ಮೂಡಿದ ಬೆಳದಿಂಗಳು.

Share Button

ಮೈಸೂರು ದಸರಾ ವಸ್ತು ಪ್ರದರ್ಶನ ನೋಡಲು ತಮ್ಮ ಮೊಮ್ಮಕ್ಕಳೊಡನೆ ಸ್ವಾಮಿ ಮಾಸ್ತರರು ಹೋಗಿದ್ದರು. ಬೆಳಕಿನ ಸಾಲುಸಾಲು ದೀಪಗಳಿಂದ ಅಲಂಕೃತಗೊಂಡಿದ್ದ ಅಂಗಡಿಗಳ ಮುಂದೆ ಗಿಜುಗುಟ್ಟುವ ಜನಸಂದಣಿ. “ಹಿಂದೆ ಮುಂದೆ ನೋಡಿಕೊಂಡು ನಡೆಯಿರಿ ಮಕ್ಕಳೆ. ಕಳೆದುಹೋದೀರಿ” ಎಂದು ಮೊಮ್ಮಕ್ಕಳನ್ನು ಎಚ್ಚರಿಸಿದರು. “ತಾತ ನೀವು ಜೋಪಾನ, ನಾವು ಕಳೆದು ಹೋಗುವ ಭಯವಿಲ್ಲ. ನಮ್ಮ ಹತ್ತಿರ ಮೊಬೈಲಿದೆ. ಆದರೆ ನೀವು ನಿಮ್ಮ ಮೊಬೈಲನ್ನು ಮನೆಯಲ್ಲೇ ಬಿಟ್ಟು ಬಂದಿದ್ದೀರಾ” ಎಂದು ಕಿಸಕ್ಕನೆ ನಕ್ಕ ಮೊಮ್ಮಗನ ತಲೆಯ ಮೇಲೆ ಪ್ರೀತಿಯಿಂದ ಮೊಟಿಕಿದರು ಮಾಸ್ತರು. ಹೀಗೆ ತಾತ ಮೊಮ್ಮಕ್ಕಳು ಒಬ್ಬರಿಗೊಬ್ಬರು ಕಿಚಾಯಿಸುತ್ತಾ ಒಬ್ಬರು ಇನ್ನೊಬ್ಬರ ಕೈಗಳನ್ನು ಹಿಡಿದುಕೊಂಡು ಮುಂದೆ ಮುಂದೆ ಸಾಗುತ್ತಿದ್ದರು.

ಸ್ವಲ್ಪ ದೂರ ಹೋಗುತ್ತಿದ್ದಂತೆ ತಿಂಡಿಗಳ ಅಂಗಡಿಸಾಲಿನಿಂದ ಒಬ್ಬ ವ್ಯಕ್ತಿ ಸುಮಾರು ಮೂವ್ವತೈದರ ಆಸುಪಾಸಿನವ ದಾಪುಗಾಲು ಹಾಕುತ್ತಾ ಮಾಸ್ತರರ ಮುಂದೆ ಬಂದು ನಿಂತು “ನಮಸ್ಕಾರ ಸಾರ್, ಚೆನ್ನಾಗಿದ್ದೀರಾ?” ಎಂದ. ಮಾಸ್ತರರಿಗೆ ತಕ್ಷಣ ಅವನ ಗುರುತು ಸಿಗಲಿಲ್ಲ. ಅವನ ಮುಖಚಹರೆಯು ಮಸುಕು ಮಸುಕಾಗಿ ನೆನಪಿಗೆ ಬಂದರೂ ಹೆಸರು ನೆನಪಾಗಲಿಲ್ಲ. “ನಿನ್ನ ಗುರುತು ಹತ್ತಲಿಲ್ಲಪ್ಪ, ಬಹಳ ವರ್ಷಗಳಾಯ್ತು ನೋಡಿ. ಈಗೀಗ ವಯಸ್ಸಿನ ಕಾರಣದಿಂದ ಮರೆವು ಶುರುವಾಗಿದೆ.” ಎಂದರು.

ಆ ವ್ಯಕ್ತಿಯು “ನಾನು ಸಾರ್, ನಿಮ್ಮ ಶಿಷ್ಯನಾಗಿದ್ದವನು ಚಿಕ್ಕಾರಳ್ಳಿ ನಾಗಣ್ಣ” ಎಂದ ತಕ್ಷಣ ಮಾಸ್ತರರಿಗೆ ಅವನ ಜ್ಞಾಪಕವಾಯಿತು. “ಏ ನಾಗಣ್ಣಾ, ಎಷ್ಟು ವರ್ಷವಾಯಿತೋ ನಿನ್ನ ನೋಡಿ. ಹೇಗಿದ್ದೀಯಪ್ಪಾ? ಈಗ ಎಲ್ಲಿದ್ದೀಯೆ? ಏನು ಮಾಡಿಕೊಂಡಿದ್ದೀಯೋ?” ಎಂದು ಪ್ರಶ್ನಿಸಿದರು.

ಮಾಸ್ತರರ ಮಾತನ್ನು ಕೇಳಿದ ಅವನು “ನೋಡಿ ಸಾರ್, ಅಲ್ಲಿ ಎದುರಿಗೆ ಕಾಣುತ್ತಿದೆಯಲ್ಲಾ ಚುರುಮುರಿ ಅಂಗಡಿ, ಅದು ನನ್ನದೇ. ನಾನೇ ನಡೆಸುತ್ತಿದ್ದೇನೆ. ಸದ್ಯಕ್ಕೆ ಕ್ಯಾತಮಾರನಹಳ್ಳಿಯಲ್ಲಿ ಸಣ್ಣ ಬಾಡಿಗೆ ಮನೆಯಲ್ಲಿದ್ದೇನೆ. ನಮ್ಮಮ್ಮ ಮತ್ತು ಹೆಂಡತಿ ಊದುಬತ್ತಿ ಹೊಸೆಯುವ ಕೆಲಸ ಮಾಡಿಕೊಂಡಿದ್ದಾರೆ. ಅಂತೂ ಅಲ್ಲಿಗಲ್ಲಿಗೆ ಬದುಕು ಸಾಗಿಸುತ್ತಿದ್ದೇವೆ” ಎಂದ ನಾಗಣ್ಣ.

“ಏನೆಂದೆ? ಚುರುಮುರಿ ಅಂಗಡಿಯಾ? ನನಗೆ ನಂಬಲಿಕ್ಕೇ ಆಗುತ್ತಿಲ್ಲ. ನಿನ್ನ ತಾಯಿ, ಹೆಂಡತಿ ಊದುಬತ್ತಿ ಹೊಸೆಯುವ ಕೆಲಸ ಮಾಡುತ್ತಿದ್ದಾರಾ? ನನಗೇನೂ ಅರ್ಥವಾಗುತ್ತಿಲ್ಲ. ಅಲ್ಲ ನಿನ್ನ ಓದು…”ಮುಂದಿನ ಮಾಸ್ತರರ ಮಾತುಗಳನ್ನು ಮೊಮ್ಮಕ್ಕಳು ತಡೆದರು. “ತಾತ, ಚುರುಮುರಿ ಕೊಡಿಸಿ ಬನ್ನಿ” ಎಂಬ ಬೇಡಿಕೆಯನ್ನಿಟ್ಟು ಕೈಹಿಡಿದು ಎಳೆದಾಗ ತಮ್ಮ ಪ್ರಶ್ನೆಯನ್ನು ತಮ್ಮಲ್ಲೇ ಉಳಿಸಿಕೊಂಡು ಅವರನ್ನು ಕರೆದುಕೊಂಡು ಶಿಷ್ಯನ ಅಂಗಡಿಯತ್ತ ನಡೆದರು. ಅಂಗಡಿಯಲ್ಲಿ ನಾಗಣ್ಣ ಮಕ್ಕಳಿಗೆ ಚುರುಮುರಿ ಮಾಡಿಕೊಡಲು ತನ್ನ ಸಹಾಯಕನಿಗೆ ಹೇಳಿ “ಸಾರ್, ನಿಮ್ಮ ಬಳಿ ಬಹಳ ಮಾತನಾಡಬೇಕು. ನಿಮ್ಮ ಮನೆ ವಿಳಾಸ, ಫೋನ್ ನಂಬರ್ ಇದರಲ್ಲಿ ಬರೆದುಕೊಡಿ” ಎಂದು ಒಂದು ಸಣ್ಣ ಪಾಕೆಟ್ ಡೈರಿಯನ್ನು ಅವರ ಕೈಗಿತ್ತ. ತುಂಬ ಕುತೂಹಲ ಹೊಂದಿದ್ದ ಮಾಸ್ತರರು ಅವನು ಕೊಟ್ಟ ಪುಸ್ತಕದಲ್ಲಿ ತಾವು ವಾಸವಾಗಿದ್ದ ತಮ್ಮ ಮಗನ ಮನೆಯ ವಿಳಾಸ ತಮ್ಮ ಫೋನ್ ನಂಬರ್ ಬರೆದುಕೊಟ್ಟು ಮಕ್ಕಳನ್ನು ಕರೆದುಕೊಂಡು ಮುಂದೆ ನಡೆದರು.

ಮಾಸ್ತರರ ಮೊಮ್ಮಕ್ಕಳು ಚುರುಮುರಿ ಪೊಟ್ಟಣಗಳನ್ನು ಹಿಡಿದು ಹುಲ್ಲುಹಾಸಿನ ಬಳಿಯಿದ್ದ ಸಿಮೆಂಟು ಬೆಂಚಿನಮೇಲೆ ಕುಳಿತರು. ಸ್ವಾಮಿ ಮಾಸ್ತರರು ಪಕ್ಕದಲ್ಲೇ ಕುಳಿತರು. “ತಾತಾ ತೆಗೆದುಕೊಳ್ಳಿ ಚುರುಮುರಿ ತುಂಬ ಚೆನ್ನಾಗಿದೆ..ಹಿಡಿಯಿರಿ” ಎಂದು ಅವರ ಮುಂದಕ್ಕೆ ಕೈಚಾಚಿದಾಗ “ಬೇಡ ಮಕ್ಕಳೇ, ನೀವು ತಿನ್ನಿರಿ. ನಾನು ಇವೆಲ್ಲ ತಿಂದರೆ ರಾತ್ರಿ ಊಟ ಮಾಡಲಾಗುವುದಿಲ್ಲ. ನಿಧಾನವಾಗಿ ತಿನ್ನಿರಿ” ಎಂದು ತಾವು ಹಿಡಿದಿದ್ದ ಚೀಲದಿಂದ ನೀರಿನ ಬಾಟಲಿ ತೆಗೆದು ಅವರ ಪಕ್ಕದಲ್ಲಿಟ್ಟರು. ಹಾಗೇ ಅವರ ಆಲೋಚನೆಗಳು ಹಳೆಯ ದಿನಗಳತ್ತ ಸರಿದವು.

ಸ್ವಾಮಿ ಮಾಸ್ತರರು ಚಿಕ್ಕಾರಳ್ಳಿ ಹೈಸ್ಕೂಲಿನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿನ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಲ್ಲಿ ನಾಗಣ್ಣನೂ ಒಬ್ಬ. ಅವನು ಓದಿನಲ್ಲಿ ಎಲ್ಲರಿಗಿಂತ ಮುಂದಿದ್ದ. ಅಷ್ಟೇ ಏಕೆ, ಚುರುಕು ಬುದ್ಧಿ, ಸೂಕ್ಷ್ಮ್ಮ ಗ್ರಹಿಕೆ ಅವನಿಗಿತ್ತು. ಶಾಲಾ ಪಠ್ಯಗಳಷ್ಟೇ ಅಲ್ಲದೆ ಮಾಸ್ತರರ ಮನೆಯಿಂದ ಅನೇಕ ಸಾಹಿತ್ಯದ ಪುಸ್ತಕಗಳನ್ನೂ ಅವನು ಪಡೆದುಕೊಂಡು ಓದುತ್ತಿದ್ದ. ಅವುಗಳ ಬಗ್ಗೆ ಅವರೊಡನೆ ಚರ್ಚಿಸುತ್ತಿದ್ದ. ಇದರಿಂದ ಅವನು ಮಾಸ್ತರರಿಗೆ ಅಚ್ಚಮೆಚ್ಚಿನವನಾಗಿದ್ದ. ಅವನ ಆಸಕ್ತಿಯನ್ನು ಕಂಡು ಅವರು ಲೈಬ್ರರಿಯಿಂದ ಹೊಸಹೊಸ ಪುಸ್ತಗಳನ್ನು ಓದಲು ಅವನಿಗೆ ತಂದುಕೊಡುತ್ತಿದ್ದರು. ಇವೆಲ್ಲದರಿಂದ ಅವನಲ್ಲಿಯೂ ಸೃಜನಶೀಲ ಕಲ್ಪನೆಗಳು ಮೂಡಿದಾಗ ತನಗೆ ತೋರಿದಂತೆ ಕೆಲವು ಕವನಗಳನ್ನೂ, ಕತೆಗಳನ್ನೂ ಬರೆದು ಮಾಸ್ತರರಿಗೆ ತೋರಿಸುತ್ತಿದ್ದ. ಅವರು ಅವನ್ನು ಓದಿ ಅಗತ್ಯವಾದ ತಿದ್ದುಪಡಿಮಾಡಿ ಕೊಡುತ್ತಾ ಹೆಚ್ಚುಹೆಚ್ಚು ಬರೆಯಲು ಪ್ರೋತ್ಸಾಹಿಸುತ್ತಿದ್ದರು.

ಎಸ್.ಎಸ್.ಎಲ್.ಸಿ., ಪರೀಕ್ಷೆಯಲ್ಲಿ ನಿರೀಕ್ಷೆಯಂತೆ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾದ ನಾಗಣ್ಣ. ಕಾಲೇಜು ವ್ಯಾಸಂಗಕ್ಕೆ ಮೈಸೂರಿಗೆ ಹೊರಟಾಗ ಮಾಸ್ತರರು ತುಂಬು ಹೃದಯದಿಂದ ಅವನನ್ನು ಅಶೀರ್ವದಿಸಿ ಅವನನ್ನು ಬೀಳ್ಕೊಟ್ಟಿದ್ದರು. ನಂತರದ ದಿನಗಳಲ್ಲಿ ಅವರಿಬ್ಬರ ಭೇಟಿ ವಿರಳವಾಗಿತ್ತು. ಮಾಸ್ತರರಿಗೆ ತಮ್ಮ ಶಿಷ್ಯನು ಒಂದಲ್ಲ ಒಂದು ದಿನ ಉನ್ನತ ವಿದ್ಯಾವಂತನಾಗಿ ಬೆಳೆಯುತ್ತಾನೆಂಬ ಖಚಿತ ವಿಶ್ವಾಸವಿತ್ತು.

ಇದಾಗಿ ಹಲವು ಕಾಲ ಮಾಸ್ತರರು ವರ್ಗಾವಣೆಯಿಂದ ಬೇರೆಬೇರೆ ಊರುಗಳಲ್ಲಿ ಸೇವೆಸಲ್ಲಿಸಿ ನಿವೃತ್ತರಾದರು. ಅವರ ಮಗನು ಮೈಸೂರಿನ ಕಂಪನಿಯೊಂದರಲ್ಲಿ ನೌಕರಿ ಮಾಡುತ್ತಿದ್ದುದರಿಂದ ಅವರು ಮಗನ ಮನೆಯಲ್ಲಿ ನೆಲೆಸಿದ್ದರು. ಮಾಸ್ತರರ ಕಲ್ಪನೆಯಲ್ಲಿ ನಾಗಣ್ಣನಂಥ ಮೇಧಾವಿ ಅಷ್ಟು ಹೊತ್ತಿಗೆ ಸ್ನಾತಕೋತ್ತರ ಪದವೀಧರನಾಗಿ ಯಾವುದೋ ಒಂದು ಕಾಲೇಜಿನಲ್ಲಿ ಅಧ್ಯಾಪಕನಾಗಿರಬಹುದು ಎಂದುಕೊಂಡಿದ್ದರು. ಆದರೆ ! ನಾಗಣ್ಣ …ಚುರುಮುರಿ ಅಂಗಡಿ …ಅವನ ತಾಯಿ ಹೆಂಡತಿ ಊದುಬತ್ತಿ ಹೊಸೆಯುವುದು… ಕೇಳಿದಾಗ ಎಲ್ಲವೂ ಅಯೋಮಯ ಎನ್ನಿಸಿತು. ಯಾಕೆ ಏನಾಗಿರಬಹುದು? ಎಂದುಕೊಳ್ಳುವಷ್ಟರಲ್ಲಿ “ತಾತಾ ಚುರುಮುರಿ ತಿಂದದ್ದಾಯಿತು. ಎಲ್ಲಾ ನೋಡಿದ್ದೂ ಆಯಿತು. ಮನೆಗೆ ಹೋಗೋಣವಾ?” ಎಂದು ಮೊಮ್ಮಕ್ಕಳು ಅವರನ್ನು ಎಚ್ಚರಿಸಿದರು. ವಾಸ್ತವಕ್ಕೆ ಹಿಂದಿರುಗಿದ ಮಾಸ್ತರರು “ಹುಂ..ಹೇಗೂ ಮನೆಗೇ ಬರುತ್ತೇನೆಂದು ಹೇಳಿದ್ದಾನಲ್ಲಾ ಆಗ ಕೇಳಿದರಾಯಿತು.”ಎಂದುಕೊಂಡು ಮೊಮ್ಮಕ್ಕಳ ಕೈಹಿಡಿದು ಮನೆಯತ್ತ ನಡೆದರು.

ದಸರಾ ವಸ್ತು ಪ್ರದರ್ಶನದಿಂದ ಹಿಂತಿರುಗಿದ ಮೇಲೆ ಪ್ರತಿದಿನ ತನ್ನ ಶಿಷ್ಯ ನಾಗಣ್ಣನ ನಿರೀಕ್ಷೆ ಮಾಡುತ್ತಲೇ ಇದ್ದರು. ಮನೆಗೆ ಯಾರೇ ಬರಲಿ ರೂಮಿನ ಕಿಟಕಿಯಿಂದಲೇ ಬಗ್ಗಿ ನೋಡುತ್ತಿದ್ದರು. ಸುಮಾರು ಒಂದು ತಿಂಗಳು ಕಳೆದರೂ ಅವನ ಸುಳಿವೇ ಇಲ್ಲ. ಏನು ಕೆಲಸವೋ ಏನೋ ಅಥವಾ ಬಾಯಿಮಾತಿಗೆ ಹಾಗೆ ಹೇಳಿದನೋ ಎಂಬ ಅನುಮಾನ. “ಅವನ ಫೋನ್ ನಂಬರನ್ನಾದರೂ ಕೇಳಿ ಬರದುಕೊಳ್ಳಬಹುದಾಗಿತ್ತು. ಹೊಳೆಯಲೇ ಇಲ್ಲ” ಎಂದು ಪಶ್ಚಾತ್ತಾಪ ಪಟ್ಟರು. ಹೀಗೇ ಇನ್ನೊಂದು ತಿಂಗಳೂ ಉರುಳಿತು.

ಒಂದು ದಿನ ಸಂಜೆ ವೇಳೆಯಲ್ಲಿ ಯಾವುದೋ ಪುಸ್ತಕವನ್ನು ಓದುತ್ತಾ ವೆರಾಂಡಾದಲ್ಲಿ ಕುಳಿತಿದ್ದರು ಸ್ವಾಮಿ ಮಾಸ್ತರರು. ಯಾರೊ ಮುಂಬಾಗಿಲ ಬಳಿ ಬಂದು ಬೆಲ್ ಒತ್ತಿದರು. ಯಾರೆಂದು ಬಾಗಿಲು ತೆಗೆದವರು ನೋಡಿದ್ದೇ ನಾಗಣ್ಣನನ್ನು. ಕೈಯಲ್ಲಿದ್ದ ಹಣ್ಣಿನ ಚೀಲವನ್ನು ಗುರುಗಳ ಕೈಗಿತ್ತು ಅವರಿಗೆ ಬಾಗಿ ನಮಸ್ಕರಿಸಿದ. “ಬಾ..ನಾಗಣ್ಣಾ” ಎಂದು ಅತ್ಯಂತ ಆತ್ಮೀಯತೆಯಿಂದ ಒಳಕರೆದು ತಮ್ಮೆದುರಿಗಿದ್ದ ಕುರ್ಚಿಯತ್ತ ಕೈತೋರಿ ಕುಳಿತುಕೊಳ್ಳಲು ಹೇಳಿದರು. ಸಂಕೋಚದಿಂದಲೇ ಕುಳಿತ ತಮ್ಮ ಶಿಷ್ಯನನ್ನು ತಮ್ಮ ಸೊಸೆಗೆ ಪರಿಚಯ ಮಾಡಿಸಿ ಟೀ ಮಾಡಿ ತರಲು ಹೇಳಿದರು. ದಸರಾ ವಸ್ತು ಪ್ರದರ್ಶನದಿಂದ ಹಿಂತಿರುಗಿದ ದಿನದಿಂದ ಮಾಸ್ತರರ ಬಾಯಿಂದ ನಾಗಣ್ಣನ ಬಗ್ಗೆ ಆಕೆ ಕೇಳಿದ್ದರಿಂದ ನಸುನಕ್ಕು ಮಾತನಾಡಿಸಿ ಟೀ ತರಲು ಒಳನಡೆದಳು.

“ಹೂಂ.. ಏನೋ ಬಹಳ ಮಾತನಾಡಬೇಕೆಂದು ಹೇಳಿದೆಯಲ್ಲ ಈಗ ಹೇಳು. ನನಗೂ ಕೇಳಬೇಕೆಂಬ ಕುತೂಹಲವಿದೆ” ಎಂದರು.
‘ಏನಂತ ಹೇಳಲಿ ಸಾರ್. ನನಗೂ ಯಾರಾದರೊಬ್ಬ ಆತ್ಮೀಯರೊಡನೆ ನನ್ನೆಲ್ಲಾ ದುಗುಡಗಳನ್ನು ತೋಡಿಕೊಳ್ಳಬೇಕೆಂದು ತುಂಬ ದಿನಗಳಿಂದ ಬಯಕೆಯಿತ್ತು. ನಿಮಗಿಂತ ಅತ್ಮೀಯರು ನನಗೆ ಯಾರು ತಾನೇ ಇದ್ದಾರೆ ಸಾರ್” ಅವನ ಮಾತನ್ನು ಅರ್ಧದಲ್ಲಿಯೇ ತಡೆದು “ನಾನು ಸಿದ್ಧವಾಗಿ ಕುಳಿತಿದ್ದೇನೆ. ಹೇಳುವಂತಹವನಾಗು ಶಿಷ್ಯೋತ್ತಮಾ” ಎಂದರು ನಾಟಕೀಯವಾಗಿ ಮಾಸ್ತರರು. ಇದರಿಂದ ತುಸು ಗೆಲುವಾದ ನಾಗಣ್ಣ ತನ್ನ ಕಥೆಯನ್ನು ಪ್ರಾರಂಭಿಸಿದನು.

“ಸಾರ್ ನಿಮಗೆ ತಿಳಿದಂತೆ ನಾನು ಮೈಸೂರಿನಲ್ಲಿ ಮಹಾರಾಜಾ ಕಾಲೇಜು ಸೇರಿ ಪಿ.ಯು.ಸಿ., ವ್ಯಾಸಂಗದಲ್ಲಿದೆ.್ದ ಊಟಕ್ಕೆ ನಮ್ಮ ನೆಂಟರೊಬ್ಬರ ಮನೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದರು. ನಾವು ನಾಲ್ಕು ಜನ ಸಹಪಾಠಿಗಳು ಸೇರಿ ಸೀಬಯ್ಯ ರಸ್ತೆಯಲ್ಲಿ ಒಂದು ಬಾಡಿಗೆ ಕೊಠಡಿಯಲ್ಲಿ ವಾಸವಿದ್ದೆವು. ಅದರ ಖರ್ಚನ್ನು ಸಮನಾಗಿ ಎಲ್ಲರೂ ಹಂಚಿಕೊಳ್ಳುತ್ತಿದ್ದೆವು. ಎರಡು ವರ್ಷ ನಿರಾತಂಕವಾಗಿ ಕಳೆದುಹೋದವು. ಪರೀಕ್ಷೆ ಮುಗಿಸಿ ಬೇಸಗೆ ರಜೆಬಂದಾಗ ಊರಿಗೆ ಬಂದೆ. ನಮ್ಮ ಅಮ್ಮ ಅಪ್ಪನಿಗೆ ಮಗ ಕಾಲೇಜು ಓದುತ್ತಿದ್ದಾನೆಂಬ ಹಿಗ್ಗು. ಮುಂದಕ್ಕೆ ಓದುತ್ತಾನೆಂಬ ಹಮ್ಮೂ ಇತ್ತು. ಮನೆಯಲ್ಲಿ ನನಗೇನೂ ಕೆಲಸಕಾರ್ಯಗಳನ್ನು ಹೇಳುತ್ತಿರಲಿಲ್ಲ. ಅಮ್ಮನಂತೂ ಅಲ್ಲಿ ಹೊತ್ತುಗೊತ್ತಿಗೆ ಹೊಟ್ಟೆತುಂಬ ಊಟವೆಲ್ಲಿದೆ. ಅದಕ್ಕೇ ಸೊರಗಿದ್ದೀಯೆ ಎಂದು ಹಾಲು, ತುಪ್ಪ, ಮೊಸರುಗಳನ್ನು ಪ್ರೀತಿಯಿಂದ ಉಣಿಸಿ ನೋಡಿಕೊಳ್ಳುತ್ತಿದ್ದಳು. “ನಮ್ಮ ಹೊಲ ಗೇಯುವ ಕಷ್ಟ ನಮ್ಮ ತಲೆಗೇ ಸಾಕು ಮಗಾ, ನೀನು ಹೆಚ್ಚಾಗಿ ಓದಿ ದೊಡ್ಡದಾದ ನೌಕರಿ ಮಾಡು.” ಎಂದು ಹಾರೈಸುತ್ತಿದ್ದಳು. ನನಗಂತೂ ಇಂತಹ ಹೆತ್ತವರನ್ನು ಪಡೆದ ನಾನೇ ಅದೃಷ್ಟವಂತನೆಂದು ಹೆಮ್ಮೆ ಪಟ್ಟೆ. ಇವರ ನಿರೀಕ್ಷೆಯನ್ನು ಹುಸಿಮಾಡದೆ ಚೆನ್ನಾಗಿ ಓದಿ ಒಳ್ಳೆಯ ನೌಕರಿ ಗಳಿಸಿ ಇವರನ್ನು ಸುಖವಾಗಿ ನೋಡಿಕೊಳ್ಳಬೇಕೆಂದು ನಿರ್ಧರಿಸಿದೆ. ಮೈಸೂರಿಗೆ ಹಿಂದಿರುಗಲು ಇನ್ನು ಹತ್ತು ದಿನಗಳು ಮಾತ್ರ ಬಾಕಿ ಇದ್ದವು.

ನಾವಿದ್ದ ಮನೆಯ ಸಾಲಿನಲ್ಲೇ ಇನ್ನೂ ಹತ್ತಾರು ಮನೆಗಳು ಇದ್ದವು. ಒಂದು ದಿನ ಮಧ್ಯರಾತ್ರಿಯಲ್ಲಿ ನಾವಿದ್ದ ಮನೆಯ ನಾಲ್ಕೈದು ಮನೆಗಳ ಆಚೆ ಜೋರಾದ ಕೂಗಾಟ, ಬೈದಾಟ ಕೇಳಿಬಂತು. ಎದ್ದು ಮುಂಬಾಗಿಲು ತೆಗೆದು ನೋಡಿದಾಗ ಆ ಮನೆಯ ಮುಂದೆ ದೊಡ್ಡದೊಂದು ಜನರ ಗುಂಪೇ ಸೇರಿತ್ತು. ಕೆಟ್ಟ ಭಾಷೆಯ ಬೈಗಳು, ಪ್ರತಿಬೈಗಳು ಪುಂಖಾನುಪುಂಖವಾಗಿ ಹಾರುತ್ತಿದ್ದವು. ಏನು ವಿಷಯವೆಂದು ಅಪ್ಪನನ್ನು ಕೇಳಿದ್ದಕ್ಕೆ “ಅದೇನಂತ ಹೇಳಲಿ ಮಗಾ, ಅದೊಂದು ಬಗೆಹರಿಯದ ದಾಯಾದಿ ಜಗಳ. ಇವರ ಹೊಲಕ್ಕೆ ಅವರ ದನ ಬಂತು, ಅವರ ಹಲಸಿನ ಮರದಲ್ಲಿ ಇವರು ಕಾಯಿ ಕಿತ್ತರು, ಪಾಲು ಸರಿಯಾಗಿ ಮಾಡಿಲ್ಲ, ಹೀಗೆ ಚಿಕ್ಕಚಿಕ್ಕ ಕಾರಣಗಳಿಗಾಗಿ ಅಣ್ಣತಮ್ಮ, ವಾರಗಿತ್ತಿಯರು ಅವರಪರ, ಇವರಪರ ಹಿಂಬಾಲಕರು ಆಗಾಗ್ಗೆ ಜಗಳಕ್ಕೆ ನಿಲ್ಲುತ್ತಲೇ ಇರುತ್ತಾರೆ. ಇದು ಬಗೆಹರಿಯದ ಸಮಸ್ಯೆ. ನಾವಂತೂ ಕಿವಿಯಿದ್ದೂ ಕಿವುಡರಂತೆ, ಕಣ್ಣಿದ್ದೂ ಕುರುಡರಂತೆ ಇದ್ದುಬಿಟ್ಟಿದ್ದೇವೆ.” ಎಂದರು.

“ನಾನು ಸಹಜ ಕುತೂಹಲದಿಂದ ಸಮೀಪಕ್ಕೆ ಹೋದೆ. ಗುಂಪಿನಲ್ಲಿ ಒಬ್ಬನಾದೆ. ಒಬ್ಬರಿಗೊಬ್ಬರು ಬೈದಾಟದ ಕಾವು ಏರುತ್ತಿದ್ದಂತೆ ಮನೆಯೊಳಗಿದ್ದ ಚಾಕು, ಕುಡುಗೋಲು ಪ್ರತ್ಯಕ್ಷವಾದವು. ಗುಂಪು ಇಬ್ಬಗೆಯಾಗಿ ಬಡಿದಾಟಕ್ಕೆ ಸಿದ್ಧವಾದವರನ್ನು ಬಲವಂತವಾಗಿ ಬೇರ್ಪಡಿಸಲು ಪ್ರಯತ್ನಿಸುತ್ತಿದ್ದರು. ನಾನೂ ಅವರಲ್ಲಿ ಒಬ್ಬನಾಗಿ ಮುಂದೆ ನುಗ್ಗಿ ಚಾಕು ಹಿಡಿದವನ ಕೈಯನ್ನು ಬಲವಾಗಿ ಹಿಡಿದೆ. ಅವನು ಕೊಸರಾಡಿಕೊಂಡು ಮುಂದೆ ನುಗ್ಗದಂತೆ ತಡೆದೆ. ಅಷ್ಟರಲ್ಲಿ ಒಂದು ಅಚಾತುರ್ಯ ನಡೆದುಹೋಯ್ತು. ಎಲ್ಲಿಂದಲೋ ಮತ್ತೊಂದು ಗುಂಪು ಜಗಳವಾಡುತ್ತಿದ್ದವರಲ್ಲಿ ಒಬ್ಬರ ಪರವಾಗಿ ಕೂಗುತ್ತಾ ಮಚ್ಚು ದೊಣ್ಣೆಗಳ ಸಮೇತ ಬಂದು ಸೇರಿದರು. ಅವರ ಅವಾಚ್ಯ ಶಬ್ದಗಳು ಇನ್ನೊಂದು ಗುಂಪಿನವರನ್ನು ಕೆರಳಿಸಿದವು. ರೊಚ್ಚಿಗೆದ್ದು ಹೊಡೆದಾಟ ನಡೆದೇ ಹೋಯ್ತು. ಅಂತಿಮವಾಗಿ ಇಬ್ಬರು ತೀವ್ರವಾಗಿ ಗಾಯಗೊಂಡು ನೆಲಕ್ಕುರುಳಿದರು. ಯಾರೋ ಪೋಲೀಸಿಗೆ ಫೋನ್ ಮಾಡಿದರೆ ಇನ್ನೊಬ್ಬರು ಆಂಬುಲೆನ್ಸಿಗೆ ಫೋನ್ ಮಾಡಿದರು. ಎರಡೂ ವಾಹನಗಳು ಸ್ವಲ್ಪ ಹೊತ್ತಿನಲ್ಲಿಯೇ ಬಂದವು. ಗಾಯಾಳುಗಳ ಬಂಧುಗಳು ಅವರಿಬ್ಬರನ್ನು ಆಸ್ಪತ್ರೆಗೆ ಒಯ್ದರು. ಪೋಲೀಸಿನವರು ನಿಷ್ಕರುಣೆಯಿಂದ ರಕ್ತದ ಕಲೆತಾಗಿದ್ದವರೆಲ್ಲರನ್ನೂ ತಮ್ಮವ್ಯಾನಿನಲ್ಲಿ ತುಂಬಿಕೊಂಡು ಸ್ಟೇಷನ್ನಿಗೆ ಒಯ್ದುಬಿಟ್ಟರು. ದುರಾದೃಷ್ಟಶಾಲಿ ನಾನೂ ಇದರಲ್ಲಿ ಸೇರಿದ್ದೆ. ಗಾಯಗೊಂಡವರಿಬ್ಬರೂ ಬದುಕುಳಿಯಲಿಲ್ಲ. ಚಾಕು ಹಿಡಿದಿದ್ದ ನನ್ನ ಬೆರಳಗುರುತು ಅದರ ಮೇಲೆ ಚೆನ್ನಾಗಿ ಮೂಡಿತ್ತೆಂದು ನನ್ನನ್ನು ವಿಚಾರಣಾಧೀನ ಕೈದಿಯಾಗಿ ಜೈಲಿಗೆ ತಳ್ಳಿತು ನ್ಯಾಯಾಲಯ. ವಾದವಿವಾದಗಳು ನಿಧಾನಗತಿಯಲ್ಲಿ ಮೂರುವರ್ಷಗಳ ವರೆಗೆ ನಡೆದವು. ಅಂತಿಮವಾಗಿ ನಾನೂ ಕೊಲೆಗಾರನೆಂದು ಪರಿಗಣಿಸಿ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ಮೈಸೂರು ಸೆಂಟ್ರಲ್ ಜೈಲಿಗೆ ಹಾಕಿದರು. ಇದರಿಂದ ನನ್ನ ಹೆತ್ತವರ ಎಲ್ಲ ಕನಸುಗಳೂ ಮಣ್ಣಾದವು. ಇದೇ ಕೊರಗಿನಲ್ಲಿ ನನ್ನ ತಂದೆ ತೀರಿಹೋದರು.

ಅಂತೂ ಹದಿನಾಲ್ಕು ವರ್ಷಗಳ ಶಿಕ್ಷೆ ಪೂರ್ತಿ ಮುಗಿಸಿ ಹೊರಬಂದವನಿಗೆ ಮುಂದೇನು? ಎಂಬ ಭೀಕರ ಪ್ರಶ್ನೆ ಎದುರಾಯಿತು. ಅಂತಹ ಸಮಯದಲ್ಲಿ ಬಂಧು ಬಳಗದವರಾರೂ ನನ್ನ ನೆರವಿಗೆ ಬರಲಿಲ್ಲ. ‘ಅನಾಥೋ ದೈವರಕ್ಷಕ’ ಎಂಬಂತೆ ಮೈಸೂರಿನಲ್ಲಿ ಚುರುಮುರು ಅಂಗಡಿ ನಡೆಸುತ್ತಿದ್ದ ಮರಿಸ್ವಾಮಿಯವರು ದೇವರಂತೆ ನನ್ನನ್ನು ಕರೆದು ಕೆಲಸ ಕೊಟ್ಟರು. ಜೈಲಿನಲ್ಲಿದ್ದಾಗ ನಾನು ಬೇಕರಿ ವಸ್ತುಗಳನ್ನು ತಯಾರಿಸುವುದರಲ್ಲಿ ತರಬೇತಿ ಪಡೆದಿದ್ದು ಇಲ್ಲಿ ಉಪಯೋಗವಾಯ್ತು. ಅವರ ಅಂಗಡಿಯಲ್ಲಿ ನಾನು ಬೇರೆಬೇರೆ ತಿನಿಸುಗಳನ್ನು ಮಾಡಲು ಪ್ರಾರಂಭಿಸಿದೆ. ಅವರ ಅಂಗಡಿಗೆ ಖಾಯಂ ಗ್ರಾಹಕರು ಬಹಳ ಜನರಿದ್ದುದರಿಂದ ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಊರಿನಿಂದ ನನ್ನ ತಾಯಿಯನ್ನು ಮೈಸೂರಿಗೆ ಕರೆತಂದು ಬಾಡಿಗೆ ಮನೆಯೊಂದರಲ್ಲಿ ಇರಿಸಿದೆ. ಅಮ್ಮನ ದೂರದ ಸಂಬಂಧಿಕರಲ್ಲೊಬ್ಬರು ತಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಟ್ಟರು. ಮರಿಸ್ವಾಮಿಯವರಿಗೆ ಆರೋಗ್ಯ ಏರುಪೇರಾದಾಗ ನಾನೇ ಅಂಗಡಿಯ ಜವಾಬ್ದಾರಿಯನ್ನು ವಹಿಸಿಕೊಂಡೆ ಅನ್ನುವುದಕ್ಕಿಂತ ಅವರೇ ವಹಿಸಿದರು ಎಂದರೆ ತಪ್ಪಾಗಲಾರದು. ಅವರ ವಿಶ್ವಾಸ ದೊಡ್ಡದು.

ಪ್ರತಿವರ್ಷ ದಸರಾ ವಸ್ತುಪ್ರದರ್ಶನದಲ್ಲಿ ಮರಿಸ್ವಾಮಿಯವರ ಹೆಸರಿನ ಒಂದು ಸ್ಟಾಲ್ ಇಡುತ್ತೇನೆ. ಚುರುಮುರಿ ಮತ್ತು ಇತರ ಕೆಲವು ತಿನಿಸುಗಳನ್ನು ಮಾರುತ್ತೇವೆ. ಈ ಸಾರಿ ಹೀಗೆ ಅಲ್ಲೇ ತಮ್ಮ ದರ್ಶನವೂ ಆಯಿತು. ನೋಡಿ ಸಾರ್ ನಾನು ಓದಿ ದೊಡ್ಡ ಮನುಷ್ಯನಾಗುವ ಕನಸು ನಿಜವಾಗುವ ಮೊದಲೇ ಕಮರಿಹೋಯಿತು. ಒಂದು ಕೆಟ್ಟ ಕುತೂಹಲ ನನ್ನ ಭವಿಷ್ಯವನ್ನೇ ಆಪೋಷನ ತೆಗೆದುಕೊಂಡು ಬಿಟ್ಟಿತು” ಎಂದು ಬಿಕ್ಕಿ ಬಿಕ್ಕಿ ಅತ್ತುಬಿಟ್ಟ ನಾಗಣ್ಣ.

ಮಾಸ್ತರರು ನಾಗಣ್ಣನಿಗೆ “ ನಾವೆಲ್ಲರೂ ಪರಮಾತ್ಮನ ಲೀಲಾ ವಿನೋದದ ಪಾತ್ರಧಾರಿಗಳು. ಅವನು ನಮ್ಮನ್ನು ತನಗೆ ಬೇಕೆಂದಂತೆ ಆಡಿಸುತ್ತಾನೆ. ಪರೀಕ್ಷಿಸುತ್ತಾನೆ. ಅದಕ್ಕಾಗಿ ಚಿಂತಿಸಿ ಪ್ರಯೋಜನವಿಲ್ಲ. ಪಾಲಿಗೆ ಬಂದದ್ದನ್ನು ಪ್ರಸಾದವೆಂಬಂತೆ ಸ್ವೀಕರಿಸಬೇಕು. ಈಗ ನಿನ್ನ ಜೀವನಕ್ಕೊಂದು ನಿರ್ದಿಷ್ಟ ಮಾರ್ಗ ಸಿಕ್ಕಿದೆ. ಅದನ್ನೇ ನಿಷ್ಠೆಯಿಂದ ಮುಂದುವರೆಸಿಕೊಂಡು ಹೋಗು. ತಾಯಿಯನ್ನು ಜೋಪಾನವಾಗಿ ನೋಡಿಕೋ. ಗೃಹಸ್ಥನೂ ಆಗಿದ್ದೀಯೆ. ಇಲ್ಲದ ಯಾವ ಉಸಾಬರಿಗೂ ಹೋಗದಂತೆ ಎಚ್ಚರಿಕೆಯಿಂದ ಮುಂದೆನಡೆ. ಎಲ್ಲವೂ ಒಳ್ಳೆದಾಗುತ್ತದೆ.” ಎಂದು ತಮ್ಮ ಎಂದಿನ ಶೈಲಿಯಲ್ಲಿ ಸಾಂತ್ವನ ಹೇಳಿದರು.

ನಾಗಣ್ಣ ತನ್ನೆಲ್ಲ ದುಃಖದ ಕತೆಯನ್ನು ಪ್ರೀತಿಯ ಗುರುಗಳ ಮುಂದೆ ಹೇಳಿಕೊಂಡಿದ್ದರಿಂದ ಅವನ ಮನಸ್ಸು ಎಷ್ಟೋ ಹಗುರವಾಗಿತ್ತು. ಅವರ ಮಾತುಗಳಿಂದ ನೆಮ್ಮದಿಯ ಸ್ಥಿತಿ ಮೂಡತೊಡಗಿತ್ತು. ಸ್ವಾಮಿ ಮಾಸ್ತರರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಮನೆಗೆ ಹಿಂತಿರುಗಿದ.

ಸ್ವಾಮಿ ಮಾಸ್ತರರು ನಾಗಣ್ಣನ ಬದುಕು ವಿನಾಕಾರಣ ದುರಂತಮಯವಾದುದನ್ನೇ ಆಲೋಚಿಸುತ್ತಾ ಕುಳಿತರು. ಸಂಜೆಯ ಸೂರ್ಯ ಅಸ್ತಂಗತನಾಗುವ ಸಮಯವಾಗಿತ್ತು. ಅಂದು ಹುಣ್ಣಿಮೆಯಾದ್ದರಿಂದ ಬೇಗನೆ ಚಂದ್ರನ ಬೆಳ್ದಿಂಗಳು ಪ್ರವೇಶ ಮಾಡುವುದರಲ್ಲಿತ್ತು. ಮನಸ್ಪೂರ್ತಿಯಾಗಿ ಈಗಲಾದರೂ ನಾಗಣ್ಣನ ಬೆಂದ ಹೃದಯಕ್ಕೆ ತಂಪಾದ ಬೆಳದಿಂಗಳಿನ ಪ್ರವೇಶವಾಗಲಿ. ಅವನ ಮುಂದಿನ ಬದುಕಾದರೂ ಸುಖವಾಗಿರಲಿ ಎಂದು ಹಾರೈಸುತ್ತಲೇ ಲೈಟಿನ ಸ್ವಿಚ್ ಹಾಕಲು ಮೇಲಕ್ಕೆದ್ದರು.

ಬಿ.ಆರ್.ನಾಗರತ್ನ

14 Responses

  1. MANJURAJ says:

    ವಿಧಿಯು ಬರೆದದ್ದು ಜಲಲಿಪಿಯಲ್ಲ
    ಎಂಬುದನು ಮತ್ತೊಮ್ಮೆ ಮನಗಾಣಿಸಿದೆ
    ಈ ಕತೆಯ ವ್ಯಥೆ !

    ಸರಾಗ ಸುಲಲಿತ ಜೀವನ ದರ್ಶನ….

    ಧನ್ಯವಾದ ಮತ್ತು ಅಭಿನಂದನೆ ನಾಗರತ್ನ ಮೇಡಂಗೆ

  2. ನಿಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ..ಗಮನಿಸಿ ನಿಮ್ಮ ಪ್ರತಿಕ್ರಿಯೆ ತಿಳಿಸಿದ್ದೀರಲ್ಲಾ ಮಂಜು ಸರ್ ಧನ್ಯವಾದಗಳು..

  3. ನಯನ ಬಜಕೂಡ್ಲು says:

    ವಿಧಿ ಲಿಖಿತವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಸೋಲದೆ ಮುಂದೆ ಹೆಜ್ಜೆ ಇಟ್ಟು ಬಾಳಿ ಬದುಕುವ ನಾಯಕ ಇಲ್ಲಿ ಮಾದರಿ. ಚೆನ್ನಾಗಿದೆ ಕಥೆ.

  4. ಧನ್ಯವಾದಗಳು ನಯನಮೇಡಂ

  5. ಹಣೆ ಬರಹ ತಪ್ಪಿಸಲು ಯಾರಿಂದ ಸಾಧ್ಯ ಎಂಬ ಸತ್ಯ ಈ ಕಥೆಯಲ್ಲಿ ಚೆನ್ನಾಗಿ ಮೂಡಿ ಬಂದಿದೆ

  6. Anonymous says:

    A nice and touching story with a message.
    Lalitha S

  7. ಶಂಕರಿ ಶರ್ಮ says:

    ನಾವು ಒಂದು ಬಗೆದರೆ, ದೈವ ಬಗೆಯುವುದೇ ಬೇರೆ! ನಾಗಣ್ಣನ ಬದುಕು ಆಘಾತಕಾರಿ ತಿರುವನ್ನು ಪಡೆದರೂ, ಅವನು ಎದೆಗುಂದದೆ ಮುನ್ನಡೆದ ಕಥೆಯು ಉತ್ತಮ ಸಂದೇಶವನ್ನು ನೀಡಿದೆ. ಧನ್ಯವಾದಗಳು ನಾಗರತ್ನ ಮೇಡಂ.

  8. ಧನ್ಯವಾದಗಳು ಶಂಕರಿ ಮೇಡಂ

  9. ಪದ್ಮಾ ಆನಂದ್ says:

    ನಿಜಕ್ಕೂ ಮನವನ್ನು ಕಲಕುವ ಕಥೆ. ಓದಿ ಮುಗಿಸಿದಾಗ ಮನಸ್ಸು ನಿರಾಳವಾದರೂ ವಿಷಣ್ಣ ಭಾವ ಆವರಿಸಿತು.

  10. Hema Mala says:

    ಮನಮಿಡಿಯುವ ಕಥೆ…

  11. ಪ್ರಕಟಣೆಗಾಗಿ ಧನ್ಯವಾದಗಳು ಹಾಗೂ ಕಥೆ ಓದಿ ಪ್ರತಿಕ್ರಿಯಿಸಿದಕ್ಕೆ ವಂದನೆಗಳು.. ಗೆಳತಿ ಹೇಮಾ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: