ಮಾಗಿದ ಉಳುಮೆ
ಹದವಾಗಿ ಮಳೆ ಬಂದು ಮೇಲೆ ಹೂ ಬಿಸಿಲು ಕಾದು
ಆಗಾಗ ಹನಿಯಿಕ್ಕುವ ವಾತವರಣದಲಿ ನಡೆದಿದೆ ಉಳುಮೆಯ ಯಜ್ಞ
ಒಳಗಿರುವ ಮಣ್ಣ ನವಿರಾಗಿ ಹೊರ ಹಾಕಿ ಇಡೀ ಹೊಲದಲಿ ತುಂಬಿದೆ ಕೆಂಬಣ್ಣ
ಹಬ್ಬಿರುವ ಸಣ್ಣ ಹುಲ್ಲು ಗಿಡಗಂಟಿ ಬುಡ ಸಮೇತ ಮೇಲೆ ಬಂದು ಒಳ ಸೇರುತಿದೆ
ಬುವಿಯ ತುಂಬೆಲ್ಲಾ ಸಾಲು ಸಾಲು ಗೆರೆಗಳು ಮೂಡುತಿವೆ
ಮುಂಬರುವ ಬೀಜಗಳಿಗೆ ನೆಲೆಯಾಗಲು ಮೆತ್ತನೆಯ ನೆಲದ ಹಾಸಿಗೆ ಸಿದ್ದವಾಗುತ್ತಿದೆ
ಆಗಾಗ ಬೀಸುವ ಗಾಳಿಗೆ ಮೇರೆಯಲಿ ನಿಂತ ಮರಗಳು ಹೊಯ್ದಾಡಿ ಹುರುಪು ತುಂಬುತಿವೆ
ಹೊರ ಬಂದ ಹುಳ ಹುಪ್ಪಟೆಗಳ ಹೆಕ್ಕಿ ತಿನ್ನುವ ಹಕ್ಕಿಗಳು ಹಿಂದೆ ಹಿಂದೆ ಹಾರುತಿವೆ
ಹೊಟ್ಟೆ ತುಂಬಿಸುವ ಬೆಳೆ ತೆಗೆಯುವ ನೇಗಿಲ ಯೋಗಿಯ ಮೊಗದಲ್ಲಿ ಕಿರುನಗೆ ತುಂಬಿದೆ
ತುಸು ತೇವಾಂಶ ಬೆರೆತ ಮಣ್ಣಿನ ಕಂಪಿಗೆ ಮೈ ಮನವೆಲ್ಲಾ ಅರಳಿದೆ
ಗೀರು ಕೊಯ್ದು ಬೀಜ ಚೆಲ್ಲಿದರೆ ಭರಪೂರ ಇಳುವರಿ ನೀಡುವ
ಭೂಮಾತೆಯ ಕೃಪೆಯ ನೆನೆದು ಕಣ್ಣು ತುಂಬಿ ಬಂದಿದೆ
ಕೆಸರು ಮೆತ್ತಿದ ರೈತನ ಅಂಗಿಯ ಭಿತ್ತಿಯಲಿ ಅನುಪಮ ಚಿತ್ರ ಮೂಡಿದೆ
ಬಿತ್ತನೆ ಮಾಡಿ ಪೈರು ಪಡೆಯುವ ಕಾಯಕ ಯೋಗಿಯ ಲೀಲೆ ಕಣ್ಣಿಗೆ ಕಟ್ಟಿದೆ
ಫಲವತ್ತಾದ ಭೂಮಿಯ ನಂಬಿದವರ ಬಾಳಲಿ ಸಂತಸ ಮೂಡಲೆಂದು ಮನ ಬೇಡಿದೆ
– ಶರಣಬಸವೇಶ ಕೆ. ಎಂ
ಸರಳ ಸುಂದರ ಕವನ ಚೆನ್ನಾಗಿ ದೆ ಸಾರ್
ಧನ್ಯವಾದಗಳು ನಾಗರತ್ನ ಮೇಡಂ
ಸುಂದರ ಕವನ
ಧನ್ಯವಾದಗಳು ನಯನ ಬಜಕೂಡ್ಲು ಮೇಡಂ
ಅನ್ನದಾತನ ದುಡಿಮೆಯ ಹಂತಗಳು ಸೊಗಸಾಗಿ ಮೂಡಿಬಂದ ಚಂದದ ಕವನ.
ಧನ್ಯವಾದಗಳು ಶಂಕರಿ ಶರ್ಮ ಮೇಡಂ