರ ಬಣ್ಣ ಸರಿಯಾಗಿ ಹೊಂದಿಕೆಯಾಗದಲ್ಲಿ, ತೆಳುವಾದ ಸೀರೆಯನ್ನು ಉಡುವ ಹಾಗೆಯೇ ಇಲ್ಲ. ದಪ್ಪ ಸೀರೆ ಈ ನಿಯಮವನ್ನು ಮೀರಿ ಹೊಂದಿಕೊಂಡು ಹೋಗುತ್ತದೆ ಬಿಡಿ. ಅದಕ್ಕಾಗಿ ಸಾಕಷ್ಟು ಕಪ್ಪು ಬಣ್ಣದ ಲಂಗಗಳು ನಮ್ಮ ಖಜಾನೆಯಲ್ಲಿದ್ದರೆ ಗಾಢಬಣ್ಣದ ಸೀರೆಗಳಿಗೆ ಯಾವುದೇ ತಕರಾರಿಲ್ಲದೆ ಒಗ್ಗಿಕೊಳ್ಳುತ್ತವೆ. ನಿರ್ವಹಣೆ ಸ್ವಲ್ಪ ಕಷ್ಟವಾದರೂ, ಶುದ್ಧ ಹತ್ತಿ ಬಟ್ಟೆಯ ಸೀರೆಯಷ್ಟು ಅನುಕೂಲಕರ ಹಾಗೂ ಹಿತಕರವಾಗಿರುವುದು ಬೇರಿಲ್ಲವೆಂದು ನನ್ನ ಅಭಿಪ್ರಾಯ. ಸೋದರಿಯರೇ… ನೀವೇನು ಹೇಳುವಿರಿ?? 

ನೀರೆಯರ ಸೀರೆಗೆ ಜೈ!!

– ಶಂಕರಿ ಶರ್ಮ, ಪುತ್ತೂರು.  

11 Responses

  1. S.sudha says:

    ನನಗೂ ಸೀರೆ ನೇ ಇಷ್ಟ. ಸೀರೆಗಳಿಂದ door mat, ರಜಾಯಿ ಕೂಡ ಹೊಲಿಯುತ್ತಾರೆ. ಇದು ಮನೆ ಉದ್ಯೋಗ ಆಗಿದೆ.

    • ನಯನ ಬಜಕೂಡ್ಲು says:

      ಚಂದದ ಲೇಖನ. ಎಷ್ಟು ಸೀರೆಗಳಿದ್ದರೂ ಕಪಾಟು ಓಪನ್ ಮಾಡಿದಾಗ ಎಲ್ಲ ಹಳೆಯದಾಗಿದೆ ಅನ್ನುವ ಭಾವ ಪ್ರತಿ ಸಲ ಅವರಿಸುವಂತದ್ದು.

    • ಶಂಕರಿ ಶರ್ಮ says:

      ನನ್ನ ಪಾರ್ಟಿಗೆ ನೀವೂ ಇದ್ದೀರಲ್ಲಾ…ಸುಧಾ ಮೇಡಂ..ಒಳ್ಳೆದಾಯ್ತು! ಲೇಖನ ಓದಿ ಪ್ರೀತಿಯಿಂದ ಸ್ಪಂದಿಸಿದ ನಿಮಗೆ ಧನ್ಯವಾದಗಳು.

  2. ಸೀರೆಬಗ್ಗೆ ಚಂದದ ಲೇಖನ ಕೊಟ್ಟ ನಿಮಗೆ ಧನ್ಯವಾದಗಳು ಶಂಕರಿ ಮೇಡಂ..

  3. Anonymous says:

    A nice article about multipurpose use of a saree.
    Lalitha S

  4. ಪದ್ಮಾ ಆನಂದ್ says:

    ಸೀರೆಯ ಬಗ್ಗೆ ಚೆನ್ನಾದ ಲೇಖನ ಬರೆದ ನೀರೆಗೆ ಜೈ . .

  5. ಶಂಕರಿ ಶರ್ಮ says:

    ಧನ್ಯವಾದಗಳು ಪದ್ಮಾ ಮೇಡಂ

  6. Hema Mala says:

    ಸೀರೆಯ ಬಗ್ಗೆ ಅದೆಷ್ಟು ಮಾಹಿತಿ ಕೊಟ್ಟಿದ್ದೀರಿ….!ಚೆಂದದ ಬರಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: