ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 4
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ಹೋ ಚಿ ಮಿನ್ಹ್ ಸ್ಮಾರಕ ( Ho Chi Minh Mausoleum)
‘ಹೋ ಚಿ ಮಿನ್ಹ್ ‘ ಅವರು ಆಧುನಿಕ ವಿಯೆಟ್ನಾಂನ ನಿರ್ಮಾತೃ ಎನ್ನಬಹುದಾದ ಯಶಸ್ವಿ ನಾಯಕ. ಇವರನ್ನು ವಿಯೆಟ್ನಾಂನ ರಾಷ್ಟ್ರಪಿತ ಎಂದೂ ಕರೆಯುತ್ತಾರೆ. ಬಡತನದ ಬಾಲ್ಯ, ಹಡಗಿನಲ್ಲಿ ಅಡುಗೆಯ ಸಹಾಯಕರಾಗಿ ಕೆಲಸ, ವಿವಿಧ ದೇಶಗಳಿಗೆ ಪ್ರಯಾಣ, ಕಾರ್ಮಿಕರ ಕ್ರಾಂತಿಯ ಬಗ್ಗೆ ಅರಿವು, ತಮ್ಮ 52 ನೆಯ ವಯಸ್ಸಿನಲ್ಲಿ ‘ಗೂಢಚಾರ’ ಎಂಬ ಆರೋಪ ಹೊತ್ತು ಚೀನಾದಲ್ಲಿ ಬಂಧನವಾಗಿ ಸೆರೆವಾಸ, ಜೈಲಿನಲ್ಲಿದ್ದಾಗ ‘ ಪ್ರಿಸನ್ ಡೈರಿ’ ಎಂಬ ಎಂಬ ಕವನ ಸಂಕಲನದ ರಚನೆ, ಎರಡನೆಯ ವಿಶ್ವ ಮಹಾಯುದ್ದದಲ್ಲಿ ಮಿತ್ರರಾಷ್ಟ್ರಗಳೊಂದಿಗೆ ಸೇರಿ ಜಪಾನಿಗೆ ವಿರುದ್ಧವಾಗಿ ತನ್ನ ಪಡೆಯೊಂದಿಗೆ ಗೆರಿಲ್ಲಾ ಮಾದರಿಯ ಹೋರಾಟ…… ಹೀಗೆ ಹಲವಾರು ವಿಶಿಷ್ಟ ಜೀವನಾನುಭವಗಳನ್ನು ಪಡೆದಿದ್ದ ಅವರು ರಷ್ಯಾದ ಕಮ್ಯೂನಿಸ್ಟ್ ನಾಯಕರ ಸಮಾಜವಾದಿ ಆಡಳಿತ ತತ್ವಗಳಿಗೆ ಮಾರುಹೋಗಿದ್ದರು. ಎರಡನೆಯ ವಿಶ್ವ ಮಹಾಯುದ್ದದಲ್ಲಿ , ಜಪಾನ್ ಮಿತ್ರರಾಷ್ಟ್ರಗಳಿಗೆ ಶರಣಾದ ಸಂದರ್ಭವನ್ನು ಬಳಸಿಕೊಂಡು ಕ್ರಾಂತಿಕಾರಿಯಾಗಿದ್ದ ಹೋ ಚಿ ಮಿನ್ಹ್ ಅವರು ಸೆಪ್ಟೆಂಬರ್ 02, 1945 ರಂದು, ಹನೋಯ್ ನಗರದ ಬಾ ದಿನ್ ಚೌಕದಲ್ಲಿ ( Ba Dinh Square) ನೆರೆದಿದ್ದ ಅಪಾರ ಜನಸ್ತೋಮದ ಮುಂದೆ, ಡೆಮೋಕ್ರೆಟಿಕ್ ರಿಪಬ್ಲಿಕ್ ಆಫ್ ವಿಯೆಟ್ನಾಂ ನ ( Democratic Republic of Vietnam) ಸ್ಥಾಪನೆ ಹಾಗೂ ಸ್ವಾತಂತ್ರ್ಯವನ್ನು ಘೋಷಿಸಿದರು.
ಹೋ ಚಿ ಮಿನ್ಹ್ ಅವರು ವಿಯೆಟ್ನಾಂನ 1945 ರಿಂದ 1969 ರಲ್ಲಿ ಅವರ ಮರಣದ ತನಕ ಅಧ್ಯಕ್ಷರಾದವರು. ಇವರ ಅವಧಿಯಲ್ಲಿ ಎರಡು ಯುದ್ಧಗಳಾದುವು. ಫ್ರೆಂಚ್ ವಸಾಹತಾಗಿದ್ದ ವಿಯೆಟ್ನಾಂನಲ್ಲಿ ಮೊದಲ ಯುದ್ಧವು ಡಿಸೆಂಬರ್ 16, 1946 ರಂದು ಆರಂಭವಾಗಿ ಜುಲೈ 20, 1954 ರಂದು ಕೊನೆಗೊಂಡಿತು. ಇದನ್ನು ವಿಯೆಟ್ನಾಂನಲ್ಲಿ ‘ಫ್ರೆಂಚ್ ವಿರೋಧಿ ಯುದ್ಧ’ ಎಂದು ಕರೆಯಲಾಗುತ್ತದೆ. ಈ ಯುದ್ಧವು ಬಹುತೇಕ ಉತ್ತರ ವಿಯೆಟ್ನಾಂನ ಟೊಂಕಿನ್ ಪ್ರದೇಶದಲ್ಲಿ ಸಂಭವಿಸಿದೆ. ಚೀನಾ ಹಾಗೂ ರಷ್ಯಾದ ಬೆಂಬಲ ಹಾಗೂ ಸ್ಥಳೀಯರ ಗೆರಿಲ್ಲಾ ಮಾದರಿಯ ಯುದ್ದವನ್ನು ಎದುರಿಸಲಾಗದೆ ಫ್ರೆಂಚ್ ಸೈನ್ಯ ಸೋಲೊಪ್ಪಿ ಹಿಂದೆ ಸರಿಯಿತು. ಈ ಕದನವಿರಾಮದ ನಂತರದ ಜಿನೆವಾ ಒಪ್ಪಂದದ ಪ್ರಕಾರ, ಉತ್ತರ ವಿಯೆಟ್ನಾಂ ಹಾಗೂ ದಕ್ಷಿಣ ವಿಯೆಟ್ನಾಂ ಎಂದು ದೇಶವನ್ನು ವಿಭಾಗಿಸಲಾಯಿತು.
ಎರಡನೆಯ ಇಂಡೋಚೈನಾ ಯುದ್ಧ ಎಂದು ಕರೆಯಲ್ಪಡುವ ಸುದೀರ್ಘ ಆಂತರಿಕ ಯುದ್ದವು 1955 ರಿಂದ 1975 ರ ವರೆಗೆ ವಿಯೆಟ್ನಾಂ, ಕಾಂಬೋಡಿಯಾ, ಲಾವೋಸ್ ಗಳನ್ನು ಕಾಡಿತು. ಅಧಿಕೃತವಾಗಿ ಅದು ಕಮ್ಯೂನಿಸಂ ತತ್ವದ ಉತ್ತರ ವಿಯೆಟ್ನಾಂ ಹಾಗೂ ರಿಪಬ್ಲಿಕ್ ತತ್ವದ ದಕ್ಷಿಣ ವಿಯೆಟ್ನಾಂಗಳ ನಡುವಿನ ಯುದ್ದವೆಂದು ಘೋಷಿಸಲ್ಪಟ್ಟಿದರೂ, ವಾಸ್ತವವಾಗಿ ಉತ್ತರ ವಿಯೆಟ್ನಾಂ ಅನ್ನು ಬೆಂಬಲಿಸಿದ ರಷ್ಯಾ ಮತ್ತು ದಕ್ಷಿಣ ವಿಯೆಟ್ನಾಂ ಅನ್ನು ಕಮ್ಯುನಿಷ್ಟರಿಂದ ಕಾಪಾಡುತ್ತೇವೆಂಬ ಭ್ರಮೆಯಲ್ಲಿದ್ದ ಬಲಾಢ್ಯ ಅಮೇರಿಕಾಗಳ ಯುದ್ದವಾಗಿತ್ತು. ಈ ಶಕ್ತಿಯುತವಾದ ದೇಶಗಳ ಬಲಾಬಲ ಪ್ರದರ್ಶನ ಸಾವಿರಾರು ಮುಗ್ಧ ವಿಯೆಟ್ನಾಂ ದೇಶಿಗರ ಮಾರಣ ಹೋಮವಾದುದು ಚರಿತ್ರೆಯ ಕರಾಳ ಅಧ್ಯಾಯ. ಎರಡನೆಯ ಇಂಡೋಚೈನಾ ಯುದ್ಧದ ನಂತರ , 02 ಜುಲೈ 1976 ರಂದು ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ ಪುನ: ಒಂದಾಗಿ ಈಗಿನ ಸಮಾಜವಾದಿ ರಿಪಬ್ಲಿಕ್ ದೇಶ ಉದಯಿಸಿತು.
ಹೀಗೆ ತನ್ನ ಆಡಳಿತಾವಧಿಯ ಬಹುತೇಕ ಸಮಯವನ್ನು ದೇಶದ ರಕ್ಷಣೆ ಹಾಗೂ ಯುದ್ದದ ನಿರ್ವಹಣೆಯಲ್ಲಿ ಕಳೆಯಬೇಕಾಗಿ ಬಂದ ಅಪ್ರತಿಮ ದೇಶಭಕ್ತ ಹೋ ಚಿ ಮಿನ್ಹ್. ಅವರು ಸೆಪ್ಟೆಂಬರ್ 02, 1969 ರಂದು ತಮ್ಮ 79 ನೆಯ ವಯಸ್ಸಿನಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು. ಆ ದಿನ ವಿಯೆಟ್ನಾಂನ ಸ್ವಾತಂತ್ರ್ಯೋತ್ಸವ ದಿನವಾಗಿದ್ದ ಕಾರಣ ದೇಶ ಸಂಭ್ರ ಮಾಚರಣೆಯಲ್ಲಿತ್ತು. ಹಾಗಾಗಿ ಹೋ ಚಿ ಮಿನ್ಹ್ ಅವರ ಮರಣದ ಶೋಕವಾರ್ತೆಯನ್ನು ಒಂದು ದಿನದ ನಂತರ ಬಿತ್ತರಿಸಲಾಯಿತು. ಹೋ ಚಿ ಮಿನ್ಹ್ ಅವರು ತಾನು ಸ್ವಾತಂತ್ರ್ಯ ಘೋಷಿಸಿದ ದಿನವಾದ ಸೆಪ್ಟೆಂಬರ್ 02 ನೇ ತಾರೀಕಿನಂದೇ ಮರಣ ಹೊಂದಿರುವುದು ಅಚ್ಚರಿ ಮೂಡಿಸುವ ಕಾಕತಾಳೀಯ.
ಈಗ ಹನೋಯ್ ಯ ಬಾ ದಿನ್ ಚೌಕದಲ್ಲಿ ಹೋ ಚಿ ಮಿನ್ಹ್ ಅವರ ಸ್ಮಾರಕವಿದೆ. ವಿಶಾಲವಾದ ರಸ್ತೆ, ಅಕ್ಕಪಕ್ಕದಲ್ಲಿ ಸುಂದರವಾದ ಉದ್ಯಾನವನ, ಅಚ್ಚುಕಟ್ಟಾಗಿ ಬೆಳೆಸಿದ್ದ ಮರಗಿಡಗಳ ನಡುವೆ ಗ್ರಾನೈಟ್ ಶಿಲೆಯಲ್ಲಿ ನಿರ್ಮಿಸಲಾದ ಚೌಕಾಕಾರದ ಸಮಾಧಿಯಲ್ಲಿ ಹೋ ಚಿ ಮಿನ್ಹ್ ಅವರ ಭೌತಿಕ ಶರೀರವನ್ನು ಕೆಡದಂತೆ ಸಂಸ್ಕರಿಸಿ, ಸಂರಕ್ಷಿಸಿ ಇರಿಸಿದ್ದಾರೆ. ಅಮೃತಶಿಲೆ ಮಾತು ಗ್ರಾನೈಟ್ ಗಳನ್ನು ಜೋಡಿಸಿದ ಕಲಾತ್ಮಕವಾದ ಪೀಠದ ಮೇಲೆ, ಗಾಜಿನ ಪೆಟ್ಟಿಗೆಯಲ್ಲಿ ಹೊ ಚಿ ಮಿನ್ಹ್ ಅವರ ದೇಹವನ್ನು ಸೇನಾ ಗೌರವ ಲಾಂಛನಗಳೊಂದಿಗೆ ಇರಿಸಿದ್ದಾರೆಂದು ಮಾರ್ಗದರ್ಶಿ ತಿಳಿಸಿದ. ವಾರದಲ್ಲಿ ಐದು ದಿನ ಸ್ಮಾರಕವನ್ನು ವೀಕ್ಷಿಸಲು ಅವಕಾಶವಿರುತ್ತದೆ. ಸೋಮವಾರ ಮತ್ತು ಶುಕ್ರವಾರಗಳಂದು ಸಾರ್ವಜನಿಕರಿಗೆ ಪ್ರವೇಶವಿಲ್ಲ. ನಾವು ಭೇಟಿ ಕೊಟ್ಟಿದ್ದ ದಿನ ಸೋಮವಾರವಾದ ಕಾರಣ ನಮಗೆ ಸ್ಮಾರಕದ ಒಳಗೆ ಪ್ರವೇಶ ಸಿಗಲಿಲ್ಲ. ಕಟ್ಟಡದ ಹೊರಗಡೆ ಇಬ್ಬರು ಶ್ವೇತ ಸಮವಸ್ತ್ರಧಾರಿ ಯೋಧರು ಶಿಲೆಯಂತೆ ನಿಂತಿದ್ದರು. ತಮ್ಮ ರಾಷ್ಟ್ರನಾಯಕನಿಗೆ ಗೌರವ ಸೂಚಿಸುವ ಸಲುವಾಗಿ, ಸರದಿಯಲ್ಲಿ ಇಬ್ಬರು ಯೋಧರು ಒಂದು ಗಂಟೆಯ ಹಾಗೆ ಶಿಲೆಯಂತೆ ಸಮಾಧಿಯ ಮುಂದೆ ನಿಲ್ಲುತ್ತಾರೆ, ಹಾಗೂ ಈ ಅವಕಾಶಕ್ಕಾಗಿ ಹೆಮ್ಮೆ ಪಡುತ್ತಾರೆ ಎಂದು ನಮ್ಮ ಮಾರ್ಗದರ್ಶಿ ತಿಳಿಸಿದ. ಈ ಸಮಾಧಿಯ ಎದುರು ಭಾಗದಲ್ಲಿ ವಿಯೆಟ್ನಾಂನ ಪಾರ್ಲಿಮೆಂಟ್ ಭವನವಿದೆ.
‘ಬಾ ದಿನ್ ಚೌಕ’ದಲ್ಲಿ ನಡೆಯುವಾಗ, ನಮ್ಮ ರಾಜಧಾನಿ ದೆಹಲಿಯ ರಾಜಪಥ್, ಪಾರ್ಲಿಮೆಂಟ್ ಭವನ, ಅಲ್ಲಿ ರಾರಾಜಿಸುವ ರಾಷ್ಟ್ರಧ್ವಜ, ಕೆಂಪುಕೋಟೆ, ರಾಜ್ ಘಾಟ್, ಅಮರ್ ಜವಾನ್ ಜ್ಯೋತಿ ಮುಂತಾದುವುಗಳು ಮನೋಭಿತ್ತಿಯಲ್ಲಿ ಮೂಡಿಬಂದುವು. ದೇಶ ಯಾವುದಾದರೇನು, ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ ನಿಂತಾಗ ಧನ್ಯತಾ ಭಾವ ಉಕ್ಕಿ ಬರುತ್ತದೆ. ಆಯಾ ದೇಶೀಯರಿಗೆ ಅವರವರ ರಾಷ್ಟ್ರವೇ ಶ್ರೇಷ್ಠ. ಸ್ವರಾಜ್ಯ, ಸ್ವಾತಂತ್ರ್ಯ ಎಲ್ಲರ ಜನ್ಮಸಿದ್ಧ ಹಕ್ಕು. ದೇಶ, ಭಾಷೆ, ಸಂಸ್ಕೃತಿ ಯಾವುದೇ ಆಗಿದ್ದರೂ, ಅವರು ಸ್ವಾತಂತ್ರ್ಯ ಪಡೆಯಲು ಅನುಸರಿಸಿದ ದಾರಿ ಯಾವುದೇ ಆಗಿದ್ದರೂ, ದೇಶಕ್ಕಾಗಿ ಹೋರಾಡಿದವರೆಲ್ಲರೂ ಎಂದಿಗೂ ವಂದನೀಯರು. ಹೋ ಚಿ ಮಿನ್ಹ್ ಅವರಿಗೆ ಗೌರವ ನಮನ ಸಲ್ಲಿಸಿ, ಫೊಟೊ ಕ್ಲಿಕ್ಕಿಸಿ ಹೊರಟೆವು.
ಇನ್ನು ನಿಮ್ಮನ್ನು ‘ ಒನ್ ಪಿಲ್ಲರ್ ಪಗೋಡಾ’ ಕಡೆಗೆ ಕರೆದೊಯ್ಯುತ್ತೇನೆ ಅಂದ ಮಾರ್ಗದರ್ಶಿ.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ: https://www.surahonne.com/?p=41298
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಸೊಗಸಾಗಿದೆ
ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡುಹೋಯಿತು.. ಗೆಳತಿ ಚೆನ್ನಾದ ವಿವರಣೆ…
ಹೋ ಚಿ ಮಿನ್ಹ್ ಎಂಬ ಸ್ವಾತಂತ್ರ್ಯ ಹೋರಾಟಗಾರನ ವಿವರವಾದ ವಿಷಯಗಳನ್ನು ಹೊತ್ತ ಈ ಸಲದ ಹೆಜ್ಜೆಯು ಬಹಳಷ್ಟು ಮಾಹಿತಿಗಳನ್ನೂ ಒಳಗೊಂಡಿದೆ…ಧನ್ಯವಾದಗಳು ಮಾಲಾ ಮೇಡಂ.
ವಿಯೆಟ್ನಾಂ ನಾ ಚರಿತ್ರೆಯನ್ನು ಅಮೂಲಾಗ್ರವಾಗಿ ಕಟ್ಟಿಕೊಟ್ಟಿರುವ ಹೇಮಮಾಲಾ ರವರಿಗೆ ಧನ್ಯವಾದಗಳು
ವಿಯಟ್ನಾಂನ ಇತಿಹಾಸದ ಸ್ಥೂಲ ಪರಿಚಯದೊಂದಿಗಿನ ಪ್ರವಾಸಕಥನ ಮನಸ್ಸನಲ್ಲಿ ತನ್ನ ಛಾಪನ್ನು ಮೂಡಿಸಿತು. ಅಭಿನಂದನೆಗಳು.