ವರ್ಷಕ್ಕೊಮ್ಮೆ ದರ್ಶನ ನೀಡುವ “ಹಾಸನಾಂಬೆ”!.
ಯಾವುದೇ ದಿನಾಚರಣೆಗಳು, ದೇವರ ಉತ್ಸವಗಳು, ಧಾರ್ಮಿಕ ಹಬ್ಬಗಳಾಗಿರಬಹುದು…. ರಾಷ್ಟ್ರೀಯ ಹಬ್ಬಗಳಾಗಿರಬಹುದು….. ಎಲ್ಲವೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಂಭ್ರಮಾಚರಣೆಗಳಾಗಿರುತ್ತವೆ. ಅದರಲ್ಲೂ ಗ್ರಾಮೀಣ ಭಾಗದ ಜಾತ್ರೆಗಳು ವರ್ಣಿಸಲಸದಲ ಅನುಭವ ನೀಡುತ್ತವೆ.ಅಲ್ಲಿ ಎಲ್ಲಾ ಸಂಭ್ರಮಾಚರಣೆಗಳು ಕೂಡ ಅಡಗಿರುತ್ತವೆ. ಇತ್ತೀಚೆಗೆ ತಾನೇ ವೈಭವದ ವಿಶ್ವವಿಖ್ಯಾತ “ಮೈಸೂರು ದಸರಾ” ಸಾಂಗವಾಗಿ ಸಂಪನ್ನಗೊಂಡಿತು. ಮೈಸೂರು ನವ ವಧುವಿನಂತೆ ಸಿಂಗಾರಗೊಂಡು, ತನ್ನತನ ಮೆರೆಯಿತು. ಯಾವುದೇ ತಾಲೂಕು ಆಗಿರಬಹುದು…. ಜಿಲ್ಲೆ ಆಗಿರಬಹುದು… ರಾಜ್ಯ ಆಗಿರಬಹುದು… ಆಯಾ ಕ್ಷೇತ್ರದ ಜನರ ಜೀವನದೊಂದಿಗೆ ಹಬ್ಬದ ಸಡಗರ, ಇತಿಹಾಸ ಹಾಸಹೊಕ್ಕಾಗಿರುತ್ತದೆ. ಆಯಾ ಭಾಗಗಳ ಸಂಸ್ಕೃತಿ ಸಿಂಚನ ಸಮ್ಮಿಳಿತ ಗೊಂಡಿರುತ್ತದೆ.
ಈಗ ಹಾಸನಾಂಬ ಜಾತ್ರೋತ್ಸವಕ್ಕೆ ಇಡೀ ಹಾಸನ ನಗರ ಸಜ್ಜಾಗಿದೆ, ಈ ದೇವರ ಉತ್ಸವ ಈ ಬಾರಿ ಭಕ್ತಾದಿಗಳ ಉತ್ಸಾಹದ ಸಂಭ್ರಮಾಚರಣೆಗೆ ಮೈಮನ ಸೂರೆಗೊಳ್ಳುತ್ತದೆ. ಅದರಲ್ಲೂ ಈ ಬಾರಿಯ ಹಾಸನಾಂಬ ಮೈಸೂರು ದಸರಾ ಮಾದರಿಯನ್ನೂ ನೆನಪಿಸುತ್ತದೆ. ಏಕೆಂದರೆ ಎಲ್ಲಾ ರಸ್ತೆಗಳು ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿವೆ. ಇಡೀ ಹಾಸನ ನಗರದ ಪ್ರಮುಖ ವೃತ್ತಗಳು, ರಸ್ತೆಗಳು ವೈವಿಧ್ಯಮಯವಾಗಿ ಸಿಂಗಾರಗೊಂಡಿವೆ. ರಸ್ತೆ ಎರಡು ಕಡೆಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರ ನವ ವಧುವಿನಂತೆ ಸಿಂಗಾರಗೊಂಡು ಎಲ್ಲರ ಗಮನ ಸೆಳೆಯುತ್ತಿವೆ. ಅದರಲ್ಲೂ ದೇವಾಲಯದ ಒಳ ಹೊರಗೂ ಸಿಂಗಾರ. ಹೂವಿನ ಅಲಂಕಾರ ವರ್ಣರಂಜಿತ ವಿದ್ಯುತ್ ದೀಪಗಳಿಂದ ರಂಗೇರಿಸುವಂತೆ ಮಾಡಿದೆ. ಹಾಸನಾಂಬೆ ಜಾತ್ರೆ ರೀತಿಯ ಮಹೋತ್ಸವ ಅಕ್ಟೋಬರ್- 24 ರಿಂದ ಪ್ರಾರಂಭಗೊಂಡು ನವೆಂಬರ್- 3 ರವರಿಗೂ ಹಾಸನಾಂಬ ದೇವಿಯ ದರ್ಶನ ಇರುತ್ತದೆ. ಆದರೆ ಅಕ್ಟೋಬರ್ 24 ಮತ್ತು ನವೆಂಬರ್ 3 ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದ ಎಲ್ಲಾ ದಿನಗಳಲ್ಲೂ ಕೂಡ ದಿನದ 24 ಗಂಟೆಗಳ ಕಾಲ ದರ್ಶನಕ್ಕೆ ಅವಕಾಶ ಇರುತ್ತದೆ ಎಂದು ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದ್ದಾರೆ. ಈಗ ಈ ವೈಭವದ ಹಾಸನಾಂಬೆ ದೇವಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಪ್ರಾರಂಭವಾಗಿರುವುದರಿಂದ ಒಂದು ರೀತಿಯಲ್ಲಿ ಎಲ್ಲೆಡೆ ಹಬ್ಬದ ವಾತಾವರಣ.
ವರ್ಷಕ್ಕೊಮ್ಮೆ ದೇವಿಯ ದರ್ಶನ ಪಡೆಯಲು ಭಕ್ತಾದಿಗಳ ಕುತೂಹಲ ಹೆಚ್ಚುತ್ತಿದೆ. ಸಾಕಷ್ಟು ಕಾಲಾವಕಾಶ ಇರುವುದರಿಂದ ತಮಗೆ ಅನುಕೂಲ ವಾಗುವ ದಿನಗಳಂದು ದೇವಿ ದರ್ಶನ ಪಡೆಯಬಹುದು. ಈ ದೇವಿಯ ದರ್ಶನಕ್ಕೆ ಕೇವಲ ರಾಜ್ಯವಲ್ಲದೆ… ಅಂತರ ರಾಜ್ಯಗಳಿಂದಲೂ ಕೂಡ ಭಕ್ತಾದಿಗಳು ಆಗಮಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹಾಸನ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ. ದೇವಾಲಯದ ಪ್ರಾಂಗಣದಲ್ಲಿ ಸ್ಟೀಲ್ ಬ್ಯಾರಿಕೇಡ್ ಗಳನ್ನು ಅಳವಡಿಸಿ ರುವುದರಿಂದ ಭಕ್ತಾದಿಗಳು ಸುಗಮವಾಗಿ ದೇವಿಯ ದರ್ಶನ ಮಾಡಲು ನೆರವಾಗಿದೆ. ಪ್ರಮುಖ ಸ್ಥಳಗಳಲ್ಲಿ ಹಾಸನಾಂಬೆ ಯ ಪೂಜಾ ಮಹೋತ್ಸವದ ನೇರ ಪ್ರಸಾರ ಎಲ್ಇಡಿ ಮೂಲಕ ಅಳವಡಿಸಲಾಗಿದೆ. ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಹಲವು ಕಡೆ ಪ್ರಸಾದ ವ್ಯವಸ್ಥೆಯು ಕೂಡ ಇರುತ್ತದೆ. ಸಾವಿರಾರು ಜನರು ಬರುವುದರಿಂದ ಸ್ವಲ್ಪ ಸರತಿಯ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕು. ಇದೊಂದು ಭಕ್ತಾದಿಗಳಿಗೆ ಸಮಸ್ಯೆ ಆಗಬಹುದು!.
ದೇವಿಯ ಪೌರಾಣಿಕ ಹಿನ್ನಲೆ ಪ್ರತಿಯೊಬ್ಬರಿಗೂ ಕೂಡ ರೋಮಾಂಚನ ಅನುಭವ ನೀಡುವುದರೊಂದಿಗೆ ಭಕ್ತಿಭಾವ ಮೂಡಿಸುತ್ತದೆ. ವರ್ಷಕ್ಕೊಮ್ಮೆ ಕಾರ್ತಿಕ ಮಾಸದಲ್ಲಿ ತೆರೆಯುವ ಹಾಸನಾಂಬ ದೇಗುಲ ಈ ಬಾರಿ ಒಂಬತ್ತು ದಿನ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅಕ್ಟೋಬರ್ 24ರಂದು ಅಂದರೆ ಗುರುವಾರ ಶ್ರೀ ಆದಿಚುಂಚನಗಿರಿಯ ಪೀಠಾಧಿಪತಿ, ಡಾ. ಶ್ರೀ ನಿರ್ಮಲಾನಂದ ಸ್ವಾಮಿ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ದೇಗುಲದ ಬಾಗಿಲು ತೆರೆದು ಪೂಜಿ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ದೇವ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಈ ಬಾರಿಯ ವಿಶೇಷ ದರ್ಶನಕ್ಕೆ ವಿವಿಐಪಿ ಗೆ 1000 ರೂಗಳು ವಿಐಪಿ ಗೆ 300 ರೂಪಾಯಿಗಳ ಟಿಕೆಟ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಇನ್ನೊಂದು ವಿಶೇಷವೆಂದರೆ ಫಲಪುಷ್ಪ ಪ್ರದರ್ಶನ ಮತ್ತು ಹೆಲಿಕ್ಯಾಪ್ಟರ್ ಮೂಲಕ ಹಾಸನ ನೋಡುವ ಹೆಲಿಟೂರಿಸಂ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಜೊತೆಗೆ ಕೆಎಸ್ಆರ್ಟಿಸಿ ಬಸ್ಸಿನ ಮೂಲಕ ಹಾಸನ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನ ನೋಡುವ ಟೂರ್ ಪ್ಯಾಕೇಜ್ ಕೂಡ ಇರಲಿದೆ.
ಹಾಸನಾಂಬ ದೇವಿಯ ದರ್ಶನದ ನೆಪದಲ್ಲಿ ಇಡೀ ಹಾಸನ ಜಿಲ್ಲೆಯ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ. ಎರಡು ದಿನ ಬಿಡುವು ಮಾಡಿಕೊಂಡು ಬಂದರೆ ಇವೆಲ್ಲವನ್ನೂ ನೋಡಬಹುದಾಗಿದೆ. ಹಾಸನಾಂಬೆಯ ದೇಗುಲದ ಬಾಗಿಲು ವರ್ಷಕ್ಕೊಮ್ಮೆ 7 ದಿನಗಳಿಗಿಂತ ಕಡಿಮೆ ಮತ್ತು 16 ದಿನಗಳಿಗಿಂತ ಹೆಚ್ಚು ದಿನ ತೆರೆಯುವುದಿಲ್ಲ ಇದೊಂದು ವಿಶೇಷ!. ದೇವಿ ಎದುರು ಪ್ರಾಣಿಗಳಿಗೆ ಅವಕಾಶ ಇರುವುದಿಲ್ಲ. ಹಾಗಾಗಿ ದೇಗುಲ ತೆರೆಯುವ ಸಂದರ್ಭದಲ್ಲಿ ಬಾಳೆಕಂದು ಕಡಿದು ಶಾಂತಿ ಮಾಡುತ್ತಾರೆ. ಇದು ಕೂಡ ಒಂದು ವಿಶೇಷ. ಬಾಗಿಲ ಮರೆಯಲ್ಲಿ ಇರುವ ದೇವಿ ಒಮ್ಮೆಲೇ ಬೀರುವ ದೃಷ್ಟಿಯು ಕ್ರೂರವಾಗಿರುತ್ತದೆ ಎನ್ನುವ ನಂಬಿಕೆಯೂ ಕೂಡ ಇರುವುದರಿಂದ ಭಕ್ತರಿಗೆ ಆ ರೀತಿಯ ತೊಂದರೆ ಆಗಬಾರದು ಎನ್ನುವ ಕಾರಣ ಕಡಿಯಲಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಕೊನೆಯ ದಿನ ಪೂಜೆ ಸಲ್ಲಿಸಿದ ಬಳಿಕ ಗರ್ಭಗುಡಿಯ ಬಾಗಿಲು ಮುಚ್ಚುವ ಸಂದರ್ಭದಲ್ಲಿ ದೇವಿಗೆ ಹೂಗಳನ್ನು ಅರ್ಪಿಸಿ, ದೀಪವನ್ನು ಹಚ್ಚಲಾಗುತ್ತದೆ.
ಸಪ್ತ ಮಾತೃಕೆಯರು ವಾರಣಾಸಿಯಿಂದ ದಕ್ಷಿಣದ ಕಡೆಗೆ ವಾಯುವಿಹಾರಕ್ಕಾಗಿ ಬಂದರೆಂಬುದರ ಪ್ರತೀತಿ ಇದೆ. ಜೊತೆಗೆ ಸಪ್ತಮಾತೃಕೆಯರಾದ ಬ್ರಾಹ್ಮೀ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ ಇವರನ್ನು ಎಲ್ಲರೂ ಕೂಡ ನೆನಪಿಸಿಕೊಳ್ಳುತ್ತಾರೆ. ಸಪ್ತ ಮಾತೃಕೆಯರಲ್ಲಿ ವೈಷ್ಣವಿ, ಮಹೇಶ್ವರಿ ಮತ್ತು ಕೌಮಾರಿ ದೇವಿಯರು ಈ ದೇವಾಲಯದಲ್ಲಿ ಹುತ್ತದ ರೂಪದಲ್ಲಿದ್ದಾರೆ. ಬ್ರಹ್ಮದೇವಿಯು ಆಲೂರು ತಾಲೂಕು ಕೆಂಚಮ್ಮನ ಹೊಸಕೋಟೆಯಲ್ಲಿ, ಚಾಮುಂಡಿ, ವಾರಹಿ ಮತ್ತು ಇಂದ್ರಾಣಿಯು ನಗರದ ಮಧ್ಯಭಾಗದಲ್ಲಿರುವ ದೇವಿಗೆರೆಯಲ್ಲಿ ನೆಲೆಸಿದ್ದಾರೆ.
ಹಾಸನಾಂಬೆಗೆ ಅನೇಕ ಪೌರಾಣಿಕ ಹಿನ್ನೆಲೆಯೂ ಕೂಡ ಇದೆ. ಬಾಗಿಲು ತೆಗೆಯುವ ದಿನ ಹಾಸನದಲ್ಲಿ ನೆಲೆಸಿರುವ ತಾಳವಾರ ಮನೆತನದವರು ದೇವಿಯ ಎದುರಿಗೆ ನೆಡಲಾಗಿರುವ ಬಾಳೆಕಂದನ್ನು ಭಕ್ತಿ ಭಾವದಿಂದ ಕತ್ತರಿಸಿದ ನಂತರ ದೇವಾಲಯ ಗರ್ಭಗುಡಿಯ ಬಾಗಿಲನ್ನು ತೆಗೆಯುವ ಪದ್ಧತಿ ಇಂದಿಗೂ ಕೂಡ ರೂಢಿಯಲ್ಲಿದೆ. ಹಾಸನ ಜಿಲ್ಲೆಯ ಹೆಸರಿನೊಂದಿಗೆ ಈ ದೇವತೆ ನೆಲೆಗೊಂಡಿದ್ದಾಳೆ. ಹಾಸನಾಂಬೆಯಾಗಿ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಕಾಪಾಡುತ್ತ ಬರುತ್ತಿದ್ದಾಳೆ.
ದೇವಿಯ ಬಾಗಿಲು ಮುಚ್ಚುವ ದಿನ ಹಚ್ಚಿದ ದೀಪ ಆರುವುದಿಲ್ಲ…. ದೇವಿಗೆ ಮುಡಿಸಿರುವ ಹೂವು ಬಾಡುವುದಿಲ್ಲ…. ಇದೊಂದು ಹಾಸನಾಂಬೆ ದೇವಿಯ ಮತ್ತೊಂದು ಮಹಿಮೆ ಹಾಗೂ ದೇವಾಲಯದಲ್ಲಿ ನಡೆದು ಬಂದ ಪ್ರತೀತಿ. ವರ್ಷಕ್ಕೊಮ್ಮೆ ಬರುವ ದೇವಿಯ ದರ್ಶನ ಆಶ್ವಯುಜ ಮಾಸದ ಹುಣ್ಣಿಮೆಯ ನಂತರ ಈ ಗುರುವಾರದಂದು 24.10.2024 ಬಾಗಿಲು ತೆರೆದರೆ ನಂತರ ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚುತ್ತಾರೆ. ಪುನಃ ಒಂದು ವರ್ಷದ ಕಾಲ ದೇವಿಯ ದರ್ಶನ ಇರುವುದಿಲ್ಲ. ಇದೊಂದು ಹಾಸನಾಂಬೆಯ ವಿಶೇಷಗಳಲ್ಲಿ ವಿಶೇಷ.
ಮೊದಲೇ ಹೇಳಿದಂತೆ ಮತ್ತೊಂದು ಸಂಗತಿ ಎಂದರೆ…… ಗರ್ಭಗುಡಿಯ ಬಾಗಿಲನ್ನು ತೆರೆದ ಕೂಡಲೇ ದೇವಿಯ ದರ್ಶನವನ್ನು ಮಾಡಲು ಭಕ್ತಾದಿಗಳಿಗೆ ಯಾವತ್ತೂ ಕೂಡ ಅವಕಾಶವಿರುವುದಿಲ್ಲ. ಅರಸು ಕುಟುಂಬದವರು ಬಾಳೆ ಗಿಡವನ್ನು ಕಡಿದ ನಂತರ ಅವರೆಲ್ಲ ಪೂಜೆ ಮಾಡಿದ ನಂತರ ಮಾರನೇ ದಿನ ಭಕ್ತಾದಿಗಳ ಪ್ರವೇಶ ಪ್ರಾರಂಭವಾಗುವುದು. ಹೀಗೆ ಮಾಡದಿದ್ದರೆ ಏನಾದರೊಂದು ತೊಂದರೆಯಾಗುತ್ತದೆ ಎಂಬ ನಂಬಿಕೆಯು ಕೂಡ ಭಕ್ತಾದಿಗಳ ಮನದಲ್ಲಿ ಅಡಗಿದೆ.
ದೇವಿಯ ಕುರಿತಾಗಿ ಹಲವು ಚಾರಿತ್ರಿಕ ಘಟನೆಗಳು ಕೂಡ ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿವೆ. ಒಮ್ಮೆ ದೇವಿಯ ಆಭರಣಗಳನ್ನು ಅಪಹರಿಸಲು ಸಲುವಾಗಿ ಹೊಂಚು ಹಾಕಿ ನಾಲ್ಕು ಜನ ಕಳ್ಳರು ದೇವಾಲಯದ ಒಳಗೆ ನುಗ್ಗಿ….. ಆಭರಣಗಳಿಗೆ ಕೈ ಹಾಕಿದಾಗ ಇದರಿಂದ ಕೋಪಗೊಂಡ ದೇವಿ ನಾಲ್ಕು ಮಂದಿ ಕಳ್ಳರಿಗೂ ಶಾಪ ಹಾಕಿದ್ದರ ಫಲವಾಗಿ ಇವತ್ತಿಗೂ ಕೂಡ ಆ ನಾಲ್ಕು ಜನ ಕಳ್ಳರು ಕಲ್ಲಾಗಿದ್ದಾರೆ!. ಇಲ್ಲಿ ಕಳ್ಳತನ ಮಾಡಲು ಬಂದಂತಹ ಆ ನಾಲ್ವರು ಕಳ್ಳರಿಗೂ ಕೂಡಾ ಗುಡಿ ನಿರ್ಮಾಣವಾಗಿದೆ. ಅದು “ಕಳ್ಳಪ್ಪನ ಗುಡಿ” ಎಂದು ಕೂಡ ಇವತ್ತಿಗೂ ನಾವು ದೇವಾಲಯದ ಆವರಣದಲ್ಲಿ ನೋಡಬಹುದು.
ಹಾಸನಾಂಬ ದೇವಾಲಯ ದ್ವಾರ ಪ್ರವೇಶ ಮಾಡಿದರೆ ಸಿದ್ದೇಶ್ವರ ಸ್ವಾಮಿ ದೇವಾಲಯ ಕಾಣಸಿಗುತ್ತದೆ. ಅರ್ಜುನನಿಗೆ ಪಾಶುಪತಾಸ್ತ್ರ ಕೊಡುವ ಆಕಾರದಲ್ಲಿನ ಚಿತ್ರಣ ಕೂಡ ಕಣ್ಮುಂದೆ ಕಾಣುತ್ತದೆ. ಜೊತೆಗೆ ದೇವಾಲಯದ ಆವರಣದಲ್ಲಿ 108 ಲಿಂಗವನ್ನು ಒಂದೇ ಸಲ ನೋಡುವ ಅವಕಾಶ ಕೂಡ ಭಕ್ತರಿಗೆ ಸಿಗುತ್ತದೆ. ಗುಡಿಯ ಮೇಲ್ಭಾಗದಲ್ಲೂ ಕೂಡ ನಾಲ್ಕು ಅಡಿ ಎತ್ತರದ ಮಹಾಲಿಂಗ ಕೂಡ ಇದೆ.
ದೇವಾಲಯದ ಬಾಗಿಲನ್ನು ತೆರೆಯುವುದಕ್ಕೆ ಮುಂಚೆ ಅರಸು ಕುಟುಂಬದವರು ತಮ್ಮ ಪೂಜಾ ವಿಧಾನಗಳೊಂದಿಗೆ ಅತ್ಯಂತ ಭಯ- ಭಕ್ತಿಯಿಂದ ಎಲ್ಲರಿಗೂ ಒಳಿತ ಆಗುವ ದೃಷ್ಟಿಯಿಂದ ಸೇವೆ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಈ ಬಾರಿ ಹಾಸನಾಂಬ ದೇವಿಯ ದರ್ಶನವನ್ನು ಎಲ್ಲಾ ಭಕ್ತಾದಿಗಳು ಉತ್ಸವದಲ್ಲಿ ಭಾಗಿಯಾಗಬಹುದು. ದೇವಿಯ ದರ್ಶನ….. ದೇವಿಯ ಇತಿಹಾಸ….. ದೇವಾಲಯದ ಒಳ- ಹೊರಗಿನ ವೈಶಿಷ್ಟ್ಯ….. ಸಪ್ತ ಮಾತೃಕೆಯರ ಇತಿಹಾಸ….. ಹೀಗೆ ಎಲ್ಲವೂ ಕೂಡ ಭಕ್ತಾದಿಗಳ ಮೈಮನಗಳಿಗೆ ರೋಮಾಂಚನವನ್ನುಂಟು ಮಾಡುವುದರ ಜೊತೆಗೆ ಭಕ್ತಿ- ಭಾವ ಮೂಡಿಸುತ್ತದೆ.
ನಾನು ಕೂಡ ಮೂರ್ನಾಲ್ಕು ಬಾರಿ ದೇವಿಯ ಉತ್ಸವದಲ್ಲಿ ಪಾಲ್ಗೊಂಡಿದ್ದೇನೆ. ಸರತಿಯ ಸಾಲಿನಲ್ಲಿ ತಾಳ್ಮೆಯಿಂದ ನಿಂತು, ದೇವಿಯ ದರ್ಶನ ಮಾಡುವುದೇ ಒಂದು ರೀತಿಯಲ್ಲಿ ಹೆಮ್ಮೆ ಉಂಟುಮಾಡುತ್ತದೆ. ಬೆಳಿಗ್ಗೆ ಬೇಗ ಸರತಿಯ ಸಾಲಿನಲ್ಲಿ ನಿಂತರೆ ಮಧ್ಯಾಹ್ನದಷ್ಟರಲ್ಲಿ ದರ್ಶನ ಮಾಡಬಹುದು. ಈ ಬಾರಿ ಹೆಚ್ಚು ಜನ ಬರುವ ನಿರೀಕ್ಷೆ ಇರುವುದರಿಂದ ಹಾಸನ ಜಿಲ್ಲಾಡಳಿತ ಪೊಲೀಸ್ ಎಲ್ಲವೂ ಸೇರಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಹಾಸನದ ಹಾಸನಾಂಬೆ ದರ್ಶನದ ನೆಪದಲ್ಲಿ ಚಿಕ್ಕ ಪ್ರವಾಸವನ್ನು ಕೂಡ ಮಾಡಬಹುದು. ಹಾಸನದ ಸುತ್ತಮುತ್ತ ಇರುವ ಯಾತ್ರ ಸ್ಥಳಗಳನ್ನು ಸ್ವಂತ ವಾಹನದಲ್ಲಿ ಬಂದರೆ ವೀಕ್ಷಣೆ ಮಾಡಿ ಹಿಂದಿರುಗಬಹುದು.
ಒಟ್ಟಿನಲ್ಲಿ ದಸರಾದ ಸವಿ ಸವಿ ಜಂಬೂಸವಾರಿಯ ಮೆರವಣಿಗೆ ನೆನಪಿನಲ್ಲಿರುವಾಗಲೇ ಹಾಸನಾಂಬೆಯ ದರ್ಶನ ಮತ್ತೊಮ್ಮೆ ನಮ್ಮಲ್ಲಿ ಭಕ್ತಿ-ಭಾವ ಮೂಡಿಸುತ್ತದೆ.
-ಕಾಳಿಹುಂಡಿ ಶಿವಕುಮಾರ್, ಮೈಸೂರು
ಚೆನ್ನಾಗಿದೆ. ಉತ್ತಮ ಮಾಹಿತಿಯಿಂದ ಕೂಡಿದೆ
ನಿಮ್ಮ ಅಭಿಪ್ರಾಯ ಕ್ಕೆ ಧನ್ಯವಾದಗಳು.
ಹಾಸನಾಂಬ ದೇವಿಯ ಬಗ್ಗೆ ವಿಚಾರಪೂರ್ಣವಾದ ಲೇಖನ ಚೆನ್ನಾಗಿ ಬಂದಿದೆ ಸಾರ್..
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಸಮಯೋಚಿತ ಬರೆಹ, ಧನ್ಯವಾದಗಳು ಸರ್
ಹಾಸನದ ಪ್ರಸಿದ್ಧ ಹಾಸನಾಂಬ ದೇವಾಲಯದ ಕುರಿತ ವಿಸ್ತೃತ ಲೇಖನವು ಸಾಕಷ್ಟು ಮಾಹಿತಿಗಳನ್ನು ಒಳಗೊಂಡು ಸುಂದರವಾಗಿ ಮೂಡಿಬಂದಿದೆ…ಧನ್ಯವಾದಗಳು.
ಹಾಸನಾಂಬೆಯ ದೇವಾಲಯದ ಎಲ್ಲ ವಿವರಗಳನ್ನೂ ತಿಳಿಸಿಕೊಡುವ ಸುಂದರ ಸಂದರ್ಭೋಚಿತ ಲೇಖನ. ಅಭಿನಂದನೆಗಳು.