ಎಲ್ಲಿಗೆ ಈ ಪಯಣ..
ಅಜ್ಜೀ ಅಜ್ಜೀ ಎಲ್ಲಿಗೆ ಹೋಗ್ತಾ ಇದ್ದೀಯಾ?
ಬೆಳಗಾಗೆದ್ದು ನಾನು ಎಲ್ಲಿಗೆ ಹೋಗ್ತೀನಿ ಹೇಳು, ಯೋಗ ಕ್ಲಾಸಿಗೆ ಅಲ್ವೇನೋ ಪುಟ್ಟಾ, ನೀನೂ ಬರ‍್ತೀಯಾ?
ಬರ‍್ತೀನಿ ಅಜ್ಜಿ, ಹೇಗೂ, ಇವತ್ತು ಗಣಪತಿ ಮೆರವಣಿಗೆ ಅಂತ ಶಾಲೆಗೆ ರಜಾ ಕೊಟ್ಟಿದ್ದಾರೆ. ನನಗೊಂದು ಯೋಗ ಮ್ಯಾಟ್ ಕೊಡ್ತೀಯಾ?
ಆಯ್ತು ಪುಟ್ಟಾ, ಬಾ ಯೋಗಕೇಂದ್ರಕ್ಕೆ ಹೋಗೋಣ.
ಅಜ್ಜೀ, ನಿಮ್ಮ ಯೋಗಕೇಂದ್ರದ ಹೆಸರೇನು?
ಶ್ರೀ ಶಿವಗಂಗಾ ಯೋಗಕೇಂದ್ರ ಅಂತ. ಇಲ್ಲಿ ಪ್ರತಿ ನಿತ್ಯ ಯೋಗವನ್ನು ಉಚಿತವಾಗಿ ಹೇಳಿಕೊಡುತ್ತಾರೆ ಗೊತ್ತಾ ಪುಟ್ಟಾ.
ಹೌದಾ, ಹಾಗಿದ್ರೆ, ಇಲ್ಲಿನ ಗುರುಗಳು ನಿಜವಾಗ್ಲೂ ಗ್ರೇಟ್
ಯೋಗಕೇಂದ್ರದ ಹೆಬ್ಬಾಗಿಲಲ್ಲೇ ಬರೆದಿದ್ದ ಒಕ್ಕಣೆಯನ್ನು ಗಟ್ಟಿಯಾಗಿ ಓದಿದ ಯಶೂ, ‘ತನು ಮನವ ಸಂತೈಸಿ, ಅರಿವಿನ ಜ್ಯೋತಿಯನ್ನು ಬೆಳಗಿಸುವವನೇ ಗುರು’. ಅಜ್ಜೀ ಈ ಸಾಲಿನ ಅರ್ಥ ಹೇಳ್ತೀಯಾ?
ಸರಿ ಪುಟ್ಟಾ, ನೀನು ಶಾಲೆಗೆ ಹೋಗೋಕೆ, ಆಟ ಆಡ್ಲಿಕ್ಕೆ ಶಕ್ತಿ ಬೇಕಲ್ವಾ, ಯೋಗಾಸನ ಮಾಡೋದ್ರಿಂದ ನಿನ್ನ ಶರೀರ ಗಟ್ಟಿಯಾಗುತ್ತೆ. ಮತ್ತೆ ಪಾಠ ಕಲೀಲಿಕ್ಕೆ ಏಕಾಗ್ರತೆ, ನೆನಪಿನ ಶಕ್ತಿ ಬೇಕಲ್ವಾ, ಯೋಗ ಮಾಡೋದ್ರಿಂದ ನಿನ್ನ ಚಂಚಲವಾದ ಮನಸ್ಸು ಸ್ಥಿರವಾಗುತ್ತೆ. ನಿನ್ನಲ್ಲಿ ಜ್ಞಾನದ ಜ್ಯೋತಿ ಬೆಳಗಿಸಲು ಇಲ್ಲಿ ಗುರು ಇದ್ದಾರೆ ಗೊತ್ತಾ. ಬಾ, ಒಳಗೆ ಹೋಗೋಣ.
ಯೋಗ ತರಗತಿ ಪ್ರಾರ್ಥನೆಯೊಂದಿಗೆ ಆರಂಭವಾಗಿತ್ತು. ಯೋಗ ಶಿಕ್ಷಕಿಯಾದ ವೀಣಾ ಗಣಪತಿ ಭಜನೆಯನ್ನು ಹೇಳಿಕೊಡುತ್ತಿದ್ದರು. ಪ್ರಾರ್ಥನೆ ಮನಸ್ಸಿನ ಚಂಚಲತೆಯನ್ನು ದೂರ ಮಾಡಿತ್ತು. ಮೂರು ಬಾರಿ ಓಂಕಾರ ಪಠಿಸಿದಾಗ ದೇಹದ ಕಣಕಣದಲ್ಲೂ ಚೈತನ್ಯ ಪ್ರವಹಿಸಿದ ಅನುಭವ, ನಂತರದಲ್ಲಿ ಭೂ ನಮನ ಮಾಡಿದಾಗ ಪ್ರಕೃತಿಯೊಂದಿಗೆ ಆತ್ಮೀಯ ಬೆಸುಗೆ ಮೂಡಿದ ಭಾವ. ಆಸನ ಮಾಡುವ ಮೊದಲು ಮಾಡಿದ ಶಿಥಲೀಕರಣ ವ್ಯಾಯಾಮ ಶರೀರದ ಜಡತ್ವ ದೂರ ಮಾಡಿತ್ತು. ಎಂದಿನಂತೆ ವೀಣಾ ಮೇಡಂ ಆಸನ, ಪ್ರಾಣಾಯಾಮ, ಧ್ಯಾನ ಮುಗಿಸಿದಾಗ ಮೈ ಮನವೆಲ್ಲಾ ಹಗುರಾಗಿತ್ತು. ಯಶೂ ಉತ್ಸಾಹದ ಚಿಲುಮೆಯಾಗಿದ್ದ.
ಅಜ್ಜೀ, ನಾಳೆ ನಾನು ಶಾಲೆಗೆ ಹೋದಾಗ ಯೋಗ ಕ್ಲಾಸಿನ ಬಗ್ಗೆ ನನ್ನ ಗೆಳೆಯರಿಗೆಲ್ಲಾ ಹೇಳ್ತೀನಿ. ನಾಳೆಯಿಂದ ನಾವೆಲ್ಲಾ ಯೋಗಕ್ಕೆ ಹೋಗೋಣ ಬನ್ನಿ ಅಂತ ಕರೀತೀನಿ.
ಸರಿ ಪುಟ್ಟಾ, ಅವರನ್ನು ನನ್ನ ಬಳಿ ಕರೆದುಕೊಂಡು ಬಾ, ನಾನು ಅವರಿಗೆ ನಿತ್ಯ ಯೋಗ ಮಾಡೋದ್ರಿಂದ ಆಗುವ ಲಾಭ ಏನು ಅಂತ ಹೇಳ್ತೀನಿ. ಯೋಗಾಬ್ಯಾಸ ಅಂದ್ರೆ ಏನು ಹೇಳಲಿ – ಯೋಗಾಸನಗಳಿಂದ ಶರೀರ ಮತ್ತು ಮನಸ್ಸು ಸಧೃಢವಾಗುತ್ತೆ ಎಂದು ಹೇಳಲೇ ಅಥವಾ ಯೋಗ ಒಂದು ಜೀವನಶೈಲಿ ಎಂದು ಹೇಳಲೇ ಅಥವಾ ನಮ್ಮ ಶರೀರದ ಬಗ್ಗೆ ಗಮನ, ನಮ್ಮ ಮನಸ್ಸಿನ ಬಗ್ಗೆ ಗಮನ, ನಮ್ಮ ಉಸಿರಾಟದ ಬಗ್ಗೆ ಗಮನ, ನಮ್ಮಲ್ಲಿ ಹುದುಗಿರುವ ಚೈತನ್ಯದ ಬಗ್ಗೆ ಗಮನ, ನಮ್ಮ ಗಮನದ ಬಗ್ಗೆ ಗಮನ ಎಂದು ಹೇಳಲೇ ಎಂದು ಆಲೋಚಿಸುತ್ತಿರುವಾಗ ಯೋಗಶಿಕ್ಷಕರಾದ ಅಡಿಗರು ಹೇಳಿದ ಮಾತುಗಳು ನೆನಪಾದವು, ‘ಯೋಗ ಒಂದು ಆಂತರಿಕ ಪಯಣ, ಹೊರಗಿನ ಜಗತ್ತಿನಿಂದ ನಮ್ಮೊಳಗಿನ ಜಗತ್ತಿನೆಡೆಗೆ ಅರಿವಿನ ಜ್ಯೋತಿಯ ಬೆಳಕಿನಲ್ಲಿ ಸಾಗುವ ಪಯಣ. ಶರೀರ, ಮನಸ್ಸಿನ ಮಿತಿಯನ್ನು ದಾಟಿ ಆತ್ಮದೆಡೆಗೆ ಸಾಗುವ ಪಯಣ, ಆತ್ಮ ಪರಮಾತ್ಮನೆಡೆಗೆ ಪಯಣಿಸಲು ಮಾರ್ಗ ತೋರುವ ಗುರುವೇ ಯೋಗ’. ಈ ವಿಚಾರಗಳನ್ನು ಮನದಲ್ಲಿ ಮಥಿಸುತ್ತಿರುವಾಗ ಗೊತ್ತಿರಲಿಲ್ಲ ನನಗೆ ಈ ದಿನದ ನನ್ನ ಪಯಣ ಎತ್ತ ಸಾಗಲಿದೆಯೆಂದು. ಬನ್ನಿ ನೋಡೋಣ ನನ್ನ ಅಂದಿನ ಪಯಣದ ಹಾದಿಯನ್ನು…….
ಪುಟ್ಟನನ್ನು ಮನೆಗೆ ಕರೆದೊಯ್ಯಲು ಬಂದ ಮಗಳು ನನಗೊಂದು ಅಚ್ಚರಿಯಾಗುವ ವಿಷಯ ಹೇಳಿದಳು, ‘ಅಮ್ಮಾ ನೀನು ಬರೆದ ಪ್ರವಾಸ ಕಥೆಗಳನ್ನೆಲ್ಲಾ ಒಟ್ಟು ಮಾಡಿ ಅಪ್ಪ ಒಂದು ಪುಸ್ತಕ ಪ್ರಕಟಿಸಿದ್ದಾರೆ. ಅದರ ಹೆಸರು, ‘ಹೋಗೋಣು ಬಾರಾ, ಹೋಗೋಣು ಬಾ..’ ಅಂತ ಅಪ್ಪ ಹೇಳಿದ್ರು. ನಾಳೆ ಆ ಪುಸ್ತಕ ಬಿಡುಗಡೆಯ ಸಮಾರಂಭ. ಆತ್ಮೀಯರಾದ ಬಂಧು ಬಾಂಧವರೆನ್ನೆಲ್ಲಾ ಆಮಂತ್ರಿಸಿದ್ದಾರೆ. ಇದು ನಿನಗೊಂದು ಅಚ್ಚರಿಯ ಉಡುಗೊರೆ ಅಂತ ಹೇಳ್ತಾ ಇದ್ರು. ‘ಹೌದಾ ಅಪ್ಪೀ. ನಿನ್ನ ಅಪ್ಪ ನನ್ನ ಬರವಣಿಗೆ ಅಂದ್ರೆ ಮಾರು ದೂರ ನಿಲ್ತಿದ್ದವರು, ಇಂದು ನನ್ನ ಪುಸ್ತಕವನ್ನು ಪ್ರಕಟಿಸಿದ್ದಾರೆ ಅಂದ್ರೆ ನನಗೆ ನಂಬಲಿಕ್ಕೆ ಆಗ್ತಾ ಇಲ್ಲ.’ ಅಂದವಾಗಿ ಮುದ್ರಣವಾಗಿ ಬಂದ ಪುಸ್ತಕವನ್ನು ನೋಡಿ ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಪುಸ್ತಕದ ಮುಖಪುಟದ ಮೇಲಿನ ಚಿತ್ರ ಕಾಂಬೋಡಿಯಾದ ‘ಆಂಕೊರ್ ವಾಟ್’ ನೋಡಿದ ಮೇಲಂತೂ ಕುಣಿದು ಕುಪ್ಪಳಿಸುವ ಹಾಗಾಗಿತ್ತು. ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಎಲ್ಲಾ ಸಿದ್ಧತೆ ಭರದಿಂದ ನಡೆದಿತ್ತು. ಪುಸ್ತಕ ಬಿಡುಗಡೆಗಾಗಿ ವಿಶೇಷ ಅತಿಥಿಗಳನ್ನು ಆಹ್ವಾನಿಸಿದೆವು, ಪುಸ್ತಕ ಪರಿಚಯಿಸಲು ಖ್ಯಾತ ವಾಗ್ಮಿಗಳನ್ನು ಆಹ್ವಾನಿಸಿದೆವು. ಆದರೆ ನಾವು ಬಯಸಿದ ಹಾಗೆ ಎಲ್ಲಾ ನಡೆಯಬೇಕಲ್ಲ. ಅಂದು ಸಂಜೆ ನಮ್ಮೂರಿನಿಂದ ಒಂದು ಆಘಾತಕಾರೀ ಸುದ್ದಿ ಬಂದಿತ್ತು, ನಮ್ಮ ಯಜಮಾನರ ಅಣ್ಣನವರು ಹೃದಯಾಘಾತದಿಂದ ನಿಧನರಾಗಿದ್ದರು. ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದ ನಮ್ಮ ಉತ್ಸಾಹವೆಲ್ಲಾ ರ‍್ರೆಂದು ಇಳಿದು ಹೋಗಿತ್ತು. ತಕ್ಷಣವೇ ಎಲ್ಲರಿಗೂ ಫೋನ್ ಮಾಡಿ, ಅನಿವಾರ್ಯ ಕಾರಣಗಳಿಂದ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ರದ್ದು ಮಾಡಲಾಗಿದೆಯೆಂಬ ಸುದ್ದಿ ಮುಟ್ಟಿಸಿ, ಭಾವನವರ ಅಂತ್ಯಕ್ರಿಯೆಗೆ ಧಾವಿಸಿದೆವು. ಮೃತರ ಆತ್ಮಕ್ಕೆ ಶಾಂತಿ ಕೋರಲು ನಡೆಸುವ ಎಲ್ಲಾ ವಿಧಿ ವಿಧಾನಗಳನ್ನೂ ಮುಗಿಸಿ ಬರುವಾಗ ಡಿ. ವಿ. ಜಿ. ಯವರ ಮಂಕುತಿಮ್ಮನ ಕಗ್ಗದ ಸಾಲುಗಳು ಮನದಲ್ಲಿ ರಿಂಗುಣಿಸಿದವು, ‘ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ / ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗನು / ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು / ಪದಕುಸಿಯೇ ನೆಲವಿಹುದು ಮಂಕುತಿಮ್ಮ’
ಪ್ರಕಟವಾದ ನನ್ನ ಪ್ರವಾಸ ಕಥನದ ಹೆಸರು, ‘ಹೋಗೋಣು ಬಾರಾ ಹೋಗೋಣು ಬಾ..’ ನಾನು ಪುಸ್ತಕದ ಶೀರ್ಷಿಕೆಯ ಬಗ್ಗೆ ಪರಾಮರ್ಶೆ ಮಾಡುತ್ತಾ ಕುಳಿತೆ, ಎಲ್ಲಿಗೆ ಹೋಗುವುದು? ಜೀವನವೆಂಬ ಪಯಣದಲ್ಲಿ ಸದಾ ಚಲಿಸುತ್ತಲೇ ಇರುವ ನಾವು ಹೋಗುವುದಾದರು ಎಲ್ಲಿಗೆ? ಹುಟ್ಟಿನಿಂದ ಸಾವಿನೆಡೆಗೆ ನಿರಂತರವಾಗಿ ಸಾಗುವ ನಮ್ಮ ಪಯಣ, ತೊಟ್ಟಿಲಿನಿಂದ ಸಮಾಧಿಯವರೆಗೆ ಸಾಗುವ ಪಯಣ. ಬಾಲ್ಯದಿಂದ ಯೌವ್ವನದವರೆಗೆ ಓಡುವ ಕಾಲ, ಯೌವ್ವನದಿಂದ ವೃದ್ಧಾಪ್ಯದವರೆಗೆ ನಡೆಯುವ ಕಾಲ, ವೃದ್ಧಾಪ್ಯದಿಂದ ಸಾವಿನವರೆಗೆ ಮಂದಗತಿಯಲ್ಲಿ ಚಲಿಸುವ ಕಾಲ. ಈ ಕಾಲ ಎಂದಾದರು ನಿಲ್ಲುವನೇ, ಬೀಸುವ ಗಾಳಿಯಂತೆ, ಹರಿಯುವ ನೀರಿನಂತೆ ಸದಾ ಚಲನಶೀಲನಾಗಿರುವನು. ಈ ಮಹಾಕಾಲನನ್ನು ಕಟ್ಟಿ ಹಾಕುವ ಮೃತ್ಯುಂಜಯ ಎಲ್ಲಿದ್ದಾನೊ ಬಲ್ಲವರಾರು?
ಈ ಪಸ್ತಕದ ಓದುಗರನ್ನು ನಾನು ಕರೆದದ್ದು ಪ್ರವಾಸಕ್ಕ್ಕೆ ಹೋಗೋಣ ಬನ್ನಿ ಎಂದು. ಆದರೆ ಪುಸ್ತಕದ ಬಿಡುಗಡೆ ಮುನ್ನವೇ, ಕರೆಯದೇ ಬಂದ ಯಮಧರ್ಮರಾಯ ನನ್ನ ಭಾವನವರನ್ನು ಈ ಲೋಕದಿಂದ ಮೇಲಿನ ಲೋಕಕ್ಕೆ ಕರೆದೊಯ್ದಿದ್ದ. ಸದ್ದಿಲ್ಲದೆ ಬಂದ ಮೃತ್ಯುದೇವತೆ, ‘ಬಾ ಮಗೂ, ನಿನ್ನ ಆಯುಷ್ಯ ಮುಗಿಯಿತು, ನಿನ್ನ ಸ್ವಗೃಹಕ್ಕೆ ಮರಳುವ ಹೊತ್ತಾಯಿತು’ ಎಂದುಸುರುತ್ತಾ ಭಾವನವರನ್ನು ಹೊತ್ತೊಯ್ದಿದ್ದ. ‘ಇವನೆಂತಹ ಧರ್ಮರಾಯ, ಹೇಳದೇ ಕೇಳದೇ ಬರುವನಲ್ಲಾ, ಮಡದಿ ಮಕ್ಕಳ ಜೊತೆ ನೆಮ್ಮದಿಯಿಂದ ಇದ್ದವರೆನ್ನಲ್ಲಾ ಹೊತ್ತೊಯ್ಯುವನಲ್ಲಾ, ಒಂದು ಮಾತು ಹೇಳಿ ಬರಬಹುದಿತ್ತು.’ ಎಂದೆನಿಸಿತ್ತು. ‘ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ’ ಎಂದು ಹಲವರು ನುಡಿದಿದ್ದರೂ, ನಾವು ಭಾವಿಸುವುದು ಬೇರೆಯೇ, ‘ಸಾವು ಆಕಸ್ಮಿಕ, ಒಂದು ಅಪಘಾತ, ಎಷ್ಟೇ ವೃದ್ಧರಾದರೂ ಇನ್ನೂ ಬಾಳಬೇಕೆಂಬ ಹಂಬಲ, ಈ ಜಗತ್ತು ಆಯಸ್ಕಾಂತದಂತೆ ನಮ್ಮನ್ನು ಸೆಳೆಯುತ್ತಲೇ ಇರುವುದು’. ಆಗ ಪುರಂದರ ದಾಸರ ಗೀತೆಯೊಂದನ್ನು ಹಾಡುತ್ತಾ ಬಂದ ದಾಸನೊಬ್ಬ, ‘ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ / ಕದ ಬಾಗಿಲಿರಿಸಿಹ ಕಳ್ಳ ಮನೆ ಇದು / ಮುದದಿಂದ ಲೋಲ್ಯಾಡೋ ಸುಳ್ಳು ಮನೆ / ಇದಿರಾಗಿ ವೈಕುಂಠ ವಾಸ ಮಾಡುವಂತ / ಪದುಮನಾಭನ ದಿವ್ಯ ಬದುಕು ಮನೆ.’
-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ಹೌದು ಮೇಡಂ ನೀವು ಹೇಳಿರುವುದು ಸತ್ಯವಾದದ್ದೇ.. ಅದು ನಮ್ಮ ಅನುಭವಕ್ಕೆ ಬಂದಾಗಲೇ ಅರ್ಥವಾಗುವುದು ವಿವರಣೆ..ಚೆನ್ನಾಗಿದೆ… ಧನ್ಯವಾದಗಳು
ಹೃದಯ ಸ್ಪರ್ಶಿ ಬರಹ
ಮನದ ಮಂಥನದ ಅನುಭವ ಕಥನ ಓದುಗರನ್ನೂ ಚಿಂತನೆಗೆ ಹಚ್ಚುವಂತಿದೆ.
ವಂದನೆಗಳು ನಯನ ಹಾಗೂ ನಾಗರತ್ನ ಮೇಡಂ ರವರಿಗೆ
Good read!! Poignant reflections
ಹೇಳದೆ ಕೇಳದೆ ಬರುವ ಸಾವಿನ ರಹಸ್ಯವನ್ನು ಯಾರಿಂದಲೂ ಯಾವ ಕಾಲದಲ್ಲೂ ಬೇಧಿಸಲಾಗದು! ಲೇಖನವು ಚಿಂತನಯೋಗ್ಯವಾಗಿದೆ ಮೇಡಂ.