ಮೈದಾಸ್ ಸ್ಪರ್ಷದ ವಾಲ್ ಚಂದ್ ಹೀರಾಚಂದ್ ದೋಷಿ

Share Button


1905ರಲ್ಲಿ ಬ್ರಿಟಿಷ್ ಸರ್ಕಾರ ಬಂಗಾಳ ವಿಭಜನೆಯನ್ನು ಮಾಡಿ ದೇಶಾದ್ಯಂತ ಅದರಲ್ಲೂ ವಿಶೇಷವಾಗಿ ಬಂಗಾಳಿಗಳಲ್ಲಿ ಸ್ವದೇಶೀ ಚಳುವಳಿಯ ಕಿಡಿ ಹೊತ್ತಿಸಿತು. ಅದು ಅಲ್ಪಕಾಲದಲ್ಲಿ ಜ್ವಾಲಾಮುಖಿಯಾಯಿತು, ಅಸದೃಶ ಕ್ರಾಂತಿಯನ್ನುಮಾಡಿತು, ದೇಶದ ಬಹುಮುಖಿ ಪುನರುಜ್ಜೀವನಕ್ಕೆ ನಾಂದಿ ಹಾಡಿತು. 120 ವರ್ಷಗಳ ಹಿಂದಿನ ಭವ್ಯ ಐತಿಹಾಸಿಕ ಸ್ವದೇಶೀ ಚಳುವಳಿ ಬಂಗಾಳದಿಂದ ಆಚೆ ಯಾವ ಯಾವ ಮುಖಗಳನ್ನು ಪಡೆಯಿತು ಎಂಬುದು ಬಹಳ ಮಟ್ಟಿಗೆ ಅಪರಿಚಿತ. ಅದನ್ನು ಪರಿಚಿತವಾಗಿಸಬಹುದಾದ ಮತ್ತು ಆತ್ಮನಿರ್ಭರ ಭಾರತದ ಪರಿಕಲ್ಪನೆಯ ಬೀಜಗಳನ್ನು ಬಿತ್ತಿ ಬೆಳೆಸಿದ ಒಂದು ಅಪೂರ್ವವಾದ ಯಶೋಗಾಥೆ ಮಹಾರಾಷ್ಟ್ರದ ವಾಲ್ ಚಂದ್ ಹೀರಾಚಂದ್ ದೋಷಿ ಅವರದು.

ದಿಗಂಬರ ಜೈನ ಬನಿಯಾ ಕುಟುಂಬದ ವಾಲ್ ಚಂದ್ ಹೀರಾಚಂದ್ ದೋಷಿ (1882-1953) ಅವರು 1900ರ ಆಸುಪಾಸಿನಲ್ಲಿ ಸೇಂಟ್ ಸೇ಼ವಿಯರ್ ಕಾಲೇಜಿನಲ್ಲಿ ಪದವೀಧರರಾದವರು. ಅನಿವಾರ್ಯವಾಗಿ ತಲತಲಾಂತರದಿಂದ ನಡೆಸಿಕೊಂಡುಬಂದಿದ್ದ ಬ್ಯಾಂಕಿಂಗ್, ಹತ್ತಿ ವ್ಯಾಪಾರವನ್ನು ಮುಂದುವರೆಸಲು ವಿದ್ಯಾಭ್ಯಾಸವನ್ನು ಅಲ್ಲಿಗೇ ಕೈಬಿಟ್ಟರು. ಆದರೆ ಕನಸುಗಾರಿಕೆ ಮತ್ತು ಮುನ್ನೋಟ ಇದ್ದ ಅವರಿಗೆ ವಂಶಪಾರಂಪರ್ಯದ ವ್ಯವಹಾರ ಒಗ್ಗಲಿಲ್ಲ. ರೈಲ್ವೆಯಲ್ಲಿ ಗುಮಾಸ್ತರಾಗಿದ್ದ ಲಕ್ಷ್ಮಣ್ ಬಲವಂತ್ ಫಾಟಕ್ ಅವರೊಂದಿಗೆ 1903ರಲ್ಲಿ ರೈಲ್ವೆ ಕನ್‌ಸ್ಟ್ರಕ್ಷನ್ಗಳ ಗುತ್ತಿಗೆದಾರರಾದರು. “ಫಾಟಕ್-ವಾಲ್‌ಚಂದ್ ಪ್ರೈವೇಟ್ ಲಿಮಿಟೆಡ್” ಎಂಬ ಸಂಸ್ಥೆಯನ್ನು ಆರಂಭಿಸಿದರು.

ಬ್ರಿಟಿಷ್ ಸರ್ಕಾರ ವಾಲ್ ಚಂದ್ ಅವರನ್ನು ತನ್ನ ದೊಡ್ಡ ದೊಡ್ಡ ಕನ್‌ಸ್ಟ್ರಕ್ಷನ್ ಯೋಜನೆಗಳ ಕಂಟ್ರಾಕ್ಟರನನ್ನಾಗಿ ನೇಮಿಸಿಕೊಂಡಿತು. ಅವುಗಳ ನಿರ್ವಹಣೆಗಾಗಿ ತಮ್ಮ ಸಂಸ್ಥೆಯನ್ನು 1926ರಲ್ಲಿ ಟಾಟಾ ಕನ್‌ಸ್ಟ್ರಕ್ಷನ್ ಕಂಪೆನಿಯೊಂದಿಗೆ ವಿಲೀನಗೊಳಿಸಿದರು, “ಹಿಂದೂಸ್ಥಾನ್ ಕನ್‌ಸ್ಟ್ರಕ್ಷನ್” ಎಂಬ ಸಂಸ್ಥೆಯನ್ನು ಆರಂಭಿಸಿದರು. 1935ರಲ್ಲಿ ಟಾಟಾ ಕಂಪೆನಿಯು ಇವರ ಕಂಪೆನಿಯಿಂದ ಹೊರಕ್ಕೆ ಬಂದಾಗ ಪ್ರೆಮಿಯರ್ ಕನ್ ಸ್ಟ್ರಕ್ಷನ್ಸ್ ಎಂಬ ಹೊಸ ಕಂಪೆನಿಯನ್ನು ಆರಂಭಿಸಿದರು. ಅದು ಈಗ “ಹಿಂದೂಸ್ಥಾನ್ ಕನ್ ಸ್ಟ್ರಕ್ಷನ್ಸ್” ಹೆಸರಿನಲ್ಲಿಯೇ ಕಾರ್ಯನಿರತವಾಗಿದೆ.

ವಾಲ್ ಚಂದ್ ಹೀರಾಚಂದ್ ದೋಷಿ

ವಾಲ್ ಚಂದ್ ಅವರು ಸಮರ್ಪಕವಾಗಿ ನಿರ್ವಹಿಸಿದ ಯೋಜನೆಗಳು ಬೋರ್ ಘಾಟ್‌ನಲ್ಲಿ ಸುರಂಗಗಳ ನಿರ್ಮಾಣ, ತಾನ್ಸಾ ಸರೋವರದಿಂದ ಮುಂಬೈಗೆ ನೀರು ಸರಬರಾಜು ಆಗುವ ಪೈಪುಗಳ ಜೋಡಣೆ, ಬಾರ್ಸಿ ಲೈಟ್ ರೈಲ್ವೆಗೆ ಟ್ರಾಕ್ ನಿರ್ಮಾಣ, ಸಿಂಧು ನದಿಗೆ ಕಾಲ್ ಬಾಗ್ ಸೇತುವೆಯ ನಿರ್ಮಾಣ, ಇರವಾಡಿ ನದಿಗೆ ಅಡ್ಡಲಾಗಿ ಸೇತುವೆಯ ನಿರ್ಮಾಣ ಮೊದಲಾದವುಗಳು ಇವುಗಳಲ್ಲಿ ವಿಶೇಷವಾದದ್ದು ಮುಂಬೈಯನ್ನು ಪುಣೆಯಿಂದ ಪ್ರತ್ಯೇಕಿಸುವ ಭೋರ್‌ಘಾಟ್‌ನಲ್ಲಿ ಸುರಂಗಗಳನ್ನು ನಿರ್ಮಿಸಿ ರೈಲು ಮಾರ್ಗದಿಂದ ಅವೆರಡಕ್ಕೂ ನೇರ ಸಂಪರ್ಕವನ್ನು ಕಲ್ಪಿಸಿದುದು.

ಬೋರ್ ಘಾಟ್ 2017 ಅಡಿ ಎತ್ತರದ ಪರ್ವತಶ್ರೇಣಿ. ಅದರಲ್ಲಿ ಪಾದವನ್ನೂರಿ ನಿಲ್ಲಲೂ ಅವಕಾಶವಿಲ್ಲದ ಅತ್ಯಂತ ಕಡಿದಾದ ಬಂಡೆಗಳಿವೆ. ಅಂತಹ ಏರು ಪ್ರದೇಶದಲ್ಲಿ ದಾರಿ ಮಾಡಿ ರೈಲುಹಳಿಯನ್ನು ಹಾಕಬೇಕಿತ್ತು. ಅಷ್ಟು ಎತ್ತರದ ಪ್ರದೇಶವನ್ನು ಒಮ್ಮೆಗೇ ಏರಲು ಸಾಧ್ಯವಿಲ್ಲದ್ದರಿಂದ ಅಲ್ಲಲ್ಲಿ ಸುರಂಗಗಳನ್ನು ಕೊರೆದು ಅಲ್ಲಿ ರೈಲು ಬಂದ ದಾರಿಯಲ್ಲಿ ಯು-ಟರ್ನ್ ತೆಗೆದುಕೊಂಡು ಹಿಂದಕ್ಕೆ ಬಂದು ವೇಗವನ್ನು ಕ್ರಮಾಗತವಾಗಿ ಹೆಚ್ಚಿಸಿಕೊಂಡು ಮುಂದಕ್ಕೆ ಹೋಗುವ ಅವಕಾಶ ಕಲ್ಪಿಸಬಹುದಿತ್ತು. ಕೈಕರಣಗಳಿಂದ ಪರ್ವತವನ್ನು ಕಡಿದು ದಾರಿ ಮಾಡಬೇಕಿತ್ತು. ಅಲ್ಲಲ್ಲಿ ಮಾತ್ರ ಬಂಡೆಗಳನ್ನು ಸಿಡಿಸಿ ದಾರಿ ಮಾಡಬಹುದಾಗಿತ್ತು. ಅಲ್ಲಲ್ಲಿ ಇರುವ ಜಾರುವ ಬಂಡೆಗಳು, ಗುಹೆಗಳು, ಪರ್ವತವನ್ನು ಕಡಿದ ನಂತರ ಸಂಗ್ರಹವಾಗುವ ಪುಡಿಪುಡಿಯಾದ ಬಂಡೆಕಲ್ಲು ಚೂರುಗಳ ವಿಲೇವಾರಿ ಮುಂತಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕಿತ್ತು. ಈ ಎಲ್ಲ ಪಂಥಾಹ್ವಾನಗಳನ್ನು ಸ್ವೀಕರಿಸಿ ಎರಡು ವರ್ಷಗಳಲ್ಲಿ ಹಿಂದುಸ್ಥಾನ್ ಕನ್ಸ್ಟ್ರಕ್ಷನ್ ಕಂಪೆನಿಯು ಸುರಂಗಗಳನ್ನು ನಿರ್ಮಿಸಿತು. 8 ವರ್ಷಗಳ ಅವಧಿಯಲ್ಲಿ ಬಾಂಬೆ ಮತ್ತು ಪುಣೆಗಳನ್ನು ಜೋಡಿಸುವ ರೈಲುಮಾರ್ಗ ಸಿದ್ಧವಾಯಿತು. (ಒಂದು ವಿಷಾದದ ಸಂಗತಿಯೆಂದರೆ ಈ ರೈಲ್ವೆ ನಿರ್ಮಾಣದಲ್ಲಿ ವಿದೇಶೀಯರ ಹೆಸರು ಮಾತ್ರ ದಾಖಲಾಗಿದೆ) ಅದು ಬಹಳ ಅಪಾಯಕಾರಿಯಾದ ಮತ್ತು ಯಾವುದೇ ಇಂಥ ನಿರ್ಮಾಣದ ಮಾದರಿಯ ಹಿನ್ನೆಲೆಯಿಲ್ಲದೆ ನಿರ್ವಹಿಸಿದ ಅಸಮಾನವಾದ ಅಸದೃಶವಾದ ಅದ್ಭುತವಾದ ಕಾರ್ಯ ಆಗಿದೆ.


ದೊಡ್ಡ ಪ್ರಮಾಣದಲ್ಲಿ ಸಕ್ಕರೆ ತಯಾರಿಸುವ ಶುಗರ್ ಫಾರ್ಮಿಂಗ್‌ಗಾಗಿ 1908ರಲ್ಲಿ ವಾಲ್ ಚಂದ್ ಅವರು ಸ್ಥಾಪಿಸಿದ “ವಾಲ್‌ಚಂದ್‌ನಗರ್ ಇಂಡಸ್ಟ್ರೀಸ್” ಎಂಬ ಕಂಪೆನಿಯು ಈಗ ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತು ಏರೋಸ್ಪೇಸ್ ಸೆಕ್ಟರ್ ಗಳಿಗೆ ಅಗತ್ಯವಾದ ಸ್ಟ್ರಾಟೆಜಿಕ್ ಕಾಂಪೊನೆಂಟ್ ಗಳನ್ನು ಒದಗಿಸುತ್ತದೆ, ಇಸ್ರೊದ ಚಂದ್ರಯಾನಕ್ಕೂ ಕಾಂಪೊನೆಂಟ್ ಗಳನ್ನು ಒದಗಿಸಿದೆ. ವಿದೇಶಗಳಿಗೂ ಸಕ್ಕರೆ ಪ್ಲಾಂಟ್ ಮಷಿನರಿ, ಸಿಮೆಂಟ್ ಪ್ಲಾಂಟ್ ಮಷಿನರಿ ಮೊದಲಾದವುಗಳನ್ನು ಒದಗಿಸುತ್ತದೆ.

1900ರ ವೇಳೆಗೆ ಬ್ರಿಟಿಷ್ ಕಂಪೆನಿಗಳು ಶಿಪ್ಪಿಂಗ್ ಉದ್ಯಮದಲ್ಲಿ ಭದ್ರಕೋಟೆಯನ್ನು ಕಟ್ಟಿಕೊಂಡಿದ್ದವು. ಸ್ವದೇಶೀ ಚಳುವಳಿಯಿಂದ ಪ್ರಭಾವಿತರಾಗಿದ್ದ ವಾಲ್ ಚಂದ್ ಅವರು ನರೋತ್ತಮ ಮೊರಾರ್ಜಿಯವರೊಂದಿಗೆ ಹಡಗು ಪ್ರಯಾಣೋದ್ಯಮಕ್ಕೆ ಕೈಹಾಕಿದರು. ಗ್ವಾಲಿಯರ್ನ ಸಿಂಧಿಯಾಗಳಿಂದ “ಎಸ್. ಎಸ್. ಲಾಯಲ್ಟಿ” ಎಂಬ ಸ್ಟೀಮರನ್ನು ಕೊಂಡುಕೊಂಡು “ದಿ ಸಿಂಧಿಯ ಸ್ಟೀಮ್ ನ್ಯಾವಿಗೇಷನ್ ಕಂಪೆನಿ ಲಿಮಿಟೆಡ್” ಎಂಬ ಕಂಪೆನಿಯನ್ನು 1919ರಲ್ಲಿ ಆರಂಭಿಸಿದರು. ಬಾಂಬೆಯಲ್ಲಿ ಕಂಪೆನಿಯನ್ನು 1919ರ ಮಾರ್ಚ್ ತಿಂಗಳಿನಲ್ಲಿ ರಿಜಿಸ್ಟರ್ ಮಾಡಿಸಿದರು. ಬ್ರಿಟಿಷ್ ಕಂಪೆನಿಗಳೊಂದಿಗೆ ಸ್ವದೇಶಿಯಾಗಿ ಸ್ಪರ್ಧೆಗೆ ನಿಂತರು. 1919ರ ಏಪ್ರಿಲ್ ತಿಂಗಳಿನಲ್ಲಿ ಎಸ್.ಎಸ್. ಲಾಯಲ್ಟಿ ಹಡಗು ಭಾರತೀಯ ದ್ವಜವನ್ನೇರಿಸಿಕೊಂಡು ತನ್ನ ಮೊಟ್ಟಮೊದಲ ಪ್ರಯಾಣವನ್ನು ಬಾಂಬೆಯಿಂದ ಲಂಡನ್ನಿಗೆ ಮಾಡಿತು. ವಾಲ್ ಚಂದ್ ಮತ್ತು ನರೋತ್ತಮ ಮೊರಾರ್ಜಿಯವರಿಬ್ಬರೂ ಆ ಹಡಗಿನಲ್ಲಿ ಪ್ರಯಾಣದುದ್ದಕ್ಕೂ ಇದ್ದರು.

ಬ್ರಿಟಿಷ್ ಸರ್ಕಾರ ಭಾರತೀಯ ಹಡಗುಗಳು ಓಡಾಡುವ ಮಾರ್ಗ, ಪ್ರಯಾಣಕ್ಕೆ ಹಡಗು ಕಂಪೆನಿಯವರು ವಿಧಿಸುವ ದರವೇ ಮೊದಲಾದವುಗಳೆಲ್ಲದರ ಮೇಲೆ ಅತಿಯಾದ ನಿರ್ಬಂಧಗಳನ್ನು ವಿಧಿಸಿತು. ಹಡಗಿನ ವ್ಯವಹಾರ ಯಾವ ರೀತಿಯಲ್ಲೂ ಲಾಭಕರ ಆಗದಂತೆ ನೋಡಿಕೊಂಡಿತು. ಬ್ರಿಟಿಷ್ ಹಡಗು ಕಂಪೆನಿಗಳ ಹಿತಾಸಕ್ತಿಯನ್ನು ಕಾಪಾಡಿತು. ವಾಲ್ ಚಂದ್ ಅವರು ವಿದೇಶೀ ಕಂಪೆನಿಗಳೊಂದಿಗೆ ರೂಟ್(ಓಡಾಡುವ ಮಾರ್ಗ)ಗಳ ಒಪ್ಪಂದ ಮಾಡಿಕೊಂಡು ನ್ಯಾಯಯುತ ಹೋರಾಟಕ್ಕೆ ನಿಂತರು. ತಮ್ಮ ಕಂಪೆನಿಯ ಅಸ್ತಿತ್ವವನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ಅವರು 1929ರಿಂದ 1950ರ ವರೆಗೂ ದಿ ಸಿಂಧಿಯ ಸ್ಟೀಮ್ ನ್ಯಾವಿಗೇಷನ್ ಕಂಪೆನಿ ಲಿಮಿಟೆಡ್”ನ ಚೇರ್ಮನ್ ಆಗಿದ್ದರು. 1950ರ ವೇಳೆಗೆ ಅವರ ಕಂಪೆನಿಯಲ್ಲಿ 54 ಸ್ಟೀಮರ್‌ಗಳು ಇದ್ದವು.

ರಾವಲ್ ಗಾಂವ್‌ನಲ್ಲಿ ಅರೆ ಬಂಜರು ಕೃಷಿ ಭೂಮಿ ಮಾರಾಟಕ್ಕಿದೆ ಎಂದು ಸರ್ಕಾರಿ ಅಧಿಕಾರಿಯಿಂದ ತಿಳಿದ ವಾಲ್ ಚಂದ್ ಅವರು 1923ರಲ್ಲಿ 1500 ಎಕರೆ ಭೂಮಿಯನ್ನು ಕೊಂಡರು. ಕೃಷಿಕರು, ರಸಾಯನಶಾಸ್ತ್ರಜ್ಞರು, ಸಿವಿಲ್ ಇಂಜನಿಯರುಗಳ ಪ್ರಾಯೋಗಿಕ ಪರೀಕ್ಷೆಯ ಸಹಾಯದಿಂದ ಅಲ್ಲಿ ಕಬ್ಬು ಬೆಳೆಯಬಹುದೆಂದು ನಿರ್ಧರಿಸಿದರು. ಕೃಷಿಯಲ್ಲಿ ಕಬ್ಬಿನ ಬೆಳೆಗೆ ಆದ್ಯತೆ ಇಲ್ಲದ ಕಾಲದಲ್ಲಿ ಭಾರತದ ಆರ್ಥಿಕ ಪ್ರಗತಿ ರೈತರ ಕೊಡಿಗೆಯಿಂದ ಮಾತ್ರ ಸಾಧ್ಯ ಎಂಬ ಮುನ್ನೋಟದಿಂದ 10 ವರ್ಷಗಳ ಅವರ ಸತತ ಪ್ರಯತ್ನದಿಂದ ಕಬ್ಬಿನ ಫಾರ್ಮ್ ತಲೆಯೆತ್ತಿತು. 1933ರಲ್ಲಿ ಭಾರತದ ಪ್ರಪ್ರಥಮ ಸಕ್ಕರೆ ಕಾರ್ಖಾನೆ “ರಾವಲ್ ಗಾಂವ್ ಶುಗರ್ ಮಿಲ್(ಫ್ಯಾಕ್ಟರಿ)” ಸ್ಥಾಪಿತವಾಯಿತು. 1934ರಲ್ಲಿ ಪುಣೆಯಿಂದ 200 ಕಿಲೋಮೀಟರ್ ದೂರದಲ್ಲಿರುವ ಕಲಂಬ್ ನಲ್ಲಿ ಇನ್ನೊಂದು ಸಕ್ಕರೆ ಕಾರ್ಖಾನೆಯೂ ಆರಂಭವಾಯಿತು. 1942ರಲ್ಲಿ ಕನ್ಫೆಕ್ಷನರಿ ವಿಭಾಗ ಆರಂಭವಾಯಿತು. ಅದು ರಾವಲ್ ಗಾಂವ್ ಬ್ರಾಂಡ್ ನಲ್ಲಿ ಮಾವು, ಕಾಫಿ, ಚೆರ್ರಿ ಮೊದಲಾದ ಸ್ವಾಭಾವಿಕ ರುಚಿಯ ಹತ್ತು ಹಲವು ವಿವಿಧ ಆಕರ್ಷಕ ಬಣ್ಣ ಮತ್ತು ಪ್ಯಾಕಿಂಗ್ ಗಳಲ್ಲಿ ವಿವಿಧ ಕ್ಯಾಂಡಿಗಳನ್ನು ಉತ್ಪಾದಿಸಿತು. ರಾವಲ್ ಗಾಂವ್ ಹಳ್ಳಿಯು ಈಗ ವಾಲ್ ಚಂದ್ ನಗರ್ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ವಾಲಚಂದ್ ಅವರ ಶುಗರ್ ಮಿಲ್ ಗಳು ಭಾರತದ ಕನ್ಫೆಕ್ಷನರಿ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿವೆ.

ಚಾಕೊ ಕ್ರೀಂ, ಕಾಫಿ ಬ್ರೇಕ್, ಪಾನ್ ಪಸಂದ್, ಮ್ಯಾಂಗೊಮೂಡ್, ಟಫ್ಟಿಫ್ರೂಟಿ ವಿವಿಧ ಸ್ವಾಭಾವಿಕ ರುಚಿಯ ರಾವಲ್ ಗಾಂವ್ ಕ್ಯಾಂಡಿಗಳು ವಾಲ್‌ಚಂದ್ ಅವರ ಕಾರಖಾನೆಗಳು ಕಗ್ಗಾಡಿನಂತಿದ್ದ ಪ್ರದೇಶಗಳನ್ನು ಸುಂದರ ಉದ್ಯಾನವನಗಳನ್ನಾಗಿಸಿವೆ. ಅವು ಪರಿಸರ ಸ್ನೇಹಿಗಳೂ ಆಗಿವೆ. ಕಬ್ಬಿನ ದಂಟಿನಿಂದ ದೊರಕುವ ನೀರನ್ನು ಸಕ್ಕರೆ ಉತ್ಪಾದನೆಗೆ ಬಳಸಿಕೊಳ್ಳುತ್ತವೆ, ಕಬ್ಬಿನಿಂದ ರಸ ತೆಗೆದ ನಂತರ ಉಳಿದ ಒಣ ಸಿಪ್ಪೆಯಿಂದ ಎನರ್ಜಿಯನ್ನು ಉತ್ಪಾದಿಸುತ್ತವೆ. ಹೆಚ್ಚುವರಿ ಎನರ್ಜಿಯನ್ನು ಪಟ್ಟಣಗಳಿಗೆ ಒದಗಿಸುತ್ತವೆ. ಫ್ಯಾಕ್ಟರಿಗಳ ಸುತ್ತ ದೊಡ್ಡ ದೊಡ್ಡ ಮರಗಳನ್ನು ಬೆಳೆಸಿ ಪರಿಸರ ಮಾಲಿನ್ಯವನ್ನು ತಡೆದಿವೆ. ಕಬ್ಬುಬೆಳೆಗಾರರು, ಉದ್ಯೋಗಾಕಾಂಕ್ಷಿಗಳು, ವ್ಯಾಪಾರಸ್ಥರು ಇವರುಗಳ ಮುರಿಯದ ಕೊಂಡಿಯನ್ನು ನಿರ್ಮಿಸಿವೆ. ಇಡೀ ನಾಸಿಕ್ ಬೆಲ್ಟ್ನ ಜನರ ಮುಖಗಳಲ್ಲಿ ಪರಿಮಳಭರಿತ ಮುಗುಳ್ನಗೆಯನ್ನು ಅರಳಿಸಿವೆ.

ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ವೃತ್ತಿಪರ ನಿರ್ದೇಶಕರನ್ನೊಳಗೊಂಡು ಭಾರತದ ಕನ್‌ಫೆಕ್ಷನರಿ ಮಾರುಕಟ್ಟೆಯಲ್ಲಿ ಮುನ್ಚೂಣಿಯಲ್ಲಿರುವ ರಾವಲ್ ಗಾಂವ್ ಶುಗರ್ ಫಾರ್ಮ್ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರ ಕಣ್ಣುಗಳನ್ನು ತಾವೆಲ್ಲ ವಾಲ್ ಚಂದ್ ಕುಟುಂಬದವರು ಎಂಬ ಅಭಿಮಾನ ಈ ಹೊಳೆಯಿಸಿದರೆ ರಾವಲ್ ಗಾಂವ್ ಎಂಬ ಹೆಸರು ರಾವಲ್ ಗಾಂವ್ ಬ್ರಾಂಡಿನ ಕ್ಯಾಂಡಿನ ರುಚಿಯ ಸ್ವಾದವನ್ನು ಸವಿದವರು ಅದನ್ನು ತಮ್ಮ ನೆನಪಿನ ನಾಲಿಗೆಯಲ್ಲಿ ಪುನಃ ಆಸ್ವಾದಿಸುವಂತೆ ಮಾಡಿ ಅವರ ಕಣ್ಣುಗಳನ್ನು ಹೊಳೆಯಿಸುತ್ತದೆ. ತಾವು ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರಿಗೂ ಪ್ರಿಯವಾದ ರಾವಲ್ ಗಾಂವ್ ಬ್ರಾಂಡಿನ ಕ್ಯಾಂಡಿಯ ಮಾರಾಟಗಾರರು ಎನ್ನುವ ಸಂತೋಷ ಮಾರಾಟಗಾರರ ಕಣ್ಣುಗಳನ್ನು ಹೊಳೆಯಿಸುತ್ತದೆ – ಇದು ವಾಲ್ ಚಂದ್ ಅವರ ಒಂದು ಹೆಗ್ಗಳಿಕೆ. ಈ ಫಾರ್ಮ್ ಈಗ 2024ರ ಫೆಬ್ರವರಿಯಲ್ಲಿ ರಿಲೆಯನ್ಸ್ ಕಂಪೆನಿಯ ಒಡೆತನಕ್ಕೆ ಬಂದಿದೆ.

1939ರಲ್ಲಿ ಆಕಸ್ಮಿಕವಾಗಿ ಭೇಟಿಯಾದ ಅಮೆರಿಕನ್ ಏರ್‌ಕ್ರಾಫ್ಟ್ ಕಂಪೆನಿಯ ಮ್ಯಾನೇಜರ್ ನಿಂದ ಸ್ಫೂರ್ತಿ ಪಡೆದ ವಾಲ್ ಚಂದ್ ಅವರು ಧರ್ಮ್ ಸೇವ್ ಮೂಲ್ ರಾಜ್ ಖಟೌ ಮತ್ತು ಕೀಲಚಂದ್ ಅವರೊಂದಿಗೆ ಭಾರತದಲ್ಲಿ “ಹಿಂದೂಸ್ಥಾನ್ ಏರ್‌ಕ್ರಾಫ್ಟ್” ಫ್ಯಾಕ್ಟರಿಯನ್ನು 1940ರಲ್ಲಿ ಮೈಸೂರು ಸಂಸ್ಥಾನದಲ್ಲಿ ಮೈಸೂರು ಮಹಾರಾಜರ ಮತ್ತು ದಿವಾನರ ಬೆಂಬಲದೊಂದಿಗೆ ಆರಂಭಿಸಿದರು. 1941ರಲ್ಲಿ ಬ್ರಿಟಿಷ್ ಸರ್ಕಾರ ಈ ಕಂಪೆನಿಯಲ್ಲಿ ಮೂರನೇ ಒಂದು ಭಾಗದಷ್ಟು ಒಡೆತನವನ್ನು ಪಡೆಯಿತು. ಹಿಂದೂಸ್ಥಾನ್ ಏರ್ ಕ್ರಾಫ್ಟ್ ಸ್ವಂತವಾಗಿ ಮೊಟ್ಟಮೊದಲಿಗೆ ಜಿ-1 ಗ್ಲೈಡರ್ ನ್ನು 1941-42ರ ಅವಧಿಯಲ್ಲಿ ನಿರ್ಮಿಸಿತು. ಇದು 1942ರಲ್ಲಿ ಪ್ರಪ್ರಥಮವಾಗಿ ಹಾರಾಡಿತು. ಹಾರ್ಲೊ ಪಿ.ಸಿ.5 ಎ ಎಂಬ ಏರ್‌ಕ್ರಾಫ್ಟ್‌ನ್ನು ಬಿಡಿಭಾಗಗಳನ್ನು ಜೋಡಿಸಿ 1941ರಲ್ಲಿ ನಿರ್ಮಿಸಿತು. ಇದು ಭಾರತದ ರಾಯಲ್ ಏರ್ ಫೋರ್ಸ್‌ಗೆ 1942ರಲ್ಲಿ ಸೇರ್ಪಡೆಯಾಯಿತು.

ಹಿಂದೂಸ್ಥಾನ್ ಏರ್‌ಕ್ರಾಫ್ಟ್, ಸ್ವಂತವಾಗಿ ನಿರ್ಮಿಸಿದ ಗ್ಲೈಡರ್ ಜಿ-1, ಜೋಡಿಸಿ ನಿರ್ಮಿಸಿದ ಮೊದಲ ಏರ್‌ಕ್ರಾಫ್ಟ್ ಹಾರ್ಲೊ ಪಿ.ಸಿ.5 ಎ, ಬ್ರಿಟಿಷ್ ಸರ್ಕಾರ ಕಂಪೆನಿಯನ್ನು ರಾಷ್ಟ್ರೀಕರಣಗೊಳಿಸಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅದನ್ನು ಅಮೆರಿಕಾಗೆ ಅದರ ಮಿಲಿಟರಿ ವಿಮಾನಗಳನ್ನು ದುರಸ್ತಿ ಮಾಡಿಸಿಕೊಳ್ಳಲು ಮತ್ತು ಕೂಲಂಕುಷ ಪರೀಕ್ಷೆಗೆ ಒಳಪಡಿಸಿಕೊಳ್ಳಲು ಬಿಟ್ಟುಕೊಟ್ಟಿತು. ಯುದ್ಧಾನಂತರ ಹಿಂದೂಸ್ಥಾನ್ ಏರ್‌ಕ್ರಾಫ್ಟ್ ಬ್ರಿಟಿಷ್ ಸರ್ಕಾರದ ವಶಕ್ಕೆ ಬಂದಿತು, “ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್” ಆಯಿತು.

ವಾಲ್ ಚಂದ್ ಅವರು ಬಲವಾದ ಸ್ವದೇಶೀ ಶಿಪ್ಪಿಂಗ್ ಇಂಡಸ್ಟ್ರಿಯ ಅಗತ್ಯವನ್ನು ಮನಗಂಡಿದ್ದರು. ಭಾರತೀಯರದೇ ಆದ ಶಿಪ್ಪಿಂಗ್ ಯಾರ್ಡ್ ಇದ್ದ ಹೊರತೂ ಹಡಗು ಉದ್ಯಮಕ್ಕೆ ಭವಿಷ್ಯವಿಲ್ಲ ಎಂಬುದು ಅವರಿಗೆ ಮನವರಿಕೆಯಾಗಿತ್ತು. ಪ್ರಾದೇಶಿಕವಾದ ಹೊಸ ಹೊಸ ಶಿಪ್ಪಿಂಗ್ ವೆಂಚರ್ ಗಳನ್ನು ಬೆಂಬಲಿಸಿದರು. 1940ರಲ್ಲಿ ವಿಶಾಖಪಟ್ಟಣದಲ್ಲಿ “ಸಿಂಧಿಯಾ ಶಿಪ್‌ಯಾರ್ಡ್ ಲಿಮಿಟೆಡ್” ನ್ನು ಆರಂಭಿಸಿದರು. ವಿಶಾಖಪಟ್ಟಣವು ಮೊದಲಿನಿಂದಲೂ ಜಲ-ವ್ಯಾಪಾರದ ಮತ್ತು ಹಡಗು ಕಟ್ಟುವ ಕೇಂದ್ರ ಆಗಿತ್ತು. ಹಡಗು ಕಟ್ಟುವ ಜಾಗವನ್ನು ಆಯ್ಕೆ ಮಾಡಿಕೊಂಡು, ಅಗತ್ಯವಿದ್ದ ಪರಿಣತರನ್ನು ಹೊಂದಿಸಿಕೊಂಡು, ಬೇಕಾದ ಸಲಕರಣೆಗಳನ್ನು ಜೋಡಿಸಿಕೊಳ್ಳುವುದೇ ಮುಂತಾದ ಪೂರ್ವ ಸಿದ್ಧತೆಗಳೊಂದಿಗೆ ವಾಲ್ ಚಂದ್ ಅವರು 1940ರಲ್ಲಿ ಕರೆಸಿದ ಕನ್‌ಸಲ್ಟಿಂಗ್ ಇಂಜನಿಯರ್ ಮೊದಲಿಗೆ ವರ್ಷಕ್ಕೆ ಎರಡು ಹಡಗುಗಳನ್ನು ಆನಂತರ ನಾಲ್ಕು ಹಡಗುಗಳನ್ನು ಕಟ್ಟುವ ಯೋಜನೆಯನ್ನು ಸಿದ್ಧಪಡಿಸಿಕೊಟ್ಟರು.

ಆ ವೇಳೆಗೆ ಎರಡನೇ ಮಹಾಯುದ್ಧ ತೀವ್ರವಾಯಿತು. ಶಿಪ್ಪಿಂಗ್ ಯಾರ್ಡ್ ಮೇಲೆ ಬಾಂಬ್ ಧಾಳಿ ಆಗಬಹುದೆಂಬ ಭಯ ಉಂಟಾಯಿತು. ಕೆಲಸ ಸ್ಥಗಿತಗೊಂಡಿತು. ಯುದ್ಧಾನಂತರ ಯೋಜನೆಗೆ ಚಾಲನೆ ದೊರೆಯಿತು. 1948ರಲ್ಲಿ ಜಲ್- ಉಷ ಹೆಸರಿನ ಹಡಗು ನಿರ್ಮಾಣಗೊಂಡು ದೇಶಕ್ಕೆ ಸಮರ್ಪಿತವಾಯಿತು. ಈ ಉದ್ದಿಮೆಯನ್ನು ಭಾರತ ಸರ್ಕಾರ ಭದ್ರ ಆರ್ಥಿಕ ಮತ್ತು ರಕ್ಷಣಾ ವ್ಯವಸ್ಥೆಯ ದೃಷ್ಟಿಯಿಂದ 1961ರಲ್ಲಿ ರಾಷ್ಟ್ರೀಕರಣ ಗೊಳಿಸಿತು.

ಮೊದಲಿಗೆ ನಿರ್ಮಿಸಿದ “ಜಲ್-ಉಷಾ” ಹಡಗು

1939ರಲ್ಲಿಯೇ ಭಾರತದಲ್ಲಿ ಕಾರುತಯಾರಿಕೆಯ ಇಂಡಸ್ಟ್ರಿಯ ಅಗತ್ಯವಿದೆಯೆಂದು ಯೋಚಿಸಿದ ವಾಲ್‌ಚಂದ್, ದರ್ಮ್ ಸೇವ್ ಮೂಲರಾಜ ಖಟೌ ಮತ್ತು ತುಲಸಿದಾಸ್ ಕೀಲಚಂದ್ ಅವರು ಕ್ರಿಸ್ಲರ್ (Chrysler) ಆಟೊಮೋಟಿವ್ ಕಂಪೆನಿಯೊಂದಿಗೆ 1941ರಲ್ಲಿ ಭಾರತದಲ್ಲಿ ಕಾರು, ಟ್ರಕ್ ಮತ್ತು ವ್ಯಾನ್ ಉತ್ಪಾದಿಸುವ ಯೋಜನೆಯ ಒಪ್ಪಂದವನ್ನು ಬಾಂಬೆಯಲ್ಲಿ ಮಾಡಿಕೊಂಡರು. ಎರಡನೇ ಮಹಾಯುದ್ಧ ಮತ್ತು ಸ್ವಾತಂತ್ರ್ಯ ಚಳುವಳಿಯ ತೀವ್ರ ಹೋರಾಟ ಇವುಗಳ ನಡುವೆ ವಾಲ್ ಚಂದ್ ಅವರ ಆಟೊಮೋಟಿವ್ ಕಂಪೆನಿ “ಪ್ರೆಮಿಯರ್ ಆಟೊಮೊಬೈಲ್ ಲಿಮಿಟೆಡ್” 1944ರಲ್ಲಿ ಅಸ್ತಿತ್ವಕ್ಕೆ ಬಂದಿತು. ಮೊದಲಿಗೆ ಅದು ಬಿಡಿಭಾಗಗಳ ಜೋಡಣೆಯನ್ನು ಮಾಡಿತು. 1947ರಲ್ಲಿ ಸ್ವಾತಂತ್ರ್ಯ ಬರುವ ಪೂರ್ವದಲ್ಲಿ ಅದು ಉತ್ಪಾದಿಸಿದ ಪ್ರಥಮ ಕಾರು ಮತ್ತು ಟ್ರಕ್ ರಸ್ತೆಯಲ್ಲಿ ಓಡಾಡಿದವು.

1948ರಲ್ಲಿ ಅದು “ಇನ್ ಹೌಸ್ ಕಾಂಪೊನೆಂಟ್” ಗಳ ವಿಭಾಗವನ್ನು ಸ್ಥಳೀಯವಾಗಿ ರೂಪಿಸಿತು. 1950ರಿಂದ ವಿವಿಧ ಮಾಡೆಲ್ ಗಳ ಕಾರು, ವ್ಯಾನ್, ಲಾರಿಗಳ ಉತ್ಪಾದನೆ ಆರಂಭವಾದವು. ಡಾಡ್ಜ್, ಪ್ಲೈಮೌತ್, ಫಾರ್ಗೊ, ಡಿ ಸೋಟೋ ಬ್ರಾಂಡ್ ನಲ್ಲಿ “ಪ್ರೆಮಿಯರ್ ಆಟೊಮೊಬೈಲ್ ಲಿಮಿಟೆಡ್”ನ ಕಾರು, ವ್ಯಾನ್, ಲಾರಿಗಳು ಗ್ರಾಹಕರ ಕೈ ಸೇರಿದವು. ವಾಲ್ ಚಂದ್ ಅವರ ಕಂಪೆನಿಯು ಕಾರುಗಳನ್ನು ಸ್ಥಳೀಯವಾಗಿ ತಯಾರಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದ “ಬಿರ್ಲಾ ಹಿಂದೂಸ್ಥಾನ್ ಮೋಟಾರ್ಸ್” ಗ್ರೂಪನ್ನು ಹಿಂದಕ್ಕಿರಿಸಿತು.

1955ರಲ್ಲಿ ಫಿಯಟ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ಕಾರುಗಳಿಗೆ ಅಗತ್ಯವಾದ ಇಂಜಿನ್ ಗಳನ್ನು ಉತ್ಪಾದಿಸಲಾರಂಭಿಸಿತು. 1956ರಲ್ಲಿ ಚೇಸಿಸ್ (Chassis)ನ ಬಿಡಿಭಾಗಗಳನ್ನು ಸ್ಥಳೀಯವಾಗಿ ತಯಾರಿಸಲಾರಂಭಿಸಿತು. 1957ರ ವೇಳೆಗೆ ದಿನಕ್ಕೆ 40 ಲಾರಿಗಳನ್ನು ಉತ್ಪಾದಿಸುವ, 60% ಬಿಡಿಭಾಗಗಳನ್ನು ತಯಾರಿಸುವ ಸಾಮರ್ಥ್ಯ ಕಂಪೆನಿಗೆ ಇತ್ತು. 2019ರ ವರೆಗೂ ಭಾರತೀಯ ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವ ಕಾರು, ವ್ಯಾನ್, ಲಾರಿಗಳನ್ನು ವಿವಿಧ ಮಾಡೆಲ್ ಗಳಲ್ಲಿ ಉತ್ಪಾದಿಸಿದ “ಪ್ರೆಮಿಯರ್ ಆಟೊಮೊಬೈಲ್ ಲಿಮಿಟೆಡ್” ಕಂಪೆನಿಯು 2019ರಲ್ಲಿ ಸಂಪೂರ್ಣವಾಗಿ ತನ್ನದು ಎಂಬುದೆಲ್ಲವನ್ನು ಮಾರಾಟ ಮಾಡಿಬಿಟ್ಟಿದೆ.

ವಾಲ್ ಚಂದ್ ಅವರು ಡೆಕನ್ ಶುಗರ್ ಫ್ಯಾಕ್ಟರೀಸ್ ಅಸೋಸಿಯೇಷನ್ ಮತ್ತು ಡೆಕನ್ ಶುಗರ್ ಟೆಕ್ನಕಾಲೊಜಿಸ್ಠ್ಸ್ ಅಸೋಸಿಯೇಷನ್‌ಗಳನ್ನು ಸ್ಥಾಪಿಸಿದ್ದರು. ಅಸೋಸಿಯೇಷನ್ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನುಫ್ಯಾಕ್ಚರ್ಸ್”, “ದಿ ಆಟೊಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯ” ಸಂಸ್ಥೆಗಳ ಸ್ಥಾಪನೆಗೆ ಸಹಕರಿಸಿದ್ದರು. ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಗೆ ಮತ್ತು ನಿರ್ವಹಣೆಗೆ ಚಾರಿಟಬಲ್ ಟ್ರಸ್ಟ್ ಗಳನ್ನು ಆರಂಭಿಸಿದ್ದರು. ಅವುಗಳಲ್ಲಿ ಕೆಲವು – ವಾಲ್ ಚಂದ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಶೋಲಾಪುರ್; ವಾಲ್ ಚಂದ್ ಕಾಲೇಜ್ ಆಫ್ ಇಂಜನಿಯರಿಂಗ್, ಸಾಂಗ್ಲಿ; ವಾಲ್ ಚಂದ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್, ಶೋಲಾಪುರ್; ಶ್ರೀಮತಿ ಕಸ್ತೂರಬಾಯಿ ವಾಲ್ ಚಂದ್ ಕಾಲೇಜ್, ಸಾಂಗ್ಲಿ. ಪ್ರಮುಖವಾದವು.

ವಾಲ್ ಚಂದ್ ಅವರು ಮೊದಲೇ ಸ್ಥಾಪಿತರಾದ ವ್ಯವಹಾರಸ್ಥ ಮನೆತನದವರು ಆಗಿರದಿದ್ದರೂ ಅವರು ಕೈಗೊಂಡ ಯೋಜನೆಗಳೆಲ್ಲ ಭವ್ಯವಾಗಿದ್ದವು. ಅವರಿಗೆ ತಾವು ಅಂದುಕೊಂಡದ್ದನ್ನು ಹೇಗೆ ಯಶಸ್ವಿಗೊಳಿಸಬೇಕು ಎಂಬುದು ತಿಳಿದಿತ್ತು. ಅದಕ್ಕಿಂತ ಹೆಚ್ಚಾಗಿ ಮಾನವ ಸಂಪನ್ಮೂಲವನ್ನು ಹೇಗೆ ಯೋಜಿಸಬೇಕು, ನಿರ್ಧರಿಸಿದ ದಿನದೊಳಗೆ ಕಾರ್ಯವನ್ನು ಹೇಗೆ ಮಾಡಿ ಮುಗಿಸಬೇಕು ಮತ್ತು ಬೇಕಾದ ಹಣವನ್ನು ಹೇಗೆ ಸಂಗ್ರಹಿಸಬೇಕು ಎಂಬುದು ಬಹಳ ಚೆನ್ನಾಗಿ ತಿಳಿದಿತ್ತು.

ತಾವು ಸ್ಥಾಪಿಸಿದ ಕಂಪೆನಿಗಳಲ್ಲಿ ಮ್ಯಾನೇಜ್‌ಮೆಂಟ್ ಹಿಡಿತವನ್ನು ಹೊಂದಿದ್ದರೂ ಅವರು ಯಾವುದರಲ್ಲೂ ಅತ್ಯಂತ ಹೆಚ್ಚು ಮೊತ್ತದ ಶೇರುದಾರರು ಆಗಿರಲಿಲ್ಲ. ಅವರಿಗೆ ಮಾಸ್ ಮೀಡಿಯಾದ ಶಕ್ತಿ ಗೊತ್ತಿತ್ತು. ಅದನ್ನು ಅವರು ತಮ್ಮ ಯೋಜನೆಗಳಿಗೆ ಸಾರ್ವಜನಿಕರ ಬೆಂಬಲವನ್ನು ಪಡೆಯಲು ಬಳಸಿಕೊಂಡರು. ಆ ಮೂಲಕ ಬ್ರಿಟಿಷ್ ಆಡಳಿತ ತಮ್ಮ ಯೋಜನೆಗಳಿಗೆ ತೊಡರುಗಾಲು ಇಡದಂತೆ ನೋಡಿಕೊಂಡರು. ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ, ಹೋರಾಟಗಾರರಿಗೆ ಬೆಂಬಲ ನೀಡಿದರೂ ಅದು ಬ್ರಿಟಿಷ್ ಅಧಿಕಾರಿಗಳೊಂದಿಗೆ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಅಡ್ಡಿಯಾಗದಂತೆ ನೋಡಿಕೊಂಡರು.

ಬಹುಮುಖಿಯಾಗಿ ಸ್ವತಂತ್ರ ಪೂರ್ವಭಾರತದ ಕೈಗಾರಿಕಾಭಿವೃದ್ಧಿಗಾಗಿ ಕಾರ್ಯೋನ್ಮುಖ ಆದ ವಾಲ್ ಚಂದ್ ಹೀರಾಚಂದ್ ಅವರದು ಭಾರತ ಸ್ವತಂತ್ರ ಆಗುವ ವೇಳೆಗೆ ಭಾರತದ 10 ಅತಿದೊಡ್ಡ ಬಿಸಿನೆಸ್‌ಹೌಸ್‌ಗಳಲ್ಲಿ ಒಂದು ಆಗಿತ್ತು. ಅವರ ಎಸ್.ಎಸ್, ಲಾಯಲ್ಟಿಯ ಹಡಗು 1919ರಲ್ಲಿ ಮುಂಬೈನಿಂದ ಲಂಡನ್ ವರೆಗೆ ಯಶಸ್ವಿಯಾಗಿ ಪ್ರಯಾಣ ಮಾಡಿ ಇತಿಹಾಸ ನಿರ್ಮಿಸಿತು. ವಾಲ್ ಚಂದ್ ಅವರು “ಕಬ್ಬಿನ ಫಾರಂ”ನ ಕಲ್ಪನೆಯೂ ಇಲ್ಲದ ಕಾಲದಲ್ಲಿ ಕಬ್ಬನ್ನು ಬೆಳೆದು ಸಕ್ಕರೆ ತಯಾರಿಸಿ ಮಹಾರಾಷ್ಟ್ರವನ್ನು ಸಕ್ಕರೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಿದರು. ಏರ್ ಕ್ರಾಫ್ಟ್, ಹಡಗುಗಳ ನಿರ್ಮಾಣದ ಕನಸೂ ಇಲ್ಲದ ಕಾಲದಲ್ಲಿ ಆ ಕನಸನ್ನು ಕಂಡು ಅದನ್ನು ನನಸನ್ನಾಗಿ ಮಾಡಿದರು. ಅವರು ಮಾರುಕಟ್ಟೆಗೆ ಒದಗಿಸಿದ ಕಾರು, ವ್ಯಾನ್, ಲಾರಿಗಳು ಬಹಳ ಗಟ್ಟಿಮುಟ್ಟಾಗಿದ್ದವು, ಅವು ಪ್ರಯಾಣಕ್ಕೆ, ಸಾಗಾಣಿಕೆಗೆ ಬಹಳ ಸೌಕರ್ಯಗಳನ್ನು ಒಳಗೊಂಡಿತ್ತು.
ವಾಲ್ ಚಂದ್ ಅವರು ತಾವು ಸ್ಥಾಪಿಸಿದ ಎಲ್ಲಾ ಕಂಪೆನಿಗಳಲ್ಲಿ, ಉದ್ದಿಮೆಗಳಲ್ಲಿ ಅಗತ್ಯವಿದ್ದಷ್ಟು ಮಾತ್ರ ವಿದೇಶೀಯರನ್ನು ತಮ್ಮೊಂದಿಗೆ ಇರಿಸಿಕೊಂಡಿದ್ದರು. ಅವುಗಳಲ್ಲಿ ಬಹು ಪಾಲು ಸ್ಥಳೀಯರನ್ನೇ ಒಳಗೊಂಡು ದೇಶಾಭಿಮಾನವನ್ನು ಮತ್ತು ಸ್ವದೇಶೀಯರ ಘನತೆಯನ್ನು ಎತ್ತಿಹಿಡಿದರು. ಅವರ ವಾಲ್ ಚಂದ್ ನಗರ್ ಇಂಡಸ್ಟ್ರಿಯು ಇಸ್ರೋಗೆ ಬೇಕಾಗುವ ಬಹಳಷ್ಟು ಸ್ಟ್ರಾಟೆಜಿಕ್ ಕಾಂಪೊನೆಂಟ್ ಗಳನ್ನು ಒದಗಿಸಿ “ಆತ್ಮನಿರ್ಭರ ಭಾರತ”ದ ಪರಿಕಲ್ಪನೆಗೆ ಹಿರಿದಾದ ಕೊಡಿಗೆಯನ್ನು ನೀಡುತ್ತಿದೆ.

ಇಷ್ಟಾದರೂ ವಾಲ್ ಚಂದ್ ನಗರ್ ಇಂಡಸ್ಟ್ರೀಸ್ನ ಹೊರತಾಗಿ ಅವರು ಸ್ಥಾಪಿಸಿದ ಯಾವ ಉದ್ದಿಮೆಗಳಲ್ಲೂ ಅವರ ಹೆಸರು ಎಲ್ಲೂ ಇಲ್ಲ. ಎಲೆಮರೆಯ ಹೂವಿನಂತೆ ಎಲ್ಲೆಲ್ಲೂ ಸುಗಂಧ ಬೀರಿದ್ದಾರೆ. 2004ರಲ್ಲಿ ಭಾರತ ಸರ್ಕಾರ ವಾಲ್ ಚಂದ್ ಅವರ ಸ್ವದೇಶಿ, ಸ್ವಾಭಿಮಾನ, ದೇಶಾಭಿಮಾನಗಳನ್ನು ಸ್ಮರಿಸಿ ಪೋಸ್ಟಲ್ ಸ್ಟಾಂಪನ್ನು ಬಿಡುಗಡೆ ಮಾಡಿ ಅವರನ್ನು ಗೌರವಿಸಿದೆ.

ಕೆ.ಎಲ್. ಪದ್ಮಿನಿ ಹೆಗಡೆ

6 Responses

  1. ಅಭ್ಭಾ.. ವಾಲ್ಚಂದ್ ಹೀರಾಚಂದ್ ಪರಿಚಯದ ಲೇಖನ ಬಹಳ ಸೊಗಸಾಗಿ ಪಡಿಮೂಡಿದೆ..ಧನ್ಯವಾದಗಳು ಪದ್ಮಿನಿ ಮೇಡಂ.

  2. ನಯನ ಬಜಕೂಡ್ಲು says:

    ಸವಿಸ್ತಾರವಾದ ಮಾಹಿತಿಪೂರ್ಣ ಬರಹ

  3. ಶಂಕರಿ ಶರ್ಮ says:

    ಅಷ್ಟು ಹಿಂದೆಯೇ ದೇಶವನ್ನು ಆತ್ಮ ನಿರ್ಭರವನ್ನಾಗಿಸಿದ ಹಿರಿಮೆ ವಾಲ್ ಚಂದ್ ಅವರದು! ಬಹಳಷ್ಟು ಮಾಹಿತಿಗಳಿಂದ ಕೂಡಿದ ಪ್ರಬುದ್ಧ ಲೇಖನಕ್ಕಾಗಿ ಧನ್ಯವಾದಗಳು ಪದ್ಮಿನಿ ಮೇಡಂ.

  4. Padma Anand says:

    ಮಹಾನ್ ಸಾಧಕರ ಯಶೋಗಾಥೆಯನ್ನು ವಿವರವಾಗಿ ತಿಳಿಸುವ ಮಾಹಿತಿಪೂರ್ಣ ಲೇಖನ.

  5. ಇಂತಹ ಅದ್ಭುತ ವ್ಯಕ್ತಿಯ ಸಾಧನೆಯ ಬಗ್ಗೆ ಸುಂದರವಾದ ಅಭಿವ್ಯಕ್ತಿ

  6. PADMINI K L says:

    ವಿಷಯದ ವಿಶೇಷತೆಯನ್ನು ಭಾವಿಸಿ ಲೇಖನವನ್ನು ಪ್ರಕಟಿಸಿದ ಹೇಮಮಾಲಾ ಮೇಡಂ ಅವರಿಗೆ, ಲೇಖನದ ಮಾನ್ಯತೆಯನ್ನು ಭಾವಿಸಿದ ಬಿ. ಆರ್‌. ನಾಗರತ್ನ ಮೇಡಂ ಅವರಿಗೆ, ನಯನ ಬಜಕೂಡ್ಲು ಮೇಡಂ ಅವರಿಗೆ, ಶಂಕರಿ ಶರ್ಮ‌ ಮೇಡಂ ಅವರಿಗೆ, ಪದ್ಮ ಆನಂದ್‌ ಮೇಡಂ ಅವರಿಗೆ, ಗಾಯತ್ರಿ ಸಜ್ಜನ್‌ ಮೇಡಂ ಅವರಿಗೆ, ಅನಾಮಿಕ ಓದುಗರಿಗೆ ಹೃತ್ಪೂರ್ವಕ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: