ಕಾವ್ಯ ಭಾಗವತ 21: ದೇವೇಂದ್ರ
21.ಷಷ್ಠ ಸ್ಕಂದ, ಅಧ್ಯಾಯ -2
ದೇವೇಂದ್ರ
ದೇವ, ಮಾನವ, ದಾನವ
ಕುಲಗಳೆಲ್ಲದರ ಜನಕನೊಬ್ಬನೆ
ಎಂಬರಿವು
ದೇವ, ಮಾನವ, ದಾನವ
ಕುಲಬಾಂಧವರಿಗೆ
ಇದ್ದರೂ, ಇರದಿದ್ದರೂ
ಈ ಜಗದಿ ಅವರವರ ಪಾತ್ರದ
ನಿರ್ವಹಣೆಯ ಭಾರ, ಅವರವರದೇ
ಅದನರಿತು ನಡೆಯದಿರೆ ಶಿಕ್ಷಿಸಿ
ಸರಿಪಡಿಸಿ,
ಈ ಜಗವ ಮುನ್ನಡೆಸುವ ಪರಿ
ಈ ಜಗನ್ನಿಯಾಮಕನಿಗೆ ತಿಳಿಯದೆ
ದೇವತೆಗಳೊಡೆಯ
ದೇವೇಂದ್ರನದೊಂದು ಸಮಸ್ಯೆ
ದೇವತೆಗಳೆಂದರೆ
ಸಕಲಗುಣ ಸಂಪನ್ನರು
ರಾಗ, ದ್ವೇಷ, ಮದ, ಮಾತ್ಸರ್ಯಗಳೆಂಬ
ರಾಕ್ಷಸೀ ಪ್ರವೃತ್ತಿಯ
ದಾನವ ಕುಲ ನಿಯಮಗಳ ಸಂಹಾರಕರು
ಎಂಬುದ ಮರೆತು
ಗುರು, ಬೃಹಸ್ಪತಾಚಾರ್ಯರ
ತಿರಸ್ಕರಿಸಿ, ಕಡೆಗಣಿಸಿದ
ಫಲಶೃತಿಯೆಂಬಂತೆ
ಅದೃಶ್ಯರಾದ ಬೃಹಸ್ಪತಾಚಾರ್ಯರ
ನಿರ್ಗಮನಕೆ ಪ್ರತಿಯಾಗಿ
ವಿಶ್ವರೂಪಾಚಾರ್ಯರ
ಪಾದಗಳೆಗೆರಗಿ
ಗುರುವಾಗಿ ಸ್ವೀಕರಿಸಿದರೂ
ಅವರು ದಾನವ ಪಕ್ಷಪಾತಿ
ಎಂದರಿತು ಶಿರಚ್ಛೇಧ ಮಾಡಿದ
ದೇವೇಂದ್ರ
ಬ್ರಹ್ಮಹತ್ಯಾ ಪಾತಕವೆಸಗಿ
ಅದರ ಪೀಡೆಯನು
ಅಂಗೀಕರಿಸಿದನಾದರೂ
ವೃತ್ರಾಸುರನ ಜನುಮಕೆ ಕಾರಣನಾಗಿ
ಲೋಕಭಯಂಕರ ವೃತ್ರಾಸುರನ ವಧೆಗೆ
ವಜ್ರಾಯುಧವ ಬಳಸಿ, ವಧಿಸಿದ ಬಗೆ
ಸಕಲ ಒಳಿತುಗಳ ಮೂರ್ತಸ್ವರೂಪ
ದೇವತೆಗಳ ಅಧಿಪತಿಯಾದ
ದೇವೇಂದ್ರನ
ರಾಕ್ಷಸೀ ಪ್ರವೃತ್ತಿಯೆಂಬುದೊಂದು
ವಿಪರ್ಯಾಸ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41420
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಕಾವ್ಯ ಭಾಗವತ ಸೊಗಸಾಗಿ ಮೂಡಿ ಬರುತ್ತಾ…ಇದೆ..ಜೊತೆಗೆ ಭಾಗವತವನ್ನು ಮತ್ತೆ ಓದುವಂತೆ ಮಾಡಿದೆ..ವಂದನೆಗಳು ಸಾರ್..
ಚೆನ್ನಾಗಿದೆ
ದೇವೇಂದ್ರನ ಅಹಂಕಾರವನ್ನು ಚಿತ್ರಿಸಿದ ಕಾವ್ಯ ಭಾಗವತವು ರಂಜನೀಯವಾಗಿದೆ.
ದೇವೇಂದ್ರನ ರಾಕ್ಷಸೀಪ್ರವೃತ್ತಿಯ ಅನಾವರಣ ಕಾವ್ಯ ರೂಪದಲ್ಲಿ ಸೊಗಸಾಗಿ ಮೂಡಿ ಬಂದಿದೆ.