ಹಾಗಾದರೆ ಅದು ಯಾರು..!??

Share Button

ಇದು ನಾಲ್ಕು ವರ್ಷಗಳ ಹಿಂದೆ, ಅಂದರೆ 2020 ರಲ್ಲಿ ನಡೆದ ಘಟನೆ. ನಮ್ಮೂರ ಪ್ರಖ್ಯಾತ ಆಯುರ್ವೇದ ವೈದ್ಯರು ತಮ್ಮದೇ ಆದ ಔಷಧಿ ಕಾರ್ಖಾನೆಗಳನ್ನು ಹೊಂದಿರುವರು. ಅಲ್ಲದೆ, ಯಾವುದೇ ಸಮಯದಲ್ಲಿ ರೋಗಿಗಳು ತಮ್ಮನ್ನು ಭೇಟಿಯಾಗಲು ಬಂದರೂ ತುಂಬು ಪ್ರೀತಿಯಿಂದ ವಿಚಾರಿಸಿ ಔಷಧಿ ಕೊಟ್ಟು ಕಳುಹಿಸುವರು. ಬಡವರಿಗೆ ಉಚಿತ ಔಷಧೋಪಚಾರಗಳನ್ನೂ  ನೀಡುವರು. ರೋಗಿಗಳು ಅವರನ್ನು ಭೇಟಿಯಾಗಲು ದೂರದೂರಿನಿಂದ ಬರುವುದು ಮಾಮೂಲು. ಬಂದವರಿಗೆ ಕಾಫಿ, ಕಷಾಯ ಇತ್ಯಾದಿಗಳನ್ನು ಕೊಟ್ಟು ಉಪಚರಿಸುವುದು ಈ ವೈದ್ಯರ ಉದಾತ್ತ ಗುಣಗಳಲ್ಲೊಂದು. ಭೇಟಿ ಮಾಡಲು ಬಂದ ಜನರಿಂದ ದವಾಖಾನೆಯು ಯಾವಾಗಲೂ ತುಂಬಿ ತುಳುಕುತ್ತಿದ್ದರೂ; ರೋಗಿಗಳೊಡನೆ ನಗುನಗುತ್ತಾ ಮಾತನಾಡಿ, ಅವರ ಮನೆಯವರ ಕ್ಷೇಮ ಸಮಾಚಾರವನ್ನೂ ವಿಚಾರಿಸಿ, ಅಲ್ಲಿ ಸ್ನೇಹಪೂರ್ಣ ವಾತಾವರಣ ಕಲ್ಪಿಸಿದ್ದರು.

ಒಂದು ದಿನ ಇಳಿವಯಸ್ಸಿನ ಹಳೆ ರೋಗಿಯೊಬ್ಬರು ಬಹಳ ದೂರದ ಊರಿನಿಂದ ಬಸ್ಸಿನಲ್ಲಿ ಬಂದು ನಗರದ ಬಸ್ಸು ನಿಲ್ದಾಣದಲ್ಲಿ ಇಳಿದರು. ಆಗ ಮುಂಜಾನೆ ಸುಮಾರು ನಾಲ್ಕು ಗಂಟೆಯ ಸಮಯವಾಗಿತ್ತು. ನಿಲ್ದಾಣವು ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ದವಾಖಾನೆಗೆ ನಿಲ್ದಾಣದಿಂದ ಸುಮಾರು ಒಂದು ಕಿ.ಮೀ. ದೂರವಿದೆ. ಅದನ್ನು ನಡೆದೇ ಹೋಗೋಣವೆಂದು ಹೊರಟರು. ನಿರ್ಜನ.. ನಿಶ್ಶಬ್ದ ರಸ್ತೆ. ದೂರದಲ್ಲಿಅಲ್ಲೊಂದು ಇಲ್ಲೊಂದು ಓಡಾಡುವ ವಾಹನಗಳ ಸದ್ದು. ಮೊದಲೇ ಹಲವಾರು ಸಲ ಬಂದ ರಸ್ತೆಯಾದ್ದರಿಂದ ಅರ್ಧಗಂಟೆಯಲ್ಲಿ ವೈದ್ಯರ ಮನೆಯ ಆವರಣ ತಲಪಿದರು. ದವಾಖಾನೆಯು ಮನೆಯ ಮುಂಭಾಗದಲ್ಲಿದೆ. ನಡೆದು ಬಂದದ್ದರಿಂದ ಸ್ವಲ್ಪ ಆಯಾಸವೂ ಆಗಿತ್ತು. ಅವರು ಅಲ್ಲಿದ್ದ ಬೆಂಚಿನ ಮೇಲೆ ಕುಳಿತು ದಣಿವಾರಿಸಿಕೊಂಡರು. ಆಗಿನ್ನೂ ಮುಂಜಾನೆ ನಾಲ್ಕೂವರೆ ಗಂಟೆ… ವೈದ್ಯರು ಬರಲು ಇನ್ನೂ ಹಲವಾರು ಗಂಟೆಗಳಿದ್ದವು… ಅಲ್ಲೇ ಒರಗಿಕೊಂಡರು.

ಮಲಗಿದವರಿಗೆ ಅಲ್ಲೇ ಸ್ವಲ್ಪ ನಿದ್ದೆಯ ಮಂಪರು ಹತ್ತಿದಂತಾಯಿತು. ಆಗಲೇ ಯಾರೋ ಬಂದು ಎಬ್ಬಿಸಿದಂತಾಯಿತು. ನಡುವಯಸ್ಸಿನ ಮಹಿಳೆಯೊಬ್ಬಳು ಕೈಯಲ್ಲಿದ್ದ ಲೋಟವನ್ನು ಇವರತ್ತ ಚಾಚಿ ಕುಡಿಯಲು ಬಿಸಿಬಿಸಿ ಕಷಾಯವನ್ನಿತ್ತಳು. ಈ ರೀತಿ ಬೇಗನೆ ಹಸಿದು ಬರುವವರಿಗೋಸ್ಕರ ವೈದ್ಯರು ಬೆಳಕಾದ ಬಳಿಕವಷ್ಟೇ ಲಘುಪಾನೀಯದ ವ್ಯವಸ್ಥೆ ಮಾಡುತ್ತಿದ್ದರು.  ಆಶ್ಚರ್ಯವಾದರೂ ವೈದ್ಯರ ಸತ್ಕಾರಕ್ಕೆ ಖುಷಿಗೊಂಡು, ಸಂತೋಷದಿಂದಲೇ ಅದನ್ನು ಕುಡಿದು ಮಲಗಿಕೊಂಡರು.

 ಎಂದಿನಂತೆ ಬೆಳಗ್ಗಿನ ಹೊತ್ತು ವೈದ್ಯರು ಬಂದು ಅವರ ಕ್ಷೇಮ ಸಮಾಚಾರವನ್ನು ವಿಚಾರಿಸುತ್ತಾ, “ಎಷ್ಟು ಹೊತ್ತಿಗೆ ಬಂದಿರಿ?” ಎಂದು ಕೇಳಿದರು. ಅದಕ್ಕವರು, “ನಾನು ಐದು ಗಂಟೆಗೆ ಮೊದಲೇ ಬಂದೆ ಸ್ವಾಮಿ” ಎಂದರು. ವೈದ್ಯರು, “ಕಾಫಿ ಎಲ್ಲಾ ಕುಡಿದಿರಾ?” ಎಂದು ಸಹಜವಾಗಿ ವಿಚಾರಿಸಿದರು. “ಇಲ್ಲ..ಕಾಫಿ ಕುಡಿಯಲಿಲ್ಲ. ನಾನು ಬೆಳಗ್ಗೆ ಬಂದಾಗ ನಿಮ್ಮಲ್ಲಿಯ ಮಹಿಳೆಯೊಬ್ಬರು ನನಗೆ ಕುಡಿಯಲು ಬಿಸಿಬಿಸಿ ಕಷಾಯವನ್ನು ಕೊಟ್ಟರು. ಅದನ್ನು ಕುಡಿದೆ. ತುಂಬಾ ಧನ್ಯವಾದಗಳು ಡಾಕ್ಟ್ರೇ” ಎಂದರು. ವೈದ್ಯರಿಗೋ ಆಶ್ಚರ್ಯ! ಅದ್ಯಾವ ಹೆಂಗಸು ಅಷ್ಟು ಬೆಳಗ್ಗೆ ಕಷಾಯ ತಯಾರಿಸಿಕೊಟ್ಟರು ಎಂದುಕೊಂಡರು. ಯಾಕೆಂದರೆ, ಅಷ್ಟು ಬೇಗ, ಮುಂಜಾನೆ, ಯಾರನ್ನೂ ವೈದ್ಯರು ಕೆಲಸಕ್ಕೆ ನೇಮಿಸಿರಲಿಲ್ಲ! ಅವರು ಕುತೂಹಲದಿಂದ  ಆ ಹೆಂಗಸಿನ ಗುರುತಿಗೋಸ್ಕರ ಚಹರೆಯನ್ನು  ಕೇಳಿದರು. ಅತ್ಯಂತ ಆಶ್ಚರ್ಯದ ಸಂಗತಿಯೆಂದರೆ; ಬಂದ ವ್ಯಕ್ತಿ ಹೇಳಿದಂತಹ ಚಹರೆಯ ಹೆಂಗಸರು ಅವರಲ್ಲಿ ಯಾರೂ ಇರಲಿಲ್ಲ! ಗಲಿಬಿಲಿಗೊಂಡ ವೈದ್ಯರು ಇನ್ನಷ್ಟು ಆಶ್ಚರ್ಯದಿಂದ, “ಹಾಗಾದರೆ ನೀವು ಕಷಾಯ ಕುಡಿದ ಲೋಟವೆಲ್ಲಿದೆ?” ಎಂದು ವಿಚಾರಿಸಿದರು. “ಅದನ್ನು ಅಲ್ಲೇ ಇರುವ ಕಸದ ಬುಟ್ಟಿಗೆ ಹಾಕಿರುವೆ”ಎಂದರು ಆ ವ್ಯಕ್ತಿ. ಪರಿಶೀಲಿಸಲಾಗಿ, ಹಿಂದಿನ ದಿನ ಸ್ವಚ್ಛಗೊಳಿಸಿದ್ದ ಕಸದ ಬುಟ್ಟಿಯಲ್ಲಿ ನಿಜವಾಗಿಯೂ  ಪೇಪರಿನ ಲೋಟವೊಂದು ಕಂಡುಬಂತು! ಏನೂ ಅರ್ಥವಾಗದ ವೈದ್ಯರು ತಕ್ಷಣ ಎಲ್ಲಾ ಕಡೆಗೆ ಅಳವಡಿಸಿದ್ದ ಸಿ.ಸಿ.ಟಿ.ವಿ. ಕ್ಯಾಮರಾದ ವೀಡಿಯೋಗಳನ್ನು ಜಾಲಾಡಿದರು. ಕಾಕತಾಳೀಯವೆಂಬಂತೆ, ಆ ಸಮಯದಲ್ಲಿ ಸಿ.ಸಿ.ಟಿ.ವಿ.ಯನ್ನೂ ಸ್ಥಗಿತಗೊಳಿಸಿದ್ದು ಗಮನಕ್ಕೆ ಬಂದಿತು!! ಅರ್ಥವಾಗದ ಈ ಪ್ರಶ್ನಾರ್ಥಕ ಘಟನೆಯನ್ನು ಕಂಡು ವೈದ್ಯರು ಮತ್ತು ಅವರ ಮನೆಯವರು ನಿಬ್ಬೆರಗಾದರು! ಉತ್ತರ ಸಿಗದ ಆ ಮಹಿಳೆ ಯಾರು?? ಎಂಬ ಪ್ರಶ್ನೆಯು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ!  ಈ ವಿಜ್ಞಾನ ಯುಗದಲ್ಲಿಯೂ ಹೀಗೂ …..ಉಂಟೇ??! ಇದಕ್ಕೆ ನೀವೇನೆನ್ನುವಿರಿ?    

(ಇದು ವೈದ್ಯರ ಮಡದಿ ಹೇಳಿದ ಸತ್ಯ ಘಟನೆ)

ಶಂಕರಿ ಶರ್ಮ, ಪುತ್ತೂರು

8 Responses

  1. Savithri Bhat says:

    ವಿಶೇಷ ಘಟನೆ.. ನಿಗೂಢ ಪ್ರಶ್ನೆ.. ಸುಂದರ ನಿರೂಪಣೆ ..ಬರಹ ತುಂಬಾ ಇಷ್ಟವಾಯಿತು.

    • ಶಂಕರಿ ಶರ್ಮ says:

      ಪ್ರೀತಿಯ ಸ್ಪಂದನೆಗೆ ಧನ್ಯವಾದಗಳು ಸಾವಿತ್ರಿ ಅಕ್ಕಾ.

  2. ಅಚ್ಚರಿಯ ಸಂಗತಿ ಆದರೂ ಅತೇಂದ್ರಿಯ ಘಟನೆ ಯ ಅನಾವರಣ ಸೊಗಸಾಗಿ ತ್ತು ಶಂಕರಿ ಮೇಡಂ

    • ಶಂಕರಿ ಶರ್ಮ says:

      ಮೆಚ್ಚುಗೆಯ ನುಡಿಗಳಿಗೆ ವಂದನೆಗಳು, ನಾಗರತ್ನ ಮೇಡಂ.

  3. ನಯನ ಬಜಕೂಡ್ಲು says:

    Nice

  4. Dr Krishnaprabha M says:

    ಆಹಾ.. ಉತ್ತಮ ನಿರೂಪಣೆಯ ಜೊತೆ ಅತೀಂದ್ರಿಯ ಅನುಭವದ ಕಥೆ ಚೆನ್ನಾಗಿ ಮೂಡಿ ಬಂದಿದೆ

  5. Hema Mala says:

    ಹೀಗೂ ಉಂಟೇ!..ಚೆಂದದ ನಿರೂಪಣೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: