ನೋ ನೆಟ್ವರ್ಕ್ ಕವರೇಜ್….. ಒಂದು ಅನುಭವ
ಸರ್ವವ್ಯಾಪಿಯಾಗಿರುವ ಮೊಬೈಲ್ ಕೈಯಲ್ಲಿ ಇದ್ದರೆ ಬೇರೆ ಯಾರೂ ಒಟ್ಟಿಗೆ ಇರಬೇಕೆಂದಿಲ್ಲ ಆದರೆ ನೆಟ್ವರ್ಕ್ ಮಾತ್ರ ಇರಬೇಕು ಅಷ್ಟೇ. ಅಳುವ ಪುಟ್ಟ ಮಕ್ಕಳ ಕೈಯಲ್ಲಿ ಮೊಬೈಲ್ ಇಟ್ಟು ನೋಡಿ! ಅಳು ಮಂಗಮಾಯ. ಗೊತ್ತಿಲ್ಲದ, ಗುರುತು ಪರಿಚಯ ಇಲ್ಲದ ಸ್ಠಳಗಳಿಗೆ ಪ್ರಯಾಣಿಸುವಾಗ ಮೊಬೈಲಿನಲ್ಲಿ ನಾವು ಹೋಗಬೇಕಾದ ಜಾಗವನ್ನು ಗೂಗಲ್ ಮ್ಯಾಪ್ ಮುಖಾಂತರ ಹುಡುಕುತ್ತಾ ಹೋಗಬಹುದು. ಹಾಗಾಗಿ ಈಗ ಎಲ್ಲಾ ಆಮಂತ್ರಣ ಪತ್ರಿಕೆಗಳಲ್ಲಿ ಸಮಾರಂಭ ನಡೆಯುವ ಸ್ಥಳದ ವಿಳಾಸ ಹಾಗೂ ಗೂಗಲ್ ಮ್ಯಾಪ್ ಲೊಕೇಶನ್ ಕೂಡಾ ಮುದ್ರಿಸುವುದು ಮಾಮೂಲಿಯಾಗಿದೆ. ಮೊಬೈಲ್ ನೆಟ್ವರ್ಕ್ ಸರಿ ಇದ್ದರೆ ಎಂತಹ ಪರಿಸ್ಠಿತಿಯನ್ನೂ ನಿಭಾಯಿಸಬಹುದು.ಯಾವುದೇ ಖರೀದಿ ಮಾಡಿದರೂ ಹಣವನ್ನು ಫೋನಿನ ಮುಖಾಂತರ ಪಾವತಿಸಬಹುದು. ಭಾವಚಿತ್ರ ತೆಗೆಯಬೇಕೆಂದರೆ ಮೊಬೈಲ್ ಸೇವೆ ಸದಾ ಸಿದ್ಧ. ಅಗತ್ಯವಿದೆಯೋ ಇಲ್ಲವೋ, ವಿಧ ವಿಧದ ಭಂಗಿಗಳಲ್ಲಿ ಫೋಟೋ ತೆಗೆದು ಸಂಭ್ರಮಿಸದವರೇ ಇಲ್ಲ. ಅಯ್ಯೋ! ಮೊಬೈಲ್ ಬಗ್ಗೆ ಬರೆಯುತ್ತಾ ಹೋದರೆ ಪುಟಗಟ್ಟಲೆ ಬೇಕಾದೀತು! ಒಟ್ಟಿನಲ್ಲಿ ಮೊಬೈಲ್ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗ ಎಂದರೆ ಖಂಡಿತಾ ತಪ್ಪಿಲ್ಲ. ನಮ್ಮ ಆತ್ಮೀಯ ಜೊತೆಗಾರ/ಜೊತೆಗಾತಿ. ಇಂತಿಪ್ಪ ಮೊಬೈಲ್, ನೆಟ್ವರ್ಕ್ ಸಮಸ್ಯೆಯಿಂದ ಮೌನವಾದಾಗಿನ ನನ್ನ ಒಂದು ಅನುಭವವನ್ನು. ಹಂಚಿಕೊಳ್ಳಲು ಈ ಲೇಖನ.
ನನ್ನ ಬಹುಕಾಲದ ಕನಸೊಂದು ನನಸಾಗುವ ಕಾಲ ಕೂಡಿ ಬಂದಿತ್ತು. ಏನು ಕನಸು? ಏನು ಕಥೆ? ಆ ಕನಸು ಹೇಗೆ ಹುಟ್ಟಿಕೊಂಡಿತೆಂದು ಹೇಳಬೇಕಲ್ವೇ? ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ ಅನ್ನುವ ಹಾಡಿನ ಸಾಲುಗಳಂತೆ ಮುಂಬಯಿಯಲ್ಲಿರುವ ಭಾಭಾ ಪರಮಾಣು ಸಂಶೋಧನಾ ಕೇಂದ್ರ- Bhabha Atomic Research Centre (BARC) ನೋಡಬೇಕೆಂಬ ಹಂಬಲ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಮೊಳೆತಿತ್ತು. ಆದರೆ ಅದಕ್ಕೂ ಯೋಗ ಬೇಕು- ಸಮಯ ಕೂಡಿ ಬರಬೇಕು ಅಲ್ಲವೇ? ಉದ್ಯೋಗ, ಮದುವೆ, ಮಕ್ಕಳು ಇವೆಲ್ಲದರ ನಡುವೆ ನಾನು ವ್ಯಸ್ತಳಾಗಿದ್ದೆ.. ಉದ್ಯೋಗಕ್ಕೆ ಸೇರಿ 21 ವರ್ಷಗಳ ಬಳಿಕ Faculty Improvement Programme ಯೋಜನೆಯ ಫಲಾನುಭವಿಯಾಗಿ 2014 ರಿಂದ- 2017 ರ ವರೆಗೆ ಮೂರು ವರ್ಷ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೆ.
ಸಂಶೋಧನೆ ಮಾಡುತ್ತಿರುವ ಸಂದರ್ಭ, ಮುಂಬಯಿಯ ಪರಮಾಣು ಶಕ್ತಿ ವಿಭಾಗವು, 1956 ರಿಂದ ಮೊದಲ್ಗೊಂಡು ಪ್ರತಿ ವರ್ಷ DAE SSPS ಅಂದರೆ Department of Atomic Energy Solid State Physics Symposium ಅನ್ನುವ ಸಮ್ಮೇಳನವನ್ನು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ. ಆಯೋಜಿಸಿಕೊಂಡು ಬರುತ್ತಿರುವ ವಿಷಯದ ಬಗ್ಗೆ ತಿಳಿದುಕೊಂಡೆ. 2014, 2015 ಹಾಗೂ 2016 ರಲ್ಲಿ ಕ್ರಮವಾಗಿ ವೆಲ್ಲೂರು, ನೋಯ್ಡಾ ಹಾಗೂ ಭುವನೇಶ್ವರದಲ್ಲಿ ನಡೆದ 59 ನೆಯ, 60 ನೆಯ ಹಾಗೂ 61 ನೆಯ DAE SSPS ಗಳಲ್ಲಿ ನನ್ನ ಸಂಶೋಧನಾ ಲೇಖನಗಳು ಮಂಡನೆಗೆ ಆಯ್ಕೆಗೊಂಡಿದ್ದರಿಂದ, ಸಮ್ಮೇಳನಗಳಲ್ಲಿ ಭಾಗವಹಿಸಿ ಸಂಶೋಧನಾ ಫಲಿತಾಂಶಗಳನ್ನು ಪ್ರಸ್ತುತಪಡಿಸುವ ಸದವಕಾಶ ನನ್ನದಾಗಿತ್ತು. 2017 ರಲ್ಲಿ BARC ನಲ್ಲಿ ನಡೆಯಲಿದ್ದ 62 ನೆಯ DAE SSPS ಸಮ್ಮೇಳನದಲ್ಲಿ ಮಂಡಿಸಲೆಂದು ಕಳುಹಿಸಿದ ಪೇಪರ್ ಆಯ್ಕೆಯಾಗದ ಕಾರಣ BARC ಸಂದರ್ಶಿಸುವ ನನ್ನ ಆಸೆ ಠುಸ್ ಆಯ್ತು.
68 ನೆಯ DAE SSPS 2024 ಸಮ್ಮೇಳನ BARC ನಲ್ಲಿ ನಡೆಯಲಿದೆಯೆಂದು ಗೊತ್ತಾಯಿತು. ಸಮ್ಮೇಳನ ನಡೆಯುವ ದಿನಾಂಕಗಳಲ್ಲಿ ಕಾಲೇಜಿಗೂ ರಜೆ ಇರಬಹುದೆಂಬುದನ್ನು ಮನಗಂಡೆ. ಮರಳಿ ಯತ್ನವ ಮಾಡು ಅನ್ನುವ ಮಾತಿದೆಯಲ್ಲಾ! ಇಲ್ಲಿಯ ತನಕ ಹಂಚಿಕೊಳ್ಳದ ಸಂಶೋಧನೆಯ ಫಲಿತಾಂಶವೊಂದನ್ನು ಆಧರಿಸಿ ಸಂಶೋಧನಾ ಲೇಖನ ಬರೆದು ಕಳುಹಿಸಿದೆ. ಈ ಬಾರಿಯಾದರೂ BARC ಗೆ ಹೋಗುವ ಅವಕಾಶ ಸಿಗಲೆಂಬ ನಿರೀಕ್ಷೆ. ನನ್ನ ಅದೃಷ್ಟ- ನನ್ನ ಲೇಖನ ಮಂಡನೆಗೆ ಆಯ್ಕೆಯಾಗಿತ್ತು. ಹಾಗಾಗಿ ದಶಂಬರ ತಿಂಗಳಿನಲ್ಲಿ 18 ರಿಂದ 22 ರ ವರೆಗೆ ನಡೆಯುವ ಈ ಸಮ್ಮೇಳನದಲ್ಲಿ ಭಾಗವಹಿಸಲು ವಸತಿ ವ್ಯವಸ್ಥೆ ಹಾಗೂ ಪ್ರಯಾಣಕ್ಕೆ ಅವಶ್ಯವಿರುವ ರೈಲು ಟಿಕೆಟುಗಳನ್ನು ಕಾದಿರಿಸಿ ಮುಂಬಯಿಗೆ ಹೊರಟಿದ್ದೆ. ಜೀವನದಲ್ಲಿ ಮೊದಲ ಬಾರಿಗೆ ಮುಂಬಯಿಗೆ ನನ್ನ ಪ್ರಯಾಣವಾದ್ದರಿಂದ ಸಣ್ಣ ಅಳುಕು.
ದಶಂಬರ 17 ರಂದು ಮಂಗಳೂರಿನಿಂದ ಹೊರಟ ಮತ್ಸ್ಯಗಂಧ ರೈಲು ದಶಂಬರ 18 ರ ಬೆಳಿಗ್ಗೆ, ನಿಗದಿತ ಸಮಯಕ್ಕಿಂತ ಒಂದು ಘಂಟೆ ತಡವಾಗಿ ಮುಂಬಯಿಯ ಲೋಕಮಾನ್ಯ ತಿಲಕ್ ಟರ್ಮಿನಲ್ ತಲುಪಿತ್ತು. ನಾನು ಸುರಕ್ಷಿತವಾಗಿ ತಲುಪಿದ್ದೇನೆಂದು ನನ್ನ ಮನೆಯವರಿಗೆ ತಿಳಿಸಬೇಕಲ್ವಾ? ಸಾಲದೆಂಬಂತೆ ರೈಲು ಒಂದು ಘಂಟೆ ವಿಳಂಬವಾಗಿ ತಲುಪಿದೆ. ಆದರೆ ಮುಂಬಯಿ ತಲುಪುತ್ತಿದ್ದಂತೆ ನನ್ನ ಮೊಬೈಲಿನಲ್ಲಿ ನೆಟ್ವರ್ಕ್ ಸಿಗದೆ ಯಾರಿಗೂ ಕರೆ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಚರಿಸುವಾಗ ಮೊಬೈಲ್ ರೋಮಿಂಗ್ ಮೋಡ್ ಆಕ್ಟಿವ್ ಆಗುತ್ತದೆ. ಆದರೆ ನನ್ನ ಮೊಬೈಲ್ ರೋಮಿಂಗ್ ಮೋಡ್ ಗೆ ಹೋಗಿರಲಿಲ್ಲ. ನೆಟ್ವರ್ಕ್ ಸಮಸ್ಯೆ ಬಂದಾಗ ಏರೋಪ್ಲೇನ್ ಮೋಡ್ ಗೆ ಹಾಕಿ ತೆಗೆದರೆ ಸರಿ ಆಗುವುದು ಗೊತ್ತಿತ್ತು. ಆ ರೀತಿ ಹಲವು ಸಲ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ. ಮೊಬೈಲ್ ಆಫ್ ಮಾಡಿ ಆನ್ ಮಾಡಿದರೂ ಮೊಬೈಲ್ ನೆಟ್ವರ್ಕ್ ಬಿಲ್ಕುಲ್ ಬರಲಿಲ್ಲ. ರೈಲ್ವೆ ನಿಲ್ದಾಣದ ಹೊರಬಂದಾಗ ಆಟೋಚಾಲಕರ ಗಡಣ ಪ್ರಯಾಣಿಕರನ್ನು ಮುತ್ತಿಕೊಳ್ಳುವುದನ್ನು ಕಂಡೆ. ಮೆತ್ತಗೆ ಆಚೆ ಈಚೆ ನೋಡದೆ, ಮೊಬೈಲ್ ನೆಟ್ವರ್ಕ್ ಸಿಗುವುದೇ ಅಂತ ಪರೀಕ್ಷಿಸಲು ಮತ್ತೆರಡು ಸಲ ಏರೋಪ್ಲೇನ್ ಮೋಡ್ ಗೆ ಹಾಕಿ ತೆಗೆಯುವುದು ಹಾಗೂ ರಿಸ್ಟಾರ್ಟ್ ಮಾಡುವುದನ್ನು ಪುನರಾವರ್ತಿಸಿದರೂ ಫಲಿತಾಂಶ ಶೂನ್ಯ. ನಾನು ನಿಂತಿರುವಲ್ಲಿಗೆ ಮಧ್ಯ ವಯಸ್ಕ ಆಟೋ ಚಾಲಕರೊಬ್ಬರು ಬಂದು ಎಲ್ಲಿಗೆ ಹೋಗಬೇಕೆಂದು ವಿಚಾರಿಸಿದಾಗ ಟ್ರಾಂಬೆಯಲ್ಲಿರುವ ಅಣುಶಕ್ತಿ ನಗರಕ್ಕೆ ಹೋಗಬೇಕೆಂದು ಹೇಳಿದೆ. ಸರಿ, ರಿಕ್ಷಾ ಹೊರಟಿತು. ಫೋನ್ ಜೊತೆ ಅದೇ ಸರ್ಕಸ್ ಮುಂದುವರಿದಿತ್ತು. ಒಬ್ಬಳೇ ಹೋಗುತ್ತಿರುವುದರಿಂದ, ಟೆಲಿಪತಿ ಮೂಲಕವಾದರೂ ನನ್ನ ಮನೆಯವರಿಗೆ ಸಂದೇಶ ತಲುಪಿದರೆ ಒಳ್ಳೆಯದಿತ್ತು ಅಂದುಕೊಳ್ಳುತ್ತಾ ಫೋನ್ ನೆಟ್ವರ್ಕ್ ಸರಿಯಿಲ್ಲದಿದ್ದರೂ ಮನೆಗೆ ಪೋನ್ ಮಾಡಿ ಮಾತನಾಡುವಂತೆ ನಟಿಸಿದೆ. ಚಾಲಕ ಸ್ವಲ್ಪ ನಿಧಾನವಾಗಿಯೇ ರಿಕ್ಷಾ ಚಲಾಯಿಸುತ್ತಿದ್ದರು.
ಭಾಭಾ ಪರಮಾಣು ಸಂಶೋಧನಾ ಕೇಂದ್ರ ಅನ್ನುವ ನಾಮಫಲಕ ಕಣ್ಣಿಗೆ ಬಿದ್ದಾಗ ಸರಿಯಾದ ಜಾಗ ತಲುಪಿದ್ದೇನೆ ಅನ್ನುವುದು ಖಾತರಿಯಾಯಿತು. ಅಣುಶಕ್ತಿ ನಗರದ ವಿಸ್ತೀರ್ಣ ಎಷ್ಟಿದೆ ಅನ್ನುವುದು ನನಗೆ ಗೊತ್ತಿರಲಿಲ್ಲ. ದಾರಿಯ ನಡು ನಡುವೆ ರಿಕ್ಷಾ ನಿಲ್ಲಿಸಿ ದಾರಿ ಕೇಳುತ್ತಾ, ಒಂದಿನಿತೂ ಬೇಸರಿಸಿಕೊಳ್ಳದೆ ಸರಿಯಾದ ದಾರಿಯನ್ನು ಹೇಳಿದ ಎಲ್ಲರಿಗೂ ವಂದಿಸುತ್ತಾ ನಾನು ಹೋಗಬೇಕಿದ್ದ ಸ್ಥಳವನ್ನು ಸೇರಿದ್ದಾಯಿತು. ಸಮ್ಮೇಳನ ನಡೆಯುವ ಸಭಾಂಗಣದ ಬಳಿಯೇ ಅತಿಥಿಗೃಹವಿತ್ತು. ಅತಿಥಿಗೃಹದ ಸ್ವಾಗತ ಕೊಠಡಿಯಲ್ಲಿ ನನ್ನ ವಿವರಗಳನ್ನು ನೀಡುವ ಸಂದರ್ಭ ದೂರವಾಣಿ ಸಂಖ್ಯೆ ಕೇಳಿದರು. ಆಗ ನಾನು “ಇಲ್ಲಿ ನೆಟ್ವರ್ಕ್ ಸಮಸ್ಯೆ ಇದೆಯಲ್ವಾ?” ಅಂದಾಗ ” ನಾವು ನಿಮಗೆ ವೈ-ಫೈ ಸಂಪರ್ಕ ಕೊಡುತ್ತೇವೆ. ನಿಮ್ಮ ಕೊಠಡಿಯೊಳಗೆ ಅದನ್ನು ಬಳಸಲು ಪಾಸ್ ವರ್ಡ್ ಕೊಡುತ್ತೇನೆಂದು ಕಾಗದದ ಪುಟ್ಟ ಚೂರಿನಲ್ಲಿ ಆ ಸಂಖ್ಯೆಯನ್ನು ಬರೆದುಕೊಟ್ಟರು. ಕೊಠಡಿಗೆ ಬಂದು ಮೊದಲು ಮಾಡಿದ ಕೆಲಸವೆಂದರೆ ವೈ- ಫೈ ಆನ್ ಮಾಡಿ ಪಾಸ್ ವರ್ಡ್ ನಮೂದಿಸಿ ಮನೆಗೆ ವಾಟ್ಸಾಪ್ ಸಂದೇಶ ಕಳುಹಿಸಿದೆ. ಆ ನಂತರ ವಾಟ್ಸಾಪ್ ಮುಖಾಂತರ ಮನೆಗೆ ಕರೆ ಮಾಡಿದೆ.
ನಾನು ಮುಂಬಯಿಯಲ್ಲಿದ್ದ ಐದು ದಿನಗಳೂ ಕೂಡಾ ಇದೇ ಪರಿಸ್ಥಿತಿ. ಅತಿಥಿಗೃಹದ ಕೊಠಡಿಯೊಳಗೆ ಬಂದಾಗ ಮಾತ್ರ ಫೋನ್ ಉಪಯೋಗಕ್ಕೆ ಬರುತ್ತಿತ್ತು. ವಾಟ್ಸಾಪ್ ಮೂಲಕವೇ ಕರೆ ಮಾಡಬೇಕಿದ್ದ ಕಾರಣ ಬೇರೆ ಯಾರಿಗೂ ಕರೆ ಮಾಡಲು ಹೋಗಲಿಲ್ಲ. ವಿಪಶ್ಶನ ಶಿಬಿರದಲ್ಲಿ ಮೌನವಾಗಿರುವಂತೆ, ನನ್ನ ಫೋನ್ ಮೌನಕ್ಕೆ ಜಾರಿತ್ತು. ಫೋನ್ ಇದ್ದೂ ಇಲ್ಲದ ಪರಿಸ್ಥಿತಿ ನನ್ನದಾಗಿತ್ತು. ಮುಂಬಯಿಯಲ್ಲಿ ಬಿಎಸ್ಸೆನೆಲ್ ಸಿಮ್ ಇದ್ದರೆ ಪ್ರಯೋಜನ ಇಲ್ಲ ಅನ್ನುವ ಹೊಸ ವಿಷಯ ಗೊತ್ತಾಯಿತು. ಈ ವಿಷಯ ಮೊದಲೇ ಗೊತ್ತಿದ್ದರೆ ಇನ್ನೊಂದು ಸಿಮ್ ಆದರೂ ಹಾಕಿಸಬಹುದಿತ್ತು. ಫೋನ್ ನೆಟ್ವರ್ಕ್ ಸಿಗದ ಕಾರಣ ಮುಂಬಯಿಯ ಯಾವ ಜಾಗವನ್ನು ನೋಡುವ ಉತ್ಸಾಹ ನನ್ನೊಳಗೆ ಮೂಡಲಿಲ್ಲ. ಆದರೂ ಆಶ್ಚರ್ಯವೆಂಬಂತೆ ಐದು ದಿನಗಳಲ್ಲಿ ಎರಡು ಸಲ ಒಂದೆರಡು ನಿಮಿಷ, ನನ್ನ ಫೋನ್ ಅಪರೂಪಕ್ಕೆ ರೋಮಿಂಗ್ ಮೋಡ್ ಸಂಪರ್ಕಕ್ಕೆ ಬಂದಿತ್ತು.
ಮುಂಬಯಿ ಬ್ಯುಸಿ ನಗರ. ರಾತ್ರಿಯಲ್ಲಿ ನಿದ್ರಿಸುವುದೇ ಇಲ್ಲ. ಅಲ್ಲಿನ ಧಾವಂತದ ಬದುಕು, ಅಲ್ಲಿನ ರೈಲುಗಳಲ್ಲಿ ಪ್ರಯಾಣಿಸುವುದು ಎಷ್ಟು ಚ್ಯಾಲೆಂಜಿಂಗ್, ಅಲ್ಲಿನ ಅತಿ ಶ್ರೀಮಂತರ ಮಹಲುಗಳು, ಅಲ್ಲಿನ ಕೊಳೆಗೇರಿಗಳು, ಜೋಪಡಾ ಪಟ್ಟಿಗಳು ಇವುಗಳೆಲ್ಲವನ್ನು ಓದಿ ತಿಳಿದಿದ್ದ ನನಗೆ, ಪ್ರಶಾಂತ ಪ್ರಕೃತಿ ಹಾಗೂ ವಿಶಾಲ ರಸ್ತೆಗಳಿರುವ ಅಣುಶಕ್ತಿ ನಗರದಲ್ಲಿರುವಾಗ ನಾನು ಮುಂಬಯಿಯಲ್ಲಿದ್ದೇನೆ ಅಂತ ಅನ್ನಿಸಲೇ ಇಲ್ಲ. ಮುಂಬಯಿಯಲ್ಲಿಯೇ ವಾಸ್ತವ್ಯವಿರುವ ನನ್ನ ಎಂಎಸ್ಸಿ ಸಹಪಾಠಿಯೊಬ್ಬಳಿಗೆ ನನ್ನ ಮುಂಬಯಿ ಭೇಟಿಯ ಬಗ್ಗೆ ಮೊದಲೇ ತಿಳಿಸಿದ್ದೆ. ಅವಳಿಗೂ ನನ್ನ ಫೋನ್ ಸಮಸ್ಯೆಯ ಬಗ್ಗೆ ವಾಟ್ಸಾಪ್ ಸಂದೇಶ ಹಾಕಿದ್ದೆ. ಸಮ್ಮೇಳನ ಮುಗಿದ ಬಳಿಕ ಅವಳ ಮನೆಗೆ ಹೋಗುವುದೆಂದು ವಾಟ್ಸಾಪ್ ಮೂಲಕ ಮಾತನಾಡಿಕೊಂಡೆವು. ಅವಳು ಮನೆಯ ಲೊಕೇಶನ್ ಕಳುಹಿಸಿದರೂ ನನ್ನ ಮೊಬೈಲಿಗೆ ನೆಟ್ವರ್ಕ್ ಸಿಗದ ಕಾರಣ ಅದು ಅಸಾಧ್ಯವಾಗಿತ್ತು. ನಾನೇ ಹುಡುಕಿಕೊಂಡು ಹೋದರೂ ಎಲ್ಲಿಯಾದರೂ ದಾರಿ ತಪ್ಪಿದರೆ ಕರೆ ಮಾಡುವ ಹಾಗಿರಲಿಲ್ಲ. ಹಾಗಾಗಿ ಅವಳೇ ಬುಕ್ ಮಾಡಿಕೊಟ್ಟ ಊಬರ್ ಆಟೋ ಹಿಡಿದು ಅವಳ ಮನೆಗೆ ಹೋದೆ. ಅವಳ ಜೊತೆ ನಾನು ನೋಡಿರದ ಆದರೆ ಕೇಳಿದ್ದ ಮುಂಬಯಿಯ ದರ್ಶನ ಮಾಡಿದೆ.
ನನ್ನ ಸಹಪಾಠಿಯ ಮನೆಯಲ್ಲಿ ರಾತ್ರಿಯೂಟ ಮುಗಿಸಿ ಮುಂಬಯಿಯ ವೀಟಿ (ಛತ್ರಪತಿ ಶಿವಾಜಿ ಟರ್ಮಿನಲ್) ತಲುಪಬೇಕಿತ್ತು. ಚೆಂಬೂರಿನಿಂದ ಲೋಕಲ್ ರೈಲು ಹಿಡಿದು ವೀಟಿಯಲ್ಲಿ ರೈಲು ಹಿಡಿಯುವವರೆಗೂ ನನ್ನ ಜತೆ ಬಂದ ನನ್ನ ಸಹಪಾಠಿಯ ಯಜಮಾನರಿಗೆ ಹಾಗೂ ಅವಳ ಮಗಳಿಗೆ ನಾನು ಎಷ್ಟು ವಂದನೆ ಹೇಳಿದರೂ ಸಾಲದು. ಐದು ದಿನವೂ ರೋಮಿಂಗ್ ಮೋಡ್ ಗೆ ಹೋಗಲು ಮುಷ್ಕರ ಹೂಡಿದ್ದ ಫೋನ್ ವೀಟಿ ತಲುಪುವಾಗ R ತೋರಿಸುತ್ತಿತ್ತು! ಮನೆಗೆ ಕರೆ ಮಾಡಲು ಪ್ರಯತ್ನಿಸಿದೆನಾದರೂ ಅದು ಸಾಧ್ಯವಾಗಲಿಲ್ಲ. ಆದರೆ “ರೈಲಿಗೆ ಹತ್ತಿದೆ” ಅಂತ ಕಳುಹಿಸಿದ ಪಠ್ಯಸಂದೇಶ ರವಾನೆಯಾಗಿತ್ತೆಂದು ಮತ್ತೆ ನನಗೆ ತಿಳಿಯಿತು. ರಾತ್ರೆ 9.54 ಕ್ಕೆ ರೈಲನ್ನೇರಿ ಮಲಗಿದವಳಿಗೆ ಒಳ್ಳೆ ನಿದ್ದೆ ಹತ್ತಿತ್ತು. ಎಚ್ಚರವಾದಾಗ ಬೆಳಿಗ್ಗೆ 5.30 ಆಗಿತ್ತು. ಎಚ್ಚರವಾದಾಗ ಫೋನ್ ನೆಟ್ವರ್ಕ್ ಸಿಗುತ್ತಿತ್ತು! ಪ್ರಯಾಣ ಮುಂದುವರಿದಿತ್ತು ಮರಳಿ ಊರಿಗೆ!
–ಡಾ. ಕೃಷ್ಣಪ್ರಭ ಎಂ, ಮಂಗಳೂರು
ನೆಟವರ್ಕ ಇದ್ದಾಗ ಎಲ್ಲ ಕೆಲಸ ಕಾರ್ಯಗಳಿಗೂ ಮನ್ನಣೆಗಳಿಸಿಕೊಂಡಿದ್ದ ಮೊಬೈಲ್ ನೆಟವರ್ಕ ಇಲ್ಲದೇ ಇದ್ದಾಗ ತನ್ನ ಮನ್ನಣೆಯನ್ನು ಕಳೆದುಕೊಂಡಿತ್ತು.
ಉಪಯೋಗಕ್ಕೆ ಇರುವಾಗ ಮಾತ್ರ ಅದು ಚರವಾಣಿ..ಇಲ್ಲದಿದ್ದರೆ ಇದ್ದೂ ಇಲ್ಲದಂತೆ
Nice madam
Nice madam
ಧನ್ಯವಾದ ಗೀತಾ
ನಿಮ್ಮ ನೆಟ್ವರ್ಕ್ ಸಿಗದಿದ್ದಾಗಿನ ಅನುಭವ..ಚೆನ್ನಾಗಿದೆ.. ಮೇಡಂ
ಧನ್ಯವಾದಗಳು ಮೇಡಂ
Nice one
ಧನ್ಯವಾದ ನಯನ
Nice experience well conveyed
ಧನ್ಯವಾದ ಮೇಡಂ
ಜೀವನದ ಅವಿಭಾಜ್ಯ ಅಂಗವೇ ಆಗಿರುವ ಮೊಬೈಲ್ ಫೋನಿನಲ್ಲಿ ನೆಟ್ ವರ್ಕ್ ಇಲ್ಲದಿದ್ದರೆ ಆಗುವ ಪರಿಪಾಟಲಿನ ಅನುಭವ ಕಥನ ಸೊಗಸಾಗಿದೆ.
ಪರ ಊರಿನಲ್ಲಿ ಆಗಿದ್ದರಿಂದ ಈ ಪರಿಪಾಟಲು
ಪೂರ್ಣ ಓದಿದೆ ಮೇಡಂ, ಧನ್ಯವಾದಗಳು
ಧನ್ಯವಾದಗಳು
ದೂರದೂರಿಗೆ ಒಬ್ಬರೇ ಹೋಗುವಾಗ ಇಂತಹ ಸಮಸ್ಯೆ ಎದುರಾದರೆ ದೇವರೇ ಕಾಪಾಡಬೇಕಷ್ಟೇ! ಜಂಗಮವಾಣಿ ಸರಿ ಇದ್ದರೆ ಇಡೀ ಜಗತ್ತೇ ನಮ್ಮ ಮುಷ್ಟಿಯೊಳಗೆ. ಇಲ್ಲವಾದರೆ???….ನಾವು ಕೈಕಟ್ಟಿಸಿಕೊಂಡ ಖೈದಿಯಂತೆ ಅಸಹಾಯಕರು!ಸತ್ಯ ಘಟನೆಯ ನಿರೂಪಣೆ ಕುತೂಹಲಕಾರಿಯಾಗಿದೆ ಮೇಡಂ.
ಈಗ ಮೊಬೈಲ್ ಫೋನ್ ಅನ್ನು ಎಷ್ಟು ಅವಲಂಬಿಸಿದ್ದೇವೆ ಎಂದರೆ, ಇದು ಇಲ್ಲದೆ ಇದ್ದಾಗ ಹೇಗೆ ದೈನಂದಿನ ಜೀವನ ನಡೆಸುತ್ತಿದ್ದೆವೋ ಅನಿಸುತ್ತಿದ್ದೆ. ಪ್ರಯಾಣದಲ್ಲಿರುವಾಗ ಮೊಬೈಲ್ ನೆಟ್ ವರ್ಕ ಕೈಕೊಟ್ಟರೆ ಆಗುವ ತಳಮಳವನ್ನು ಸೊಗಸಾಗಿ ಬರೆದಿದ್ದೀರಿ.