ಚಿತ್ರಗೀತೆಗಳಲ್ಲಿ ನಾರಿಯ ಸೀರೆ
ಡಿಸೆಂಬರ್ 21 ರ ವಿಶ್ವ ಸೀರೆ ದಿನದ ಪ್ರಯುಕ್ತ ಡಾ. ಎಚ್. ಆರ್ ಮಂಜುರಾಜ್ ಅವರ ನೀರೆಯ ಸೀರೆ ಲೇಖನಕ್ಕೆ ಸುರಹೊನ್ನೆಯ ಅಡ್ಮಿನ್ ರವರಾದ ಶ್ರೀಮತಿ ಹೇಮಮಾಲಾ ರವರು ಅಭಿನಂದನೆಗಳನ್ನು ತಿಳಿಸುತ್ತಾ” ಇನ್ನೂ ಸುರಹೊನ್ನೆ ಬಳಗದ ನಾರಿಯರು ಬರೆದು ಮುಯ್ಯಿ ತೀರಿಸಿಕೊಳ್ಳದಿದ್ದರೆ ಸೀರೆಗೆ ಅವಮಾನ ಮಾಡಿದಂತೆ ಎಂದು ಪರಿಗಣಿಸಿ ಕಾರ್ಯಪ್ರವೃತ್ತರಾಗಲಿದ್ದೇವೆ ʼ’ ಎಂದು ಮುಯ್ಯಿಯ ಮಾತುಗಳನ್ನಾಡಿದ್ದಾರೆ.
ನಾರಿಯರು ಕಾರ್ಯ ಪ್ರವೃತ್ತರಾದರೋ ಇಲ್ಲವೋ ನಾನಂತೂ ಅರಿಯೇ ! ಆದರೆ ಈ ನಾರಿಯರ ಸೀರೆಯ ಮೇಲೆ ಕಣ್ಣಿಟ್ಟ ಕೆಲವು ಚಿತ್ರಗೀತೆಗಳ ಮೇಲೆ ನನ್ನ ಎರಡೂ ಕಣ್ಣಿಟ್ಟು, ಈ ಚಿಕ್ಕ ಬರಹವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಮೊದಲಿಗೆ ನೀರೆಯ ಸೀರೆ ಎಂಬ ಸಾಲುಗಳನ್ನು ನೋಡಿದಾಕ್ಷಣ ಹೊಳೆದ ಚಿತ್ರಗೀತೆ, ಡಾ. ರಾಜ್‌ಕುಮಾರ್ ,ವಜ್ರಮುನಿ, ಜಯಮಾಲಾ ಮುಂತಾದವರು ಅದ್ಭುತವಾಗಿ ನಟಿಸಿದ ಡಾ. ರಾಜ್‌ಕುಮಾರ್ ಅತ್ಯಮೋಘವಾಗಿ ಹಾಡಿ ರಂಜಿಸಿದ, ಆರ್. ಎನ್. ಜಯಗೋಪಾಲ್ ಸಾಹಿತ್ಯ ರಚಿಸಿದ ಜಿ.ಕೆ ವೆಂಕಟೇಶ್ ರಾಗ ಸಂಯೋಜಿಸಿದ ದಾರಿ ತಪ್ಪಿದ ಮಗ ಚಲನಚಿತ್ರದ “ನಾರಿಯ ಸೀರೆ ಕದ್ದ, ರಾಧೆಯ ಮನವ ಗೆದ್ದ” ಎಂಬ ಮನಮೋಹಕ ಹಾಡು. ಸುಮಾರು 50 ವರ್ಷಗಳಷ್ಟು ಹಳೆಯದಾದ ಈ ಹಾಡು ಈಗಲೂ ನವನವೀನವೇ ! ಬಾಲ್ಯದಲ್ಲಿ ಶ್ರೀ ಕೃಷ್ಣ ನಾರಿಯರ ಸೀರೆಗಳನ್ನು ಕದ್ದು ಹೆಂಗಳೆಯರನ್ನು ಗೋಳು ಹೊಯ್ದುಕೊಂಡದ್ದನ್ನು ಈ ಹಾಡು ನೆನೆಪಿಸುತ್ತದೆ. ಪಾಪ! ಕೃಷ್ಣನಿಗೆ ಆ ಕಾಲದಲ್ಲಿ ಸೀರೆಗಳನ್ನು ಕದಿಯುವ ಅವಕಾಶವಿತ್ತೇ ಹೊರತು ಚೂಡಿದಾರವನ್ನೋ, ಲೆಹಂಗವನ್ನೋ, ಮಿಡಿಯನ್ನೋ, ನೈಟಿಗಳನ್ನೋ, ಜೀನ್ಸ್ ಪ್ಯಾಂಟ್ಗಳನ್ನೋ ಕದಿಯುವ ಅವಕಾಶ ಇರಲಿಲ್ಲ. ಇದ್ದಿದ್ದರೆ ಇಂತಹ ಹಾಡೇ ಹುಟ್ಟಿಕೊಳ್ಳುತ್ತಿರಲಿಲ್ಲವೇನೋ! ಇರಲಿ ಬಿಡಿ.
ಈ ಗೀತೆಯ ನಂತರ ನಾರಿಯರ ಸೀರೆ ಕುರಿತಂತೆ ನೆನಪಾಗುವ ಮತ್ತೊಂದು ಸುಂದರ ಗೀತೆ ಆರ್. ಎನ್. ಜಯ ಗೋಪಾಲ್ ರಚಿಸಿದ, ಶಂಕರ್ ಗಣೇಶ್ ಸಂಗೀತ ನೀಡಿದ ಎಸ್. ಪಿ ಬಾಲಸುಬ್ರಹ್ಮಣ್ಯಂ ಮತ್ತು ಎಸ್ ಜಾನಕಿ ಅವರ ಕಂಠಸಿರಿಯಲ್ಲಿ ಮೂಡಿ ಬಂದ ಸ್ವಾಭಿಮಾನ ಚಲನಚಿತ್ರದ “ದೂರದ ಊರಿಂದ ಹಮ್ಮಿರ ಬಂದ ಜರ್ತಾರಿ ಸೀರೆ ತಂದ ಅದರಲ್ಲಿ ಇಟ್ಟೀನೆ ಈ ನನ್ನ ಮನಸ್ಸನ್ನು ಜೋಪಾನ ಜಾಣೆ ಎಂದ” ಎಂಬ ಯುಗಳಗೀತೆ. ಸೀರೆಯಲ್ಲಿ ಇರುವ ವಿಧಗಳೋ…ಅಬ್ಬಬ್ಬಾ… ಲೆಕ್ಕ ಹಾಕಲು ಸೀರೆ ಅಂಗಡಿಯವರಿಗೂ ಸಾಧ್ಯವಿಲ್ಲವೇನೋ…! ಈ ಜಗತ್ತಿನ ಯಾವುದೇ ಸೀರೆ ಅಂಗಡಿಗಳಲ್ಲಿ ಎಲ್ಲಾ ವಿಧದ ಸೀರೆಗಳು ಇರಲಿಕ್ಕೆ ಸಾಧ್ಯವೂ ಇಲ್ಲ, ಅದು ಸಾಧುವೂ ಅಲ್ಲ. ಹಾಗೆಯೇ ಈ ನೀರೆಯರು ನೋಡಿದಾಕ್ಷಣ ಮೆಚ್ಚಿದ ಸೇರೆಯೂ ಸಹ ಈ ಜಗತ್ತಿನಲ್ಲಿಲ್ಲ. ಪರವಾಗಿಲ್ಲ ಬಿಡಿ. ಸೀರೆಯಲ್ಲೇ ಮನಸ್ಸಲ್ಲಿಟ್ಟು ಜೋಪಾನ ಮಾಡಲು ಪ್ರಿಯಕರ ಪ್ರಿಯತಮೆಗೆ ಹೇಳಿದ್ದು ಸೀರೆಯ ಮಹತ್ವವನ್ನು ಸಾರಿ ಸಾರಿ (ಸ್ಯಾರಿ ಸ್ಯಾರಿ ಅಲ್ಲ) ಹೇಳುತ್ತದೆ. ಈ ಹಾಡಿಗೆ ಈಗ ಸುಮಾರು 40 ವರ್ಷದ ಪ್ರಾಯ. ಈ ಹಾಡಿನಲ್ಲಿ ರವಿಚಂದ್ರನ್ ಮತ್ತು ಮಹಾಲಕ್ಷ್ಮೀ ಕುಣಿದು ಕುಪ್ಪಳಿಸಿರುವ ರೀತಿ, ರವಿಚಂದ್ರನ್ ರವರು ಸೀರೆಗಳಲ್ಲೇ ಈ ಹಾಡಿನ ಚಿತ್ರೀಕರಣಕ್ಕೆ ಹಾಕಿರುವ ಸೆಟ್ ಎಲ್ಲವೂ ಸುಂದರ. ಹೀಗಾಗಿ ಈ ಹಾಡು ಇಂದಿಗೂ ಅತ್ಯಂತ ಜನಪ್ರಿಯ ಸ್ಯಾರಿ ಸಾಂಗ್.
ಸೀರೆಯ ಹಾಡು ಎಂದ ಕ್ಷಣ ನೆನೆಪಾಗುವ ಮತ್ತೊಂದು ಜನಪ್ರಿಯ ಗೀತೆ, “ತಂದೆ ಕೊಡಿಸೋ ಸೀರೆ, ಮದುವೆ ಆಗೋವರೆಗೆ, ತಾಯಿ ಉಡಿಸೋ ಸೀರೆ, ತಾಯಿಯಾಗೋವರೆಗೆ, ಬಂಧು ಕೊಡಿಸೋ ಸೀರೆ ಬಣ್ಣ ಹೋಗೋವರೆಗೆ, ಗಂಡ ಕೊಡಿಸೋ ಸೀರೆ ಕುಂಕುಮ ಇರುವವರೆಗೆ: ಹೆಣ್ಣಿನ ಜನುಮ ಕಳೆವವರೆಗೆ, ಮಣ್ಣಿನ ಮಮತೆ ಮರೆವವರೆಗೆ”, ಎಂಬ ಹಾಡು. ಕೊಂಚ ಭಾವನಾತ್ಮಕವೆನಿಸೋ ಈ ಚಿತ್ರಗೀತೆ 32 ವರ್ಷಗಳಷ್ಟು ಹಳೆಯದಾದ ಮಿಡಿದ ಹೃದಯಗಳು ಚಿತ್ರದ್ದು . ಅಂಬರೀಶ್, ಶ್ರುತಿ, ನಿರೋಷ ಮುಂತಾದವರು ನಟಿಸಿರುವ ಈ ಚಲನಚಿತ್ರ ಗೀತೆಯ ರಚನೆ ಮತ್ತು ಸಂಗೀತ ನಿರ್ದೇಶನ ಹಂಸಲೇಖ ಅವರದ್ದು. ಡಾ. ರಾಜ್ ಅವರ ಅಮೋಘ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡು ಆಗಿನ ಕಾಲದ ಸೂಪರ್ ಹಿಟ್ ಗೀತೆಗಳು ಒಂದು. ಈ ಗೀತೆಯಲ್ಲಿ ಒಬ್ಬೊಬ್ಬರು ಕೊಡಿಸುವ ಸೀರೆಯ ಮಹತ್ವ್ತ ಒಂದೊಂದು ತೆರನಾಗಿರುತ್ತದೆ ಎಂಬ ಧ್ವನಿ ಇಲ್ಲಿ ಪ್ರತಿಪಾದಿತವಾಗಿದೆ. ಇಲ್ಲಿರುವ ಎಲ್ಲಾ ಮಾತುಗಳು ವಾಸ್ತವದಲ್ಲಿ ಅಕ್ಷರಶಃ ನಿಜವಲ್ಲ… ಆದರೂ ಇಲ್ಲೊಂದು ಭಾವನಾತ್ಮಕ ಎಳೆಯೊಂದನ್ನು ತಂದು ಜೋಡಿಸಲಾಗಿದೆ. ಬಂಧು ಕೊಡಿಸೊ ಸೀರೆ ಕೇವಲ ಬಣ್ಣ ಹೋಗುವಂಥದ್ದೇ! ತಂದೆ ಮದುವೆಯಾದ ನಂತರ ಮಗಳಿಗೆ ಸೀರಿಯನ್ನೇ ಕೊಡಿಸುವುದಿಲ್ಲವೇ ? ತಾಯಿ ಕೊಡಿಸುವ ಸೀರೆ ಮಗಳು ತಾಯಿಯಾಗುವವರೆಗೆ ಮಾತ್ರವೇ ? ಗಂಡ ಕೊಡಿಸೋ ಸೀರೆ ಮಾತ್ರವೇ ಶಾಶ್ವತವೇ ? ಖಂಡಿತಾ ಅಲ್ಲ. ಈಗಿನ ಕಾಲದ ಹೆಣ್ಣು ಮಕ್ಕಳಂತೂ ಇಲ್ಲಿನ ಯಾವ ಸಾಲನ್ನೂ ಒಪ್ಪುವುದಿಲ್ಲ. ಅಂಗಡಿಗೆ ಹೋಗಿ ಈ ಡಿಸೈನ್ ನಲ್ಲಿ ಬೇರೆ ಕಲರ್ ತೋರಿಸಿ : ಈ ಕಲರ್ ನಲ್ಲಿ ಬೇರೆ ಡಿಸೈನ್ ತೋರಿಸಿ ಎಂದು ಅಂಗಡಿಯವನ ತಲೆ ತಿಂದು, ಅವನ ಮೆದುಳಿಗೆ ಕೈ ಹಾಕಿ, ಕೊನೆಗೆ ಅಂಗಡಿಯವರಿಂದಲೇ ಟೋಪಿ ಹಾಕಿಸಿಕೊಂಡಾದರೂ ಸರಿಯೇ ಅವರೇ ಸೀರೆ ಖರೀದಿಸುತ್ತಾರೆ. ಹಣವನ್ನು ಮಾತ್ರ ಗಂಡನೆಂಬ ಪ್ರಾಣಿಯ ತಲೆಗೆ ಕಟ್ಟುತ್ತಾರೆ. ಇರಲಿ ಬಿಡಿ.
ಸೀರೆಯ ಹಾಡುಗಳ ಸಾಲಿನಲ್ಲಿ ಜ್ಞಾಪಕಕ್ಕೆ ಬರುವ ಮತ್ತೊಂದು ಹಾಡು ”ಸೀರೆ ಕೊಟ್ಟ ಧೀರ, ಮನಸ್ಸನ್ನಿಲ್ಲಿ ತಾರಾ, ನೀನು ಉಟ್ಟ ಸೀರೆ, ತುಂಬಾ ಚೆಂದ ತಾರೆ” ಎಂಬ ಹಾಡು ಅಂಬರೀಷ್ ಮತ್ತು ತಾರಾ ಹೆಜ್ಜೆ ಹಾಕಿರುವ ಈ ಹಾಡು ಮಿಸ್ಟರ್ ರಾಜ ಚಲನಚಿತ್ರದ್ದು: ಸುಮಾರು 38 ವರ್ಷಗಳಷ್ಟು ಹಳೆಯದು. ಹಂಸಲೇಖ ಸಾಹಿತ್ಯ ಮತ್ತು ಸಂಗೀತ ನೀಡಿರುವ ಈ ಹಾಡನ್ನು ಎಸ್. ಪಿ ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಮ್ ಅವರು ಅತಿ ಸುಂದರವಾಗಿ ಹಾಡಿದ್ದಾರೆ. ಸೀರೆ ಕೊಟ್ಟ ಪ್ರಯತಮನನ್ನು ಧೀರಾ ಎಂದು ಸಂಬೋಧಿಸುವ ಪ್ರಿಯತಮೆ, ಸೀರೆಯುಟ್ಟ ಪ್ರಿಯತಮೆಯನ್ನು ತುಂಬಾ ಚೆಂದ ಚೆಂದ ಎಂದು ಬಣ್ಣಿಸುವ ಪ್ರಿಯಕರ, ವಿವಿಧ ಸೀರೆಗಳನ್ನುಟ್ಟು ಸಂಭ್ರಮಿಸಿ ಸಡಗರಿಸುವ ನಾಯಕಿ ತಾರಾ, ಅಂತೂ ಹಾಡು ಸುಂದರವಾಗಿ ಚಿತ್ರಿತವಾಗಿದೆ. ತಾರಾ , ತಾರೆ, ಎಂಬ ಹಾಡಿನ ಪದಗಳಿಗೂ, ನಟಿ ತಾರಾ ನಟಿಸಿರುವುದಕ್ಕೂ ಲಿಂಕ್ ಇದ್ದರೆ ಅದು ಯಾರ ತಪ್ಪೂ ಅಲ್ಲ ಬಿಡಿ. ಇಡೀ ಹಾಡಿನಲ್ಲಿ ತಾರಾ ವಿವಿಧ ಸೀರೆಗಳನ್ನುಟ್ಟು ಸಂಭ್ರಮಿಸಿ ಸಡಗರಿಸುತ್ತಾರೆ.
ಇದೇ ರೀತಿಯಲ್ಲಿ ನಮ್ಮ ಕಣ್ಮುಂದೆ ಬರುವ ಇನ್ನೊಂದು ಹಾಡು “ಇವ ಯಾವ ಸೀಮೆ ಗಂಡು ಕಾಣಮ್ಮೊ ಇವನಿಗೆ ನನ್ನ ಸೀರೆ ಮ್ಯಾಲೆ ಯಾಕೆ ಕಣ್ಣಮ್ಮೊ” ಎಂಬ 1988ರಲ್ಲಿ ಬಿಡುಗಡೆಗೊಂಡ ರಣರಂಗ ಚಲನಚಿತ್ರ ಗೀತೆ. ಈ ಗೀತೆ ಆಗಿನ ಕಾಲದ ಎಲ್ಲ ಯುವಕ ಯುವತಿಯರ ಅಚ್ಚುಮೆಚ್ಚಿನ ಗೀತೆಗಳಲ್ಲಿ ಒಂದಾಗಿತ್ತು. ಹಂಸಲೇಖ ರಚಿಸಿ ರಾಗ ಸಂಯೋಜಿಸಿದ್ದ ಈ ಹಾಡಿಗೆ ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ವಾಣಿಜಯರಾಮ್ ರವರ ಅಮೋಘ ದನಿ ಇತ್ತು. ಈ ಗೀತೆಗೆ ನಲಿದು ನರ್ತಿಸಿದವರು ಶಿವರಾಜ್ ಕುಮಾರ್ ಮತ್ತು ಸುಧಾರಾಣಿ. ಸೀರೆಯುಟ್ಟು ಕುಣಿಯುವುದು ಕಷ್ಟವೆನಿಸಿದರೂ ಸುಧಾರಾಣಿ ಸೀರೆಯುಟ್ಟ ಪ್ರತಿಮೆಗಳ ನಡುವೆ ನರ್ತಿಸಿರುವ ರೀತಿ ಸೊಗಸಾಗಿ ಚಿತ್ರಿತವಾಗಿದೆ. ನನ್ನ ಸೀರೆ ಮೇಲೇಕೆ ನಿನ್ನ ಕಣ್ಣು ಎಂದು ಪ್ರಿಯತಮೆ ಪ್ರಿಯಕರನನ್ನು ಪ್ರಶ್ನಿಸಿದರೆ ಸೀರೆ ಮೇಲೆ ಕಣ್ಣಿಟ್ಟಾಕ್ಷಣ ನಾನೇನು ಪೋಲಿ ಹುಡುಗ ಅಲ್ಲ ಎಂದು ಪ್ರಿಯಕರ ಸಮಜಾಯಿಶಿ ನೀಡುತ್ತಾನೆ. ಸೀರೆ ಮೇಲೆ ಕಣ್ಣು ಎಂದರೆ ಅದು ನಾರಿ ಮೇಲೆ ಕಣ್ಣು ಎಂದು ಎಂದೇ ಅರ್ಥವಲ್ಲವೇ ?
ಇದೇ ಸಂದರ್ಭದಲ್ಲಿ ನೆನಪಿಡಬೇಕಾದ ಇನ್ನೊಂದು ಹಾಡು ಸ್ವಲ್ಪ ವಿಶೇಷವಾದದ್ದು ಅದೇ ಇಳಕಲ್ ಸೀರೆ ಉಟ್ಕೊಂಡು ಮೊಣಕಾಲ್ ಗಂಟ ಎತ್ಕೊಂಡು ಏರಿ ಮೇಲೆ ಏರಿ ಬಂದ್ಳು ನಾರಿ ಎಂಬ ಗೀತೆಯನ್ನು ಹಂಸಲೇಖ ಬರೆದು ರಾಗಸಂಯೋಜಿಸಿದ್ದು ರವಿಚಂದ್ರನ್ ರವರ ಹಳ್ಳಿ ಮೇಷ್ಟ್ರು ಚಲನಚಿತ್ರಕ್ಕೆ. ಯೇಸುದಾಸ್ ರವರ ಜೇನಿನಂಥ ದನಿಯಲ್ಲಿ ಇಂಪಾಗಿ ಮೂಡಿ ಬಂದಿರುವ ಈ ಗೀತೆ ಕಾರಣಾಂತರದಿಂದ ಚಿತ್ರೀಕರಣಗೊಳ್ಳಲಿಲ್ಲ. ಇದೇ ಹಾಡನ್ನು ಮುಂದೆ ಕೊಂಚ ಬದಲಾವಣೆಗಳೊಂದಿಗೆ 1998ರಲ್ಲಿ ಬಿಡುಗಡೆಯಾದ ಕೌರವ ಎಂಬ ಚಲನಚಿತ್ರಕ್ಕೆ ಅಳವಡಿಸಲಾಯಿತು. ಬಿ. ಸಿ ಪಾಟೀಲ್ ಮತ್ತು ಪ್ರೇಮ ರವರು ನಟಿಸಿದ್ದ ಈ ಹಾಡು ಹಸಿರ ಸಿರಿಯಲ್ಲಿ ಚೆಂದವಾಗಿ ಚಿತ್ರೀಕರಣಗೊಂಡಿತ್ತು. ಮೊದಲಿಗೆ ಈ ಹಾಡು ಇಳಿಕಲ್ ಸೀರೆ ಉಟ್ಕೊಂಡು ಮೊಣಕಾಲ್ ಗಂಟ ಎತ್ಕೊಂಡು ಏರಿ ಮೇಲೆ ಏರಿ ಬಂದ್ಳು ನಾರಿ ಬುಟ್ಟಿಯಲ್ಲಿ ರೊಟ್ಟಿ ತಂದ ಪೋರಿ, ಕಂಡಿರಾ ನೀವು ಕಂಡೀರಾ ನನ್ನ ಹೆಂಡಿರಾ ನಗು ಕಂಡಿರಾ… ಎಂದಿತ್ತು. ಮುಂದೆ ಇಳಿಕಲ್ ಸೀರೆ ಉಟ್ಕೊಂಡು ಮೊಣಕಾಲ್ ಗಂಟ ಎತ್ಕೊಂಡು ಏರಿ ಮೇಲೆ ಏರಿ ಬಂದ್ಳು ನಾರಿ ಬುಟ್ಟಿ ತುಂಬಾ ಪ್ರೀತಿ ತಂದ್ಳು ಗೌರಿ ಮಲ್ಲಿಗೆ ಈ ಮಲ್ಲಿಗೆ ಆಹಾ ಮೈಸೂರ ಮಲ್ಲಿಗೆ ಎಂದಾಯಿತು. ಹಾಗೆಯೇ ಚರಣದಲ್ಲಿಯೂ ಸಾಕಷ್ಟು ಬದಲಾವಣೆಯಾಯಿತು.
ನಾರಿಯ ಸೀರೆ ಎಂದಾಕ್ಷಣ ನೆನಪು ಮಾಡಿಕೊಳ್ಳಬಹುದಾದ ಮತ್ತೊಂದು ಗೀತೆ 1996ರಲ್ಲಿ ಬಿಡುಗಡೆಯಾದ ಜನುಮದ ಜೋಡಿ ಚಲನಚಿತ್ರದ್ದು. ಸೀರೆ ಸೀರೆ ಸೀರೆ ಎಲ್ಲೆಲ್ಲೂ ಹಾರೈತೆ, ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ ಎಂಬ ಹಾಡು. ಸಾಹಿತ್ಯ ಶ್ರೀರಂಗ ಅವರದ್ದು. ಸಂಗೀತ ವಿ ಮನೋಹರ್. ಹಾಡಿದ ಕಲಾವಿದೆ ಸಂಗೀತ ಕಟ್ಟಿ. ಹಾಡಿನಲ್ಲಿ ನಟಿಸಿರುವವರು ಶಿವರಾಜ್ ಕುಮಾರ್ ಮತ್ತು ಪೌರ್ಣಮಿ ಎಂಬ ಕಲಾವಿದರು. ಸಾಮಾನ್ಯವಾಗಿ ಸಿನಿಮಾ ಹಾಡುಗಳಲ್ಲಿ ನಾಯಕಿಯರು / ಕಲಾವಿದರು ಹಾಡಿನ ಪಲ್ಲವಿ ಚರಣಗಳೆಲ್ಲ ಬೇರೆ ಬೇರೆ ಸೀರೆ ಉಟ್ಟು ನಟಿಸುತ್ತಾರೆ. ಆದರೆ ಈ ಹಾಡಿನಲ್ಲೇಕೋ ಆ ನೀರೆ ಇಡೀ ಹಾಡಿನಲ್ಲಿ ಒಂದೇ ಸೀರೆಯುಟ್ಟೇ ನಟಿಸಿದ್ದಾರೆ. ಸೀರೆ ಹಾರುತೈತೆ ಎನ್ನುತ್ತಲೇ ಮನಸ್ಸನ್ನು ಸೂರೆ ಮಾಡಿದೆ ಎನ್ನುವ ಪ್ರೇಮಿ, ತಾನು ಇಷ್ಟ ಪಟ್ಟ ಹುಡುಗನನ್ನು ಒಲಿಸಿಕೊಳ್ಳಲು ಪರಿಪರಿಯಾಗಿ ಕಾಡುತ್ತಾಳೆ. ಗದ್ದೆಬಯಲು ನದಿ ನೀರಲ್ಲೆಲ್ಲಾ ಚಿತ್ರೀಕರಣಗೊಂಡಿರುವ ಈ ಹಾಡು ಆ ಕಾಲದ ಜನಪ್ರಿಯ ಹಾಡುಗಳಲ್ಲಿ ಒಂದಾಗಿತ್ತು.
ಮತ್ತೊಂದು ಗೀತೆಯನ್ನು ಇದೇ ಸನ್ನಿವೇಶದಲ್ಲಿ ಜ್ಞಾಪಿಸಿಕೊಳ್ಳುವುದಾದರೆ ವಿ ರವಿಚಂದ್ರನ್ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ ನೀಡಿರುವ ಹಾಗೂ ಸ್ವತಃ ರವಿಚಂದ್ರನ್ ಮತ್ತು ಶ್ರೀದೇವಿಕ ನಟಿಸಿರುವ ಶ್ರೀನಿವಾಸ್ ಮತ್ತು ಸುಮಾ ಶಾಸ್ತ್ರೀ ಹಾಡಿರುವ ಹೆಣ್ಣಿಗೆ ಸೀರೆ ಯಾಕೆ ಅಂದ… ಆ ಅಂದ ಚೆಂದ… ಅವಳ ಅಂದ ಒಳಗೆ ಅಡಗಿರೊದ್ರಿಂದ ಸೀರೆಯಲ್ಲಿ ಹೆಣ್ಣು ಬೆಣ್ಣೆ… ಆ ಬೆಣ್ಣೆಯಂತೆ… ಕರಗಿ ಹೋಗೋ ಆ ಹೃದಯದಂತೆ… ಇಡೀ ಹಾಡಿನಲ್ಲಿ ಸಹನರ್ತಿಕಿಯರ ಜೊತೆ ರವಿಚಂದ್ರನ್ ಮತ್ತು ಶ್ರೀದೇವಿಕ ಮೋಹಕವಾಗಿ ನಟಿಸುತ್ತಾರೆ. ಚಿತ್ರೀಕರಣಗೊಂಡಿರುವ ರೀತಿ ಎಂದಿನಂತೆ ರವಿಚಂದ್ರನ್ ಶೈಲಿಯಲ್ಲಿರುವುದರಿಂದ ಮನಮೋಹಕ ದೃಶ್ಯಗಳು ಈ ಹಾಡಿನಲ್ಲಿವೆ. ಹೆಣ್ಣಿಗೆ ಸೀರೆಗೆ ಅಂದ ಯಾಕೆ ಎಂದು ಕೇಳುತ್ತಲೇ ಅಂದ ಚೆಂದ ಸೀರೆಯ ಒಳಗೆ ಅಡಗಿರೋದ್ರಿಂದ ಎಂದು ಪ್ರೇಮಿಯೇ ಉತ್ತರವನ್ನೂ ಕೊಡುತ್ತಾನೆ. ಸೀರೆಯುಟ್ಟ ಹೆಣ್ಣಿನ ಹೃದಯ ಬೆಣ್ಣೆಯಂತೆ ಕರಗುವಂಥದ್ದು ಎನ್ನುತ್ತಲೇ ತನ್ನ ಪ್ರಿಯತಮೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ.
ಇನ್ನು ಹಾಡಿನ ಚರಣದಲ್ಲಿ ಬಂದಿರುವ ಸೀರೆಯ ಗೀತೆಗಳನ್ನು ಪ್ರಸ್ತಾಪಿಸುವುದಾದರೆ, ರವಿಚಂದ್ರನ್, ಭವ್ಯ ನಟಿಸಿರುವ ಮುಂದೇ ನೀ ಹೋದಾಗ ಹಿಂದೆ ನಾ ಬರುವೆ ಚಿನ್ನಾ ಎಂಬ ಪ್ರಳಯಾಂತಕ ಚಲನಚಿತ್ರದ ಹಾಡು. ಈ ಹಾಡಿನ ಚರಣದಲ್ಲಿ ರೇಷಿಮೆ ಸೀರೆಯುಟ್ಟು ಕೈ ತುಂಬಾ ನೆರಿಗೆ ಇಟ್ಟು ನಡುವಲ್ಲಿ ಸಿಕ್ಕಿಸುವೆಯಾ ಜಯಮ್ಮ ಅದು ನೆರಿಗೆಯಲ್ಲ ನನ್ನ ಮನಸು ಕೇಳಮ್ಮ ಎನ್ನುತ್ತಾ ನಾಯಕಿಯನ್ನು ನಾಯಕ, ಪರಿಪರಿಯಾಗಿ ಕಾಡುತ್ತಾನೆ. ಈ ಹಾಡು ಸುಮಾರು 40 ವರ್ಷಗಳಷ್ಟು ಹಳೆಯದಾದರೂ ಇಂದಿಗೂ ಗುನುಗುನುಸೋ ಹಾಡಿದು. ಚಿ. ಉದಯಶಂಕರ್ ರಚಿಸಿರುವ ಈ ಹಾಡಿಗೆ ಸಂಗೀತ ನಿರ್ದೇಶನ ಶಂಕರ್ ಗಣೇಶ ಅವರದ್ದು. ಎಸ್. ಪಿ ಬಾಲಸುಬ್ರಮಣ್ಯಂ ಮತ್ತು ಮಂಜುಳಾ ಗುರುರಾಜ್ ಈ ಹಾಡನ್ನು ಮನದುಂಬಿ ಹಾಡಿದ್ದಾರೆ.
ಇನ್ನು ಇದೇ ರವಿಚಂದ್ರನ್ ಅಭಿನಯದ ಪುಟ್ನಂಜ ಚಲನಚಿತ್ರದ ಹಂಸಲೇಖ ರವರ ಸಾಹಿತ್ಯ ಮತ್ತು ಸಂಗೀತ ನಿರ್ದೇಶನದ ಪುಟ್ಟಮಲ್ಲಿ ಪುಟ್ಟಮಲ್ಲಿ ಎಂಬ ಹಾಡು. ಹಾಡಿನ ಪಲ್ಲವಿಯಲ್ಲಿ ಇವಳು ನಾಲ್ಕು ಮೊಳ ಸೀರೆ ಎಂಟು ಮೊಳ ಕಣ್ಣು ಕಾಸಗಲ ಆಸೆ ಊರಗಲ ಎಂಬ ಸಾಲುಗಳಲ್ಲಿ ನಾಯಕ ತನ್ನ ನಾಯಕಿಯ ಸೌಂದರ್ಯವನ್ನು ತನ್ನ ಅಜ್ಜಿ ಪುಟ್ಟಮಲ್ಲಿಗೆ ವರ್ಣಿಸುತ್ತಾ ಹಾಡುವ ಈ ಹಾಡು ಅತ್ಯುತ್ತಮ ಗೀತೆಗಳ ಸಾಲಿನಲ್ಲಿ ಸದಾ ನೆನಪಿನಲ್ಲಿ ಉಳಿಯುವಂತದ್ದು.
ಇನ್ನು ಮರೆಯಲೇಬಾರದ ಮತ್ತೊಂದು ಗೀತೆ 2015 ರಲ್ಲಿ ಬಿಡುಗಡೆಗೊಂಡ ರನ್ನ ಚಲನಚಿತ್ರದ ಸೀರೆಲಿ ಹುಡುಗಿರ ನೋಡಲೆ ಬಾರದು ನಿಲ್ಲಲ್ಲ ಟೆಂಪರೇಚರ್ರು ಎಂಬ ಹಾಡು. ಯೋಗರಾಜ್ ಭಟ್ ರವರ ಸಾಹಿತ್ಯ, ಹರಿಕೃಷ್ಣರವರ ಸಂಗೀತ ನಿರ್ದೇಶನ, ವಿಜಯಪ್ರಕಾಶ್ ರವರ ಟಿಪಿಕಲ್ ಧ್ವನಿಯಲ್ಲಿ ಮೂಡಿ ಬಂದಿರುವ ಈ ಗೀತೆಗೆ ಸುದೀಪ್ ಮತ್ತು ರಚಿತಾ ರಾಮ್ ಹೆಜ್ಜೆಹಾಕಿದ್ದಾರೆ. ಸೀರೆಯುಟ್ಟ ಮೋಹಕ ನೀರೆಯರನ್ನು ಕಂಡಾಗ ದೇಹದ ಉಷ್ಣತೆ ಏರುಪೇರಾಗುತ್ತದೆ. ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹುಡುಗರು ಸೀರೆಯುಟ್ಟ ನಾರಿಯರನ್ನು ನೋಡಲೇಬಾರದು ಎಂಬ ತೀರ್ಮಾನಕ್ಕೆ ನಾಯಕ ಬಂದಂತೆ ಕೊಂಚ ವ್ಯಂಗ್ಯವನ್ನು ಬೆರೆಸಿ ಇಲ್ಲಿ ಹೇಳಲಾಗಿದೆ. ಕಾಲಕ್ಕೆ ತಕ್ಕಂತೆ ಹಾಡಿನ ರಚನೆ ಮತ್ತು ಚಿತ್ರೀಕರಣಗೊಂಡಿರುವ ಬಗೆಯನ್ನು ನಾವಿಲ್ಲಿ ಗಮನಿಸಬಹುದಾಗಿದೆ.
ಡಾ. ಮಂಜುರಾಜ್ ರವರೇ ತಮ್ಮ ಲೇಖನದಲ್ಲಿ “ರವಿಚಂದ್ರನ್ ರವರು ತಮ್ಮ ಚಲನಚಿತ್ರಗಳಲ್ಲಿ ಸೀರೆಯುಟ್ಟ ಚೆಲುವೆಯರನ್ನು ಇನ್ನಿಲ್ಲದಂತೆ ಮೆರೆಸಿದ್ದಾರೆ” ಎಂದು ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಕಾಕತಾಳೀಯವೋ ಎಂಬಂತೆ ನನ್ನ ಈ ಲೇಖನದಲ್ಲಿ ಅವರದ್ದೇ ಐದು ಹಾಡುಗಳಿವೆ. ಮಂಜುರಾಜ್ ರವರು ತಮ್ಮ ಲೇಖನಕ್ಕೆ ಇಟ್ಟಿರುವ ಶೀರ್ಷಿಕೆ ನೀರೆಯ ಸೀರೆ. ಅವರೇಕೆ ನಾರಿಯ ಸೀರೆ ಎನ್ನಲಿಲ್ಲ ಎಂದರೆ ನಾರಿ ಎಂಬ ಪದಕ್ಕೆ ಸ್ತ್ರೀ, ಮಹಿಳೆ, ವನಿತೆ ಮುಂತಾದ ಅರ್ಥಗಳಿವೆ. ಆದರೆ ನೀರೆ ಎಂದರೆ ಸುಂದರ ಮಹಿಳೆ ಎಂಬರ್ಥವಿದೆ. ನೀರೆ ಎಂದಾಕ್ಷಣ ನಮ್ಮ ಕಣ್ಮುಂದೆ ಬರುವ ಹಾಡು ಬಂಗಾರದೊಡವೆ ಬೇಕೆ ನೀರೆ… ಎಂಬ ಕಣ್ತೆರೆದು ನೋಡು ಚಲನಚಿತ್ರದ ಗೀತೆ. ಇವೆಲ್ಲಾ ಸಂಗತಿಗಳ ಅವಲೋಕನದಿಂದ ನಮಗೆ ತಿಳಿಯುವ ಅಂಶವೆಂದರೆ ನಾರಿಗಾಗಲೀ, ನೀರೆಗಾಗಲೀ ಸೀರೆಯೇ ಅಂದ; ಸೀರೆಯೇ ಚೆಂದ. ಜೈ ನಾರಿ….ಜೈ ಸ್ಯಾರಿ….ಜೈ ನೀರೆ…. ಜೈ ಸೀರೆ.
– ವೆಂಕಟಾಚಲ ಜಿ.
ನವಭಾವ,ನವಸಂಖ್ಯೆಯಲಿ ಬರೆದ ನವ ಗಂಡಸಿಗೆ ನಮೋ ನಮಃ
ಧನ್ಯವಾದಗಳು
ಸರ್ ಉತ್ತಮ ವಾಗ್ಮಿ ಆದರೆ ಲೇಖನ ಸುಮಾರಾಗಿದೆ ಎಂದೆನಿಸಿತು ಅದು ಆರಿಸಿಕೊಂಡಿರುವ ವಿಷಯನೋ ಕಾಣೆ ನನ್ನ ಅಭಿಪ್ರಾಯ.
ಧನ್ಯವಾದಗಳು ಮೇಡಮ್…ವಿಭಿನ್ನ ಪ್ರಯತ್ನವಷ್ಟೇ…
ಲೇಖನದಲ್ಲಿ ಬರೀ ಸೀರೆಗಳನ್ನು ಒಳಗೊಂಡ ಚಿತ್ರ ಗೀತೆಗಳು ಅಂಥ ಮುದ ಕೊಡಲಿಲ್ಲ
ಧನ್ಯವಾದಗಳು,
ಸೀರೆಯನ್ನು(ಎಂಬ ಪದವನ್ನು?) ತುಂಬಿಕೊಂಡು ನಲಿವ ಇಂಪಾದ ಸಿನಿಮಾ ಹಾಡುಗಳ ಗುಚ್ಛ… ಹೊಸ ಅನುಭವವನ್ನು ನೀಡಿತು.
ಧನ್ಯವಾದಗಳು ತಮ್ಮ ಸವಿನುಡಿಗಳಿಗೆ
ನೀರೆಯರುಡುವ ಸೀರೆಗಳ ಕುರಿತಾದ ಚಿತ್ರಗೀತೆಗಳನ್ನೊಳಗೊಂಡ ಲೇಖನ ಆಯಾ ಸಿನಿಮಾಗಳ ನೆನಪುಗಳನ್ನು ಮೆಲಕು ಹಾಕುವಂತೆ ಮಾಡಿತು.
ಧನ್ಯವಾದಗಳು ಮೇಡಮ್…ತಾವೂ ಈ ವಿಷಯವನ್ನು ಕುರಿತಂತೆ ಬರೆದ ಲೇಖನ ಕೂಡ ಸೊಗಸಾಗಿತ್ತು….
ಮುಂದುವರೆಯಲಿ ಅಭಿಯಾನ
ನಮಸ್ಕಾರ ಸರ್, ನಿಮ್ಮ ಸೃಜನಶೀಲ ಮುಯ್ಯಿ ಓದಿಸಿಕೊಂಡು ಹೋಯಿತು.
ಚಲನಚಿತ್ರಗಳಲ್ಲಿ ಬಂದ ಸೀರೆಯ ನೀರೆ ಮತ್ತು ನೀರೆಯ ಸೀರೆ ಎರಡನ್ನೂ ಕುರಿತು ಬರೆದಿರುವಿರಿ. ತಕ್ಷಣ ಓದಿದೆ.
ನೀವು ವಿದ್ವಜ್ಜನರು ಜೊತೆಗೆ ವಾಗ್ಮಿ. ಜೊತೆಗೆ ಶಿಕ್ಷಣತಜ್ಞರು. ನಮ್ಮ ಹಳೆಯ ಕಾವ್ಯ ಹಾಗೂ ಸಂಸ್ಕೃತ
ಸುಭಾಷಿತಗಳಲ್ಲಿ ಬಂದಿರುವ ಸೀರೆ ಮತ್ತು ಸೀರೆಯುಟ್ಟ ನೀರೆಯರ ಬಗ್ಗೆ
ನೀವು ಬರೆದರೆ ಇನ್ನೂ ಚೆಂದ. ಅದರ ನಿರೀಕ್ಷೆಯಲ್ಲಿ.
ಲೇಖನದಲ್ಲಿ ನನ್ನ ಹೆಸರನ್ನೂ ಬರೆಹವನ್ನೂ ಹೆಸರಿಸಿದ್ದೀರಿ. ಅದಕಾಗಿ ಕೃತಜ್ಞತೆಗಳು.
ಸುರಹೊನ್ನೆಯ ನಮ್ಮ ಮನೆಯಂಗಳದ ಸುಗಂಧ; ಅದರ ಆಸ್ವಾದನೆ ಪ್ರತೀ ವಾರ.
ತುಂಬಾ ಖುಷಿಯಾಯಿತು. ಧನ್ಯವಾದಗಳು ಸ್ನೇಹಿತರೇ.
ಸರ್
ಮೊದಲು ನಿಮಗೆ ಧನ್ಯವಾದ…
ಈ ಲೇಖನ ಬರೆಯಲು ತಾವು ಹಾಗೂ ಹೇಮಮಾಲಾ ಮೇಡಮ್ ರವರು ಕಾರಣ….
ನೀವು ನೀಡಿರುವ ಸಲಹೆಯನ್ನು ಸ್ವೀಕರಿಸುತ್ತೇನೆ…
ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ.
Nice
ಧನ್ಯವಾದಗಳು