ಕಾದಂಬರಿ : ಕಾಲಗರ್ಭ – ಚರಣ 14
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ಅರೇ ಏಕೆತಾಯಿ ಗರಬಡಿದವಳಂತೆ ನಿಂತುಬಿಟ್ಟೆ? ನಾನು ಅಷ್ಟೊಂದು ಭಯಂಕರವಾಗಿದ್ದೇನೆಯೇ?. ಬಾ..ಬಾ.. ಬೈರ ತೋಟದಿಂದ ಎಳನೀರು ತಂದಿದ್ದಾನೆ. ಕೊಚ್ಚಿ ಕೊಡುತ್ತಾನೆ. ಕುಡಿಯುವೆಯಂತೆ. ರೂಢಿ ಇದೆ ತಾನೇ? ಹಾಗೇ ಕುಡಿಯಲು ಬರುತ್ತೋ ಇಲ್ಲ ಲೋಟಕ್ಕೆ ಬಗ್ಗಿಸಿ ಕೊಡಿಸಲಾ” ಎಂದು ಕೇಳಿದರು ಸೋಮಣ್ಣನವರು.
“ಯಾರಿಗೆ ಹೇಳುತ್ತಿದ್ದೀರಿ ಅಪ್ಪಾ? ಅವರೂ ನಮ್ಮಂತೆಯೇ ಕೃಷಿಕರು ಎನ್ನುತ್ತಾ ಒಳಕೋಣೆಯಿಂದ ಗೆಳೆಯನೊಂದಿಗೆ ಬಂದ ಮಗನನ್ನು ನೋಡಿ “ಆಹಾ ! ಎಂಥಾ ಮಗನೋ, ಅದೇನು ರೀತಿ ಬಂದ ಅತಿಥಿ ಸತ್ಕಾರದ್ದು, ಬಂದ ತಕ್ಷಣ ಆ ಹುಡುಗಿಯನ್ನು ಒಬ್ಬಳನ್ನೇ ಬಿಟ್ಟು” ಎಂದು ಸಿಟ್ಟು ತೋರಿದರು.
“ಇಲ್ಲಪ್ಪ ಜೊತಗೆ ಅಮ್ಮ ಇದ್ದರಲ್ಲ ಅದಕ್ಕೆ ನಾವು..” ಎಂದು ನೆಪ ಹೇಳುತ್ತಾ ಒಬ್ಬರಿಗೊಬ್ಬರನ್ನು ಪರಿಚಯಿಸಿದ ಗಣಪತಿ. ಪರಸ್ಪರ ವಂದನೆ ಪ್ರತಿವಂದನೆಗಳಾದ ನಂತರ ಮಾತುಕತೆಯಾಡುತ್ತಲೇ ಎಳನೀರಿನ ಸೇವನೆಯಾಯಿತು.
ಅವರ ಮಾತುಕತೆಗಳನ್ನು ಆಲಿಸಿದಂತೆ ದೇವಿಗೆ “ಓಹೋ..ನಮ್ಮ ಮನೆಯ ಬಗ್ಗೆ , ನನ್ನಬಗ್ಗೆ ಪ್ರತಿಯೊಂದೂ ಇಲ್ಲಿಯವರಿಗೆ ತಿಳಿದಿದೆ. ಮಹೀ ತನ್ನ ವಿಷಯಗಳನ್ನು ಗೆಳೆಯನೊಡನೆ ಹಂಚಿಕೊAಡಿದ್ದಾನೆ ಎನ್ನುವ ಸಂಗತಿ ಮನದಟ್ಟಾಯಿತು.
“ಈಗ ನೀವಿಬ್ಬರೂ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವಿರಂತೆ ಬನ್ನಿ, ನಿಮ್ಮ ರೂಮು ತೋರಿಸುತ್ತೇನೆಂದು ವೆರಾಂಡಾದಲ್ಲಿದ್ದ ಮೆಟ್ಟಿಲುಗಳ ಕಡೆಗೆ ನಡೆದ ಗಣಪತಿ.
“ಅಬ್ಬಾ ಅಂತೂ ಇಷ್ಟುಹೊತ್ತಿಗಾದರೂ ನನ್ನ ಮಗನ ತಲೆಗೆ ಪ್ರಯಾಣ ಮಾಡಿಬಂದವರಿಗೆ ರೆಸ್ಟ್ ಬೇಕೆಂಬ ಸಂಗತಿ ಅರಿವಾಯಿತು. ಹೋಗಿ ಮಕ್ಕಳೇ ನಿಮ್ಮ ಲಗೇಜನ್ನು ಮೇಲಿನ ರೂಮಿನಲ್ಲಿ ಇರಿಸಿದ್ದಾಳೆ ತಾಯಮ್ಮ. ಊಟದ ಹೊತ್ತಿಗೆ ನಿಮ್ಮನ್ನು ಕರೆಯುತ್ತೇನೆ ಬರುವಿರಂತೆ” ಎಂದು ಹೇಳಿ “ಬನ್ನಿ ನೀವೂ ಬಟ್ಟೆ ಬದಲಾಯಿಸಿ ಸ್ವಲ್ಪ ಸುಧಾರಿಸಿಕೊಳ್ಳಿ.” ಎಂದು ಗಂಡನನ್ನು ಕರೆದುಕೊಂಡು ಒಳನಡೆದರು ಶಾಂತಮ್ಮ.
ಮಹೇಶ, ಮಾದೇವಿಯರನ್ನು ಕರೆದುಕೊಂಡು ಮಹಡಿಗೆ ಬಂದ ಗಣಪತಿ ಅಲ್ಲಿದ್ದ ರೂಮಿನ ಬಾಗಿಲನ್ನು ತೆರೆದು ಅವರಿಬ್ಬರನ್ನೂ ಒಳಕ್ಕೆ ಆಹ್ವಾನಿಸಿದ.
“ನೋಡಿ ಇಲ್ಲಿ ಎಲ್ಲಾ ಅನುಕೂಲಗಳಿವೆ. ಕೆಳಗಿನ ಮನೆಯಲ್ಲಿ ಅಮ್ಮನ ಆಣತಿಯಂತೆ ಹೊರಗಿನ ಅಂಗಳದಲ್ಲಿ ಬಾತ್‌ರೂಮಿದೆ. ಆದರೆ ಇಲ್ಲಿ ಅದು ರೂಮಿಗೆ ಅಟ್ಯಾಚ್ ಆಗಿದೆ. ನನ್ನ ಇಚ್ಛೆಯಂತೆ ಈ ವ್ಯವಸ್ಥೆ, ಗೀಜರ್ ಕೂಡ ಇದೆ ಸ್ನಾನಕ್ಕೆ, ಬಟ್ಟೆಯನ್ನು ಸ್ವಚ್ಛಗೊಳಿಸಲು ಅನುಕೂಲವಾಗಲೆಂದು ವಾಷಿಂಗ್ ಮೆಷಿನ್ ಇದೆ. ಇಲ್ಲಿ ಒಗೆದ ಬಟ್ಟೆಗಳನ್ನು ಒಣಹಾಕಲು ಹೊರಗಡೆ ಅನುಕೂಲವಿದೆ. ಬೇಸರವಾದರೆ ಕೂಡಲು ಬಾಲ್ಕನಿಯಿದೆ. ಬಿಸಿಲು ಮಳೆಗಾಳಿಯಿಂದ ರಕ್ಷÀಣೆಗೋಸ್ಕರ ಮೇಲಿನ ಛಾವಣಿಯನ್ನು ಸುತ್ತಲಿನ ಗೋಡೆಯಂತೆ ಉದ್ದಮಾಡಿದೆ. ಯಾವುದಕ್ಕೂ ಸಂಕೋಚಪಟ್ಟುಕೊಳ್ಳಬೇಡಿ. ಏನಾದರು ಬೇಕಿದ್ದಲ್ಲಿ ಫೋನ್ ಮಾಡು” ಎಂದು ಹೇಳಿ ಹೊರ ನಡೆದ ಗಣಪತಿ.
ಅವನು ಹೋಗುವುದನ್ನೇ ಕಾಯುತ್ತಿದ್ದಳೇನೋ ಎಂಬಂತೆ ಬಾಗಿಲನ್ನು ಭದ್ರಪಡಿಸಿ ದೇವಿ ಬಾತ್‌ರೂಮಿನ ಕಡೆಗೆ ಧಾವಿಸಿದಳು. ಅದನ್ನು ಕಂಡು ಮಹೇಶ “ಬಂದು ಎಷ್ಟೊತ್ತಾಯಿತು. ಬಾತ್‌ರೂಂ ಎಲ್ಲಿದೆಯೆಂದು ಕೇಳಿ ಹೋಗಿಬರಬಹುದಿತ್ತು. “ಹಮಾರಾ ಕುತ್ತಾ ಹಮಾರೆ ಗಲೀಮೆ ಷೇರ್ ಹೈ’ ಎನ್ನುವಂತೆ ನಮ್ಮ ಹುಡುಗಿ.” ಎಂದು ಮನಸ್ಸಿನಲ್ಲೇ ನಗುತ್ತಾ ಟೇಬಲ್ ಮೇಲೆ ಇಟ್ಟಿದ್ದ ಬ್ಯಾಗ್ ತೆಗೆದು ಬಟ್ಟೆ ಬದಲಾಯಿಸಿದ. ಅಲ್ಲಿಯೇ ಇದ್ದ ಆ ದಿನದ ನ್ಯೂಸ್ ಪೇಪರ್ ಕೈಗೆತ್ತಿಕೊಂಡು ಹಾಗೇ ಮಂಚದ ಮೇಲೆ ಅಡ್ಡಾದ.
ಪೇಪರ್ ಓದಿ ಮುಗಿಸಿದರೂ ಮಡದಿಯ ಸುಳಿವಿಲ್ಲ. ಏನು ಮಾಡುತ್ತಿದ್ದಾಳೆ ಎಂದುಕೊಂಡು ಮಲಗಿದ್ದಲ್ಲಿಂದ ಎದ್ದು ಬಾತ್ ರೂಮಿನ ಬಾಗಿಲನ್ನು ಮೆದುವಾಗಿ ತಟ್ಟಿದ. ದೇವಿ ಎಂದು ಕರೆದ. ಅದು ಹಾಗೇ ತೆರದುಕೊಂಡಿತು. ಆತಂಕದಿಂದ ಅದನ್ನು ಪೂರ್ತಿ ಸರಿಸಿ ಒಳಹೊಕ್ಕು ಎಲ್ಲ ಕಡೆ ನೋಡಿದ. ರೂಮಿನ ಇನ್ನೊಂದು ಕಡೆಯಿದ್ದ ಬಾಗಿಲನ್ನು ತೆರೆದದ್ದು ಕಾಣಿಸಿತು. ಅಲ್ಲೇನು ಮಾಡುತ್ತಿದ್ದಾಳೆ ಎಂದುಕೊಳ್ಳುತ್ತಾ ಬಂದವನಿಗೆ ದೇವಿ ಬಟ್ಟೆ ಒಣಹಾಕುತ್ತಿರುವುದು ಕಾಣಿಸಿತು. ಜೊತೆಗೆ ಅವಳ ಕಣ್ಣಿಂದ ಧಾರಾಕಾರವಾಗಿ ನೀರು ಹರಿಯುತ್ತಿರುವುದೂ ಕಾಣಿಸಿತು. ಏನು ಎತ್ತ ಎಂದು ಅರ್ಥವಾಗದೆ “ದೇವಿ ಸ್ನಾನ ಮಾಡಿದೆಯಾ? ಅದೂ ದೇವಸ್ಥಾನದಿಂದ ಬಂದು” ಆಕ್ಷೇಪಾರ್ಹ ಧ್ವನಿಯೆತ್ತುತ್ತಾ “ಏಕೆ ಪ್ರಯಾಣದಲ್ಲಿ ಏನಾದರು ಆಯಾಸ, ಬೆವರು ಹರಿದು ಮುಜುಗರ, ಹೋಗಲಿ ಕಣ್ಣೀರೇಕೆ?” ಎಂದು ಕೇಳಿದ ಮಹೇಶ.
ಅವನು ಕೇಳಿದ್ದಕ್ಕೆ ತಲೆಯಲ್ಲಾಡಿಸುತ್ತ “ಮಂತ್ಲೀ ಪೀರಿಯಡ್” ಎಂದಷ್ಟೇ ನುಡಿದಳು.
“ಅಯ್ಯೋ ಅಷ್ಟೇನಾ ! ಅದಕ್ಯಾಕೆ ಅಳು. ಧರ್ಮಸ್ಥಳದಲ್ಲಿಯೇ ಇದಾಗಿದ್ದಿದ್ದರೆ ದೇವರ ದರ್ಶನವೇ ಆಗುತ್ತಿರಲಿಲ್ಲ. ಮನೆಗೆ ಬಂದ ನಂತರ ಆಗಿದ್ದೀ. ದೇವರಿಗೆ ಥ್ಯಾಂಕ್ಸ್ ಹೇಳು. ಅತ್ತು ಕಣ್ಣು, ಮುಖವೆಲ್ಲ ಕೆಂಪಗೆ ಮಾಡಿಕೊಳ್ಳಬೇಡ. ಅದನ್ನು ನೋಡಿದವರು ತಪ್ಪು ತಿಳಿದಾರು. ಮೆಡಿಕಲ್ ಸ್ಟೋರ್‌ನಿಂದ ಏನಾದರೂ ತರುವುದಿದೆಯಾ?” ಎಂದು ಕೇಳಿದ ಮಹೇಶ.
ಅವನ ಮಾತು ಅರ್ಥವಾದಂತೆ “ಬೇಡ, ಎಲ್ಲವೂ ಇದೆ” ಎಂದವಳೇ ಮನಸ್ಸಿನಲ್ಲಿ ಈ ಮನುಷ್ಯನಿಗೆ ಏನೆಂದು ಹೇಳಲಿ. ನನ್ನ ಡೇಟ್‌ಗೆ ಇನ್ನೂ ನಾಲ್ಕಾರು ದಿನಗಳಿತ್ತು. ಈಗಲೇ ಅವಸರವೇನಿತ್ತು. ಏನೇನೋ ಆಸೆ ಹೊತ್ತು ಇಲ್ಲಿಗೆ ಬಂದ ನನಗೆ ಮತ್ತೊಮ್ಮೆ ಇಂತಹ ಸಂದಿಗ್ಧತೆ ಬಂದೊದಗಿತಲ್ಲ. ಈತನಿಗೇನೂ ಬಯಕೆಗಳೇ ಇಲ್ಲವೇ? ಹೊಸದಾಗಿ ಮದುವೆಯಾದ ಗಂಡಹೆಂಡತಿಯಲ್ಲವೇ ನಾವು. ಅದನ್ನು ಬಾಯಿಬಿಟ್ಟು ಹೇಳಬೇಕೇ? ಛೀ.. ನನ್ನ ಗ್ರಹಚಾರವೇ ಸರಿಯಿದ್ದ ಹಾಗಿಲ್ಲ. ಪ್ರಾರಂಭದಿಂದಲೂ ಹೀಗೇ ಒಂದಲ್ಲಾ ಒಂದು ವಿಘ್ನ ಬಂದೊದಗುತ್ತಿದೆ. ಎಂದು ನನ್ನ ಮೇಲೆ ಕೃಪೆ ತೋರುತ್ತೀಯೆ ಭಗವಂತಾ ಎಂಬ ಆಲೋಚನೆಯಲ್ಲಿ ಮುಳುಗಿ ನಿಂತಿದ್ದವಳಿಗೆ ತೀರಾ ಹತ್ತಿರದಿಂದ ತನ್ನ ಹೆಸರನ್ನು ಕರೆದಂತಾಗಿ ಬೆಚ್ಚಿ ವಾಸ್ತವಕ್ಕೆ ಬಂದಳು. ತಲೆಯೆತ್ತಿ ಯಾರೆಂದು ನೋಡಿದಳು.
ಮಹೇಶ ಅವಳೆದುರಲ್ಲಿಯೇ ನಿಂತಿದ್ದ. ಅವಳ ಕಣ್ಣಿಂದ ಹರಿದು ಬರುತ್ತಿದ್ದ ಕಂಬನಿಯನ್ನು ತನ್ನ ಬೆರಳಿನಿಂದ ಚಿಮ್ಮಿಸುತ್ತ ಅವಳನ್ನು ತಬ್ಬಿಹಿಡಿದು ಕರೆದುಕೊಂಡು ರೂಮಿಗೆ ಬಂದು ಮಂಚದಮೇಲೆ ಕೂಡ್ರಿಸಿದ. ಮರುಕ್ಷಣದಲ್ಲಿ ಎದ್ದು ಸೂಟ್‌ಕೇಸಿನ ಹತ್ತಿರ ಹೋಗಿ ಏನನ್ನೋ ಹುಡುಕಾಟ ನಡೆಸುತ್ತಿದ್ದನ್ನು ಕಂಡು ತನ್ನನ್ನು ಒಳಗೆ ಕರೆದೊಯ್ದಾಗ ಹಾಗೇ ಎದೆಗೊರಗಿಸಿಕೊಂಡು ಸಂತೈಸುತ್ತಾರೆಂದು ಆಸೆಪಟ್ಟಿದ್ದ ದೇವಿಗೆ ನಿರಾಸೆಯಾಯಿತು. ಆದರೂ ಏನನ್ನು ಹುಡುಕುತ್ತಾರೆ ಎಂದು ಕಾಯ್ದಳು. ಅವನು ಹೇರ್‌ಡ್ರೈಯರ್ ಕೈಗೆತ್ತಿಕೊಂಡದ್ದನ್ನು ನೋಡಿ ತಾನೆ ಎದ್ದು ತಲೆಗೆ ಕಟ್ಟಿಕೊಂಡಿದ್ದ ಟವೆಲ್ಲನ್ನು ಬಿಚ್ಚಿ ಕೂದಲನ್ನೊಮ್ಮೆ ಝಾಡಿಸಿದಳು. ಹಾಗೇ ತನ್ನ ವ್ಯಾನಿಟಿಬ್ಯಾಗಿನಿಂದ ಬಾಚಣಿಗೆಯನ್ನು ತೆಗೆದು ನಿಧಾನವಾಗಿ ಬಾಚಿ ಹೇರ್‌ಡ್ರೈಯರ್ ಕೇಬಲ್ಲನ್ನು ಪ್ಲಗ್ಗಿಗೆ ಸಿಕ್ಕಿಸಿ ಕೂದಲನ್ನು ಒಣಗಿಸಿಕೊಳ್ಳತೊಡಗಿದಳು.
ಇತ್ತ ಮಹೇಶನ ಮನಸ್ಸಿನಲ್ಲಿ ಹೊಸ ಚಿಂತೆಯು ಹೊಯ್ದಾಟ ನಡೆಸಿತ್ತು. ಅವನಿಗೆ ಗೆಳೆಯ ಗಣಪನ ತಾಯಿ ಪೂರಾ ಸಂಪ್ರದಾಯಸ್ಥರು. ಆಚಾರವಿಚಾರಗಳಲ್ಲಿ ಕಟ್ಟಿನಿಟ್ಟು ಎಂದು ಹಲವಾರು ಬಾರಿ ಅವನ ಬಾಯಲ್ಲಿಯೇ ಕೇಳಿದ್ದ. ಆದ್ದರಿಂದ ಈಗಿರುವ ದೇವಿಯ ಪರಿಸ್ಥಿತಿಯ ಬಗ್ಗೆ ಅವರಿಗೆ ತಿಳಿಸಬೇಕೊ ಬೇಡವೋ? ತಿಳಿಸಿದರೆ ಅವರು ಮಾಡುವ ಏರ್ಪಾಡುಗಳೇನೋ ತಿಳಿಯದು. ಅದು ದೇವಿಗೆ ಇಷ್ಟವಾಗುತ್ತೋ ಇಲ್ಲವೋ? ಇದನ್ನು ದೇವಿಯೊಡನೆ ಹಂಚಿಕೊಂಡು ಅವಳ ಅಭಿಪ್ರಾಯ ಕೇಳಿದ.
“ಇದರಲ್ಲಿ ಮುಚ್ಚಿಡುವುದೇನಿಲ್ಲ. ಹಾಗೆ ಮಾಡಿದರೆ ಹಿರಿಯರ ನಂಬಿಕೆಗೆ ದ್ರೋಹ ಮಾಡಿದಂತಾಗುತ್ತದೆ. ನಮ್ಮ ಮನೆಯಲ್ಲಿ ಇವೆಲ್ಲ ಆಚರಣೆಗಳು ಇಲ್ಲದಿದ್ದರೂ ನಿಮ್ಮ ಮನೆಯಲ್ಲಿ ಅತಿಯಾಗಿ ಅಲ್ಲದಿದ್ದರೂ ಅಲ್ಪಸ್ವಲ್ಪ ಆಚರಣೆಯಲದಲಿರುವುದು ನನಗೆ ಗೊತ್ತು. ಅಂಥದ್ದರಲ್ಲಿ ಇವರಿಗೆ ಮೊದಲಿನಿಂದ ಆಚರಿಸಿಕೊಂಡು ಬಂದಿರೋರು..ಆದ್ದರಿಂದ ಮೀನಾಮೇಷ ಎಣಿಸುವುದರಲ್ಲಿ ಅರ್ಥವಿಲ್ಲ. ನಿಮ್ಮ ಗೆಳೆಯರಿಗೆ ಸೂಕ್ಷö್ಮವಾಗಿ ವಿಷಯ ತಿಳಿಸಿ. ಈ ಮನೆಯಲ್ಲಿ ತುಂಬಾ ಕಟ್ಟುಪಾಡಾದರೆ ನಾವು ಇಲ್ಲಿಂದ ನಮ್ಮೂರಿಗೇ ಹೋಗಿಬಿಡೋಣ. ಇಲ್ಲದಿದ್ದರೆ ಇಲ್ಲಿಗೆ ಸಮೀಪದಲ್ಲಿ ಯಾವುದಾದರೂ ಹೋಟೆಲಿದ್ದರೆ ಬುಕ್‌ಮಾಡಿ ಅಲ್ಲಿದ್ದು ಬೆಳಗ್ಗೆ ಹೋದರಾಯಿತು” ಎಂದಳು ದೇವಿ. ಅಷ್ಟರಲ್ಲಿ ಯಾರೋ ಮೆಟ್ಟಿಲು ಹತ್ತಿಬರುತ್ತಿರುವ ಸದ್ದು ಕೇಳಿಸಿತು, ದೇವಿ ಹೇರ್‌ಡ್ರೈಯರ್ ಆಫ್ ಮಾಡಿ ಕಿಟಕಿಯ ಬಳಿ ಹೋಗಿ ನಿಂತುಕೊಂಡಳು.
ಮಹೇಶನ ಫೋನ್ ಸದ್ದುಮಾಡಿತು. ಹಾಗೇ ಯಾರೆಂದು ಕಣ್ಣಾಡಿಸಿದ ಮಹೇಶ. “ದೇವಿ ಗಣಪನೇ ಬಂದಿದ್ದಾನೆ” ಎಂದು ಬಾಗಿಲು ತೆರೆದನು. ಅವನಿಗೆ ಸದ್ಯದ ಪರಿಸ್ಥಿತಿಯನ್ನು ಸೂಕ್ಷö್ಮವಾಗಿ ವಿವರಿಸಿ, ಅವನಿಂದಲೇ ಪರಿಹಾರ ಕೋರಿದರು.
“ಸಾರಿ, ಸೋದರಿ ನಿಮಗೆ ತೊಂದರೆ ಕೊಡುತ್ತಿದ್ದೇನೆ” ಎಂದ ಗಂಡನ ಗೆಳೆಯ ಗಣಪತಿ.
“ಸೋದರಿ ಎಂದು ಕರೆದಕೂಡಲೇ ತೊಂದರೆ ಎನ್ನುವ ಪದಕ್ಕೆ ಅರ್ಥವಿಲ್ಲ. ನಿಜ ಹೇಳಬೇಕೆಂದರೆ ನಾವೇ ನಿಮಗೆ ತೊಂದರೆ ಕೊಡಬೇಕಾದ ಸಂದರ್ಭ ಒದಗಿದೆ.” ಎಂದು ಮಹೇಶನ ಕಡೆ ತಿರುಗಿದಳು ದೇವಿ.
ಮಹೇಶ ಚುಟುಕಾಗಿ ವಿಷಯ ತಿಳಿಸುತ್ತ ಈ ಮನೆಯಲ್ಲಿ ಅದಕ್ಕಿರುವ ಏರ್ಪಾಡಿನ ಬಗ್ಗೆ ಸಲಹೆ ಕೇಳಿದ.
“ಛೇ..ಛೇ ಅಂತದ್ದೆಲ್ಲ ನಮ್ಮ ಕೈಯಲ್ಲಿರುತ್ತಾ, ನನ್ನಮ್ಮ ಸಂಪ್ರದಾಯಸ್ಥರೇ ನಿಜ. ಆದರೆ ಈಗ ಮೊದಲಿಗಿಂತ ಲಿಬರಲ್ ಆಗಿದ್ದಾರೆ. ನಮ್ಮಲ್ಲಿ ಬಂದುಹೋಗುವ ಜನಗಳೂ ಜಾಸ್ತಿ. ಅದಕ್ಕಾಗಿ ಹೊಸದಾದ ಏರ್ಪಾಡು ಮಾಡಿಕೊಂಡಿದ್ದೇವೆ. ಇಲ್ಲಿಯೇ ಮತ್ತೊಂದು ಪಾರ್ಶ್ವದಲ್ಲಿ ಇನ್ನೊಂದು ರೂಮಿದೆ. ಅಲ್ಲಿ ಎಲ್ಲ ರೀತಿಯ ಸೌಲಭ್ಯಗಳೂ ಇವೆ ಬನ್ನಿ” ಎಂದು ಆ ರೂಮಿನ ಸ್ಕಿçನ್ ಒಂದನ್ನು ಸರಿಸಿ ತೋರಿಸಿದ. ದೇವಿ ಹಾಗೇ ಅದನ್ನು ಗಮನಿಸಿದಳು. ಅಲ್ಲೊಂದು ದೀವಾನಕಾಟ್, ಪಕ್ಕದಲ್ಲಿ ಒಂದು ದೊಡ್ಡದಾದ ಟೀಪಾಯಿ. ಅದರ ಮೇಲೆ ಸುಮಾರು ಕೌದಿಗಳನ್ನು ಪೇರಿಸಿ ಇಟ್ಟಿದ್ದರು. ಮತ್ತೊಂದೆಡೆ ಗೋಡೆಗೆ ನೇತುಹಾಕಿದ್ದ ಚಿಕ್ಕ ಟಿ.ವಿ. ಪುಟ್ಟದೊಂದು ಸ್ಟಾö್ಯಂಡಿನಲ್ಲಿ ರೇಡಿಯೋ, ಗೋಡೆಗೆ ಅಂಟಿಕೊಂಡಂತೆ ಶೆಲ್ಫ್ನಲ್ಲಿ ಕೆಲವು ಪುಸ್ತಕಗಳಿದ್ದವು. ಅಲ್ಲೇ ಇನ್ನೊಂದು ಮೂಲೆಯಲ್ಲಿ ಹತ್ತಿಬಟ್ಟೆಯ ಕೆಲವು ಟವೆಲ್‌ಗಳಿದ್ದವು. ಪುಸ್ತಕಗಳನ್ನು ನೋಡಿದ ದೇವಿಗೆ ಬಹಳ ಹಿಗ್ಗಾಯಿತು. “ನೀವೂ ಪುಸ್ತಕ ಪ್ರೇಮಿಯಂತೆ ಕಾಣಿಸುತ್ತದೆ” ಎಂದಳು.
ಅದಕ್ಕೆ ಮಹೇಶ “ಅರೇ ! ದೇವೀ ನನಗೆ ಪುಸ್ತಕ ಓದುವ ಹುಚ್ಚು ಹಿಡಿಸಿದ ಮಹಾರಾಯ ಇವನೇ. ಅದನ್ನು ನಾನು ನಿನಗೆ ಕಲಿಸಿದೆ” ಎಂದ.
“ಸರಿ ಸೋದರಿ, ಆದರೆ ಒಂದು ವಿಚಾರ, ನೀವು ಎಲ್ಲರೊಡನೆ ಕೆಳಗಡೆ ಊಟಕ್ಕೆ ಕೂಡುವಂತಿಲ್ಲ. ಕೆಳಗಿನ ಮನೆಯಲ್ಲಿ ಓಡಾಡುವುದೂ ನಿಷೇದ, ಹಾಗೇ ಹೊರಗೆ ತೋಟದಲ್ಲಿಯೂ ಅಡ್ಡಾಡುವ ಹಾಗಿಲ್ಲ. ತಪ್ಪು ತಿಳಿಯಬೇಡಿ. ಅಷ್ಟು ನಿಯಮವಂತೂ ಇದೆ. ಇದೆಲ್ಲಕ್ಕಿಂತ ಮಿಗಿಲಾಗಿ ನನಗೆ ಬೇಸರವಾಗುವ ಸಂಗತಿಯೊಂದಿದೆ.” ಎಂದ ಗಣಪ.
“ಇಷ್ಟೆಲ್ಲ ಹೇಳಿದ ಮೇಲೆ ಅದನ್ನೂ ಹೇಳಿ” ಎಂದು ದಂಪತಿಗಳು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು “ಏನೆಂದು ಕೇಳಬಹುದೆ?” ಎಂದರು.
“ಗಾಭರಿಪಡುವಂತಹದ್ದೇನಿಲ್ಲ. ಬಹಳ ಕಾಲದ ನಂತರ ನನ್ನ ಜ್ಯೋತಿಷ್ಯದ ಗುರುಗಳು ಇಲ್ಲಿಗೆ ಬರುತ್ತಿದ್ದಾರೆ. ಮಹೇಶನು ಅವರನ್ನೊಮ್ಮೆ ನೋಡಬೇಕೆಂದು ನನ್ನ ಹತ್ತಿರ ಎಷ್ಟೋ ಸಾರಿ ಹೇಳಿದ್ದ. ಕಾಕತಾಳೀಯವೆಂಬಂತೆ ನಾಳೆಯೇ ಅವರು ಆಗಮಿಸುತ್ತಿದ್ದಾರೆ. ಅವರಿಗಾಗಿ ಪೂಜಾಪಾಠ ಇಟ್ಟುಕೊಳ್ಳುತ್ತೇವೆ. ಆದರೆ ನೀವು ಅವರನ್ನು ನೋಡಲಿಕ್ಕೂ, ಪೂಜೆಯಲ್ಲಿ ಭಾಗವಹಿಸಿವುದಕ್ಕೂ ಸಾಧ್ಯವಾಗುವುದಿಲ್ಲವಲ್ಲಾ ಎಂಬ ಬೇಸರವಾಗುತ್ತಿದೆ.” ಎಂದ ಗಣಪತಿ.
“ಅಯ್ಯೋ ಅಷ್ಟೇನಾ ! ನೀವೇ ಹೇಳಿದಿರಲ್ಲಾ ಅವೆಲ್ಲ ನಮ್ಮ ಕೈಯಲ್ಲಿಲ್ಲ ಎಂದು. ಬಿಡಿ ಗಣಪಣ್ಣಾ ನನಗೆ ಲಭ್ಯವಿಲ್ಲ ಮತ್ತೊಮ್ಮೆ ಸಾಧ್ಯವಾದರೆ ನೊಡೋಣ” ಎಂದಳು ದೇವಿ.
“ಹಾಗಾದರೆ ಸರಿ, ಗೆಳೆಯ ನಡೆ ನಾವು ಕೆಳಗೆ ಹೋಗೋಣ. ಅಮ್ಮನ ಕಿವಿಗೆ ಸಂಗತಿ ಹಾಕಿ ಊಟ ಮುಗಿಸೋಣ. ಅಪ್ಪನಿಗೆ ಇವೆಲ್ಲ ಇಷ್ಟವಿಲ್ಲದ ಸಂಗತಿಗಳು. ಆವರು ‘ಏ ತಿಂಗಳ ಮಾಸು ನಿಂತು ಹುಟ್ಟುವ ಕಂದನಿಗೆ ಮೈಲಿಗೆಯಿಲ್ಲ.ಅಂದಮೇಲೆ ಇವೆಲ್ಲ ಎಂಥಹ ಆಚರಣೆಗಳು’ ಅನ್ನುತ್ತಾರೆ. ಅಮ್ಮ ಮಾತ್ರ ‘ಅದು ನನಗೂ ಗೊತ್ತು, ಆದರೆ ಹಿಂದಿನಿAದ ಬಂದ ಪದ್ಧತಿ ಬಿಡಲಾಗದು. ಆದರೂ ಎಷ್ಟೋ ಸರಳೀಕರಿಸಿದ್ದೇನಲ್ಲಾ’ ಎಂದು ಅವರ ಬಾಯಿ ಮುಚ್ಚಿಸುತ್ತಾರೆ.
ಅವರಿಬ್ಬರೂ ಕೆಳಗಿಳಿದು ಹೋದಮೇಲೆ ದೇವಿ “ಏನಾಗಬೇಕೋ ಅದಾಗುತ್ತದೆ. ಸುಮ್ಮನೇಕೆ ತಲೆಕೆಡಿಸಿಕೊಳ್ಳುವುದು” ಎಂದುಕೊಳ್ಳುತ್ತಾಮೊದಲು ಮನದಲ್ಲಿ ಮೂಡಿದ್ದ ನಿರಾಸೆಯನ್ನು ಪಕ್ಕಕ್ಕೆ ತಳ್ಳಿ ನಿರಾಳವಾದಳು. ಬೆಳಗಿನ ತಿಂಡಿ ಮತ್ತು ಎಳನೀರುಗಳು ಜೀರ್ಣವಾಗಿ ಹೊಟ್ಟೆ ಚುರುಗುಟ್ಟಲು ಪ್ರಾರಂಭವಾಯಿತು. “ಅವರದ್ದೆಲ್ಲ ಊಟವಾದ ಮೇಲೇ ನನಗೆ ಬರುತ್ತದೆಯೇನೋ” ಎಂದುಕೊಳ್ಳುವಷ್ಟರಲ್ಲಿ “ಅಮ್ಮಾ ಎಲ್ಲಿದ್ದೀರಾ? ನಾನು ತಾಯಮ್ಮ ಬಂದಿದ್ದೇನೆ. ಬನ್ನಿ ಊಟಮಾಡುವಿರಂತೆ” ಎಂದು ಕರೆದರು. “ಓ ..ಅವರಿಬ್ಬರೂ ಕೆಳಗಿಳಿದುಹೋದ ಮೇಲೆ ನಾನು ಬಾಗಿಲು ಹಾಕಿರಲಿಲ್ಲ” ಎಂದುಕೊಂಡು ಒಳಗಿನ ರೂಮಿನಿಂದ ಹೊರಗೆ ಬಂದಳು ದೇವಿ.
“ಅಮ್ಮಾ ನೀವು ಅಲ್ಲೇ ಇರಬೇಕಾಗಿಲ್ಲ. ತುಂಬ ಜನರಿದ್ದಾಗಷ್ಟೇ ಅಲ್ಲಿ, ಈಗ ಯಾರೂ ಇಲ್ಲವಲ್ಲ ಇಲ್ಲೇ ಇರಿ, ಮಂಚದಮೇಲೆ ಮಲಗಲು ಹೋಗಬೇಡಿ ಅಷ್ಟೇ. ದೊಡ್ಡಮ್ಮನವರೇನು ಮಹಡಿ ಹತ್ತಿ ಬರುವುದಿಲ್ಲ. ಹೆದರಬೇಡಿ. ಅವರು ಸ್ವಲ್ಪ ಹಳೆಯ ಕಾಲದವರು. ನಾನು ಇಲ್ಲಿಗೆ ಬಂದಾಗಿಂತ ಈಗ ಎಷ್ಟೋ ವಾಸಿ. ಬನ್ನಿ” ಎಂದು ಕರೆದಳು ತಾಯಮ್ಮ.
ಸಿಂಕಿನಲ್ಲಿ ಕೈ ತೊಳೆದು ಬರುವಷ್ಟರಲ್ಲಿ ಊಟಕ್ಕೆ ಕೂಡುವ ಬಟ್ಟೆಯಮ್ಯಾಟು ಹರಡಿ ಮುತ್ತುಗದ ಊಟದೆಲೆ ಹಾಕಿ ಸಿದ್ಧಪಡಿಸಿದ್ದರು. ಬಳಸಿ ಬಿಸಾಡಬಹುದಾದ ಪಾಪರ್ ಲೋಟದಲ್ಲಿ ಮತ್ತು ಒಂದೆರಡು ಲೀಟರ್ ಹಿಡಿಸುವಂತಿದ್ದ ಹಳೆಯ ಕಾಲದ ಗಿಂಡಿಯಲ್ಲಿ ನೀರನ್ನಿಟ್ಟಿದ್ದರು. “ಓಹೋ ಇವನ್ನೆಲ್ಲ ಇಲ್ಲಿಯೇ ಉಪಯೋಗಕ್ಕಾಗಿ ಇಟ್ಟಿದ್ದಾರೆಂದು ತಿಳಿಯಿತು. ನನ್ನ ಕರ್ಮ, ಅನುಭವಿಸಲೇ ಬೇಕು. ಪುಣ್ಯಕ್ಕೆ ನನ್ನಷ್ಟಕ್ಕೆ ನಾನೇ ಪ್ರತ್ಯೇಕವಾಗಿ ಸೌಲಭ್ಯವಿದೆ” ಎಂದುಕೊಂಡು ಊಟಕ್ಕೆ ಕುಳಿತಳು ದೇವಿ.
ಉಪ್ಪು, ಉಪ್ಪಿನಕಾಯಿ, ಒಂದು ಕೋಸಂಬರಿ, ಪಲ್ಯ, ಪಾಯಸ, ತೊವ್ವೆ, ಬಿಸಿಬಿಸಿಯಾದ ಮಲ್ಲಿಗೆ ಹೂವಿನಂಥ ಅನ್ನ. ಸೊಪ್ಪಿನ ಹುಳಿ, ತಿಳಿಸಾರು, ಗಟ್ಟಿಮೊಸರು, ಕುಡಿಯಲು ಮಜ್ಜಿಗೆ, ಅಡಿಕೆಪಟ್ಟೆಯ ದೊನ್ನೆಯಲ್ಲಿ ಹಾಲಬಾಯಿ, ಏಲಕ್ಕಿಬಾಳೆಹಣ್ಣು, ಬೀಡಾ, “ಅಬ್ಬಬ್ಬಾ ! ಇದೇನು ತಾಯಮ್ಮಾ ಹಬ್ಬದಡಿಗೆಯನ್ನೇ ಬಡಿಸಿದ್ದೀರಿ” ಎಂದಳು ದೇವಿ.
“ಹೂಂ ನೀವು ಬರುತ್ತೀರೆಂದು ಮೊದಲೇ ಚಿಕ್ಕಧಣಿ ಹೇಳಿದ್ರು. ಅದಕ್ಕೇಂತ ದೊಡ್ಡಮ್ಮ ಇಂಥದ್ದೇ ಮಾಡಬೇಕೆಂದು ಸಾಮಾನು ಸರಂಜಾಮುಗಳನ್ನು ರಾತ್ರೀನೇ ಹೊಂದಿಸಿಕೊಟ್ಟಿದ್ದರು. ನಾನು ತಯಾರಿಸಿದೆ ಅಷ್ಟೇ. ಆದರೆ ನಿಮ್ಮ ಊಟ ಬಹಳ ಕಮ್ಮಿ” ಎಂಬ ಮಾತನ್ನೂ ಸೇರಿಸಿದರು ತಾಯಮ್ಮ.
“ಐಟಂಗಳು ಜಾಸ್ತಿ, ಇನ್ನೆಷ್ಟು ಉಟಮಾಡಲಾಗುತ್ತೆ ತಾಯಮ್ಮ. ನಮ್ಮಲ್ಲೂ ಹಾಲುಬಾಯಿ ಮಾಡುತ್ತೇವೆ. ಇದು ಸ್ವಲ್ಪ ರೇಜಿಗೆ ಕೆಲಸ” ಎಂದಳು ದೇವಿ.
“ಏ ಹಂಗೇನಿಲ್ಲಮ್ಮ, ದೊಡ್ಡಮ್ಮನವರು ಬಹಳ ಸುಲಭವಾಗಿ ಇದನ್ನು ಮಾಡೋದನ್ನು ಹೇಳಿಕೊಟ್ಟಿದ್ದಾರೆ. ಅದೇನೆಂದರೆ ಹಿಟ್ಟುಗಳನ್ನೇ ಸಣ್ಣ ಜರಡಿಯಲ್ಲಿ ಆಡಿಸಿ ಅದನ್ನು ನೀರುಹಾಕಿ ರುಬ್ಬಿ ತೆಳುವಾಗಿರೋ ಬಟ್ಟೆಯಲ್ಲಿ ಸೋಸಿಕೊಳ್ಳೋದು. ಬಂದದ್ದನ್ನು ಒಂದು ಗಂಟೆ ಬಿಟ್ಟು ಬೆಲ್ಲ ಸೇರಿಸಿ ಕಾಯಿಸಿ ತಯಾರು ಮಾಡುವುದು. ರಾಗಿ, ಗೋಧಿ, ಅಕ್ಕಿ ಯಾವುದರಲ್ಲಾದರೂ ಮಾಡಬಹುದು. ನಾನಿಲ್ಲಿಗೆ ಬಂದಾಗ ಇವನ್ನು ಮಾಡುವುದು ರೇಜಿಗೆ ಎಂದು ಹೇಳಿದ್ದೆ. ಆಗ ಅವರು ಈ ಸುಲಭವಾದ ವಿಧಾನವನ್ನು ಹೇಳಿಕೊಟ್ಟರು. ಹೀಗೂ ಚೆನ್ನಾಗಿಯೇ ಬರುತ್ತದೆ ಎಂದು ಕಲಿಸಿದರು. ಬೇರೆ ಕೆಲವು ತಿಂಡಿಗಳನ್ನೂ ಸುಲಭವಾಗಿ ಮಾಡುವ ರೀತಿಯನ್ನು ಹೇಳಿಕೊಟ್ಟಿದ್ದಾರೆ. ನಾನು ಕಲಿತು ನಮ್ಮೂರಿಗೆ ಹೋದಾಗ ಅಲ್ಲಿನವರಿಗೂ ಹೇಳಿಕೊಟ್ಟಿದ್ದೇನೆ” ಎಂದರು ತಾಯಮ್ಮ.
ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=40796
(ಮುಂದುವರಿಯುವುದು)
–ಬಿ.ಆರ್.ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ
ವಾರದಿಂದ ವಾರಕ್ಕೆ ಸೊಗಸಾಗಿ ಮನ ಸೆಳೆಯುತ್ತ ಸಾಗುತ್ತಿದೆ ಕಾದಂಬರಿ
ಮಹಿ, ದೇವಿ ದಂಪತಿ ಕಥೆ ಕುತೂಹಲಕಾರಿಯಾಗಿ ಮುಂದುವರಿಯುತ್ತಿದೆ. ಧನ್ಯವಾದಗಳು ನಾಗರತ್ನ ಮೇಡಂ.
ವಂದನೆಗಳು ಶಂಕರಿ ಮೇಡಂ
ಧನ್ಯವಾದಗಳು ನಯನಮೇಡಂ