ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 3
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ಟ್ರಾನ್ ಕ್ವೋಕ್ ಪಗೋಡ
‘ಟ್ರಾನ್ ಕ್ವೋಕ್ ಪಗೋಡ (Tran Quoc Pagoda) ‘ ಎಂಬುದು ವಿಯೆಟ್ನಾಂನ ಹನೋಯ್ ನಗರದಲ್ಲಿರುವ ಪ್ರಾಚೀನವಾದ, ಬಹಳ ಸುಂದರವಾದ ಬೌದ್ಧರ ಆರಾಧನಾ ಮಂದಿರ. ನಮ್ಮ ಮಾರ್ಗದರ್ಶಿ ತಿಳಿಸಿದ ಪ್ರಕಾರ, ಈ ಪಗೋಡಾದ ಮೂಲ ವಾಸ್ತುಶಿಲ್ಪವು ಫ್ರೆಂಚ್ ಶೈಲಿಯಲ್ಲಿದೆ. ಟ್ರಾನ್ ಕ್ವೋಕ್ ಪಗೋಡಾ, ಅಂದರೆ “ರಾಷ್ಟ್ರದ ರಕ್ಷಣೆಯ ಪಗೋಡಾ”, ಎಂಬ ಅರ್ಥವಂತೆ. ಕೆಂಪು ನದಿಯ ದಂಡೆಯಲ್ಲಿರುವ ಈ ಮಂದಿರವನ್ನು, ಮೊತ್ತ ಮೊದಲು, 6 ನೇ ಶತಮಾನದಲ್ಲಿ ಅಂದಿನ ರಾಜನಾಗಿದ್ದ ‘ಲೈ ನಾಮ್ ಡೆ’ (Ly Nam De) ನಿರ್ಮಿಸಿದನು. ಕಾಲಾನಂತರದಲ್ಲಿ, ಪಗೋಡವನ್ನು ನವೀಕರಿಸಲಾಯಿತು ಹಾಗೂ ವಿಸ್ತರಿಸಲಾಯಿತು. ಈ ಪಗೋಡವು ಅನೇಕ ಶತಮಾನಗಳ ಕಾಲ ವಿಯೆಟ್ನಾಂನಲ್ಲಿ ಬೌದ್ಧಧರ್ಮದ ಕೇಂದ್ರವಾಗಿತ್ತು ಮತ್ತು ಪ್ರಮುಖ ವ್ಯಕ್ತಿಗಳು ಹಾಗೂ ಧಾರ್ಮಿಕ ಮುಖಂಡರ ನೆಲೆವೀಡಾಗಿತ್ತು.
ಈಗ ಇರುವ ಪಗೋಡವನ್ನು ಸಾಂಪ್ರದಾಯಿಕ ವಿಯೆಟ್ನಾಮೀಸ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪ್ರಾಂಗಣದಲ್ಲಿ 15 ಮೀಟರ್ ಎತ್ತರದ, 11 ಮಹಡಿಗಳನ್ನು ಹೊಂದಿದ ಕಲಾತ್ಮಕವಾದ ಗೋಪುರವಿದೆ. ಮರದ ಛಾವಣಿ, ಮರದ ಕಂಬಗಳು , ಸನ್ಯಾಸಿಗಳಿಗಾಗಿ ಸಭಾಂಗಣ, ಪ್ರಾರ್ಥನೆಗಾಗಿ ಸಭಾಂಗಣ, ಬುದ್ಧನ ಪ್ರತಿಮೆಗಳು, ಪ್ರತಿಮೆಗಳ ಮುಂದೆ ಇರಿಸಲಾದ ವಿವಿಧ ಹಣ್ಣುಗಳು ಎಲ್ಲವೂ ನಮ್ಮ ಗಮನ ಸೆಳೆಯುತ್ತವೆ.
ಬುದ್ಧನ ವಿಗ್ರಹದ ಎದುರು ನೈವೇದ್ಯಕ್ಕೆ ಇರಿಸಿದಂತೆ ಇಡಲಾಗಿದ್ದ, ಅರಸಿನ ಬಣ್ಣದ , ಕೈಬೆರಳುಗಳಂತೆ ಕಾಣುತ್ತಿದ್ದ ಹಣ್ಣುಗಳನ್ನು ಕಂಡೆವು. ಈ ಬಗ್ಗೆ ಸ್ಥಳೀಯ ಮಾರ್ಗದರ್ಶಿಯನ್ನು ಕೇಳಿದಾಗ ಆತ ಅದು ‘ ಬುದ್ಧಾಸ್ ಫಿಂಗರ್ ಪ್ರುಟ್’ ( ಬುದ್ಧನ ಕೈಬೆರಳು ಹಣ್ಣು) ಎಂದು ತಿಳಿಸಿದ. ವಿಕಿಪೀಡಿಯಾ ಪ್ರಕಾರ, ಇದು ಸಿಟ್ರನ್ ವರ್ಗದ ಒಂದು ಹಣ್ಣು. ಇದರ ಸಸ್ಯಶಾಸ್ತ್ರೀಯ ಹೆಸರು ‘ಸಿಟ್ರಸ್ ಮೆಡಿಕಾ ವಾರ್ ಸಾರ್ಕೋಡಾಕ್ಟೈಲಿಸ್’ (Citrus medica var sarcodactylis, or the fingered citron) .
ಈ ಹಣ್ಣಿನಲ್ಲಿ ತಿನ್ನಲು ಲಭ್ಯವಿರುವ ತಿರುಳು ಅತ್ಯಲ್ಪ ಅಥವಾ ಬಹುತೇಕ ಇಲ್ಲ. ಸಿಪ್ಪೆ ಹಾಗೂ ತಿರುಳು ಸೊಗಸಾದ ಕಿತ್ತಳೆ ಹಣ್ಣಿನ ಪರಿಮಳವನ್ನು ಹೊಂದಿದೆ. ಇದರ ಸುವಾಸನೆಗಾಗಿ, ಸುಗಂಧ ದ್ರವ್ಯಗಳನ್ನು ತಯಾರಿಸಲು ಬಳಕೆಯಾಗುತ್ತದೆಯಂತೆ. ಕೆಲವು ಆಹಾರವಸ್ತುಗಳಿಗೂ ಸುವಾಸನೆಗಾಗಿ ಸೇರಿಸುವರಂತೆ. ಇದರಲ್ಲಿರುವ ಔಷಧೀಯ ಗುಣಗಳಿಂದಾಗಿ, ಸಾಂಪ್ರದಾಯಿಕ ಔಷಧಿಗಳ ತಯಾರಿಕೆಗೂ ಉಪಯೋಗಿಸುವರು. ಮುಚ್ಚಿದ ಕರಗಳ ಆಕಾರದಲ್ಲಿರುವ ಈ ಹಣ್ಣು ಬೌದ್ಧಧರ್ಮದವರಿಗೆ ಶ್ರೇಷ್ಠ. ಕೈಮುಗಿಯುವ ಆಕಾರದಲ್ಲಿರುವುದರಿಂದ ಪ್ರಾರ್ಥನೆ, ಸಂತೋಷ ಹಾಗೂ ಶಾಂತಿಯ ಸಂಕೇತ. ಹಾಗಾಗಿ, ಈ ‘ಬುದ್ಧಾಸ್ ಫಿಂಗರ್’ ಹಣ್ಣನ್ನು ಬುದ್ಧನಿಗೆ ಅರ್ಪಿಸುತ್ತಾರೆ.
ಮಂದಿರದ ಒಂದು ಪಾರ್ಶ್ವದಲ್ಲಿ ದೊಡ್ಡದಾದ ಸರೋವರವಿದೆ. ಸುತ್ತುಮುತ್ತಲು ಹಸಿರು ತಾಣಗಳು ಹಾಗೂ ಅಂಗಡಿ ಮುಂಗಟ್ಟುಗಳಿವೆ. ಈ ಪಗೋಡಾವು ‘ಸರೋವರದಲ್ಲಿರುವ ಗೋಲ್ಡ್ ಫಿಶ್’ ನಂತೆ ಎಂದು ಬಣ್ಣಿಸುತ್ತಾರೆ. ಮಂದಿರದ ಆವರಣದಲ್ಲಿ ಬೃಹತ್ತಾದ ಅರಳೀಮರ ಅಥವಾ ಬೋಧಿವೃಕ್ಷವಿದೆ. ನಮ್ಮ ಮಾರ್ಗದರ್ಶಿ ತಿಳಿಸಿದ ಪ್ರಕಾರ, ಈ ಮರದ ಮೂಲ ಭಾರತದ ಬೋಧಗಯಾದಲ್ಲಿರುವ , ಸಿದ್ಧಾರ್ಥನಿಗೆ ಜ್ಞಾನೋದಯವಾದ ಬೋಧಿವೃಕ್ಷವಾಗಿದೆ. 1959 ರಲ್ಲಿ, ವಿಯೆಟ್ನಾಂನ ಅಧ್ಯಕ್ಷರಾಗಿದ್ದ ಶ್ರೀ ಹೊ ಚಿ ಮಿನ್ಹ್ ಅವರು, ಭಾರತಕ್ಕೆ ಭೇಟಿ ಕೊಟ್ಟಿದ್ದಾಗ, ಅಂದಿನ ರಾಷ್ಟ್ರಪತಿಯಾಗಿದ್ದ ಶ್ರೀ ಬಾಬು ರಾಜೇಂದ್ರ ಪ್ರಸಾದ್ ಅವರು, ಹೊ ಚಿ ಮಿನ್ಹ್ ಅವರಿಗೆ ಉಡುಗೊರೆಯಾಗಿ ಕೊಟ್ಟ ಪವಿತ್ರ ಸಸಿ ಅವರು ಹನೋಯ್ ಯಲ್ಲಿ ನೆಟ್ಟರು . ಬೌದ್ಧಧರ್ಮೀಯರಿಗೆ ಶ್ರೇಷ್ಠವಾದ ಈ ಮರವು , ಭಾರತ ಹಾಗೂ ವಿಯೆಟ್ನಾಂ ದೇಶಗಳ ಸ್ನೇಹ ಮತ್ತು ಸಹಕಾರದ ಸಂಕೇತವೂ ಆಗಿದೆ.
ಟ್ರಾನ್ ಕ್ವೋಕ್ ಪಗೋಡಾ ಪ್ರತಿದಿನ ಬೆಳಗ್ಗೆ 7:30 ರಿಂದ 11:30 ರವರೆಗೆ ಮತ್ತು ಮಧ್ಯಾಹ್ನ 1:30 ರಿಂದ ಸಂಜೆ 5:30 ರವರೆಗೆ ತೆರೆದಿರುತ್ತದೆ. ಇಲ್ಲಿ ಆಸಕ್ತರು ಧ್ಯಾನ ಮಾಡಬಹುದು ಅಥವಾ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಬಹುದು. ಮಂದಿರದ ಎದುರು ದೊಡ್ಡ ಕಡಾಯಿಯಂತಹ ಪಾತ್ರೆಗಳಲ್ಲಿ ಅಗರಬತ್ತಿ ಹಾಗೂ ಧೂಪವನ್ನು ಉರಿಸಿರುವುದನ್ನು ಕಾಣುತ್ತೇವೆ.
ಈ ಬಗ್ಗೆ ನಮ್ಮ ಮಾರ್ಗದರ್ಶಿಯನ್ನು ಕೇಳಿದಾಗ, ಬುದ್ಧನಿಗೆ ನಮ್ಮ ಪ್ರಾರ್ಥನೆ ಆವಿಯ ಮೂಲಕ ತಲಪುತ್ತದೆ. ನಾವು ಅಂತರ್ಜಾಲಕ್ಕೆ ಸಂಪರ್ಕ ಪಡೆಯಲು ಕಂಪ್ಯೂಟರ್ ಬಳಸುವಂತೆ, ಭಕ್ತಿಯಿಂದ ಅಗರಬತ್ತಿಯನ್ನು ಉರಿಸಿ ಆ ಮೂಲಕ ಬುದ್ಧನನ್ನು ಪಾರ್ಥಿಸಿದರೆ, ಅದರ ಆವಿಯ ಮೂಲಕ ಬುದ್ಧನಿಗೆ ಕನೆಕ್ಟ್ ಆಗುತ್ತೇವೆ ಅಂದ. ಈ ಪದ್ಧತಿಗೂ, ನಮ್ಮ ಯಜ್ಞ ಯಾಗಾದಿಗಳಲ್ಲಿ ಅಗ್ನಿಮುಖೇನ ಹವಿಸ್ಸನ್ನು ದೇವರಿಗೆ ಅರ್ಪಿಸುವ ಪದ್ಧತಿಗೂ ಸಾಮ್ಯತೆ ಇದೆ ಅನಿಸಿತು.
ಹನೋಯ್ ಗೆ ಪ್ರಯಾಣಿಸುವವರು, ಚೆಂದದ ಪರಿಸರದಲ್ಲಿರುವ ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ ಟ್ರಾನ್ ಕ್ವೋಕ್ ಪಗೋಡಕ್ಕೆ ಭೇಟಿ ಕೊಡಬಹುದು.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ: https://www.surahonne.com/?p=41253
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಟ್ರಾನ್ ಕ್ವೊಕ್ ಪಗೋಡಾದ ವಿವರಣೆಯನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟ ಲೇಖನ ಬುದ್ಧನ ಬೆರಳುಗಳ ಹಣ್ಣನ್ನೂ ಪರಿಚಯಿತು. ಅಭಿನಂದನೆಗಳು.
ಧನ್ಯವಾದಗಳು
ವಿಯೆಟ್ನಾಂ ಕುರಿತು ಹೊಸ ವಿಚಾರಗಳನ್ನು ಬೆಳಕಿಗೆ ತರುವಂತಹ ಲೇಖನ
ವಂದನೆಗಳು
ಧನ್ಯವಾದಗಳು
ಪ್ರವಾಸ ಸರಣಿಯು ಬಹಳ ಚೆನ್ನಾಗಿ ಮೂಡಿ ಬರುತ್ತಿದೆ ಬುದ್ಧನ ಬೆರಳಿನಾಕಾರದ ಹಣ್ಣು ಬಹಳ ಆಕರ್ಷಣೀಯವಾಗಿದೆ
ಧನ್ಯವಾದಗಳು
ನಿಮ್ಮ ಪ್ರವಾಸ ಲೇಖನ ಓದಲೊಂದು ಸೊಗಸು ಚೆನ್ನಾಗಿ ಬರುತ್ತಿದೆ ಗೆಳತಿ… ಅಭಿನಂದನೆಗಳು..
ಧನ್ಯವಾದಗಳು
ಸೊಗಸಾಗಿದೆ ಪ್ರವಾಸ ಕಥನ
ಧನ್ಯವಾದಗಳು
ವಿಯೆಟ್ನಾಂನ ಟ್ರಾನ್ ಕ್ವೋಕ್ ಪಗೋಡ, ನಮ್ಮಲ್ಲಿಯ ಬಾಳೆಹಣ್ಣಿನಂತೆ ಕಾಣುವ ಬುದ್ಧನ ಬೆರಳು ಹಣ್ಣು ಇತ್ಯಾದಿಗಳ ವಿವರಣಾತ್ಮಕ ಪ್ರವಾಸದ ಹೆಜ್ಜೆಯು ಅತ್ಯಂತ ಕುತೂಹಲಕಾರಿಯಾಗಿದೆ…ಧನ್ಯವಾದಗಳು, ಮಾಲಾ ಅವರಿಗೆ.
ಧನ್ಯವಾದಗಳು
ಕೊಳದ ನೀರಿನಲ್ಲಿ ಪಗೋಡದ ಪ್ರತಿಬಿಂಬ ಮೂಡಿರುವ ಚಿತ್ರದ ಹಿನ್ನಲೆಯಲ್ಲಿ ನಿಮ್ಮ ಬರಹ ಓದಿದರೆ ನಾವೇ ಹೋಗಿ ನೋಡುತ್ತಿರುವಂತೆ ಭಾಸವಾಗುತ್ತದೆ. ಬೆರಳಿನಾಕಾರದ ಹಣ್ಣುಗಳ ವಿವರಣೆ ಓದಿ ಹೇಗಿರಬಹುದು ಅಂದುಕೊಳ್ಳುವಷ್ಟರಲ್ಲಿ ಅದರ ಚಿತ್ರ ಕೂಡ ಕೊಟ್ಟಿದ್ದೀರಾ ಅದನ್ನು ನೋಡಿ ಆಸಕ್ತಿ ತಣಿಯಿತು.ಚೆನ್ನಾಗಿ ಮೂಡಿ ಬರುತ್ತಿದೆ ಪ್ರವಾಸ ಕಥನ