ಅಧಿಕ ವರ್ಷ- ಒಂದು ಪಕ್ಷಿನೋಟ
‘ಕೆಲವಂ ಬಲ್ಲವರಿಂದ ಕಲ್ತು’ ಅನ್ನುವ ಮಾತಿನಂತೆ ಕೆಲವೊಂದು ವಿಷಯಗಳನ್ನು ನಾವು ಕೇಳಿ ತಿಳಿದಿರುತ್ತೇವೆ. ಇನ್ನು ಕೆಲವನ್ನು ಓದಿ ತಿಳಿದಿರುತ್ತೇವೆ. ನಮ್ಮ ಮನಸ್ಸಿಗೆ ಸರಿ ಅನ್ನಿಸಿದ ವಿಷಯದ ಬಗ್ಗೆ/ಸಂಶಯವಿಲ್ಲದ ವಿಷಯಗಳ ಜಾಸ್ತಿ ಕೆದಕಲು ಹೋಗುವುದಿಲ್ಲ, ಜಾಸ್ತಿ ಯೋಚನೆಯೂ ಮಾಡುವುದಿಲ್ಲ. ಆದರೆ ಸಂಶಯವಿರುವ ವಿಷಯಗಳಾದರೆ ಆ ವಿಷಯದ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ತೋರಿಸುತ್ತೇವೆ. ಯಾವುದೇ ಮಾಹಿತಿಯ ಬಗ್ಗೆ ಸಂಪೂರ್ಣ ನಂಬಿಕೆ ಬರಬೇಕಾದರೆ ಆ ವಿಷಯಕ್ಕೆ ಸಂಬಂಧಿಸಿದ ವೈಜ್ಞಾನಿಕ ದೃಷ್ಟಿಕೋನದಿಂದಲೂ ಅವಲೋಕನ ಮಾಡುವುದು ಅವಶ್ಯಕವಾಗಿದೆ. ಯಾವುದೇ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಹುಡುಕಲು ಹೊರಟಾಗ ನಮಗೆ ಇಲ್ಲಿಯ ತನಕ ಗೊತ್ತಿಲ್ಲದ ವಿಷಯಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಅದಕ್ಕೇ ನಮ್ಮ ಪೂರ್ವಜರು ಹೇಳಿದ್ದು ಕೂಪಮಂಡೂಕದಂತಿರಬಾರದು- ಬಾವಿಯಿಂದ ಹೊರಗೆ ಬಂದರೆ ಮಾತ್ರ ಹೊರಪ್ರಪಂಚದ ದರ್ಶನವಾಗುವುದು. ಇಷ್ಟೆಲ್ಲಾ ಹೇಳಲು ಕೂಡಾ ಒಂದು ಕಾರಣವಿದೆ. ನಾನೀಗ ವರ್ಷದಲ್ಲಿ 366 ದಿನಗಳಿರುವ ಅಧಿಕ ವರ್ಷದ ಬಗ್ಗೆ ಬರೆಯಲು ಹೊರಟಿದ್ದೇನೆ. ಸಾಮಾನ್ಯ ವರ್ಷಗಳ ಫೆಬ್ರವರಿ ತಿಂಗಳಿನಲ್ಲಿ 28 ದಿನಗಳಾದರೆ, ಅಧಿಕ ವರ್ಷದ ಫೆಬ್ರವರಿ ತಿಂಗಳಿನಲ್ಲಿ 29 ದಿನಗಳಿರುತ್ತವೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಅಧಿಕ ವರ್ಷ ಬರುತ್ತದೆ. ಹಾಗೂ ಅಧಿಕ ವರ್ಷದ ಇಸವಿಯನ್ನು ನಾಲ್ಕರಿಂದ ಭಾಗಿಸಿದರೆ ಯಾವ ಶೇಷವೂ ಉಳಿಯುವುದಿಲ್ಲವೆಂದು ನಾವೆಲ್ಲರೂ ಓದಿದ್ದೇವೆ.
ಕಾರಣವಿಲ್ಲದೆ ಯಾವ ವಿಚಾರವೂ ಹೊಳೆಯುವುದಿಲ್ಲ. ಹಾಗೆಯೇ ಈ ಅಧಿಕ ವರ್ಷದ ಬಗ್ಗೆ ತಿಳಿದುಕೊಳ್ಳುವುದು ಇನ್ನೂ ಇದೆ ಅಂತ ಅನ್ನಿಸಲು ಕೂಡಾ ಕಾರಣವಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನುಸಾರ ರೂಪಿಸಿರುವ ಪದವಿ ಪಠ್ಯಕ್ರಮದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನೆರವಾಗುವ Employability Skills ಕೂಡಾ ಸೇರಿಸಲಾಗಿದೆ. ಆ ಪಠ್ಯಕ್ರಮವನ್ನು ಬೋಧಿಸುವ ಅವಕಾಶ ಈ ವರ್ಷ ಸಿಕ್ಕಿತು. Clock and Calendar ಗೆ ಸಂಬಂಧಿಸಿದ ವಿಷಯಗಳನ್ನು ಕಲಿಸುವಾಗ ಯಾವುದೋ ಒಂದು ಇಸವಿಯ ಯಾವುದೋ ತಿಂಗಳಿನ ಒಂದು ದಿನಾಂಕ ವಾರದ ಯಾವ ದಿನ ಬರುತ್ತದೆ ಅನ್ನುವ ಪ್ರಶ್ನೆಯ ಬಗ್ಗೆ ವಿವರಿಸಬೇಕಿತ್ತು. 2011 ನೇ ಇಸವಿಯ ಜನವರಿ ತಿಂಗಳ ಹತ್ತನೇ ತಾರೀಕು ಸೋಮವಾರ ಬಂದಿದೆ ಎಂದಿಟ್ಟುಕೊಳ್ಳೋಣ. 2012 ರಲ್ಲಿ ಅದೇ ತಾರೀಕು ಯಾವಾಗ ಬರುತ್ತದೆ ಎಂದು ಕೇಳಿದರೆ ಮಂಗಳವಾರ ಎಂಬ ಉತ್ತರ ಎಲ್ಲರೂ ನೀಡುತ್ತೀರಿ. 2011 ನೇ ಇಸವಿಯ ಮಾರ್ಚ್ ತಿಂಗಳ ಹತ್ತನೇ ತಾರೀಕು ಸೋಮವಾರ ಬಂದಿದೆ ಎಂದಿಟ್ಟುಕೊಳ್ಳೋಣ. ಅದೇ 2012 ರಲ್ಲಿ ಅದೇ ತಾರೀಕು ಯಾವಾಗ ಬರುತ್ತದೆ ಎಂದು ಕೇಳಿದರೆ ಬುಧವಾರ ಎಂಬ ಉತ್ತರ ಎಲ್ಲರೂ ನೀಡುತ್ತೀರಿ. ಕಾರಣವಿಷ್ಟೇ. 2012 ಅಧಿಕ ವರ್ಷವಾದ ಕಾರಣ, ಮಾರ್ಚ್ 1 ರ ನಂತರದ ಯಾವುದೇ ದಿನಾಂಕ ತೆಗೆದುಕೊಂಡರೂ ಒಂದರ ಬದಲು ಎರಡು ದಿನ ಹೆಚ್ಚುವರಿಯಾಗಿ ತೆಗೆದುಕೊಳ್ಳುವೆವು ತಾನೇ?
ಇಂತಹ ಲೆಕ್ಕಗಳನ್ನು ಕಲಿಸಲು ಹೊರಟಾಗ ಸ್ವಾಭಾವಿಕವಾಗಿಯೇ ಅಧಿಕ ವರ್ಷದ ಬಗ್ಗೆ ಇನ್ನೂ ತಿಳಿದುಕೊಳ್ಳುವ ಆಸಕ್ತಿ ಮೂಡಿತು. ಅಧಿಕ ವರ್ಷದ ಬಗೆಗಿನ ವೈಜ್ಞಾನಿಕ ಮಾಹಿತಿಗಳನ್ನು ಕೂಡಾ ಓದಿದೆ. ಅಧಿಕ ವರ್ಷದಲ್ಲಿ ಫೆಬ್ರವರಿ ತಿಂಗಳಿನಲ್ಲಿ 29 ದಿನವೆಂದು ತೆಗೆದುಕೊಳ್ಳುವ ಪರಿಪಾಠ ಇದ್ದರೂ ಕೂಡಾ ಫೆಬ್ರವರಿ 29 ಅನ್ನುವ ತಾರೀಕು ಉಪಯೋಗಿಸುತ್ತಿರಲಿಲ್ಲವೆಂದೂ ಅದರ ಬದಲಾಗಿ ಫೆಬ್ರವರಿ ತಿಂಗಳಿನಲ್ಲಿ ಎರಡು ದಿನಗಳನ್ನು ಫೆಬ್ರವರಿ 24 ಎಂದು ಗಣನೆಗೆ ತೆಗೆದುಕೊಳ್ಳುತ್ತಿದ್ದರೆಂಬ ಮಾಹಿತಿ ಓದಿದಾಗ ಅಚ್ಚರಿಪಡುವ ಸರದಿ ನನ್ನದಾಗಿತ್ತು. ಆದರೆ ವರ್ಷದಲ್ಲಿರುವ ದಿನಗಳ ಎಣಿಕೆ ಸಂದರ್ಭ ಫೆಬ್ರವರಿ 24 ನ್ನು ಒಂದೇ ಬಾರಿ ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತಂತೆ. 1700, 1800, 1900, 2100 ಮುಂತಾದ ವರ್ಷಗಳ (ಅಂದರೆ ನೂರರಿಂದ ಭಾಗಿಸಲ್ಪಡುವ ವರ್ಷಗಳು) ಇಸವಿಯನ್ನು ನಾಲ್ಕರಿಂದ ಭಾಗಿಸಿದಾಗ ಶೇಷ ಬರುವುದಿಲ್ಲವಾದರೂ ಆ ವರ್ಷಗಳು ಅಧಿಕವರ್ಷಗಳಲ್ಲವೆನ್ನುವ ಮಾಹಿತಿ ಗೊತ್ತಾಯಿತು. 100 ರಿಂದ ಭಾಗಿಸಲ್ಪಡುವ ಆದರೆ 400ರಿಂದ ಭಾಗಿಸಲಾಗದ ವರ್ಷಗಳನ್ನು “ಅಸಾಧಾರಣ ಸಾಮಾನ್ಯ ವರ್ಷ” ಗಳೆಂದು ಹೇಳುತ್ತಾರೆ. ಈ ಗಣನೆಗೆ ಉಪಯೋಗಿಸಿದ ಗಣಿತದ ಸೂತ್ರವನ್ನು “ಝೆಲ್ಲರ್ಸ್ ಕಾಂಗ್ರುಯೆನ್ಸ್” Zeller’s Congruence) ಎಂದು ಕರೆಯುತ್ತಾರೆ. ಶತಮಾನ ಪೂರ್ತಿಯಾಗುವ ಇಸವಿ ಅಧಿಕ ವರ್ಷವಾಗಬೇಕಿದ್ದರೆ ಆ ವರ್ಷದ ಇಸವಿಯನ್ನು 400 ರಿಂದ ಭಾಗಿಸಿದಾಗ ಶೇಷ ಇರಬಾರದು. ಹಾಗಾಗಿ 2000 ಇಸವಿ ಅಧಿಕವರ್ಷ. ಆದರೆ 1900 ಅಥವಾ 2100 ಅಧಿಕವರ್ಷವಲ್ಲ ಅನ್ನುವುದು ನನಗೆ ಗೊತ್ತೇ ಇರಲಿಲ್ಲ. ಸ್ವಯಂ ಪರಿಶೀಲಿಸಲು 1900 ರಲ್ಲಿ ನಾನು ಹುಟ್ಟಿರಲಿಲ್ಲ ಹಾಗೂ 2100 ರಲ್ಲಿ ನಾನು ಬದುಕಿರುವುದಿಲ್ಲ!
ಪ್ರತಿ 1461ಕ್ಕೆ ಒಬ್ಬರಂತೆ ಅಧಿಕ ವರ್ಷದಲ್ಲಿ ಜನಿಸುವ ಸಾಧ್ಯತೆ ಇರುವುದಾದರೂ ಜಗತ್ತಿನಲ್ಲಿ ಫೆಬ್ರವರಿ 29 ರಂದು ಜನಿಸಿದ ಸುಮಾರು 5 ಮಿಲಿಯನ್ ಜನರು ಇರುವರೆಂದು ಅಂದಾಜಿಸಲಾಗಿದೆ. ಫೆಬ್ರವರಿ 29 ರಂದು ಜನಿಸಿದವರನ್ನು ಲೀಪ್ಲಿಂಗ್ಸ್, ಲೀಪರ್, ಲೀಪ್ಸ್ಟರ್ ಎಂದೆಲ್ಲಾ ಕರೆಯುವರು. ಫೆಬ್ರವರಿ 29 ರಂದು ಜನಿಸಿದವರ ಸಂಘಗಳಿವೆ. ಫೆಬ್ರವರಿ 29 ರಂದು ಜನಿಸಿದವರಿಗಾಗಿಯೇ Honor Society of Leap Year Day Babies ಅನ್ನುವ ಆನ್-ಲೈನ್ ವೇದಿಕೆ ಇದೆ. ಅಧಿಕ ವರ್ಷದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಕೂಡಾ ಇದರ ಉದ್ದೇಶ. ಉದಾಹರಣೆಗೆ ನ್ಯೂ ಮೆಕ್ಸಿಕೋದ ಅಂತೋನಿಯಲ್ಲಿ ಲೀಪ್ ಇಯರ್ ಫೆಸ್ಟಿವಲ್ – ಅಧಿಕ ವರ್ಷ ಹಬ್ಬವೆಂದು ಆಚರಿಸುವರು. ಫೆಬ್ರವರಿ 29 ಕ್ಕೆ ಹುಟ್ಟಿದವರು ಜನ್ಮದಿನ ಯಾವಾಗ ಆಚರಿಸುವುದು ಅನ್ನುವ ಪ್ರಶ್ನೆ ಸಹಜವೇ ತಾನೇ? ಲಾಭದ ದೃಷ್ಟಿಯಿಂದ ಆಲೋಚಿಸಿದರೆ ನಾಲ್ಕು ವರ್ಷಗಳಿಗೊಮ್ಮೆ ಸಾಕೆನ್ನುವವರು ಇದ್ದಾರೆ. ಫೆಬ್ರವರಿ 29 ರಂದು ಹುಟ್ಟಿದವರಿಗೆ ನಿಜವಾದ ಜನ್ಮದಿನ ಬರುವುದು ನಾಲ್ಕು ವರ್ಷಗಳಿಗೊಮ್ಮೆ ಮಾತ್ರ. ಫೆಬ್ರವರಿ 28 ರಂದು ಜನ್ಮದಿನ ಆಚರಿಸಿದರೆ ಬೇಗ ಆಚರಿಸಿದಂತಾಗುವುದು ಹಾಗೆಯೇ ಮಾರ್ಚ್ 1 ರಂದು ಆಚರಿಸಿದರೆ ತಡವಾಗಿ ಆಚರಿಸಿದಂತಾಗುವುದು. ಕೆಲವು ದೇಶಗಳಲ್ಲಿ ಮಾರ್ಚ್ 1 ರಂದು ಆಚರಿಸುವ ಪದ್ಧತಿ ಇದ್ದರೆ ಇನ್ನು ಕೆಲವು ದೇಶಗಳಲ್ಲಿ ಫೆಬ್ರವರಿ 28 ರಂದೇ ಆಚರಿಸುವರಂತೆ. ನ್ಯೂಜಿಲ್ಯಾಂಡಿನಲ್ಲಿ . ಫೆಬ್ರವರಿ 28 ರಂದು ಆಚರಿಸುವರು. ಯುನೈಟೆಡ್ ಕಿಂಗ್ ಡಮ್ ನಲ್ಲಿ ಮಾರ್ಚ್ 1 ರಂದು ಆಚರಿಸುವರು.
ಜಗತ್ತಿನಾದ್ಯಂತ ಅಧಿಕ ವರ್ಷಕ್ಕೆ ಸಂಬಂಧಿಸಿ ಹಲವು ನಂಬಿಕೆಗಳು ಹಾಗೂ ಮೂಢನಂಬಿಕೆಗಳು ವಾಡಿಕೆಯಲ್ಲಿವೆ. ಅಧಿಕ ವರ್ಷದಲ್ಲಿ ಅಧಿಕ ಮರಣ ಸಂಭವಿಸುವುದೆಂದು ಅಂಬೋಣ. ವರ್ಷದಲ್ಲಿ ಒಂದು ದಿನ ಜಾಸ್ತಿ ಇರುವ ಕಾರಣ, ಅದರಲ್ಲೇನೂ ಅತಿಶಯವಿಲ್ಲ ಅಂತ ವಾದಿಸುವವರೂ ಇದ್ದಾರೆ. ಅಧಿಕವರ್ಷದಲ್ಲಿ ಮದುವೆಯಾಗುವುದು ಒಳ್ಳೆಯದಲ್ಲ ಅನ್ನುವ ನಂಬಿಕೆಯೂ ಕೆಲವು ದೇಶಗಳಲ್ಲಿದೆ. ಅಧಿಕ ವರ್ಷದಲ್ಲಿ ಪ್ರತಿಕೂಲ ಹವಾಮಾನ ಇರುತ್ತದೆಯೆಂಬ ನಂಬಿಕೆ ರಷ್ಯಾ ದೇಶದಲ್ಲಿದ್ದರೆ, ಅಧಿಕವರ್ಷವು ಬೆಳೆಗಳಿಗೆ ಒಳ್ಳೆಯದಲ್ಲ ಅನ್ನುವ ನಂಬಿಕೆ ಸ್ಕಾಟ್ಲೆಂಡ್ ದೇಶದಲ್ಲಿದೆ. ಮನೆಯಲ್ಲಿರುವ ವಯಸ್ಸಾದ ಹಿರಿಯರು ಅಧಿಕ ವರ್ಷದಲ್ಲಿಯೇ ಮರಣ ಹೊಂದುವ ಸಾಧ್ಯತೆಗಳು ಜಾಸ್ತಿಯೆಂಬ ನಂಬಿಕೆ ತೈವಾನ್ ದೇಶದಲ್ಲಿದೆಯಂತೆ. ಹಲವಾರು ಐರೋಪ್ಯ ದೇಶಗಳಲ್ಲಿ, ಫೆಬ್ರವರಿ 29 ರಂದು, ಮದುವೆಯಾಗದ ಹುಡುಗಿಯರು ತಾವಿಷ್ಟಪಡುವ ಹುಡುಗನ ಬಳಿ ನೀನು ನನ್ನನ್ನು ಮದುವೆಯಾಗುವೆಯಾ ಎಂದು ಮಂಡಿಯೂರಿ ನಿವೇದನೆ ಮಾಡುವ ಕ್ರಮ ಐದನೇ ಶತಮಾನದಿಂದಲೇ ಬೆಳೆದು ಬಂದಿದೆಯಂತೆ. ಹಾಗೆಯೇ ಆ ನಿವೇದನೆಯನ್ನು ಒಪ್ಪಿಕೊಳ್ಳದ ಗಂಡು ಹುಡುಗಿಗೆ ದಂಡದ ರೂಪವಾಗಿ ಹಣ, ಅಥವಾ ಬೆಲೆಬಾಳುವ ಧಿರಿಸು ನೀಡುವ ಕ್ರಮ ಅಲ್ಲದೆ ಕೆಲವು ಯುರೋಪಿಯನ್ ದೇಶಗಳಲ್ಲಿ 12 ಜೊತೆ ಕೈಗವುಸುಗಳನ್ನು ಹುಡುಗಿಗೆ ಕೊಡಬೇಕೆಂದಿದೆ. ಆ ಹುಡುಗಿ ನಿಶ್ಚಿತಾರ್ಥದ ಉಂಗುರ ಧರಿಸಿಲ್ಲವೆಂದು ಉಳಿದವರಿಗೆ ಗೊತ್ತಾಗದಂತೆ ಹಾಗೂ ಆಕೆ ಮುಜುಗರಪಡುವುದನ್ನು ತಪ್ಪಿಸಲು ಹುಡುಗಿ ಕೈಗವುಸು ಹಾಕಿಕೊಳ್ಳುವ ಕ್ರಮವಂತೆ!
ಅಧಿಕವರ್ಷ ಮಾತ್ರ ಪ್ರಕಟಗೊಳ್ಳುವ ವರ್ತಮಾನ ಪತ್ರಿಕೆಯೊಂದು ಫ್ರಾನ್ಸ್ ದೇಶದ ಪ್ಯಾರಿಸ್ ನಲ್ಲಿದೆಯಂತೆ. ಗಿನ್ನೆಸ್ ದಾಖಲೆಯ ಪ್ರಕಾರ, ಒಂದೇ ಕುಟುಂಬದ ಮೂರು ತಲೆಮಾರು ಅಂದರೆ ಐರ್ಲೆಂಡಿನ ಕಿಯೋಗ್ ಕುಟುಂಬದ ಪೀಟರ್ ಆಂಟನಿ ಅನ್ನುವವರು ಫೆಬ್ರವರಿ 29, 1940 ರಂದು ಜನಿಸಿದರು, ಹಾಗೂ ಅವರ ಮಗ ಪೀಟರ್ ಎರಿಕ್ ಫೆಬ್ರವರಿ 29, 1964 ರಲ್ಲಿ ಜನಿಸಿದರು ಹಾಗೂ ಮೊಮ್ಮಗಳು ಬೆಥನಿ ಫೆಬ್ರವರಿ 29, 1966 ರಲ್ಲಿ ಜನಿಸಿದರು……. ಹೀಗೆ ಬರೆಯುತ್ತಾ ಹೋದರೆ ಅಧಿಕವರ್ಷಕ್ಕೆ ಸಂಬಂಧಿಸಿದ ಇನ್ನೂ ಅವೆಷ್ಟೋ ರೋಚಕ ವಿಷಯ/ ಮಾಹಿತಿಗಳಿವೆ. ಹಲವಾರು ಮಾಹಿತಿಗಳಿದ್ದರೂ, ಹಂಚಿಕೊಳ್ಳಲೇಬೇಕೆಂದು ಅನಿಸಿದ ಮಾಹಿತಿಗಳನ್ನು ಮಾತ್ರ ಈ ಲೇಖನದಲ್ಲಿ ಉಲ್ಲೇಖಿಸಿರುವೆನು. ಇನ್ನಷ್ಟು ಮಾಹಿತಿ ತಿಳಿ ದುಕೊಳ್ಳಬೇಕಾದರೆ ಗೂಗಲಣ್ಣನ ಸಹಾಯವಂತೂ ಇದ್ದೇ ಇದೆ.
–ಡಾ. ಕೃಷ್ಣಪ್ರಭ ಎಂ, ಮಂಗಳೂರು
Super ✨
ಅಬ್ಬಾ, ಭಯಂಕರ
ಅಧಿಕ ವರ್ಷದ ಬಗ್ಗೆ ಲೇಖನ ಚೆನ್ನಾಗಿ ದೆ ಮೇಡಂ..
ಮೈಸೂರಿನಲ್ಲಿ ಹತ್ತು ವರ್ಷ ಗಳಿಂದಲೂ ನೆಡೆಸಿಕೊಂಡು ಬರುತ್ತಿರುವ ಸಾಹಿತ್ಯ ದಾಸೋಹವೆಂಬ..ಸಂಘದಲ್ಲಿ ಈ ಅಧಿಕ ಎಂಬ ವಿಷಯ ಕೊಟ್ಟು ಎಲ್ಲರೂ ಅದರ ಬಗ್ಗೆ ಲೇಖನ ಕವನ ಕಥೆ.. ಪ್ರಸಂಗ ಹೀಗೆ ವೈವಿದ್ಯಮಯವಾಗಿ ಮೂಡಿಬಂದಿತ್ತು…ಈ ಲೇಖನ ಓದಿದಾಗ ಆ ನೆನಪು ಮರುಕಳಿಸಿತು…ಮತ್ತಷ್ಟು ಮಾಹಿತಿ ಸಿಕ್ಕಿತು.. ಮೇಡಂ
ನೆನಪು ಮಧುರ
ಮಾಹಿತಿಪೂರ್ಣ
ಅಧಿಕಮಾಸದ ರೋಚಕಗಳ ಬಗ್ಗೆ ಮಾಹಿತಿ ನೀಡಿದ ಚಂದದ ಲೇಖನ.
Got to know a lot.
ಅಧಿಕ ವರ್ಷದ ಕುರಿತ ಸವಿಸ್ತಾರ ಲೇಖನವು ಬಹಳಷ್ಟು ಮಾಹಿತಿಗಳಿಂದ ಕೂಡಿದ್ದು ಅತ್ಯಂತ ರೋಚಕ ಸಂಗತಿಗಳನ್ನು ಒಳಗೊಂಡಿದೆ…ಧನ್ಯವಾದಗಳು ಮೇಡಂ.
ಅಧಿಕ ವರ್ಷ, ಅಧಿಕ ದಿನ (ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿಯಲ್ಲಿ ೨೮ರ ಬದಲಿಗೆ ೨೯ದಿನಗಳು ಇರುವುದು) ಇವುಗಳ ತಾರ್ಕಿಕತೆ ಮತ್ತೆ ಅವುಗಳೊಂದಿಗೆ ಅಂಟಿಕೊಂಡಿರುವ ನಂಬಿಕೆಗಳ ಬಗ್ಗೆ ಬರೆದಿರುವುದು ಚೆನ್ನಾಗಿದೆ