ಪರದಾಟ
ಗಾಢನಿದ್ರೆಯಲ್ಲಿದ್ದ ನನ್ನನ್ನು ಯಾರೋ ಜೋರಾಗಿ ಅಲುಗಾಡಿಸಿದಂತಾಗಿ ಗಾಭರಿಯಿಂದ ಗಡಿಬಡಿಸಿಕೊಂಡು ಎದ್ದೆ. ಪಕ್ಕದಲ್ಲಿ ಮಲಗಿದ್ದ ನನ್ನಾಕೆ ಸಹನಾ ಗರ ಬಡಿದಂತೆ ಎದ್ದು ಕುಳಿತಿದ್ದಾಳೆ.
“ಸಹನಾ, ಏನಾಯಿತೇ? ಏಕೆ? ಏನಾದರೂ ಕೆಟ್ಟ ಕನಸು ಬಿತ್ತೇ?” ಎಂದೆ.
ಊಹುಂ ಮಾತಿಲ್ಲ ಕತೆಯಿಲ್ಲ, ಬರಿಯ ಕೈಸನ್ನೆ. ಛಳಿಗಾಲದಲ್ಲೂ ಬೆವರಿನಿಂದ ಒದ್ದೆಮುದ್ದೆಯಾಗಿದ್ದಾಳೆ. ಸ್ಟೂಲಿನ ಮೇಲಿಟ್ಟಿದ್ದ ಜಗ್ಗಿನಿಂದ ಲೋಟಕ್ಕೆ ನೀರು ಬಗ್ಗಿಸಿ ಕುಡಿಸಿದೆ. ನೀರು ಕುಡಿದಾದ ಮೇಲೆ ಸ್ವಲ್ಪ ಸುಧಾರಿಸಿಕೊಂಡಂತೆ ಕಂಡಾಗ ಮತ್ತೆ ಮೊದಲು ಕೇಳಿದ ಪ್ರಶ್ನೆಯನ್ನೇ ಕೇಳಿದೆ.
“ಮೂರು ದಿವಸಗಳಿಂದ ಹೇಳುತ್ತಿದ್ದೇನೆ. ಕೆಲಸಕ್ಕೆ ಬಾರದ ಕೆಟ್ಟ ಧಾರಾವಾಹಿಗಳನ್ನು ನೋಡಿ ನೋಡಿ ನಿನಗೆ ತಲೆಕೆಟ್ಟಿದೆ. ಅದೇ ಗುಂಗಿನಲ್ಲಿ ಮಲಗುತ್ತೀಯೆ. ಏನೇನೋ ಸದ್ದು ಗದ್ದಲಗಳು ಕೇಳಿಸುತ್ತವೆಂದು ಬಾಯಿ ಬಡಿದುಬಿಟ್ಟಿರಿ. ನೆನ್ನೆ ಅದಕ್ಕೇ ಹೊರಗೆ ಹಾಲಿನ ಸೋಫಾದ ಮೇಲೇ ಮಲಗಿದ್ದು. ಇವತ್ತು ಈ ರೂಮಿನಲ್ಲಿ ಮತ್ತೆ ಅದೇ ಗಂಟಾನಾದ, ಗೆಜ್ಜೆಯ ಸದ್ದು, ಗುಡುಗುಡು ಎಂದು ಏನೋ ಉರುಳಿಕೊಂಡು ಹೋದಹಾಗೆ ಶಬ್ಧ. ನೀವೂ ಕೇಳಿಸಿಕೊಳ್ಳಿ.” ಎಂದು ಕಾಲಪ್ಪಳಿಸುತ್ತಾ ತನ್ನ ಹೊದಿಕೆ ದಿಂಬುಗಳನ್ನು ತೆಗೆದುಕೊಂಡು ಹೊರಕ್ಕೆ ಹಾಲಿನತ್ತ ನಡೆದೇಬಿಟ್ಟಳು ನನ್ನ ಅರ್ಧಾಂಗಿ.
“ಅಲ್ವೇ ಸಹನಾ ಅಲ್ಲಿಗೆ ಸದ್ದು” ಮುಂದಕ್ಕೆ ಹೇಳುವ ಮಾತುಗಳು ನನ್ನಲ್ಲೇ ಉಳಿದವು. ಹಲವಾರು ಬಾಡಿಗೆಮನೆ ಮಾಲೀಕರುಗಳ ಕಿರಿಕಿರಿಯಿಂದ ಬೇಸತ್ತು ಬಸವಳಿದಿದ್ದ ನಾನು ನನ್ನ ಪರಮಾಪ್ತ ಮಿತ್ರ ಶಿವೂನ ಮೊರೆಹೋದೆ. ಅವನದ್ದು ಒಂದು ಚಿಲ್ಲರೆ ಅಂಗಡಿ. ಅದು ಹೆಸರಿಗೆ ಮಾತ್ರ. ಅವನು ನಡೆಸುವ ಅನೇಕ ವ್ಯವಹಾರಗಳ ಅಡ್ಡೆಯಾಗಿತ್ತು. ರಿಯಲ್ ಎಸ್ಟೇಟು, ಲೇವಾದೇವಿ ಹೀಗೆ ಹಲವಾರು ಬಾಬುಗಳು.
“ಲೋ ಗೆಳೆಯಾ, ನನಗೊಂದು ಬಾಡಿಗೆಗೆ ಮನೆ ಹುಡುಕಿಕೊಟ್ಟು ಪುಣ್ಯ ಕಟ್ಟಿಕೊಳ್ಳೋ, ನನ್ನ ಜೇಬಿನ ತಾಕತ್ತು ಎಷ್ಟೆಂಬುದು ನಿನಗೆ ಗೊತ್ತಲ್ಲವಾ. ಬಾಡಿಗೆ ಮೊತ್ತ ತಕ್ಕಮಟ್ಟಿಗೆ ಇರಲಿ, ಆದರೆ ಮನೆ ಓನರ್ ಮಾತ್ರ ಹತ್ತಿರವಿರಕೂಡದು. ಯಾವ ಕೊಂಪೆಯಲ್ಲಿದ್ದರೂ ಪರವಾಗಿಲ್ಲ. ಹೇಗೋ ಅಡ್ಜಸ್ಟ್ ಮಾಡಿಕೊಳ್ಳುತ್ತೇವೆ” ಎಂದಿದ್ದೆ.
ಅವೆಲ್ಲ ಕೇಳಿಸಿಕೊಂಡ ಅವನು “ನೋಡು ಮನೂ, ಛೇ ಛೇ ಹಾಗೆ ನಿನ್ನನ್ನು ಕರೆದರೆ ನಿನಗೆ ಕೋಪ ಬರುತ್ತದೆಂಬುದು ಮರೆತೇ ಹೋಯಿತು. ಮನೋಜ ಎಲ್ಲಾ ಓನರ್‌ಗಳೂ ನೀನಂದುಕೊಂಡಂತೆ ಇರೋಲ್ಲಾ.” ಎಂದ.
“ಹ್ಹ..ಹ್ಹಾ ಅಪ್ಪಾ ನೀನು ಬಾಡಿಗೆ ಮನೆಗಳಲ್ಲಿ ವಾಸಮಾಡಿದ್ದರೆ ಗೊತ್ತಾಗುತ್ತಿತ್ತು. ಕೇಳು ಅವರ ಕಂಡೀಷನ್ಸ್. ಒಬ್ಬರು ನಿಮ್ಮ ಮನೆಗೆ ಎಷ್ಟು ಜನ ಸಾಮಾನ್ಯವಾಗಿ ಬಂದು ಹೋಗುವವರು? ವಿಪರೀತ ಗಲಾಟೆ ಆಗಬಾರದು ಎಂದರೆ, ಇನ್ನೊಬ್ಬರು ಎಷ್ಟು ನೀರು, ಕರೆಂಟು ಖರ್ಚು ಮಾಡುತ್ತೀರಿ? ದಿನಾ ಬಟ್ಟೆ ಒಗೆಯುವವರೋ ಅಥವಾ ವಾರಕ್ಕೆರಡು ಬಾರಿಯೋ? ಮಗದೊಬ್ಬರು ಅಬ್ಬಾ ಅದೇನು ಸೌಂಡು ಮಿಕ್ಸಿ, ಕುಕ್ಕರ್, ಪಾತ್ರೆಪರಿಕರಗಳನ್ನು ತೊಳೆಯುವಾಗ? ಮಕ್ಕಳು ಕೇಕೆಹಾಕಿ ನಗುವುದು, ಧಡಬಡ ಓಡಾಟ. ಹೀಗೆ ಅಷ್ಟೇ ಏಕೆ ನಾವು ಮನೆ ಮುಂದೆ ಕೊಳ್ಳುವ ಸೊಪ್ಪು ತರಕಾರಿಯವರ ಕೂಗಿಗೂ ಅಬ್ಜೆಕ್ಷನ್. ನೀವೊಬ್ಬರೇ ಅವರ ಹತ್ತಿರ ವ್ಯಾಪಾರ ಮಾಡೋರು. ಅವನು ಏನ್ರೀ ಬೆಳಗ್ಗೆ ಬೆಳಗ್ಗೆನೇ ತಾರಕ ಸ್ವರದಲ್ಲಿ ಕೂಗಿಕೊಳ್ಳುತ್ತಾನೆ. ಸ್ವಲ್ಪ ಮೆತ್ತಗೆ ಕೂಗಲು ಹೇಳಿ. ನಾವಿನ್ನೂ ಮಲಗಿರುತ್ತೇವೆ. ಬಡಿದೆಬ್ಬಿಸುವಂತಾಗುತ್ತೇ ಎನ್ನುವ ಆಕ್ಷೇಪಣೆ. ಒಂದೇ ಎರಡೇ, ಸಾಕುಬೇಕಾಗಿದೆ. ಮಾರಾಯಾ ನಮ್ಮ ಊರು ಹತ್ತಿರವಿರೋದರಿಂದ ಅಪ್ಪ, ಅಮ್ಮ, ನೆಂಟರಿಷ್ಟರು ನಮ್ಮನೆಗೆ ಬಂದು ಹೋಗುವುದು ಸರ್ವೇಸಾಮಾನ್ಯ. ಎಂತದ್ದಾದರೂ ಒಂದು ಸ್ವಂತ ಗೂಡು ಕಟ್ಟಕೊಳ್ಳೋಣವೆಂದು ಪ್ರಯತ್ನದಲ್ಲಿದ್ದೇನೆ. ಅದು ನಿನಗೂ ಗೊತ್ತು ಅಲ್ಲಿಯವರೆಗೆ ಅನುಕೂಲಕರವಾದ ಮನೆಯೊಂದನ್ನು ಕೊಡಿಸಪ್ಪಾ ಪ್ಲೀಸ್ ಎಂದು ನನ್ನ ಅಸಹಾಯಕ ಪರಿಸ್ಥಿತಿಯನ್ನು ಹೇಳಿಕೊಂಡೆ.
“ಆಯಿತು ಮಾರಾಯ, ಓನರ್ ಇದ್ದಾರೆ. ಆದರೆ ಅವರಿಂದ ನಿನಗೆ ಯಾವ ಕಿರಿಕಿರಿಯೂ ಇಲ್ಲ. ಏಕೆಂದರೆ ಅವರ ಇಬ್ಬರು ಮಕ್ಕಳೂ ವಿದೇಶದಲ್ಲಿದ್ದಾರೆ. ಒಬ್ಬ ಜೆರ್ಮನಿಯಲ್ಲಿದ್ದರೆ ಇನ್ನೊಬ್ಬ ಇಂಗ್ಲೆಂಡಿನಲ್ಲಿದ್ದಾನೆ. ಯಜಮಾನರು ಇಲ್ಲಿ ಒಂದೆರಡು ತಿಂಗಳಿದ್ದರೆ ಹೆಚ್ಚು. ಯಾವಾಗಲೂ ಮಕ್ಕಳ ಬಳಿಯಲ್ಲಿಯೇ ಇರುತ್ತಾರೆ. ಕೆಳಗೆ ಮೇಲೆ ಎರಡು ಪೋರ್ಷನ್ ಇವೆ. ಅವರಿಲ್ಲದೇ ಇದ್ದಾಗ ಅವುಗಳ ಕಾವಲಿಗೆ ನನ್ನನ್ನೇ ನೇಮಿಸಿದ್ದಾರೆ. ಆಗಾಗ್ಗೆ ನಾನೇ ಹೋಗುತ್ತಾ ಬರುತ್ತಾ ನೋಡಿಕೊಳ್ಳುತ್ತಿರುತ್ತೇನೆ. ಈ ಸಾರಿ ಬಂದಾಗ ಕೆಳಗಿನ ಮನೆಗೆ ಯಾರನ್ನಾದರೂ ಗುರುತು ಪರಿಚಯ ಇರುವವರನ್ನು ಬಾಡಿಗೆಗೆ ಗೊತ್ತುಮಾಡಿ ಕೊಟ್ಟುಬಿಡಿ. ಅವರು ಅಲ್ಲೇ ವಾಸವಿದ್ದ ಹಾಗೂ ಆಗುತ್ತದೆ. ಮನೆಯ ಕಡೆಗೆ ನಿಗಾ ವಹಿಸಿದಂತಾಗುತ್ತದೆ. ತುಂಬ ಬಾಡಿಗೆ ಕೇಳಬೇಡಿ. ನಮಗೆ ಬಾಡಿಗೆ ಹಣ ಮುಖ್ಯವಲ್ಲ. ನೋಡಿಕೊಳ್ಳುವುದು ಮುಖ್ಯ. ಬೇಕಾರಾಗಿ ಬಿದ್ದಿರುವುದಕ್ಕಿಂತ ಇದೇ ವಾಸಿ. ಮಾರಿಬಿಡೋಣವೆಂದರೆ ಶಕ್ತಿಗುಂದಿದಾಗ ನಾನು ಇಲ್ಲೇ ಕೊನೆಯುಸಿರೆಳೆಯಬೇಕೆಂಬ ಬಯಕೆ. ಒಂದು ವೇಳೆ ಮಕ್ಕಳಲ್ಲಿಗೆ ಹೋದಾಗಲೇ ಹರಹರಾ ಅಂದುಬಿಟ್ಟರೆ ಮುಂದಿನದು ಮಕ್ಕಳಿಗೆ ಬಿಟ್ಟದ್ದು ಎಂದಿದ್ದರು. ಮನೆ ಬಹಳ ಚೆನ್ನಾಗಿದೆ. ಎಲ್ಲ ರೀತಿಯಲ್ಲೂ ಅನುಕೂಲವಾಗಿದೆ. ನೀನೂ ನೋಡು. ಬಾಡಿಗೆದಾರ, ಯಜಮಾನ ಎರಡೂ ನೀನೇ ಆಗಿರಬಹುದು. ಒಂದು ಒಳ್ಳೆಯ ಅವಕಾಶ” ಎಂದು ಹೇಳಿದ.
ನಾನೂ ಸಹನಾ ಮಕ್ಕಳೂ ಅಲ್ಲಿಗೆ ಹೋಗಿ ನೋಡಿಬಂದೆವು. ಎಲ್ಲರಿಗೂ ಮೆಚ್ಚಿಗೆಯಾಯಿತು. ಮಕ್ಕಳಂತೂ “ಪಪ್ಪಾ ನಾವು ಆಟಕ್ಕೆ ಅಲ್ಲಿ ಇಲ್ಲಿ ಹೋಗುವ ಹಾಗೇ ಇಲ್ಲ. ಎಷ್ಟು ವಿಶಾಲವಾದ ಜಾಗವಿದೆ. ಕಾಂಪೌಂಡು ಇದೆ. ಇಲ್ಲಿಗೇ ಬರೋಣ” ಎಂಬ ಒತ್ತಾಯ. ಸರಿ ಎಲ್ಲರ ಒತ್ತಾಸೆಯಂತೆ ಇಲ್ಲಿಗೆ ಬಂದದ್ದಾಯಿತು. ಶಿವೂ ಹೇಳಿದಂತೆ ಓನರ್ ಎರಡು ವರ್ಷಗಳಲ್ಲಿ ಒಂದೆರಡು ತಿಂಗಳು ಇಲ್ಲಿ ಇದ್ದಿರಬಹುದು. ಉಳಿದಂತೆ ನಾವು ನಾವೇ.
ಪರದೇಶದಲ್ಲಿ ಇರುವ ಮಕ್ಕಳು ಕೈತುಂಬ ಸಂಪಾದನೆ ಮಾಡುತ್ತಾರೆ. ಗತಿಸಿದ ಪತಿಯಿಂದ ದೊರಕಿದ ಆಸ್ತಿ, ಪಿಂಚಣಿ ಎಲ್ಲವೂ ಸಾಕಷ್ಟು ಇರುವುದರಿಂದ ಹಣಕಾಸಿನ ಕಡೆಗೆ ಅವರಿಗೆ ಹೆಚ್ಚಿನ ವ್ಯಾಮೋಹವಿರಲಿಲ್ಲ. ವಿದೇಶದಿಂದ ಇಲ್ಲಿಗೆ ಬರುವಾಗಲೆಲ್ಲ ನಮಗೆ ಏನಾದರೊಂದು ಉಡುಗೊರೆ ತರುತ್ತಿದ್ದರು. ಹೀಗಾಗಿ ನಾವು ಹಿಂದೆ ಬಾಡಿಗೆಗೆ ಇದ್ದ ಮನೆಗಳ ಯಜಮಾನರುಗಳಿಂದ ಅನುಭವಿಸಿದ ಯಾತನೆಗಳನ್ನು ಮರೆತು ನೆಮ್ಮದಿಯಿಂದ ಇದ್ದೆವು. ಆಗಾಗ್ಗೆ ಶಿವೂನ ಆಗಮನವೂ ಆಗುತ್ತಿತ್ತು. ಓನರ್ ಇಲ್ಲಿಗೆ ಬರುವ ಮೊದಲು ಮೇಲ್ಗಡೆಯ ಮನೆಯ ಕ್ಲೀನಿಂಗ್, ಸಣ್ಣಪುಟ್ಟದ್ದೇನಾದರೂ ಮಾಡಿಸುವುದಿದ್ದರೆ ಅವನೇ ಮಾಡಿಸುತ್ತಿದ್ದ. ಯಾರಿಂದಲೂ ಏನೂ ತೊಂದರೆಯಾಗಿರಲಿಲ್ಲ. ಆದರೆ ಕಳೆದ ಮೂರು ದಿನಗಳಿಂದ ರಾತ್ರಿ ವೇಳೆಯಲ್ಲಿ ಗಂಟಾನಾದ, ಗೆಜ್ಜೆ ಶಬ್ಧ, ಗಡಗಡನೆ ಏನೋ ಉರುಳಿದಂತೆ ಶಭ್ಧ ಕೇಳಿಸುತ್ತಿತ್ತು. ಬೆಚ್ಚಿಬೀಳುವಂತಾಗುತ್ತಿತ್ತು. ಇದು ಹೇಗೆ? ಬಾನಾಮತಿ, ಭೂತಚೇಷ್ಟೆ ಏನೇನೋ ಕೆಟ್ಟ ಆಲೋಚನೆಗಳು ಬಂದವು. ಹಾಸಿಗೆಯಿಂದ ಅವೇಳೆಯಲ್ಲಿ ಎದ್ದು ಎಲ್ಲಾ ರೂಮುಗಳನ್ನೂ ಶೋಧಿಸಿದ್ದಾಯಿತು. ಊಹುಂ, ಎಲ್ಲಿಯೂ ಸದ್ದುಗಳು ಕೇಳಿಸಲೇ ಇಲ್ಲ. ನಾವು ಮಲಗುವ ರೂಮಿನಲ್ಲಿ ಮಾತ್ರವೇ ಶಬ್ದಗಳು ಕೇಳುತ್ತಿದ್ದವು. ಯಾರಾದರೂ ಮೇಲಿನ ಮನೆಯಲ್ಲಿ ಸೇರಿಕೊಂಡಿದ್ದಾರಾ ಎಂಬ ಅನುಮಾನ ಬಂತು. ಹೇಗೆ ಬಂದರೂ ಹೊರಗಿನವರು ಮುಂದಿನ ಗೇಟಿನಿಂದಲೇ ಬರಬೇಕು. ಸುತ್ತಲೂ ಎತ್ತರದ ಕಾಂಪೌಂಡು. ಮೇಲಿನ ಮುಂಭಾಗಿಲಿಗೆ ಸೇಫ್ಟಿ ಕಬ್ಬಿಣದ ಗೇಟೂ ಇದೆ. ಒಂದು ಸಣ್ಣ ಪ್ರಾಣಿಯೂ ಒಳಗೆ ಹೋಗುವ ಸಾಧ್ಯತೆಯಿಲ್ಲ. ತಿಂಗಳಾನುಗಟ್ಟಲೆ ಬಾಗಿಲು ಮುಚ್ಚಿರುವುದರಿಂದ ಇಲಿ, ಸುಂಡ, ಬೆಕ್ಕಿನಮರಿ ! ಅವೆಲ್ಲ ಇದ್ದರೆ ಈರೀತಿಯ ಸದ್ದಾಗುವುದಿಲ್ಲ. ಅಂದಮೇಲೆ ದೆವ್ವ, ಭೂತ ! ಹೀಗೆ ಹುಚ್ಚುಚುಚ್ಚಾದ ಆಲೋಚನೆಗಳು. ಹೀಗಾಗಿ ಯಾವಾಗ ನಿದ್ರೆ ಆವರಿಸಿತೋ ತಿಳಿಯದು. ನನ್ನ ಮುದ್ದುಮಗಳು ಸಿರಿ ಮೈಮೇಲೆ ಬಿದ್ದು “ಪಪ್ಪಾ ಇನ್ನೂ ಏಕೆ ಎದ್ದಿಲ್ಲ? ನಿನಗೆ ಆಫೀಸಿಲ್ಲವಾ?” ಎಂದಾಗಲೇ ಬಾಹ್ಯ ಪ್ರಪಂಚಕ್ಕೆ ಬಂದೆ. ಸೂರ್ಯ ಆಗಲೇ ನೆತ್ತಿಯ ಮೇಲಕ್ಕೆ ಬಂದಿದ್ದ. ಲಗುಬಗೆಯಿಂದ ಸ್ನಾನಪಾನಾದಿಗಳನ್ನು ಮುಗಿಸಿಕೊಂಡು ಆಫೀಸಿಗೆ ಹೊರಟೆ. ಹೋಗುವಾಗ ನನ್ನವಳಿಗೆ “ನೋಡು ಸಹನಾ ನೀನು ಹೇಳಿದಂತೆಯೇ ನಾನೂ ರಾತ್ರಿ ಸದ್ದುಗಳನ್ನು ಕೇಳಿಸಿಕೊಂಡೆ. ಶಿವೂಗೆ ಫೋನ್ ಮಾಡಿ ಕೇಳೋಣವೆಂದುಕೊಂಡೆ. ಅದಕ್ಕಿಂತ ಆಫೀಸಿನಿಂದ ಬರುವಾಗ ನಾನೇ ಮುದ್ದಾಂ ಹೋಗಿ ಕರೆದುಕೊಂಡೇ ಬರುತ್ತೇನೆ. ಹೆದರಬೇಡ. ಮಕ್ಕಳ ಮುಂದೆ ಅಥವಾ ಅಕ್ಕಪಕ್ಕದವರ ಮುಂದೆಯಾಗಲೀ ಏನೂ ಹೇಳಬೇಡ.” ಎಂದು ತಾಕೀತು ಮಾಡಿ ಹೊರನಡೆದೆ.
ಮನಸ್ಸಿಲ್ಲದ ಮನಸ್ಸಿನಿಂದ ಆಫೀಸಿನ ಕೆಲಸದಲ್ಲಿ ತೊಡಗಿದ್ದ ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಗೆಳೆಯ ಶಿವೂ ಕಛೇರಿಗೇ ಬಂದ. ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಗಿ ಸಂತೋಷವಾಯಿತು. ನಮ್ಮ ಬಾಸ್‌ನ ಪರ್ಮಿಷನ್ ತೆಗೆದುಕೊಂಡು ಶಿವೂನ ಬಹುತೇಕ ಎಳೆದುಕೊಂಡೇ ಆಫೀಸಿನ ಎದುರಿಗಿದ್ದ ಪಾರ್ಕಿನ ಬೆಂಚಿನಮೇಲೆ ಕುಳಿತುಕೊಂಡೆವು. ಎಂದೂ ಇಲ್ಲದ ನನ್ನ ಅವಸರವನ್ನು ಕಂಡವನು ಅತಂಕದಿಂದ ನನ್ನ ಮುಖವನ್ನೇ ನೋಡುತ್ತಿದ್ದ.
“ಲೋ ಮನೋಜಾ, ಏನಾಗಿದೆಯೊ ಮನೆಯಲ್ಲಿ? ಎಲ್ಲರೂ ಆರೋಗ್ಯವಾಗಿದ್ದಾರೆ ತಾನೇ? ಊರಿನಲ್ಲಿ ಅಪ್ಪ ಅಮ್ಮನಿಂದೇನಾದರೂ ಸುದ್ಧಿ? ಅಥವಾ ಆಫೀಸಿನಲ್ಲೇನಾದರೂ ಪ್ರಾಬ್ಲಮ್? ಎಂದು ಕೇಳಿದ.
“ಅವೆಲ್ಲಾ ಏನೂ ಇಲ್ಲವೋ. ಎಲ್ಲಾ ಸರಿಯಾಗಿದೆ. ನಾವು ವಾಸಿವಿದ್ದೇವಲ್ಲಾ ಮನೆಯ ಬೆಡ್‌ರೂಮಿನ ಮೇಲ್ಭಾಗದಲ್ಲಿ ರಾತ್ರಿಯ ಕಾಲದಲ್ಲಿ ಏನೇನೋ ಶಬ್ದಗಳು ಕೇಳಿಬರುತ್ತಿವೆ. ನಾವೆಲ್ಲ ತುಂಬ ಹೆದರಿಕೊಂಡಿದ್ದೇವೆ. ಇದು ಕಳೆದ ಮೂರು ದಿನಗಳಿಂದ ಅನುಭವವಾಗುತ್ತಿವೆ.” ಎಂದು ಆಗುತ್ತಿರುವ ತೊಂದರೆಯನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದೆ. ಅದನ್ನು ಕೇಳಿದ ಅವನು ವಿಚಲಿತನಾಗಿ ತಕ್ಷಣ ನನ್ನನ್ನು ಕರೆದುಕೊಂಡು ಆಫೀಸಿಗೆ ಬಂದು ಅರ್ಧ ದಿನ ರಜೆ ಹಾಕಿಸಿ “ಮನೆಗೆ ಹೋಗೋಣ” ಎಂದ.
ನಾನು ಈಗ ಏನೋ ತಿಳಿಯುತ್ತೇ, ಅದು ಕೇಳಿಸುವುದು ರಾತ್ರಿಯ ಕಾಲದಲ್ಲಿ” ಎಂದೆ.
ನಾವಿಬ್ಬರೂ ಒಟ್ಟಿಗೆ ಮನೆಗೆ ಬಂದದ್ದನ್ನು ಕಂಡು ನನ್ನಾಕೆ “ಅರೆ ! ಆಫೀಸಿಗೆ ಹೋಗಲಿಲ್ಲವಾ? ಶಿವಣ್ಣನನ್ನೂ ಕರೆದುಕೊಂಡು ಬಂದಿದ್ದೀರಿ?” ಎಂದು ಪ್ರಶ್ನಿಸಿದಳು.
ಶಿವೂ “ನಿಮ್ಮ ಪ್ರಶ್ನೆಗಳು ಒತ್ತಟ್ಟಿಗಿರಲಿ ಸಹನಾರವರೇ ಮಹಡಿಮೇಲಿನ ಕೀಲಿಕೈ ಕೊಡಿ” ಎಂದ.
“ಏಕೆ ಶಿವಣ್ಣಾ ಇಷ್ಟು ಹೊತ್ತಿನಲ್ಲಿ? ಯಾವ ಸದ್ದೂ ಕೇಳಿಸುವುದಿಲ್ಲ.” ಎಂದಳು.
“ಅದನ್ನು ನಾನು ನೋಡುತ್ತೇನೆ.” ಎಂದಂದು ತಾನೇ ಗೋಡೆಗೆ ನೇತುಹಾಕಿದ್ದ ಬೀಗದಕೈಗಳನ್ನು ತೆಗೆದುಕೊಂಡು ಧಡಬಡನೆ ಮೇಲಿನ ಮನೆಗೆ ಹೋಗಿಯೇ ಬಿಟ್ಟ.
ಕೆಳಗೆ ನಾವಿಬ್ಬರೂ ಹತ್ತಲೂ ಆಗದೇ, ಸುಮ್ಮನೆ ಇರಲೂ ಆಗದೇ ಚಡಪಡಿಸುತ್ತಿದ್ದೆವು. ಆದರೂ ಸಹನಾ “ಶಿವಣ್ಣಾ ನೋಡಿಕೊಂಡು ಬಾಗಿಲು ತೆರೆಯಿರಿ. ಹುಷಾರೂ” ಎಂದಳು.
ಶಿವೂ “ಹೆದರಬೇಡಿ ನನಗೇನೂ ಆಗುವುದಿಲ್ಲ. ನೀವಲ್ಲೇ ಇರಿ. ನಾನು ಕರೆದಾಗ ನೀವಿಬ್ಬರೂ ಬನ್ನಿ” ಎಂದು ಹೇಳಿದ.
ಹತ್ತು ನಿಮಿಷವಾದರೂ ಅವನಿಂದ ಕರೆ ಬಾರದ್ದರಿಂದ ನಾನು “ಸಹನಾ ಮುಂದಿನ ಬಾಗಿಲು ಮುಚ್ಚು. ನಾವಿಬ್ಬರೂ ಹೋಗಿ ನೋಡೋಣ” ಎಂದೆ.
ಅವಳೂ “ಹೌದುರೀ, ನಡೀರಿ” ಎಂದು ಕೈಯಲ್ಲೊಂದು ದೊಣ್ಣೆ ಹಾಗೂ ಮೊಬೈಲ್ ಹಿಡಿದು ಬಂದಳು. ನಾನು ಹೆದರುತ್ತಲೇ ಅವಳನ್ನು ಹಿಂಬಾಲಿಸಿದೆ. ಒಂದೆರಡು ಮೆಟ್ಟಿಲು ಹತ್ತುತ್ತಿದಂತೆಯೇ ಶಿವೂ “ಮನೋಜ, ಸಹನಾಮ್ಮ ಬನ್ನಿ” ಎಂದು ಕರೆದ. ನಾವಿಬ್ಬರೂ ಬೆಚ್ಚಿಬಿದ್ದೆವು. ಒಬ್ಬರಿನ್ನೊಬ್ಬರ ಕೈಹಿಡಿದುಕೊಂಡು ನಿಧಾನವಾಗಿ ಮೇಲೇರಿದೆವು.
“ಹಾ ! ಬಂದಿರಾ ಇಲ್ಲಿನೋಡಿ” ಎಂದು ನಮ್ಮ ಬೆಡ್‌ರೂಮಿನ ಮೇಲ್ಭಾಗದ ರೂಮಿನೊಳಕ್ಕೆ ಕರೆದ. ನಾವಿಬ್ಬರೂ ಏನೂ ಅರ್ಥವಾಗದೇ ಅತ್ತಿತ್ತ ನೋಡತೊಡಗಿದೆವು.
“ನೋಡಮ್ಮಾ ಸಹನಾ, ಕಿಟಕಿಗೆ ತೋರಣದಂತೆ ಕಟ್ಟಿರುವ ಚಿಕ್ಕ ಚಿಕ್ಕ ಗಂಟೆಗಳ ಸರ. ಕೆಳಗೆ ಬಿದ್ದಿದ್ದ ಮಕ್ಕಳಾಡುವ ಗಿಲಕಿ. ಆಟವಾಡುವ ಸಣ್ಣದೊಂದು ಲೋಹದ ಬಿಂದಿಗೆ. ಅದರ ಸುತ್ತ ಕುತ್ತಿಗೆಗೆ ಕಟ್ಟಿದ್ದ ಕಾಲಿನ ಗೆಜ್ಜೆಗಳು.” ಕಾಣಿಸಿದವು.
“ಸರಿ, ಇವೆಲ್ಲ ಇಲ್ಲಿಗೆ ಹೇಗೆ ಬಂದವು?” ಎಂದು ರಾಗ ಎಳೆದಳು ಸಹನಾ.
“ಸಹನಾಮ್ಮಾ, ಮೂರುದಿನಗಳ ಹಿಂದೆ ನಾನು ಮೇಲಿನ ಮನೆ ಕ್ಲೀನ್ ಮಾಡಿಸಲು ಬಂದಿದ್ದಾಗ ನನ್ನ ಜೊತೆಗೆ ನನ್ನ ಮೊಮ್ಮಗಳು ಬಂದಿದ್ದಳಲ್ಲಾ”
“ಹೌದು ನಮ್ಮ ಮಕ್ಕಳೊಂದಿಗೆ ಆಟವಾಡುತ್ತಿದ್ದಳಲ್ಲ”
“ಹೂ, ಆಗ ಈ ಸಾಮಾನುಗಳನ್ನೆಲ್ಲಾ ಇಟ್ಟುಕೊಂಡು ಆಟವಾಡಿದ್ದಾರೆ. ಹಾಗೇ ಕೆಳಗಿಳಿದು ಹೋಗಿದ್ದಾರೆ. ನಾನು ಕೆಲಸವನ್ನೆಲ್ಲ ಮುಗಿಸಿದ ಮೇಲೆ ಅವಳು ತಂದಿದ್ದ ಸಾಮಾನುಗಳನ್ನು ಗಮನಿಸಲಿಲ್ಲ. ಒಂದು ಕಿಟಕಿಯನ್ನು ನಾನೇ ಗಾಳಿಯಾಡಲೆಂದು ತೆರೆದಿಟ್ಟು ಬೀಗ ಹಾಕಿ ಹೊರಟುಹೋದೆ.. ರಾತ್ರಿ ಸುತ್ತಮುತ್ತ ಬಯಲಿನ ಗಾಳಿ ಬೀಸಿದಾಗಲೆಲ್ಲ ಗಂಟೆಗಳ ನಾದ, ಗಿಲಕಿ ನೆಲದಲ್ಲಿ ಸರಿದಾಡಿದಾಗ ಅದರೊಳಗಿನ ಸದ್ದು. ಬಿಂದಿಗೆ ಸಣ್ಣದಾಗಿರುವುದರಿಂದ ಗಾಳಿಗೆ ಅದೂ ಉರುಳಾಡಿದಂತೆಲ್ಲ ಕಟ್ಟಿರುವ ಗೆಜ್ಜೆಗಳ ದನಿ ಎಲ್ಲವೂ ಸೇರಿ ನಿಮಗೆ ಕೇಳಿಸುತ್ತಿದೆ. ಹಗಲಿನಲ್ಲಿ ಸುತ್ತಮುತಲಿನ ಸದ್ದುಗಳಿಂದ ಇದು ಸ್ಪಷ್ಟವಾಗಿ ಕೇಳಿಸಿಲ್ಲ. ರಾತ್ರಿಯಲ್ಲಿ ನಿಶ್ಶಬ್ಧವಾದ ಸಮಯದಲ್ಲಿ ಚೆನ್ನಾಗಿ ಕೇಳಿಸುತ್ತಿದೆ. ಯಾವ ದೆವ್ವದಕಾಟ, ಬಾನಾಮತಿ ಏನೂ ಇಲ್ಲ.” ಎಂದು ಸ್ಪಷ್ಟ ಪಡಿಸಿದ.
“ಅದು ಸರಿ ಶಿವೂ ನಿನಗೆ ಈ ಸಾಮಾನುಗಳ ಬಗ್ಗೆ ಹೇಗೆ ನೆನಪಿದೆ?” ಎಂದೆ ತಡೆಯಲಾರದೆ.
“ ಅಯ್ಯೋ..ಇಲ್ಲಿಂದ ಮನೆಗೆ ಹೋಗುವಷ್ಟರಲ್ಲಿ ನನ್ನ ಮೊಮ್ಮಗಳು ಮಲಗಿಬಿಟ್ಟಿದ್ದಳು. ಹಾಗೇ ಕಾರಿನಲ್ಲಿ ಮಲಗಿಸಿಕೊಂಡೇ ಮನೆ ತಲುಪಿದೆ. ಬೆಳಿಗ್ಗೆ ಎದ್ದ ಕೂಡಲೇ ತನ್ನ ಆಟದ ಸಾಮಾನುಗಳ ಬಗ್ಗೆ ಕೇಳಿದಳು. ನಾನು ಅದೆಲ್ಲೂ ಹೋಗಲ್ಲ. ಅಲ್ಲಿ ಅಕ್ಕ ಜೋಪಾನವಾಗಿ ಎತ್ತಿಟ್ಟಿರುತ್ತಾಳೆ. ನಾನು ಆಕಡೆ ಹೋದಾಗ ತಂದುಕೊಡುತ್ತೇನೆ ಎಂದು ಸಮಾಧಾನ ಹೇಳಿದೆ. ಕೆಲಸದ ಗಡಿಬಿಡಿಯಲ್ಲಿ ಈ ಕಡೆಗೆ ಬರಲೇ ಆಗಲಿಲ್ಲ. ಈ ಹೊತ್ತು ಮನೋಜನನ್ನು ನೋಡಿಹೋಗೋಣವೆಂದು ಆಫೀಸಿಗೇ ಹೋಗಿದ್ದೆ. ಅವನು ಕತೆಯನ್ನೆಲ್ಲಾ ಹೇಳಿದಾಗ ನನಗೆ ಏನೋ ಅನುಮಾನ ಬಂತು. ಆದರೆ ನನ್ನ ಮೊಮ್ಮಗಳು ಏನೇನು ಸಾಮಾನುಗಳನ್ನು ತೆಗೆದುಕೊಂಡು ಹೋಗಿದ್ದಾಳೆಂಬುದು ನನಗೆ ಜ್ಞಾಪಕಕ್ಕೆ ಬರಲಿಲ್ಲ. ಈಗ ಬೀಗ ತೆಗೆದು ಪರಿಶೀಲಿಸಿದಾಗ ಎಲ್ಲ ತಿಳಿಯಿತು. ನಂತರದ್ದು ನಿಮಗೇ ಗೊತ್ತಲ್ಲ” ಎಂದ ಶಿವೂ.
“ಅಬ್ಬಾ ! ಸಧ್ಯ ಬೆಟ್ಟದಂತೆ ಬಂದ ಸಮಸ್ಯೆ ಮಂಜಿನಂತೆ ಕರಗಿಹೋಯಿತು. ಶಿವೂ ಈ ಪ್ರಕರಣವನ್ನು ಯಾರ ಮುಂದೆಯೂ ಬಾಯಿಬಿಟ್ಟಿಲ್ಲಪ್ಪಾ” ಎಂದೆ.
“ಹೋ..ಅದೂ ಒಳ್ಳೆಯದೇ ಆಯ್ತು. ಇಲ್ಲದಿದ್ದರೆ ಯಾವುದಾದರೂ ಖಾಸಗಿ ಟಿ.ವಿ. ಚಾನಲ್‌ನವರು ಇಷ್ಟೊಂತ್ತಿಗೆ ಬಂದು ಬೆಳಗಿನಿಂದ ರಾತ್ರಿಯವರೆಗೆ ಬ್ರೇಕಿಂಗ್ ನ್ಯೂಸ್ ಎಂದು ಕುಯ್ಯುತ್ತಿದ್ದರು. ವಿಷಯ ಜಗಜ್ಜಾಹೀರಾಗಿ ಮನೆಯ ಓನರ್ ಕಿವಿಗೇನಾದರೂ ಬಿದ್ದರೆ ವಿದೇಶದಿಂದ ಬಂದು ನಮ್ಮಿಬ್ಬರಿಗೂ ಪೂಜೆ ಮಾಡುತ್ತಿದ್ದರು ಇಬ್ಬರ ಗತಿ ಗೋವಿಂದ. ನೀನು ಸಹನಾಮ್ಮಾ ಅಪ್ಪಿತಪ್ಪಿ ಯಾರ ಮುಂದೆಯೂ ಬಾಯಿ ಬಿಡಬೇಡಮ್ಮಾ. ಹೆಂಗಸರ ಬಾಯಲ್ಲಿ ಗುಟ್ಟು ನಿಲ್ಲೋದಿಲ್ಲ ಅಂತ ಗಾದೆಮಾತಿದೆ ಅದಕ್ಕೇ ಹೇಳುತ್ತಿದ್ದೇನೆ” ಎಂದ ಶಿವು.
“ಇಲ್ಲಾ ಶಿವಣ್ಣಾ ನಮ್ಮ ಕಾಲಮೇಲೆ ನಾವೇ ಕೊಡಲಿ ಹಾಕಿಕೊಳ್ಳುತ್ತೇವಾ. ಇಷ್ಟು ಚೆಂದದ ಮನೆ ನಮಗೆ ಕಡಿಮೆ ಬಾಡಿಗೆಗೆ ಎಲ್ಲಿ ಸಿಕ್ಕುತ್ತೇ ಶಿವಣ್ಣಾ. ನಮ್ಮ ಸ್ವಂತ ಮನೆ ಕಟ್ಟಿಕೊಳ್ಳೋತನಕ ಯಾವ ಕಾರಣಕ್ಕೂ ಈ ಮನೆಯೇ ಖಾಯಂ” ಎಂದಳು.
“ಈಗ ನಿಮ್ಮ ಸಮಸ್ಯೆಗೆ ಉತ್ತರ ಸಿಕ್ಕಿತಲ್ಲಾ. ನನಗೊಂದು ಲೋಟ ಸ್ಟ್ರಾಂಗ್ ಕಾಫಿ” ಎಂದ ಶಿವೂ.
“ಕಾಫಿ ಏಕೆ, ಊಟದ ಸಮಯವಾಗಿದೆ. ಎಲ್ಲ ತರಕಾರಿ ಹಾಕಿ ಕೂಟು ಮಾಡಿದ್ದೇನೆ. ನಿಮ್ಮ ಫೇವರಿಟ್ ರಾಗಿ ಬಾಲ್ ಮಾಡಿಕೊಡುತ್ತೇನೆ” ಎಂದಳು ಖುಷಿಯಾಗಿ ಸಹನಾ.
ಮತ್ತೊಮ್ಮೆ ಮೇಲಿನ ಮನೆಯನ್ನೆಲ್ಲ ಸುತ್ತುಹಾಕಿ ತೆರೆದಿದ್ದ ಕಿಟಕಿಯ ಬಾಗಿಲನ್ನು ಭದ್ರಪಡಿಸಿ ಮುಂಭಾಗಿಲಿಗೆ ಬೀಗಹಾಕಿ ನಿರಾಳವಾಗಿ ಎಲ್ಲರೂ ಕೆಳಗಿಳಿದು ಬಂದರು.
–ಬಿ.ಆರ್.ನಾಗರತ್ನ, ಮೈಸೂರು
ಪ್ರ ಕಟಣೆಗಾಗಿ ಹೃತ್ಪೂರ್ವಕವಾದ ಧನ್ಯವಾದಗಳು ಗೆಳತಿ ಹೇಮಾ
ಕುತೂಹಲಭರಿತ ಕಥೆ ಸುಖಾಂತ್ಯವಾದುದು ಸಂತಸ ತಂದಿತು.
ಧನ್ಯವಾದಗಳು ಪದ್ಮಾ ಮೇಡಂ
ಸೊಗಸಾಗಿದೆ ಕಥೆ. ಕೊನೆಯವರೆಗೂ ಕುತೂಹಲಕಾರಿಯಾಗಿತ್ತು.
ಧನ್ಯವಾದಗಳು ನಯನಮೇಡಂ
ಹೋ…ನಾನು ಇಲಿರಾಯನ ಕಾಟವೋ ಅಂದ್ಕೊಂಡಿದ್ದೆ….!
ಸಣ್ಣ ಘಟನೆಯನ್ನು ತೆಗೆದುಕೊಂಡು, ಚಂದದ ಪುಟ್ಟ ಕಥೆ ಹೆಣೆಯುವುದರಲ್ಲಿ ನೀವು ಉಶಾರಪ್ಪ!! ಧನ್ಯವಾದಗಳು ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ನಮ್ಮ ಮನಸ್ಸಿನಲ್ಲಿ ಎಂದೋ ಬೇರೂರಿದ್ದ ದೆವ್ವ ಭೂತಗಳ ಬಗೆಗಿನ ಭಯ ಯಾವುದೋ ಸಂದರ್ಭದಲ್ಲಿ ದಿಗಿಲುಗೊಳಿಸುತ್ತದೆ. ಚೆಂದದ ಕಥೆ.
ಧನ್ಯವಾದಗಳು ಗೆಳತಿ ಹೇಮಾ