ಶಿಷ್ಯ ಗುರುವಾದಾಗ
ಕೆಲವೊಮ್ಮೆ ಕೆಲವು ವಿಷಯಗಳು ಸಂಭವಿಸುತ್ತವೆ. ಯಾವ ಕಾರಣದಿಂದ ಆ ವಿಷಯ ಸಂಭವಿಸಿತು ಅನ್ನುವುದಕ್ಕೆ ಕಾರಣಗಳು ಗೊತ್ತಾಗುವುದೇ ಇಲ್ಲ. ನಾವಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ. ಬೇರೇನೋ ನಡೆದುಬಿಡುತ್ತದೆ. ಎಲ್ಲವೂ ಇದ್ದು ಇಲ್ಲದಂತೆ, ಎಲ್ಲರೂ ಇದ್ದೂ ಇಲ್ಲದಂತೆ ಆಗುವುದುಂಟು. ಗುರುತು ಪರಿಚಯ ಇರದವರು ಕೂಡಾ ನಮ್ಮ ನೆರವಿಗೆ ಧಾವಿಸುವುದು ಕಂಡಾಗ ಎಲ್ಲೋ ಮಾನವೀಯತೆ ಇನ್ನೂ ಉಳಿದುಕೊಂಡಿದೆ ಅನ್ನುವುದು ಸಾಬೀತಾಗುತ್ತದೆ. ಬೆಟ್ಟದಂತೆ ಎದುರಾದ ಸಮಸ್ಯೆಗಳು ಮಂಜಿನಂತೆ ಕರಗಿಹೋಗುತ್ತವೆ. ಪ್ರತಿಯೊಬ್ಬರಿಂದಲೂ ಕಲಿಯುವುದಿದೆ ಅನ್ನುವುದನ್ನು ದಟ್ಟವಾಗಿ ನಂಬುವವಳು ನಾನು. ನನ್ನ ಹತ್ತೊಂಬತ್ತು ವರ್ಷಗಳ ಚಾಲನಾ ಅನುಭವದಲ್ಲಿ ಇಂತಹ ಅನುಭವಗಳು ಎಷ್ಟೋ ಸಲ ನನಗಾಗಿದೆ. ಕಾರಿನ ಚಕ್ರದ ಗಾಳಿ ಹೋಗಿರುವುದನ್ನು ಗಮನಿಸಿ ಯಾರೋ ಗುರುತು ಪರಿಚಯ ಇಲ್ಲದವರು ಬದಲಿ ಚಕ್ರ ಅಳವಡಿಸಿಕೊಟ್ಟದ್ದೂ ಇದೆ. ಯಾವುದೋ ಕಾರಣದಿಂದ ಕಾರು ಮುಂದೆ ಚಲಿಸದೆ ಹೋದಾಗ ಕಾರನ್ನು ದೂಡಿ ಮುಂದೆ ಹೋಗುವಂತೆ ಮಾಡಿಕೊಟ್ಟವರು ಹಲವರು. ಇತ್ತೀಚೆಗೆ ನಡೆದ ಒಂದು ಅನುಭವವನ್ನು ಹಂಚಿಕೊಳ್ಳಬಯಸುವೆ.
ಮನೆಯಲ್ಲಿ ಕೆಲವು ದಿನಸಿ ಸಾಮಗ್ರಿ ಮುಗಿದಿದೆ, ಸಂಜೆ ಮನೆಗೆ ಹೋಗುವಾಗ ದಿನಸಿ ಅಂಗಡಿಗೆ ಹೋಗಬೇಕೆಂಬ ಯೋಚನೆ ಮಾಡಿದ್ದೆ ಆ ದಿನ. ಕಾಲೇಜಿನಲ್ಲಿ ಕರ್ತವ್ಯ ಮುಗಿಸಿ ನನ್ನ ಕಾರು ಚಲಾಯಿಸುತ್ತಾ ಮನೆಗೆ ಹೊರಟಿದ್ದೆ. ಸಂಜೆ ಐದು ಘಂಟೆ ದಾಟಿತೆಂದರೆ ರಸ್ತೆಯಲ್ಲಿ ವಾಹನ ದಟ್ಟಣೆಯ ಕಾರಣ, ಸಂಚಾರ ಅಸ್ತವ್ಯಸ್ತ. ಜೊತೆಗೆ ಅಲ್ಲಲ್ಲಿ ಹೊಂಡ ಬಿದ್ದ ರಸ್ತೆಗಳು. ಸಂಚಾರಿ ನಿಯಮಗಳು ನಮಗಂತೂ ಅಲ್ಲವೇ ಅಲ್ಲವೆನ್ನುವಂತೆ ಒಟ್ಟಾರೆ ವಾಹನಗಳನ್ನು ನುಗ್ಗಿಸುವ ಜಾಯಮಾನದವರು. ವಾಹನ ಚಲಾಯಿಸುವಾಗ ಮೈಯೆಲ್ಲಾ ಕಣ್ಣಾಗಿರಲೇ ಬೇಕು. ಸಂಚಾರವನ್ನು ಸುಲಭವಾಗಿಸಲು ಟ್ರಾಫಿಕ್ ದೀಪಗಳಿದ್ದರೂ, ಅಲ್ಲಿ ಬರುವ ಕೆಂಪು ದೀಪ ಗಮನಿಸದೇ ರಸ್ತೆ ದಾಟುವವರಿಗೇನೂ ಕಡಿಮೆಯಿಲ್ಲ. ಅಂದೂ ಹಾಗೆಯೇ ಆಯಿತು. ವಾಹನಗಳು ಮುಂದೆ ಚಲಿಸಲು ಹಸಿರು ದೀಪ ತನ್ನ ನಿಶಾನೆ ತೋರಿಸಿತ್ತು. ಹಾಗಾಗಿ ವಾಹನಗಳ ಸರತಿ ಸಾಲಿನಲ್ಲಿ ನನ್ನ ಗಾಡಿಯೂ ಮುಂದೆ ಸಾಗುತ್ತಿತ್ತು.
ರಸ್ತೆಯಲ್ಲಿನ ಹೊಂಡ ತಪ್ಪಿಸಲೆಂದು ಗಾಡಿಯನ್ನು ನಿಧಾನಿಸಬೇಕಿತ್ತು. ಮೂರನೇ ಗೇರಿನಿಂದ ಎರಡನೇ ಗೇರಿಗೆ ಬದಲಾಯಿಸುವಾಗ ಏನೋ ಸದ್ದಾದಂತೆ ಅನ್ನಿಸಿತು. ಎಷ್ಟು ಸಲ ಪ್ರಯತ್ನಿಸಿದರೂ ಗೇರ್ ಬದಲಾಯಿಸಲು ಸಾಧ್ಯವಾಗಲೇ ಇಲ್ಲ. ಕಾರು ನಿಂತಿತು. ಪುನಃ ಗಾಡಿಯನ್ನು ಚಾಲೂ ಮಾಡಲು ಪ್ರಯತ್ನಿಸಿದರೂ ಫಲಿತಾಂಶ ಶೂನ್ಯ. ಹಿಂದಿನಿಂದ ನಗರಸಾರಿಗೆ ಬಸ್ ಚಾಲಕನ ಹಾರ್ನ್ ಮೊಳಗುತ್ತಿತ್ತು. ಆದರೆ ಆ ಸದ್ದು ಕೇಳಿಸಲೇ ಇಲ್ಲ ನನಗೆ! ಕೇಳಿಸಿದರೂ ಏನೂ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ ನಾನು. ಕಾರ್ ಯಾಕಾಗಿ ಕೆಟ್ಟು ನಿಂತಿತು ಅನ್ನುವುದೇ ಗೊತ್ತಾಗಲಿಲ್ಲ. ಸಂಚಾರಿ ಅರಕ್ಷಕರು ಬಂದರು. “ಸಾರ್, ಯಾಕೋ ಗಾಡಿ ಚಾಲೂ ಆಗ್ತಾ ಇಲ್ಲ” ಅಂದೆ. ಹಿಂದಿನಿಂದ ವಾಹನಗಳ ಸಾಲು ಬೆಳೆಯುತ್ತಲೇ ಇತ್ತು. ಬಸ್ ಚಾಲಕನಿಗೂ ನನ್ನ ಸಮಸ್ಯೆಯ ಅರಿವಾಗಿದ್ದಿರಬೇಕು- ಹಾರ್ನ್ ಸದ್ದು ನಿಂತಿತ್ತು.
ಬಿಳಿ ಅಂಗಿ ಧರಿಸಿದ ಕಾಲೇಜು ಹುಡುಗನೋರ್ವ ಬಂದು ಕಾರನ್ನು ಚಾಲೂ ಮಾಡಲು ಪ್ರಯತ್ನಿಸಿದ. ಕಾರಿನ ಬ್ಯಾಟರಿ ಖಾಲಿ ಆಗಿರಬೇಕು ಅಂದ. “ಏನೋ ಗೊತ್ತಿಲ್ಲ” ಅಂದೆ. ಏನಾದರೂ ಮಾಡಲೇಬೇಕಿತ್ತು. ಕಾರನ್ನು ಸ್ವಲ್ಪ ರಸ್ತೆಯ ಬದಿಗಾದರೂ ತರಬೇಕಿತ್ತು. “ಮ್ಯಾಮ್” ಅಂದತ್ತ ತಿರುಗಿದೆ. ನನ್ನ ಹಳೆ ವಿದ್ಯಾರ್ಥಿ ಸಂಜನ್ ಅಲ್ಲಿದ್ದ. “ಗಾಡಿ ಚಾಲೂ ಆಗ್ತಿಲ್ಲ, ರಸ್ತೆ ಮಧ್ಯದಿಂದ ಬದಿಗಾದರೂ ತರಬೇಕಿತ್ತು” ಅಂದೆ. “ಮ್ಯಾಮ್, ನ್ಯೂಟ್ರಲ್‌ನಲ್ಲಿಟ್ಟು ಗಾಡಿ ಚಾಲೂ ಮಾಡಲು ಪ್ರಯತ್ನಿಸಿ” ಅಂದ. ಏನಾಶ್ಚರ್ಯ! ಅಷ್ಟು ಹೊತ್ತೂ ಜಪ್ಪಯ್ಯಾ ಅಂದರೂ ಚಾಲೂ ಆಗದ ಗಾಡಿ, ಚಾಲೂ ಆಯಿತು. ನ್ಯೂಟ್ರಲ್ ನಿಂದ ಮೊದಲ ಗೇರಿಗೆ ಬದಲಾಯಿಸಬೇಕಿತ್ತು. ಅಷ್ಟೂ ಹೊತ್ತು ಗೇರ್ ಬದಲಿಸಲಾಗದೆ ಹೆಣಗಿದ್ದೆ. ಆದರೂ ಪ್ರಯತ್ನಿಸಲು ಮುಂದಾದೆ. “ಮ್ಯಾಮ್, ಆರಾಮ್ ಸೇ ಮಾಡಿ” ಅಂದ ನನ್ನ ಶಿಷ್ಯ. ಗೇರ್ ಬಿತ್ತು. ಗಾಡಿ ಮುಂದೆ ಚಲಿಸಿತು. “ಇನ್ನು ಮುಂದೆ ಹೋಗಿ ಮ್ಯಾಮ್” ಅಂತ ಹೆಬ್ಬೆರಳು ಎತ್ತಿದ ನನ್ನ ಶಿಷ್ಯನಿಗೆ ವಂದಿಸುತ್ತಾ ಮನೆಯತ್ತ ಹೊರಟೆ. ಆ ಕ್ಷಣ ನನ್ನ ಶಿಷ್ಯ ನನ್ನ ಗುರುವಾಗಿದ್ದ, ನನ್ನ ಪಾಲಿನ ದೇವರಂತೆ ಬಂದಿದ್ದ. ವಾಹನಾ ಚಾಲನಾ ತರಬೇತಿಯ ಸಂದರ್ಭ ಗಾಡಿಯನ್ನು ನ್ಯೂಟ್ರಲ್ ನಲ್ಲಿ ಚಾಲೂ ಮಾಡಬೇಕೆಂದು ಹೇಳಿಕೊಟ್ಟದ್ದು ಆ ಬಳಿಕ ನೆನಪಾಯಿತು ನೋಡಿ!
ದಿನಸಿ ಅಂಗಡಿಗೆ ಹೋಗುವ ನನ್ನ ಯೋಜನೆಯನ್ನು ರದ್ದು ಮಾಡಿದೆ. ನಿಲ್ಲಿಸಿದ ಕಾರನ್ನು ಪುನಃ ಚಾಲೂ ಮಾಡಲಾಗದೆ ಇದ್ದರೆ ಅನ್ನುವ ಆತಂಕ. ಏನು ತೊಂದರೆ ಅಂತ ಮತ್ತೆ ನೋಡುವ, ಒಮ್ಮೆ ಮನೆ ಸೇರಿಕೊಳ್ಳುವ ಯೋಚನೆ ನನ್ನೊಳಗೆ. ದಾರಿ ಮಧ್ಯೆ ಎಲ್ಲೂ ನಿಲ್ಲಿಸದೆ ಸೀದಾ ಮನೆಗೆ ಬಂದಿದ್ದೆ. ಮನೆಗೆ ಬಂದ ಬಳಿಕ ಕಾರು ನಿಲ್ಲಿಸಿ ಪುನಃ ಚಾಲೂ ಮಾಡುವಾಗಲೂ ಚಾಲೂ ಆಗಿತ್ತು. ಈ ಪ್ರಸಂಗ ನಡೆದು ಎರಡು ವಾರಗಳ ಮೇಲಾಯಿತು. ನನ್ನ ಕಾರು ನನಗೆ ಯಾವುದೇ ತೊಂದರೆ ಕೊಟ್ಟಿಲ್ಲ. ಆದರೆ ಒಂದು ಭಾವ ನನ್ನೊಳಗೆ ಜಾಗೃತವಾಗಿದೆ. ನಮ್ಮಂತಹ ಶಿಕ್ಷಕರಿಗೆ ಪ್ರೀತಿಯ ವಿದ್ಯಾರ್ಥಿಗಳು ದೇವರು ಕೊಟ್ಟ ಅಪೂರ್ವ ಆಸ್ತಿ. ವಿದ್ಯಾರ್ಥಿಗಳ ನೋವು ನಲಿವುಗಳಿಗೆ ಸ್ಪಂದಿಸುವ ಗುಣ ನಮ್ಮಲ್ಲಿದ್ದರೆ, ಅವರಿಗೆ ಪುಸ್ತಕದ ಪಾಠದ ಜೊತೆ ಜೀವನದ ಪಾಠವನ್ನು ಕೂಡಾ ನಾವು ನೀಡಿದರೆ ನಮ್ಮನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯುವುದಿಲ್ಲ. ಇಂತಹ ಗೌರವದ ಶಿಕ್ಷಕ ವೃತ್ತಿಯಲ್ಲಿರುವಂತೆ ಅನುಗ್ರಹಿಸಿದ ಭಗವಂತನಿಗೆ ಶರಣು.
–ಡಾ. ಕೃಷ್ಣಪ್ರಭ ಎಂ, ಮಂಗಳೂರು
ವಿದ್ಯಾರ್ಥಿಗಳೊಂದಿಗೆ ಪ್ರೀತಿಯಿಂದ ಬೆರೆತು , ಉದ್ಯೋಗದಲ್ಲಿ ಸಾರ್ಥಕತೆ ಗಳಿಸುವ ನಿಮಗೆ ಅಭಿನಂದನೆಗಳು.
ಲೇಖನಗಳನ್ನು ಪ್ರಕಟಿಸಿ ಸದಾ ಪ್ರೋತ್ಸಾಹಿಸುವ ನಿಮಗೆ ಹಾಗೂ ನಿಮ್ಮ ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು…
ಚಂದದ ಬರಹ. ಜೀವನದುದ್ದಕ್ಕೂ ಶಿಕ್ಷಕ ವೃಂದಕ್ಕೆ ಮಾತ್ರ ದೊರಕುವ ಅಪೂರ್ವ ಅಭಿಮಾನ ಮತ್ತು ಗೌರವದ ಒಂದು ಉದಾಹರಣೆ ಸೊಗಸಾಗಿ ಬಿಂಬಿತವಾಗಿದೆ.
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ
ಹೌದು ಶಿಕ್ಷಕರಾದವರಿಗೆ ಗೊತ್ತು ವಿದ್ಯಾರ್ಥಿಗಳ ಪ್ರೀತಿ ಅಭಿಮಾನ ತುಂಬಿದ ನೋಟ ಹಾಗೂ ಅವರ ನುಡಿಗಳು
ಸಮಯಕ್ಕೆ ಸರಿಯಾಗಿ ಬಂದು ನೆರವು ನೀಡಿದ ಶಿಷ್ಯ ಗುರುವೇ ಸರಿ
ಆ ದಿನ ನನ್ನ ವಿದ್ಯಾರ್ಥಿ ನೀಡಿದ ಧೈರ್ಯವನ್ನು ನಾನು ಮರೆಯಲು ಸಾಧ್ಯವಿಲ್ಲ. ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ
ಲೇಖನದ ಶೀರ್ಷಿಕೆ ಬಹಳ ಇಷ್ಟವಾಯಿತು ಸೊಗಸಾದ ಲೇಖನ
ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು
ಗುರು.. ಶಿಷ್ಯ ಸಂಬಂಧ..ಅವರಿಬ್ಬರ ನಡುವಿನ ಮೌಲ್ಯ ಗಳ ಅನಾವರಣ ಸುಂದರ ಬರೆಹ ಮೇಡಂ.
ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದಗಳು ಮೇಡಂ
ಎಷ್ಟು ಚಂದ ಹೇಳಿದ್ರಿ ಮೇಡಂ, ನಿಜ ಇಲ್ಲಿ ಎಲ್ಲರಿಂದಲೂ ಕಲಿಯುವುದು ಬಹಳ ಇದೆ. ಬದುಕಿನ ಪ್ರತಿ ಹಂತದಲ್ಲೂ ಒಬ್ಬೊಬ್ಬರಿಂದ ಒಂದೊಂದು ಪಾಠ.
ನಿಜ.. ಬದುಕಿನ ಪ್ರತಿ ಹಂತದಲ್ಲೂ, ಪ್ರತಿ ಕ್ಷಣದಲ್ಲೂ ಇತರರಿಂದ ಕಲಿಯುವುದು ಬಹಳ ಇದೆ. ಮೆಚ್ಚುಗೆಗೆ ಧನ್ಯವಾದಗಳು ನಯನಾ
ಹೌದು… ಗುರುತು ಪರಿಚಯವಿಲ್ಲದ ಮಂದಿಯಿಂದ ಸಕಾಲದಲ್ಲಿ ಸಹಾಯ ಒದಗುವುದು ನಿಜಕ್ಕೂ ಮನವನ್ನು ಆರ್ದ್ರಗೊಳಿಸುತ್ತದೆ. ನಿಮ್ಮ ಅನುಭವದಂತೆಯೇ; ನನಗೆ ಗೊತ್ತಿಲ್ಲದೇ ಟಯರ್ ಪಂಕ್ಚರ್ ಆದ ಕಾರಿನ ಗಾಲಿಯನ್ನು ಅಲ್ಲಿದ್ದ ರಿಕ್ಷಾ ಚಾಲಕರು ಗುರುತಿಸಿ, ನನ್ನ ಗಮನಕ್ಕೆ ತಂದು, ಅವರೇ ಅದನ್ನು ಬದಲಾಯಿಸಿ ಕೊಟ್ಟು ಆಪದ್ಬಾಂಧವರಾದ ಘಟನೆಯನ್ನು ಎಂದೂ ಮರೆಯುವಂತಿಲ್ಲ. ಸಹಜ, ಸುಂದರ ಲೇಖನ..ಧನ್ಯವಾದಗಳು ಮೇಡಂ.
ಸಕಾಲದಲ್ಲಿ ಸಿಗುವ ಸಹಾಯವು ಮಾನವೀಯತೆ ಇನ್ನೂ ಇದೆ ಅನ್ನುವುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತದೆ. ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು ಶಂಕರಿ ಮೇಡಂ