ಮಣ್ಣಿನ ಮಹತ್ವ…..

Share Button

ದಾಸವಾರೇಣ್ಯ ಶ್ರೀ ಪುರಂದರ ದಾಸರು ಹೇಳಿದಂತೆ “ಮಣ್ಣಿಂದ ಕಾಯ ಮಣ್ಣಿಂದ”. “ಮಣ್ಣಿಂದಲೇ ಸಕಲ ಸಂಪತ್ತು”. ಇಂತಹ ಅದಿಷ್ಟೋ ಸಾಲುಗಳು ಇವೆ. ಮಣ್ಣಿನ ಕುರಿತಾಗಿ ನಮ್ಮ ಕವಿಗಳು, ಲೇಖಕರು ಬಹಳ ಮಹತ್ವಪೂರ್ಣವಾಗಿ ಬರೆದಿದ್ದಾರೆ. ಮೇಲ್ಕಂಡ ಸಾಲುಗಳು ಎಷ್ಟೊಂದು ಅರ್ಥಪೂರ್ಣ ಹಾಗೂ ಮೌಲಿಕ. “ಮಣ್ಣು” ಎಂಬ ಎರಡಕ್ಷರ ಕೇಳಿದೊಡನೆ ಮೈಮನಗಳಿಗೆ ರೋಮಾಂಚನವಾಗುತ್ತದೆ. ಈ ಮಣ್ಣು ಒಂದು ರೀತಿಯಲ್ಲಿ ಪ್ರತಿಯೊಂದು ಜೀವಿಗಳಿಗೂ ಚೈತನ್ಯವಾದ ವಸ್ತು. ಮಣ್ಣು ಮನುಷ್ಯನಿಗಷ್ಟೇ ಅಲ್ಲದೆ, ಸಕಲ ಜೀವಕೋಟಿ ರಾಶಿಗಳಿಗೂ ಕೂಡ ಮೊದಲು ಬದುಕಲು, ನಂತರ ಉಪಯೋಗ ರೀತಿಯಲ್ಲಿ ಪ್ರಯೋಜನಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ನಾವು ಮಣ್ಣಿನ ಕುರಿತಾಗಿ ಅದರ ಇತಿಹಾಸ, ಇದರಿಂದ ಏನೆಲ್ಲಾ ಪ್ರಯೋಜನ, ಜೊತೆಗೆ ಮಣ್ಣಿನ ಸುತ್ತಮುತ್ತ ಇದು ವಿಷಯಗಳನ್ನು ತಿಳಿದುಕೊಳ್ಳೋಣ.

ಮನುಷ್ಯನಿಗೆ ಅಗತ್ಯವಿರುವಂತೆ ಮಣ್ಣಿಗೂ ಪೋಷಕಾಂಶದ ಅಗತ್ಯವಿರುತ್ತದೆ. ನಮ್ಮ ಆಹಾರದ ಮುಖ್ಯ ಮೂಲ ಮಣ್ಣು. ನಾವು ಈಗ ಏನೆಲ್ಲಾ ಆಹಾರ ತಿನ್ನುತ್ತಿದ್ದೇವೆ ಅದಕ್ಕೆಲ್ಲ ಮೂಲ ಪ್ರೇರಕವಾಗಿದೆ ಈ ಮಣ್ಣು. ಆ ಮಣ್ಣಿನಲ್ಲಿ ನಾವು ಹಾಕಿದ ಬೀಜ ಮೊಳಕೆಯೊಡೆದು ಅದು ಬೆಳೆಯದಿದ್ದರೆ……. ಈ ಅಂಶವನ್ನ…… ಕಲ್ಪಿಸಿಕೊಂಡರೆ ಮೈ ಜುಮ್ ಎನ್ನುತ್ತದೆ!. ಮಣ್ಣಿನ ಮಹತ್ವ ಮಣ್ಣಿನಲ್ಲಿ ಕೆಲಸ ಮಾಡುವವನಿಗೆ ಗೊತ್ತು. ಸವೆದ ಮಣ್ಣಿನಿಂದ ಫಲ ಸಿಗಲು ಸಾಧ್ಯವಿಲ್ಲ. ಈ ಮಣ್ಣಿನ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಣ್ಣಿನ ಮಹತ್ವವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ. ಮಣ್ಣಿನ ಕಳಪೆ ಸ್ಥಿತಿಯಿಂದಾಗಿ ಮಣ್ಣಿನ ಸವೆತ ತೀವ್ರವಾಗಿ ಆಗುತ್ತಿದೆ. ಪ್ರಪಂಚದಾದ್ಯಂತ ಇದೊಂದು ಗಂಭೀರ ಸಮಸ್ಯೆಯಾಗಿ ಕಾಡ್ತಿದೆ. ಇಂದು ವಿವಿಧ ಮಾಲಿನ್ಯದಿಂದ ಮಣ್ಣು ಕಲುಷಿತಗೊಳ್ಳುತ್ತಿದೆ. ಅದರ ಪೋಷಕಾಂಶ ಮಟ್ಟ ಕೂಡಾ ಕಡಿಯಾಗುತ್ತಿದೆ.

ಮಣ್ಣಿನ ವಿಜ್ಞಾನಗಳ ಅಂತರಾಷ್ಟ್ರೀಯ ಒಕ್ಕೂಟ (ಐಯುಎಸ್‌ಎಸ್‌) 2002 ರಲ್ಲಿ ವಿಶ್ವ ಮಣ್ಣಿನ ದಿನ ಆಚರಣೆಗೆ ಶಿಫಾರಸು ಮಾಡಿತ್ತು. ಥಾಯ್ಲೆಂಡ್‌ ನೇತೃತ್ವದಲ್ಲಿ ಎಫ್‌ಎಒ ಸಹಾಯದೊಂದಿಗೆ ವಿಶ್ವ ಮಣ್ಣಿನ ದಿನ ಆಚರಣೆ ಆರಂಭವಾಯಿತು. 2013 ಜೂನ್‌ನಲ್ಲಿ ಎಫ್‌ಎಒ ಒಕ್ಕೂಟವು ಈ ದಿನಾಚರಣೆಗೆ ಬೆಂಬಲ ಸೂಚಿಸಿತು. ವಿಶ್ವಸಂಸ್ಥೆಯ 68ನೇ ಸಭೆಯಲ್ಲಿ ವಿಶ್ವ ಮಣ್ಣಿನ ದಿನವನ್ನು ಅಧಿಕೃತವಾಗಿ ಅಂಗೀಕರಿಸುವಂತೆ ಮನವಿ ಮಾಡಲಾಯಿತು. ಈ ಮನವಿಯನ್ನು ಪರಿಗಣಿಸಿ, 2013 ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆ ಡಿಸೆಂಬರ್ 5ರಂದು ವಿಶ್ವ ಮಣ್ಣಿನ ದಿನ ಆಚರಣೆಗೆ ಸಮ್ಮತಿ ಸೂಚಿಸಿತು. 2014 ಡಿಸೆಂಬರ್ 5 ರಂದು ಮೊದಲ ಬಾರಿಗೆ ವಿಶ್ವ ಮಣ್ಣಿನ ದಿನಾಚರಣೆ ಅಧಿಕೃತವಾಗಿ ಆಚರಿಸಲಾಯಿತು.ಪ್ರತಿ ವರ್ಷ ಬೇರೆ ಬೇರೆ ಥೀಮ್‌ನೋಂದಿಗೆ ವಿಶ್ವ ಮಣ್ಣಿನ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಮಣ್ಣಿನ ದಿನ ಆಚರಣೆ ಮೂಲಕ ಮಣ್ಣಿನ ರಕ್ಷಣೆ ಬಗ್ಗೆ, ಜಾಗೃತಿ ಮೂಡಿಸುವ ಅಗತ್ಯವಿದೆ. ಕೇವಲ ಒಂದು ದಿನ ಮಾತ್ರ ಮಣ್ಣಿನ ದಿನಾಚರಣೆ ಆಚರಿಸಿದರೆ ಸಾಲದು. ಮಣ್ಣಿನ ಬಗ್ಗೆ ಭಾಷಣ ಮಾಡಿದರು ಕೂಡ ಸಾಲದು. ನಾವು ಮೊದಲು ಮಣ್ಣು ಯಾವ ಯಾವ ರೀತಿಯಲ್ಲಿ ಮಾಲಿನ್ಯವಾಗುತ್ತಿದೆ ಎಂಬುದರ ಬಗ್ಗೆ ಚಿಂತಿಸಿ, ಚರ್ಚಿಸಬೇಕು. ಜೊತೆಗೆ ಅನುಭವಿಸಿ ತಜ್ಞರು, ಪರಿಸರ ವಿಜ್ಞಾನಿಗಳು, ಕೃಷಿ ಅಧಿಕಾರಿಗಳು ಎಲ್ಲರನ್ನು ಭೇಟಿ ಮಾಡಿ ಅದರ ಸಾಧಕ ಬಾಧಕಗಳನ್ನು ಒಟ್ಟಾಗಿ ಚರ್ಚಿಸಬೇಕು. ಜೊತೆಗೆ ಮಣ್ಣಿನ ಈ ಪ್ರಸ್ತುತ ಸ್ಥಿತಿಯ ಬಗ್ಗೆಯೂ ಕೂಡ ಅಧ್ಯಯನ ಮಾಡಿ ಪರಿಹಾರೋಪಾಯಗಳನ್ನು ನಾವು ಕಂಡುಕೊಳ್ಳಲೇಬೇಕು ಇದು ತೀರಾ ಅನಿವಾರ್ಯವಾಗಿದೆ.

ಮಣ್ಣು ಭೂಮಿಯ ಮೇಲ್ಮೈ ಪದರವಾಗಿದ್ದು, ಸಾವಯವ ಮತ್ತು ಅಜೈವಿಕ ವಸ್ತುಗಳನ್ನು ಒಳಗೊಂಡಿದೆ. ಸಸ್ಯಗಳ ಬೆಳವಣಿಗೆ ನೆರವು ನೀಡುವ ಮಣ್ಣು, ಜಗತ್ತಿನ ಆಹಾರ ಭದ್ರತೆಗೆ ಮಹತ್ತರ ಕೊಡುಗೆ ನೀಡುತ್ತಿದೆ. ವಿಜ್ಞಾನಿಗಳು ಮಣ್ಣಿನ ಒಂದು ನಿರಂತರ ಅಧ್ಯಯನವನ್ನು ಅನಾದಿಕಾಲದಿಂದಲೂ ಮಾಡುತ್ತಾ ಬರುತ್ತಿದ್ದಾರೆ. ಅವರೆಲ್ಲ ಮಣ್ಣಿನ ಬಗ್ಗೆ, ಮಣ್ಣಿನ ಮಹತ್ವದ ಬಗ್ಗೆ, ಮಣ್ಣಿನ ಪ್ರಯೋಜನದ ಬಗ್ಗೆ, ಜೊತೆಗೆ ಮಣ್ಣು ಮಾಲಿನ್ಯವಾದರೆ ಏನೆಲ್ಲಾ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದರು ಅಳವಡಿಸಿಕೊಳ್ಳದೆ ನಾವು ಮನಸ್ಸಿಗೆ ಬಂದಂತೆ ಮಣ್ಣನ್ನ ಮಾಲಿನ್ಯ ಮಾಡುತ್ತಾ ಈಗ ಒಂದು ರೀತಿಯಲ್ಲಿ ಅಂತಿಮ ಘಟಕದತ್ತ ನಮ್ಮ ಹೆಜ್ಜೆಯನ್ನಿಡುತ್ತಿದ್ದೇವೆ!.ಇದರಿಂದಾಗಿ ಅನೇಕ ದುರಂತಗಳನ್ನು ಕೂಡ ನಾವು ಕಂಡು ಅನುಭವಿಸಿದ್ದೇವೆ. ಮಡಿಕೇರಿಯಲ್ಲಿ ಮಣ್ಣಿನ ಕುಸಿತ, ಜೊತೆಗೆ ಇತ್ತೀಚೆಗೆ ಕೇರಳದ ವೈನಾಡಿನಲ್ಲಿ ಇಡೀ ಊರೇ ನಾಶವಾದ ಉದಾಹರಣೆ ಒಂದು ಎರಡೇ?. ಆದರೂ ಕೂಡ ಎಚ್ಚೆತ್ತುಕೊಳ್ಳುತ್ತಿಲ್ಲ. ಇದೊಂದು ಗಂಭೀರವಾದ ವಿಷಯ.

ಮಣ್ಣಿನ ನಿರ್ವಹಣೆಯಲ್ಲಿ ಬೆಳೆಯುತ್ತಿರುವ ಸವಾಲುಗಳನ್ನು ಎದುರಿಸುವ ಮೂಲಕ, ಮಣ್ಣಿನ ಅರಿವನ್ನು ಹೆಚ್ಚಿಸುವ ಮತ್ತು ಮಣ್ಣಿನ ಸತ್ವವನ್ನು ಸುಧಾರಿಸುವ ಸಮಾಜಗಳನ್ನು ಉತ್ತೇಜಿಸುವ ಮೂಲಕ ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಲಾಗಿದೆ. ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಲು ಪ್ರತಿಯೊಬ್ಬರು ಪಣತೊಡಬೇಕಿದೆ. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ, ಪರಿಸರ ಸ್ನೇಹಿ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು. ಅತಿ ಹೆಚ್ಚು ಕೊಳವೆಬಾವಿಗಳನ್ನ ಕೊರೆಸುವುದರಿಂದಲೂ ಕೂಡ ಮಣ್ಣು ಸಡಿಲವಾಗುತ್ತಿದೆ. ಅದಲ್ಲದೆ ಮುಂದುವರೆದು ಗಣಿಗಾರಿಕೆ ಕೂಡ ಮಣ್ಣಿನ ಸವಕಳಿಗೆ ಕಾರಣವಾಗಿದೆ. ನಾವು ಹೆಚ್ಚು ಹೆಚ್ಚು ಗಿಡಗಳನ್ನು ನೆಡುವಂತಾಗಬೇಕು. ಪರಿಸರಕ್ಕೆ ಹಾನಿಯುಂಟುಮಾಡುವ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ತಡೆಗಟ್ಟಬೇಕು.

ನಮ್ಮ ಗ್ರಹದ ಬದುಕುಳಿಯುವಿಕೆಯು ಮಣ್ಣಿನೊಂದಿಗೆ ಅಮೂಲ್ಯವಾದ ಸಂಪರ್ಕವನ್ನು ಅವಲಂಬಿಸಿರುತ್ತದೆ. ನಮ್ಮ ಆಹಾರದ ಶೇಕಡಾ 95 ಕ್ಕಿಂತ ಹೆಚ್ಚು ಮಣ್ಣಿನಿಂದ ಬರುತ್ತದೆ. ಇದಲ್ಲದೆ, ಅವರು ಸಸ್ಯಗಳಿಗೆ ಅಗತ್ಯವಾದ 18 ನೈಸರ್ಗಿಕವಾಗಿ ಸಂಭವಿಸುವ ರಾಸಾಯನಿಕ ಅಂಶಗಳಲ್ಲಿ 15 ಅನ್ನು ಪೂರೈಸುತ್ತಾರೆ. ಆದಾಗ್ಯೂ, ಹವಾಮಾನ ಬದಲಾವಣೆ ಮತ್ತು ಮಾನವ ಚಟುವಟಿಕೆಯ ಮುಖಾಂತರ ನಮ್ಮ ಮಣ್ಣು ಹಾಳಾಗುತ್ತಿದೆ. ಸವೆತವು ನೈಸರ್ಗಿಕ ಸಮತೋಲನವನ್ನು ಅಡ್ಡಿಪಡಿಸುತ್ತದೆ, ನೀರಿನ ಒಳನುಸುಳುವಿಕೆ ಮತ್ತು ಎಲ್ಲಾ ರೀತಿಯ ಜೀವನಕ್ಕೆ ಲಭ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಆಹಾರದಲ್ಲಿನ ಜೀವಸತ್ವಗಳು ಮತ್ತು ಪೋಷಕಾಂಶಗಳ ಮಟ್ಟವನ್ನು ಕಡಿಮೆ ಮಾಡುತ್ತದೆ.

ಇನ್ನೊಂದು ಪ್ರಮುಖ ಅಂಶವೆಂದರೆ ನಾವು ಮಣ್ಣಿಗೆ ಅತಿ ಹೆಚ್ಚು ರಾಸಾಯನಿಕ ಪದಾರ್ಥವನ್ನು ಸೇರಿಸುತ್ತಾ ಬರುತ್ತಿದ್ದೇವೆ. ಅನ್ನದಾತನಾದ ರೈತನೇ ಭೂಮಿಯನ್ನು ಲಾಭದ ದೃಷ್ಟಿಯಿಂದ ಮಾರುತಿದ್ದಾನೆ. ಕನಿಷ್ಠ ಬೇಸಾಯ, ಬೆಳೆ ಸರದಿ, ಸಾವಯವ ಪದಾರ್ಥಗಳ ಸೇರ್ಪಡೆ, ಮತ್ತು ಕವರ್ ಬೆಳೆಗಳಂತಹ ಸುಸ್ಥಿರ ಮಣ್ಣಿನ ನಿರ್ವಹಣಾ ಅಭ್ಯಾಸಗಳು, ಮಣ್ಣಿನ ಆರೋಗ್ಯವನ್ನು ಸುಧಾರಿಸುವುದು, ಸವೆತ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ನೀರಿನ ಒಳನುಸುಳುವಿಕೆ ಮತ್ತು ಶೇಖರಣೆಯನ್ನು ಹೆಚ್ಚಿಸುವುದು. ಈ ಅಭ್ಯಾಸಗಳು ಮಣ್ಣಿನ ಜೀವವೈವಿಧ್ಯತೆಯನ್ನು ಸಂರಕ್ಷಿಸುತ್ತದೆ, ಫಲವತ್ತತೆಯನ್ನು ಸುಧಾರಿಸುತ್ತದೆ ಮತ್ತು ಇಂಗಾಲದ ಪ್ರತ್ಯೇಕತೆಗೆ ಕೊಡುಗೆ ನೀಡುತ್ತದೆ. ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಮಣ್ಣಿಗೆ ಕಾಳಜಿ: ಅಳತೆ, ಮೇಲ್ವಿಚಾರಣೆ, ನಿರ್ವಹಣೆ ಎಂಬ ವಿಷಯದಡಿಯಲ್ಲಿ ಮಣ್ಣಿನ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಿಖರವಾದ ಮಣ್ಣಿನ ಡೇಟಾ ಮತ್ತು ಮಾಹಿತಿಯ ಮಹತ್ವವನ್ನು ಒತ್ತಿಹೇಳುತ್ತದೆ ಮತ್ತು ಆಹಾರ ಭದ್ರತೆಗಾಗಿ ಸುಸ್ಥಿರ ಮಣ್ಣಿನ ನಿರ್ವಹಣೆಯ ಕುರಿತು ತಿಳುವಳಿಕೆಯುಳ್ಳ ನಿರ್ಧಾರವನ್ನು ಬೆಂಬಲಿಸುತ್ತದೆ. ಕೇವಲ 2-3 ಸೆಂ.ಮೀ ಮಣ್ಣನ್ನು ಉತ್ಪಾದಿಸಲು ಇದು 1000 ವರ್ಷಗಳವರೆಗೆ ತೆಗೆದುಕೊಳ್ಳಬಹುದು. ಸುಸ್ಥಿರ ಮಣ್ಣಿನ ನಿರ್ವಹಣೆಯ ಮೂಲಕ 58% ಹೆಚ್ಚು ಆಹಾರವನ್ನು ಉತ್ಪಾದಿಸಬಹುದು. 2050 ರಲ್ಲಿ ಜಾಗತಿಕ ಆಹಾರ ಬೇಡಿಕೆಯನ್ನು ಪೂರೈಸಲು ಕೃಷಿ ಉತ್ಪಾದನೆಯು 60% ರಷ್ಟು ಹೆಚ್ಚಾಗಬೇಕು. ವಿಶ್ವದೆಲ್ಲೆಡೆ ಈಗ ಶೇಕಡ 33 ರಷ್ಟು ಮಣ್ಣಿನ ಫಲವತ್ತತೆ ಕುಸಿದಿದೆ ಇದು ಮುಂದುವರೆದು ಶೇಕಡ 50ರ ಕುಸಿಯಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದೊಂದು ಆತಂಕ ಕಾರಿಯಾದ ವಿಷಯ. ಕರ್ನಾಟಕದಲ್ಲಿ 5 ಲಕ್ಷ ಎಕರೆ ಪ್ರದೇಶ ಜವಳು ಮಣ್ಣು ಮತ್ತು ಕ್ಷಾರಯುಕ್ತ ಮಣ್ಣಿನಿಂದಾಗಿ ಬೆಳೆ ಬೆಳೆಯಲು ಅದು ನಿರುಪಯುಕ್ತವಾಗಿದೆ. 95 ರಷ್ಟು ಆಹಾರ ಮಣ್ಣಿನ ಮೂಲವಾಗಿದೆ. ಒಂದು ಚಮಚ ಮಣ್ಣಿನಲ್ಲಿ ಒಂಬತ್ತು ಮಿಲಿಯನ್ ಸೂಕ್ಷ್ಮ ಜೀವಿಗಳು ಇವೆ.

ಮಾನವ-ಪ್ರೇರೇಪಿತ ಆಗಿರಬಹುದು ಅಥವಾ ಸ್ವಾಭಾವಿಕವಾಗಿರಬಹುದು ಭೂಪ್ರದೇಶದ ಕಾರ್ಯನಿರ್ವಹಣೆಯ ಸಾಮರ್ಥ್ಯಕ್ಕೆ ಧಕ್ಕೆ ತರುತ್ತದೆ. ಮಣ್ಣಿನ ಆಮ್ಲೀಕರಣ, ಕಶ್ಮಲೀಕರಣ, ಮರಳಿನಿಂದಾವೃತವಾಗುವುದು ಎಲ್ಲವೂ ಕಂಡು ಬರುತ್ತದೆ. ಕ್ಷಾರೀಯ ಮಣ್ಣುಗಳು ಆಮ್ಲೀಕರಣಗೊಳ್ಳುವುದು ಪ್ರಯೋಜನಕಾರಿಯಾಗಿದೆ, ಇದು ಭೂಪ್ರದೇಶವನ್ನು ಅವನತಿಗೊಳ್ಳುವಂತೆ ಮಾಡುತ್ತದೆ. ಕ್ಷಾರೀಯ ಲವಣಗಳಾದ (ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಷಿಯಂ, ಮತ್ತು ಸೋಡಿಯಂ )ಗಳನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತವೆ. ಈ ಮೇಲಿನ ಅಂಶಗಳು ಸಾಮಾನ್ಯ ಮಳೆಯಿಂದ,ಕಾಡು ಅಥವಾ ವ್ಯವಸಾಯದ ಬೆಳೆಗಳ ಕಟಾವಿನಿಂದ ಮಣ್ಣಿನಲ್ಲಿ ಕಡಿಮೆ ಆದಾಗ ಮಣ್ಣಿನ ಆಮ್ಲೀಕರಣವಾಗುತ್ತದೆ. ಮಣ್ಣಿನ ಆಮ್ಲೀಕರಣದ ತೀವ್ರತೆ ಹೆಚ್ಚಾಗಲು ಆಮ್ಲ ಉತ್ಪತ್ತಿ ಮಾಡುವ ಸಾರಜನಕಯುಕ್ತ ಗೊಬ್ಬರಗಳು ಮತ್ತು ಆಮ್ಲ ಮಳೆಯ ಪರಿಣಾಮಗಳು ಕಾರಣವಾಗಿವೆ.

ಗುರುತ್ವಾಕರ್ಷಣೆಯಿಂದ ಉಂಟಾಗುವ ಗಾಳಿ, ನೀರು, ಮಂಜುಗಡ್ಡೆಗಳು ಮಣ್ಣಿನ ಸವೆತಕ್ಕೆ ಕಾರಣವಾಗುತ್ತವೆ. ಈ ವಿಧಾನಗಳು ಏಕಕಾಲಿಕವಾದರೂ, ಹವಾಪರಿಣಾಮಗಳಿಂದ ಭೂಸವೆತವನ್ನು ಬೇರೆ ಮಾಡಲಾಗಿದೆ. ಭೂಸವೆತವು ಒಂದು ಸ್ವಾಭಾವಿಕವಾದ ಪ್ರಕ್ರಿಯೆಯಾಗಿದೆ, ಆದರೆ ಬಹಳಷ್ಟು ಜಾಗಗಳಲ್ಲಿ ಮಾನವನು ಮಾಡುವಭೂಮಿಯ ಬಳಕೆಯಿಂದ ಹೆಚ್ಚಾಗಿದೆ. ಅರಣ್ಯ ನಾಶ, ಅತಿಯಾಗಿ ಮೇಯಿಸುವಿಕೆ, ಊರಿನ ಅಕ್ಕಪಕ್ಕ ಇದ್ದ ವ್ಯವಸಾಯ ಭೂಮಿ ಈಗ ಕಾಂಕ್ರೀಟ್ ಸೈಟುಗಳಿಗೆ ಮಾರಾಟವಾಗಿದೆ. ಪರಿಸ್ಥಿತಿ ಹೀಗಿರುವಾಗ ಮಣ್ಣಿನ ಕಾಪಾಡುವಿಕೆ ಕಡಿಮೆಯಾಗುತ್ತಿದೆ.

ಒಟ್ಟಿನಲ್ಲಿ ಇಂದಿನಿಂದಾದರೂ ಕೂಡ ನಾವು ಮಣ್ಣಿನ ಬಹು ಮಹತ್ವವನ್ನು ಅರಿತು, ಅದರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯವನ್ನು ಕಡಿಮೆ ಮಾಡೋಣ. ಇದಕ್ಕೆ ಒಬ್ಬರು ಇಬ್ಬರು ಸೇರಿದರೆ ಸಾಕಾಗುವುದಿಲ್ಲ ಭೂಮಿಯಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬ ಮನುಷ್ಯರೂ ಕೂಡ ಇದರಲ್ಲಿ ಪಾಲ್ಗೊಳ್ಳಬೇಕು. ನಾವು ಹುಟ್ಟಿ ಮಣ್ಣು ಸೇರುವವರೆಗೂ ಕೂಡ ಮಣ್ಣಿನ ಗುಣವನ್ನು ಮಹತ್ವವನ್ನು ಸದಾ ಸ್ಮರಿಸಬೇಕು.

-ಕಾಳಿಹುಂಡಿ ಶಿವಕುಮಾರ್. ಮೈಸೂರು.

4 Responses

  1. ಮಣ್ಣಿನ ಬಗ್ಗೆ ಉತ್ತಮ ಮಾಹಿತಿಯನ್ನು ಒಳಗೊಂಡ ಲೇಖನದ ಅನಾವರಣ ಚೆನ್ನಾಗಿ ಪಡಿಮೂಡಿದೆ..ಸಾರ್ ನಮನಗಳು

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ

  3. ಶಂಕರಿ ಶರ್ಮ says:

    ಭೂಮಿ ಮೇಲೆ ಬದುಕುವ ಜೀವಿಗಳ ಜೀವರಕ್ಷಕ ಮಣ್ಣಿನ ಕುರಿತ ಲೇಖನ ಸಾಕಷ್ಟು ಮಾಹಿತಿಗಳನ್ನು ಒಳಗೊಂಡಿದೆ. ಮಣ್ಣಿನ ಗುಣವನ್ನು ಸತ್ವಯುತವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಕರ್ತವ್ಯವನ್ನು ನೆನಪಿಸುತ್ತಾ ಎಚ್ಚರಿಸಿರುವುದು ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಂತ ಸೂಕ್ತವೂ ಹೌದು…ಧನ್ಯವಾದಗಳು.

  4. ಪದ್ಮಾ ಆನಂದ್ says:

    ವಿಶ್ವ ಮಣ್ಣಿನ ದಿವಸಕ್ಕೆ ಸೂಕ್ಮಾತವಾದ ಮಾಹಿತಿಪೂರ್ಣ, ಎಚ್ಚರಿಸುವ, ಕಾಳಜಿಯ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: