ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 5
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ಒಂದು ಕಂಬದ ಪಗೋಡ (One Pillar Pagoda)
ವಿಯೆಟ್ನಾಂ ದೇಶದ ರಾಜಧಾನಿಯಾದ ಹನೋಯ್ ನಗರದಲ್ಲಿ, ‘ಒನ್ ಪಿಲ್ಲರ್ ಪಗೋಡಾ’ ಎಂದು ಕರೆಯಲ್ಪಡುವ, ವಿಶಿಷ್ಟ ವಿನ್ಯಾಸದ ಬೌದ್ಧರ ಆರಾಧನಾ ಮಂದಿರವಿದೆ . ಈ ಪಗೋಡವನ್ನು, ಸರೋವರದಲ್ಲಿ ಅರಳಿದ ಕಮಲದ ಹೂವಿನ ವಿನ್ಯಾಸದಲ್ಲಿ ರಚಿಸಲಾಗಿದೆ. ನೀರು ತುಂಬಿರುವ ಸರೋವರದಲ್ಲಿ ನಿರ್ಮಿಸಿಲಾದ 1.25 ಮೀ ಅಗಲ ಹಾಗೂ 4 ಮೀ ಎತ್ತರದ ಒಂದು ಕಲ್ಲಿನ ಕಂಬದ ಮೇಲೆ, ಕಮಲದ ಆಕಾರದಲ್ಲಿ, ಮರದಿಂದ ನಿರ್ಮಿಸಿದ ಮಂದಿರವು ಚಿಕ್ಕದಾದರೂ ಸೊಗಸಾಗಿದೆ. ಒಂದು ಕಂಬದ ಪಗೋಡವನ್ನು ಪ್ರಾಚೀನ ‘ಥಾಂಗ್ ಲಾಂಗ್’ ಹಾಗೂ ವಿಯೆಟ್ನಾಂ ಧಾರ್ಮಿಕ ಸಂಸ್ಕೃತಿಯ ಪ್ರಮುಖ ಭಾಗವೆಂದು ಪರಿಗಣಿಸುತ್ತಾರೆ.
ಲಭ್ಯ ಮಾಹಿತಿ ಪ್ರಕಾರ, ಕ್ರಿ.ಶ 1028-1054 ರ ಅವಧಿಯಲ್ಲಿ ವಿಯೆಟ್ನಾಂ ಅನ್ನು ಆಳುತ್ತಿದ್ದ ರಾಜ ‘ಲೈ ಥಾಯ್ ಟಾಂಗ್’ ಗೆ ಮಕ್ಕಳಿರಲಿಲ್ಲ. ಒಂದು ದಿನ ಅವನ ಕನಸಿನಲ್ಲಿ, ಕಮಲದ ಹೂವಿನ ಮೇಲೆ ಕುಳಿತಿದ್ದ ಕರುಣೆಯ ದೇವತೆಯಾದ ‘ಕ್ವಾನ್ ಆಮ್ ‘ ಅವನಿಗೆ ಒಬ್ಬ ಮಗನನ್ನು ಕೊಟ್ಟಳು. ಅನಂತರ ರಾಜನು ಒಬ್ಬ ರೈತ ಹುಡುಗಿಯನ್ನು ಮದುವೆಯಾದ ಹಾಗೂ ಅವರಿಗೆ ಒಂದು ಗಂಡು ಮಗು ಜನಿಸಿತು. ಹಾಗಾಗಿ, ದೇವತೆಗೆ ಕೃತಜ್ಞತೆಯ ಸೂಚಿಸುವ ಸಲುವಾಗಿ, ಧಾರ್ಮಿಕ ಮುಖಂಡರ ಸಲಹೆ ಪಡೆದು, ತಾನು ಕನಸಿನಲ್ಲಿ ಕಂಡಂತಹ ದೇವಾಲಯವನ್ನು ನಿರ್ಮಿಸಿದನು.
ಕಾಲಾನಂತರದಲ್ಲಿ ಈ ಪಗೋಡವು ಹಲವಾರು ಬಾರಿ ಹಾನಿಗೊಂಡಿದೆ ಹಾಗೂ ಪುನರ್ನಿಮಾಣಗೊಂಡಿದೆ. ಹೀಗೆ ‘ಒಂದು ಕಂಬದ ಪಗೋಡಾ’ಕ್ಕೆ 1000 ವರ್ಷಗಳ ಇತಿಹಾಸವಿದೆ ಹಾಗೂ ಹನೋಯಿಯ ಪ್ರಮುಖ ಪ್ರೇಕ್ಷಣೀಯ ತಾಣವೆಂದು ಗುರುತಿಸಲ್ಪಟ್ಟಿದೆ.
‘ನಾನ್ ಲಾ‘ ಎಂಬ ಶಂಕುವಿನಾಕಾರಾದ ಟೋಪಿ
ವಿಯೆಟ್ನಾಂನಲ್ಲಿ ರಸ್ತೆಯಲ್ಲಿ ಪ್ರಯಾಣಿಸುವಾಗ, ಅಲ್ಲಲ್ಲಿ ತಿಳಿ ಹಳದಿ ಬಣ್ಣದ ಶಂಕುವಿನಾಕಾರದ ಟೊಪ್ಪಿಯನ್ನು ಧರಿಸಿ ಕೆಲಸ ಮಾಡುತ್ತಿರುವ ಸ್ಥಳೀಯರು , ಕೃಷಿಕಾರ್ಮಿಕರು, ರಸ್ತೆಯಲ್ಲಿ ವ್ಯಾಪಾರ ಮಾಡುವವರು ಹಾಗೂ ಪ್ರವಾಸಿಗರು ನಮ್ಮ ಗಮನ ಸೆಳೆಯುತ್ತಾರೆ . ಬಿದಿರಿನ ಅಥವಾ ಇತರ ಹುಲ್ಲು ಕಡ್ಡಿಗಳನ್ನು ಬಳಸಿ ಕಟ್ಟಲಾಗುವ ಶಂಕುವಿನಾಕಾರದ ರಚನೆಯ ಮೇಲೆ ಒಂದು ವಿಧದ ಪಾಮ್ ವರ್ಗಕ್ಕೆ ಸೇರಿದ ಸಸ್ಯದ ಎಲೆಗಳನ್ನು ವ್ಯವಸ್ಥಿತವಾಗಿ ಜೋಡಿಸಿ, ಬಿಳಿ ಬಣ್ಣದ ದಾರದಿಂದ ನೇಯ್ದು ತಯಾರಿಸುವ ಈ ಟೊಪ್ಪಿಯು ವಿಯೆಟ್ನಾಂ ದೇಶದ ಕರಕುಶಲತೆಯ ಪ್ರತೀಕವಾಗಿದೆ. ನಮ್ಮ ಪ್ರಯಾಣದ ಸಮಯದಲ್ಲಿ ಹಲವಾರು ಕಡೆ ಈ ರೀತಿಯ ಟೊಪ್ಪಿಗಳು ಮಾರಾಟಕ್ಕಿರುವುದನ್ನು ಗಮನಿಸಿದೆವು .ಒಂದು ಟೊಪ್ಪಿಯ ಬೆಲೆ 45000 ವಿಯೆಟ್ನಾಂ ಡಾಂಗ್ ಅಂದರೆ ಸುಮಾರು ರೂ.150/-.
ಮೂಲತ: ಭತ್ತ ಬೆಳೆಯುವ ಕೃಷಿ ಕಾರ್ಮಿಕರು ರೂಪಿಸಿದರೆನ್ನೆಲಾಗುವ ಈ ವಿಯೆಟ್ನಾಂ ಟೋಪಿಗೆ ‘ ನಾನ್ ಲಾ’ ಎಂಬ ಹೆಸರು. Rice Farmers’ Hat ಅಂತಲೂ ಹೇಳುತ್ತಾರೆ. 3000 ವರ್ಷಕ್ಕೂ ಹಿಂದಿನ ವಿಯೆಟ್ನಾಂ ಚರಿತ್ರೆಯಲ್ಲಿ ‘ನಾನ್ ಲಾ’ ಧರಿಸಿರುವ ಮನುಷ್ಯರ ಭಿತ್ತಿ ಚಿತ್ರಗಳು ಇವೆಯಂತೆ. ವಿವಿಧ ಉದ್ದೇಶಕ್ಕಾಗಿ 50 ಕ್ಕೂ ಹೆಚ್ಚು ವಿನ್ಯಾಸಗಳಲ್ಲಿ ‘ನಾನ್ ಲಾ’ಗಳನ್ನು ತಯಾರಿಸುತ್ತಾರೆ. ಬಿಸಿಲು ಅಥವಾ ಮಳೆ ಹೆಚ್ಚಾಗಿ ಇರುವ ವಿಯೆಟ್ನಾಂನ ಹವಾಮಾನದಲ್ಲಿ ತಮ್ಮ ತಲೆಗೆ ಬಿಸಿಲು, ಮಳೆ ತಾಕದಂತೆ ‘ ನಾನ್ ಲಾ’ಗಳು ಉಪಯುಕ್ತವಾಗಿದೆ.
ಪರಂಪರೆಯನ್ನು ರಕ್ಷಿಸುವ ಉದ್ದೇಶ ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದಲೂ, ವಿಯೆಟ್ನಾಂನ ಟೊಪ್ಪಿಗಳು ಅಲ್ಲಿಯ ಸಾಂಸ್ಕೃತಿಕ ಪ್ರತೀಕವೆನಿಸಿವೆ. ಅಲ್ಲಿ ನಾವು ಖರೀದಿಸಬಹುದಾದ ವಿವಿಧ ಆಕಾರದ ವಿನ್ಯಾಸದ ಬ್ಯಾಗ್, ಕೀ ಬಂಚ್ ಮೊದಲಾದುವುಗಳಲ್ಲಿಯೂ ನಾನ್ ಲಾ ಹಾಕಿದ ಮನುಷ್ಯರ ಚಿತ್ರವಿರುತ್ತದೆ. ಇನ್ನು ಪ್ರವಾಸಿಗರೂ ‘ನಾನ್ ಲಾ’ ಧರಿಸಿಕೊಂಡು ಓಡಾಡುತ್ತಾರೆ.
ಈ ಟೋಪಿಯನ್ನು ಮಡಿಸಿ ಚಿಕ್ಕದಾಗಿ ಒಯ್ಯಲು ಆಗುವುದಿಲ್ಲ. ಹಾಗಾಗಿ ಪ್ರವಾಸಿಗರ ಸೂಟ್ ಕೇಸ್ ನಲ್ಲಿ ಹೆಚ್ಚು ಸ್ಥಳವನ್ನು ಬೇಡುತ್ತದೆ. ಆದರೂ ಹೆಚ್ಚಿನ ಪ್ರವಾಸಿಗರು ವಿಯೆಟ್ನಾಂ ಟೋಪಿಯನ್ನು ಖರೀದಿಸುತ್ತಾರೆ , ಬ್ಯಾಗ್ ನಲ್ಲಿ ಜಾಗವಿಲ್ಲವಾದರೆ ತಲೆ ಮೇಲೆ ಧರಿಸಿಕೊಂಡೇ ವಿಮಾನವನ್ನು ಏರುತ್ತಾರೆ. ಹೀಗೆ ವಿಮಾನ ನಿಲ್ದಾಣದಲ್ಲಿಯೂ ‘ನಾನ್ ಲಾ’ ಧರಿಸಿದ ಕೆಲವು ಪ್ರವಾಸಿಗರು ಕಾಣಿಸುತ್ತಾರೆ.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ: https://www.surahonne.com/?p=41350
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ನಿಮ್ಮ ಪ್ರವಾಸ ಕಥನ ಓದಿಸಿಕೊಂಡುಹೋಯಿತು ಗೆಳತಿ.. ಅದಕ್ಕೆ ಪೂರಕ ಚಿತ್ರ ಮನಕ್ಕೆ ಮುದ ತಂದಿತು ಮಾತ್ರವಲ್ಲ ವಿಚಾರಕ್ಕೆ ಪೂರಕವಾಗಿ ತ್ತು..
ಧನ್ಯವಾದಗಳು
ಚಂದದ ಮಾಹಿತಿ ಪೂರ್ಣವಾದ ಪ್ರವಾಸಿ ಕಥನ
ಮತ್ತೊಮ್ಮೆ ವಿಯೆಟ್ನಾಂ ದರ್ಶನ ಮಾಡಿಸಿದ್ದಕ್ಕಾಗಿ ಧನ್ಯವಾದಗಳು
ಧನ್ಯವಾದಗಳು
ಒಂದು ಕಂಬದ ಪಗೋಡಾದ ಹಿಂದಿನ ಕನಸಿನ ಕಥೆಯಂತೆಯೇ ವಿಶಿಷ್ಟ ಕಲಾತ್ಮಕತೆಯ ನಾನ್ ಲಾ ಟೋಪಿಯ ವರ್ಣನೆಯೂ ಮನ ಸೆಳೆಯಿತು.
ಸೊಗಸಾಗಿದೆ ಪ್ರವಾಸ ಕಥನ
ಒಂಟಿ ಕಂಬದ ಪಗೋಡದ ಹಿಂದಿನ ರೋಚಕ ಕಥೆ ಹಾಗೂ ನಾನ್ ಲಾ ಟೋಪಿ ವಿಷಯ ಬಹಳ ಕುತೂಹಲಕಾರಿಯಾಗಿದೆ. ಪ್ರವಾಸ ಕಥನ ಎಂದಿನಂತೆ ಚಂದ.