ಕಾವ್ಯ ಭಾಗವತ 20: ಧ್ರುವ – 02
20. ಧ್ರುವ – ೦2
ಚತುರ್ಥ ಸ್ಕಂದ – ಅಧ್ಯಾಯ – ೦2
ಪಂಚವರುಷದ ಪೋರ
ಧ್ರುವಂಗೆ
ನಾರದ ಮುನಿಯ ಉಪದೇಶ
ಪೀತಾಂಬರಧಾರಿ
ದಿವ್ಯ ಮನೋಹರರೂಪದಿಂ
ಪ್ರಜ್ವಲಿಪ
ಕಮಲಪುಷ್ಪಗಳಂತಿರ್ಪ
ಪಾದಗಳ,
ನಡುವಿನಲಿ ಥಳಿಥಳಿಪ
ರತ್ನದಾಭರಣ
ವಿಶಾಲ ವಕ್ಷಸ್ಥಳದಿ
ಲಕ್ಷ್ಮೀ ಆವಾಸ ಸ್ಥಾನ
ಶಂಖ ಚಕ್ರ ಗಧೆ
ಧರಿಸಿದ ಹಸ್ತಗಳು
ತೊಂಡೆಯಂಥಹ ತುಟಿ
ಕಮಲದಳದಂತಿರ್ಪ ನಯನಗಳು
ಮುಗುಳ್ನಗೆಯ ಮಾಗದ
ಮೋಹಕ ರೂಪವ
ನಿನ್ನೆದೆಯಲಿ ಸ್ಥಾಪಿಸಿ
ಏಕಾಗ್ರಚಿತ್ತದಿಂ ಮನ್ನಸ್ಸಿನಂಗಳದಿ
ಸ್ಥಿರಗೊಳಿಸಿ
ವಾಸುದೇವ ದ್ವಾದಶ ಮಂತ್ರ
“ಓಂ ನಮೋ ಭಗವತೇ ವಾಸುದೇವಾಯ”
ಪಠಿಸುತ್ತಾ, ಯಮುನಾ ತೀರದಲ್ಲಿರ್ಪ
ಮಧುವನದಿ
ತಪವನಾಚರಿಸೆಂಬ
ಮುನಿವಾಕ್ಯಕೆ ಮಣಿದು
ತಪಂಗೈದ ಧ್ರುವ ಬಾಲಕ
ಮೊದಲ ಮಾಸದಿ
ಮೂರು ದಿನಗಳಿಗೊಮ್ಮೆ
ಬೇಲ, ಬೋರೆ ಹಣ್ಣುಗಳ ಆಹಾರ,
ನಂತರದಲಿ ಆರುದಿನಗಳಿಗೊಮ್ಮೆ
ಹುಲ್ಲು ಚಿಗುರೆಲೆಗಳೇ ಭೋಜನ
ತೃತೀಯ ಮಾಸದಲಿ
ನವದಿನಗಳಿಗೊಂದಿಷ್ಟು ಜಲ
ನಂತರದಿ ಬರೀ ವಾಯು,
ಐದಾರನೇ ತಿಂಗಳಲಿ
ಎಲ್ಲವೂ ಸ್ಥಬ್ಧ
ಉಚ್ಚಾಶ್ವ, ನಿಶ್ವಾಸಗಳಿಲ್ಲ
ನೇತ್ರ, ಕರ್ಣಗಳ ಅಲುಗಾಟವಿಲ್ಲ
ಏಕಪಾದದಿಂ ನಿಂತು
ಭಗವಧ್ಯಾನ
ಹೃದಯಕಮಲದಲಿ
ನೆಲೆನಿಂತ ನಾರಾಯಣ
ದಿವ್ಯಮಂಗಳ ಸ್ವರೂಪ
ಭಕ್ತಿಯೋಗದಿಂ
ಸಕಲ ತತ್ವಗಳಾಧಾರ
ಪ್ರಕೃತಿ ಪುರುಷ ನಿಯಾಮಕ
ಪರಮ ಪುರುಷನ
ಹೃದಯದಲಿ ಬಂಧಿಸಿ
ಧ್ಯಾನಿಸುತಿರ್ಪ
ಧ್ರುವ ತಪೋಜ್ವಾಲೆ
ಜಗಕೆಲ್ಲ ವಿಸ್ತರಿಸಿ
ಮೂರು ಲೋಕದ ಜೀವಿಗಳಿಗೆಲ್ಲ
ಶ್ವಾಸ ಬಂಧನವಾಗಿ
ಪರಿತಪಿಸುತ್ತಾ
ಹರಿಗೆ ಮೊರೆಯಿಡೆ
ನಾರಾಯಣನು
ಧ್ರುವಂಗೆ ದಿವ್ಯ ದರುಷನವನಿತ್ತು ಹರಸಿ,
ಸೂರ್ಯ ಚಂದ್ರಾದಿ ಗ್ರಹಗಳಿಗೂ
ಸಿಗದ
ಉನ್ನತೋನ್ನತ ಶಾಶ್ವತ ಸ್ಥಾನವ
ನಭೋಮಂಡಲದಲಿ
ಧ್ರುವಂಗೆ ದಯಪಾಲಿಸೆ
ಧ್ರುವ ನಕ್ಷತ್ರನಾದ
ಬಾಲಕ ʼಧ್ರುವʼ ಧನ್ಯ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41416
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಕಾವ್ಯ ಭಾಗವತ..ಚೆನ್ನಾಗಿ ಮೂಡಿಬರುತ್ತಿದೆ..ಧನ್ಯವಾದಗಳು.. ಸಾರ್
ಚೆನ್ನಾಗಿದೆ
ಕಾವ್ಯ ರೂಪದ ಧೃವನ ಕಥೆ ಬಹಳ ಚೆನ್ನಾಗಿ ಮೂಡಿಬಂದಿದೆ…
ಮನಕಲಕುವ, ಮನಃ ಸ್ಥೈರ್ಯ ಹೆಚ್ವಿಸುವ ಧ್ರುವನ ಕಥೆಯ ಸರಳ ಕಾವ್ಯ ರೂಪಾಂತರ ಸೊಗಸಾಗಿದೆ.